ಮೈಸೂರು ನಗರ

ಪಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ : ಕಲ್ಯಾಣಸಿರಿ ಭಂತೇಜಿ ಆಕ್ರೋಶ

ಮೈಸೂರು: ಪಹಲ್ಗಾಮ್ ಘಟನೆ ಕರುಣೆಯಿಲ್ಲದ ಕೃತ್ಯ ಎಂದು ವಿಶ್ವಮೈತ್ರಿ ಬುದ್ದವಿಹಾರದ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಪೊಲೀಸ್ ಬಡಾವಣೆಯ (ಸರ್ದಾರ್ ವಲ್ಲಭಭಾಯಿ ಪಟೇಲ್ ನಗರ ಹಾಗೂ ಐಪಿಎಸ್ ಶ್ರೀನಿವಾಸನ್ ನಗರ) ಜೈಭೀಮ್ ಬಂಧು ಬಳಗದ ಆಶ್ರಯದಲ್ಲಿ ಸಮಾನ ಮನಸ್ಕರ ವೇದಿಕೆ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರುಣೆ, ಮಾನವೀಯತೆ ಮತ್ತು ಪ್ರೀತಿ ಇಲ್ಲದ ದೇಶ ನಾಶವಾಗಲಿದೆ. ಹೆತ್ತ ತಾಯಿ ಮತ್ತು ಹೊತ್ತ ಭೂಮಿ ಸ್ವರ್ಗಕ್ಕಿತ ಮಿಗಿಲು. ಭಾರತ ಇತರೆ ದೇಶಕ್ಕಿಂತ ಭಿನ್ನ ಎಂಬುದು ಈಗಾಗಲೇ ಗೊತ್ತಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು.

ದೇಶ ಪ್ರಬುದ್ಧರಾಗಬೇಕಾದರೆ ಎಲ್ಲರೂ ಉದ್ದಾರ ಆಗಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತವಾದ ಕೆಲಸ ಮಾಡಲಿಲ್ಲ. ಎಲ್ಲಾ ಜಾತಿಗೆ ಹಕ್ಕು, ಅಧಿಕಾರ ತಂದುಕೊಟ್ಟರು. ಹಿಂದೂ ಕೋಡ್ ಬಿಲ್ ಜಾರಿಗೆ ಅವಿರತ ಶ್ರಮಿಸಿದರು. ಸಮಾನ ಕೆಲಸ ಸಮಾನ ವೇತನ ಜಾರಿಗೆ ಶ್ರಮಿಸಿದರು. ಕಾರ್ಮಿಕ ಯಂತ್ರವಲ್ಲ ಎಂಬ ವಿಚಾರವನ್ನು ಮುಂದೆ ತಂದರು. ಹೆಣ್ಣುಮಕ್ಕಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟರು ಎಂದು ಹೇಳಿದರು.

ಈ ದೇಶದಲ್ಲಿರುವ ತುಳಿತಕ್ಕೊಳಗಾದ ಜನ ಉನ್ನತ ಶಿಕ್ಷಣ ಪಡೆಯಬೇಕು, ಪ್ರಜ್ಞಾವಂತರಾಗಬೇಕು. ಶೋಷಿತ ವರ್ಗದ ಜನ ದೇಶವನ್ನು ಆಳುವ ವರ್ಗವಾಗಿ ರೂಪುಗೊಳ್ಳಬೇಕು. ಬುದ್ದದಮ್ಮದ ಕಡೆ ನನ್ನ ಜನ ಹೊರಳಬೇಕು ಎಂಬುದು ಅಂಬೇಡ್ಕರ್ ಅವರ ಸಂಕಲ್ಪವಾಗಿತ್ತು. ನಮ್ಮ ಉದ್ಧಾರದ ಆಸೆ ಅಂಬೇಡ್ಕರ್ ಅವರ ಕಲ್ಪನೆಯಾಗಿತ್ತು. ಆಳುವ ವರ್ಗದ ಕಡೆಗೆ ಹೋಗುವುದು ಈಗಿನ ಸಂದರ್ಭದಲ್ಲಿ ಕಷ್ಟವಿದೆ. ಆದರೆ,ಶಿಕ್ಷಣ ಪಡೆಯಲು ಕಷ್ಟವಿಲ್ಲ. ಆ ಕಡೆ ಗಮನ ಕೊಡಿ ಎಂದು ಸೂಚ್ಯವಾಗಿ ಹೇಳಿದರು.

ಭಾರತ ಇಂದು ರೋಗಗ್ರಸ್ತವಾಗಿದೆ. ಯಾವ ಸಮಾಜ, ಧರ್ಮ ಮತ್ತೊಂದು ಸಮಾಜವನ್ನು ಕಡೆಗಣಿಸುತ್ತದೋ ಅದು ಧರ್ಮವೇ ಅಲ್ಲ. ಧರ್ಮ ಎಂದರೆ ವೈಚಾರಿಕ ಭಾವನೆ ಹೊಂದಿರಬೇಕು, ಕಿಡಿಗೇಡಿ ಮನಸ್ಥಿತಿ ಇರಬಾರದು. ಮಾನವೀಯ ಮೌಲ್ಯಗಳನ್ನು, ಗುಣಗಳನ್ನು ಹೊಂದಿರಬೇಕು ಎಂದು ಆಶಿಸಿದರು.

ಬೇರೆಯವರ ಬಗ್ಗೆ ಮಾತನಾಡಿ ಕಾಲಾಹರಣ ಮಾಡಬೇಡಿ. ಬುದ್ದ ದಮ್ಮ ಮಾನವೀಯ ಸಾಗರ. ಅದನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿ. ಸೆಲ್ಫ್ ಕರೆಕ್ಷನ್ ಬಹಳ ಮುಖ್ಯ. ಅಸೂಯೆ ಪ್ರಪಂಚದಲ್ಲಿ ನಮ್ಮ ಸಾಧನೆ ಮುಖ್ಯ. ಅನ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ಸಂದರ್ಭ ಎದುರಾದಲ್ಲಿ ಮೂಕವಾಗಿರಿ. ಮನದೊಳಗಿನ ಕಿಚ್ಚು ಮನಸ್ಸನ್ನು ಸುಡಲಿದೆ, ಮೊದಲು ತನ್ನನ್ನು ಸುಡಲಿದೆ, ಆದ್ದರಿಂದ ತಟಸ್ಥವಾಗಿರಿ. ಎಷ್ಟೋ ಸಂದರ್ಭದಲ್ಲಿ ಮೌನ ಹಾಗೂ ನಗು ನಿರೀಕ್ಷೆಗೂ ಮೀರಿದ ಫಲಿತಾಂಶ ನೀಡಲಿದೆ ಎಂದು ಸೂಕ್ಷ್ಮವಾಗಿ ನುಡಿದರು.

ಪ್ರೀತಿ ಎಂಬ ಅಂಶವನ್ನು ಜಗತ್ತಿಗೆ ಹಂಚಿದ ಮಹಾಪುಣ್ಯಾತ್ಮರು ಬುದ್ದ ಹಾಗೂ ಅಂಬೇಡ್ಕರ್. ಸದ್ದಮ್ಮ ಎಂಬುದು ಮಾನವೀಯ ಮೌಲ್ಯ. ಅದರ ಮೂಲ ಉದ್ದೇಶವೇ ಜಗತ್ತಿನ ಎಲ್ಲರೂ ನೈತಿಕ ಶಿಕ್ಷಣ ಪಡೆಯುವುದಾಗಿದೆ. ಆದರೆ, ಇಂದು ನೈತಿಕ ಶಿಕ್ಷಣ ಇಲ್ಲವಾಗಿದ್ದು, ಕೇವಲ ಸರ್ಟಿಫಿಕೇಟ್ ಶಿಕ್ಷಣ ಆಗಿದೆ. ಓದಿರುವ ವ್ಯಕ್ತಿ ಜಾತಿ ಆಚರಿಸುವುದಾದರೆ ಅವನು ಶಿಕ್ಷಣ ಪಡೆದಿದ್ದಾನೆಯೇ ಎಂಬ ಅನುಮಾನ ಮೂಡುತ್ತದೆ. ಆದ್ದರಿಂದ ಪ್ರಜ್ಞಾವಂತಿಕೆಯ ಸ್ವರೂಪವೇ ಆದ ಅಂಬೇಡ್ಕರ್ ಅವರಂತೆ ನಾವು ಜಾಗೃತವಾಗಿರಬೇಕು ಎಂದು ಕರೆ ನೀಡಿದರು.

ಪ್ರಜ್ಞೆ ಜೊತೆಗೆ ಶೀಲ ಮುಖ್ಯ, ಶೀಲದ ಜೊತೆಗೆ ಮೈತ್ರಿ ಮುಖ್ಯ. ವಿದ್ಯೆಯಿದ್ದರೂ ವಿನಯ ಮುಖ್ಯ. ಅದರೊಂದಿಗೆ ಸಚ್ಚಾರಿತ್ಯ ಎನ್ನುವುದು ಕೂಡ ಮುಖ್ಯ ಎಂದು ಮಾರ್ಮಿಕವಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ.ಸೋಮಶೇಖರ್, ಮೈಸೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಉಪಪೊಲೀಸ್ ಆಯುಕ್ತ ಕೆ.ಎಸ್.ಸುಂದರರಾಜ್, ಆಲನಹಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸ್ವರ್ಣ, ಬಳಗದ ಅಧ್ಯಕ್ಷ ವೈ.ಎಂ.ರಂಗಸ್ವಾಮಿ, ಪದಾಧಿಕಾರಿಗಳಾದ ಮೋಹನ್, ಶಿವಸ್ಚಾಮಿ, ಸಿದ್ದೇಶ್, ಶಾಂತರಾಜು, ಶ್ರೀನಿವಾಸ್ ಪ್ರಸಾದ್, ನಾಗರಾಜು, ಶಿವರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಬಳಗದ ಸದಸ್ಯ ಪ್ರವೀಣ್ ಸಂವಿಧಾನ ಪೀಠಿಕೆ ಬೋಧಿಸಿದರು.

ಆಂದೋಲನ ಡೆಸ್ಕ್

Recent Posts

ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

ರಾಮನಗರ: ದೇವರ ದರ್ಶನಕ್ಕೆಂದು ರೇವಣಸಿದ್ದೇಶ್ವರ ಬೆಟ್ಟ ಹತ್ತುವಾಗಲೇ ವ್ಯಕ್ತಿಯೋರ್ವರು ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ. ಕೆಂಪನಹಳ್ಳಿ…

5 mins ago

ನಾಳೆಯಿಂದ ಬೆಳಗಾವಿಯ ಚಳಿಗಾಲದ ಅಧಿವೇಶನ: ಬಿಗಿ ಭದ್ರತೆ

ಬೆಂಗಳೂರು: ದೆಹಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಇಂದಿನಿಂದ ಆರಂಭವಾಗುವ ಬೆಳಗಾವಿಯ ಚಳಿಗಾಲದ ಅಧಿವೇಶನಕ್ಕೆ ಬಿಗಿ ಭದ್ರತೆ ಆಯೋಜಿಸಲಾಗಿದೆ. ಸುಮಾರು ಆರು…

9 mins ago

ಗೋವಾದಲ್ಲಿ 25 ಮಂದಿ ಸಜೀವ ದಹನ: ಪ್ರಧಾನಿ ಮೋದಿ ಸಂತಾಪ

ನವದೆಹಲಿ: ಉತ್ತರ ಗೋವಾದ ಬಾಗಾ ಬೀಚ್‌ ಬಳಿಯ ಅರ್ಪೊರಾದ ನೈಟ್‌ಕ್ಲಬ್‌ ಬೀರ್ಚ್‌ ಬೈ ರೋಮಿಯೋ ಲೇನ್‌ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ…

51 mins ago

ಮೈಸೂರು| ಕಣ್ಣಿಗೆ ಕಾರದಪುಡಿ ಎರಚಿ ಹಲ್ಲೆ ಬಳಿಕ ಅಪಹರಣ

ಮೈಸೂರು: ಕಣ್ಣಿಗೆ ಕಾರದಪುಡಿ ಎರಚಿ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿ ಅಪಹರಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ವಿಜಯನಗರ ಮೂರನೇ ಹಂತದಲ್ಲಿ ಈ…

1 hour ago

ಗೋವಾದಲ್ಲಿ ಘೋರ ದುರಂತ: ಬಾಗಾ ಬೀಚ್‌ ಬಳಿ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ಅವಘಡ: 25 ಮಂದಿ ಸಜೀವ ದಹನ

ಗೋವಾ: ಇಲ್ಲಿನ ನೈಟ್‌ ಕ್ಲಬ್‌ನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 25 ಜನ ಸಾವನ್ನಪ್ಪಿದ್ದಾರೆ. ಉತ್ತರ ಗೋವಾದ ಅರ್ಪೋರಾದಲ್ಲಿರುವ ನೈಟ್‌…

1 hour ago

ಓದುಗರ ಪತ್ರ: ಅಮೃತ ಬೇಕರಿ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಿಸಿ

ಮೈಸೂರಿನ ಶ್ರೀರಾಂಪುರದ ಮಾರ್ಗದಲ್ಲಿ ಬರುವ ಅಮೃತ್ ಬೇಕರಿ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿದ್ದ ತಂಗುದಾಣ ಹಾಳಾಗಿದ್ದು, ಬಸ್‌ಗಾಗಿ ಕಾಯುವವರು ರಸ್ತೆಯಲ್ಲಿ ನಿಲ್ಲಬೇಕಾದ…

2 hours ago