ಎಡಿಟೋರಿಯಲ್

ಕೌಟುಂಬಿಕ ದೌರ್ಜನ್ಯದ ಸಂತ್ರಸ್ತರ ಭೀತಿ ನಿರಂತರ

ನಾ ದಿವಾಕರ 

ಕಳೆದ ನವೆಂಬರ್ ೨೫ರಂದು ಜಗತ್ತಿನಾದ್ಯಂತ ಮಹಿಳೆಯರ ವಿರುದ್ಧ ಎಲ್ಲ ಸ್ವರೂಪದ ದೌರ್ಜನ್ಯಗಳ ನಿರ್ಮೂಲನಾ ಅಂತರರಾಷ್ಟ್ರೀಯ ದಿನ ಆಚರಿಸಲಾಯಿತು. ಇದೇ ವೇಳೆ ಹೊಸದಿಲ್ಲಿಯಲ್ಲಿ ಓರ್ವ ಯುವ ಮಹಿಳೆಯ ಬರ್ಬರ ಹತ್ಯೆ ಮತ್ತು ಮೃತದೇಹವನ್ನು ತುಂಡರಿಸಿರುವ ಘಟನೆ ನಡೆಯಿತು. ಆಪ್ತ ಸಂಗಾತಿಯ ದೌರ್ಜನ್ಯ ವನ್ನೂ ಕೂಡ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣಾ ಕಾಯ್ದೆ ೨೦೦೫ರ ಅಡಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಚರ್ಚೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಆಕೆ ಅವನನ್ನು ಏಕೆ ಆಯ್ಕೆ ಮಾಡಿಕೊಂಡಳು? ಏಕೆ ಆತನನ್ನು ತೊರೆದು ಹೋಗಲಿಲ್ಲ? ಈ ಪ್ರಶ್ನೆಗಳ ನಡುವೆಯೇ, ನೆರವು ಬಯಸುವ ಆಕೆಯ ಪ್ರಯತ್ನಗಳ ಬಗ್ಗೆ ಸಾಕ್ಷ್ಯಾಧಾರಗಳು ದೊರೆಯುತ್ತಿರುವಂತೆಯೇ, ಈ ಪ್ರಯತ್ನಗಳು ಏಕೆ ಫಲ ನೀಡಿಲ್ಲ ಎಂಬ ಪ್ರಶ್ನೆಯೂ ನಮ್ಮನ್ನು ಕಾಡಬೇಕಿದೆ.

ಭಾರತದ ಕಾನೂನಿನ ಅಡಿ ಕೌಟುಂಬಿಕ ದೌರ್ಜನ್ಯ ಶಿಕ್ಷಾರ್ಹ ಅಪರಾಧ ವಾಗಿದೆ. ಇದನ್ನು ಮಾನವ ಹಕ್ಕು ಉಲ್ಲಂಘನೆ ಎಂದೇ ಪರಿಗಣಿಸಲಾಗುತ್ತದೆ. ಆದರೂ ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೫ (೨೦೧೯-೨೧) ಭಿನ್ನ ಚಿತ್ರಣವನ್ನೇ ನೀಡುತ್ತದೆ. ಈ ಸಮೀಕ್ಷೆಯನ್ನು ಗಮನಿಸಿದರೆ ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಿರಂತರವಾಗಿರುವ ಸಮಾಜದಲ್ಲೇ ನಾವಿದ್ದೇವೆ ಎನ್ನುವುದು ಸ್ಪಷ್ಟವಾಗುತ್ತದೆ. ಸಮೀಕ್ಷೆಯ ಅನು ಸಾರ ೧೮ ರಿಂದ ೪೯ರ ವಯೋಮಾನದ ಶೇ.೩೨ರಷ್ಟು ವಿವಾಹಿತ ಮಹಿಳೆಯರು ಭಾವನಾತ್ಮಕ, ದೈಹಿಕ, ಲೈಂಗಿಕ ದೌರ್ಜನ್ಯವನ್ನು ಅವರ ಸಂಗಾತಿಯಿಂದಲೇ ಅನುಭವಿಸಿದ್ದಾರೆ. ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಮಹಿಳೆಯರು ಹೆಚ್ಚಿನ ಪ್ರಮಾಣದ ಕೌಟುಂಬಿಕ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಈ ಸಮೀಕ್ಷೆಯಲ್ಲಿ, ಕುಟುಂಬದ ಇತರ ಸದಸ್ಯರಿಂದ ನಡೆಯುವ ದೌರ್ಜನ್ಯಗಳನ್ನು ದಾಖಲಿಸಿಲ್ಲ ಎನ್ನುವುದನ್ನೂ ಗಮನಿಸಬೇಕಿದೆ.

೧೭ ವರ್ಷಗಳ ಹಿಂದೆ ಪುರೋಗಾಮಿ ಲಕ್ಷಣದ  ಕಾಯ್ದೆಯನ್ನು ಜಾರಿಗೊಳಿಸಿದಾಗ ಒಂದು ಆಶಾಭಾವನೆ ಮೂಡಿತ್ತು. ನಾಗರಿಕ ಹಾಗೂ ಕ್ರಿಮಿನಲ್ ರಕ್ಷಣಾ ವ್ಯವಸ್ಥೆಯನ್ನು ಜಂಟಿಯಾಗಿ ಒದಗಿಸುವ ಮೂಲಕ ಮಹಿಳೆಯರಿಗೆ ಅವರ ಕುಟುಂಬಗಳಲ್ಲಿ ಮಾತ್ರವೇ ಅಲ್ಲದೆ ಗಂಡಂದಿರ ದೌರ್ಜನ್ಯದಿಂದಲೂ ರಕ್ಷಣೆ ನೀಡುವ ಭರವಸೆಯನ್ನು ಈ ಕಾಯ್ದೆ ಮೂಡಿಸಿತ್ತು. ಕಾಯ್ದೆಯ ಭರವಸೆಗಳು ಮತ್ತು ನಿಯಮಗಳು ಸಮರ್ಪಕ ವಾಗಿ ಅನುಷ್ಠಾನವಾಗದಿರುವುದು ಒಂದು ಕಾರಣವಾದರೆ, ದೇಶದ ಬಹು ಪಾಲು ಮಹಿಳೆಯರಿಗೆ ಈ ಕಾಯ್ದೆ ಅಲಭ್ಯವಾಗಿದೆ.

ದೇಶದಲ್ಲಿ ಮೂರನೇ ಒಂದರಷ್ಟು ಮಹಿಳೆಯರು ಕೌಟುಂಬಿಕ ದೌರ್ಜನ್ಯ ಕ್ಕೊಳಗಾಗುತ್ತಿದ್ದರೂ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-೫ (೨೦೧೯- ೨೧) ವರದಿ ಮಾಡಿರುವಂತೆ, ಕೇವಲ ಶೇ.೧೪ರಷ್ಟು ಸಂತ್ರಸ್ತ ಮಹಿಳೆಯರು ಮಾತ್ರ ನೆರವು ಕೋರಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ ಇನ್ನೂ ಕಡಿಮೆ ಇದೆ. ಕೌಟುಂಬಿಕ ದೌರ್ಜನ್ಯ ಒಂದು ಶಿಕ್ಷಾರ್ಹ ಅಪರಾಧ ಆಗಿರುವ ದೇಶದಲ್ಲಿ, ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವಂತಹ ಹಲವಾರು ಕಾಯ್ದೆ ಕಾನೂನುಗಳು ಜಾರಿಯಲ್ಲಿದ್ದಾಗಲೂ, ಕೌಟುಂಬಿಕ ದೌರ್ಜನ್ಯ ಕ್ಕೊಳಗಾದ ಸಂತ್ರಸ್ತ ಮಹಿಳೆಯರು ಏಕೆ ನೆರವು ಕೋರುತ್ತಿಲ್ಲ?

ಪ್ರಶ್ನೆಗಳು ಮತ್ತು ಪ್ರತಿಕ್ರಿಯೆಗಳು: ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಾವು ಕೈಗೊಂಡ ಸಂಶೋಧನೆಯಲ್ಲಿ, ಮಹಿಳೆ ಯರು ತಮ್ಮ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ಹಂಚಿಕೊಳ್ಳುವಾಗ, ವರದಿ ಮಾಡುವಾಗ, ದೂರು ದಾಖಲಿಸುವಾಗ ಅವರು ಎದುರಿಸುವ ನಿತ್ಯ ಜೀವನದ ವಾಸ್ತವಗಳು, ಅಡ್ಡಿ ಆತಂಕಗಳು, ಪೂರ್ವಗ್ರಹಗಳು ಮತ್ತು ಅಪಾರ ಭೀತಿಯ ವಾತಾವರಣ ಇವೆಲ್ಲವನ್ನೂ ದಾಖಲಿಸಿದ್ದೇವೆ. ತನ್ಮೂಲಕ ನೆರವು ಕೋರುವ ಪ್ರಕ್ರಿಯೆಯಲ್ಲಿರುವ ತೊಡಕುಗಳನ್ನೂ ಅರ್ಥಮಾಡಿ ಕೊಳ್ಳಲು ಸಾಧ್ಯವಾಗಿದೆ. ಕೆಲವು ಸರಳವಾದ, ಅರ್ಥಪೂರ್ಣ ಪ್ರಶ್ನೆಗಳನ್ನು ಸಂತ್ರಸ್ತ ಮಹಿಳೆಯರ ಮುಂದಿಡಲಾಗಿದೆ. ಉದಾಹರಣೆಗೆ, ನೀವೇಕೆ ಮೊದಲೇ ಸಂಬಂಧ ತೊರೆಯಲಿಲ್ಲ? ದೌರ್ಜನ್ಯದ ಬಗ್ಗೆ ಮೊದಲೇ ಇತರರಿಗೆ ಏಕೆ ತಿಳಿಸಲಿಲ್ಲ? ಇಂತಹ ಸರಳ ಪ್ರಶ್ನೆಗಳಿಗೆ ದೊರೆಯುವ ಉತ್ತರಗಳು ಸಂಕೀರ್ಣವಾಗಿದ್ದು ವೈರುಧ್ಯಗಳಿಂದಲೂ ಕೂಡಿರುತ್ತವೆ.

ಪರಿಸ್ಥಿತಿಗಳು ಬದಲಾಗುತ್ತವೆ, ತಮ್ಮ ಗಂಡಂದಿರ ವರ್ತನೆ ಬದಲಾವಣೆಯಾಗುತ್ತದೆ, ಅವರು ತಮ್ಮ ಮಾತುಗಳನ್ನು ಕೇಳಿಸಿಕೊಳ್ಳುತ್ತಾರೆ. ಇಂತಹ ವಿಶ್ವಾಸ ಮಹಿಳೆಯರಲ್ಲಿ ಕಾಣುತ್ತವೆ. ಕುತೂಹಲಕಾರಿ ಸಂಗತಿ ಎಂದರೇ ಮಹಿಳೆಯರು ಮತ್ತೊಬ್ಬರಿಗೆ ಹೊರೆಯಾಗಲು, ಅದರಲ್ಲೂ ಕುಟುಂಬಕ್ಕೆ ಹೊರೆಯಾಗಲು ಬಯಸುವುದಿಲ್ಲ. “ನನ್ನ ತಾಯಿಗೆ ಸಾಕಷ್ಟು ಚಿಂತೆಗಳಿವೆ. ಅವರದೇ ಆದ ಬದುಕು ಇದೆ. ಅವರ ಚಿಂತೆಗಳಿಗೆ ನನ್ನ ಚಿಂತೆಗಳನ್ನೂ ಸೇರಿಸಲು ನನಗೆ ಇಷ್ಟವಿಲ್ಲ” ಎಂದು ಹೇಳುವವರ ಸಂಖ್ಯೆ ಹೇರಳವಾಗಿದೆ. ಅವರು ಅನುಭವಿಸಿದಂತಹ ದೌರ್ಜನ್ಯದ ಸ್ವರೂಪವನ್ನು ಹೇಳಿಕೊಳ್ಳುವುದರ ಮೂಲಕ ತಾವು ತಮ್ಮ ಕುಟುಂಬದಲ್ಲಿ ಆತಂಕಗಳನ್ನು ಹೆಚ್ಚಿಸುತ್ತೇವೆ. ತಮ್ಮ ಕುಟುಂಬದ ಗೌರವಕ್ಕೆ ಚ್ಯುತಿ ತರುತ್ತೇವೆ, ನಾಚಿಕೆಗೀಡು ಮಾಡುತ್ತೇವೆ ಎಂದು ಯೋಚಿಸುವ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ.

ಶೈಕ್ಷಣಿಕ ಮಟ್ಟ, ಜಾತಿ, ವರ್ಗಗಳ ಎಲ್ಲೆ ಮೀರಿ ಈ ವಿದ್ಯಮಾನವನ್ನು ಗಮನಿಸಬಹುದು. ವಲಸೆ ಹೋಗುವ ಮಹಿಳೆಯರಿಗೆ, ಹಲವು ಸೋದರಿಯರನ್ನು ಹೊಂದಿರುವವರಿಗೆ, ಅನಾರೋಗ್ಯ ಪೀಡಿತ ಅಥವಾ ವಯಸ್ಸಾದ ಪೋಷಕರು ಇರುವ ಮಹಿಳೆಯರಿಗೆ ತಾವು ಎದುರಿಸುವ ದೌರ್ಜನ್ಯಗಳು ಎಷ್ಟೇ ಕ್ರೂರವಾಗಿದ್ದರೂ ಅದನ್ನು ನಿಭಾಯಿಸುವುದು, ನಿರ್ವಹಿಸುವುದು ತಮ್ಮ ವ್ಯಕ್ತಿಗತ ಜವಾಬ್ದಾರಿ ಎಂದೇ ಭಾಸವಾಗುತ್ತದೆ.

ನೆರವು ಕೋರುವ ಬಗ್ಗೆ : ನೆರವು ಕೋರುವ ಪ್ರಶ್ನೆ ಎದುರಾದಾಗ ನಮಗೆ ಎರಡು ವಿಧದ ಮಹಿಳೆಯರು ಕಂಡುಬಂದಿದ್ದಾರೆ. ದೌರ್ಜನ್ಯ ನಡೆದ ಆರು ತಿಂಗಳ ಒಳಗೆ ತಮ್ಮ ಅನುಭವವನ್ನು ಹಂಚಿಕೊಳ್ಳುವವರು ಮತ್ತು ಘಟನೆ ನಡೆದ ಐದಾರು ವರ್ಷಗಳ ನಂತರ ಹಂಚಿಕೊಳ್ಳುವವರು. ಮೊದಲನೆಯ ಗುಂಪಿಗೆ ಸೇರಿದ ಮಹಿಳೆಯರು ಸಾಮಾನ್ಯವಾಗಿ ತಮ್ಮ ಪೋಷಕರ ಮೊರೆ ಹೋಗುತ್ತಾರೆ. ಆದರೆ ಇಂತಹ ಪೋಷಕರು ಕುಟುಂಬದ ವಾತಾವರಣವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ, ತಮ್ಮ ಹೆಣ್ಣು ಮಕ್ಕಳಿಗೆ ಹೊಂದಿಕೊಂಡು ಹೋಗುವಂತೆಯೋ ಅಥವಾ ಅವರ ಗಂಡಂದಿರ-ಕುಟುಂಬದ ಅವಶ್ಯಕತೆಗಳನ್ನು ಇನ್ನೂ ಸಮರ್ಪಕವಾಗಿ ಪೂರೈಸುವಂತೆಯೂ ಸಲಹೆ ನೀಡುತ್ತಾರೆ. ಬಹುತೇಕ ಪ್ರಕರಣಗಳಲ್ಲಿ ಹೀಗಾಗುತ್ತವೆ. ಕೆಲವೇ ಪ್ರಸಂಗಗಳಲ್ಲಿ ಹೆಣ್ಣು ಮಕ್ಕಳ ಯೋಗಕ್ಷೇಮಕ್ಕೆ ಆದ್ಯತೆ ನೀಡಿ, ಕುಟುಂಬದ ಹಿತಾಸಕ್ತಿಗಳನ್ನು ಬದಿಗೊತ್ತಿ, ಮಧ್ಯಸ್ಥಿಕೆವಹಿಸಿ ಪರಿಹರಿಸುವ ಯತ್ನಗಳು ನಡೆಯುತ್ತವೆ ಅಥವಾ ಸಂಬಂಧವನ್ನು ತೊರೆಯಲಾಗುತ್ತದೆ. ಪೊಲೀಸ್ ಅಥವಾ ವಕೀಲರನ್ನು ಸಂಪರ್ಕಿಸುವ ಪ್ರಸಂಗಗಳ ಸಂಖ್ಯೆ ಇನ್ನೂ ಕಡಿಮೆ ಇದೆ.

ಮೂಲ ಲೇಖಕರು: ಫಿಲಿಪ್ಪಾ ವಿಲಿಯಮ್ಸ್, ಸ್ವರ್ಣ ರಾಜಗೋಪಾಲನ್, ಗಿರಿಜಾ ಗೋಡ್ಬೋಲೆ, ರುಚಿತಾ ಗೋಸ್ವಾಮಿ.

ಅನುವಾದ : ನಾ ದಿವಾಕರ

andolanait

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

2 hours ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

2 hours ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

2 hours ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ.…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

2 hours ago