ನಮ್ಮ ಬಾಳಿನ ಮಹತ್ವದೆನಿಸುವ ಎಷ್ಟೋ ಘಟನೆಗಳು ಆಕಸ್ಮಿಕಗಳಿಂದ ಸಂಭವಿಸಿರುತ್ತವೆ. ನಾವು ಬದುಕಲು ಆರಿಸಿಕೊಂಡ ಊರು, ಬೀದಿ–ಮನೆ, ವೃತ್ತಿ, ಮಾಡುವ ಪಯಣ, ಪ್ರವಾಸದಲ್ಲಿ ಆಕಸ್ಮಿಕವಾಗಿ ಸಿಕ್ಕ ಜನರ ಸಂಗ, ಓದಿದ ಪುಸ್ತಕ, ನೋಡುವ ಸಿನಿಮಾ–ಇವು ನಮ್ಮ ಅನುಭವ ಮತ್ತು ಆಲೋಚನ ಕ್ರಮವನ್ನು ರೂಪಿಸುತ್ತವೆ; ಜೀವನಕ್ಕೆ ಅನಿರೀಕ್ಷಿತ ತಿರುವನ್ನು ಕೊಡುತ್ತವೆ. ನಮ್ಮ ಮನೆತನದಲ್ಲಿ ಆಗಿಹೋದ ಕಲ್ಯಾಣ ಪ್ರಸಂಗಗಳು ಈ ತತ್ವಕ್ಕೆ ಹೊರತಲ್ಲ. ಅಪ್ಪ ಬೇಸರದಿಂದ ಮನೆಬಿಟ್ಟು ಹೋದವನು, ಕೆಲಸ ಕೊಟ್ಟ ಮಾಲಕರ ಮಗಳನ್ನು ಪ್ರೀತಿಸಿ ಲಗ್ನವಾಗಿ ಮರಳಿದನು. ನನ್ನ ಚಿಕ್ಕಮ್ಮನದೂ ಗಾಂಧರ್ವ ವಿವಾಹ. ನನ್ನೊಬ್ಬ ಸೋದರ ತಾನು ಪ್ರೀತಿಸಿ ಪ್ರೇಮಪತ್ರ ಕೊಟ್ಟುಬರುತ್ತಿದ್ದ ಹುಡುಗಿಯನ್ನೇ ವರಿಸಿ ಕ್ರಾಂತಿ ಮಾಡಿದನು. ನಮ್ಮಿಬ್ಬರು ಮಕ್ಕಳು ಕಲಿಯಲು ಪರಸ್ಥಳಕ್ಕೆ ಹೋದವರು, ಅಲ್ಲಿ ಗೆಳೆಯರಾದ ಹುಡುಗರನ್ನೇ ಜೀವನ ಸಂಗಾತಿಗಳಾಗಿಸಿಕೊಂಡರು. ಇದು ನಮಗೆ ಗೊತ್ತಾಗಿದ್ದು ನಾಟಕೀಯ ಸನ್ನಿವೇಶದಲ್ಲಿ. ಚಿಕ್ಕಮಗಳನ್ನು ಒಬ್ಬ ಹುಡುಗ ಇಷ್ಟಪಡುತ್ತಿದ್ದಂತೆ ತೋರಿತು. ಆತ ಪರೋಕ್ಷವಾಗಿ ನನ್ನೊಡನೆ ಅದನ್ನು ವ್ಯಕ್ತಪಡಿಸಿದ. ನಾನು–ಬಾನು ‘ಮಗಳು ಒಪ್ಪಿದರೆ ಯಾಕಾಗಬಾರದು?’ ಎಂದುಕೊಂಡೆವು. ಒಂದು ದಿನ ಆಕೆಯನ್ನು ಕೂರಿಸಿಕೊಂಡು ‘ಇವನ ಬಗ್ಗೆ ಏನವ್ವಾ ನಿನ್ನ ಇರಾದೆ’ ಎಂದೆವು. ಆಕೆ “ಅವನು ನನ್ನ ಜತೆಗೂ ಮಾತಾಡಿದ. ನನಗೆ ಇಂಪ್ರೆಸ್ ಮಾಡಲು ಐದಾರು ಹುಡುಗಿಯರ ಪ್ರೊಪೊಸಲ್ ಬಂದಿತ್ತು. ಇಷ್ಟವಾಗಲಿಲ್ಲ. ರಿಜೆಕ್ಟ್ ಮಾಡಿದೆ ಅಂದ. ಒಪ್ಪಿಗೆಯಾಗಲಿಲ್ಲ ಎನ್ನಬಹುದು. ರಿಜೆಕ್ಟ್ ಮಾಡುವುದಕ್ಕೆ ಇವನ್ಯಾರು? ಹುಡುಗಿಯರೂ ಇವನನ್ನು ರಿಜೆಕ್ಟ್ ಮಾಡಿರಬಹುದಲ್ಲವಾ?” ಎಂದಳು. ಆಡುವ ಭಾಷೆ, ಮಾಡುವ ವರ್ತನೆಯನ್ನು ಸೂಕ್ಷ ವಾಗಿ ಗಮನಿಸುವ, ಅವುಗಳ ಮೂಲಕ ವ್ಯಕ್ತಿಯ ಲೋಕದೃಷ್ಟಿ ವ್ಯಕ್ತಿತ್ವ ಅಳೆವ ವಿಷಯದಲ್ಲಿ ಮಕ್ಕಳು ನಮಗಿಂತ ಮುಂದಿದ್ದಾರೆ ಅನಿಸಿತು. ‘ನಿನ್ನ ತರ್ಕ ಸರಿಯಿದೆ ಮಗಳೆ. ಆದರೆ ಒಂದು ಘಟನೆಯಿಂದಲೇ ಒಬ್ಬರ ವ್ಯಕ್ತಿತ್ವ ಅಳೆಯುವುದು ಅವಸರವಾಗಬಹುದು’ ಎಂದೆವು. ಅವಳು ಆಗ ತಾನು ಇಷ್ಟಪಟ್ಟಿರುವ ಹುಡುಗನ ಮಾಹಿತಿ ಕೊಟ್ಟಳು. ಮದುವೆ ಆಯಿತು. ವೈದ್ಯಕೀಯ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಹುಡುಗನ ಬಗ್ಗೆ ದೊಡ್ಡಮಗಳು ಹೀಗೆ ನೇರ ಹೇಳಲಿಲ್ಲ. ನಮಗೆ ಒಂದು ಪತ್ರ ಬರೆದು ತನ್ನ ಒಲುಮೆ ತಿಳಿಸಿದಳು. ಒಮ್ಮೆ ಹುಡುಗನ ಭೇಟಿ ಮಾಡಿಸಿದಳು. ‘ಎಂಡಿ ಮುಗಿದ ಬಳಿಕ ಮದುವೆಯಾದರೆ ಒಳ್ಳೆಯದಲ್ಲವಾ?’ ಎಂದೆವು. ಮದುವೆ ಆದ ಬಳಿಕ ಎಂಡಿ ಮಾಡುವೆ ಎಂದಳು. ಹಾಗೆಯೇ ಮಾಡಿದಳು.
ಹೀಗೆ ಅವಿಚ್ಛಿನ್ನನಾದ ಪ್ರೇಮವಿವಾಹಗಳಿಂದ ಕೂಡಿದ ವಂಶಪರಂಪರೆಯಲ್ಲಿ, ನಾನು ಮಾತ್ರ ಹೊರತಾದೆ. ನನ್ನ–ಬಾನುವಿನ ವಿವಾಹ ಮಹೋತ್ಸವ ನೆರವೇರಿದ್ದು ಪ್ರೇಮದಿಂದಲ್ಲ. ಆಕಸ್ಮಿಕ ಮಾತುಕತೆಯಿಂದ. ನಾನು ಆಗಷ್ಟೆ ಎಂ.ಎ. ಮುಗಿಸಿ ಅಧ್ಯಾಪಕನಾಗಿದ್ದೆ. ಅಪ್ಪ ಅಕ್ಕ ಅಮ್ಮ ಮೂವರೂ ಕನ್ಯಾಶೋಧ ಸಮಿತಿ ರಚಿಸಿಕೊಂಡು ಭರದಿಂದ ಪ್ರಯತ್ನ ಮಾಡುತ್ತಿದ್ದರು. ತಮ್ಮನಿಗೆ ‘ಗುದ್ದೆಕಟ್ಟುವ’ ಹೊಣೆಯ ವಿಷಯದಲ್ಲಿ ಅಕ್ಕಂದಿರಲ್ಲಿ ಅಭಿಮಾನದ ಸ್ಪರ್ಧೆಯಿದ್ದಂತೆ ತೋರಿತು. ಅವರು ಅಪ್ಪನ ಕಡೆಯ ದೂರದ ಸಂಬಂಧವೊಂದನ್ನು ಪತ್ತೆಮಾಡಿದರು. ಅವರ ಮನೆಯ ಹುಡುಗಿಯನ್ನು ಕಂಡು, ಈಕೆಯೇ ತಕ್ಕವಳೆಂದು ನಿಶ್ಚಯಿಸಿದರು. ಹುಡುಗಿಯ ತಾಯಿ ಕೋಮಲ ಮನಸ್ಸಿನ ಮಹಿಳೆ; ಅಪ್ಪ ಪೊಲೀಸು ಇಲಾಖೆಯಲ್ಲಿದ್ದ. ಈ ನಡುವೆ ಪೊಲೀಸು ಗಂಡನ ಯಾವುದೊ ಒರಟು ಮಾತಿಗೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರು. ತಾಯಿಲ್ಲದ ತಬ್ಬಲಿ ಎಂದು ಪೊಲೀಸನ ಮಗಳ ಮೇಲೆ ಅಕ್ಕಂದಿರಿಗೆ ಮತ್ತಷ್ಟು ಅಕ್ಕರೆ ಹುಟ್ಟಿತು. ನನ್ನನ್ನು ಪೊಲೀಸನ ಮನೆಗೆ ದಿಬ್ಬಣ ಕರೆದೊಯ್ದರು. ಭಾವಿ ಮಾವ ಭಾವನೆಗಳಿಲ್ಲದ ನಿಷ್ಠುರ ಮನುಷ್ಯನಾಗಿದ್ದ. ಅವನಿಗೆ ಕುಲುಮೆ ಕೆಲಸ ಮಾಡುತ್ತಿದ್ದ ಅಪ್ಪನ ಜತೆ ಬೀಗತನ ಮಾಡುವುದಕ್ಕೆ ಇಷ್ಟವಿದ್ದಂತೆ ಕಾಣಲಿಲ್ಲ. ಆದರೆ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ ನನ್ನ ಬಗ್ಗೆ ಆಸ್ಥೆಯಿದ್ದಂತೆ ತೋರಿತು. ಮಗಳ ಬಿಎ ಮುಗಿವ ತನಕ ಮದುವೆ ಸಾಧ್ಯವಿಲ್ಲ ಎಂದು ಸಾಹೇಬರು ವಾರೆಂಟು ಜಾರಿ ಮಾಡಿದರು. ಕೊಡಲಾರದ ಹೆಣ್ಣು ತೆರದಲ್ಲಿ ಮುರಿದರಂತೆ. ಬಳಿಕ ಆತನಿಗೆಲ್ಲೊ ವರ್ಗವಾಯಿತು. ನಾವೂ ಹುಡುಕಲಿಲ್ಲ. ಅವರೂ ನಮ್ಮನ್ನು ಹುಡುಕಿ ಬರಲಿಲ್ಲ.
ನನ್ನ ಪಿಎಚ್.ಡಿ. ಕೆಲಸ ಮುಗಿದು ನಿರಾಳವಾಗಿದ್ದೆ. ಬೇಸಿಗೆ ರಜೆ. ಕಡೂರಲ್ಲಿದ್ದ ದೊಡ್ಡಕ್ಕನ ಮನೆಗೆ ಬಂದಿದ್ದೆ. ವ್ಯಾಪಾರಿಗಳಾದ ಭಾವನವರು ಸಂತೆಗೆ ಹೋಗುವ ಮುನ್ನ, ಅಕ್ಕನಿಗೆ ಹಳೆಯ ಸಾಲವೊಂದರ ವಸೂಲಿ ಕಾರ್ಯಕ್ರಮ ಕೊಟ್ಟು ಹೋದರು. ಸಾಲಗಾರನ ಮನೆ ಸಖರಾಯಪಟ್ಟಣದ ಬಳಿಯ ಎಮ್ಮೆದೊಡ್ಡಿ ಎಂಬಲ್ಲಿತ್ತು. ಅಕ್ಕ ‘ಬಾರಪ್ಪ, ಎಮ್ಮೆದೊಡ್ಡಿಗೆ ಹೋಗಿ ಬರಾಣ. ಅಯ್ಯನಕೆರೆ ನೋಡಬಹುದು’ ಎಂದಳು. ತಿರುಗಾಟವೆಂದರೆ ಒಂದೇ ಕಾಲಿನಲ್ಲಿರುತ್ತಿದ್ದ ನಾನು ಜತೆಗೆ ಹೋದೆ. ಸಾಲಗಾರನು ಕಾಡಿನಲ್ಲಿ ಸಾಗುವಳಿ ಮಾಡಿಕೊಂಡು, ಹೊಲದಲ್ಲೇ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದನು. ವಿಶಾಲ ಕೆರೆ. ಅದರ ದಂಡೆಗೆ ಕಾಡು. ಮಧುಚಂದ್ರಕ್ಕೆ ಬೇಕಾದ ಮೋಹಕ ಪರಿಸರ. ಅಲ್ಲಿ ಹಿಂದೆ ಒಬ್ಬ ಸಾಹಸಿ ಕಿತ್ತಲೆ ಬೆಳೆಯಲು ಮಾಡಿದ್ದು, ಎಸ್ಟೇಟು ಪಾಳುಬಿದ್ದಿತ್ತು. ನಮ್ಮ ಸಾಲ ವಸೂಲಾಗಲಿಲ್ಲ. ಒಳ್ಳೆಯ ಊಟ ಹಾಕಿ, ಬ್ಯಾಗಿನ ತುಂಬ ತರಕಾರಿ ತುಂಬಿಕೊಟ್ಟರು. ಅದನ್ನು ಹೊತ್ತು ವಾಪಸು ನಡೆಯುತ್ತ ಬರುತ್ತಿರುವಾಗ ಅಕ್ಕ ಹೇಳಿದಳು: ‘ಮುನ್ನ, ನಮ್ಮ ಮನೆಯ ಓನರ್ ಕಡೆಯುವರು ಚಿತ್ರದುರ್ಗದಿಂದ ಆಗಾಗ್ಗೆ ಕಡೂರಿಗೆ ಬರ್ತಾ ಇರ್ತಾರೆ. ಅವರ ಮನೆಯಲ್ಲಿ ಒಬ್ಬ ಹುಡುಗಿ ಇದ್ದಾಳೆ. ತೆಳ್ಳಗೆ ಉದ್ದಕ್ಕೆ ಲಕ್ಷಣವಾಗಿದ್ದಾಳೆ. ನಿನಗೆ ಸರಿಯಾದ ಜೋಡಿ. ಹ್ಞೂ ಎಂದರೆ ಮಾತಾಡುವೆ’
ಆಗಲಿ ಎಂದೆ. ನನ್ನ ಬಾನುವಿನ ಪ್ರಥಮ ಭೇಟಿ ಏರ್ಪಟ್ಟಿತು. ಮುಖ ನೋಡಿದೆ. ಭಾವಿ ವಧುವಿನ ಕಣ್ಣು ಕೆಂಪಾಗಿದ್ದವು. ನಿದ್ದೆಗೆಟ್ಟು ಪಯಣ ಮಾಡಿ ಬಂದಿದ್ದಕ್ಕೆ ಎಂದು ಅಕ್ಕನ ವಿವರಣೆ ಸಿಕ್ಕಿತು. ‘ಕನ್ನಡ ಮೇಷ್ಟರನ್ನು ಮದುವೆಯಾಗಲಾರೆ’ ಎಂದು ಬಾನು ಅತ್ತಿದ್ದಳು ಎಂದು ನಂತರ ತಿಳಿಯಿತು. ಆಕೆಗೆ ಇಂಜಿನಿಯರನ್ನು ಮದುವೆಯಾಗುವ ಆಸೆಯಿತ್ತಂತೆ. ಕನ್ನಡ ಮೇಷ್ಟರೆಂದರೆ ಕಚ್ಚೆಪಂಚೆ ಕರಿಟೋಪಿ ಕೋಟು ಧರಿಸಿ ಹುಡುಗರ ಗೇಲಿಗೆ ಒಳಗಾಗುತ್ತ ಹಳಗನ್ನಡ ಪಾಠ ಮಾಡುವ ಸಿನಿಮಾ ದೃಶ್ಯ ಅವಳ ತಲೆಯಲ್ಲಿದ್ದಿರಬೇಕು. ನನ್ನನ್ನು ಕಂಡ ಮೇಲೆ ‘ಆಗಬಹುದು, ಪರವಾಗಿಲ್ಲ’ ಎಂದು ಸಮ್ಮತಿಸಿದಳು. ಇದು ನಾನೊಬ್ಬ ಜಗದೇಕವೀರ ಎಂಬ ನನ್ನ ಅಹಮಿಕೆಯನ್ನು ಮೊಟಕಿದಂತಾಯಿತು. ಪರಸ್ಪರ ಮುಖ ನೋಡಿದೆವು. ಮಾತುಕತೆ ಸಾಧ್ಯವಾಗಲಿಲ್ಲ. ಮಹೋನ್ನತ ಜೀವನ ಆದರ್ಶಗಳನ್ನು ಭಾವೀ ಪತ್ನಿಗೆ ಮನವರಿಕೆ ಮಾಡಿಕೊಡುವ ಕೆಲಸವೊಂದು ಬಾಕಿ ಉಳಿದುಬಿಟ್ಟಿತು. ಮದುವೆಗೆ ಇನ್ನೊಂದು ತಿಂಗಳು ಉಳಿದಿತ್ತು.
ಬಾನುವನ್ನು ಭೇಟಿ ಮಾಡಲು ಅವಳು ವಾಸವಾಗಿದ್ದ ಅವರಣ್ಣನ ಮನೆಗೆ ಗೆಳೆಯನ ಜತೆ ಹೋದೆ. ಊಟೋಪಚಾರ ಚೆನ್ನಾಗಿ ನಡೆಯಿತು. ಅತಿಥಿಯ ಮನರಂಜನೆಗೆ ಟೇಪ್‌ರೆಕಾರ್ಡಿನಲ್ಲಿ ಮುಖೇಶನ ಹಾಡುಗಳನ್ನು ಹಾಕಲಾಗಿತ್ತು. ನಾವು ಹೋಗುವ ಹೊತ್ತಿಗೆ ‘ಜಬ್ ದಿಲ್‌ಹೀ ಟೂಟ್ ಗಯಾ, ಹಂ ಜೀಕೆ ಕ್ಯಾಕರೇಂಗೆ?’ ಹಾಡು ನಡೆಯುತ್ತಿತ್ತು. ಹೊರಡುವ ಮುನ್ನ ‘ಬಾನು ಜತೆ ಮಾತಾಡಬೇಕಿತ್ತು. ವಾಕಿಂಗ್ ಹೋಗಿಬರುತ್ತೇವೆ’ ಎಂದೆ. ಬೇಡಿಕೆ ಅನಿರೀಕ್ಷಿತವಾಗಿತ್ತು. ಈತ ಅಪಹರಿಸಿಕೊಂಡು ಹೋಗಬಹುದು ಎಂದು ತರ್ಕಿಸಿದರೊ ಏನೊ, ‘ಸಾಧ್ಯವಿಲ್ಲ’ ಎಂದು ಕಡ್ಡಿಮುರಿದರು. ‘ನಾವಿಬ್ಬರೂ ಮಾತಾಡಲು ಅವಕಾಶವಾದರೂ ಬೇಡವೇ?’ ಎಂದೆ. ಒಪ್ಪಿದರು. ನಾನಿದ್ದ ಕಡೆ ಬಾನು ಬಂದಳು. ಬರುತ್ತ ಅಣ್ಣನ ಪುಟ್ಟಮಗಳನ್ನು ಬಾಡಿ ಗಾರ್ಡಾಗಿ ಕರೆತಂದಿದ್ದಳು. ಕಬಾಬ್ ಮೆ ಹಡ್ಡಿ! ನನಗೆ ಭಯಂಕರ ಕೋಪ ನಿರಾಶೆ ಬಂದಿತು. ಜೀವನದ ಮಹೋನ್ನತ ಉದ್ದೇಶಗಳನ್ನೂ ಸರಳ ಮದುವೆಯ ಆಸೆಯನ್ನೂ ಸಾಮಾಜಿಕ ಕಾರ್ಯಕರ್ತನಾಗುವ ಹಂಬಲವನ್ನೂ ಸಾಹಿತ್ಯ ಸಂಗೀತಗಳ ಆಸಕ್ತಿಯನ್ನೂ ಹಂಚಿಕೊಳ್ಳಬೇಕು; ಎಲ್ಲರಂಥವನಲ್ಲ ನನಗಂಡ ಎಂದು ಮನದಟ್ಟು ಮಾಡಬೇಕು ಎಂದು ಹಾಕಿಕೊಂಡಿದ್ದ ಹಂಚಿಕೆಯೆಲ್ಲ ವ್ಯರ್ಥವಾಯಿತು. ಭಾಷಣಕ್ಕೆ ಹಾಕಿಕೊಂಡಿದ್ದ ಪಾಯಿಂಟುಗಳೆಲ್ಲ ಮರೆತುಹೋದವು. ಮನೆಯ ಸದಸ್ಯರು ಗ್ಯಾಸ್‌ಚೇಂಬರಿಗೆ ಕಳಿಸಿಕೊಟ್ಟಂತೆ ನಿಶ್ಶಬ್ದವಾಗಿ ಕಾವಲಿಯ ಮೇಲೆ ನಿಂತು ಹೊರಗೆ ಕಾದಿದ್ದರು. ಬಾನು ಚಿರತೆ ಗುಹೆಯಿಂದ ಯಾವಾಗ ಹೊರಹೋದೇನೊ ಎಂಬಂತೆ ಚಡಪಡಿಸುತ್ತಿದ್ದಳು. ಜೀವನಸಂಗಾತಿಗಳು ಭಾವನೆ ಹಂಚಿಕೊಳ್ಳಲು ಬೇಕಾದ ಏಕಾಂತವನ್ನೇ ಕೊಲ್ಲುವ ಘೋರ ಮೌನ. ‘ನಾನು ಒಪ್ಪಿಗೆಯೇ?’ ಎಂದೆ. ಮಾತಿಲ್ಲದೆ ತಗ್ಗಿದ ಮುಖದಲ್ಲಿ ಕಣ್ಣನ್ನು ಮಾತ್ರ ಮೇಲೆತ್ತಿ ನೋಡುತ್ತ ತಲೆಯಾಡಿಸಿದಳು. ಅದು ಒಪ್ಪಿಗೆಯೊ ನಿರಾಕರಣೆಯೊ ತಿಳಿಯಲಿಲ್ಲ. ವಿವಾಹಪೂರ್ವ ಭೇಟಿಯು ಸಿನಿಮಾಗಳಲ್ಲಿ ನಡೆಯುವಂತೆ ಯಾವ ರೋಮಾಂಚಕ ಘಟನೆಯೂ ಇಲ್ಲದೆ ಮುಗಿದು–ಹೋಯಿತು. ಬಾಡಿ ಗಾರ್ಡಾಗಿ ಬಂದಿದ್ದ ಹುಡುಗಿಗೆ (ಈಗ ಈಕೆ ವಿದೇಶದಲ್ಲಿ ವೈದ್ಯಕೀಯ ಅಧ್ಯಾಪಕಿಯಾಗಿದ್ದಾಳೆ) ‘ಪ್ಯಾರ್ ಕ ದುಶ್ಮನ್’ ಎಂದು ನಾಮಕರಣ ಮಾಡಿದೆ. ಅಂದಕಾಲತ್ತಿಲೆ ಪ್ರೇಮ–ವಿವಾಹವಾದ ಅಪ್ಪ–ಅಮ್ಮನ ಬಗ್ಗೆ ಅಸೂಯೆ ಮೂಡಿತು. ಇದಾದ ತಿಂಗಳಲ್ಲಿ ಮದುವೆ ಮುಗಿಯಿತು. ಶಿವಮೊಗ್ಗೆ ನಗರದಲ್ಲಿ ಹೊಸಬಾಳು ಆರಂಭವಾಯಿತು. ಜೂನ್ ಮೊದಲ ವಾರ. ಕಾದನೆಲಕ್ಕೆ ತಂಪೆರೆವ ಮಳೆ, ಬೆದರಿಸುವ ಗುಡುಗು, ಝಳಪಿಸುವ ಸಿಡಿಲು, ಕಣ್ಮಿಟುಕಿಸುವ ಮಿಂಚು. ಬಾಳಿನಲ್ಲಿ ಪ್ರೇಮದ ಸುಂದರವಾದ ಗಳಿಗೆಗಳೂ, ಅಭಿರುಚಿ ಆಲೋಚನೆಗಳ ಸಂಘರ್ಷಗಳೂ ಒಟ್ಟಿಗೆ ಶುರುವಾದವು. ಈಗಲೂ ಜೂನ್ ಮೊದಲ ವಾರ ಬಂದರೆ ಹವಾಮಾನ ಬದಲಿನಿಂದ ನನಗೆ ನೆಗಡಿ ಜ್ವರ ತಪ್ಪಿದ್ದಲ್ಲ.
ಮೈಸೂರು ನಗರದ ಇರ್ವಿನ್ ರಸ್ತೆಯಲ್ಲಿ ಸಾಲು-ಸಾಲಾಗಿ ಫರ್ನಿಚರ್ಸ್ ಅಂಗಡಿಯವರು ತಮ್ಮ ಅಂಗಡಿಯ ಫರ್ನಿಚರ್ಸ್‌ಗಳನ್ನು ಫುಟ್‌ಪಾತ್‌ಗಳ ಮೇಲೆ ಜೋಡಿಸಿರುವುದರಿಂದ ಪಾದಚಾರಿಗಳಿಗೆ ತೀವ್ರ…
ನವೀನ್ ಡಿಸೋಜ ಕೆಲವೆಡೆ ಸ್ಪಿಂಕ್ಲರ್ ಮೊರೆ ಹೋದ ಕೃಷಿಕರು; ಮಳೆಯ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ಕಡಬೂರು ಗ್ರಾಮದಲ್ಲಿ ಫೆ.೨೬ ಮತ್ತು ೨೭ರಂದು ನೂತನವಾಗಿ ನಿರ್ಮಾಣವಾಗಿರುವ ಶಿವ ಮತ್ತು ಗಣೇಶ ದೇವಾಲಯದ…
ಮಂಜು ಕೋಟೆ ಕೋಟೆ: ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸಾರ್ವಜನಿಕರ ಆಕ್ರೋಶ ಎಚ್.ಡಿ.ಕೋಟೆ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಲಕ್ಷಾಂತರ ರೂ.…
ರಂಗಕಲೆಯ ಜೀವಂತಿಕೆಯನ್ನು ಕಾಪಾಡುವ ಹೊಣೆ ವಿಶಾಲ ಸಮಾಜದ ಮೇಲಿದೆ. ನಾ.ದಿವಾಕರ ವರ್ತಮಾನದ ಸಂದರ್ಭದಲ್ಲಿ ನಮ್ಮ ಸಮಾಜ ಎದುರಿಸುತ್ತಿರುವ ಜಟಿಲ ಸಮಸ್ಯೆಗಳನ್ನು…
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ‘ಧರ್ಮ ಯುದ್ಧ’ ಸಾರಿರುವ ಆದಿಗುರು ಶಂಕರಾಚಾರ್ಯರೇ ಸ್ಥಾಪನೆ ಮಾಡಿದ ಜ್ಯೋತಿರ್ ಪೀಠದ…