ನಾನು ಸಹ್ಯಾದ್ರಿ ಕಾಲೇಜಿಗೆ ದುಡುಕಿನಲ್ಲಿ ರಾಜೀನಾಮೆ ಕೊಟ್ಟು ಖಾಸಗಿ ಕಾಲೇಜಿಗೆ ಸೇರಿಕೊಂಡೆ. ವಿದ್ಯಾರ್ಥಿಗಳು ಭರಪೂರ ಪ್ರೀತಿ ಕೊಟ್ಟರು. ಪ್ರತಿಷ್ಠಿತ ಸಂಸ್ಥೆ. ಸಕಲ ಸೌಲಭ್ಯಗಳಿದ್ದವು. ಆದರೆ ಸೀಮಿತ ಪಠ್ಯ, ಪಾಠ, ಪುನರುಕ್ತಿ, ಮೌಲ್ಯಮಾಪನದ ಯಾಂತ್ರಿಕ ಕೆಲಸ, ಜಡತೆ ಹುಟ್ಟಿಸಲಾರಂಭಿಸಿದವು. ಈ ಜಾಡಿನಲ್ಲಿ ದೂರ ನಡೆಯಲಾರೆ ಅನಿಸಿ ಒಳಜೀವ ಚಡಪಡಿಸುತ್ತಿತ್ತು. ಆಗ ನನ್ನ ಸಾಹಿತ್ಯ ವಿಮರ್ಶೆ ಮತ್ತು ವೈಚಾರಿಕ ಚಿಂತನೆಯ ಬರೆಹಗಳು ‘ಸಂಕ್ರಮಣ’ದಲ್ಲಿ ಪ್ರಕಟವಾಗುತ್ತಿದ್ದವು. ‘ಪಾವಿತ್ರ್ಯ ನಾಶವೂ ಪ್ರತಿಸಂಸ್ಕ ತಿ ನಿರ್ಮಾಣವೂ’ ಲೇಖನ ವಾಗ್ವಾದ ಎಬ್ಬಿಸಿತ್ತು. ಇದೇ ಹೊತ್ತಲ್ಲಿ ಕಾಳೇಗೌಡ ನಾಗವಾರ ಅವರು, ಆಗಷ್ಟೆ ಸ್ಥಾಪನೆಯಾಗಿದ್ದ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಸೇರಬೇಕೆಂದು ಬಯಸಿದರು. ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯಗಳಿಂದ ಬಂದವರ ಬಗ್ಗೆ ಕಾಳಜಿ ವಹಿಸುವ ಅವರು ‘ಕಂಬಾರ್ರೇ, ಆ ಹುಡುಗನ್ನ ಕರಕೊಳ್ಳಿ. ಅವನೂ ಕಮ್ಮಾರನ ಮಗ. ಕಷ್ಟಪಟ್ಟು ಕೆಲಸ ಮಾಡ್ತಾನೆ’ ಎಂದು ಹೇಳಿರಬೇಕು. ಕಂಬಾರರು ‘ಅವನೇನು ಬರೆದಿದ್ದಾನೆ’ ಎನ್ನಲು ‘ಸಂಕ್ರಮಣ’ದ ಲೇಖನ ಕಳುಹಿಸಿಕೊಟ್ಟಿದ್ದರು. ತಾರು ಮಾಡಿ ಕರೆಸಿಕೊಂಡ ಕಂಬಾರರು ಹೇಳಿದರು: ‘ನಿನ್ನ ಲೇಖನ ಓದಿದೆ. ನಿನಗೆ ಏನೋ ಹೊಸತನ್ನು ಹೇಳಬೇಕು ಅಂತಿದೆ, ಬಾ’. ಕೆಲವು ದಿನಗಳಲ್ಲೇ ನೇಮಕಾತಿ ಆದೇಶ ಬಂದಿತು. ಬಡಬಡ ಕಾಲೇಜಿಗೆ ರಾಜೀನಾಮೆ ಕೊಟ್ಟವನೆ ಹಂಪಿಗೆ ಹೋದೆ.
ಶಿವಮೊಗ್ಗದಿಂದ ಹೊಸಪೇಟೆಗೆ 35 ರೂಪಾಯಿ ಛಾರ್ಜು. ತುಂಗಭದ್ರೆಯಲ್ಲಿ ಕೈಕಾಲು, ಮುಖ ತೊಳೆದು, ಊರಮ್ಮನ ತಟ್ಟಿ ಹೋಟೆಲಿನಲ್ಲಿ ವಗ್ಗಾಣಿ ಮಿರ್ಚಿ ತಿಂದು, ವಿರೂಪಾಕ್ಷ ಗುಡಿಯ ಎದುರು ಮಂಟಪಗಳಲ್ಲಿದ್ದ ಕಚೇರಿಗೆ ಹೋಗಿ ವರದಿ ಮಾಡಿಕೊಂಡೆ.
ಕೆ.ವಿ.ನಾರಾಯಣ, ಪುರುಷೋತ್ತಮ ಬಿಳಿಮಲೆ ಈ ಮೊದಲೇ ಸೇರಿದ್ದರು. ಬಳಿಕ ನಾನು, ಬೋರಲಿಂಗಯ್ಯ, ಕರೀಗೌಡ ಬೀಚನಹಳ್ಳಿ, ಮಲ್ಲೇಪುರಂ, ಲಕ್ಷ ಣ ತೆಲಗಾವಿ; ತದನಂತರ ನಾಗಭೂಷಣಸ್ವಾಮಿ, ಎಚ್.ಎಸ್.ರಾಘವೇಂದ್ರರಾವ್, ಕಿರಂ, ಟಿ.ಎಸ್.ಸತ್ಯನಾಥ, ಶಿವರಾಮ ಪಡಿಕ್ಕಲ್, ಎಸ್.ಎಸ್.ಹಿರೇಮಠ, ಎಚ್.ಎಸ್. ಶ್ರೀಮತಿ ಕೂಡಿದೆವು. ಇಡೀ ಗುಂಪಿನಲ್ಲಿ ಚಿಕ್ಕವನು ನಾನು. ಅಧ್ಯಾಪಕರು, ನೌಕರರು, ಸಂಶೋಧನ ವಿದ್ಯಾರ್ಥಿಗಳು ನಾಡಿನ ದಶದಿಕ್ಕುಗಳಿಂದ ಬಂದವರು. ಭೌಗೋಳಿಕವಾಗಿ ಕರ್ನಾಟಕದ ಮಧ್ಯಬಿಂದುವಿನಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ, ಸಾಂಸ್ಕೃತಿಕ ವಾಗಿಯೂ ನಾಡಿನ ಎಲ್ಲ ಪ್ರದೇಶಗಳನ್ನು ಒಳಗೊಳ್ಳುವ ಕೇಂದ್ರವಾಗಲಿತ್ತು. ನನಗೆ ಸಂಶೋಧನೆಗಾಗಿ ನಾಡನ್ನು ತಿರುಗಲು ಅಪರಿಮಿತ ಸ್ವಾತಂತ್ರ್ಯ ಸಿಕ್ಕಿತು.
ನಾನು ಉತ್ತರ ಕರ್ನಾಟಕವನ್ನು ಸರಿಯಾಗಿ ನೋಡಿರಲಿಲ್ಲ. ಧಾರವಾಡವನ್ನು ಕಾಣಬೇಕೆಂಬ ಬಯಕೆಯಂತೂ ಅದಮ್ಯವಾಗಿತ್ತು. ಕರ್ನಾಟಕ ವಿದ್ಯಾವರ್ಧಕ ಸಂಘದ ವತಿಯಿಂದ ಕುವೆಂಪು ಬಗ್ಗೆ ಉಪನ್ಯಾಸ ಕೊಡಲು ಕುರ್ತಕೋಟಿಯವರು ಪತ್ರ ಬರೆದರು. ಸಂತೋಷದಿಂದ ಒಪ್ಪಿದೆ. ಹಂಪಿಯಿಂದ ಧಾರವಾಡಕ್ಕೆ ಪಯಣಿಸಿದೆ. ಅದೊಂದು ರೋಮಾಂಚಕ ಯಾನ. ಹಾದಿಯಲ್ಲಿ ಪ್ರಖ್ಯಾತ ಜಾತ್ರೆಯ ಹುಲಗಿ, ಅಶೋಕ ಶಾಸನವಿರುವ ಕೊಪ್ಪಳ, ತಾರಾಭಗವತಿಯ ಲಕ್ಕುಂಡಿ, ಕುಮಾರವ್ಯಾಸನ ಗದಗ; ಅಲ್ಲಿಗೆ ಸಮೀಪದ ಶರೀಫರ ಶಿಶುನಾಳ, ಪ್ರಭುಲಿಂಗಲೀಲೆಯ ಚಾಮರಸನ ಊರು. ಮುಂದೆ ಪಂಪನ ಅಣ್ಣಿಗೇರಿ; ತದನಂತರ ಸಿದ್ಧಾರೂಢ ಗಂಗೂಬಾಯಿಯರ ಹುಬ್ಬಳ್ಳಿ. ಕಡೆಗೆ ಬೇಂದ್ರೆ, ಪುಣೇಕರ, ಮಲ್ಲಿಕಾರ್ಜುನ ಮನ್ಸೂರ, ಶಂಭಾ ಜೋಶಿಯವರ ಧಾರವಾಡ. ನನ್ನ ಉಪನ್ಯಾಸವಿದ್ದದ್ದು ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ. ರಾ.ಹ.ದೇಶಪಾಂಡೆಯವರು ಸ್ಥಾಪಿಸಿದ ಚಾಮರಾಜ ಒಡೆಯರ್ ಅವರು ಉದ್ಘಾಟಿಸಿದ ಸಂಸ್ಥೆ. ಇಲ್ಲಿ ಬಿ.ಎಂ.ಶ್ರೀಕಂಠಯ್ಯನವರು ‘ಕನ್ನಡ ಮಾತು ತಲೆಯೆತ್ತುವ ಬಗೆ’ ಎಂಬ ಚಾರಿತ್ರಿಕ ಮಹತ್ವದ ಉಪನ್ಯಾಸ ನೀಡಿದ್ದರು. ಇಲ್ಲಿಂದಾಚೆ ಉತ್ತರ ಕರ್ನಾಟಕವು ನನ್ನ ತಿರುಗಾಟದ ಆಡುಂಬೊಲ, ಸಂಶೋಧನೆಗೆ ಕರ್ಮಭೂಮಿ ಆಯಿತು.
ಸ್ಥಾಪಿತ ವಿಶ್ವವಿದ್ಯಾಲಯಕ್ಕೆ ಹೋಗಿ ನೌಕರನಾಗಿ ಸೇರುವುದಕ್ಕೂ ಶುರುವಿನಿಂದ ಕಟ್ಟಲಾಗುವ ಸಂಸ್ಥೆಯಲ್ಲಿ ಸೇರಿ ದುಡಿಯುವುದಕ್ಕೂ ಫರಕಿದೆ. ಗಿಡ ನೆಟ್ಟು ಅದು ಬೆಳೆವ ಫಲಿಸುವ ಸೊರಗುವ ನಾನಾ ಅವಸ್ಥೆಗಳಿಗೆ ಸಾಕ್ಷಿಯಾಗುವ ಸುಖದುಃಖಗಳೇ ಬೇರೆ. ವಿರೂಪಾಕ್ಷ ಗುಡಿಯ ಎದುರಿನ ರಥಬೀದಿ ತುದಿಗಿರುವ ಮಂಟಪಗಳಲ್ಲಿ ಆರಂಭಗೊಂಡ ವಿವಿಯಲ್ಲಿ, ಕೂರಲು ಸಾಕಷ್ಟು ಕುರ್ಚಿ-ಮೇಜುಗಳಿರಲಿಲ್ಲ. ಆದರೆ ನಾವಿದ್ದ ಮಂಟಪಗಳು ಸುಂದರ ಪರಿಸರದಲ್ಲಿದ್ದವು. ಮಂಟಪದ ಪಕ್ಕ ಎದುರು ಬಸವನ ಮೂರ್ತಿ; ಅದರಾಚೆ ಆಗಸವನ್ನು ಆವರಿಸಿದ್ದ ಮತಂಗ. ಬೆನ್ನಹಿಂದೆ ಇಪ್ಪತ್ತು ಮಾರು ದೂರದಲ್ಲಿ ಹರಿವ ತುಂಗಭದ್ರೆ. ವಿರೂಪಾಕ್ಷ ಬಜಾರಿನ ತುದಿಯಲ್ಲಿರುವ ಎದುರುಬಸವನ ಬದಿಯಿಂದ ದಿಬ್ಬದಂತಹ ಪುಟ್ಟಬೆಟ್ಟವನ್ನು ಹತ್ತಿಳಿದರೆ ಸೂಳೆಬಜಾರು. ಅದನ್ನು ಬಳಸಿಕೊಂಡು ಬಂದರೆ ಕೋದಂಡರಾಮ ಗುಡಿ. ಅದರೆದುರು ಪೂರ್ವವಾಹಿನಿಯಾದ ಹೊಳೆ ಉತ್ತರಕ್ಕೆ ತಿರುವಿಕೊಂಡು ನಿರ್ಮಿಸಿರುವ ಚಕ್ರತೀರ್ಥ.
ಈ ತಿರುಗಣಿ ಮಡುವನ್ನು ಶತಮಾನಗಳಿಂದ ಗಮನಿಸುತ್ತ, ಅದರ ನೀರುಗನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುತ್ತ ಧಿಮಂತ ನಿಂತ ಋಷ್ಯಮೂಕ. ಬಂಡೆಗಳ ನಡುವಿಂದ ಜುಳುಜುಳಿಸುವ ಹೊಳೆಬದಿಯಲ್ಲೇ ನಡೆದು ಪಡುವಣಕ್ಕೆ ಹೊರಳಿ, ಹೊಯ್ದಾಡುವ ಎಲೆಗಳ ಬಾಳೆತೋಟದ ಮೂಲಕ ಹೊರಬಂದರೆ, ನಾವಿದ್ದ ವಿರೂಪಾಕ್ಷ ಬಜಾರಿನ ಮಂಟಪಗಳು. ಈ ಬಸವ, ಬೆಟ್ಟ, ಬಂಡೆ, ನೀರು, ತೋಟಗಳ ವರ್ತುಲವನ್ನು ಅದೆಷ್ಟು ಸಲ ಪ್ರದಕ್ಷಿಣಿಸಿರುವೆನೊ ಲೆಕ್ಕವಿಲ್ಲ.
ಪ್ರತಿದಿನ ಬೆಳಿಗ್ಗೆ ಕುಲಪತಿಯವರ ಅಧ್ಯಕ್ಷತೆಯಲ್ಲಿ ಅಧ್ಯಾಪಕರ ಮೀಟಿಂಗ್ ಇರುತ್ತಿತ್ತು. ಇದಕ್ಕೆ ಒಡ್ಡೋಲಗ ಎಂದು ಹೆಸರು ಕೊಟ್ಟಿದ್ದೆವು. ಕುಲಪತಿಗಳು ಒಮ್ಮೆ ಕೃಷ್ಣದೇವರಾಯನು ಆಸ್ಥಾನದ ಅಷ್ಟದಿಗ್ಗಜಗಳನ್ನು ನೋಡುವಂತೆ ಒಮ್ಮೆ ದಿಟ್ಟಿ ಹಾಯಿಸುವರು. ಬಳಿಕ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಬೆಳವಣಿಗೆ ಸಮಸ್ಯೆ ಹೊಳಹು ಯೋಜನೆ ಮಂಡಿಸುವರು. ಗಂಭೀರ ಸಮಾಲೋಚನೆ ನಡೆಯುವುದು. ಇದು ಮುಗಿದೊಡನೆ ಬಯಲಾಟದಲ್ಲಿ ಆಸ್ಥಾನ ದೃಶ್ಯವಾದ ಬಳಿಕ ವಿದೂಷಕ ಜೋಡಿಯ ದೃಶ್ಯ ಬರುವಂತೆ, ಬಳಿಕ ದಿಟ-ಹುಸಿಗಳ ಗಡಿಯನ್ನು ಅಳಿಸಿಕೊಂಡ ಉತ್ಪ್ರೇಕ್ಷಿತ ಕಲ್ಪನೆಯಲ್ಲಿ ಸಾಹಿತ್ಯ ರಂಗಭೂಮಿ ಲೋಕದ ಘಟನೆಗಳ ಪ್ರಸ್ತಾಪ ಶುರು. ಯಾವುದೊ ವಿಶ್ವವಿದ್ಯಾಲಯದಲ್ಲಿ ಕುಲಪತಿಯವರನ್ನು ಕಂಗೆಡಿಸಿದ ಮಾಲಿಗಳ ಮುಷ್ಕರದ ನವೀನ ವಿಧಾನ, ಪ್ರೊ.ಭೂಸನೂರಮಠರ ವಿಶಿಷ್ಟ ಪಠ್ಯಕ್ರಮ, ಗೋಕಾಕ ಸೀಮೆಯಲ್ಲಿ ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಬುದ್ಧಿ ಕಲಿಸಿದ ವಿಧಾನ, ಬಯಲಾಟದಲ್ಲಿ ಹನುಮನು ಮೇಲಿಂದ ಹಾರಿ ಕೆಳಗಿಳಿಯುವ ಭರದಲ್ಲಿ ಬಿದ್ದ ಪ್ರಸಂಗ-ಮುಂತಾದವು ಪ್ರದರ್ಶನ ಕೊಟ್ಟು ಹೋಗುತ್ತಿದ್ದವು.
ಹೀಗಿರುತ್ತ ನಮ್ಮ ಉತ್ಸಾಹ ಹುಮ್ಮಸ್ಸನ್ನು ಕಿತ್ತುಕೊಳ್ಳುವಂತೆ ಎಂದೂ ಇಲ್ಲದ ಭೀಕರ ಮಳೆ ಸುರಿಯಿತು. ತುಂಗಭದ್ರೆಗೆ ಕಂಡುಕೇಳರಿಯದ ನೆರೆ. ನಾವಿದ್ದ ಮಂಟಪಗಳ ಸಾಲೇ ಮುಳುಗಿತು. ಅವುಗಳ ಚಾವಣಿ ಮೇಲಿನಿಂದ ತೇಲುವ ಒಣಗಿದ ಬಾಳೆಲೆಯಂತೆ ತೋರುತಿತ್ತು. ವಿರೂಪಾಕ್ಷ ಗುಡಿಯಿಂದ ತೆಪ್ಪ ಹಾಕಿಕೊಂಡು ನಾವಿದ್ದ ಜಾಗಗಳಿಗೆ ಹೋಗಬೇಕಾಯಿತು. ‘ವಿಶ್ವವಿದ್ಯಾನಿಲಯ ಮುಳುಗಿತು’ ಎಂದು ಪತ್ರಿಕೆಗಳು ವರದಿಸಿದ್ದವು. ಕಂಬಾರರು ‘ಮುಳುಗಿದ್ದು ಮಂಟಪ, ವಿಶ್ವವಿದ್ಯಾನಿಲಯವಲ್ಲ’ ಎಂದು ತಿದ್ದುಪಡಿ ಮಾಡಿದರು. ನಾವೆಲ್ಲ ತೊಯ್ದ ಪುಸ್ತಕಗಳನ್ನು ಹಪ್ಪಳದಂತೆ ಒಣಗಿಸಿದೆವು. ಕೆಲವು ಲೇಖಕರು ತಾವು ಬರೆದ ಪುರಾಣ ಮಹಾಕಾವ್ಯಗಳ ಹಸ್ತಪ್ರತಿಗಳಿಗೆ ಪ್ರಕಾಶಕರು ಸಿಗದೆ, ಪ್ರಕಟಣೆಯ ಕೃಪೆಗೆಂದು ವಿಶ್ವವಿದ್ಯಾನಿಲಯಕ್ಕೆ ಹೊತ್ತು ಹಾಕಿದ್ದರು. ಅವೆಲ್ಲ ನೀರುಪಾಲಾಗಿದ್ದವು. ಪ್ರಕಟಿಸಬೇಕಾಗುತ್ತದೆ ಎಂದು ವಿಶ್ವವಿದ್ಯಾಲಯದವರೇ ನೀರಿಗೆಸೆದರು ಎಂದು ಅವರು ಆಡಿಕೊಂಡರು. ಅದರಲ್ಲಿ ಹುರುಳಿರಲಿಲ್ಲ. ಆದರೆ ಅವೆಲ್ಲ ಪ್ರಕಟವಾಗಿದ್ದರೆ ವಿಶ್ವವಿದ್ಯಾಲಯ ಬೇರೆ ಅರ್ಥದಲ್ಲಿ ಮುಳುಗುತ್ತಿದ್ದದ್ದು ದಿಟ. ನೆರೆಯ ನೀರಿಳಿಯಿತು. ಆದರೂ ಡ್ಯಾಮಿನವರು ನೀರು ಬಿಟ್ಟಾಗಲೆಲ್ಲ ನಾವು ಅಧ್ಯಾಪಕರು, ಬೆಳೆಕಾಯಲು ಮಂಚಿಕೆಯಲ್ಲಿ ಕೂರುವ ರೈತರಂತೆ, ಮಂಟಪಗಳ ಮುಂದೆ ಬೆಂಕಿ ಹಾಕಿಕೊಂಡು ನಡುರಾತ್ರಿ ತನಕ ಕೂತಿರುತ್ತಿದ್ದೆವು. ಹಿಂದೆ ಘೋರಕತ್ತಲು. ಕಣ್ಣಿಗೆ ಕಾಣದೆಯೂ ತನ್ನ ಭೋರ್ಗರೆತದಿಂದ ತನ್ನ ಭೀಷಣ ಇರುವಿಕೆ ಮನಗಾಣಿಸುವ ತುಂಗಭದ್ರೆ.
ಕಾಮಲಾಪುರದ ಬಳಿ 650 ಎಕರೆಯ ವಿಶಾಲ ಭೂಮಿಯಲ್ಲಿ ಹೊಸ ವಿಶ್ವವಿದ್ಯಾನಿಲಯ ಆರಂಭವಾಯಿತು. ಮಂಟಪಗಳನ್ನು ತೊರೆದವು. ಆದರೆ ಅವುಗಳ ನೆನಪು ತೊರೆಯಲಿಲ್ಲ. ಹಿಂದೆ ಈ ಮಂಟಪಗಳಲ್ಲಿ ವಿಜಯನಗರ ಕಾಲದ ವ್ಯಾಪಾರ ನಡೆಯುತ್ತಿತ್ತು. ಜಾತ್ರೆಗೆ ಬರುತ್ತಿದ್ದ ಯಾತ್ರಿಕರು ಇವುಗಳಲ್ಲಿ ವಸ್ತಿ ಮಾಡುತ್ತಿದ್ದರು. ನೂರು ವರ್ಷಗಳ ಹಿಂದೆ ‘ಪಂಪಾಯಾತ್ರೆ’ಗೆಂದು ಬಂದಿದ್ದ ಡಿವಿಜಿ, ವಿಸೀ ಇವುಗಳಲ್ಲಿ ಉಳಿದಿದ್ದರು. ನಾವು ಬಂದಾಗ ಬೀದಿ ವ್ಯಾಪಾರಿಗಳು, ರೈತರು, ದನಗಾಹಿಗಳು ಇವನ್ನೇ ಮನೆ ಮಾಡಿಕೊಂಡಿದ್ದರು. ಶಿವರಾತ್ರಿಯಂದು ಇವುಗಳಲ್ಲಿ ಹಳ್ಳಿಗಳಿಂದ ಬಂದ ಜನ ಕೂತು ತತ್ವಪದ ಹಾಡುತ್ತಿದ್ದರು. ಬಳಿಕ ಹಂಪಿಯ ಉತ್ಸವದಲ್ಲಿ ಇವು ಪುಸ್ತಕ ಮಳಿಗೆಗಳಾಗಿ ಬದಲಾದವು. ಬಳಿಕ ಇದ್ದ ಜನರನ್ನು ಒಕ್ಕಲೆಬ್ಬಿಸಿ ದುರಸ್ತಿಗೊಂಡು ಹಳೆಗಾಲದ ವೈಭವ ತೋರುವುದಕ್ಕೆಂದು ಖಾಲಿ ನಿಂತಿವೆ. ಹಂಪಿಯ ಮಂಟಪಗಳು ಬಹುರೂಪಿಗಳು. ಈಗಲೂ ಅಲ್ಲಿಗೆ ಹೋದರೆ ಸಾಲು ಮಂಟಪಗಳ ಬದಿ ನಡೆಯುತ್ತೇನೆ. ಅಲ್ಲೇ ಗೂಡಂಗಡಿ ಇಟ್ಟುಕೊಂಡಿರುವ ಊರಮ್ಮನೊಟ್ಟಿಗೆ ಮಾತಾಡುತ್ತೇನೆ. ಬಂದ ಹೊಸತರಲ್ಲಿ ನಮಗೆಲ್ಲ ಟೀ, ಕಾಫಿ, ತಿಂಡಿ ಕೊಟ್ಟು ಸಲಹಿದ ತಾಯಿ ಆಕೆ. ಅವಳಲ್ಲಿ ಎಳೆನೀರು ಕುಡಿದು ಅವಳ ಮಗ ಪಂಪನ ಸಂಸಾರ ಯೋಗಕ್ಷೇಮ ವಿಚಾರಿಸಿ ಮರಳುತ್ತೇನೆ. ಚಿತ್ತದೊಳಗೆ ಹೊಸಮಂಟಪವೊಂದು ಹುಟ್ಟುತ್ತದೆ.
ಪ್ರವಾಹದಲ್ಲಿ ಒದ್ದೆಯಾದ ಪುಸ್ತಕಗಳನ್ನು ಒಣಗಿಸುವಾಗ, ಬೈಂಡು ಮಾಡಿದ್ದ ಕ್ಯಾಲಿಕೊ ಹೊದಿಕೆಯ ಬಟ್ಟೆಗಳು ರಟ್ಟಿನಿಂದ ಕಳಚಿಬಿದ್ದವು. ಅವನ್ನೆಲ್ಲ ಹೆಕ್ಕಿತಂದು ಬಾನುಗೆ ಕೊಟ್ಟೆ. ಹಲವು ಬಣ್ಣದ ಅವನ್ನೆಲ್ಲ ಜೋಡಿಸಿ ಆಕೆ ಕೌದಿಯಂತಹ ಅಂಗವಸ್ತ್ರ ತಯಾರಿಸಿದಳು. ಅದು ಮಂಟಪಗಳ ಮತ್ತು ಪ್ರವಾಹದ ನೆನಪಾಗಿ, ವಿಶ್ವವಿದ್ಯಾನಿಲಯದ ಮೂಲಕ ಕರ್ನಾಟಕದ ತಿರುಗಾಟವು ನನಗಿತ್ತ ಬಹುರೂಪಿ ಅನುಭವ ಮತ್ತು ತಿಳಿವಳಿಕೆಯ ಸಂಕೇತವಾಗಿ ಇನ್ನೂ ಉಳಿದುಕೊಂಡಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…