ನಾ.ದಿವಾಕರ

ಆಚರಣೆಗಳ ಸಾಂಸ್ಥೀಕರಣವೂ ಕೋಮು ಸಂಘರ್ಷದ ನೆಲೆಗಳೂ

ನಾ.ದಿವಾಕರ

ಪ್ರಶಾಂತ ನೀರಿನ ಕೊಳದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಬೇಕೆಂ ದರೆ ಒಂದು ಕಲ್ಲೆಸೆದರೆ ಸಾಕು. ಆ ಎಸೆತದ ರಭಸಕ್ಕೆ ಅದರೊಳಗೇ ತಮ್ಮ ಜೀವನ ಸವೆಸುವ ಸಣ್ಣ ಮೀನುಗಳು ವಿಲವಿಲನೆ ಒದ್ದಾಡುತ್ತವೆ, ಜೀವ ಹಾನಿಯ ಭೀತಿಯಿಂದ ಅತ್ತಿಂದಿತ್ತ ಓಡಾಡುತ್ತವೆ. ಬಿದ್ದ ಕಲ್ಲುಗಳಿಂದ ಅವುಗಳಿಗೆ ಪೆಟ್ಟಾಗುವುದಿಲ್ಲ. ಆದರೆ ಕದಡಿದ ನೀರು ಆ ಜೀವಗಳನ್ನು ತಲ್ಲಣಗೊಳಿಸುತ್ತದೆ. ಕಲ್ಲೆಸೆದವರಿಗೆ ಈ ಮೀನುಗಳ ಚಿಂತೆ ಇರುವುದಿಲ್ಲ. ನೀರನ್ನು ಕದಡಲು ಬಯಸುವವರಿಗೆ ಆ ಕೊಳದ ಪ್ರಶಾಂತತೆಯ ಮೌಲ್ಯವೇ ತಿಳಿದಿರುವುದಿಲ್ಲ. ಇದೇ ಸನ್ನಿವೇಶವನ್ನು ನಾವು ಬದುಕುವ ಸಮಾಜಕ್ಕೆ ಅನ್ವಯಿಸಿ ನೋಡುವುದಾದರೆ, ಸಮಾಜದಲ್ಲಿ ನೆಲೆಸಿರುವ ಶಾಂತಿಯನ್ನು ಕದಡುವ ಮೂಲಕ, ಅಲ್ಲಿ ತಳವೂರಿರಬಹುದಾದ ಸೌಹಾರ್ದ, ಸಮನ್ವಯ ಮತ್ತು ಭ್ರಾತೃತ್ವದ ಸೇತುವೆಗಳನ್ನು ಭಂಜಿಸಿ ಸಂಭ್ರಮಿಸುವ ಒಂದು ವರ್ಗವನ್ನು ನಮ್ಮ ನಡುವೆಯೇ ಗುರುತಿಸಬಹುದು.

ಮಾನವ ಸಂಬಂಧಗಳಿಗೆ ಯಾವುದೇ ಜಾತಿ ಅಥವಾ ಧರ್ಮದ ಅವಶ್ಯಕತೆ ಇರುವುದಿಲ್ಲ. ಆದರೆ ಮನುಷ್ಯ-ಮನುಷ್ಯರ ನಡುವಿನ ಸಂಬಂಧಗಳನ್ನು ಭಗ್ನಗೊಳಿಸಲು ಈ ಎರಡೂ ಸಾಂಸ್ಥಿಕ ನೆಲೆಗಳು ಉಪಯೋಗಿಸಲ್ಪಡುತ್ತವೆ. ತಳಸ್ತರದ ಸಮಾಜದ ಪ್ರತಿಯೊಬ್ಬ ವ್ಯಕ್ತಿಗೂ ಈ ಸಾಂಸ್ಥಿಕ ನೆಲೆಗಳು ಪರಕೀಯವೇ ಆಗಿರುತ್ತವೆ.

ಆದರೆ ಈ ಸಾಮಾಜಿಕ ಸಮನ್ವಯವನ್ನು ಭಂಗಗೊಳಿಸುವುದರ ಮೂಲಕವೇ ತಮ್ಮ ರಾಜಕೀಯ ಅಧಿಕಾರ ವ್ಯಾಪ್ತಿಯನ್ನು, ಸಾಂಸ್ಕೃತಿಕ ಬಿಗಿಹಿಡಿತವನ್ನು, ಸಾಮುದಾಯಿಕ ಪಾರಮ್ಯವನ್ನು ಕಾಪಾಡಿಕೊಳ್ಳಲು ತುದಿ ಗಾಲಲ್ಲಿ ನಿಂತಿರುವ ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘಟನೆಗಳು ಹಾಗೂ ಧಾರ್ಮಿಕ ಶಕ್ತಿಗಳು, ಸಮಾಜವೆಂಬ ತಿಳಿಗೊಳವನ್ನು ಕದಡುವ ಮೂಲಕವೇ ತಮ್ಮ ಪ್ರಾಬಲ್ಯವನ್ನು ವಿಸ್ತರಿಸಿಕೊಳ್ಳಲು ಸದಾ ಉತ್ಸುಕವಾಗಿರುತ್ತವೆ. ಭಾರತದಲ್ಲಿ ನಡೆದಿರುವ, ನಡೆಯುತ್ತಿರುವ ಯಾವುದೇ ಕೋಮು ಸಂಘರ್ಷದಲ್ಲೂ ನಾವು ಕಾಣಬೇಕಾಗಿರುವುದು ಈ ವಿದ್ಯಮಾನವನ್ನೇ. ಹಿಂದೂಗಳ ಅಥವಾ ಮುಸ್ಲಿಮರ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲೇ ಎರಡೂ ಪಂಗಡಗಳ ನಡುವೆ ಕೋಮು ಸಂಘರ್ಷ ಏರ್ಪಡುವುದನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಈ ಆಚರಣೆಗಳು ಸಾಂಸ್ಥಿಕರಣಗೊಂಡಷ್ಟೂ ವಿಭಜನೆಯ ಅಸ್ತ್ರಗಳು ಮೊನಚಾಗುವುದನ್ನೂ ಗುರುತಿಸಬಹುದು.

ಸಮನ್ವಯ ಸಮಾಜದ ಔದಾತ್ಯ: ಕೌಟುಂಬಿಕ ನೆಲೆಗಳಲ್ಲಿ, ನಾಲ್ಕು ಗೋಡೆಗಳ ನಡುವೆ, ಸಾವಿರಾರು ಮನೆಗಳಲ್ಲಿ ಪೂಜಿಸಲ್ಪಡುವ ಗಣೇಶ ಹೊರ ಸಮಾಜಕ್ಕೆ ಯಾವುದೇ ರೀತಿಯ ಬಾಧೆ ಉಂಟುಮಾಡುವುದಿಲ್ಲ. ನೆರೆಹೊರೆಯ ಅನ್ಯಧರ್ಮೀಯರ ನಡುವೆಯೇ ಈ ಹಬ್ಬಗಳು ಮನೆಗಳಲ್ಲಿ, ಮಾರುಕಟ್ಟೆಯಲ್ಲಿ, ಬಡಾವಣೆಗಳಲ್ಲಿ ಒಂದು ಪ್ರಶಾಂತ ತಿಳಿಗೊಳದಂತೆ ಸಂಭ್ರಮಿಸಲ್ಪಡುತ್ತವೆ. ಮೂಲತಃ ಹಬ್ಬ ಎನ್ನುವ ಕಲ್ಪನೆಯೇ ಮಾನವ ಸಂಬಂಧಗಳನ್ನು ಗಡಿಗಳಿಂದಾಚೆಗೆ ಜೋಡಿಸುವ ಒಂದು ಸಾಧನವಾಗಿರುವುದನ್ನು ನಮ್ಮ ಬಹುತ್ವ ಸಂಸ್ಕೃತಿ ಮತ್ತು ಸಮಾಜವೇ ಗುರುತಿಸಿದೆ. ಈ ಆಚರಣೆಗಳ ಸಾಂಸ್ತೀಕರಣ ಪ್ರಕ್ರಿಯೆಯಲ್ಲಿ ಕೌಟುಂಬಿಕ ನೆಲೆಯ ಸಮನ್ವಯವನ್ನೇ ಕಾಪಾಡಿಕೊಳ್ಳುವುದೇ ಆದರೆ ಸಾರ್ವಜನಿಕ ಉತ್ಸವ ಮೆರವಣಿಗೆಗಳೂ ಪ್ರಶಾಂತ ನೀರಿನ ಕೊಳದಂತೆ ನಿರ್ಮಲವಾಗಿರುತ್ತವೆ. ಅತ್ಯುತ್ತಮ ನಿದರ್ಶನಗಳನ್ನು ವರ್ತಮಾನದ ಸಮಾಜದಲ್ಲೂ ಹೇರಳವಾಗಿ ಕಾಣಬಹುದು. ಕಳೆದ ಮೂರುನಾಲ್ಕು ದಶಕಗಳಲ್ಲಿ ಕೋಮು ದ್ವೇಷ, ಮತ ದ್ವೇಷಗಳು ಸಾಂಸ್ಥಿಕ ಸ್ವರೂಪ ಪಡೆದುಕೊಂಡಿದ್ದರೂ ಇಂದಿಗೂ ಈ ಜಾತ್ರೆಗಳಲ್ಲಿ ಬೇರೆಲ್ಲೂ ಕಾಣದ ಸೌಹಾರ್ದತೆಯನ್ನು ಕಾಣಬಹುದಲ್ಲವೇ?

ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರು, ಚಿತ್ರದುರ್ಗದ ನಾಯಕನಟ್ಟಿ, ಕೋಲಾರದ ಆವಣಿ, 600 ವರ್ಷಗಳ ಇತಿಹಾಸ ಇರುವ ಕಲಬುರಗಿಯ ಹಜರತ್ ಖಾಜಾ ಬಂದಾ ನವಾಜ್ ಉರುಸ್ ಇಂತಹ ಹಲವಾರು ಸಾಂಸ್ಕೃತಿಕ ಉತ್ಸವಗಳು ಧಾರ್ಮಿಕ ಆಚರಣೆಗಳ ಚೌಕಟ್ಟಿನೊಳಗೇ ನಡೆಯುತ್ತವೆ. ಈ ಜಾತ್ರೆಗಳಲ್ಲಿ ಎಲ್ಲ ಜಾತಿ, ಧರ್ಮಗಳ ಜನರು ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಾರೆ. ಸಮನ್ವಯ ಸಂಸ್ಕೃತಿಯ ಪ್ರತೀಕವಾದ ಈ ಉತ್ಸವಗಳು ಎಂದೂ ಕೋಮುಭಾವನೆಗಳಿಂದ ಕಲುಷಿತವಾಗಿಲ್ಲ.

ಇದಕ್ಕೆ ಕಾರಣ ಇಲ್ಲಿ ಜನಸಾಮಾನ್ಯರ ಧಾರ್ಮಿಕ ನಂಬಿಕೆಗಳು ಮತ್ತು ಆಚರಣಾತ್ಮಕ ಚಟುವಟಿಕೆಗಳು ಸಾಂಸ್ಥಿಕ ಮತಾಚರಣೆಯನ್ನು ಬದಿಗಿಟ್ಟು ಸಾಗಿರುತ್ತವೆ. ಶ್ರದ್ಧಾನಂಬಿಕೆಗಳೊಂದಿಗೆ ಸಕ್ರಿಯವಾಗಿರುತ್ತವೆ. ಆದರೆ ಈ ನಂಬಿಕೆಗಳ ನಡುವೆ ಗೋಡೆಗಳಿರುವುದಿಲ್ಲ, ದಾಟಬಾರದ ಬೇಲಿಗಳನ್ನು ಕಟ್ಟಲಾಗಿರುವುದಿಲ್ಲ. ಸಂಸ್ಕೃತಿ ಎನ್ನುವುದನ್ನು ಸಂಕುಚಿತ ಕೋಶದೊಳಗೆ ಹುದುಗಿಸದೆ ವಿಶಾಲಾರ್ಥದಲ್ಲಿ ನೋಡಿದಾಗ, ಭಾರತದ ಬಹುತ್ವ ಸಂಸ್ಕೃತಿ ಇಂತಹ ಆಚರಣೆಗಳಲ್ಲಿ ಕಾಣುತ್ತದೆ. ಇದಕ್ಕೆ ತದ್ವಿರುದ್ಧವಾದ ಬೆಳವಣಿಗೆಯನ್ನು ನಾವು ಕಲಿತ ಸಮಾಜದ ನಡುವೆ ಸೃಷ್ಟಿಯಾಗಿರುವ ಆಚರಣೆಗಳಲ್ಲಿ ಕಾಣುತ್ತಿದ್ದೇವೆ. ಹಿಂದುತ್ವ ಸಂಘಟನೆಗಳಿಗೆ ಗಣಪತಿ ಉತ್ಸವ ಇಂತಹ ಒಂದು ಸಾಧನವಾಗಿ ಶತಮಾನದ ಇತಿಹಾಸವನ್ನೂ ಹೊಂದಿದೆ. ಜನಸಾಮಾನ್ಯರ ದೈವಶ್ರದ್ಧೆ ಕೌಟುಂಬಿಕ ನೆಲೆಯಲ್ಲಿರುವಷ್ಟು ಹೊತ್ತೂ ಅದು ವ್ಯಕ್ತಿ ಬದುಕಿನ ಒಂದು ಭಾಗವಾಗಿರುತ್ತದೆ. ಅಲ್ಲಿ ಸಂಯಮ ಮತ್ತು ಶ್ರದ್ಧೆ ಸಮ್ಮಿಳಿತಗೊಂಡು ಸಹಬಾಳ್ವೆಯನ್ನು ರೂಢಿಸಿಕೊಳ್ಳಲು ನೆರವಾಗುತ್ತಿರುತ್ತದೆ. ನೆರೆಹೊರೆಯ ಜನರು ಅನ್ಯರೇ ಆಗಿದ್ದರೂ ಅವರೊಡನೆ ಕೂಡಿ ಬಾಳುವ ಮನಸ್ಥಿತಿ ಇರುತ್ತದೆ.

ಒಮ್ಮೆ ಈ ಮತಶ್ರದ್ಧೆ ಸಾಂಸ್ಥಿಕರಣಕ್ಕೊಳಗಾಗಿ, ಧಾರ್ಮಿಕ ಆಚರಣೆಗಳಿಗೆ ಸಾರ್ವಜನಿಕ ಸ್ವರೂಪ ನೀಡಿದ ಕೂಡಲೇ, ಅದೇ ಮನೆಯೊಳಗಿನ ಯುವ ಸಮೂಹದ ನಡುವೆ ಧಾರ್ಮಿಕತೆ ಮರೆಯಾಗಿ, ಭಾವೋನ್ಮಾದ, ಭಾವಾವೇಶಗಳು ಪ್ರವೇಶಿಸುತ್ತವೆ. ನಾಲ್ಕು ಗೋಡೆಗಳ ನಡುವೆ ಕಾಣಬಹುದಾದ ಸಂಯಮ, ಸಭ್ಯತೆ ಮತ್ತು ಸಹಿಷ್ಣುತೆಗಳನ್ನು ವ್ಯಕ್ತಿಗತ ನೆಲೆಯಲ್ಲಿ ಕಳೆದುಕೊಳ್ಳುವ ಯುವ ಸಮೂಹ ನೆರೆಮನೆಯ ಅನ್ಯರನ್ನೂ ವಕ್ರದೃಷ್ಟಿಯಿಂದ ನೋಡಲಾರಂಭಿಸುತ್ತದೆ. ಮತೀಯವಾದಿಗಳಿಗೆ ಕೋಮುವಾದಿ ಶಕ್ತಿಗಳಿಗೆ, ಮತಾಂಧ ಸಂಘಟನೆಗಳಿಗೆ ಹಾಗೂ ಮೂಲಭೂತವಾದಿಗಳಿಗೆ ಯುವ ಸಮೂಹದ ಈ ವಕ್ರದೃಷ್ಟಿಯೇ ಬಂಡವಾಳವಾಗಿ ಪರಿಣಮಿಸುತ್ತದೆ.

ಸಾಂಸ್ಥಿಕರಣಗೊಂಡ ಮತಾಚರಣೆಯು ಸಹಜವಾಗಿಯೇ ತನ್ನ ಮೂಲ ಆವಾಸ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಧಾರ್ಮಿಕ ಶ್ರದ್ಧಾನಂಬಿಕೆಗಳನ್ನು, ಆಚರಣೆಗಳನ್ನು ಹಾಗೂ ಆರಾಧನೆಯ ಪ್ರಕಾರಗಳನ್ನು ಸಾರ್ವತ್ರೀಕರಿಸುವ ವೇದಿಕೆಯಾಗಿ ಪರಿಣಮಿಸುತ್ತದೆ. ನಾಗಮಂಗಲದಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷದ ಹಿನ್ನೆಲೆಯಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮನೆಯಲ್ಲಿ ಭಕ್ತಿಯಿಂದ ಮೌನವಾಗಿ ಗಣೇಶ ಹಬ್ಬ ಆಚರಿಸುವ ಯುವ ಸಮೂಹವೇ ಗಣಪತಿ ಪೆಂಡಾಲ್‌ಗಳ ಅಡಿ ಉನ್ಮಾದವನ್ನು ಪಡೆಯುತ್ತವೆ. ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಈ ಉನ್ಮಾದವನ್ನು ಉದ್ದೀಪನಗೊಳಿಸುವ ಶಕ್ತಿಗಳು ಒಂದೆಡೆಯಾದರೆ, ಉನ್ಮಾದಕರ ಘೋಷಣೆಗಳಿಂದ ಪ್ರಚೋದನೆಗೊಳಗಾಗುವ ಶಕ್ತಿಗಳು ಮತ್ತೊಂದೆಡೆ ಧಿಗ್ಗನೆ ಎದ್ದು ಕುಳಿತುಕೊಳ್ಳುತ್ತವೆ.

ಮತೀಯ ರಾಜಕಾರಣದ ನೆರಳಲ್ಲಿ: ವ್ಯಕ್ತಿಗತ ನೆಲೆಯಲ್ಲಿ ಶ್ರದ್ಧಾಭಕ್ತಿಯಿಂದ ನುಡಿಯಬೇಕಾದ ಭಕ್ತಿಭಾವದ ನುಡಿಗಟ್ಟುಗಳನ್ನು ಸಾಂಸ್ಥಿಕರಣಕ್ಕೊಳಪಟ್ಟ ಧಾರ್ಮಿಕ ಆಚರಣೆಗಳ ಘೋಷವಾಕ್ಯಗಳನ್ನಾಗಿ ಮಾಡುವುದು ಸಾಂಸ್ಕೃತಿಕ ರಾಜಕಾರಣದ ಉದ್ದೇಶವಾಗಿರುತ್ತದೆ. ಹಾಗಾಗಿಯೇ ಸಹನೀಯವಾಗಿ ಕಾಣುವ ಜೈ ಶ್ರೀರಾಮ್ ಎಂಬ ಘೋಷಣೆ ಒಂದು ಉತ್ಸವದ ಸಂದರ್ಭದಲ್ಲಿ ಮತ್ತೊಂದು ಕೋಮಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ತೋರುತ್ತದೆ. ಮತೀಯವಾದ, ಮತೀಯ ರಾಜಕಾರಣ ಮತ್ತು ಮತಾಂಧತೆಯ ಮೂಲ ಇರುವುದು ಇಲ್ಲಿಯೇ, ನಾಗಮಂಗಲದ ಗಲಭೆಗಳಿಗೆ ರಾಜಕೀಯ ಪಕ್ಷಗಳ ನಾಯಕರು ಸ್ಪಂದಿಸಿರುವ ರೀತಿಯನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಎರಡೂ ಕೋಮುಗಳಲ್ಲಿ ಇಂತಹ ಘಟನೆಗಳಿಗೆ ಬಳಸಲ್ಪಡುವ ಯುವ ಸಮೂಹದ ಒಂದು ಭಾಗ ಕಾನೂನು-ಪೊಲೀಸರ ಆತಿಥ್ಯಕ್ಕೆ ಒಳಪಟ್ಟರೆ, ಈ ಸಾಂಸ್ಥಿಕರಣಕ್ಕೆ ಕಾರಣವಾದ ರಾಜಕೀಯ ಶಕ್ತಿಗಳು ತಮ್ಮ ಆಧಿಪತ್ಯವನ್ನು ಮತ್ತಷ್ಟು ಬಿಗಿಗೊಳಿಸಲು ಶಾಂತಿ-ಸೌಹಾರ್ದತೆಯ ಮಾತುಕತೆಗಳಲ್ಲಿ ತೊಡಗುತ್ತವೆ.

ಕಲ್ಲೆಸೆಯುವ, ಬೆಂಕಿ ಹಚ್ಚುವ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡುವ, ಅಂಗಡಿ ಮುಂಗಟ್ಟುಗಳನ್ನು ಧ್ವಂಸ ಮಾಡುವ ಕಾಲಾಳುಗಳು ಶೂನ್ಯದಲ್ಲಿ ಅಥವಾ ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ಸಹಬಾಳ್ವೆಯ ಬಯಲಿನಿಂದಲೇ ಇವರನ್ನು ಹೆಕ್ಕಿ ತೆಗೆಯಲಾಗುತ್ತದೆ. ನಿನ್ನೆ ಇದ್ದ ಸ್ನೇಹ ಇಂದು ದ್ವೇಷವಾಗಿ ಮಾರ್ಪಡುತ್ತದೆ. ನಿನ್ನೆ ಸೋದರರಂತಿದ್ದವರು ಇಂದು ಶತ್ರುಗಳಾಗಿ ಕಾಣುತ್ತಾರೆ. ನಿನ್ನೆಯ ಅಜಾನ್ ಇಂದು ಕರ್ಕಶವಾಗಿ ಕೇಳಿಸುತ್ತದೆ. ನಿನ್ನೆಯ ಉತ್ಸವ-ಮೆರವಣಿಗೆ ಇಂದು ಅಸಹನೀಯವಾಗುತ್ತದೆ. ಆದರೆ ಈ ಭಾವನೆಗಳೆಲ್ಲವೂ ಉತ್ಪಾದಿತ ಭಾವನೆಗಳಾಗುತ್ತವೆ. ತಮ್ಮ ನಿತ್ಯ ಬದುಕಿನ ಸೌಂದರ್ಯವನ್ನು ಕಳೆದುಕೊಂಡು, ಕರಾಳ ಭವಿಷ್ಯದತ್ತ ಸಾಗುವ ಯುವ ಸಮೂಹ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ. ಈ ಯುವ ಸಂಕುಲವನ್ನು ಅಧಿಕಾರರಾಜಕಾರಣದಸರಕುಗಳನ್ನಾಗಲು ಅವಕಾಶವೀಯದೆ, ಮತದ್ವೇಷ, ಕೋಮು ಹಿಂಸೆ ಮತ್ತು ಉತ್ಪಾದಿತ ಅಸ್ಮಿತೆಗಳ ಚೌಕಟ್ಟುಗಳಿಂದ ಹೊರತಂದು, ಸಾಮಾಜಿಕ ಸ್ವಾಸ್ಥ್ಯದ ಕಾಲಾಳುಗಳನ್ನಾಗಿ ಮಾಡಬೇಕಾದ ತುರ್ತು ಎದುರಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಸಾಕಾರಗೊಳ್ಳುವುದೇ ಆದರೆ ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಬೇಕಿದೆ. ನಾಗಮಂಗಲ ನಾಳೆ ಶಾಂತವಾಗುತ್ತದೆ. ಜನಜೀವನ ಸಹಜವಾಗುತ್ತದೆ. ಇಂದಿನ ರಾಜಕೀಯ ಶತ್ರುಗಳು ನಾಳೆ ಮಿತ್ರರಾಗುತ್ತಾರೆ. ಆದರೆ ವೈಷಮ್ಯದ ಒಳಗುದಿ, ದ್ವೇಷಾಸೂಯೆಗಳ ಬೇಗುದಿ ಗುಪ್ತವಾಹಿನಿ ಯಂತೆ ಪ್ರವಹಿಸುತ್ತಲೇ ಇರುತ್ತದೆ. ಇದನ್ನು ತಪ್ಪಿಸುವ ಜವಾಬ್ದಾರಿ ನಾಗರಿಕರ ಮೇಲಿದೆ.

ಒಮ್ಮೆ ಈ ಮತಶ್ರದ್ಧೆ ಸಾಂಸ್ಥಿಕರಣಕ್ಕೊಳಗಾಗಿ, ಧಾರ್ಮಿಕ ಆಚರಣೆಗಳಿಗೆ ಸಾರ್ವಜನಿಕ ಸ್ವರೂಪ ನೀಡಿದ ಕೂಡಲೇ, ಅದೇ ಮನೆಯೊಳಗಿನ ಯುವ ಸಮೂಹದ ನಡುವೆ ಧಾರ್ಮಿಕತೆ ಮರೆಯಾಗಿ, ಭಾವೋನ್ಹಾದ, ಭಾವಾವೇಶಗಳು ಪ್ರವೇಶಿಸುತ್ತವೆ. ನಾಲ್ಕು ಗೋಡೆಗಳ ನಡುವೆ ಕಾಣಬಹುದಾದ ಸಂಯಮ, ಸಭ್ಯತೆ ಮತ್ತು ಸಹಿಷ್ಣುತೆಗಳನ್ನು ವ್ಯಕ್ತಿಗತ ನೆಲೆಯಲ್ಲಿ ಕಳೆದುಕೊಳ್ಳುವ ಯುವ ಸಮೂಹ ನೆರೆಮನೆಯ ಅನ್ಯರನ್ನೂ ವಕ್ರದೃಷ್ಟಿಯಿಂದ ನೋಡಲಾರಂಭಿಸುತ್ತದೆ. ಮತೀಯವಾದಿಗಳಿಗೆ, ಕೋಮುವಾದಿ ಶಕ್ತಿಗಳಿಗೆ, ಮತಾಂಧ ಸಂಘಟನೆಗಳಿಗೆ ಹಾಗೂ ಮೂಲಭೂತವಾದಿಗಳಿಗೆ ಯುವ ಸಮೂಹದ ಈ ವಕ್ರದೃಷ್ಟಿಯೇ ಬಂಡವಾಳವಾಗಿ ಪರಿಣಮಿಸುತ್ತದೆ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

3 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

5 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

5 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

6 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

7 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

7 hours ago