Andolana originals

ಪಿಯುಸಿ ಪರೀಕ್ಷೆ ಅಕ್ರಮ ತಡೆಗೆ ವೆಬ್ ಕಾಸ್ಟಿಂಗ್ ಕಣ್ಗಾವಲು

ಕೆ.ಬಿ.ರಮೇಶನಾಯಕ

ಮೈಸೂರು ಜಿಲ್ಲೆಯಲ್ಲಿ ೫೧ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ

ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ೧೦ ಉಪನ್ಯಾಸಕರ ತಂಡ ರಚನೆ

ಹೆಚ್ಚುವರಿ ಒಂದು ಸೇರಿ ೧೨ ವಾಹನಗಳಿಗೆ ಜಿಪಿಎಸ್ ಅಳವಡಿಕೆ

ಮೈಸೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಕಲು, ಅಕ್ರಮ ತಡೆಗೆ ಜಿಲ್ಲಾಡಳಿತ ವೆಬ್ ಕಾಸ್ಟಿಂಗ್ಕಣ್ಗಾವಲು ಇರಿಸಲು ಬೇಕಾದ ಸಿದ್ಧತೆ ಶುರು ಮಾಡಿದೆ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರವನ್ನು ತೆರೆದು ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ನಡೆಯುವ ಪರೀಕ್ಷಾ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗುತ್ತದೆ. ಅದಕ್ಕಾಗಿ ಮೈಸೂರು ನಗರದ ೨೮ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ೨೩ ಸೇರಿದಂತೆ ೫೧ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗುತ್ತದೆ. ಹೀಗಾಗಿ, ಈ ಬಾರಿಯ ಪರೀಕ್ಷೆಯಲ್ಲಿ ಯಾವುದೇ ನಕಲು,ಅಕ್ರಮ ತಡೆಗೆ ಜಿಲ್ಲಾಡಳಿತ ಮುಂದಾಗಿರುವುದರಿಂದ ಉಪನ್ಯಾಸಕರು,ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಇರುವಂತೆ ಮಾಡಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು -.೨೮ರಿಂದ ಮಾರ್ಚ್ ೧೭ರವರೆಗೆ ನಡೆಯಲಿದ್ದು, ನಗರದ ಮಹಾರಾಜ, ಮಹಾರಾಣಿ, ಮಹಾಜನ, ಮರಿಮಲ್ಲಪ್ಪ, ಸದ್ವಿದ್ಯಾ, ಜೆಎಸ್‌ಎಸ್ ಕಾಲೇಜುಗಳು ಸೇರಿದಂತೆ ೨೮ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಎಚ್ .ಡಿ.ಕೋಟೆ-೩,ಪಿರಿಯಾಪಟ್ಟಣ-೪, ತಿ.ನರಸೀಪುರ-೪, ಕೆ.ಆರ್.ನಗರ-೩, ನಂಜನಗೂಡು-೫, ಹುಣಸೂರು ತಾಲ್ಲೂಕಿನಲ್ಲಿ ೪ ಸೇರಿದಂತೆ ೫೧ ಪರೀಕ್ಷಾ ಕೇಂದ್ರಗಳಿವೆ. ಈಗಾಗಲೇ ಕರ್ನಾಟಕ ಸೆಕ್ಯೂರ್ಡ್ ಎಕ್ಸಾಮಿನೇಷನ್ ಸಿಸ್ಟಂ ಅಡಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ ಖಜಾನೆಯಲ್ಲಿ ಭದ್ರವಾಗಿ ಇಡಲು ಮತ್ತು ಪರೀಕ್ಷಾ ಕೇಂದ್ರಗಳಿಗೆ ವಿತರಿಸಲು ಸಿದ್ಧತೆಯಾಗಿದ್ದು,ಫೆ.೨೨ರಿಂದ ಖಜಾನೆ ಒಳಗೆ ಮತ್ತು ಹೊರಗೆ ದಿನದ ೨೪ಗಂಟೆಗಳ ಕಾಲವೂ ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ.

ವೆಬ್ ಕಾಸ್ಟಿಂಗ್ ವ್ಯವಸ್ಥೆ: ಇತ್ತೀಚಿನ ವರ್ಷಗಳಲ್ಲಿ ನಕಲು, ಪ್ರಶ್ನೆ ಪತ್ರಿಕೆ ಮತ್ತಿತರ ಪ್ರಕರಣಗಳು ನಡೆಯುತ್ತಿರುವುದರಿಂದ ಸಂಪೂರ್ಣವಾಗಿ ವೆಬ್ ಕಾಸ್ಟಿಂಗ್ ಮೂಲಕವೇ ಎಲ್ಲಾ ಕೇಂದ್ರಗಳ ಮೇಲೂ ನಿಗಾ ಇರಿಸ ಲಾಗುತ್ತದೆ. ಜಿಪಂ ಕಚೇರಿಯಲ್ಲಿ ವೆಬ್ ಕಾಸ್ಟಿಂಗ್ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದ್ದು, ಈ ಕೇಂದ್ರದಲ್ಲಿ ಪರೀಕ್ಷಾ ಕೇಂದ್ರಗಳ ವೀಕ್ಷಣೆಗೆ ೧೦ ಉಪನ್ಯಾಸಕರ ತಂಡವನ್ನು ರಚಿಸಿ, ಓರ್ವ ಪ್ರಾಂಶುಪಾಲರನ್ನು ತಂಡದ ಅಧ್ಯಕ್ಷರನ್ನಾಗಿ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾ ದಿನಗಳಂದು ವಿದ್ಯುತ್, ಇಂಟರ್‌ನೆಟ್ ವ್ಯವಸ್ಥೆಯು ಕಡಿತಗೊಳ್ಳದಂತೆ ಕ್ರಮಕೈಗೊಳ್ಳಬೇಕು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಽಕ್ಷಕರಿಗೆ ಸೂಚಿ ಸಲಾಗಿದೆ.

ಸಿಸಿಟಿವಿ ಕ್ಯಾಮೆರಾ ವೀಕ್ಷಣೆಗೆ ಕೇಂದ್ರದಲ್ಲಿ ಡಿಜಿಟಲ್ ಸ್ಕ್ರೀನ್, ಸ್ಮಾರ್ಟ್ ಟಿವಿ, ಮಾನಿಟರ್ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ೫೦-೧೦೦ ಎಂಬಿಪಿಎಸ್ ಸ್ಪೀಡ್ ವ್ಯವಸ್ಥೆ ಇದೆ. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಸಿಸಿಟಿವಿ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಕೊಠಡಿ ಮೇಲ್ವಿಚಾರಕರು, ಗ್ರೂಪ್ ಡಿ ಮತ್ತು ಇತರೆ ಪರೀಕ್ಷಾ ಕೇಂದ್ರಗಳ ಸಿಬ್ಬಂದಿಗೆ ಮಾಹಿತಿ ನೀಡಿರುತ್ತಾರೆ. ಪರೀಕ್ಷಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ಕಾರ್ಯಚಟುವಟಿಕೆ, ಹೊರಗೆ ನಡೆಯುವ ಬೆಳವಣಿಗೆ, ಪರೀಕ್ಷೆಯಲ್ಲಿ ನಕಲು ಮಾಡುವ ಸನ್ನಿವೇಶಗಳು ಕಂಡು ಬಂದರೆ ಅದನ್ನು ಪತ್ತೆ ಹಚ್ಚಲಾಗುತ್ತದೆ.

ವಾಹನಗಳಿಗೆ ಜಿಪಿಎಸ್ ಅಳವಡಿಕೆ: ಅಕ್ರಮವನ್ನು ತಡೆಯುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆ ಸಾಗಿಸುವ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಸಲಾಗುತ್ತದೆ. ನಗರದಲ್ಲಿ ಐದು ಮತ್ತು ಉಳಿದ ಆರು ತಾಲ್ಲೂಕುಗಳಲ್ಲಿ ತಲಾ ಒಂದರಂತೆ ೬ ಮಾರ್ಗಗಳನ್ನು ರೂಪಿಸಲಾಗಿದ್ದು, ಈ ಎಲ್ಲ ಮಾರ್ಗಗಳಿಗೂ ೧೧ ವಾಹನಗಳನ್ನು ಮತ್ತು ಹೆಚ್ಚುವರಿಯಾಗಿ ೧ ಮೀಸಲು ವಾಹನಗಳನ್ನು ಕಾಯ್ದಿರಿಸಿ ಜಿಪಿಎಸ್ ಅಳವಡಿಸಲಾಗುತ್ತದೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ತೆಗೆದುಕೊಂಡು ಹೊರಡುವ ವಾಹನ ನೇರವಾಗಿ ಕೇಂದ್ರಕ್ಕೆ ತಲುಪುವ ತನಕವೂ ಟ್ರ್ಯಾಕ್ ಮಾಡಲಾಗುತ್ತದೆ. ಪ್ರತಿ ಮಾರ್ಗಗಳಿಗೂ ತಹಸಿಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರನ್ನು ಒಳಗೊಂಡ ತ್ರಿಸದಸ್ಯ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ತಂಡದೊಂದಿಗೆ ಪ್ರತಿ ಮಾರ್ಗಗಳಿಗೂ ಒಬ್ಬರಂತೆ ಗನ್ ಮ್ಯಾನ್‌ಗಳನ್ನು ನಿಯೋಜಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹೇಳಿದರು.

” ಪರೀಕ್ಷಾ ದಿನಗಳಂದು ಯಾವುದೇ ರೀತಿಯ ಅನಾಹುತಗಳು ಆಗದ ರೀತಿಯಲ್ಲಿ, ಸುವ್ಯವಸ್ಥಿತವಾಗಿ ನಡೆಸಲು ಗಮನಹರಿಸಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಕಲು, ದುರ್ನಡತೆ ತಪ್ಪಿಸಲು ಪ್ರತಿ ಕೇಂದ್ರದಲ್ಲೂ ವಿಶೇಷ ಜಾಗೃತ ದಳ ಸದಸ್ಯರನ್ನು ನೇಮಕ ಮಾಡಲಾಗಿದೆ. ವೆಬ್ ಕಾಸ್ಟಿಂಗ್ ಕೇಂದ್ರದಿಂದಲೇ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇರಿಸಲಾಗುವುದು.”

ಡಾ.ಪಿ.ಶಿವರಾಜು, ಅಪರ ಜಿಲ್ಲಾಧಿಕಾರಿ

 

 

ಆಂದೋಲನ ಡೆಸ್ಕ್

Recent Posts

ಜಮೀನು ಕಬಳಿಸಲು ಸಂಚು ; ಚಿಕ್ಕಕೆರೆಯೂರು ಹಾಡಿಯ ಗಿರಿಜನರಿಂದ ಆಹೋರಾತ್ರಿ ಪ್ರತಿಭಟನೆ

ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…

10 hours ago

ಮೈಸೂರು | ಪೇದೆ ನೇಮಕಾತಿ ಪರೀಕ್ಷೆ ಸುಸೂತ್ರ ; 13,166 ಹಾಜರ್‌, 3,424 ಮಂದಿ ಗೈರು

ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…

12 hours ago

ದೆಹಲಿಯಲ್ಲಿ 6 ಅಂತಸ್ತಿನ ಕಟ್ಟಡ ಕುಸಿತ ; ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ

ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…

13 hours ago

ಅಶ್ಲೀಲ ಕಮೆಂಟ್‌ ಪ್ರಕರಣ : ರಮ್ಯಾ ಕಾಲಿಗೆ ಬಿದ್ದ ದರ್ಶನ್ ಫ್ಯಾನ್ಸ್ ; ಆದರೂ ಇಲ್ಲ ಕ್ಷಮೆ ಎಂದ ನಟಿ

ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…

15 hours ago

ಬೆಳಗಿನ ಜಾವ ಸಿದ್ದಾಪುರ ಪಟ್ಟಣಕ್ಕೆ ಕಾಡಾನೆಗಳ ಎಂಟ್ರಿ: ಆತಂಕದಲ್ಲಿ ಜನತೆ

ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…

16 hours ago

ಸೋಮವಾರಪೇಟೆಯಲ್ಲಿ ಎಟಿಎಂ ದರೋಡೆಗೆ ಖದೀಮರ ಯತ್ನ

ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…

16 hours ago