ಅಂಕಣಗಳು

ಅನನ್ಯಾಳ ಬದುಕು ಬದಲಾಯಿಸಿದ 20 ರೂಪಾಯಿ ನೋಟು

ಪಂಜು ಗಂಗೊಳ್ಳಿ 

ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ

೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ ಅನನ್ಯಾ ಪೌಲ್ ದೊಡ್ಮನಿ ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿದ್ದರು. ಒಂದು ದಿನ ಅವರು ಹತ್ತಿರದ ಒಂದು ಅಂಗಡಿಗೆ ಹೋದ ಹೊತ್ತಲ್ಲಿ ಬುಡಕಟ್ಟು ಸಮುದಾಯದ ಒಬ್ಬಳು ಅನಕ್ಷರಸ್ಥ ಹೆಂಗಸು ಆ ಅಂಗಡಿಯಲ್ಲಿ ಯಾವುದೋ ಸಾಮಾನು ಖರೀದಿಸಿ, ೨೦ ರೂಪಾಯಿ ನೋಟನ್ನು ಕೊಟ್ಟಳು. ಆದರೆ, ಅಂಗಡಿಯವನು ಅದು ಇಪ್ಪತ್ತು ರೂಪಾಯಿ ಅಲ್ಲ ಹತ್ತು ರೂಪಾಯಿ ಎಂದು ಹೇಳಿ ಹತ್ತು ರೂಪಾಯಿ ಚಿಲ್ಲರೆ ವಾಪಸ್ ಕೊಡದೆ ಆಕೆಯನ್ನು ವಂಚಿಸಿದನು. ಆ ಘಟನೆ ಬಾಲಕಿ ಅನನ್ಯಾಳ ಮೇಲೆ ಎಂದೂ ಅಳಿಸಲಾಗದಂತಹ ಅಚ್ಚೊತ್ತಿತು.

ಆ ಮುಗ್ಧ ಜನರಿಗೆ ಸರಿಯಾದ ವಿದ್ಯಾಭ್ಯಾಸವಿಲ್ಲದ ಕಾರಣ ಅವರು ಹೀಗೆ ವಂಚನೆಗೆ ಒಳಗಾಗುತ್ತಿದ್ದಾರೆ ಎಂಬುದನ್ನು ಅಷ್ಟು ಚಿಕ್ಕ ಪ್ರಾಯದಲ್ಲೇ ಅನನ್ಯಾ ತಿಳಿದುಕೊಂಡರು. ಇವರಿಗೆ ಕೊನೇ ಪಕ್ಷ ರೂಪಾಯಿ ನೋಟು ಅಥವಾ ನಾಣ್ಯದ ಮೌಲ್ಯವನ್ನು ತಿಳಿದುಕೊಳ್ಳುವುದು, ತಮ್ಮ ಹೆಸರನ್ನು ಬರೆಯುವುದು, ಬಸ್ ನಂಬರು ಹಾಗೂ ರೈಲ್ವೆ ವೇಳಾಪಟ್ಟಿಯನ್ನು ಓದುವುದು ಮೊದಲಾದ ಮೂಲಭೂತ ಅಕ್ಷರಜ್ಞಾನವಾದರೂ ಸಿಗುವಂತಾಗಬೇಕು. ಇದು ಅವರಿಗೆ ಬೇರೆಲ್ಲೂ ಸಿಗದಿದ್ದರೆ ತಾನು ದೊಡ್ಡವಳಾದ ಮೇಲೆ ತಾನೇ ಅದು ಅವರಿಗೆ ಸಿಗುವಂತೆ ಮಾಡುತ್ತೇನೆ ಎಂದು ಅಂದು ಕೊಂಡರು.

ಹಾಗೆಯೇ, ೨೦೦೨ರಲ್ಲಿ ನಡೆದ ಇನ್ನೊಂದು ಘಟನೆ ಅವರ ಬದುಕಿನ ಮೇಲೆ ಇನ್ನೂ ತೀವ್ರವಾದ ಪರಿಣಾಮವನ್ನು ಬೀರಿತು. ಈಶಾನ್ಯ ರಾಜ್ಯಗಳಲ್ಲಿ ಆಗ ಉಗ್ರಗಾಮಿ ಚಟುವಟಿಕೆಗಳು ಸಾಮಾನ್ಯವಾಗಿದ್ದ ಸಮಯ. ಅನನ್ಯಾ ಪ್ರತೀದಿನ ಜನರ ಅಪಹರಣದ ಸುದ್ದಿಗಳನ್ನು ಓದುತ್ತಿದ್ದಳು. ಆ ವರ್ಷ ಅವರ ೪೬ ವರ್ಷ ಪ್ರಾಯದ ತಂದೆಯೇ ಅಪಹರಿಸಲ್ಪಟ್ಟರು. ಆಗ ಅನನ್ಯಾರಿಗೆ ೨೦ ವರ್ಷ ಪ್ರಾಯವಾಗಿತ್ತು. ಅವರ ತಂದೆ ಹೋಲ್ ಸೇಲ್ ಔಷಧಿ ವ್ಯಾಪಾರ ಮಾಡುತ್ತಿದ್ದರು. ಅಪಹರಣಕಾರರು ಅವರ ಬಿಡುಗಡೆಗೆ ೧೦ ಲಕ್ಷ ರೂಪಾಯಿ ಬೇಡಿಕೆ ಇಟ್ಟರು. ಒಂದು ವಾರ ಕಾಲ ಅವರು ಅಪಹರಣಕಾರರ ವಶದಲ್ಲಿದ್ದರು. ಒಂದು ರಾತ್ರಿ ಅಪಹರಣಕಾರರು ಕುಡಿದ ಮತ್ತಿನಲ್ಲಿ ಅವರನ್ನು ಕೂಡಿ ಹಾಕಿದ್ದ ಕೋಣೆಗೆ ಬೀಗ ಹಾಕುವುದನ್ನು ಮರೆತು ಮಲಗಿದ್ದರು. ಆ ಸಮಯ ನೋಡಿ ಅವರು ಮೂರು ಮಾಳಿಗೆಯಿಂದ ಕೆಳಕ್ಕೆ ಜಿಗಿದು ತಪ್ಪಿಸಿಕೊಂಡರು. ಹೊರಗೆ ವಿಪರೀತ ಮಳೆ ಸುರಿಯುತ್ತಿತ್ತು. ಅಪಹರಣಕಾರರು ಅವರ ಚಿನ್ನದ ಸರ, ವಾಚು ಹಾಗೂ ಶೂಗಳನ್ನು ಕಸಿದುಕೊಂಡಿದ್ದರು. ಅವರು ಬರೀಗಾಲಲ್ಲಿ ಕಾಡಿನ ಕಲ್ಲು ಮುಳ್ಳಿನ ಮೇಲೆ ಹಲವು ಕಿಲೋಮೀಟರ್‌ಗಳವರೆಗೆ ಓಡಿ, ಒಂದು ರೈಲ್ವೆ ನಿಲ್ದಾಣ ತಲುಪಿ, ರೈಲ್ವೆ ಟಿಸಿಗೆ ತಮ್ಮ ಪರಿಸ್ಥಿತಿಯನ್ನು ಹೇಳಿ, ರೈಲು ಹತ್ತಿ ಮನೆಗೆ ಬಂದರು.

ಆ ಘಟನೆಯ ನಂತರ ಅನನ್ಯಾರ ಕುಟುಂಬ ತೀವ್ರವಾದ ಮಾನಸಿಕ ಕ್ಷೆಭೆಗೆ ಒಳಗಾಯಿತು. ಅವರ ತಾಯಿ ಭಯದಿಂದ ಮನೆಯ ಹೊರಗೆ ಕಾಲಿಡುವುದನ್ನು ನಿಲ್ಲಿಸಿದರು. ಅನನ್ಯಾರ ಶಾಲಾ ಶಿಕ್ಷಣವನ್ನು ನಿಲ್ಲಿಸಲಾಯಿತು. ಅನನ್ಯಾರಿಗೆ ಕಾಡಿಗೆ ಹೋಗಿ ಅಲ್ಲಿನ ಮೂಲ ನಿವಾಸಿಗಳ ಬದುಕಿನ ಕತೆಗಳನ್ನು ಕೇಳುವುದು ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಅವರು ಅದನ್ನೂ ನಿಲ್ಲಿಸಬೇಕಾಯಿತು. ಮತ್ತು, ೨೦೦೩ರಲ್ಲಿ ಅವರು ಮತ್ತು ಅವರ ಸಹೋದರಿಯನ್ನು ಕೊಲ್ಕತ್ತಾದ ಹೂಗ್ಲಿಯಲ್ಲಿರುವ ಒಬ್ಬರು ಸಂಬಂಧಿಕರ ಮನೆಯಲ್ಲಿ ಇರಲು ಕಳುಹಿಸಲಾಯಿತು.

ಅನನ್ಯಾ ನಂತರ ಕೊಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ತಮ್ಮ ಕಾಲೇಜು ಶಿಕ್ಷಣವನ್ನು ಮುಗಿಸಿದರು. ಅವರು ಕೊಲ್ಕತ್ತಾ ದಲ್ಲಿದ್ದರೂ ಅವರ ಮನಸ್ಸೆಲ್ಲ ತಾನು ಬಾಲ್ಯವನ್ನು ಕಳೆದ ಲುಮ್ಡಿಂಗ್‌ನ ಕಾಡು ಮತ್ತು ಅಲ್ಲಿನ ನಿವಾಸಿಗಳೊಂದಿಗೇ ಉಳಿದಿತ್ತು. ೨೦೦೫ರಲ್ಲಿ ಅವರು ತಮ್ಮ ಮನೆಗೆ ವಾಪಸ್ ಬಂದರು. ಮಗಳು ವಾಪಸ್ ಮನೆಗೆ ಬಂದುದು ಅವರ ಹೆತ್ತವರ ಇಚ್ಛೆಗೆ ವಿರುದ್ಧವಾಗಿದ್ದುದರಿಂದ ಅವರು ಕೆಲವು ವರ್ಷಗಳ ಕಾಲ ಅವಳೊಂದಿಗೆ ಮಾತಾಡುವುದನ್ನು ನಿಲ್ಲಿಸಿದರು.

ಹೀಗೆ ಕಾಡು ಸೇರಿದ ಅನನ್ಯಾ ಅಲ್ಲಿನ ನಿವಾಸಿಗಳ ಮಕ್ಕಳಿಗೆ ವಿದ್ಯೆ ಕಲಿಸುವ ಸಲುವಾಗಿ ಒಂದು ಕೇಂದ್ರವನ್ನು ತೆರೆದರು. ಆದರೆ, ಆ ಮಕ್ಕಳಿಗೆ ಕಲಿಸುವುದು ಅವರು ಎಣಿಸಿದಷ್ಟು ಸುಲಭದ ಕೆಲಸವಾಗಿರಲಿಲ್ಲ. ಪ್ರಾರಂಭದಲ್ಲಿ ಕಲಿಯಲು ಬಂದ ಮಕ್ಕಳ ಸಂಖ್ಯೆ ಕೇವಲ ೫. ಶಾಲೆಗೆ ಹೋಗದೆ ಹಾದಿ ಬೀದಿಗಳಲ್ಲಿ ಅಲೆಯುವ ಮಕ್ಕಳನ್ನು ಹುಡುಕಿ, ಅವರಿಗೆ ಪೆನ್ಸಿಲ್, ಚಾಕೋಲೆಟ್ ಮೊದಲಾದವುಗಳ ಆಸೆ ತೋರಿಸಿ ಕಲಿಯಲು ಕರೆದುಕೊಂಡು ಬರುತ್ತಿದ್ದರು. ಅವರಿಗೆ ಕತೆಗಳನ್ನು ಹೇಳುತ್ತಿದ್ದರು. ಅವರ ಕೇಂದ್ರಕ್ಕೆ ಒಂದು ಹೆಸರು ಕೂಡ ಇರಲಿಲ್ಲ. ಒಂದು ಮರದ ಕೆಳಗೆ ಕುಳಿತು ಕಲಿಕೆ ನಡೆಸಿದರು. ಮುಂದೆ ಅನನ್ಯಾ ತಮ್ಮ ಕೇಂದ್ರಕ್ಕೆ ‘ಟ್ರೈಬಲ್ ಕನೆಕ್ಟ್’ ಎಂದು ನಾಮಕರಣ ಮಾಡಿ, ೨೦೧೯ರಲ್ಲಿ ಅದನ್ನು ನೋಂದಾಯಿಸಿದರು. ಮತ್ತು, ಅದರ ಮೊದಲ ಶಾಖೆಯನ್ನು ತನ್ನ ತಂದೆಯನ್ನು ಅಪಹರಣಕಾರರು ಬಂಧಿಸಿಟ್ಟ ಕಟ್ಟಡವಿರುವ ಗ್ರಾಮದಲ್ಲಿ ತೆರೆದರು.

ಇಂದು ‘ಟ್ರೈಬಲ್ ಕನೆಕ್ಟ್’ ದೇಶದಾದ್ಯಂತ ೧೬೦ಕ್ಕೂ ಹೆಚ್ಚು ಕಲಿಕಾ ಕೇಂದ್ರಗಳನ್ನು ನಡೆಸುತ್ತಿದೆ. ಕೇಂದ್ರಗಳು ಅಂದರೆ ಅವೇನೂ ಭದ್ರವಾದ ಗೋಡೆಗಳಿರುವ ಕಟ್ಟಡಗಳೇನಲ್ಲ. ಕೆಲವೊಮ್ಮೆ ಅದು ನಾಲ್ಕು ಮರಗಳ ಗೆಲ್ಲುಗಳಿಗೆ ಕಟ್ಟಿದ ಟೆಂಟ್ ಕೂಡ ಆಗಿರುತ್ತದೆ. ಆ ಟೆಂಟುಗಳು ಜೋರು ಗಾಳಿ ಬೀಸಿದರೆ ಚಿಂದಿಯಾಗಿ ಹಾರಿ ಹೋಗುತ್ತವೆ. ಕೆಲವೊಮ್ಮೆ ಕಾಡಾನೆಗಳು ಅವುಗಳನ್ನು ಹರಿದು ಹಾಕುತ್ತವೆ. ಆದರೆ, ಪ್ರತೀ ಬಾರಿ ನೆಲಕ್ಕುರುಳಿದಾಗ ಅವುಗಳನ್ನು ಮರಳಿ ಕಟ್ಟುತ್ತಾರೆ. ‘ಟ್ರೈಬಲ್ ಕನೆಕ್ಟ್’ ನೈಋತ್ಯ ರಾಜ್ಯಗಳಲ್ಲದೆ ಕರ್ನಾಟಕ, ಗೋವಾ, ಒಡಿಶಾ ಹಾಗೂ ಪ. ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ೭೦೦ ಸ್ವಯಂ ಸೇವಕರನ್ನು ಹೊಂದಿದೆ. ನೈಋತ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಿಕ್ಷಣದತ್ತಆಕರ್ಷಿಸುವ ಸಲುವಾಗಿ ಕಲಿಕಾ ಕೇಂದ್ರಗಳಲ್ಲಿ ಅಡುಗೆ ಮನೆಗಳನ್ನೂ ತೆರೆದಿದ್ದಾರೆ. ಈಗ ಹಲವೆಡೆ ಹಾಸ್ಟೆಲ್‌ಗಳನ್ನೂ ಹೊಂದಿದೆ.

೨೦೦೫ರಲ್ಲಿ ಅನನ್ಯಾರಿಗೆ ಕರ್ನಾಟಕದ ಅಭಿಷೇಕ್ ದೊಡ್ಮನಿ ಎಂಬುವವರ ಪರಿಚಯವಾಗಿ, ಮುಂದೆ ಅವರನ್ನೇ ಮದುವೆಯಾದರು. ಮದುವೆಯಾಗಿ ಕರ್ನಾಟಕಕ್ಕೆ ಬಂದ ಅನನ್ಯಾ ಇಲ್ಲಿನ ಕಾಡುವಾಸಿಗಳಾದ ಸಿದ್ದಿ ಹಾಗೂ ಕುಡುಬಿ ಸಮುದಾಯಗಳ ಏಳಿಗೆಗಾಗಿಯೂ ದುಡಿಯಲು ಶುರು ಮಾಡಿದರು. ಈಗ ಅವರು ಪ್ರತೀ ತಿಂಗಳ ಮೊದಲ ಇಪ್ಪತ್ತು ದಿನ ನೈಋತ್ಯ ರಾಜ್ಯಗಳಲ್ಲಿದ್ದರೆ, ಉಳಿದ ಹತ್ತು ದಿನಗಳನ್ನು ಕರ್ನಾಟಕದಲ್ಲಿ ಕಳೆಯುತ್ತಾರೆ. ‘ಎಲ್ಲರ ಬದುಕಿನಲ್ಲೂ ಕ್ಷೆಭೆಗಳಿರುತ್ತವೆ. ಆದರೆ, ಪ್ರತಿಯೊಬ್ಬರಿಗಿರುವ ವ್ಯತ್ಯಾಸವೇನೆಂದರೆ, ಅದು ಯಾವ ರೀತಿಯಲ್ಲಿ ನಿಮ್ಮ ಬದುಕಿನ ಮೇಲೆಪರಿಣಾಮ ಬೀರಲು ನೀವು ಬಿಡುತ್ತೀರಿ ಎನ್ನುವುದು. ನಾನು ನನ್ನ ತಂದೆಗಾದುದನ್ನು ನೋಡಿ ಭಯದಿಂದ ಮುದುಡಿ ಮೂಲೆ ಹಿಡಿಯಬಹುದಿತ್ತು. ಆದರೆ ಹಾಗೆ ಮಾಡದೆ ಭಯದ ಕಣ್ಣೊಳಗೆ ಕಣ್ಣಿಟ್ಟು ನೋಡಿ, ತಂದೆಯಅಪಹರಣವಾದ ಸ್ಥಳದಲ್ಲೇ ಕೇಂದ್ರವನ್ನು ತೆರೆದೆ’ ಎನ್ನುವ ಅನನ್ಯಾರನ್ನು ೨೦೧೯ರಲ್ಲಿ ವಿಶ್ವಸಂಸ್ಥೆ ಅವರಿಗೆ ‘ಕರ್ಮವೀರ ಚಕ್ರ’ ಪ್ರಶಸ್ತಿ ನೀಡಿ ಗೌರವಿಸಿತು.

”  ‘ಟ್ರೆ ಬಲ್ ಕನೆಕ್ಟ್’ ನೈಋತ್ಯ ರಾಜ್ಯಗಳಲ್ಲದೆ ಕರ್ನಾಟಕ, ಗೋವಾ, ಒಡಿಶಾ ಹಾಗೂ ಪ.ಬಂಗಾಳ ಸೇರಿ ಹಲವು ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು ೭೦೦ ಸ್ವಯಂ ಸೇವಕರನ್ನು ಹೊಂದಿದೆ. ನೈಋತ್ಯ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಿಕ್ಷಣದತ್ತ ಆಕರ್ಷಿಸುವ ಸಲುವಾಗಿ ಕಲಿಕಾ ಕೇಂದ್ರಗಳಲ್ಲಿಅಡುಗೆ ಮನೆಗಳನ್ನೂ ತೆರೆದಿದ್ದಾರೆ. ಈಗ ಹಲವೆಡೆ ಹಾಸ್ಟೆಲ್‌ಗಳನ್ನೂ ಹೊಂದಿದೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಎಸ್‌ಐಆರ್: ಸಂಪೂರ್ಣ ಮಾಹಿತಿ ನೀಡಿ

ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…

1 min ago

ಕೆ.ಟಿ.ಶಿವಪ್ರಸಾದ್ ಎಂಬ ಅಜೂಬಾ!

ರೂಪ ಹಾಸನ ನೇಪಥ್ಯಕ್ಕೆ ಸರಿದ ಅಂತಾರಾಷ್ಟ್ರಿಯ ಖ್ಯಾತಿಯ ಅದ್ಭುತ ಕಲಾವಿದ ಮೂರು ದಶಕಗಳ ಹಿಂದೆ ಮದುವೆಯಾಗಿ ಹಾಸನಕ್ಕೆ ಬಂದ ಹೊಸತು.…

9 mins ago

ಕೆರೆ ಕಟ್ಟೆ ಸಮೀಪದಲ್ಲಿ ವಾಮಾಚಾರ; ಜನರಲ್ಲಿ ಭೀತಿ

ಮಂಜು ಕೋಟೆ ಸವ್ವೆ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಕೆರೆಯ ಬಳಿ ಮಾಟ-ಮಂತ್ರ; ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಆಗ್ರಹ ಎಚ್.ಡಿ.ಕೋಟೆ:…

12 mins ago

ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಂಡೀಪುರ-ನಾಗರಹೊಳೆ ಸಫಾರಿ ಆರಂಭಿಸಿ: ಸಿಎಂ ಡಿ.ಕೆ.ಶಿವಕುಮಾರ್‌ ಸೂಚನೆ

ಬೆಂಗಳೂರು: ಅಗತ್ಯ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಬಂಡೀಪುರ ಹಾಗೂ ನಾಗರಹೊಳೆ ಉದ್ಯಾನಗಳಲ್ಲಿ ಸಫಾರಿ ಆರಂಭಿಸಿ ಎಂದು ಸಿಎಂ ಡಿ.ಕೆ.ಶಿವಕುಮಾರ್‌…

13 hours ago

ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 1700ಕ್ಕೆ ಏರಿಕೆ

ವೆನೆಜುವೆಲಾ: ಇಲ್ಲಿ ಬುಧವಾರ ಸಂಜೆ ಸಂಭವಿಸಿದ ಎರಡು ಪ್ರಬಲ ಭೂಕಂಪಗಳಲ್ಲಿ ಮೃತಪಟ್ಟವರ ಸಂಖ್ಯೆ 1700ಕ್ಕೆ ಏರಿಕೆಯಾಗಿದೆ. ಈ ದುರಂತದಲ್ಲಿ 5000ಕ್ಕೂ…

14 hours ago