Andolana originals

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಕಳಚಿದ ಚಲನಚಿತ್ರ ಪತ್ರಿಕೋದ್ಯಮದ ಹಿರಿಯ ಕೊಂಡಿ ಶ್ರೀಕೃಪಾ

ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಜೈತ್ರಯಾತ್ರೆ ಮಾಡುತ್ತಿರುವ ಸಂದರ್ಭ. ಕನ್ನಡ ಚಿತ್ರರಂಗದ ಕಡೆ ಭಾರತದ ಉಳಿದ ಚಿತ್ರೋದ್ಯಮಗಳು ತಿರುಗಿ ನೋಡುವ ಬೆಳವಣಿಗೆ. ಮೊನ್ನೆ ಆ ಚಿತ್ರ ವಿಶ್ವಾದ್ಯಂತ ತೆರೆಕಂಡ ಆ ದಿನವೇ, ಗೆಳೆಯರೊಬ್ಬರ ಜಲತಾಣದಲ್ಲಿ ಹಿರಿಯ ಚಲನಚಿತ್ರ ಪತ್ರಕರ್ತ ಶ್ರೀಕೃಪಾ ಅವರ ಅಗಲಿದ ಸುದ್ದಿ ಇತ್ತು. ಆಗಸ್ಟ್ ೩ರಂದು ಅವರು ಕೊನೆಯುಸಿರೆಳೆದಿದ್ದರು. ಮುಂದಿನ ತಿಂಗಳು ೯೩ ಪೂರೈಸಿ ೯೪ಕ್ಕೆ ಕಾಲಿಡುತ್ತಿದ್ದ ಶ್ರೀಕೃಪಾ ಅವರು ಪತ್ರಕರ್ತರು ಮಾತ್ರವಲ್ಲ, ಚಲನಚಿತ್ರ ಮತ್ತು ಕಿರುತೆರೆ ಸರಣಿಗಳಿಗೂ ಕೆಲಸ ಮಾಡಿದವರು. ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಯವರಾಗಿದ್ದ ಶ್ರೀಕೃಪಾ ಅವರ ಮೂಲ ಹೆಸರು ಉಪೇಂದ್ರ ಉರಾಳ.

ಶಾಲಾದಿನಗಳಿಂದಲೇ ಸಾಹಿತ್ಯಾಸಕ್ತಿ ಮೈಗೂಡಿಸಿಕೊಂಡಿದ್ದ ಶ್ರೀಕೃಪಾ ಅವರು ಚಲನಚಿತ್ರ ಪತ್ರಕರ್ತರಾಗಿ ಕೆಲಸ ಆರಂಭಿಸಿದ್ದು ಎಂ. ರಾಮನ್ ಅವರ ರೂಪಲೇಖ ಪತ್ರಿಕೆಯ ಮೂಲಕ. ಆ ಪತ್ರಿಕೆ ಆರಂಭವಾದದ್ದು ಕನ್ನಡ ಚಳವಳಿಯ ಹಿನ್ನೆಲೆಯಲ್ಲಿ. ಅ. ನ. ಕೃಷ್ಣರಾಯರ ನೇತೃತ್ವದಲ್ಲಿ ಕನ್ನಡ ಚಳವಳಿ ನಡೆಯುತ್ತಿದ್ದ ದಿನಗಳವು. ಅವರೊಂದಿಗೆ ಮ. ರಾಮಮೂರ್ತಿ, ನಾಡಿಗೇರ ಕೃಷ್ಣರಾಯರು ಸೇರಿದಂತೆ ಕನ್ನಡ ಹೋರಾಟದ ನೇತಾರರಿದ್ದರು. ಭಾಷಾವಾರು ಆಧಾರದಲ್ಲಿ ಪ್ರಾಂತ್ಯಗಳು ರಚನೆಯಾದ ನಂತರದ ದಿನಗಳವು.

ಕನ್ನಡ ಸಿನಿಮಾ ಕನ್ನಡಿಗರಿಗೆ ಇನ್ನಷ್ಟು ಹತ್ತಿರ ಇರುವುದನ್ನು ನೋಡಿದ ಅನಕೃ ಅವರಿಗೆ, ಕನ್ನಡಿಗರನ್ನು ಕನ್ನಡದ ಪರವಾಗಿ ಪರಿವರ್ತಿಸಲು ಅದ್ಭುತ ಮಾಧ್ಯಮ ಚಲನಚಿತ್ರ ಮಾಧ್ಯಮ ಎಂದು ಮನದಟ್ಟಾಗುತ್ತಲೇ, ಕನ್ನಡ ಚಿತ್ರರಂಗಕ್ಕೆ ಮಾತ್ರ ಮೀಸಲಾದ ಕನ್ನಡ ಚಲನಚಿತ್ರ ಪತ್ರಿಕೆಯೊಂದು ಬೇಕು, ಯಾರು ಮಾಡಲು ಮುಂದೆ ಬರುತ್ತೀರಿ? ಎಂದು ಪ್ರಶ್ನಿಸಿದಾಗ, ಎಂ. ರಾಮನ್ ಮುಂದೆ ಬಂದರು ೧೯೬೬ರಲ್ಲಿ ‘ರೂಪಲೇಖ’ ಪತ್ರಿಕೆ ಆರಂಭಿಸಿಯೇ ಬಿಟ್ಟರು. ಆ ಪತ್ರಿಕೆಯಲ್ಲಿ ಶ್ರೀಕೃಪಾ ಅವರು ತಮ್ಮ ವೃತ್ತಿಜೀವನ ಆರಂಭಿಸಿದ್ದನ್ನು ಅವರೇ ಹೇಳಿಕೊಂಡಿzರೆ.
ಕನ್ನಡ ಚಳವಳಿಯ ಆ ದಿನಗಳಲ್ಲಿ, ಕನ್ನಡಧ್ವಜವೊಂದರ ಪ್ರಸ್ತಾಪ, ನಂತರ ಹಳದಿ ಕೆಂಪು ಬಣ್ಣದ ಆ ಬಾವುಟವನ್ನು ರಾಮಮೂರ್ತಿ ಮತ್ತು ತಾವು ಸೇರಿ ಮಾಡಿದ್ದಾಗಿ, ರಾಮನ್ ಈ ಅಂಕಣಕಾರನ ಬಳಿ, ಅರವತ್ತರ ದಶಕದ ಕನ್ನಡ ಚಳವಳಿಯ ಕುರಿತಂತೆ ಮಾತನಾಡುತ್ತಿದ್ದಾಗ ಹೇಳಿದ್ದರು. ಇರಲಿ,
ಕನ್ನಡ ಚಿತ್ರರಂಗದ ಜೊತೆ ಆ ದಿನಗಳಲ್ಲಿ ಪತ್ರಕರ್ತರಿಗೆ ಇದ್ದ ನಂಟು, ಕಾಳಜಿಗಳ ಕುರಿತು ಬಹಳಷ್ಟು ಮಂದಿಗೆ ತಿಳಿದಿರಲಾರದು. ಮೈಸೂರಿನಲ್ಲಿರುವ ಪ್ರೀಮಿಯರ್ ಸ್ಟುಡಿಯೊದಲ್ಲಿ, ಅದಕ್ಕೂ ಮೊದಲು ನವಜ್ಯೋತಿ ಸ್ಟುಡಿಯೊದಲ್ಲಿ ಹೊರತುಪಡಿಸಿದರೆ, ಬಹುತೇಕ ಚಿತ್ರಗಳು ಮದರಾಸಿನಲ್ಲಿ ತಯಾರಾಗುತ್ತಿದ್ದವು. ಡಬ್ಬಿಂಗ್ ಚಿತ್ರಗಳ ಪ್ರವಾಹ ಬೇರೆ. ಕನ್ನಡದಲ್ಲಿ ತಯಾರಾಗುತ್ತಿದ್ದ ಚಿತ್ರಗಳು ಬೆರಳೆಣಿಕೆಯಲ್ಲಿದ್ದವು ಅಷ್ಟೇ.

೧೯೬೧ರಲ್ಲಿ ರಾಜ್ಯದ ನಾನಾ ಕಡೆ ಭೀಕರವಾಗಿ ಪ್ರಕೃತಿಯ ವಿಕೋಪಕ್ಕೆ ಒಳಗಾದ ಲಕ್ಷಾಂತರ ಸಂತ್ರಸ್ತರ ನೆರವಿಗೆ ಬಂದದ್ದು ಪತ್ರಿಕೆಗಳು. ‘ಡೆಕ್ಕನ್ ಹೆರಾಲ್ಡ’ ಮತ್ತು ‘ಪ್ರಜವಾಣಿ’ ಪತ್ರಿಕೆಗಳ ಮಾಲಿಕರ ನೇತೃತ್ವದಲ್ಲಿ ‘ಪ್ರವಾಹ ಪರಿಹಾರ ನಿಧಿ ಸಂಗ್ರಹ ಯಾತ್ರೆ’ ರಾಜ್ಯದಾದ್ಯಂತ ನಡೆಯಿತು. ಇದರಲ್ಲಿ ಕನ್ನಡ ಚಿತ್ರರಂಗದ ಅಂದಿನ ಬಹುತೇಕ ಜನಪ್ರಿಯ ನಟ-ನಟಿಯರು ಪಾಲ್ಗೊಂಡರು. ಕಲಾವಿದರು ಮತ್ತು ಕನ್ನಡ ಚಲನಚಿತ್ರ ಅಭಿಮಾನಿಗಳ ನಡುವೆ ನಿರ್ಮಿತವಾಗಿದ್ದ ಗೋಡೆ ಒಡೆದು ಕನ್ನಡ ಚಿತ್ರರಂಗವನ್ನು ಕನ್ನಡ ಜನತೆಯ ಸಮೀಪಕ್ಕೆ ತರುವುದರಲ್ಲಿ ಯಾತ್ರೆ ಸಫಲವಾಯಿತು ಎಂಬುದಾಗಿ ‘ಕನ್ನಡ ಚಲನಚಿತ್ರ ಇತಿಹಾಸ’ ದಾಖಲಿಸುತ್ತದೆ.

ನೇತೃತ್ವ ಆ ಸಂಸ್ಥೆಯದಾದರೂ ಎಲ್ಲ ಪತ್ರಿಕೆಗಳ ಪ್ರತಿನಿಧಿಗಳೂ ಆ ಸಮಿತಿಯಲ್ಲಿದ್ದರು. ಇತ್ತೀಚೆಗೆ, ಕೃಪಾ ಅವರು, ಆ ಯಾತ್ರೆಯಲ್ಲಿ ಅವರ ಜವಾಬ್ದಾರಿಯ ಕುರಿತು ಹೇಳಿದ್ದರು. ಸಂಜೆ ಹೊತ್ತು ಆಯಾ ದಿನ ಸಂಗ್ರಹವಾದ ಹಣದ ಲೆಕ್ಕ ಮಾಡಿ ಕೊಡುವುದು ಸಮಿತಿಯ ಖಜಂಚಿಯಾಗಿದ್ದ ತಮ್ಮ ಕೆಲಸವಾಗಿತ್ತು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು.

‘ರೂಪಲೇಖ’ ಪತ್ರಿಕೆಯ ನಂತರ ಅವರು ಮಾ.ನಾ. ಚೌಡಪ್ಪ ಅವರ ‘ಚಲಚ್ಚಿತ್ರ’ ಸಿನಿಮಾ ಪತ್ರಿಕೆಯಲ್ಲಿ ಕೆಲವು ಕಾಲ ಕೆಲಸ ಮಾಡಿದರು. ‘ತಾಯಿನಾಡು’ ದಿನಪತ್ರಿಕೆಯ ಮ್ಯಾಗಜಿನ್ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದ ಅವರು ಆ ದಿನಗಳಲ್ಲಿ ಸಾಕಷ್ಟು ಕಿರಿಯ ಬರಹಗಾರರಿಗೆ ಉತ್ತೇಜನ ನೀಡುವ ಕೆಲಸ ಮಾಡಿದರು. ಗೆಳೆಯರ ಸಹಕಾರದೊಂದಿಗೆ ಶ್ರೀಕೃಪಾ ಅವರು ಸಂಪಾದಕರಾಗಿ ಆರಂಭಿಸಿದ ವಾರಪತ್ರಿಕೆ ‘ಲಾವಣ್ಯ’ ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ನೀಡಿದ ಪತ್ರಿಕೆ ಅದು. ಮುಂದೆ ‘ಲಾವಣ್ಯ ಲೇಖಕರ ಬಳಗ’, ‘ಲಾವಣ್ಯ ಪ್ರಶಸ್ತಿ’ಗಳ ಮೂಲಕ ಚಲನಚಿತ್ರ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿತು ಆ ಪತ್ರಿಕೆ.

ಪತ್ರಿಕೋದ್ಯಮ ಮಾತ್ರವಲ್ಲ, ಶ್ರೀಕೃಪಾ ಅವರು ಚಿತ್ರಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದರು. ಈಗ ಗೀತರಚನೆಕಾರರನ್ನು ಚಿತ್ರಸಾಹಿತಿ ಎನ್ನುತ್ತಾರೆ. ಆದರೆ, ಹಿಂದೆಲ್ಲ, ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಎಲ್ಲವೂ ಚಿತ್ರಸಾಹಿತಿಯ ಕೆಲಸ. ಕೃಪಾ ಅವರು ಸಾಹಿತ್ಯದ ಜೊತೆಗೆ, ಸಹನಿರ್ದೇಶಕರಾಗಿಯೂ ಕೆಲಸ ಮಾಡಿದವರು. ಕಲ್ಯಾಣಿ, ಯಾವ ಜನ್ಮದ ಮೈತ್ರಿ, ಗಂಧರ್ವಗಿರಿ ಅಲ್ಲದೆ ಅವರು ನಂತರ ಕೆಲಸಮಾಡುತ್ತಿದ್ದ ನಿರ್ಮಾಪಕ ಸಿ ವಿ ಎಲ್ ಶಾಸೀ ಅವರ ‘ಮಲಯ ಮಾರುತ’, ಆತಂಕ ಮುಂತಾದ ಚಿತ್ರಗಳಕಾರ್ಯನಿರ್ವಾಹಕರಾಗಿಯೂ ಕೆಲಸ ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೆ, ಕಿರುತೆರೆ ಸರಣಿಗಳಿಗೂ ಅವರು ಕೆಲಸ ಮಾಡಿದ್ಧಾರೆ.

ಹಂಪಿ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಹೊರತಂದ ‘ಕನ್ನಡ ಚಿತ್ರರಂಗದ ಚರಿತ್ರೆ’ ಗ್ರಂಥಗಳ ಸಂಪಾದಕ ಮಂಡಳಿಯ ಸದಸ್ಯರಲ್ಲಿ ಕೃಪಾ ಒಬ್ಬರಾಗಿದ್ದರು.

ಶ್ರೀಕೃಪಾ ಅವರು ತಮ್ಮ ಮಗನ ನಿಧನದ ನಂತರ, ಶ್ರೀರಾಮಪುರದ ತಮ್ಮ ಮನೆಯನ್ನು ಮಾರಿ, ಕೆಂಗೇರಿ ಬಳಿಯಲ್ಲಿದ್ದ ತಮ್ಮ ಮಗಳ ಮನೆಯಲ್ಲಿ ವಾಸವಾಗಿದ್ದರು. ತಮ್ಮ ಹೆತ್ತವರಿಗಾಗಿ ಮಗಳು ಕಲ್ಪನಾ ಪಕ್ಕದ ವಾಸಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದರು. ಊಟೋಪಚಾರ ಎಲ್ಲ ತಮ್ಮಲ್ಲೇ. ಅವರ ಕೆಲಸವನ್ನು ಎಲ್ಲ ಅವರೇ ಮಾಡಿಕೊಳ್ಳುತ್ತಿದ್ದರು. ಯುರೋಪ್‌ನಲ್ಲಿದ್ದ ನನ್ನ ಮಗಳು, ಅಳಿಯ ಇ ಬಂದಿದ್ದಾರೆ. ಮೂರು ವರ್ಷದ ಮರಿಮಗಳ ಜೊತೆ ಒಂದಷ್ಟು ಹೊತ್ತು ಕಳೆಯುತ್ತಿದ್ದರು, ಅವತ್ತು ಕೂಡಾ ಮಧ್ಯಾಹ್ನ ಊಟಮಾಡಿ ಹೋದರು. ಸಂಜೆ ಕಾಫಿಗೆ ಬಂದರು. ಒಳಗೆ ಬರುವಾಗ ಅವರು ಎಂದಿನಂತೆ ಬರಲಿಲ್ಲ. ಯಾಕೋ ಅನುಮಾನ ಬಂತು. ನನ್ನ ಮಗಳಿಗೆ ಹೇಳಿದೆ. ಅವಳು ಬರುವಷ್ಟರಲ್ಲಿ, ನಾನು ಅವರನ್ನು ಕರೆದು ಕೊಂಡು ಗೇಟ್ ಬಳಿ ಬಂದಿದ್ದೆ. ಅವಳು ಬಂದಿಳಿದ ಆಟೋದ ಆಸ್ಪತ್ರೆಗೆ ಹೊರಟೆವು. ಮಧ್ಯದಲ್ಲಿ ಅವರನ್ನು ಕೂರಿಸಿ, ನಾವಿಬ್ಬರು ಆ ಬದಿ, ಈ ಬದಿ ಕೂತಿzವು. ಸ್ವಲ್ಪ ಹೊತ್ತು. ಒಮ್ಮೆ ದೊಡ್ಡದಾಗಿ ಕಣ್ಣರಳಿಸಿದಂತೆ. ನಂತರ ಕಣ್ಣುಮುಚ್ಚಿಕೊಂಡರು.
ಯಾಕೋ ಅವರ ಮೈ ತಣ್ಣಗಾಗುತ್ತಿದೆ ಅನಿಸತೊಡಗಿತು. ಮಗಳೂ ‘ಹೌದು’ ಎಂದಳು. ಆಸ್ಪತ್ರೆ ಸೇರುವ ವೇಳೆಗೆ ಅವರು ಇಹಲೋಕದ ಯಾತ್ರೆಮುಗಿದ್ದರು ಎಂದ ವೈದ್ಯರ ಮಾತನ್ನು ನನಗೆ ನಂಬಲಾಗಲೇ ಇಲ್ಲ’ ಎಂದು ಯಾವುದೇ ತೊಂದರೆ ಕೊಡದೆ ಇಲ್ಲಿನ ವ್ಯಾಪಾರ ಮುಗಿಸಿದ ತಮ್ಮ ತಂದೆಯ ಕೊನೆಯ ಕ್ಷಣದ ಬಗ್ಗೆ ಹೇಳುತ್ತಾರೆ ಕಲ್ಪನಾ ಅವರು.

ವರ್ಷದ ಹಿಂದೆ ಈ ಅಂಕಣಕಾರನಿಗೆ ಫೋನ್ ಮಾಡಿ, ತಮ್ಮ ಬಳಿ ಇರುವ, ಕೆಲವು ವಸ್ತುಗಳನ್ನು ಕೊಂಡು ಹೋಗಲು ಹೇಳಿದ್ದರು. ಮುಂದಿನ ವಾರ ಮತ್ತೆ ಕರೆದು, ‘ನಾನೇ ಹೇಳುತ್ತೇನೆ, ಆ ಮೇಲೆ ಬರುವಿರಂತೆ’ ಎಂದಿದ್ದರು. ಅವರ ಕರೆ ಬರಲೇ ಇಲ್ಲ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ರಾಜ್ಯ ವಿಧಾನ ಮಂಡಲ ಅಧಿವೇಶನ ಸದ್ಬಳಕೆಗೆ ದಾರಿ ಯಾವುದಯ್ಯ!?

ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ವಿರೋಧ ಪಕ್ಷಗಳ ಸಕ್ರೀಯ ಭಾಗವಹಿಸುವಿಕೆ ಇಲ್ಲದೇ ನೀರಸವಾಗಿ ಕೊನೆಗೊಂಡಿದ್ದು ಪ್ರಜಾಪ್ರಭುತ್ವದ ದುರ್ದೈವದ ಸಂಗತಿಯಾಗಿದೆ.…

2 mins ago

ಓದುಗರ ಪತ್ರ | ಹಿಂದಿ ಶಿಕ್ಷಕರ ನೇಮಕಾತಿ ಏಕಿಲ್ಲ?

15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಹಿಂದಿ ಶಿಕ್ಷಕರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಖಂಡನೀಯ. ಇದು ಸಂವಿಧಾನ ಬಾಹಿರ ನಡೆ. ಇದು ಹಿಂದಿ…

10 mins ago

ಓದುಗರ ಪತ್ರ | ಕನ್ನಡ ಚಿತ್ರ; ಟಿಕೆಟ್‌ಗಳಲ್ಲಿ ಆಂಗ್ಲ ಹೆಸರು !

ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡದ ಚಲನಚಿತ್ರಗಳು ಪ್ರದರ್ಶಿತವಾಗುತ್ತವೆ. ಗ್ರಾಹಕರಿಗೆ ನೀಡುವ ಟಿಕೆಟಿನಲ್ಲಿ ಸಿನಿಮಾದ ಹೆಸರೂ ಅಚ್ಚಾಗಿರುತ್ತದೆ.ಆದರೆ... ಕನ್ನಡ ಚಿತ್ರಕ್ಕೆ ಖರೀದಿಸುವ ಟಿಕೆಟ್‌ನಲ್ಲಿ ಚಿತ್ರದ…

14 mins ago

ಓದುಗರ ಪತ್ರ | ಮತದಾರರ ಕರಡು ಪಟ್ಟಿಯ ತಪ್ಪುಗಳನ್ನು ಸರಿಪಡಿಸಿ

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್-೨೬) ಕಾರ್ಯ ಮುಗಿದು ಇದೀಗ ಕರಡು ಪಟ್ಟಿ ಬಿಡುಗಡೆಯಾಗಿದೆ. ಎಸ್‌ಐಆರ್ ಬಗ್ಗೆ ಹಲವಾರು ಅನುಮಾನ…

16 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಆಗಸ್ಟ್‌ 28  ಶುಕ್ರವಾರ

44 mins ago

ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿ ಆರೋಪ ; ಇಬ್ಬರು ಶಿಕ್ಷಕರು ಅಮಾನತ್ತು

ಬೆಂಗಳೂರು : ಸರ್ಕಾರಿ ಸೇವೆಯಲ್ಲಿದ್ದುಕೊಂಡು ನಿಯಮಗಳನ್ನು ಉಲ್ಲಂಘಿಸಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಾಲಾ ಶಿಕ್ಷಕರನ್ನು…

11 hours ago