ಪಾಕಿಸ್ತಾನ ತನ್ನ ಹಿಂದಿನ ಆಟವನ್ನು ಮತ್ತೆ ಆರಂಭಿಸಿದೆ. ಈಗ ಮತ್ತೆ ಪಾಕಿಸ್ತಾನ ಅಮೆರಿಕದ ತೆಕ್ಕೆಗೆ ಬಿದ್ದಿದೆ. ಆಫ್ಘಾನಿಸ್ತಾನ ದಲ್ಲಿ ಮತ್ತೆ ತಾಲಿಬಾನ್ ಆಡಳಿತ ಆರಂಭವಾದ ನಂತರ ಅಂತ್ಯಗೊಂಡಿದ್ದ ಅಮೆರಿಕದ ಜೊತೆಗಿನ ಸ್ನೇಹ ಮತ್ತೆ ಕುಡಿಯೊಡೆದಿದೆ. ಅಮೆರಿಕ ಮತ್ತು ಪಾಕಿಸ್ತಾನದ ಜೊತೆಗಿನ ಸ್ನೇಹ ಹಳಸಿದ ನಂತರ ಆ ಜಾಗವನ್ನು ತುಂಬಿದ್ದ ಚೀನಾ ಈಗ ಕಂಗಾಲಾಗಿದೆ. ಪಾಕಿಸ್ತಾನದಲ್ಲಿ ಚೀನಾ ಅಪಾರ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದು ಬದಲಾದ ಸನ್ನಿವೇಶ ಹೊಸ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು
. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕದ ಯುದ್ಧ ಆರಂಭಿಸಿದ ಮೇಲೆ ಎರಡೂ ದೇಶಗಳ ನಡುವಣ ಬಾಂಧವ್ಯ ಕೆಟ್ಟಿದೆ. ಟ್ರಂಪ್ ಹೇರಿರುವ ಸುಂಕದ ಪ್ರಮಾಣವನ್ನು ಚೀನಾ ನಾಯಕರು ಒಪ್ಪಿಲ್ಲ. ಅನೇಕ ಸುತ್ತಿನ ಮಾತುಕತೆಗಳು ನಡೆದರೂ ಈ ವಿಚಾರದಲ್ಲಿ ಒಂದು ಒಪ್ಪಂದವೂ ಸಾಧ್ಯವಾಗಿಲ್ಲ. ಈ ಮಧ್ಯೆ ಚೀನಾ ಮಾರುಕಟ್ಟೆ ವಿಸ್ತರಣೆಗೆ ಹಲವು ಪರ್ಯಾಯಗಳನ್ನು ಹುಡುಕುತ್ತಿದೆ. ಟ್ರಂಪ್ ವಿಧಿಸಿರುವ ಸುಂಕದಿಂದಾಗಿ ಕಳೆದುಕೊಳ್ಳಲಿರುವ ಅಮೆರಿಕದ ಮಾರುಕಟ್ಟೆಗೆ ಬದಲಿ ಮಾರುಕಟ್ಟೆಯನ್ನು ಹುಡುಕುವುದು ಚೀನಾದ ಉದ್ದೇಶ.
ಪಾಕಿಸ್ತಾನದ ಮಾರುಕಟ್ಟೆಯನ್ನು ಈಗಾಗಲೇ ಚೀನಾ ಆಕ್ರಮಿಸಿದೆ. ಇಂಥ ಸನ್ನಿವೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಸ್ನೇಹ ಚೀನಾದ ಮಾರುಕಟ್ಟೆ ವಿಸ್ತರಣೆ ಪ್ರಯತ್ನಕ್ಕೆ ಅಡ್ಡಗಾಲಾಗಬಹುದು. ಇದರಿಂದ ಚೀನಾ ಮತ್ತು ಅಮೆರಿಕ ನಡುವಣ ಬಾಂಧವ್ಯ ಮತ್ತಷ್ಟು ಕೆಡುವ ಸಾಧ್ಯತೆ ಇದೆ. ಈ ವಿದ್ಯಮಾನಗಳಿಂದಾಗಿ ಭಾರತ, ಪಾಕಿಸ್ತಾನದಿಂದ ಅಷ್ಟೇ ಅಲ್ಲ ಅಮೆರಿಕ ಮತ್ತು ಚೀನಾದಿಂದಲೂ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ. ಬದಲಾದ ಸನ್ನಿವೇಶ ಇಡೀ ಏಷ್ಯಾ ವಲಯವನ್ನು ಮತ್ತೆ ಸಂಘರ್ಷದ ಕಣವನ್ನಾಗಿಸಿದೆ.
ಇದೇ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಇರಾನ್ ಮತ್ತಷ್ಟು ಹತ್ತಿರ ಆಗಿವೆ. ಪಾಕಿಸ್ತಾನಕ್ಕೆ ಭೇಟಿ ನೀಡಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜಸ್ಕಿಯಾನ್‌ಗೆ ವಿಶೇಷ ಸ್ವಾಗತ ದೊರೆತಿದೆ. ಅವರು ಹತ್ತು ಹಲವು ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಪರಮಾಣು ವಿದ್ಯುತ್ ಕ್ಷೇತ್ರದಲ್ಲಿ ಸಹಕಾರವೂ ಈ ಒಪ್ಪಂದದಲ್ಲಿ ಸೇರಿದೆ. ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಇಂಧನವಾದ ಯುರೇನಿಯಂ ಸಂಸ್ಕರಣೆಯ ಸ್ವಾತಂತ್ರ್ಯ ಇರಾನ್‌ಗೆ ಇದೆ ಎಂದು ಪಾಕಿಸ್ತಾನದ ಪ್ರಧಾನಿ ಷಹಬಾಜ್ ಷರೀಫ್ ಘೋಷಿಸಿದ್ದಾರೆ.
ಇರಾನ್ ಪರಮಾಣು ಘಟಕಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿಯನ್ನು ಪಾಕಿಸ್ತಾನ ಖಂಡಿಸಿದೆ ಕೂಡ. ಎರಡೂ ದೇಶಗಳು ಯಾವುದೇ ಮುಚ್ಚು ಮರೆಯಿಲ್ಲದೆ ಸ್ನೇಹವನ್ನು ಪುನರುಚ್ಚರಿಸಿವೆ. ಪಾಕಿಸ್ತಾನದ ಬಳಿ ಪರಮಾಣು ತಂತ್ರಜ್ಞಾನ ಇದೆ. ಪರಮಾಣು ಅಸ್ತ್ರಗಳಿವೆ. ಪಾಕಿಸ್ತಾನಕ್ಕೆ ಇರಾನ್ ನೆರೆಯ ದೇಶ ನಿಜ. ಆದರೆ ಅಷ್ಟೇ ಕಾರಣಕ್ಕೆ ಸುನ್ನಿ ಜನಾಂಗದ ಪ್ರಾಬಲ್ಯ ಇರುವ ಪಾಕಿಸ್ತಾನದ ಜೊತೆ ಶಿಯಾ ಜನಾಂಗದ ಪ್ರಾಬಲ್ಯ ಹೊಂದಿರುವ ಇರಾನ್ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಇದರ ಗುಟ್ಟು ಇನ್ನೂ ಬಹಿರಂಗವಾಗಬೇಕಿದೆ.
ಭಾರತ ಮತ್ತು ಇಸ್ರೇಲ್ ಈಗ ಹತ್ತಿರವಾಗಿದ್ದು ಮಿಲಿಟರಿ ಸಹಕಾರ ಹೆಚ್ಚಿದೆ. ಇರಾನ್‌ನ ಪರಮಾಣು ಸ್ಥಾವರಗಳನ್ನು ನಾಶ ಮಾಡಿದ ನಂತರ ತಮ್ಮ ಗುರಿ ಪಾಕಿಸ್ತಾನ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿದ ಹಿನ್ನೆಲೆಯಲ್ಲಿ ಪಾಕ್ ಮತ್ತು ಇರಾನ್ ಸ್ನೇಹ ಹೆಚ್ಚಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಆಪ್ತ ದೇಶಗಳು. ಇರಾನ್ ವಿರುದ್ಧದ ದಾಳಿಯಲ್ಲಿ ಅಮೆರಿಕ ಇಸ್ರೇಲ್ ಜೊತೆ ಕೈ ಜೋಡಿಸಿದೆ. ಪ್ಯಾಲೆಸ್ತೀನ್‌ನ ಗಾಜಾ ಪ್ರದೇಶದಲ್ಲಿ ಹಮಾಸ್ ಉಗ್ರವಾದಿಗಳನ್ನು ನಾಶ ಮಾಡುವ ಇಸ್ರೇಲ್ ಮಿಲಿಟರಿ ಆಕ್ರಮಣಕ್ಕೆ ಶಸ್ತ್ರಾಸ್ತ್ರ ಒದಗಿಸುತ್ತಿರುವುದೇ ಅಮೆರಿಕ. ಒಂದು ಕಡೆ ಅಮೆರಿಕದ ಜೊತೆ ಸ್ನೇಹ ಮತ್ತೊಂದು ಕಡೆ ಅದರ ಶತ್ರು ದೇಶ ಇರಾನ್ ಜೊತೆ ಸಹಕಾರ ಒಪ್ಪಂದ. ಪಾಕಿಸ್ತಾನದ ಈ ವಿಚಿತ್ರ ಆಟವನ್ನು ಅಧ್ಯಕ್ಷ ಡೊನಾಲ್ದ್ ಟ್ರಂಪ್ ಹೇಗೆ ಅರ್ಥೈಸುತ್ತಾರೆ ಎಂಬುದು ಕುತೂಹಲಕಾರಿ.
ಪಾಕಿಸ್ತಾನ ಸ್ವತಂತ್ರ ದೇಶವಾದಂದಿನಿಂದಲೂ ಅಮೆರಿಕ ಅದರ ಆಪ್ತ ದೇಶವಾಗಿದೆ. ಸೋವಿಯತ್ ಒಕ್ಕೂಟ ಸದಾ ಭಾರತದ ಕಡೆ ಇದ್ದರೆ ಅಮೆರಿಕ ಸದಾ ಪಾಕಿಸ್ತಾನದ ಕಡೆ ನಿಂತಿದೆ. ಸೋವಿಯತ್ ದೇಶ ಒಡೆದು ಹೋಗಿ ರಷ್ಯಾ ಸ್ಥಾಪಿತವಾದ ಮೇಲೆಯೂ ಭಾರತದ ಸ್ನೇಹ ಮುಕ್ಕಾಗದೆ ಉಳಿದಿದೆ. ಆದರೆ ಅಮೆರಿಕ ಮತ್ತು ಪಾಕಿಸ್ತಾನದ ಸ್ನೇಹ ಏಳುಬೀಳುಗಳನ್ನು ಕಂಡಿದೆ. ಸೋವಿಯತ್ ಒಕ್ಕೂಟ ಆಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ನಂತರ ಅಮೆರಿಕ ಮತ್ತು ಪಾಕಿಸ್ತಾನದ ಸ್ನೇಹ ಭಿನ್ನ ಸ್ವರೂಪ ಪಡೆಯಿತು. ಸೋವಿಯತ್ ಒಕ್ಕೂಟದ ಸೇನೆ ಆಫ್ಘಾನಿಸ್ತಾನವನ್ನು ತೆರವು ಮಾಡುವಂತೆ ಮಾಡಲು ಅಮೆರಿಕವು ಪಾಕಿಸ್ತಾನವನ್ನು ಬಳಸಿಕೊಂಡಿತು. ಅಮೆರಿಕದ ಮಿಲಿಟರಿ ನೆರವಿನಿಂದ ಪಾಕಿಸ್ತಾನ ಆಫ್ಘಾನಿಸ್ತಾನದಲ್ಲಿ ಉಗ್ರವಾದ ಬೆಳೆಯಲು ನೆರವಾಯಿತು.
ವಿಶ್ವದ ಹಲವು ಇಸ್ಲಾಮಿಕ್ ದೇಶಗಳಿಂದ ಬಂದ ಹೋರಾಟಗಾರರು ಮತ್ತು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಲ್ಲಿ ರಹಸ್ಯವಾಗಿ ತಯಾರಾದ ಇಸ್ಲಾಮಿಕ್ ಹೋರಾಟಗಾರರಿಗೆ (ಮುಜಾಹಿದ್ದೀನ್) ಪಾಕಿಸ್ತಾನ ಬೆನ್ನೆಲುಬಾಗಿಕೆಲಸ ಮಾಡಿತು. ಅಮೆರಿಕ ಅಪಾರ ಪ್ರಮಾಣದಲ್ಲಿ ಯುದ್ಧಾಸ್ತ್ರಗಳನ್ನು ಪಾಕ್‌ಗೆ ನೀಡಿತು. ಹಾಗೆಯೇ ಸಾಕಷ್ಟು ಪ್ರಮಾಣದಲ್ಲಿ ಎಲ್ಲ ರೀತಿಯ ನೆರವು ನೀಡುತ್ತಾ ಬಂತು. ಸೋವಿಯತ್ ಸೇನೆ ಆಫ್ಘಾನಿಸ್ತಾನವನ್ನು ತೆರವು ಮಾಡಿದಾಗ ಅಧಿಕಾರವನ್ನು ಮುಜಾಹಿದ್ದೀನ್ ಹೋರಾಟಗಾರರು ತಮ್ಮ ಒಳಜಗಳಗಳಿಂದಾಗಿ ಪಡೆಯಲಾಗಲಿಲ್ಲ. ಆಗ ಮುಂಚೂಣಿಗೆ ಬಂದವರು ಧಾರ್ಮಿಕ ವಿದ್ಯಾರ್ಥಿಗಳಾದ ತಾಲಿಬಾನ್‌ಗಳು. ಸ್ವಲ್ಪ ಕಾಲ ತಾಲಿಬಾನ್ ಜೊತೆ ಪಾಕಿಸ್ತಾನ ಸ್ನೇಹದಿಂದ ಇದ್ದರೂ ಅದು ಬಹಳ ಕಾಲ ಉಳಿಯಲಿಲ್ಲ. ಮತ್ತೆ ತಾಲಿಬಾನ್ ಆಡಳಿತದ ವಿರುದ್ಧ ಬಹುರಾಷ್ಟ್ರೀಯ ಸೇನೆ ಯುದ್ಧ ಸಾರಿತು ಮತ್ತು ತಾಲಿಬಾನ್ ಆಡಳಿತ ಅಂತ್ಯವಾಯಿತು ಕೂಡ. ಆದರೆ ತಾಲಿಬಾನ್‌ಗಳು ಹೋರಾಟ ಮುಂದುವರಿಸಿ ೨೦೨ರಲ್ಲಿ ಮತ್ತೆ ಆಫ್ಘಾನಿಸ್ತಾನ ದಲ್ಲಿ ಅಧಿಕಾರ ಸ್ಥಾಪಿಸುವಲ್ಲಿ ಯಶಸ್ವಿಯಾದರು.
ಈ ಬದಲಾವಣೆಯಲ್ಲಿ ತೀವ್ರ ಘಾಸಿಗೆ ಒಳಗಾದದ್ದು ಪಾಕಿಸ್ತಾನ. ಈ ಬೆಳವಣಿಗೆಯ ನಂತರ ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಸ್ನೇಹ ಹಾಳಾಯಿತು. ಅಮೆರಿಕದ ಅಧ್ಯಕ್ಷರಾಗಿದ್ದ ಒಬಾಮಾ ನಂತರ ಬೈಡನ್ ಕಾಲದಲ್ಲಿ ಅಮೆರಿಕ ಮತ್ತು ಭಾರತದ ಸ್ನೇಹ ಹೊಸ ಸ್ವರೂಪ ಪಡೆಯಿತು. ಇದೀಗ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಮತ್ತೆ ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಸ್ನೇಹ ಪುನರ್ ಸ್ಥಾಪಿತವಾಗಿದೆ. ಪಾಕಿಸ್ತಾನದ ನಾಯಕರನ್ನು ಟ್ರಂಪ್ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. ಹೊಗಳುವ ಭರದಲ್ಲಿ ಭಾರತವನ್ನು ಹೀಯಾಳಿಸುತ್ತಿರುವುದು ಒಳ್ಳೆಯ ನಡವಳಿಕೆ ಅಲ್ಲ.
ಪಾಕಿಸ್ತಾನದಲ್ಲಿರುವ ಹೇರಳ ತೈಲ ನಿಕ್ಷೇಪಗಳನ್ನು ಬಗೆದು ತೈಲ ತೆಗೆಯಲು ಆರ್ಥಿಕ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ ಯಾರಿಗೆ ಗೊತ್ತು ತೈಲವನ್ನು ಭಾರತಕ್ಕೆ ಮಾರಬಹುದಾದ ದಿನ ಬರಬಹುದು ಎಂಬ ಅವರ ವ್ಯಂಗ್ಯ ಅವರ ವಿಕೃತ ಮನಸ್ಥಿತಿಯ ಸೂಚಕ. ಮೊದಲು ಪಾಕಿಸ್ತಾನದಲ್ಲಿ ಸಾಕಷ್ಟು ತೈಲ ಇದೆ ಎನ್ನುವುದರ ಬಗ್ಗೆಯೇ ಅನುಮಾನಗಳಿವೆ.
ಪಾಕಿಸ್ತಾನದಲ್ಲಿ ಈಗ ರಾಜಕೀಯ ಅಸ್ಥಿರತೆ ತಾಂಡವವಾಡುತ್ತಿದೆ. ಅಧಿಕಾರಕ್ಕೆ ಸವಾಲೊಡ್ಡಿದ ಇಮ್ರಾನ್ ಖಾನ್ ಅವರನ್ನು ಜೈಲಿಗೆ ಕಳುಹಿಸಲಾಗಿದೆ. ಆರ್ಥಿಕವಾಗಿ ದಿವಾಳಿಯಾಗಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲಪಡೆದು ಆಡಳಿತ ನಡೆಸುವಂತಾಗಿದೆ. ಇಂಥ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್ ಪ್ರವಾಸಿ ತಾಣದಲ್ಲಿ ಪಾಕ್ ಪ್ರಚೋದಿತ ಉಗ್ರರು ದಾಳಿ ನಡೆಸುತ್ತಾರೆ. ೨೬ ಪ್ರವಾಸಿಗರ ಹತ್ಯೆ ಆಗುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ಮೇಲೆ ವಾಯುಸೇನಾ ದಾಳಿ ನಡೆಸುತ್ತದೆ. ಮೂರು ದಿನಗಳ ನಂತರ ಪಾಕಿಸ್ತಾನದ ಕೋರಿಕೆಯ ಮೇರೆಗೆ ಯುದ್ಧ ನಿಲ್ಲುತ್ತದೆ. ಈ ಯುದ್ಧ ನಿಲ್ಲಲು ತಾವೇ ಕಾರಣ ಎಂದು ಟ್ರಂಪ್ ಹೇಳುತ್ತಾ ಬರುತ್ತಿದ್ದಾರೆ.
ಈ ವಿಚಾರದಲ್ಲಿ ವಿಶ್ವದ ಯಾವುದೇ ನಾಯಕರ ಮಧ್ಯಪ್ರವೇಶ ಇರಲಿಲ್ಲ ಎಂದು ಭಾರತ ಸ್ಪಷ್ಟನೆ ನೀಡಿದೆ. ಆದರೂ ಟ್ರಂಪ್ ತಮ್ಮ ಮಾತನ್ನು ಪುನರುಚ್ಚರಿಸುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರನ್ನು ಕರೆಸಿದ ಟ್ರಂಪ್ ಶ್ವೇತಭವನದಲ್ಲಿ ಅವರ ಜೊತೆ ಊಟ ಮಾಡುತ್ತಾರೆ.
ಬಹುಶಃ ಯುದ್ಧದ ವಿಚಾರದಲ್ಲಿ ಟ್ರಂಪ್ ಹೇಳಿದ ಮಾತನ್ನು ಮುನೀರ್ ಕೇಳಿದರು ಎಂಬ ಕಾರಣಕ್ಕೆ ಈ ಬೆಳವಣಿಗೆ ಆಗಿರಬಹುದು. ಇದೇ ಅವಕಾಶ ಸರಿ ಎಂದು ಮುನೀರ್ ಅವರು ಟ್ರಂಪ್ ಅವರಿಗೆ ನೊಬೆಲ್ ಶಾಂತಿ ಪದಕ ನೀಡಬೇಕೆಂದು ಸಲಹೆ ಮಾಡಿದರು. ನಂತರ ಅಧಿಕೃತವಾಗಿ ಪಾಕಿಸ್ತಾನ ನೊಬೆಲ್ ಕಮಿಟಿಗೆ ಆ ಬಗ್ಗೆ ಪ್ರಸ್ತಾವನೆಯನ್ನೂ ಕಳುಹಿಸಿತು. ಈ ಸ್ನೇಹ ಮುಂದುವರಿದು ಸುಂಕದ ವಿಚಾರದಲ್ಲಿಯೂ ಪಾಕಿಸ್ತಾನಕ್ಕೆ ರಿಯಾಯ್ತಿ ಕೊಡಲಾಗಿದೆ. ಭಾರತದ ಮೇಲೆ ಶೇ.೨೫ರಷ್ಟು ನಂತರ ಇನ್ನೂ ಶೇ.೨೫ರಷ್ಟು ಅಂದರೆ ಶೇ.೫೦ರಷ್ಟು ಸುಂಕ ಹೇರಿದರೆ ಪಾಕಿಸ್ತಾನದ ಮೇಲೆ ಟ್ರಂಪ್ ಶೇ.೧೯ರಷ್ಟು ಸುಂಕ ವಿಧಿಸಿದ್ದಾರೆ. ರಷ್ಯಾದಿಂದ ತೈಲ ಕೊಳ್ಳುತ್ತಿರುವುದಕ್ಕಾಗಿ ಭಾರತದ ಮೇಲೆ ದಂಡ ವಿಧಿಸುವುದಾಗಿಯೂ ಟ್ರಂಪ್ ಘೋಷಿಸಿದ್ದಾರೆ.
ಪಾಕಿಸ್ತಾನವೂ ರಷ್ಯಾದಿಂದ ರಿಯಾಯ್ತಿ ದರಗಳಲ್ಲಿ ತೈಲ ಕೊಳ್ಳುತ್ತದೆ. ಆದರೆ ಅದರ ಮೇಲೆ ದಂಡ ಹೇರಿಲ್ಲ. ಹಾಗೆ ನೋಡಿದರೆ ಸುಂಕದ ವಿಚಾರದಲ್ಲಿ ಟ್ರಂಪ್ ಭಾರತದ ಬಗ್ಗೆ ಪೂರ್ವಗ್ರಹ ಧೋರಣೆ ಉಳ್ಳವರಾಗಿದ್ದಾರೆ. ಸ್ವತಃಅಮೆರಿಕವೇ ರಷ್ಯಾದಿಂದ ಪರಮಾಣು ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳು, ಇಂಧನ ಮತ್ತಿತರ ವಸ್ತುಗಳನ್ನು ಕೊಳ್ಳುತ್ತದೆ. ಅಷ್ಟೇ ಏಕೆ ಯೂರೋಪಿಯನ್ ಒಕ್ಕೂಟವೂ ರಷ್ಯಾದಿಂದ ನಿಗದಿತ ದರಗಳಲ್ಲಿ ತೈಲ ಮತ್ತು ಅನಿಲ, ರಸಗೊಬ್ಬರ, ಅಪರೂಪದ ಖನಿಜಗಳನ್ನು ಪಡೆಯುತ್ತದೆ.
ವಾಸ್ತವ ಸ್ಥಿತಿ ಹೀಗಿರುವಾಗ ಭಾರತದ ಮೇಲೆ ಏಕೆ ದಂಡ ಎನ್ನುವ ಪ್ರಶ್ನೆಯನ್ನು ಭಾರತ ಕೇಳುತ್ತಿದೆ. ಟ್ರಂಪ್ ಮತ್ತು ಯೂರೋಪಿನ ದ್ವಿಮುಖ ನೀತಿಯನ್ನು ಭಾರತ ಬಹಿರಂಗ ಮಾಡಿದ್ದು ಮುಂದಿನ ಬೆಳವಣಿಗೆಗಳು ಕುತೂಹಲಕಾರಿ ಯಾಗಲಿವೆ. ಅಮೆರಿಕ ವಿಧಿಸಿರುವ ಸುಂಕದಿಂದಾಗಿ ಮತ್ತು ಯೂರೋಪ್ ಒಕ್ಕೂಟ ವಿಧಿಸಿರುವ ನಿಷೇಧದಿಂದಾಗಿ ಭಾರತ ರಫ್ತಿನಲ್ಲಿ ಅಪಾರ ಪ್ರಮಾಣದ ನಷ್ಟ ಅನುಭವಿಸಲಿದೆ ಎಂದು ಅಂದಾಜು ಮಾಡಲಾಗಿದೆ
” ಟ್ರಂಪ್ ವಿಧಿಸಿರುವ ಸುಂಕದಿಂದಾಗಿ ಕಳೆದುಕೊಳ್ಳಲಿರುವ ಅಮೆರಿಕದ ಮಾರುಕಟ್ಟೆಗೆ ಬದಲಿ ಮಾರುಕಟ್ಟೆಯನ್ನು ಹುಡುಕುವುದು ಚೀನಾದ ಉದ್ದೇಶ. ಪಾಕಿಸ್ತಾನದ ಮಾರುಕಟ್ಟೆಯನ್ನು ಈಗಾಗಲೇ ಚೀನಾ ಆಕ್ರಮಿಸಿದೆ. ಇಂಥ ಸನ್ನಿವೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ನಡುವಣ ಸ್ನೇಹ ಚೀನಾದ ಮಾರುಕಟ್ಟೆ ವಿಸ್ತರಣೆ ಪ್ರಯತ್ನಕ್ಕೆ ಅಡ್ಡಗಾಲಾಗಬಹುದು. ಇದರಿಂದ ಚೀನಾ ಮತ್ತು ಅಮೆರಿಕ ನಡುವಣ ಬಾಂಧವ್ಯ ಮತ್ತಷ್ಟು ಕೆಡುವ ಸಾಧ್ಯತೆ ಇದೆ. ಈ ವಿದ್ಯಮಾನಗಳಿಂದಾಗಿ ಭಾರತ,ಪಾಕಿಸ್ತಾನದಿಂದ ಅಷ್ಟೇ ಅಲ್ಲ ಅಮೆರಿಕ ಮತ್ತು ಚೀನಾದಿಂದಲೂ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿ ಬಂದಿದೆ.”
-ಡಿ.ವಿ.ರಾಜಶೇಖರ
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…