ಗಿರೀಶ್ ಹುಣಸೂರು

ಮೈಸೂರು, ಕೊಡಗು ಹಾಗೂ ಕೇರಳದ ವಯನಾಡು ಜಿಲ್ಲೆಗಳೊಂದಿಗೆ ಗಡಿ ಹಂಚಿಕೊಂಡಿರುವ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಇರ್ಪು ಜಲಪಾತ ವಾರಾಂತ್ಯದ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.

ಕೊಡಗು ಜಿಲ್ಲೆ ಪ್ರವಾಸಿಗರ ಪಾಲಿನ ಸ್ವರ್ಗ. ದಟ್ಟ ಕಾನನ, ಕಾಫಿ ತೋಟಗಳು, ಟೀ ಎಸ್ಟೇಟ್‌ಗಳಿಂದಾಗಿ ಇಲ್ಲಿನ ಹಸಿರ ಸಿರಿ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ. ಕೊಡಗು ಜಿಲ್ಲೆಗೆ ಕಾಲಿಟ್ಟರೆ ಅಲ್ಲಿನ ಅತ್ಯದ್ಬುತ ಪ್ರವಾಸಿ ತಾಣಗಳನ್ನು ಕಂಡು ಮನಸೋಲದವರೇ ಇಲ್ಲ. ಇಲ್ಲಿನ ಸುಂದರ ತಾಣಗಳು ಪ್ರತಿಯೊಬ್ಬರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಪ್ರವಾಸಿ ಪ್ರಿಯ ಯುವ ಜನರಂತೂ ಶನಿವಾರ-ಭಾನುವಾರಗಳಂದು ತಮ್ಮ ಮೋಟಾರು ಬೈಕ್ಗಳಲ್ಲೇ ಕೊಡಗು ಜಿಲ್ಲೆಗೆ ಲಗ್ಗೆ ಇಟ್ಟು, ಹಸಿರ ಸಿರಿಯ ರಮಣೀಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ.

ಕೊಡಗಿಗೆ ಬರುವ ಪ್ರವಾಸಿಗರನ್ನು ಆಕರ್ಷಿಸುವ ಸುಂದರ ತಾಣಗಳಲ್ಲಿ ದಕ್ಷಿಣ ಕೊಡಗಿನಲ್ಲಿರುವ ಇರ್ಪುಜಲಪಾತ ಕೂಡ ಒಂದು. ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಹುಟ್ಟಿ ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದುಕನ್ನಡಿಗರ ಜೀವನಾಡಿ ಕಾವೇರಿಯನ್ನು ಸೇರುವ ಈ ಕಿರು ಜಲಪಾತದ ಸೊಬಗು ನಯನ ಮನೋಹರ. ಮುಂಗಾರು ಹಂಗಾಮದ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡುವ ಖುಷಿಯೇ ಬೇರೆ. ಹೊಸ ಕಳೆಯೊಂದಿಗೆ ಇರ್ಪು ಜಲಪಾತ ಧುಮ್ಮಿಕ್ಕುವುದನ್ನು ನೋಡುವುದೇ ಚಂದ.

ಹಸಿರು ಹೊದ್ದ ಬೆಟ್ಟಗಳ ಸಾಲಿನಲ್ಲಿ ಬಳಕುತ್ತಾ, ಬಾಗುತ್ತಾ ಸಾಗುವ ಇರ್ಪು ಜಲಪಾತ ಮತ್ತೆ ಮತ್ತೆ ನೋಡುತ್ತಲೇ ಇರಬೇಕು ಎನಿಸುವಷ್ಟು ಆಕರ್ಷಣೀಯ. ಪ್ರವಾಸಿಗರ ದಟ್ಟಣೆ, ವಾಹನ ದಟ್ಟಣೆಯ ಕಿರಿಕಿರಿ ಇಲ್ಲದೇ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆನ್ನುವವರಿಗೆ ಇಷ್ಟವಾದ ತಾಣವಿದು. ಸುಮಾರು ೬೦ ಮೀಟರ್ ಎತ್ತರದಿಂದ ನೀರಿನ ಕಿರು ಜರಿಗಳು ಹಾಲ್ನೊರೆಯಂತೆ ಧುಮ್ಮಿಕ್ಕುವುದನ್ನು ಇಲ್ಲಿ ಕಾಣಬಹುದು. ಹೀಗಾಗಿ ಇಲ್ಲಿಗೆ ಭೇಟಿ ನೀಡಿದವರಿಗೆ ವಾಪಸ್ಸಾಗಲು ಮನಸ್ಸೇ ಬರುವುದಿಲ್ಲ ಎಂದು ಪ್ರವಾಸಿ ಪ್ರಿಯರು ಹೇಳುತ್ತಾರೆ.

ಕುಟುಂಬ ಸದಸ್ಯರೊಂದಿಗೆ, ಸ್ನೇಹಿತರೊಂದಿಗೆ ಗದ್ದಲವಿಲ್ಲದೆ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬೇಕೆನ್ನುವವರು ಇಲ್ಲಿ ಯಾವುದೇ ಕಿರಿಕಿರಿ ಇಲ್ಲದೇ ದಿನ ಕಳೆಯ ಬಹುದು. ಇರ್ಪು ಜಲಪಾತವಿರುವ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ರಾಮೇಶ್ವರ ದೇವಾಲಯ ಕೂಡ ಇದೆ. ಈ ಸ್ಥಳಕ್ಕೆ ಪುರಾಣದ ಹಿನ್ನೆಲೆಯೂ ಇದೆ. ಇರ್ಪು ಜಲಪಾತ ಮತ್ತು ಅದರಿಂದ ಮುಂದೆ ನದಿಯಾಗಿ ಹರಿಯುವ ಕಾವೇರಿಯ ಉಪ ನದಿ ಲಕ್ಷ್ಮಣತೀರ್ಥದ ಜೊತೆಗೆ ರಾಮಾಯಣವೂ ಬೆಸೆದುಕೊಂಡಿದೆ. ವನವಾಸದ ಸಂದರ್ಭದಲ್ಲಿ ಸೀತೆಯನ್ನುಹುಡುಕುತ್ತಾ ರಾಮ-ಲಕ್ಷ್ಮಣರು ಇಲ್ಲಿಗೆ ಬಂದಾಗ ಶ್ರೀರಾಮ ಬಾಯಾರಿಕೆಯಿಂದ ನೀರು ಕೇಳಿದಾಗ ಲಕ್ಷ್ಮಣ ಹೆಬ್ಬಂಡೆಗೆ ಬಾಣ ಪ್ರಯೋಗಿಸಿ ಈ ಜಲಪತವನ್ನು ಸೃಷ್ಟಿಸಿರುವುದಾಗಿ ಜನರು ನಂಬಿದ್ದಾರೆ. ಲಕ್ಷ್ಮಣ ಪ್ರಯೋಗಿಸಿದ ಬಾಣದಲ್ಲಿ ಜಲಪಾತ ಸೃಷ್ಟಿಯಾಯಿತು ಎಂಬುದು ಐತಿಹ್ಯ.

ಹೀಗಾಗಿ ಈ ಜಲಪಾತದಿಂದ ಮುಂದೆ ನದಿಯಾಗಿ ಹರಿಯುವ ಕಾವೇರಿಯ ಈ ಉಪನದಿಗೆ ಲಕ್ಷ್ಮಣತೀರ್ಥ ಎಂದೇ ಕರೆಯಲಾಗುತ್ತದೆ. ಜೊತೆಗೆ ಬ್ರಹ್ಮಗಿರಿ ಬೆಟ್ಟದತಪ್ಪಲಿನಲ್ಲಿರುವ ರಾಮೇಶ್ವರ ದೇವಾಲಯ ದಲ್ಲಿರುವ ಶಿವಲಿಂಗವನ್ನು ಶ್ರೀರಾಮನೇ ಪ್ರತಿಷ್ಠಾಪಿಸಿದ್ದು ಎಂಬ ಪ್ರತೀತಿ ಇದೆ. ಶಿವರಾತ್ರಿ ಸಂದರ್ಭದಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ, ಇರ್ಪು ಜಲಪಾತದಲ್ಲಿ ಮಿಂದು, ರಾಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಹೋಗುತ್ತಾರೆ.

ಇರ್ಪುಗೆ ಹೋಗುವುದು ಹೇಗೆ?:  ಮೈಸೂರು ಕಡೆಯಿಂದ ತೆರಳುವವರು ಹುಣಸೂರಿಗೆ ತೆರಳಿ ಅಲ್ಲಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಸುಮಾರು ೧೨೦ ಕಿ.ಮೀ ಕ್ರಮಿಸಿ ಇರ್ಪು ಜಲಪಾತವನ್ನು ತಲುಪಬಹುದು. ಮಡಿಕೇರಿಯಿಂದಲೂ ಇರ್ಪು ಜಲಪಾತ ೧೨೦ ಕಿ.ಮೀ ದೂರದಲ್ಲಿದೆ. ವಿರಾಜಪೇಟೆಯಿಂದ ನಾಗರಹೊಳೆ ಮಾರ್ಗದಲ್ಲಿ ಸುಮಾರು ೪೮ ಕಿ.ಮೀ ಸಾಗಿದರೆ ಇರ್ಪು ಜಲಪಾತ ಸಿಗುತ್ತದೆ. ಪ್ರತಿದಿನ ಬೆಳಿಗ್ಗೆ ೬ ರಿಂದ ಸಂಜೆ ೫ ಗಂಟೆವರೆಗೆಮಾತ್ರ ಇರ್ಪು ಜಲಪಾತಕ್ಕೆ ಪ್ರವೇಶವಿದೆ. ಇಲ್ಲಿಗೆ ಭೇಟಿ ನೀಡಲು ಒಬ್ಬರಿಗೆ ೫೦ ರೂ. ಪ್ರವೇಶ ಶುಲ್ಕವನ್ನು ನೀಡಿ ಟಿಕೆಟ್ ಖರೀದಿಸಬೇಕಾಗುತ್ತದೆ. ರಾಮೇಶ್ವರ ದೇವಾಲಯದ ಬಳಿ ವಾಹನಗಳ ನಿಲುಗಡೆಗೆ ಅವಕಾಶವಿದೆ.

ಎಚ್ಚರ ತಪ್ಪಿದರೆ ಅಪಾಯ: ಮಳೆಗಾಲದಲ್ಲಿ ಜಲಪಾತದ ನಯನ ಮನೋಹರ ದೃಶ್ಯವನ್ನು ಸವಿಯುವ ಭರದಲ್ಲಿ ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟಬುತ್ತಿ. ಹೀಗಾಗಿ ಸಾಕಷ್ಟು ಮುನ್ನೆಚ್ಚರಿಕೆಯಿಂದಲೇ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದು ಒಳಿತು. ಕಿರಿದಾದ ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಇರ್ಪು ಜಲಪಾತವನ್ನು ತಲುಪಬೇಕಿರುವುದರಿಂದಆಯಾಸವಾಗುವುದು ಸಹಜ. ಹೀಗಾಗಿ ಕುಡಿಯುವ ನೀರನ್ನು ಜೊತೆಗೆ ಕೊಂಡೊಯ್ಯಿರಿ. ಆದರೆ, ನೀರಿನ ಖಾಲಿ ಬಾಟಲಿಗಳನ್ನು ಪ್ರಕೃತಿಯ ಮಡಿಲಲ್ಲಿ ಬಿಸಾಡಿ ಬರಬೇಡಿ. ಹುಣಸೂರು ಕಡೆಯಿಂದ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಇರ್ಪುಗೆ ತೆರಳುವವರು, ವಿರಾಜಪೇಟೆ ಕಡೆಯಿಂದ ಇರ್ಪುಗೆ ಬಂದು ಬಳಿಕ ನಾಗರಹೊಳೆಗೆ ಭೇಟಿ ನೀಡುವವರು ಅರಣ್ಯ ಇಲಾಖೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 

* ಪ್ರತಿ ವಾಹನಗಳವರೂ ತಮಗೆ ಸೂಚಿಸಿದ ರಸ್ತೆಯಲ್ಲಿ ಮಾತ್ರ ಚಲಿಸಬೇಕು

* ವಾಹನ ಚಾಲಕರು ಗಂಟೆಗೆ ೩೦ ಕಿ.ಮೀ ವೇಗದ ಮಿತಿಯನ್ನು ಪಾಲಿಸಬೇಕು

* ವಾಹನದಲ್ಲಿ ಚಲಿಸುವಾಗ ನಿಶ್ಶಬ್ದದಿಂದ ಚಲಿಸಿ, ಕಾಡಿನಲ್ಲಿ ವಾಹನದಿಂದ ಕೆಳಗೆ ಇಳಿಯದಿರಿ

* ವನ್ಯಪ್ರಾಣಿಗಳಿಗೆ ಕೀಟಲೆ ಮಾಡಬೇಡಿ, ಆಹಾರ ನೀಡಬೇಡಿ, ಅರಣ್ಯ ಇಲಾಖೆಯ ಸಲಹೆಗಳನ್ನು ನಿರ್ಲಕ್ಷ್ಯಿಸಬೇಡಿ

* ಕಾಡಿನಲ್ಲಿ ಮಣ್ಣಿನ ರಸ್ತೆಗಳಲ್ಲಿ ಚಲಿಸಬೇಡಿ, ಕಾಡಿನೊಳಗೆ ಚಲಿಸುವಾಗ ಮೊಬೈಲ್ ಬಳಸಬೇಡಿ, ಅತಿಯಾದ ಶಬ್ಧ ಮಾಡಬೇಡಿ.

ಆಂದೋಲನ ಡೆಸ್ಕ್

Recent Posts

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಹಿಷ ದಸರಾಗೆ ಡೇಟ್ ಫಿಕ್ಸ್!

ಮೈಸೂರು: ಅಕ್ಟೋಬರ್ 10ರಂದು ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ನಡೆಯಲಿದೆ. ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆಗೆ ಮಹಿಷ ಪ್ರತಿಮೆಗೆ…

11 hours ago

ಮೈಸೂರು ದಸರಾ 2026: ಸಿಎಂ ಡಿ.ಕೆ.ಶಿವಕುಮಾರ್‌ಗೆ ಅಧಿಕೃತ ಆಹ್ವಾನ

ಬೆಂಗಳೂರು: ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

11 hours ago

ಕಾಡಾನೆಗೆ ಲಾರಿ ಡಿಕ್ಕಿ ಹೊಡೆಸಲು ಯತ್ನ: ಚಾಲಕನಿಗೆ ₹5,000 ದಂಡ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯ ಮೇಲೆಯೇ ಲಾರಿ ಚಲಾಯಿಸಲು ಯತ್ನಿಸಿದ…

11 hours ago

ಅಕ್ಟೋಬರ್.‌11ಕ್ಕೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ

ಮಂಡ್ಯ: ಇದೇ ಅಕ್ಟೋಬರ್.‌11ಕ್ಕೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ. ದಸರಾ ಉತ್ಸವದ ಪ್ರಯುಕ್ತ ನಡೆಯಲಿರುವ…

11 hours ago

ಹನೂರು-ಪಾಲಾರ್ ರಸ್ತೆಯ ಕೌದಳ್ಳಿ ಸೇತುವೆ ಹಾನಿ: ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಹನೂರು-ಪಾಲಾರ್ (ಎಲ್ಲೇಮಾಳ-ಕೌದಳ್ಳಿ) ಜಿಲ್ಲಾ ಮುಖ್ಯ…

11 hours ago

ಮೈಸೂರಿನಲ್ಲಿ ಯುವಕನ ಬರ್ಬರ ಹತ್ಯೆ..!

ಮೈಸೂರು: ಗಣೇಶ ಹಬ್ಬಕ್ಕೆ ಹಾಸನದಿಂದ ಮೈಸೂರಿಗೆ ಬಂದಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 20 ವರ್ಷದ ಗೌರವ್‌…

13 hours ago