ರೂಪ ಹಾಸನ
ನೇಪಥ್ಯಕ್ಕೆ ಸರಿದ ಅಂತಾರಾಷ್ಟ್ರಿಯ ಖ್ಯಾತಿಯ ಅದ್ಭುತ ಕಲಾವಿದ
ಮೂರು ದಶಕಗಳ ಹಿಂದೆ ಮದುವೆಯಾಗಿ ಹಾಸನಕ್ಕೆ ಬಂದ ಹೊಸತು. ನಿಧಾನಕ್ಕೆ ಹಾಸನದ ಸುತ್ತಮುತ್ತಲ ಬಗ್ಗೆ ಅರಿಯಲಾರಂಭಿಸಿದ ಸಂದರ್ಭದಲ್ಲಿ ಕಿವಿಗೆ ಬಿದ್ದ ಒಂದು ದೊಡ್ಡ ಹೆಸರು ಕೆ.ಟಿ.ಶಿವಪ್ರಸಾದ್! ಅಂತಾರಾಷ್ಟ್ರೀಯ ಮಟ್ಟದ ಅದ್ಭುತ ಚಿತ್ರ ಕಲಾವಿದರೆಂದೂ, ಅವರ ಚಿತ್ರಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆಂದೂ, ಅಪಾರವಾಗಿ ಓದಿಕೊಂಡವರೂ, ದಲಿತ ಮತ್ತು ರೈತ ಪರ ಪ್ರಖರ ಹೋರಾಟಗಾರರೆಂದೂ, ಕುಪ್ಪಳಿಯ ಕುವೆಂಪು ಬಯಲು ಸ್ಮಾರಕದ ನಿರ್ಮಾತೃವೆಂದೂ… ಆದರೆ ಕೊಂಚ ವಿಕ್ಷಿಪ್ತರೂ, ಕಡು ಕೋಪಿಷ್ಠರೆಂದೂ… ಹೀಗೆ ಅವರನ್ನು ಕುರಿತು ಅನೇಕ ದಂತಕಥೆಗಳೂ ಪ್ರಚಲಿತವಿದ್ದವು! ಇವೆಲ್ಲ ಕೇಳಿ ಅವರ ಬಗೆಗೊಂದು ಭಯಮಿಶ್ರಿತ ಗೌರವಭಾವ ಮೂಡಿತ್ತು.
ನನಗೆ ಚಿಕ್ಕಂದಿನಿಂದಲೂ ಸಾಹಿತ್ಯಕ್ಕಿಂತ ಚಿತ್ರಕಲೆಯಲ್ಲಿ ಅಪರಿಮಿತ ಆಸಕ್ತಿ. ಮಾತು, ಅಕ್ಷರಗಳ ರೂಢಿಗತ, ಪ್ರಚಲಿತ ಮಾಧ್ಯಮವಿಲ್ಲದೇ ಭಾವನೆಗಳನ್ನು ಇನ್ನೊಂದು ಮನಸಿಗೆ ಮುಟ್ಟಿಸುವ, ಅನುಭವದ ಮೂಲಕ ಮಾತ್ರ ಅರ್ಥೈಸಲು ಸಾಧ್ಯವಾಗುವ ಅಭಿವ್ಯಕ್ತಿಯ ಸಾಧ್ಯತೆಯ ಕುರಿತು ಸದಾ ಬೆರಗು, ಕುತೂಹಲ. ಆದರೆ ಅಪ್ಪನ ಸರ್ಕಾರಿ ಕೆಲಸದ ಕಾರಣದಿಂದ ಚಿಕ್ಕ ಚಿಕ್ಕ ಊರುಗಳಲ್ಲಿ ಓದಬೇಕಾಗಿ ಬಂದಿದ್ದರಿಂದಾಗಿ ಶಾಲೆಗಳ ಪಠ್ಯದ ಭಾಗವಾಗಿ ಒಂದಿಷ್ಟು ಚಿತ್ರಕಲೆಯ ಮೂಲ ಪಾಠವನ್ನು ಕಲಿಯಲು ಸಾಧ್ಯವಾಯಿತಷ್ಟೆ. ಚಿತ್ರಕಲೆಯನ್ನು ಇನ್ನಷ್ಟು ಶಿಸ್ತುಬದ್ಧ, ಉತ್ತಮ ಗುರುಗಳ ಮುಖೇನವಾಗಿ ಕಲಿಯಲು ಅವಕಾಶವೂ ಇರಲಿಲ್ಲ. ಸಾಧ್ಯವೂ ಆಗಿರಲಿಲ್ಲ.
ಮುಂದೆ ಹಾಸನದ ಇನ್ನೋರ್ವ ಪ್ರಸಿದ್ಧ ಚಿತ್ರಕಲಾವಿದರೂ, ಚಿತ್ರಕಲಾ ಶಿಕ್ಷಕರೂ, ಮಕ್ಕಳಿಗೆ ಚಿತ್ರಕಲೆಯ ತರಬೇತಿ ನೀಡುತ್ತಿದ್ದವರೂ ಆದ ಬಿ.ಎಸ್. ದೇಸಾಯಿ ಅವರ ಪರಿಚಯವೂ ಆಯ್ತು. ರಾಜ್ಯಾದ್ಯಂತದ ಕಲಾವಿದರಅನೇಕ ಚಿತ್ರಕಲಾ ಪ್ರದರ್ಶನವನ್ನು, ಅವರಿಂದ ಪ್ರಾತ್ಯಕ್ಷಿಕೆ, ಸಂವಾದವನ್ನು ದೇಸಾಯಿಯವರು ಹಾಸನದಲ್ಲಿ ನಿರಂತರವಾಗಿ ಏರ್ಪಡಿಸುತ್ತಿದ್ದರಿಂದ ಅವುಗಳಲ್ಲಿ ಪಾಲ್ಗೊಳ್ಳುತ್ತಾ ಚಿತ್ರಕಲೆಯ ಕುರಿತ ನನ್ನ ಆಸಕ್ತಿ ಮತ್ತಷ್ಟು ವಿಸ್ತಾರವಾಗುತ್ತಾ ಹೋಯ್ತು. ಈ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಬರುತ್ತಿದ್ದ ಶಿವಪ್ರಸಾದ್ ಅವರು, ಮಾತಾಡುತ್ತಿದ್ದುದು ಕಡಿಮೆಯೇ. ಆಡಿದರೂ ಹೆಚ್ಚಿನ ಬಾರಿ ಅವರ ಅಂದಿನ ಮನಃಸ್ಥಿತಿಗೆ ತಕ್ಕಂತೆ ಮಾತುಗಳು ಇರುತ್ತಿದ್ದವು. ಒಮ್ಮೊಮ್ಮೆ ಅತ್ಯಂತ ಗಹನ. ದಾರ್ಶನಿಕ ಮಾತು. ಕೆಲವೊಮ್ಮೆ ಅಮೂಲ್ಯವಾದ ನಾಲ್ಕೇ ಮಾತು. ಅಂದೇನಾದರೂ ಎಲ್ಲಾದರೂ ಅಚಾತುರ್ಯ ನಡೆದಿದ್ದರೆ ವೇದಿಕೆಗೆ ಸಂಬಂಧವಿರಲಿ ಇಲ್ಲದಿರಲಿ ವ್ಯವಸ್ಥೆಯ ವಿರುದ್ಧವಾಗಿ ಸಿಟ್ಟು, ಆಕ್ರೋಶದ ಕಿಡಿ ನುಡಿಗಳು!
ಅಂತಹದ್ದೊಂದು ಚಿತ್ರಕಲಾ ಸಮಾರಂಭದ ಸಂವಾದ ಕಾರ್ಯಕ್ರಮದಲ್ಲಿ ಈಗ್ಗೆ ಇಪ್ಪತ್ತು ವರ್ಷಗಳ ಹಿಂದೆ ಅವರು ಹೇಳಿದ್ದ ಮರಗಳೊಂದಿಗೆಮಾತಾಡುವ ಪ್ರಸಂಗ ಇಂದಿಗೂ ನೆನಪಲ್ಲಿ ಹಸಿಯಾಗಿದೆ. ಒಮ್ಮೆ ತಮ್ ಗುರುಗಳ ಮನೆಗೆ ಇವರು ಹೋಗಿದ್ದಾಗ ಮರದಿಂದ ಎಳನೀರು ಕೀಳುವ ಮುಂಚೆ ‘ಶಿವಾ ಬಂದಿದ್ದಾನವ್ವ ಒಂದು ಎಳನೀರು ಕೊಯ್ದುಕೋತೀನಿ’ ಅಂತ ಮರಕ್ಕೆ ಹೇಳಿ, ಕಾಯಿ ಕಿತ್ತುಕೊಂಡರಂತೆ! ಇವರು ಎಳನೀರು ಕುಡಿದ ನಂತರ ‘ಅವಳಿಗೆ (ಮರಕ್ಕೆ) ಥ್ಯಾಂಕ್ಸ್ ಹೇಳು. ಇಲ್ದಿದ್ರೆ ಬೇಜಾರು ಮಾಡ್ಕೊಂತಾಳೆ’ ಅಂತ ಹೇಳಿದ್ರಂತೆ. ಇವರಿಗದು ವಿಚಿತ್ರವೆನಿಸಿದರೂ ನಂತರ ನಿಧಾನವಾಗಿ ಅವುಗಳೆಡೆಗೆ ಗಮನಹರಿಸುತ್ತಾ ಅದರಲ್ಲಿ ತನ್ಮಯರಾದಂತೆ ಮರಗಳಿಗಷ್ಟೇ ಅಲ್ಲ, ಇಡೀ ಪ್ರಕೃತಿ ಜೀವಂತವಾಗಿದೆ, ಚಲನಶೀಲವಾಗಿದೆ ನಮ್ಮೊಂದಿಗೆ ಸಂವಾದಿಸುತ್ತದೆ ಎಂಬುದು ಅರಿವಿಗೆ ಬಂತಂತೆ. ಇದರಿಂದ ಆ ಜೀವಂತಿಕೆ, ಚಲನೆ ಹಾಗೂ ಸಂವಾದವನ್ನು ತಮ್ಮ ಪೈಂಟಿಂಗ್‌ಗಳೊಳಗೆ ಸಮ್ಮಿಲನಗೊಳಿಸುವ ಸಿದ್ಧಿಯೆಡೆಗೆ ತಮ್ಮೆಲ್ಲ ಗಮನ ಕೇಂದ್ರೀಕರಿಸಲು ಸಾಧ್ಯವಾಯ್ತೆಂದು ಹೇಳಿದ್ದರು.
ಈ ರೀತಿಯ ಕಾರ್ಯಕ್ರಮಗಳಲ್ಲಿ ಆಗೀಗ ಶಿವಪ್ರಸಾದ್ ಅವರ ಚಿಂತನಾತ್ಮಕ ಮಾತುಗಳನ್ನು ಕೇಳಲು ಸಾಧ್ಯವಾಗಿದ್ದರೂ ಅವರ ಪೇಂಟಿಂಗ್‌ಗಳನ್ನು ನೋಡಲು ಸಾಧ್ಯವಾಗಿರಲೇ ಇಲ್ಲ. ಅವರೆಂದೂ ಹಾಸನದಲ್ಲಿಕಲಾಪ್ರದರ್ಶನವನ್ನು ಏರ್ಪಡಿಸಿಯೇ ಇರಲಿಲ್ಲವಂತೆ! ಮುಂದೆ ಅಭಿನವ ಪ್ರಕಾಶನದ ರವಿಕುಮಾರ್ ಅವರು ತಮ್ಮ ಅಭಿನವ ಚಾತುರ್ಮಾಸಿಕಕ್ಕಾಗಿ ಶಿವಪ್ರಸಾದ್ ಅವರನ್ನು ಕುರಿತು ಸಂಚಿಕೆಯೊಂದನ್ನು ಹೊರತರಬೇಕೆಂದು ಯೋಚಿಸಿದರು. ಇದಕ್ಕಾಗಿ ಅವರನ್ನು ಒಪ್ಪಿಸಲು, ಶಿವಪ್ರಸಾದ್ ಅವರನ್ನು ಭೇಟಿಯಾಗಲು ಸಮಯ ನಿಗದಿ ಮಾಡಿಕೊಂಡು, ಬೆಂಗಳೂರಿನಿಂದ ಹಾಸನಕ್ಕೆ ಬಂದರು. ಈ ಕುರಿತು ಮೊದಲೇ ತಿಳಿಸಿ, ಶಿವಪ್ರಸಾದ್ ಅವರ ಮನೆಗೆ ನನ್ನನ್ನೂ ಕರೆದುಕೊಂಡು ಹೋದರು. ಅಲ್ಲಿ ಮೊದಲ ಬಾರಿಗೆ ಅವರ ಪೈಂಟಿಂಗ್‌ಗಳನ್ನು ನೋಡಿ ತುಂಬಾ ಸಂತೋಷಪಟ್ಟೆ.
ಮೂರ್ತ ಚಿತ್ರಗಳ ಬಗ್ಗೆ ನನಗಿದ್ದ ಅಲಕ್ಷ ಕೊನೆಯಾಗಿದ್ದೇ ಬಹುಶಃ ಶಿವಪ್ರಸಾದ್‌ರ ಚಿತ್ರಗಳನ್ನು ನೋಡಿದ ನಂತರ. ಆ ಚಿತ್ರಗಳು ನಮ್ಮೊಂದಿಗೆ ಎಗ್ಗಿಲ್ಲದೇ ಸಂವಾದಿಸುತ್ತಿದ್ದವು! ಅವು ತೀರಾ ಲೌಕಿಕ ಪ್ರಪಂಚದ ಕೃತಿಗಳಂತೆ ಕಂಡರೂ, ಅವು ಈ ಸುತ್ತಲ ಕಾಣುವ ಜಗತ್ತಿನ ಆಚಿನ ನಿಗೂಢಗಳನ್ನೇನೋ ಹೇಳಲು ಪ್ರಯತ್ನಿಸುವಂತೆ ತೋರುತ್ತಿತ್ತು. ಎರಡು ಮೂರು ಚಿತ್ರಗಳಲ್ಲಿನ ಆಕೃತಿಗಳು ತಲೆಕೆಳಗಾಗಿ ಚಿತ್ರಿತವಾಗಿದ್ದನ್ನು ನೋಡಿ ಕುತೂಹಲ ತಾಳಲಾರದೇ ‘ಇದ್ಯಾಕೆ ಚಿತ್ರಗಳು ಉಲ್ಟಾ ಆಗಿವೆ ಸರ್?’ಎಂದು ಕೇಳಿದೆ. ಏನಾದರೂ ನಿರ್ದಿಷ್ಟ ಉದ್ದೇಶವಿರಬಹುದೇ ಎಂಬ ನಿರೀಕ್ಷೆಯಿಂದ. ಅವರು ತಟ್ಟನೆ ‘ನೀವೀಗ ನೆಟ್ಟಗೆ ನಿಂತಿದ್ದೀರೋ ಉಲ್ಟಾ ನಿಂತಿದ್ದೀರೋ ನಿಮಗೆ ಗೊತ್ತೇ?’ ಎಂದು ಕೇಳಿದರು! ನನಗೆ ಹೌದಲ್ಲ ಎನಿಸಿ ದಿಗ್ಭ್ರಮೆಗೊಳಗಾದೆ. ಅವರು ನಿಧಾನಕ್ಕೆ… ತಿರುಗುತ್ತಿರುವ ಈ ಭೂಮಿ, ಅದರ ಚಲನೆಯ ಪರಿ, ಟೈಮ್ ಮತ್ತು ಸ್ಪೇಸ್‌ನ ಅರ್ಥವ್ಯಾಪ್ತಿ ಮತ್ತು ಅದನ್ನು ಒಳಗೊಳ್ಳುವ ಸಾಧ್ಯತೆಯೆಲ್ಲವನ್ನೂ ವಿವರಿಸುತ್ತಾ ಹೋದರು. ಪಾಶ್ಚಾತ್ಯ ಮತ್ತು ಭಾರತೀಯ ತತ್ವಶಾಸ್ತ್ರದ ಅವರ ಓದು ಮತ್ತು ತಿಳಿವೂ ಕೂಡ ಅದ್ಭುತವಾದುದು! ಅಲ್ಲಿ ಅವರ ಪ್ರಿಯ ಬುದ್ಧನಂತೂ ಹಲವು ಆಯಾಮಗಳಲ್ಲಿ, ವಿಭಿನ್ನ ರೂಪು ಪಡೆಯುತ್ತಾ ಮತ್ತೆ ಮತ್ತೆ ತೆರೆದುಕೊಂಡ.
ಈ ನಡುವೆ ಅಭಿನವ ರವಿಕುಮಾರ್ ನನಗೊಂದು ಕೆಲಸ ಒಪ್ಪಿಸಿ ಹೋಗಿದ್ದರು. ಮತ್ತೆ ಶಿವಪ್ರಸಾದ್ ಅವರ ಅನುಕೂಲಕರ ಸಮಯವನ್ನು ತೆಗೆದುಕೊಂಡು ಅಭಿನವ ಚಾತುರ್ಮಾಸಿಕದ ವಿಶೇಷ ಸಂಚಿಕೆಗಾಗಿ ಅವರು ಹೇಳುವ ಕತೆಯೊಂದನ್ನು ರೆಕಾರ್ಡ್ ಮಾಡಿಕೊಂಡು, ಅದನ್ನು ಚಾಚೂತಪ್ಪದೇ ಬರೆದು ಕಳಿಸಬೇಕಿತ್ತು. ಹೀಗಾಗಿ ಕೆಲ ದಿನಗಳ ನಂತರ ಮತ್ತೆ ನಾನು ಮತ್ತು ಗೆಳತಿ ಮನು, ಅವರ ಮನೆಗೆ ಹೋಗಿ ಕತೆಯನ್ನು ರೆಕಾರ್ಡ್ ಮಾಡಿಕೊಂಡು ಬಂದೆವು. ಅದನ್ನು ಅವರು ಹೇಳಿದ ಧಾಟಿಯಲ್ಲೇ, ಯಥಾವತ್ ಬರೆದು ರವಿಕುಮಾರ್‌ಗೆ ಕಳಿಸಿದೆ. ‘ಮಾಯಾ ಕನ್ನಡಿ’ ಎಂಬ ಆ ಅದ್ಭುತ ಕತೆ, ಕೆ.ಪುಟ್ಟಸ್ವಾಮಿಯವರಿಂದ ೨೦೦೪ರ ಜನವರಿ-ಏಪ್ರಿಲ್ ಸಂಚಿಕೆಯಲ್ಲಿ ರೂಪಿತವಾದ ‘ಕಲ್ಲರಳಿ ಹೂವ್ವಂತೆ’ ಅಭಿನವ ಚಾತುರ್ಮಾಸಿಕದಲ್ಲಿ ದಾಖಲಾಗಿದೆ.
ದಮನಿತರು, ಅಂಚಿಗೊತ್ತರಿಸಲ್ಪಟ್ಟವರ ಕಷ್ಟಕ್ಕೆ ಸದಾ ಮಿಡಿಯುವ, ದನಿಯಾಗುವ ಶಿವಪ್ರಸಾದ್ ಅವರು, ಕಳೆದ ವರ್ಷ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಾವು ಹೆಣ್ಮಕ್ಕಳು ಏರ್ಪಡಿಸಿದ್ದ ‘ಕರಾಳ ಮಹಿಳಾದಿನಾಚರಣೆ’ಯ ಪ್ರತಿಭಟನಾ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಇವೆಲ್ಲದರ ಜೊತೆಗೇ ಕೆಲವು ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಅವರ ಸಿಟ್ಟು, ಆಕ್ರೋಶದ ಮಾತುಗಳನ್ನು ಕೇಳಿದಾಗ, ವಿನಾಕಾರಣ ಕೆಲವೊಮ್ಮೆ ಬಡಪಾಯಿಗಳ ಮೇಲೆ, ಪ್ರತಿಷ್ಠೆ ತೋರುವ ಅಽಕಾರಿಗಳ ಮೇಲೆ ಹರಿಹಾಯುವ ಶಿವಪ್ರಸಾದ್‌ರ ಅಸಹನೆಯನ್ನು ಕಾಣುವಾಗ ಅವರ ಎರಡು ಅತಿಗಳ ದ್ವಿಮುಖ ವ್ಯಕ್ತಿತ್ವದ ಬಗ್ಗೆ ಅಚ್ಚರಿಗೊಳ್ಳುತ್ತಿರುತ್ತೇನೆ. ಎಲ್ಲಕ್ಕಿಂಥ ನನಗೆ ಸಿಡಿಮಿಡಿ ಹುಟ್ಟಿಸಿದ್ದೆಂದರೆ ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಕುಟುಂಬ ರಾಜಕಾರಣದ ಪ್ರಖರತೆಯನ್ನು ಕೊನೆಗೊಳಿಸಬೇಕೆಂದು ಇಚ್ಛಿಸಿ, ಬಿಜೆಪಿ ಅಭ್ಯರ್ಥಿಗೆ ಅವರು ನೀಡಿದ ಸಂಪೂರ್ಣ ಬೆಂಬಲ! ಈ ಸಂದರ್ಭದಲ್ಲಿ ಹೀಗೇ ನಡೆದುಕೊಳ್ಳುತ್ತಾರೆ ಎಂದು ಯಾರೂಊಹಿಸಲಾಗದ, ಹೆಚ್ಚಿನವರಲ್ಲಿ ಕೊಂಚ ಭಯ ಹುಟ್ಟಿಸುವ ಶಿವಪ್ರಸಾದ್‌ರದು ಅಜೂಬಾ ವ್ಯಕ್ತಿತ್ವ!
(ಕೆ.ಟಿ.ಶಿವಪ್ರಸಾದ್ ಅವರ ಅಪ್ರಕಟಿತ ಅಭಿನಂದನಾ ಗ್ರಂಥಕ್ಕಾಗಿ ಬರೆದಿದ್ದ ಲೇಖನ)
” ಎರಡು ಮೂರು ಚಿತ್ರಗಳಲ್ಲಿನ ಆಕೃತಿಗಳು ತಲೆಕೆಳಗಾಗಿ ಚಿತ್ರಿತವಾಗಿದ್ದನ್ನು ನೋಡಿ ಕುತೂಹಲ ತಾಳಲಾರದೇ ‘ಇದ್ಯಾಕೆ ಚಿತ್ರಗಳು ಉಲ್ಟಾ ಆಗಿವೆಸರ್?’ ಎಂದು ಕೇಳಿದೆ. ಏನಾದರೂ ನಿರ್ದಿಷ್ಟಉದ್ದೇಶವಿರಬಹುದೇ ಎಂಬ ನಿರೀಕ್ಷೆಯಿಂದ. ಅವರು ತಟ್ಟನೆ ‘ನೀವೀಗ ನೆಟ್ಟಗೆ ನಿಂತಿದ್ದೀರೋ ಉಲ್ಟಾ ನಿಂತಿದ್ದೀರೋ ನಿಮಗೆ ಗೊತ್ತೇ?’ ಎಂದು ಕೇಳಿದರು! ನನಗೆ ಹೌದಲ್ಲ ಎನಿಸಿ ದಿಗ್ಭ್ರಮೆಗೊಳಗಾದೆ.”
ಟಿ.ಕೆ.ಹರೀಶ್ ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ…
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ಆಡಳಿತ ಸೌಧದಲ್ಲಿ ಇರುವ ನೆಮ್ಮದಿ ಕೇಂದ್ರದ ಮೂಲಕ ಜಾತಿ ಪ್ರಮಾಣ ಪತ್ರ, ಆದಾಯ…
ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ…
ಸಾಮಾಜಿಕ ಮಾಧ್ಯಮ ಬಳಕೆದಾರರು ಬೆಂಗಳೂರಿನ ನಂತರ ಅತಿ ಹೆಚ್ಚು ಕ್ರಿಯಾಶೀಲರಾಗಿರುವುದು ಮೈಸೂರು ನಗರದಲ್ಲಿ. ಆದರೆ ಬೇಸರದ ಸಂಗತಿ ಎಂದರೆ ಇಲ್ಲಿನ…
ರಾಜ್ಯದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್)ಪ್ರಕ್ರಿಯೆ ಜೂ.೩೦ರಿಂದ ಆರಂಭವಾಗಿದೆ. ಆದರೆ ಮತದಾರರು ಈ ಪ್ರಕ್ರಿಯೆಯಲ್ಲಿ ಯಾವ ದಾಖಲೆಗಳನ್ನು…
ಪಂಜು ಗಂಗೊಳ್ಳಿ ಬಡಕಟ್ಟು ಜನರಿಗೆ ಅಕ್ಷರ ಕಲಿಸಿ ಬದುಕು ರೂಪಿಸಿದ ಕರುಣಾಮಯಿ ೧೯೯೦ರಲ್ಲಿ ಅಸ್ಸಾಮಿನ ಹೊಜಾಯ್ ಜಿಲ್ಲೆಯ ಲುಮ್ಡಿಂಗ್ ಗ್ರಾಮದ…