ಎಡಿಟೋರಿಯಲ್

ಇರಾನ್: ಹಿಜಾಬ್ ತಿರಸ್ಕರಿಸಿ ಧಾರ್ಮಿಕ ಆಡಳಿತಕ್ಕೆ ಸಡ್ಡು, ಮಹಿಳೆ- ಮಕ್ಕಳೆನ್ನದೆ ಹೋರಾಟಗಾರರ ಮೇಲೆ ಗುಂಡು

ಡಿ.ವಿ.ರಾಜಶೇಖರ್‌

ಇರಾನ್ ರಾಜಧಾನಿ ತೆಹರಾನ್‌ನಲ್ಲಿ ಹಿಜಾಬ್ ವಿರುದ್ಧ ಆರು ವಾರಗಳ ಹಿಂದೆ ಆರಂಭವಾದ ಪ್ರತಿಭಟನೆ ಈಗ ದೇಶದ ತುಂಬಾ ವ್ಯಾಪಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾಪಡೆಗಳು ಗುಂಡುಹಾರಿಸಿ ಜನರನ್ನು ಕೊಲ್ಲುವಂಥ ಕಠಿಣ ಕ್ರಮ ತೆಗೆದುಕೊಳ್ಳುತ್ತಿವೆ. ಪೊಲೀಸರ ಗುಂಡಿಗೆ ಮಕ್ಕಳು, ಮಹಿಳೆಯರು ಬಲಿಯಾಗಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರ ನಡೆಸಿದ ಆರೋಪದ ಮೇಲೆ ಐದು ಮಂದಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಆದರೂ ಪ್ರತಿಭಟನೆಗಳು ನಿಂತಿಲ್ಲ. ಕಳೆದ ವಾರ ಪ್ರತಿಭಟನೆ ತೀವ್ರಗೊಂಡಿದ್ದು ಇಸ್ಲಾಮಿಕ್ ಕ್ರಾಂತಿಯ ಸಂಸ್ಥಾಪಕ ಧಾರ್ಮಿಕ ನಾಯಕರಾಗಿದ್ದ ಅಯತ್ ಉಲ್ಲಾ ಖೋಮೈನಿ ಅವರು ಹುಟ್ಟಿದ ಮನೆಗೆ ಬೆಂಕಿ ಹಚ್ಚಿ ನಾಶಮಾಡಲಾಗಿದೆ ಎಂದು ವರದಿಯಾಗಿದೆ. ಆದರೆ ಸರ್ಕಾರ ಇಂಥ ಘಟನೆ ನಡೆದೇ ಇಲ್ಲ ಎನ್ನುತ್ತಿದೆ.
ಪ್ರತಿಭಟನೆಗಳು ಮೊದಲು ಹಿಜಾಬ್ ವಿರುದ್ಧ ಆರಂಭವಾದರೂ ಈಗ ಅವು ಧಾರ್ಮಿಕ ಆಡಳಿತದ ವಿರುದ್ಧ ತಿರುಗಿವೆ. ಭದ್ರತಾ ಪಡೆಗಳ ದೌರ್ಜನ್ಯದಿಂದ ರೊಚ್ಚಿಗೆದ್ದ ಜನರು ನಡೆಸುತ್ತಿರುವ ಪ್ರತಿಭಟನೆಗಳು ಈಗ ಸರ್ಕಾರಕ್ಕೆ ದೊಡ್ಡ ಸವಾಲಾಗಿವೆ.

ಈ ಪ್ರತಿಭಟನೆಯ ಮೂಲ ಕಾರಣ ಸೆಪ್ಟೆಂಬರ್ ೧೩ ರಂದು ನಡೆದ ಒಂದು ಘಟನೆ. ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಕಾರಣಕ್ಕೆ ನೈತಿಕ ಪೊಲೀಸರು ತೆಹರಾನ್‌ನಲ್ಲಿ ಮಹ್ಸಾ ಅಮೀನಿ ಎಂಬ ಖರ್ದ್ ಮಹಿಳೆಯನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡರು. ಕಸ್ಟಡಿಯಲ್ಲಿದ್ದಾಗ ಪೊಲೀಸರ ದೌರ್ಜನ್ಯದಿಂದ ಅಮೀನಿ ಸತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ದೌರ್ಜನ್ಯ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಸೆಪ್ಟೆಂಬರ್ ೧೬ರಂದು ಜನರು ರೊಚ್ಚಿಗೆದ್ದಿದ್ದಾರೆ. ತೆಹರಾನ್‌ನಲ್ಲಿಯೇ ಪ್ರತಿಭಟನೆ ನಡೆದಿದೆ. ಅಮೀನಿ ಅವರ ಊರಾದ ಸಕ್ವೇಜ್ ನಗರದಲ್ಲಿ ಅವರ ಅಂತ್ಯಕ್ರಿಯೆ ನಡೆದ ದಿನ ಕೆಲವು ಮಹಿಳೆಯರು ತಾವು ಹಾಕಿಕೊಂಡುಬಂದಿದ್ದ ಹಿಜಾಬನ್ನು ಕಿತ್ತೊಗೆದು ಪ್ರತಿಭಟಿಸಿದ್ದಾರೆ.

ನಂತರದ ದಿನಗಳಲ್ಲಿ ದೇಶದ ವಿವಿಧ ನಗರಗಳಲ್ಲಿ ಮಹಿಳೆಯರು ಹಿಜಾಬ್‌ಗಳನ್ನು ಕಿತ್ತೊಗೆದು ಬೆಂಕಿ ಇಟ್ಟರಲ್ಲದೆ ಉದ್ದನೆಯ ಕೂದಲನ್ನು ಬಹಿರಂಗವಾಗಿ ಕತ್ತರಿಸುವ ಮೂಲಕ ಹೋರಾಟಕ್ಕೆ ಆಂದೋಲನ ಸ್ವರೂಪ ನೀಡಿದ್ದಾರೆ. ಮಹಿಳೆಯರಿಗೆ ಸ್ವಾತಂತ್ರ್ಯ ಬೇಕು, ಸರ್ವಾಧಿಕಾರಿಗೆ ಸಾವಾಗಲಿ ಮುಂತಾದ ಘೋಷಣೆಗಳು ಈ ಪ್ರತಿಭಟನೆಯ ಸಂದರ್ಭದಲ್ಲಿ ಕೇಳಿಬಂದಿವೆ. ಜನರ ಆಕ್ರೋಶ ದೇಶದ ಧರ್ಮಾಧಿಕಾರಿ ಅಯತ್‌ಉಲ್ಲಾ ಅಲಿ ಖಮೇನಿ ಅವರ ವಿರುದ್ಧವೇ ಇತ್ತು.

ಮಹಿಳೆಯರ ಪ್ರತಿಭಟನೆ ವ್ಯಾಪಕಗೊಳ್ಳುತ್ತಿರುವಂತೆ ಶಾಲಾಮಕ್ಕಳೂ ಅದರಲ್ಲಿ ಸೇರಿಕೊಂಡಿದ್ದಾರೆ. ಶಾಲಾ ಮೈದಾನಗಳು ಮಕ್ಕಳ ಪ್ರತಿಭಟನೆಯ ಕೇಂದ್ರಗಳಾಗಿವೆ. ಪುರುಷರೂ ಮಹಿಳೆಯರ ಈ ಆಂದೋಲನವನ್ನು ಬೆಂಬಲಿಸಿದ್ದಾರೆ. ಮಕ್ಕಳು ಮರಿ ಎನ್ನದೆ ಪೊಲೀಸರು ಗುಂಡುಹಾರಿಸಿದ್ದಾರೆ.

ಪ್ರತಿಭಟನೆ ದೇಶವ್ಯಾಪಿ ಹಬ್ಬುತ್ತಿರುವಂತೆ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ. ಫೇಸ್‌ಬುಕ್, ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಸರ್ಕಾರದ ಅಧಿಕೃತ ಸುದ್ದಿ ಜಾಲ ತಾಣ ಐಆರ್‌ಎನ್‌ಎ ಮಾತ್ರ ಲಭ್ಯವಾಗುತ್ತಿದ್ದು, ಅದರಲ್ಲಿ ದೇಶದಲ್ಲಿ ನಡೆ ಯುತ್ತಿರುವ ವ್ಯಾಪಕ ಪ್ರತಿಭಟನೆಯನ್ನು ಮುಚ್ಚಿಹಾಕಲು ಪ್ರಯತ್ನ ನಡೆಸಲಾಗಿದೆ. ಇದೆಲ್ಲಾ ಅಮೆರಿಕ ಮತ್ತು ದೇಶದಲ್ಲಿಯೇ ಇರುವ ಪ್ರತ್ಯೇಕತಾವಾದಿಗಳ(ಖರ್ದರು) ಕರಾಮತ್ತು. ಆ ದೇಶದ ಜೊತೆ ಹೊರಗಿರುವ ಮಾನವ ಹಕ್ಕು ಸಂಘಟನೆಗಳು ಹೂಡಿರುವ ಸಂಚು ಈ ಪ್ರತಿಭಟನೆ ಎಂದು ಸರ್ಕಾರ ಹೇಳಿದೆ.

ಇರಾನ್‌ನಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಎಲ್ಲ ಸುದ್ದಿ ಜಾಲ ಮತ್ತು ಇಂಟರ್‌ನೆಟ್ ಸಂಪರ್ಕಗಳನ್ನು ಸ್ಥಗಿತ ಗೊಳಿಸಲಾಗಿದೆ. ದೇಶದ ಹೊರಗಿರುವ ಇರಾನ್‌ನವರೇ ಆದ ಮಾನವ ಹಕ್ಕು ಸಂಘಟನೆಯವರಿಂದ ಬರುವ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಲು ಸಾಧ್ಯವಿಲ್ಲದಂಥ ಸ್ಥಿತಿ ಇದೆ. ಇದೇನೇ ಇದ್ದರೂ ಇದುವರೆಗೆ ಭದ್ರತಾಪಡೆಗಳ ಗುಂಡಿಗೆ ೫೬ ಮಕ್ಕಳೂ ಸೇರಿದಂತೆ ೩೬೨ ಮಂದಿ ಬಲಿಯಾಗಿದ್ದಾರೆ ಎಂಬ ಖಚಿತವಲ್ಲದ ಮಾಹಿತಿ ಇದೆ. ೪೬ ಮಂದಿ ಪೊಲೀಸರೂ ಸತ್ತಿದ್ದಾರೆ. ಪ್ರತಿಭಟನೆ ನಡೆಸಿದ ಸುಮಾರು ೧೬ಸಾವಿರ ಜನರನ್ನು ಬಂಧಿಸಲಾಗಿದೆ. ಸುಮಾರು ಒಂದು ಲಕ್ಷ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು ಖರ್ದಿಶ್ ಮೂಲಗಳು ತಿಳಿಸಿವೆ.

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದ ಸುದ್ದಿಗಳನ್ನು ದೇಶದ ಹೊರಗೆ ತಲುಪಿಸುವಂತೆ ಮಾಡುವಲ್ಲಿ ಕಂಪ್ಯೂಟರ್ ತಂತ್ರಜ್ಞರು ಸತತ ಶ್ರಮಿಸುತ್ತಿದ್ದಾರೆ. ತಂತ್ರಜ್ಞಾನ ಆಧಾರಿತ ಫ್ರಾಕ್ಸಿ ಸರ್ವರ್‌ಗಳನ್ನು ಬಳಸಿ ಸುದ್ದಿಗಳು ದೇಶದ ಹೊರಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂಬ ವರದಿಗಳಿವೆ.

ಈಗ ಇರಾನ್ ಭಾಗವಾಗಿರುವ ಖರ್ದಿಸ್ ಜನರು ಪ್ರತ್ಯೇಕ ದೇಶಕ್ಕಾಗಿ ಹಲವಾರು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಅವರನ್ನು ಇರಾನ್ ಪ್ರತ್ಯೇಕತಾವಾದಿ ಉಗ್ರಗಾಮಿಗಳೆಂದು ಭಾವಿಸಿ ಅವರ ವಿರುದ್ಧ ಸರ್ಕಾರ ಆಂತರಿಕ ಯುದ್ಧವನ್ನೇ ಸಾರಿದೆ. ಹಿಜಾಬ್ ವಿವಾದದಲ್ಲಿ ಸತ್ತ ಮಹಿಳೆ ಖರ್ದ್ ಜನಾಂಗಕ್ಕೆ ಸೇರಿದವಳಾದ್ದರಿಂದ ಈಗ ನಡೆಯುತ್ತಿರುವ ಆಂದೋಲನ ಪ್ರತ್ಯೇಕತಾವಾದಿಗಳ ಪರವಾದುದು ಎಂದು ಸರ್ಕಾರ ಅರ್ಥೈಸಲು ಅವಕಾಶ ಮಾಡಿಕೊಟ್ಟಿದೆ. ಅಷ್ಟೇ ಅಲ್ಲ ಬಹುಸಂಖ್ಯಾತ ಷಿಯಾಗಳಲ್ಲಿ ಈ ಆಂದೋಲನದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವ ಪ್ರಯತ್ನ ಸರ್ಕಾರದಿಂದ ನಡೆದಿದೆ.

ಈ ವಿವಾದ ಏನೇ ಇದ್ದರೂ ಪ್ರಸ್ತುತ ಚಳವಳಿಗೆ ದೇಶದಲ್ಲಿ ವ್ಯಾಪಕ ಬೆಂಬಲ ಕಂಡುಬಂದಿದೆ. ೨೦೧೭ ಮತ್ತು ೨೦೧೯ರಲ್ಲಿಯೂ ಪ್ರತಿಭಟನೆಗಳು ನಡೆದಿದ್ದವು. ಆದರೆ ಅವು ಮೂಲಭೂತವಾಗಿ ಜನರ ನಿತ್ಯದ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗಗಳಿಗೆ ಸಂಬಂಧಿಸಿದ್ದಾದ್ದರಿಂದ ಪ್ರತಿಭಟನೆಗಳು ಮಧ್ಯಮವರ್ಗಕ್ಕಷ್ಟೇ ಸೀಮಿತವಾಗಿದ್ದವು. ಹೀಗಾಗಿ ಸರ್ಕಾರ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಾಯಿತು. ಆದರೆ ಈಗ ಜೀವನ ಶೈಲಿಯ ಮೇಲೆ ಪರಿಣಾಮ ಬೀರಿರುವ ವಿಷಯಗಳು ಮತ್ತು ಧಾರ್ಮಿಕ ಕಟ್ಟುಪಾಡುಗಳ ಬಗ್ಗೆ ಜನರು ಪ್ರತಿಭಟಿಸುತ್ತಿರುವುದರಿಂದ ಅದನ್ನು ನಿಯಂತ್ರಿಸಲು ಯಾವುದೇ ಸರ್ಕಾರಕ್ಕೆ ಕಷ್ಟವಾಗಲಿದೆ. ಇರಾನ್ ಸರ್ಕಾರ ಹಿಂದಿನಂತೆಯೇ ಪೊಲೀಸು ಬಲ ಬಳಸಿ ಪ್ರತಿಭಟನೆಯನ್ನು ಹತ್ತಿಕ್ಕುವ ಮಾರ್ಗ ತುಳಿದಿದೆ. ಜನರು ಭದ್ರತಾಪಡೆಗಳಿಗೆ ಈಗೀಗ ಹೆದರುತ್ತಿಲ್ಲ. ಸಾಯಲು ಸಿದ್ಧವಾಗಿಯೇ ಬೀದಿಗಿಳಿದಂತೆ ಕಾಣುತ್ತದೆ.

ಷಿಯಾ ಮುಸ್ಲಿಮರ ಪ್ರಾಬಲ್ಯದ ಇರಾನ್‌ನಲ್ಲಿ ಈಗ ಇರುವುದು ಷರೀಯತ್ ಆಧಾರದ ಸರ್ಕಾರ. ಈ ಸರ್ಕಾರ ಅಸ್ತಿತ್ವಕ್ಕೆ ಬಂದು ೩೩ ವರ್ಷಗಳಾಗಿವೆ. ಅದಕ್ಕೆ ಮೊದಲು ಇದ್ದದ್ದು ರಾಜಪ್ರಭುತ್ವ. ದೊರೆ ಆಡಳಿತ. ದೊರೆ ಷಾ ಮೊಹಮದ್ ರೇಜಾ ಪಹ್ಲವಿ ಅವರು ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳ ಪ್ರಭಾವಕ್ಕೆ ಒಳಗಾಗಿ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು. ಪ್ರಜಾತಂತ್ರ ಮೌಲ್ಯಗಳನ್ನು ಸ್ಥಾಪಿಸಲು ಪ್ರಯತ್ನಿಸಿದರು. ಹೊಸ ವ್ಯವಸ್ಥೆ ತತ್‌ಕ್ಷಣ ಜನರಿಗೆ ಫಲ ತಂದುಕೊಡಲಿಲ್ಲ. ಬೆಲೆ ಏರಿಕೆ, ಏರಿದ ಅಪರಾಧ, ನಿರುದ್ಯೋಗ ಸಮಾಜದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದವು. ಈ ಸನ್ನಿವೇಶವನ್ನು ಷಾ ವಿರೋಧಿಗಳು ಮತ್ತು ಧಾರ್ಮಿಕ ನಾಯಕರು ಬಳಸಿಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸಿದರು. ಜನರ ಬೆಂಬಲವೂ ದೊರೆಯಿತು. ಸರ್ಕಾರ ಕುಸಿಯುವ ಹಂತ ತಲುಪಿತು. ದೊರೆ ಷಾ ತಮ್ಮ ಪ್ರತಿನಿಧಿಯೊಬ್ಬರನ್ನು ನೇಮಿಸಿ ಈಜಿಪ್ಟ್‌ಗೆ ಪಲಾಯನ ಮಾಡಿದರು. ಎಂಥ ಸರ್ಕಾರ ಬೇಕು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಜನಮತಗಣನೆ ನಡೆಯಿತು. ಜನ ಧಾರ್ಮಿಕ ಆಡಳಿತದ ಪರ ಅಭಿಮತ ಕೊಟ್ಟರು. ಈ ಹಿನ್ನೆಲೆಯಲ್ಲಿ ಅಂದಿನ ಧಾರ್ಮಿಕ ನಾಯಕ ಅಯತ್‌ಉಲ್ಲಾ ಖೊಮೈನಿ ದೇಶದ ಆಡಳಿತ ಜವಾಬ್ದಾರಿ ಹೊತ್ತರು.

ರಾಜಪ್ರಭುತ್ವ ರದ್ದಾಗಿ ಷರೀಯತ್ ಆಧಾರಿತ ಆಡಳಿತ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೆ ಇರಾನ್ ಧಾರ್ಮಿಕ ಕಟ್ಟುಪಾಡುಗಳ ನಡುವೆಯೇ ಬೆಳೆದುಬಂದಿದೆ. ಈಗ ಆ ಖೊಮೈನಿ ಬದುಕಿಲ್ಲ. ಖೊಮೈನಿ ನಿಧನಾ ನಂತರ ಅಧಿಕಾರಕ್ಕೆ ಬಂದವರು ಈಗಿರುವ ಧಾರ್ಮಿಕ ನಾಯಕ ಅಲಿ ಖಮೈನಿ. ೩೩ ವರ್ಷಗಳ ಹಿಂದೆ ಜನರು ಧಾರ್ಮಿಕ ಆಡಳಿತ ಬಯಸಿದರು. ಆದರೀಗ ಇಂದಿನ ಜನರು, ಮುಖ್ಯವಾಗಿ ಯುವಕರು ಧಾರ್ಮಿಕ ಆಡಳಿತ ಬೇಡ, ಜನತಂತ್ರ ಆಡಳಿತ ಬೇಕು ಎಂದು ಹೇಳುತ್ತಿದ್ದಾರೆ. ಬಂದೂಕಿನ ಬಲದಿಂದ ಜನರ ಬಯಕೆಯನ್ನು ತುಳಿಯಲು ಧಾರ್ಮಿಕ ಆಡಳಿತ ಈಗ ಯತ್ನಿಸುತ್ತಿದೆ. ಈಗ ನಡೆಯುತ್ತಿರುವ ಹೋರಾಟದಲ್ಲಿ ಯಾರಿಗೆ ಗೆಲುವು ಸಿಗುತ್ತದೆ ಎನ್ನುವುದು ಕುತೂಹಲಕಾರಿಯಾಗಿದೆ.

ಇರಾನ್ ಸಂಪತ್ಭರಿತವಾದ ದೇಶ. ಆದರೆ ದೇಶ ಮೂರು ದಶಕಗಳ ಹಿಂದೆ ಇದ್ದಂತೆ ಈಗ ಇಲ್ಲ. ಧಾರ್ಮಿಕ ಆಡಳಿತ ಹತ್ತಾರು ಸಮಸ್ಯೆಗಳನ್ನು ತಂದೊಡ್ಡಿದೆ. ಇರಾನ್‌ನ ಹಲವು ನೀತಿಗಳು ಬಲಿಷ್ಠ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿವೆ. ವಿಶ್ವದ ನಾನಾ ಭಾಗಗಳಲ್ಲಿರುವ ಉಗ್ರವಾದಿಗಳಿಗೆ ಬೆಂಬಲ ನೀಡುತ್ತಿರುವ ಆರೋಪಕ್ಕೆ ಸಿಕ್ಕಿ ಇರಾನ್ ಹಲವು ರೀತಿಯ ಆರ್ಥಿಕ ನಿರ್ಬಂಧಗಳಿಗೆ ಒಳಗಾಗಿದೆ. ಇದರಿಂದಾಗಿ ಇತರ ದೇಶಗಳ ಜೊತೆಗಿನ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇರಾನ್‌ನಲ್ಲಿ ಅಪಾರ ತೈಲ ಮತ್ತು ಅನಿಲ ಸಂಪತ್ತಿದೆ. ಇದನ್ನು ಮಾರಿ ಸಾಕಷ್ಟು ಆದಾಯವನ್ನೂ ಇರಾನ್ ಗಳಿಸುತ್ತಿತ್ತು. ಆದರೆ ನಿರ್ಬಂಧಗಳು ಜಾರಿಗೊಂಡ ನಂತರ ಈ ಆದಾಯ ಮೂಲವೂ ಹಾಳಾಗಿದೆ.

ಯಾರೂ ಇರಾನ್ ತೈಲ, ಅನಿಲ ಕೊಳ್ಳದಂತಾಗಿದೆ. ಇದಕ್ಕೆ ಮತ್ತೂ ಒಂದು ಕಾರಣ, ರಹಸ್ಯವಾಗಿ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿರುವ ಆರೋಪಕ್ಕೆ ಒಳಗಾಗಿರುವುದಾಗಿದೆ. ಪರಮಾಣು ಬಾಂಬ್ ತಯಾರಿಸುವ ಉದ್ದೇಶದಿಂದ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಇರಾನ್ ಹೇಳುತ್ತಿದೆ. ಆದರೆ ಇದನ್ನು ಯಾರೂ ನಂಬುತ್ತಿಲ್ಲ. ಹೀಗಾಗಿ ಇದೊಂದು ವಿವಾದವಾಗಿ ಪರಿಣಮಿಸಿದ್ದು ಹೆಚ್ಚು ಆರ್ಥಿಕ ನಿರ್ಬಂಧಗಳಿಗೆ ಇರಾನ್ ಒಳಗಾಗಿದೆ. ಪರಮಾಣು ಒಪ್ಪಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇಂಥ ಸಂದರ್ಭದಲ್ಲಿ ದೇಶದಲ್ಲಿ ಆಡಳಿತದ ವಿರುದ್ಧ ಜನಾಂದೋಲನ ನಡೆಯುತ್ತಿದೆ. ಇರಾನ್ ಆಡಳಿತಗಾರರು ಬದಲಾವಣೆಯತ್ತ ಒಲಿಯುತ್ತಾರೋ ಅಥವಾ ಬಂದೂಕಿನ ಮೂಲಕ ಆಡಳಿತ ನಡೆಸಲು ಬಯಸುತ್ತಾರೋ ಎಂಬುದನ್ನು ಕಾದುನೋಡಬೇಕು.

andolana

Recent Posts

ಅಲೆಮಾರಿ ಜನಾಂಗ ನಾಡಿನ ಸಂಸ್ಕೃತಿಯ ಜೀವಂತಿಕೆ

ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…

2 hours ago

ಓದುಗರ ಪತ್ರ: ನೆಮ್ಮದಿ ಕೇಂದ್ರಕ್ಕೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…

2 hours ago

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…

2 hours ago

ಓದುಗರ ಪತ್ರ: ಅಧಿಕಾರಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಲಿ

ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…

2 hours ago

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

2 hours ago

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ  ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…

2 hours ago