ಮುಂಬೈಯ ಅಂಬೇಡ್ಕರ್ ನಗರದ ಸ್ಲಮ್ಮಿನಲ್ಲಿ ವಾಸಿಸುವ ಅಶೋಕ್ ರಾಥೋಡ್ ತನ್ನ ವಠಾರದ ಮಕ್ಕಳು ಒಬ್ಬೊಬ್ಬರಾಗಿ ಶಾಲೆ ಬಿಟ್ಟು, ಸಮೀಪದ ಸಸ್ಸೂನ್ ಡಾಕಿನಲ್ಲಿ ಕೆಲಸ ಮಾಡಲು ಹೋಗುವುದನ್ನು ನೋಡಿ ತಳಮಳಗೊಳ್ಳುತ್ತಿದ್ದರು. ಅವರೂ ಕೂಡ ತನ್ನ ಬಾಲ್ಯದಲ್ಲಿ ಆ ಮಕ್ಕಳಂತೆ ಶಾಲೆ ಬಿಟ್ಟು ಅದೇ ಸಸ್ಸೂನ್ ಡಾಕಿಗೆ ಕೆಲಸಕ್ಕೆ ಹೋಗುತ್ತಿದ್ದರೋ ಏನೋ. ಆದರೆ ಅವರ ತಂದೆ, ಹಾಗೇನಾದರೂ ಮಾಡಿದರೆ ಮನೆಯಿಂದ ಹೊರಕ್ಕೆ ಹಾಕುತ್ತೇನೆ ಎಂದು ಗದರಿಸಿದ ಕಾರಣ ಶಾಲೆಗೆ ಹೋಗಿ ಮುಂದೆ ಕಾಲೇಜು ಶಿಕ್ಷಣವನ್ನೂ ಮುಗಿಸಿದ್ದರು. 2006ರಲ್ಲಿ, ಅಶೋಕ್ ರಾಥೋಡ್ ಕಾಲೇಜಿಗೆ ಹೋಗುತ್ತಿದ್ದಾಗಲೇ ‘ಮ್ಯಾಜಿಕ್ ಬಸ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯಲ್ಲಿ ಫುಟ್‌ಬಾಲ್ ಕೋಚಿಂಗ್ ಮಾಡುತ್ತಿದ್ದರು. ಶಾಲೆ ಬಿಟ್ಟು ಡಾಕಿನಲ್ಲಿ ಕೆಲಸ ಮಾಡುವ ಅವರ ವಠಾರದ ಒಂದಷ್ಟು ಮಕ್ಕಳು ಅವರಿಗೆ ಪರಿಚಯವಿದ್ದರು. ಆ ಮಕ್ಕಳನ್ನು ಹೇಗಾದರೂ ಮಾಡಿ ಪುನಃ ಶಾಲೆಗೆ ಹೋಗುವಂತೆ ಮಾಡುವುದು ಹೇಗೆ ಎಂದು ಆಲೋಚಿಸುತ್ತಿದ್ದಾಗ ಅವರಿಗೆ ಹೊಳೆದ ದಾರಿ ಫುಟ್‌ಬಾಲ್ ಆಟ.
ಒಂದು ಶನಿವಾರ ಸಂಜೆ ಹೊತ್ತು ಅಶೋಕ್ ರಾಥೋಡ್ ಮುಂಬೈಯ ಒಂದು ಮೈದಾನಿನಲ್ಲಿ 18 ಹುಡುಗರನ್ನು ಫುಟ್‌ಬಾಲ್ ಆಡಲು ಆಹ್ವಾನಿಸಿದರು. ಪ್ರಾರಂಭದಲ್ಲಿ ಕೆಲವು ಹುಡುಗರು ಜಾತಿ ಕಾರಣ ನೀಡಿ ಇತರ ಮಕ್ಕಳೊಂದಿಗೆ ಆಡಲು ನಿರಾಕರಿಸಿದಾಗ ಅಶೋಕ್ ರಾಥೋಡ್ ಮಕ್ಕಳ ತಂಡಗಳನ್ನು ಮಾಡಿ, ತಂಡದ ಯಾರೇ ಆಟಗಾರ ಗೋಲ್ ಹೊಡೆದರೂ ಇಡೀ ತಂಡವು ಅದನ್ನು ಸಂಭ್ರಮಿಸಬೇಕು, ಇಲ್ಲವಾದರೆ ಆ ಗೋಲನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂಬ ನಿಯಮವನ್ನು ಮಾಡಿದರು. ಇದರ ಪರಿಣಾಮವಾಗಿ ಒಂದು ವರ್ಷದಲ್ಲಿ ಮಕ್ಕಳು ಜಾತಿ, ಧರ್ಮವನ್ನು ಮರೆತು ಬಿಟ್ಟರು. ಅದರೊಂದಿಗೆ ಅವರು ಮಾತಾಡುವಾಗ ಹೊಲಸು ಬೈಗುಳ, ಕಟ್ಟ ಪದಗಳ ಬಳಕೆಯೂ ಕಡಿಮೆಯಾಯಿತು.
ಹೀಗೆ ಒಂದು ವರ್ಷ ಕಾಲ ಕಳೆದ ನಂತರ ಅಶೋಕ್ ರಾಥೋಡ್ ಫುಟ್‌ಬಾಲ್ ಆಡುವುದನ್ನು ಯಾರು ಮುಂದುವರಿಸಲು ಬಯಸುತ್ತಾರೋ ಅವರು ಶಾಲೆಗೆ ಮರಳಿ ಸೇರ್ಪಡೆಯಾಗಬೇಕು ಎಂಬ ‘ನೋ ಸ್ಕೂಲ್ ನೋ ಫುಟ್‌ಬಾಲ್’ ಎಂಬ ಷರತ್ತನ್ನು ಹಾಕಿದರು. ಹೆಚ್ಚಿನ ಮಕ್ಕಳು ಆ ಷರತ್ತನ್ನು ಒಪ್ಪಿ ಶಾಲೆಗೆ ಪುನಃ ಸೇರ್ಪಡೆಗೊಂಡರು. ಆದರೆ, ಆ ಮಕ್ಕಳು ಶಾಲೆ ಬಿಟ್ಟು ಅದಾಗಲೇ ಸಾಕಷ್ಟು ಸಮಯ ಆಗಿದ್ದರಿಂದ ಅವರಲ್ಲಿ ಹಲವರು ಓದುವ ಮತ್ತು ಬರೆಯುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದರು. ಅಶೋಕ್ ಅಂತಹ ಮಕ್ಕಳನ್ನು ಒಂದು ಸರ್ಕಾರೇತರ ಸಂಸ್ಥೆಗೆ ದಾಖಲಿಸಿದರು.
ಕೆಲ ಕಾಲ ಕಳೆದ ನಂತರ, ಮಕ್ಕಳ ಸಂಖ್ಯೆ ಬೆಳೆದಾಗ ಅಶೋಕ್ ರಾಥೋಡ್‌ರಿಗೆ ಖರ್ಚನ್ನು ನಿಭಾಯಿಸುವುದು ಕಷ್ಟವಾಗತೊಡಗಿತು. ಆ ಸಮಯಕ್ಕೆ, 2008ರಲ್ಲಿ ಸಿಎನ್ಎನ್–ಐಬಿಎನ್ ಮಾಧ್ಯಮ ಸಂಸ್ಥೆ ಅಶೋಕ್ ರಾಥೋಡ್‌ರ ಸಾಧನೆಯನ್ನು ಗುರುತಿಸಿ ‘ರಿಯಲ್ ಹೀರೋ ಅವಾರ್ಡ್’ ಎಂಬ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತು. ಆ ಪ್ರಶಸ್ತಿಯೊಂದಿಗೆ ಬಂದ 3.45 ಲಕ್ಷ ರೂಪಾಯಿಯ ಸಹಾಯದಿಂದ ಅವರು ಮಕ್ಕಳಿಗೆ ಸಮವಸ್ತ್ರ, ಆಟದ ಸಲಕರಣೆ ಖರೀದಿಸಿದರು ಮತ್ತು ಅಂಬೇಡ್ಕರ್ ನಗರದಲ್ಲಿ ಮಕ್ಕಳಿಗಾಗಿ ಒಂದು ಕಮ್ಯುನಿಟಿ ಸೆಂಟರನ್ನು ಬಾಡಿಗೆಗೆ ಪಡೆದರು. ಅದು ಈಗಲೂ ಕಾರ್ಯನಿರ್ವಹಿಸುತ್ತಿದೆ.
2010ರ ಹೊತ್ತಿಗೆ ಮಕ್ಕಳ ಸಂಖ್ಯೆ 300 ಆಯಿತು. ಅಷ್ಟರಲ್ಲಿ ಪ್ರಶಸ್ತಿ ಹಣವೆಲ್ಲ ಖಾಲಿಯಾಯಿತು. ಆಗ ಅಶೋಕ್ ರಾಥೋಡ್ ಕೆಲವು ಕಾರ್ಪೊರೇಟ್ ಸಂಸ್ಥೆಗಳನ್ನು ಹುಡುಕಿ ದೇಣಿಗೆ ಪಡೆಯಲು ಪ್ರಯತ್ನಿಸಿದಾಗ, ಅವರ ಸಂಸ್ಥೆ ರಿಜಿಸ್ಟರ್ಡ್ ಆದುದಲ್ಲವೆಂಬ ಕಾರಣಕ್ಕೆ ಯಾವ ಸಂಸ್ಥೆಯೂ ದೇಣಿಗೆ ಕೊಡಲು ಮುಂದೆ ಬರಲಿಲ್ಲ. ಆಗ ಅಶೋಕ್ ರಾಥೋಡ್ ತಮ್ಮ ಸಂಸ್ಥೆಯನ್ನು ‘ಆಸ್ಕರ್’ ಎಂಬ ಹೆಸರಲ್ಲಿ ರಿಜಿಸ್ಟ್ರಿಗೊಳಿಸಿದರು. ‘ಆರ್ಗನೈಸೇಷನ್ ಫಾರ್ ಸೋಷಿಯಲ್ ಚೇಂಜ್, ಅವೇರ್ನೆಸ್ ಆಂಡ್ ರೆಸ್ಪಾನ್ಸಿಬಿಲಿಟಿ’ ಎಂಬುದು ‘ಆಸ್ಕರ್’ ಎಂಬುದರ ಪೂರ್ಣ ರೂಪ. ಆದರೆ, ಅವರು ಸಂಸ್ಥೆಯನ್ನು ರಿಜಿಸ್ಟ್ರಿಗೊಳಿಸಿದ ನಂತರವೂ ಯಾವುದೇ ದೇಣಿಗೆ ಹುಟ್ಟಲಿಲ್ಲ. ಯಾವುದೇ ಒಂದು ಸಾಮಾಜಿಕ ಸಂಸ್ಥೆಗೆ ಪ್ರಪ್ರಥಮ ದೇಣಿಗೆ ಪಡೆಯುವುದು ಎಷ್ಟು ಪ್ರಯಾಸದ ಕೆಲಸವೆಂಬುದನ್ನು ಅನುಭವಿಸಿದವರೇ ಬಲ್ಲರು.
ಆ ಹೊತ್ತಲ್ಲಿ ಟಾಟಾ ಕಂಪೆನಿಯ ತಾಜ್ ಹೋಟೆಲ್ ಗುಂಪಿಗೆ ಸೇರಿದ ‘ಇಂಡಿಯನ್ ಹೋಟೆಲ್ ಕಂಪೆನಿ’ಯ ಕೆಲವು ಉದ್ಯೋಗಿಗಳು ಅಶೋಕ್ ರಾಥೋಡ್‌ರ ಬಗ್ಗೆ ತಿಳಿದು, ಅವರು ಮಕ್ಕಳಿಗೆ ಮೈದಾನದಲ್ಲಿ ಫುಟ್‌ಬಾಲ್ ತರಬೇತಿ ಕೊಡುವ ಸಮಯದಲ್ಲಿ ಅವರನ್ನು ಭೇಟಿಯಾದರು. ‘ರೀಡರ‍್ಸ್ ಡೈಜೆಸ್ಟ್’ ಪತ್ರಿಕೆಯಲ್ಲಿ ಅಶೋಕ್ ರಾಥೋಡ್ ಕುರಿತು ಒಂದು ಲೇಖನ ಪ್ರಕಟವಾಯಿತು. ಲೇಖನದ ಜೊತೆ ಅಶೋಕ್ ರಾಥೋಡ್ ಜೊತೆ ಇಂಡಿಯನ್ ಹೋಟೆಲ್ ಕಂಪೆನಿಯ ಉದ್ಯೋಗಿಗಳಿರುವ ಫೋಟೋಗಳು ಕೂಡ ಪ್ರಕಟವಾದವು. ಅದನ್ನು ಕೈಯಲ್ಲಿ ಹಿಡಿದು ಅವರು ಸ್ಪಾನ್ಸರ್‌ಶಿಪ್‌ಗಾಗಿ ಐಡಿಬಿಐ ಬ್ಯಾಂಕಿನ ಸಿಎಸ್‌ಆರ್ ತಂಡವನ್ನು ಸಂಪರ್ಕಿಸಿದರು. ಫೋಟೋ ನೋಡಿ, ಅಶೋಕ್ ರಾಥೋಡ್‌ರಿಗೆ ತಾಜ್ ಗುಂಪು ಸ್ಪಾನ್ಸರ್‌ಶಿಪ್ ನೀಡುತ್ತಿದೆ ಎಂದು ತಿಳಿದ ಐಡಿಬಿಐ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಒಪ್ಪಿತು. ಅಲ್ಲಿಂದ ಅಶೋಕ್ ರಾಥೋಡ್ ‘ಕೋಟಕ್ ಬ್ಯಾಂಕ್’ಗೆ ಹೋದರು. ಐಡಿಬಿಐ ಬ್ಯಾಂಕ್ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಮುಂದೆ ಬಂದುದನ್ನು ತಿಳಿದ ಕೋಟಕ್ ಬ್ಯಾಂಕ್ ತಾನೂ ಅವರಿಗೆ ಸ್ಪಾನ್ಸರ್‌ಶಿಪ್ ನೀಡಲು ಮುಂದಾಯಿತು. ಹೀಗೆ ಅಶೋಕ್ ರಾಥೋಡ್ ಅಗತ್ಯ ಸ್ಪಾನ್ಸರ್‌ಶಿಪ್ ಪಡೆಯುವಲ್ಲಿ ಯಶಸ್ವಿಯಾದರು. ಮುಂದಿನದು ಅವರ ಪಾಲಿಗೆ ಚರಿತ್ರೆ!
ಈಗ 29 ವರ್ಷ ಪ್ರಾಯವಾಗಿರುವ ಗೋವಿಂದ ರಾಥೋಡ್, ಅಶೋಕ್ ರಾಥೋಡ್‌ರ ಮೂಲ 18 ಹುಡುಗರಲ್ಲೊಬ್ಬ. ಅವನ ಹೆತ್ತವರು ಜೀವನೋಪಾಯಕ್ಕೆ ಸಸ್ಸೂನ್ ಡಾಕಿನ ಮೀನು ಮಾರ್ಕೆಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು. ಗೋವಿಂದ ರಾಥೋಡ್ 12 ವರ್ಷದವನಾಗಿದ್ದಾಗ ಅವನ ಹೆತ್ತವರು ಪನ್ವೆಲ್ ಎಂಬಲ್ಲಿಗೆ ನೆಲೆ ಬದಲಾಯಿಸಿದಾಗ, ಅವನೂ ಶಾಲೆ ಬಿಟ್ಟು ಅವರೊಂದಿಗೆ ಪನ್ವೆಲ್‌ಗೆ ಹೋಗಿ, ಅಲ್ಲೊಂದು ಚಿಕ್ಕ ಕ್ಯಾಂಟೀನ್‌ನಲ್ಲಿ ಕೆಲಸ ಮಾಡತೊಡಗಿದನು. ಎರಡು ವರ್ಷಗಳ ನಂತರ, ಗೋವಿಂದ ರಾಥೋಡ್ ಒಮ್ಮೆ ಮುಂಬೈಗೆ ಬಂದಾಗ, ಮೊದಲೇ ಪರಿಚಯವಿದ್ದ ಅಶೋಕ್ ರಾಥೋಡರನ್ನು ಭೇಟಿಯಾದನು. ಆ ಭೇಟಿ ಗೋವಿಂದ ರಾಥೋಡ್‌ನ ಬದುಕನ್ನೇ ಬದಲಾಯಿಸಿತು.
ಫುಟ್‌ಬಾಲ್ ಆಡುವ ಸಲುವಾಗಿ ಗೋವಿಂದ ರಾಥೋಡ್ ತಾನು ಬಿಟ್ಟಿದ್ದ ಶಾಲೆಯನ್ನು ಪುನಃ ಸೇರಿದನು. ಫೀಸು ಕಟ್ಟಲು ಬೇಕಾದ ಹಣ ಹೊಂದಿಸಲು ಟ್ರಾಫಿಕ್ ಸಿಗ್ನಲ್‌ಗಳಲ್ಲಿ ದಿನಪತ್ರಿಕೆ ಮಾರುವುದು, ಕೆಲವು ಕಟ್ಟಡಗಳಲ್ಲಿ ಟಾಯ್ಲೆಟ್ ಸ್ವಚ್ಛಗೊಳಿಸುವುದು ಮೊದಲಾದ ಕೆಲಸಗಳನ್ನು ಮಾಡಿದನು. ಅವನ ಕುಟುಂಬದಲ್ಲಿ ಯಾರೂ 10ನೇ ತರಗತಿಗಿಂತ ಹೆಚ್ಚು ಕಲಿತವರಿಲ್ಲ. ತಾನು ಆ ಮಿತಿಯನ್ನು ಮೀರಲು ನಿರ್ಧರಿಸಿದನು ಮತ್ತು ಅದನ್ನು ಸಾಧಿಸಿದನು. 2014ರ ವಿಶ್ವ ಫುಟ್‌ಬಾಲ್ ಚಾಂಪಿಯನ್ ಶಿಪ್ ನಡೆದಾಗ ಗೋವಿಂದ ರಾಥೋಡ್ ದಕ್ಷಿಣ ಕೊರಿಯಾಕ್ಕೆ ಹೋಗಿ ‘ಯುನೈಟೆಡ್ ನೇಷನ್ಸ್ ಯೂತ್
ಲೀಡರ್‌ಶಿಪ್ ಕ್ಯಾಂಪ್’ನಲ್ಲಿ ಭಾಗವಹಿಸಿದನು ಮತ್ತು ವಿಯಾಟ್ನಾಮ್‌ನಲ್ಲಿ ‘ಆಡಿಡಾಸ್ ಫುಟ್‌ಬಾಲ್ ಎಕ್ಸ್‌ಚೇಂಜ್ ಪ್ರೊಗ್ರಾಮ್’ ನಲ್ಲಿ ಭಾಗವಹಿಸಿದನು. ಕಾಲೇಜು ಶಿಕ್ಷಣವನ್ನು ಮುಗಿಸಿ, ಸ್ಕಾಲರ್‌ಶಿಪ್ ಪಡೆದು, ಜರ್ಮನಿಯಲ್ಲಿ ‘ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್’ ಕಲಿತನು. ಆ ಸ್ಕಾಲರ್‌ಶಿಪ್ ಸಂದರ್ಶನ ನಡೆದದ್ದು ಮುಂಬೈಯ ‘ಹೋಷ್ಟ್ ಹೌಸ್’ ಎಂಬ ಒಂದು ಐಷಾರಾಮಿ ಕಟ್ಟಡದ ೧೦ನೇ ಅಂತಸ್ತಿನಲ್ಲಿ. ಗೋವಿಂದ ರಾಥೋಡ್ ತನ್ನ ಶಾಲಾ ಫೀಸು ಹೊಂದಿಸಲು ಹಿಂದೆ ಇದೇ ಕಟ್ಟಡದ 7ನೇ ಮತ್ತು 8ನೇ ಅಂತಸ್ತುಗಳಲ್ಲಿ ಬಾತ್ ರೂಮ್‌ಗಳನ್ನು ಸ್ವಚ್ಛಗೊಳಿಸಿತ್ತಿದ್ದನು!
ಅಶೋಕ್ ರಾಥೋಡರ ‘ನೋ ಸ್ಕೂಲ್ ನೋ ಫುಟ್ ಬಾಲ್’ ಮೂಲಕ ಬದುಕು ಕಟ್ಟಿಕೊಂಡ ಗೋವಿಂದ ರಾಥೋಡ್ ಇಂದು ತನ್ನಂತಹ ನೂರಾರು ಮಕ್ಕಳಿಗೆ ರೋಲ್ ಮಾಡಲ್ ಆಗಿದ್ದಾನೆ. ಗೋವಿಂದ ರಾಥೋಡ್ ಮಾತ್ರವಲ್ಲದೆ ಅಶೋಕ್ ರಾಥೋಡ್‌ರ ಬಳಿ ಫುಟ್‌ಬಾಲ್ ಆಡುತ್ತ ಶಾಲೆ ಸೇರಿದ ಹಲವು ಮಕ್ಕಳು ಇಂದು ಕಾರ್ಪೊರೇಟ್ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಒಬ್ಬ ಹುಡುಗ ಮುಂಬೈಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ‘ನರ್ಸಿ ಮುಂಜೀ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್’ ನಲ್ಲಿ ಎಮ್‌ಬಿಎ ಮಾಡುತ್ತಿದ್ದಾನೆ. ಕೆಲವು ಹುಡುಗರು ಮಹಾರಾಷ್ಟ್ರ ಫುಟ್‌ಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅಶೋಕ್ ರಾಥೋಡ್‌ರ ‘ಆಸ್ಕರ್’ ಸಂಸ್ಥೆ ಮುಂಬೈಯಲ್ಲಿ ಮಾತ್ರವಲ್ಲದೆ ದಮಾನ್, ರಾಜಾಸ್ತಾನ ಮತ್ತು ಕರ್ನಾಟಕದಲ್ಲೂ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ, ೪೨೦೦ಕ್ಕೂ ಹೆಚ್ಚು ಮಕ್ಕಳ ಬದುಕಿನ ಆಟವನ್ನು ಗೋಲಿನೆಡೆಗೆ ಮುನ್ನಡೆಸುತ್ತಿದೆ.
ಮೈಸೂರು : ದೇಶ-ವಿದೇಶದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಸ್ಥಳವಾದ ಅರಮನೆಯ ಜಯಮಾರ್ತಾಂಡ ಬಳಿ ಸಂಭವಿಸಿದ ಹೀಲಿಯಂ…
ಓದುಗರ ಪತ್ರ: ಜಾತಿ ಅಳಿಯಲಿ ಜೀವ ಉಳಿಯಲಿ ಈ ಅಮಾನವೀಯ ಕ್ರೂರ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುತ್ತಿದೆ…
ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ವಾರ್ಡ್ ೨೩ ರ ಹೊಸೂರು ಜನನಿಬಿಡ ಪ್ರದೇಶವಾಗಿದ್ದು, ಅಕ್ಕ ಪಕ್ಕದಲ್ಲಿ ಶಾಲೆ ಇದ್ದು, ಪೋಷಕರು ತಮ್ಮ…
ಮೈಸೂರಿನ ಬೋಗಾದಿ ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯದ (ಬಿಸಿಡಬ್ಲ್ಯೂಡಿ ೨೨೫೦)ಲ್ಲಿ ಶೌಚಾಲಯವು ಅಶುಚಿತ್ವದಿಂದ ಕೂಡಿದೆ. ಶೌಚಾಲಯ ಸ್ವಚ್ಛಗೊಳಿಸುವಂತೆ ವಾರ್ಡನ್…
ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿನ್ನೆ(ಡಿ.25) ಸಂಜೆ ಅರಮನೆ ಮುಂಭಾಗ ಬಲೂನ್ಗೆ ಗ್ಯಾಸ್ ತುಂಬುವಾಗ ಹೀಲಿಯಂ ಸಿಲಿಂಡರ್ ಸ್ಫೋಟಗೊಂಡು…
ಮೈಸೂರಿನ ಜಯನಗರದ ಇಸ್ಕಾನ್ ಕೃಷ್ಣ ದೇವಾಲಯ ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಬಿದ್ದಿದೆ. ಕೆಲವರು ರಸ್ತೆಯಲ್ಲೇ ಮೂತ್ರ ವಿಸರ್ಜನೆ…