ಎಡಿಟೋರಿಯಲ್

ಕಾಂಗ್ರೆಸ್ ಅಂತಃಕಲಹದ ‘ಮತ’ಲಾಭ ಪಡೆಯಲು ಸಜ್ಜಾದ ಮೋದಿ ಟೀಮು

ಆರ್‌.ಟಿ.ವಿಥ್ಥಲ ಮೂರ್ತಿ

ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ನರೇಂದ್ರ ಮೋದಿ ನೇತೃತ್ವದ ಸೈನ್ಯಕ್ಕೆ ಸಂತಸದ ವಾರ್ತೆ ತಲುಪಿದೆ. ಕರ್ನಾಟಕಕ್ಕೆ ದಂಡೆತ್ತಿ ಹೋಗುವ ಕಾಲಕ್ಕೆ ರಾಜ್ಯ ಕಾಂಗ್ರೆಸ್‌ನ ಅಂತಃಕಲಹ ತಾರಕಕ್ಕೇರಿರುತ್ತದೆ ಎಂಬುದು ಈ ವಾರ್ತೆ. ಅಂದ ಹಾಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಪವಾಡವನ್ನೇನೂ ಮಾಡಿಲ್ಲ. ಅದರರ್ಥ,ಮೋದಿ ಗ್ಯಾಂಗು ಬೊಮ್ಮಾಯಿ ಅವರಿಂದ ಪವಾಡ ನಿರೀಕ್ಷಿಸಿತ್ತು ಅಂತ ಅರ್ಥವಲ್ಲ. ಆದರೆ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದ ನಂತರ ಬೊಮ್ಮಾಯಿ ಅವರಿಂದ ಮೋದಿ ಏನು ನಿರೀಕ್ಷಿಸಿದ್ದರೋ ಅದನ್ನು ಬೊಮ್ಮಾಯಿ ಸಾಂಗೋಪಾಂಗವಾಗಿ ಈಡೇರಿಸುತ್ತಿದ್ದಾರೆ.

ಅರ್ಥಾತ್, ಸ್ಟೇಜ್ ಮ್ಯಾನೇಜ್ ಮಾಡುವ ವಿಷಯದಲ್ಲಿ ವರಿಷ್ಠರು ಏನು ನಿರೀಕ್ಷಿಸಿದ್ದರೋ ಅದನ್ನು ಈಡೇರಿಸಿದ್ದಾರೆ.
ಉದಾಹರಣೆಗೆ ಸಚಿವ ಸಂಪುಟ ವಿಸ್ತರಣೆ ಯಾ ಪುನರ್ರಚನೆಯ ಕಸರತ್ತನ್ನೇ ತೆಗೆದುಕೊಳ್ಳಿ. ಅಧಿಕಾರಕ್ಕೆ ಬಂದು ಹದಿನಾರು ತಿಂಗಳಾಗುತ್ತಾ ಬಂದರೂ ಈ ಸಮಸ್ಯೆ ಉಲ್ಬಣಿಸಲು ಬೊಮ್ಮಾಯಿ ಬಿಟ್ಟಿಲ್ಲ. ಅವರು ಅಧಿಕಾರಕ್ಕೆ ಬಂದ ಶುರುವಿನಲ್ಲಿ ಕನಿಷ್ಟ ಎರಡು ಡಜನ್ ನಷ್ಟು ಶಾಸಕರು ಮಂತ್ರಿ ಪದವಿ ಆಕಾಂಕ್ಷಿಗಳಾಗಿದ್ದರು. ಆದರೆ ಈಗ ಅದು ಅರ್ಧ ಡಜನ್‌ಗಿಳಿದಿದೆ.

ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ, ಸಿ.ಪಿ.ಯೋಗೀಶ್ವರ್ ಅವರಂತಹವರಿಗೆ ಈಗಲೂ ಮಂತ್ರಿಗಳಾಗುವ ನಿರೀಕ್ಷೆ ಇದೆಯಾದರೂ, ಇದಕ್ಕಾಗಿ ಅವರು ಬಂಡಾಯ ಏಳುವ ಸ್ಥಿತಿಯಲ್ಲಿಲ್ಲ.

ಕುತೂಹಲದ ಸಂಗತಿ ಎಂದರೆ ಗುಜರಾತ್ ವಿಧಾನಸಭೆಯ ಚುನಾವಣೆ ಮುಗಿದ ಕೂಡಲೇ ನೀವೆಲ್ಲ ಕ್ಯಾಬಿನೆಟ್ಟಿನಲ್ಲಿರ್ತೀರಿ ಅಂತ ಬೊಮ್ಮಾಯಿ ಮತ್ತೊಂದು ಗಡುವು ಕೊಟ್ಟಿದ್ದಾರೆ.

ಆದರೆ ಗುಜರಾತ್ ಚುನಾವಣೆಯ ನಂತರ ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ಮೋದಿ ಸೈನ್ಯದ ಬಿಡಾರ ಮತ್ತಿತರ ವ್ಯವಸ್ಥೆಗಳ ಕಡೆ ಅವರು ಗಮನ ಹರಿಸುತ್ತಾರೋ? ನಮ್ಮನ್ನು ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುತ್ತಾರೋ?ಎಂಬ ವಿಷಯದಲ್ಲಿ ಈ ಎಲ್ಲ ನಾಯಕರಿಗೂ ಗೊಂದಲವಿದೆ.

ಹೀಗಾಗಿ ರಮೇಶ್ ಜಾರಕಿಹೊಳಿ ಮತ್ತು ಸಿ.ಪಿ.ಯೋಗೀಶ್ವರ್ ಅವರು ಬೊಮ್ಮಾಯಿ ವಿರುದ್ಧ ಗರಂ ಆಗಿದ್ದಾರೆ. ಈ ಬೆಳವಣಿಗೆ ಬೊಮ್ಮಾಯಿ ಅವರಿಗೆ ಕಿರಿಕಿರಿ ಉಂಟು ಮಾಡಿರುವುದೇನೋ ನಿಜ.ಆದರೆ ಇದನ್ನು ಬೊಮ್ಮಾಯಿ ತುಂಬ ಗಂಭೀರವಾಗಿ ಪರಿಗಣಿಸುತ್ತಿಲ್ಲ.ಕಾರಣ ೧೯೮೦ ರಿಂದ ೧೯೮೩ ರವರೆಗೆ ಮುಖ್ಯಮಂತ್ರಿಗಳಾಗಿದ್ದ ಆರ್.ಗುಂಡೂರಾವ್ ಯಾವ ಸ್ಟೇಟಸ್ ಅನ್ನು ಎಂಜಾಯ್ ಮಾಡುತ್ತಿದ್ದರೋ ಇವತ್ತು ಅಂತಹ ಸ್ಟೇಟಸ್ ಅನ್ನು ಬೊಮ್ಮಾಯಿ ಎಂಜಾಯ್ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದಲ್ಲಿ ಯಾರು ಗುರ್ ಗುರ್ ಎಂದರೂ ಹೋಗ್ಲಿಬಿಡಿ, ಯೋಚಿಸಬೇಡಿ ಎಂದು ಸಮಾಧಾನಿಸುವ ಕೆಲಸವನ್ನು ನಿರಾಯಾಸವಾಗಿ ಮಾಡುತ್ತಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಶ್ರೀರಕ್ಷೆ ಇರುವವರೆಗೆ ತಮಗೆ ತೊಂದರೆಯ ಮಾತೇ ಇಲ್ಲ ಎಂಬುದು ಅವರಿಗೆ ಗೊತ್ತು. ಹೀಗಾಗಿ ಅಧಿಕಾರ ಹಿಡಿದು ಇಷ್ಟು ದಿನಗಳಾದರೂ ಬೊಮ್ಮಾಯಿ ನಿರಾತಂಕವಾಗಿದ್ದಾರೆ. ವರಿಷ್ಠರು ಕೊಡುವ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸಿ ನಿರಾಳವಾಗಿದ್ದಾರೆ.

ಹೀಗೆ ತಾವು ಕೊಟ್ಟ ಸಿಗ್ನಲ್ಲಿನಂತೆ ನಡೆಯುತ್ತಿರುವ ಬೊಮ್ಮಾಯಿ ಜನನಾಯಕರಾಗಿ ಪವಾಡ ಮಾಡಲು ಸಾಧ್ಯವಿಲ್ಲ ಅಂತ ವರಿಷ್ಟರಿಗೂ ಗೊತ್ತು. ಅಷ್ಟೇ ಮುಖ್ಯವಾಗಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಚ್ ಫಿನಿಷ್ ಮಾಡುವ ಜವಾಬ್ದಾರಿ ತಮ್ಮದೇ ಅಂತಲೂ ಗೊತ್ತು. ಹೀಗಾಗಿ ಕರ್ನಾಟಕಕ್ಕೆ ದಂಡೆತ್ತಿ ಬರುವ ಮುನ್ನ ಬೊಮ್ಮಾಯಿ ಸರ್ಕಾರದಿಂದ ಏನೇನಾಗಬೇಕು ಅಂತ ಹೇಳುತ್ತಾ ಬರುತ್ತಿದ್ದಾರೆ.

ಬೊಮ್ಮಾಯಿ ಕೂಡ ಚಾಚು ತಪ್ಪದೆ ಅದನ್ನು ಪಾಲಿಸುತ್ತಾ ಬಂದಿದ್ದಾರೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆಯ ವಿಷಯದಿಂದ ಒಕ್ಕಲಿಗರ ಕೋಟೆಯ ಮೇಲೆ, ಮೀಸಲಾತಿ ಪ್ರಮಾಣದ ಹೆಚ್ಚಳದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೇಲೆ ಪ್ರಭಾವ ಬೀರುವ ಕೆಲಸವಾಗಿದ್ದೂ ಇಂತಹ ಇಶಾರಗಳ ಮೇಲೆ.

ಈ ಮಧ್ಯೆ ರಾಜ್ಯ ಬಿಜೆಪಿಯಲ್ಲಿ ಕಲಮಲವೆಬ್ಬಿಸುತ್ತಾ ಬಂದಿರುವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಸುಮ್ಮನಿರಿಸಲು ಬೊಮ್ಮಾಯಿ- ಅರುಣ್ ಸಿಂಗ್ ಅವರಿಗೆ ಸೂಚನೆ ನೀಡಿದ್ದೂ ಮೋದಿ ಗ್ಯಾಂಗು.

ಪಂಚಮಸಾಲಿ ಲಿಂಗಾಯತ ಮತಬ್ಯಾಂಕ್‌ಅನ್ನು ನೆನಪಿಸಿಕೊಂಡು ಈ ಕೆಲಸ ಮಾಡಿದ ಮೋದಿ ಟೀಮು ಡಿಸೆಂಬರ್‌ನಲ್ಲಿ ಕರ್ನಾಟಕಕ್ಕೆ ನುಗ್ಗಲು ಯೋಚಿಸಿದೆ.

ಹೀಗೆ ಯೋಚಿಸಿರುವ ಅದಕ್ಕೆ ಬೊಮ್ಮಾಯಿ ಮ್ಯಾನೇಜ್‌ಮೆಂಟಿನ ಬಗ್ಗೆ ಸಮಾಧಾನವಿದೆ. ಅಷ್ಟೇ ಮುಖ್ಯವಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅದಕ್ಕೆ ತೃಪ್ತಿ ನೀಡಿವೆ.

ಅಂದ ಹಾಗೆ ಕರ್ನಾಟಕಕ್ಕೆ ನುಗ್ಗುತ್ತಿರುವ ಮೋದಿ ಟೀಮಿಗೆ ತೃಪ್ತಿ ತಂದಿರುವುದು ರಾಜ್ಯ ಕಾಂಗ್ರೆಸ್ಸಿನ ಅಂತಃಕಲಹ. ಒಟ್ಟಾರೆಯಾಗಿ ಕಾಂಗ್ರೆಸ್ ಪಕ್ಷದ ಗ್ರಾಫು ಎತ್ತರಕ್ಕೇರಿದೆಯಾದರೂ ನಾಯಕತ್ವದ ವಿಷಯ ಅದನ್ನು ತಲ್ಲಣಗೊಳಿಸುತ್ತಾ ಹೋಗಲಿದೆ ಎಂಬ ಮೆಸೇಜು ಮೋದಿ ಟೀಮಿಗೆ ತಲುಪಿದೆ.

ಕೆಲ ಕಾಲದ ಹಿಂದೆ ಭವಿಷ್ಯದ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಂಘರ್ಷಕ್ಕಿಳಿ ದಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದರೆ ಸಿದ್ದರಾಮಯ್ಯ-ಡಿಕೆಶಿ ನಡುವಣ ಕಾಳಗದ ನಡುವೆ ಸಿಎಂ ಪಟ್ಟ ತಮಗೆ ಒಲಿಯಬಹುದು ಅಂತ ಇನ್ನಷ್ಟು ನಾಯಕರಿಗೆ ಕನಸು ಬೀಳತೊಡಗಿದೆ. ದಲಿತ ನಾಯಕ ಜಿ.ಪರಮೇಶ್ವರ್ ಸೇರಿದಂತೆ ಹಲವರಿಗೆ ಇಂತಹ ಕನಸು ಬೀಳುತ್ತಿರುವುದು ನಿಜ.

ಹೀಗೆ ನಾಯಕತ್ವದ ಕನಸು ಇಬ್ಬರಿಗಿಂತ ಅಧಿಕ ಜನರಿಗೆ ಬೀಳುತ್ತಿರುವುದರ ಪರಿಣಾಮವಾಗಿ ಕಾಂಗ್ರೆಸ್‌ನಲ್ಲಿ ಅಂತಃಕಲಹ ಹೆಚ್ಚಲಿದೆ. ಮತ್ತು ಇದೇ ಅಂಶ ಬಹುತೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿ ಬಿಜೆಪಿ ದಡ ಸೇರುವಂತೆ ಮಾಡಲಿವೆ ಎಂಬುದು ಮೋದಿ ಟೀಮಿನ ಲೆಕ್ಕಾಚಾರ!
ಮುಂದೇನೋ?

andolana

Recent Posts

ಮಡಿಕೇರಿ| 20 ಅಡಿ ಆಳದ ಗದ್ದೆಗೆ ಉರುಳಿದ ಕಾರು

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದುಗೆ ಉರುಳಿ ಬಿದ್ದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ…

12 mins ago

ಚಿಕ್ಕಮಗಳೂರಿನಲ್ಲಿ ಕಾಡಾನೆ ಅಟ್ಟಹಾಸ: ಜಿಲ್ಲೆಯ 12 ಗ್ರಾಮಗಳಲ್ಲಿ ನಿಷೇಧಾಜ್ಞೆ

ಚಿಕ್ಕಮಗಳೂರು: ಮಲೆನಾಡಿನ ಭಾಗದಲ್ಲಿ ಕಾಡಾನೆಗಳ ಅಟ್ಟಹಾಸ ಮಿತಿಮೀರಿದ್ದು, ಆನೆ ದಾಳಿಗೆ ಇಬ್ಬರು ಬಲಿಯಾದ ಬೆನ್ನಲ್ಲೇ ಜಿಲ್ಲೆಯ 12 ಭಾಗಗಳಲ್ಲಿ ಜಿಲ್ಲಾಡಳಿತ…

36 mins ago

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿದ ಕಳ್ಳರು

ರಾಮನಗರ: ಮನೆ ಬೀಗ ಮುರಿದು ಅರ್ಧ ಕೆಜಿ ಚಿನ್ನ ದೋಚಿರುವ ಘಟನೆ ರಾಮನಗರದ ದ್ಯಾವರಸೇಗೌಡನದೊಡ್ಡಿ ಸಮೀಪ ನಡೆದಿದೆ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ…

2 hours ago

ಜೋಳದ ಫಸಲು ಕಾಯುವ ವೇಳೆ ಕಾಡಾನೆ ದಾಳಿ: ರೈತನಿಗೆ ಗಂಭೀರ ಗಾಯ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಜಮೀನಿನಲ್ಲಿ ಜೋಳದ ಪಸಲು ಕಾಯುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ…

2 hours ago

ಓದುಗರ ಪತ್ರ: ಸ್ವಾಗತಾರ್ಹ ತೀರ್ಪು!

ಅಧಿಕ ಸುಂಕ ಹೇರಿಕೆ ಚಟ ಬ್ರಹ್ಮಾಸ್ತ್ರವಾಗಿತ್ತು ಟ್ರಂಪಣ್ಣನಿಗೆ ವಿವಿಧ ದೇಶಗಳನು ನಿಯಂತ್ರಿಸಲು! ಆದರೀಗ ರದ್ದುಗೊಳಿಸಿದೆ ಅಮೆರಿಕದ ಸುಪ್ರೀಂ ಕೋರ್ಟ್ ಅಽಕ…

2 hours ago

ಓದುಗರ ಪತ್ರ: ಮಕ್ಕಳಿಗೆ ಮೊಬೈಲ್ ನಿಷೇಧದ ಚಿಂತನೆ: ಸ್ವಾಗತಾರ್ಹ

ರಾಜ್ಯದಲ್ಲಿ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿರುವುದು ಸ್ವಾಗತಾರ್ಹ.…

3 hours ago