ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಸಂಸತ್ತಿನೊಳಗೆ ಪ್ರಧಾನಿಗೆ ‘ಬೆದರಿಕೆಯ ಗುಮ್ಮ

ಕರ್ನಾಟಕ ಮತ್ತು ತಮಿಳುನಾಡಿನ ರಾಜ್ಯಪಾಲರು ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರದ ಗೊತ್ತು ಗುರಿಯ ಭಾಷಣವನ್ನು ಪೂರ್ಣವಾಗಿ ಓದದೆ ಉಂಟು ಮಾಡಿದ ವಿವಾದ ವಾರದೊಳಗೆ ಹಳಸಲು ಸುದ್ದಿಯಾಗಿದೆ. ಇದು ಜನರ ಮನಸ್ಸಿನಿಂದ ಮಾಸುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ರಾಷ್ಟ್ರಪತಿ ಅವರ ಭಾಷಣಕ್ಕೆ ವಂದನೆ ಸಲ್ಲಿಸುವ ಚರ್ಚೆಗೆ ಉತ್ತರ ನೀಡದೆ ಹೋದುದು ಈಗ ಸಂಸದೀಯ ವ್ಯವಸ್ಥೆಯ ಸತ್ಸಂಪ್ರದಾಯದ ಬಗೆಗೆ ಚರ್ಚೆಗೆ ಅವಕಾಶ ಒದಗಿಸಿಕೊಟ್ಟಿದೆ.

ಅಮೆರಿಕದ ಜೆಫ್ರಿ ಎಪ್ಸಟೈನ್ ಎಂಬ ಲೈಂಗಿಕ ಅಪರಾಧಿಯ ಸಂಪರ್ಕದಲ್ಲಿಪ್ರಧಾನಿ ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್, ಬಿಲ್ ಕ್ಲಿಂಟನ್, ಅನಿಲ್ ಅಂಬಾನಿ, ಕೇಂದ್ರ ಸಚಿವ ಹರ್ದಿಪ್ ಸಿಂಗ್ ಸೇರಿದಂತೆ ನೂರಾರು ಮಂದಿ ಇದ್ದರು ಎಂಬ ಸುದ್ದಿ ಕಳೆದ ವಾರ ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿತ್ತು. ಈ ಪ್ರಕರಣದ ಬಗೆಗೆ ಸರ್ಕಾರ ಮತ್ತು ಮೋದಿ ಅವರು ಮೌನವಹಿಸುತ್ತಿದ್ದಂತೆ, ನಿವೃತ್ತ ಸೇನಾ ದಂಡ ನಾಯಕ ಜನರಲ್ ಮನೋಜ್ ನರವಣೆ ಅವರು ಬರೆದಿರುವ ಇನ್ನೂ ಅಽಕೃತವಾಗಿ ಪ್ರಕಟವಾಗಬೇಕಿರುವ ಪುಸ್ತಕ ಈಗ ಗದ್ದಲ ಮಾತ್ರವಲ್ಲ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೂ ಸಿಕ್ಕಿಸಿದೆ.

ಚೀನಾ ಮತ್ತು ಭಾರತದ ಗಡಿಯಲ್ಲಿ ಐದು ವರ್ಷಗಳ ಹಿಂದೆ ಉಂಟಾಗಿದ್ದ ಪ್ರಕ್ಷುಬ್ಧ ವಾತಾವರಣದ ಸಂದರ್ಭದಲ್ಲಿ ಸೇನಾ ಮುಖ್ಯಸ್ಥರು ಮತ್ತು ಸರ್ಕಾರದ ನಡುವೆ ನಡೆದ ಮಾತುಕತೆಯ ವಿವರಗಳನ್ನೊಳಗೊಂಡ ನಿವೃತ್ತ ಸೇನಾ ದಂಡನಾಯಕ ಜ. ನರವಣೆ ಅವರ ಅನುಭವ ಮತ್ತು ಅಂದಿನ ಘಟನೆಗಳ ಬಗೆಗೆ ಈ ಕೃತಿ ಬೆಳಕು ಚೆಲ್ಲಿದೆ. ಈ ಕೃತಿಯ ಪ್ರಕಟಣೆಗೆ ಜ.ನರವಣೆ ಅವರು ತಮ್ಮ ಅನುಭವದ ಬರಹವನ್ನು ರಕ್ಷಣಾ ಸಚಿವರ ಗಮನಕ್ಕೆ ತಂದು ಸರ್ಕಾರದ ಅನುಮತಿಗಾಗಿ ಎದುರುನೋಡುತ್ತಿದ್ದಾರೆ. ಈ ಕೃತಿಯ ಪ್ರಕಟಣೆಗೆ ಅನುಮತಿ ಸಿಗುವ ಮುನ್ನ ಕೆಲವು ಘಟನೆಗಳ ವಿವರಗಳು ಈಗಾಗಲೇ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಿರುವುದನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಪ್ರಸ್ತಾಪಿಸಿದ್ದು , ಈಗ ಇದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಲೋಕಸಭೆಯ ಕಲಾಪವನ್ನೆಲ್ಲ ನುಂಗಿಹಾಕುತ್ತಿದೆ.

ಬಜೆಟ್ ಜಂಟಿ ಸಂಸತ್ ಅಧಿವೇಶನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಡಿದ ಭಾಷಣದ ಮೇಲೆ ಚರ್ಚೆ ನಡೆದಿದ್ದು, ಅದಕ್ಕೆ ಪ್ರಧಾನಿ ಅವರು ತಮ್ಮ ವಂದನಾ ಭಾಷಣ ಮಾಡಿ ನಿರ್ಣಯವನ್ನು ಅಂಗೀಕರಿಸಬೇಕು. ಇದು ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಸತ್ಸಂಪ್ರದಾಯ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ವಂದನಾ ನಿರ್ಣಯದ ಭಾಷಣಕ್ಕೆ ಗೈರು ಆಗಿ ಲೋಕಸಭೆಯಿಂದ ‘ಪಲಾಯನ’ ಮಾಡಿದ್ದಾರೆ ಎಂಬ ಆರೋಪವನ್ನು ಹೊತ್ತುಕೊಂಡಿದ್ದಾರೆ.

೨೦೦೪ರಲ್ಲಿ ಅಂದಿನ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ನಾಯಕರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಸದನದಲ್ಲಿ ಉತ್ತರ ನೀಡಲು ಸಿದ್ಧರಿದ್ದರೂ ಮಾತನಾಡಲು ಬಿಡಲಿಲ್ಲ. ಆಗ ಪ್ರಧಾನಿ ಸಿಂಗ್ ನೇರವಾಗಿ ವಂದನಾ ನಿರ್ಣಯವನ್ನು ಮತಕ್ಕೆ ಹಾಕಿ ಸದನದ ಅಂಗೀಕಾರ ಪಡೆದರು. ಆದರೆ ಪ್ರಧಾನಿ ಮೋದಿ ಅವರು ವಂದನಾ ನಿರ್ಣಯಕ್ಕೆ ಉತ್ತರಿಸಲು ಲೋಕಸಭೆಗೆ ಕಾಲಿಡಲೇ ಇಲ್ಲ.

‘ಕಾಂಗ್ರೆಸ್ಸಿನಿಂದ ನಿಮಗೆ ಬೆದರಿಕೆ/ಅಪಾಯವಿದೆ. ಆದ್ದರಿಂದ ನೀವು ಸದನಕ್ಕೆ ಬರಬೇಡಿ’ ಎಂದು ನಾನೇ ಪ್ರಧಾನಿ ಮೋದಿ ಅವರಿಗೆ ಸೂಚಿಸಿದೆ. ಹಾಗಾಗಿ ಮೋದಿ ಅವರ ಗೈರು ಹಾಜರಿಯಲ್ಲಿ ಸದನ ವಂದನಾ ನಿರ್ಣಯವನ್ನು ಅಂಗೀಕರಿಸಲಾಗುತ್ತಿದೆ ಎಂದು ಸಭಾಧ್ಯಕ್ಷ ಓಂ ಬಿರ್ಲಾ ಅವರು ಹೇಳುವ ಮೂಲಕ ಸಂಸದೀಯ ವ್ಯವಸ್ಥೆಯ ಸತ್ಸಂಪ್ರದಾಯಕ್ಕೆ ಮತ್ತೊಂದು ವಿವಾದದ ಕಪ್ಪುಚುಕ್ಕೆ ಬಂದಂತಾಗಿದೆ. ಕಾಕತಾಳೀಯವೋ ಅಥವಾ ಉದ್ದೇಶ ಪೂರ್ವಕವಾಗಿಯೋ ರಕ್ಷಣಾ ಸಚಿವ ಮತ್ತು ಗೃಹ ಸಚಿವರು ಕೂಡ ಈ ನಿರ್ಣಯವನ್ನು ಅಂಗೀಕರಿಸುವಾಗ ಸದನದಲ್ಲಿ ಗೈರುಹಾಜರಾಗಿದ್ದು ವಿವಾದಕ್ಕೆ ಮತ್ತಷ್ಟು ರೆಕ್ಕೆಪುಕ್ಕ ನೀಡಿದಂತಾಗಿದೆ.

ಈಗ ಪ್ರಶ್ನೆ ಎದ್ದಿರುವುದು ಪ್ರಧಾನಿ ಮೋದಿ ಅವರಿಗೆ ಸಂಸತ್ತಿನ ಒಳಗೇ ‘ಅಪಾಯವಿದೆ’ ಎನ್ನುವುದು. ತಮಗೆ ಖಚಿತವಾಗಿ ಬಂದ ಮಾಹಿತಿ ಆಧಾರದ ಮೇಲೆ ಪ್ರಧಾನಿ ಅವರಿಗೆ ಮುನ್ನೆಚ್ಚರಿಕೆ ನೀಡಿದ್ದಾಗಿ ಸಭಾಧ್ಯಕ್ಷರು ಹೇಳಿದ್ದಾರೆ. ಸಂಸತ್ ಭವನಕ್ಕೆ ವರ್ಷದ ೩೬೫ ದಿನಗಳೂ ಭಾರೀ ಭದ್ರತೆ ಇರುತ್ತದೆ. ಅದು ಬಾಹ್ಯ ಬೆದರಿಕೆಯನ್ನು ತಡೆಗಟ್ಟುವುದಕ್ಕಾಗಿ. ಅದರಲ್ಲೂ ಅಧಿವೇಶನ ನಡೆಯುವ ದಿನಗಳಲ್ಲಿ ಈ ಭದ್ರತೆ ನೂರು ಪಟ್ಟು ಹೆಚ್ಚಾಗುತ್ತದೆ. ಆದರೂ ಬಿಜೆಪಿಯ ಆಡಳಿತ ಕಾಲದಲ್ಲಿ ಅಧಿವೇಶನ ನಡೆಯುವಾಗಲೇ ಹೊರಶಕ್ತಿಗಳಿಂದ ದಾಳಿ ಪ್ರಯತ್ನವೂ ನಡೆದಿರುವುದು ಈಗ ಇತಿಹಾಸ. ನಿವೃತ್ತ ಸೇನಾ ಮುಖ್ಯಸ್ಥ ಜನರಲ್ ಮನೋಜ್ ನರವಣೆ ಅವರು ಬರೆದಿರುವ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ ಕೃತಿಯಲ್ಲಿ ಉಲ್ಲೇಖವಾಗಿರುವ ಗಾಲ್ವಾನ್ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೇನೆಯ ಯೋಧರ ನಡುವೆ ಪರಸ್ಪರ ನಡೆದ ಹೊಡೆದಾಟ, ಆ ಸಂದರ್ಭದಲ್ಲಿ ಎದುರಾದ ಬಿಕ್ಕಟ್ಟು ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಉತ್ತರಿಸಬೇಕೆಂದು ರಾಹುಲ್ ಗಾಂಧಿ ಪಟ್ಟು ಹಿಡಿದಿದ್ದಾರೆ. ಈ ಪ್ರಕರಣದ ಬಗ್ಗೆ ಹೆಚ್ಚು ಮಾತನಾಡಲೂ ಕಳೆದ ಸೋಮವಾರ ಸಭಾಧ್ಯಕ್ಷರು ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಸಭಾಧ್ಯಕ್ಷರ ಬೆಂಬಲಕ್ಕೆ ನಿಂತ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಇನ್ನೂ ಪ್ರಕಟವಾಗದ ಕೃತಿಯ ವಿವರಗಳನ್ನು ಸದನದಲ್ಲಿ ಉಲ್ಲೇಖಿಸಲು ಅವಕಾಶವಿಲ್ಲ ಎಂದಿದ್ದು, ಈ ಚರ್ಚೆಯನ್ನು ಮೊಟಕು ಮಾಡುವ ಯತ್ನ ಸರ್ಕಾರದಿಂದ ನಡೆದಿರುವುದಕ್ಕೆ ಇದಕ್ಕಿಂತ ಬೇರೇನೂ ಪುರಾವೆ ಬೇಕಾಗಿಲ್ಲ.

ಈ ಅವಕಾಶವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ವಿರೋಧ ಪಕ್ಷ ಕಾಂಗ್ರೆಸ್ ಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಅವರ ಭಾಷಣದ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸುವಾಗ ಉತ್ತರ ಪಡೆದುಕೊಳ್ಳಬೇಕೆಂದು ತನ್ನದೇ ಆದ ಕಾರ್ಯತಂತ್ರವನ್ನು ರೂಪಿಸಿತ್ತು ಎನ್ನಲಾಗಿದೆ. ಆದರೆ ಈ ಕಾರ್ಯತಂತ್ರದ ವಿವರ ತಮ್ಮ ಗಮನಕ್ಕೆ ಬಂದ ಕಾರಣ, ಪ್ರಧಾನಿ ಅವರು ಅಂದು ಸದನಕ್ಕೆ ಬರುವುದೇ ಬೇಡ. ಬಂದರೆ ಮತ್ತಷ್ಟು ಗಲಾಟೆ ಆಗಿ ಅದು ಯಾವ ರೂಪ ಪಡೆದುಕೊಳ್ಳುವುದೋ ಹೇಳಲಾಗದು ಎನ್ನುವುದು ಸಭಾಧ್ಯಕ್ಷ ಓಂ ಬಿರ್ಲಾ ಅವರ ಸಮಜಾಯಿಷಿ.

ಕಾಂಗ್ರೆಸ್ ಏನೇ ಕಾರ್ಯತಂತ್ರ ಸಿದ್ಧಪಡಿಸಿಕೊಂಡಿದ್ದರೂ ಅದನ್ನು ಹತ್ತಿಕ್ಕುವ ಅಥವಾ ನಿಯಂತ್ರಿಸುವ ಸದನದ ನಿಯಮಾವಳಿಗಳು ಮತ್ತು ಎಲ್ಲ ಭದ್ರತಾ ಸಿಬ್ಬಂದಿಯ ಅಸ್ತ್ರ ಅವರ ಬಳಿ ಇದ್ದೇ ಇದೆ. ಅದರೂ ಪ್ರಧಾನಿ ಅವರು ಸದನಕ್ಕೆ ಬಾರದಂತೆ ಮಾಡಿರುವುದು ಸಮರ್ಥನೀಯವಲ್ಲ. ಪ್ರಧಾನಿ ಅವರು ಅಂದು ಲೋಕಸಭೆಯಲ್ಲಿ ಮಾತನಾಡುವ ಪರಿಸ್ಥಿತಿ ಇರಲಿಲ್ಲ ಎನ್ನುವ ಬಗೆಗೆ ಸಭಾಧ್ಯಕ್ಷರು ತಮಗೆ ಗೊತ್ತಿರುವ ಮಾಹಿತಿಯನ್ನು ಬಹಿರಂಗಗೊಳಿಸಬೇಕು. ಇಲ್ಲವಾದರೆ ವಿರೋಧ ಪಕ್ಷ ಕಾಂಗ್ರೆಸ್ ಕಾರ್ಯತಂತ್ರ ಅಥವಾ ಸಂಚು ನಡೆಸಿತ್ತು ಎನ್ನುವ ಬಗ್ಗೆ ದೇಶದ ಜನತೆ ಹಲವು ಸಂಶಯ ಪಡಬೇಕಾಗುತ್ತದೆ. ಈಗಾಗಲೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಎಂ. ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ಅವರ ಪ್ರಶ್ನೆಗೆ ಉತ್ತರಿಸಲಾಗದೆ ಪಲಾಯನ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿರುವುದರಿಂದ ಈ ಆರೋಪದಿಂದ ಹೇಗೆ ತಪ್ಪಿಸಿಕೊಳ್ಳುವುದು ಎನ್ನುವ ಪ್ರಶ್ನೆ ಆಳುವ ಪಕ್ಷವನ್ನು ಕಾಡದೇ ಇರದು. ಅಂದು ಕಾಂಗ್ರೆಸ್ ಅಲ್ಲದೆ ಸಿಪಿಐಎಂ, ಸಮಾಜವಾದಿ ಪಕ್ಷ, ಆರ್‌ಜೆಡಿ ಹೀಗೆ ಬೇರೆ ಬೇರೆ ವಿರೋಧ ಪಕ್ಷಗಳು ಹಲವು ವಿಷಯಗಳ ಮೇಲಿನ ಚರ್ಚೆಗೆ ಉತ್ತರ ಬಯಸಿದ್ದವು ಎನ್ನಲಾಗಿದೆ.

ಸಾರ್ವಜನಿಕ ಸಭೆಗಳಲ್ಲಿ ತಮ್ಮ ಭಕ್ತವೃಂದ ಹುಚ್ಚೆದ್ದು ಕುಣಿಯುವಂತೆ ಪ್ರಚಂಡ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಕಲಾಪದಲ್ಲಿ ತಮ್ಮ ಸರ್ಕಾರದ ಕ್ರಮಗಳ ಬಗೆಗೆ ಪ್ರತಿ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಮತ್ತು ಸಾವಧಾನದಿಂದ ಉತ್ತರ ನೀಡಿದ ಉದಾಹರಣೆಗಳಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಡಳಿತ ವಹಿಸಿಕೊಂಡಾಗಿನಿಂದ ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಸದನದ ಒಳಗೆ ಮತ್ತು ಹೊರಗೆ ಯಾವುದೇ ಸಂದರ್ಭದಲ್ಲೂ ಪರಸ್ಪರ ಸೌರ್ಹಾದತೆ ಕಂಡು ಬಂದಿಲ್ಲದಿರುವುದು ದುರದೃಷ್ಟಕರ.

ಮೋದಿ ಅವರ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿ ಸಂಸತ್ ಅಧಿವೇಶನದ ಕಾಲದಲ್ಲೂ ನಿತ್ಯವೂ ಒಂದಲ್ಲ ಒಂದು ಕಾರಣಕ್ಕೆ ಪ್ರತಿಭಟನೆ, ಸಭಾತ್ಯಾಗ ಮತ್ತು ತಮ್ಮ ಸದಸ್ಯರ ಕೈಯಲ್ಲಿ ಪ್ಲೆಕಾರ್ಡ್ ಹಿಡಿದು ಸಂಸತ್ ಹೊರಗೆ ಪ್ರತಿಭಟಿಸುವ ಕಾಯಕವನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿರುವುದು ವಿಶೇಷ. ಕಾಂಗ್ರೆಸ್ ಏನೇ ಪ್ರತಿಕ್ರಿಯೆ ವ್ಯಕ್ತಪಡಿಸಿದರೂ, ಆನೆ ನಡೆದದ್ದೇ ದಾರಿ ಎನ್ನುವಂತೆ ಪ್ರಧಾನಿ ಮೋದಿ ಅವರು ಸಂಸದೀಯ ವ್ಯವಸ್ಥೆಯಲ್ಲಿ ಮತ್ತು ಒಕ್ಕೂಟ ವ್ಯವಸ್ಥೆಯಲ್ಲಿ ಪಾಲಿಸಿಕೊಂಡು ಬಂದ ಸತ್ಸಂಪ್ರದಾಯಗಳೆಲ್ಲವನ್ನು ನಿರ್ಲಕ್ಷಿಸಿ ಮುನ್ನಡೆಯುವುದು ಅವರ ಜಾಯಮಾನ.

ಮೋದಿ ಅವರ ವರ್ಚಸ್ಸು ಮತ್ತು ದಾರ್ಷ್ಟ್ಯ ಮನೋಭಾವವನ್ನು ಟೀಕಿಸುವವರು, ಅಪಸ್ವರ ಎತ್ತುವವರು ಬಿಜೆಪಿ ಮಾತ್ರವಲ್ಲ ಎನ್‌ಡಿಎ ಕೂಟದಲ್ಲೂ ಕಾಣಸಿಗರು. ಇದು ಮೋದಿ ಅವರನ್ನು ಮತ್ತಷ್ಟು ಬಲಪಡಿಸುತ್ತಾ ಹೋಗುತ್ತಿರುವುದು ಅವರ ಹಾದಿಯನ್ನು ಸುಗಮ ಮಾಡಿದೆ. ಇದೇನೇ ಇದ್ದರೂ, ಜ.ನರವಣೆ ಅವರು ತಮ್ಮ ಕೃತಿಯಲ್ಲಿ ಎತ್ತಿರುವ ಹಲವು ವಿವಾದಗಳ ಸಂಗತಿಯನ್ನು ಮುಚ್ಚಿಡುವುದು ಕಷ್ಟ. ಮತ್ತೊಂದು ಕಡೆ ಅನೇಕ ವಿಷಯಗಳು ಉಭಯ ದೇಶಗಳ ಗಡಿ ಸಮಸ್ಯೆ ಮತ್ತು ಸೇನೆಗಳ ನಿತ್ಯದ ಚಲನ ವಲನ, ಕ್ರಿಯೆ ಪ್ರತಿಕ್ರಿಯೆ, ಎರಡೂ ದೇಶಗಳ ಬಾಂಧವ್ಯದ ಹಿನ್ನೆಲೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಮಾತುಕತೆಗಳಿಗೆ ಸಂಬಂಧಿಸಿವೆ. ಹಾಗಾಗಿ ಪ್ರಧಾನಿ ಮೋದಿ ಅವರಾಗಲಿ, ರಕ್ಷಣಾ ಸಚಿವರಾಗಲಿ ಈ ಬಗೆಗೆ ಎದ್ದಿರುವ ಸಂಶಯಗಳಿಗೆ ಎಚ್ಚರಿಕೆಯಿಂದ ಉತ್ತರಿಸಬೇಕಾಗುತ್ತದೆ. ಈ ಕೃತಿಯ ಪ್ರಕಟಣೆಗೆ ಜ. ನರವಣೆ ಅವರು ಸರ್ಕಾರದ ಪೂರ್ವಾನುಮತಿ ಕೇಳಿರುವ ಹಂತದಲ್ಲಿಯೇ ಅದರ ಮಾಹಿತಿ ಪತ್ರಿಕೆಯೊಂದಕ್ಕೆ ಲಭ್ಯವಾಗಿರುವುದರಿಂದ ಅದು ಮುಂದಿನ ದಿನಗಳಲ್ಲಿ ಮತ್ತಷ್ಟು ಆಸಕ್ತಿದಾಯಕ ವಿಷಯಗಳು ಹೊರಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದರ ಜೊತೆಗೆ ಎಪ್ಸಟೈನ್ ಫೈಲ್ಸ್ ನಲ್ಲಿ ಕಾಣಿಸಿಕೊಂಡಿರುವ ತಮ್ಮ ಹಾಗೂ ಸಹದ್ಯೋಗಿ ಪ್ರದೀಪ್ ಪುರಿ ಅವರ ಪಾತ್ರದ ಬಗೆಗೂ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕಾಗಿರುವುದು ಅವಶ್ಯ.

” ಸಾರ್ವಜನಿಕ ಸಭೆಗಳಲ್ಲಿ ತಮ್ಮ ಭಕ್ತವೃಂದ ಹುಚ್ಚೆದ್ದು ಕುಣಿಯುವಂತೆ ಪ್ರಚಂಡ ಭಾಷಣ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಕಲಾಪದಲ್ಲಿ ತಮ್ಮ ಸರ್ಕಾರದ ಕ್ರಮಗಳ ಬಗೆಗೆ ಪ್ರತಿ ಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಮತ್ತು ಸಾವಧಾನದಿಂದ ಉತ್ತರ ನೀಡಿದ ಉದಾಹರಣೆಗಳಿಲ್ಲ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಅನುಮಾನ ಬಗೆಹರಿಸಿ

ರಾಜ್ಯದ ಬಹಳಷ್ಟು ಜನರು ಆನ್‌ಲೈನ್ -ಆಫ್ಲೈನ್ ಮೂಲಕ ನೋಂದಣಿ ಮಾಡಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಅನೇಕರಲ್ಲಿ ಗೊಂದಲ…

21 hours ago

ಓದುಗರ ಪತ್ರ: ಕನ್ನಡ ಒಗ್ಗಟ್ಟು

ಕನ್ನಡ ಒಗ್ಗಟ್ಟು ಕಾವೇರಿಯ ಹೆಸರಲ್ಲಿ ಕಂಡಿದೆ ಕನ್ನಡ ನಾಯಕರ ಒಗ್ಗಟ್ಟು ಆಳುವವರ ಜೊತೆ ಕೈ ಜೋಡಿಸಿದರೆ ಬಿಡಿಸಲಿವೆ ಹಲವು ಬಿಕ್ಕಟ್ಟು…

21 hours ago

ಓದುಗರ ಪತ್ರ: ರಾಜಕಾರಣದ ಸರಕು!

ರಾಜಕಾರಣದ ಸರಕು! ‘ನೀರಿಗಾಗಿ ತಮಿಳುನಾಡು ಸುಪ್ರೀಂಗೆ ಮೊರೆ!’ ನೀರಿzಗ ಹರಿಸಿದೆ ಕರ್ನಾಟಕ ಯಥೇಚ್ಛ ನೀರನು ಸಮುದ್ರ ತುಳುಕುವಷ್ಟು ಇಲ್ಲದಾಗ ಹರಿಸುವುದೆಂತು…

21 hours ago

ಓದುಗರ ಪತ್ರ: ಅಕ್ಕಿ ದರ ಏರಿಕೆಗೆ ಕಡಿವಾಣ ಅಗತ್ಯ

ರಾಜ್ಯದಲ್ಲಿ ದಿನೇ ದಿನೇ ಏರುತ್ತಿರುವ ಅಕ್ಕಿ ಬೆಲೆ ಸಾಮಾನ್ಯ ಜನರ ನಿದ್ದೆಗೆಡಿಸಿದೆ. ತುಂಗಭದ್ರಾ ಜಲಾಶಯದ ಗೇಟ್ ರಿಪೇರಿಯಿಂದಾಗಿ ಸುಮಾರು ೭…

21 hours ago

ಸತ್ಯದ ಪ್ರತಿಪಾದಕರು ಮಾತ್ರ ಆದರ್ಶ ಆಗಬಲ್ಲರು

ಸಿ.ಹರಕುಮಾರ್, ಲೇಖಕ ಜನರ ನೆಮ್ಮದಿ ಕಸಿದುಕೊಂಡವರು, ನೆಮ್ಮದಿಯಿಂದಿರಲು ಸಾಧ್ಯವೆ? ಸತ್ಯದ ಪ್ರತಿಪಾದನೆ ಆ ಕ್ಷಣಕ್ಕೆ ಇಷ್ಟವಾಗದಿರಬಹುದು, ಶತ್ರುಗಳನ್ನು ಹುಟ್ಟುಹಾಕಬಹುದು, ಜೀರ್ಣಿಸಿಕೊಳ್ಳಲು…

21 hours ago

300 ಮಕ್ಕಳ ಶಿಕ್ಷಣಕ್ಕೆ ಶೇ.96ರಷ್ಟು ಸಂಪತ್ತನ್ನು ದಾನ ಮಾಡಿದ ಟೆಕ್ಕಿ

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಬಾಲಕಾರ್ಮಿಕರಿಗಾಗಿ ಏಕಲವ್ಯ ಟ್ರಸ್ಟ್ ಸ್ಥಾಪನೆ  ಛತ್ತೀಸ್‌ಘಡದ ಭಿಲಾಯ್‌ಯ ವಿವೇಕ್ ಶಂಗಾರಿಯ ತಾಯಿ ತೀರಿಕೊಂಡಾಗ ಅವನಿಗೆ…

21 hours ago