ಮೊನ್ನೆ ತಾನು ಮಂಡಿಸಿದ ಬಜೆಟ್ಟು ‘ಅಮೃತ ಕಾಲ’ದ ಮೊದಲ ಗುಟುಕು ಎಂದು ಬೆನ್ನು ಚಪ್ಪರಿಸಿಕೊಂಡಿದೆ ಮೋದಿ ಸರ್ಕಾರ. ಈ ದೇಶದ ಬಹುಜನರು ದುಡಿಯುವ ಜನರು. ಅಂದಂದು ಉಂಡು ಉಡಲು ಅಂದಂದಿನ ದುಡಿಮೆಯನ್ನೇ ನೆಚ್ಚಿರುವವರು. ದೇಶವೆಂದರೆ, ದೇಶದ ಬಹುಜನರೆಂದರೆ ಇವರೇ ಅಲ್ಲವೇ? ದೇಶದ ಆಯವ್ಯಯವನ್ನು ಮತ್ತು ಅದರ ಮುಂಗಡಪತ್ರವನ್ನು ಇವರ ಕಣ್ಣುಗಳಿಂದ ಅಲ್ಲದೆ ಬೇರೆ ಯಾರ ಕಣ್ಣುಗಳಿಂದ ನೋಡಲು ಬಂದೀತು?
ಅವರ ಪಾಲಿಗೆ ಈ ಆಯವ್ಯಯ ಮುಂಗಡಪತ್ರ ಅಮೃತ ಕಾಲದ ಮೊದಲ ಗುಟುಕೋ ಅಥವಾ ಮೃತ ಕಾಲದ ಮೊದಲ ಗುಟುಕೋ?
ಆದರೆ ಈ ಬಜೆಟ್ಟಿನಲ್ಲಿ ಅಮೃತ, ಹಾಲಾಹಲ ಎರಡೂ ಉಂಟು. ಆದರೆ ದುಡಿಯುವ ಜನರಿಗೆ ಅಮೃತ ಸಿಕ್ಕಿಲ್ಲ. ಅವರಿಗೆ ಸಿಕ್ಕಿರುವುದು ‘ಹಾಲಾಹಲ’ ಅಲ್ಲ. ಆದರೆ ಅದಕ್ಕಿಂತ ಕಡಿಮೆಯದೂ ಅಲ್ಲ. ಬೆವರು ಬಸಿದು ಬದುಕುವವರನ್ನು ತಿರುಪೆಯ ದಾರಿಗೆ ತಂದು ನಿಲ್ಲಿಸಲಾಗಿದೆಯೇ?
ಬೆಂಕಿಗೆ ಬಿದ್ದಿರುವ ಬಡವರ ಬದುಕುಗಳನ್ನು ಆತುಕೊಳ್ಳುವ ಸಬ್ಸಿಡಿಗಳು ಶರವೇಗದಲ್ಲಿ ಖೋತಾ ಆಗತೊಡಗಿವೆ. ಕೂಲಿದರಗಳು, ವೇತನಗಳು ಏರುತ್ತಿಲ್ಲ. ದುಡಿಯುವ ಕೈಗಳಿಗೆ ಕೆಲಸ ಒದಗಿಸುತ್ತಿಲ್ಲ. ಆದರೆ ವಿತ್ತೀಯ ಕೊರತೆಯನ್ನು ತೂಗಿಸಲು ಇದೇ ಬಡಜನರನ್ನು ಬಲಿಕೊಡಲಾಗುತ್ತಿದೆ. ಕ್ಷೇಮಾಭಿವೃದ್ಧಿಯ ಅಳಿದುಳಿದ ವಾಸ್ತುಶಿಲ್ಪವನ್ನು ಸಡಿಲಗೊಳಿಸಿ ಕೆಡವಲಾಗುತ್ತಿದೆ.
ಅಸಮಾನತೆ ಹೆಚ್ಚಿದೆ. ವಿಶ್ವದ ಅತಿ ಅಸಮಾನ ದೇಶಗಳ ಜತೆ ಸೇರಿ ಹೋಗಿದೆ ಭಾರತ. ಬಡವರು ಕೂಲಿಕಾರರು ರೈತರ ಮೇಲಿನ ಭಾರ ಹೆಚ್ಚಿದೆ. ಅವರ ಮೇಲಿನ ಖರ್ಚು ಕಮ್ಮಿಯಾಗಿದೆ. ಉಳ್ಳವರ ಮೇಲಿನ ಸರ್ಕಾರಿ ಖರ್ಚು ಹೆಚ್ಚಿದೆ. ಈ ಬಜೆಟ್ಟಿನಲ್ಲಿ ರೈತರು, ಕಾರ್ಮಿಕರು, ದಲಿತ ದುರ್ಬಲರು, ಮಹಿಳೆಯರು, ಅಲ್ಪಸಂಖ್ಯಾತರ ಅಷ್ಟಿಷ್ಟು ರಕ್ಷಾ ಕವಚವನ್ನು ಕೂಡ ತುಸು ತುಸುವಾಗಿ ಕರಗಿಸುವ ಚಾತುರ್ವರ್ಣ್ಯ ಕರಾಮತ್ತು ದಿನನಿತ್ಯದ ವಿದ್ಯಮಾನಗಳ ಭಾಗವಾಗಿ ಜರುಗುತ್ತಲೇ ಇದೆ. ಅದು ಈ ಬಜೆಟ್ಟಿನಲ್ಲೂ ಪ್ರತಿಫಲಿಸಿದೆ.
ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ, ಚಾಚಿ ಸುಡತೊಡಗಿರುವ ನಿರುದ್ಯೋಗದ ಜ್ವಾಲೆಗಳು ನಿಂತ ನೆಲ ಕುಸಿಯತೊಡಗಿರುವ ಸಂಕಟದ ಕಡು ಕೆಟ್ಟ ಕಾಲ. ಹೀಗಿರುವಾಗ ಪ್ರಭುತ್ವಕ್ಕೆ ತಾಯಿಯ ಕರುಳು ಚಿಗುರಬೇಕು. ತಬ್ಬಿಕೊಳ್ಳಬೇಕೇ ವಿನಾ ತಬ್ಬಲಿ ಮಾಡಕೂಡದು.
ದುರಂತವೆಂದರೆ ತಬ್ಬಿಕೊಳ್ಳುತ್ತಲಿಲ್ಲ ಮೋದಿ ಪ್ರಭುತ್ವ. ಎಣ್ಣೆ ತಯಾರಿಸುವ ಅಣ್ಣ ಅಯ್ಯೋ ಎಂದರೆ ನೆತ್ತಿ ತಂಪಾದೀತೇ ಎಂಬ ಗಾದೆ ಮಾತೊಂದಿದೆ. ನೀರು ನೆರಳು ಅನ್ನ ಕೊಡುವುದನ್ನು ಬಿಟ್ಟು ಜುಟ್ಟಿಗೆ ಕಟ್ಟರ್ ಹಿಂದುತ್ವದ ಮಲ್ಲಿಗೆ ಮುಡಿಸಿದರೆ ಸಾಕೇ?
ಇಂತಹ ಮುಂಗಡಪತ್ರವನ್ನು ಮೋದಿ ಸರ್ಕಾರದ ಮಡಿಲಲ್ಲಿ ಆಡುವ ಮುಖ್ಯವಾಹಿನಿಯ ‘ಗೋದಿ ಮೀಡಿಯಾ’ ಆಗಸದೆತ್ತರಕ್ಕೆ ಏರಿಸಿ ಕೊಂಡಾಡಿದೆ.
ದೇಶದ ಬಹುಪಾಲು ಜನ ಈಗಲೂ ಗ್ರಾಮವಾಸಿಗಳು. ಅಲ್ಲಿನ ಅಧಿಕಾಂಶ ಬದುಕುಗಳು ದಾರಿದ್ರ್ಯದಲ್ಲಿ ಮುಳುಗಿವೆ. ಹಣದುಬ್ಬರ, ಬೆಲೆ ಏರಿಕೆಗಳು ಬದುಕನ್ನು ಕೆಂಡದ ಹೊಂಡದ ಮೇಲಿನ ನಡಿಗೆಯಾಗಿ ಮಾಡಿಬಿಟ್ಟಿವೆ. ಗ್ರಾಮೀಣಾಭಿವೃದ್ಧಿಯ ಮೇಲಿನ ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಬೇಕು. ಹೆಚ್ಚಿಸುವುದಿರಲಿ, ಕತ್ತರಿಸದಿದ್ದರೆ ಸಾಕು ಎಂಬ ದಯನೀಯ ದುಸ್ಥಿತಿಯಿದೆ. ಆದರೆ ಈ ವೆಚ್ಚ ಕಳೆದ ವರ್ಷದ ಪರಿಷ್ಕತ ಅಂದಾಜಿಗೆ ಹೋಲಿಸಿದರೆ ಶೇ.೦.6ರಷ್ಟು ತಗ್ಗಿಸಲಾಗಿದೆ. ಮಾಡಲಾಗಿರುವ ಹಂಚಿಕೆ 2.38 ಲಕ್ಷ ಕೋಟಿ ರುಪಾಯಿಗಳು.
ಆಹಾರ ಸಬ್ಸಿಡಿಗೆ ಕತ್ತರಿ ಬಿದ್ದಿದೆ. ಕಳೆದ ಸಲಕ್ಕೆ ಹೋಲಿಸಿದರೆ ಶೇ.30ರ ಭಾರೀ ಖೋತಾ! ಹಸಿದು ಮಲಗುವ ಕೋಟಿ ಕೋಟಿ ಹೊಟ್ಟೆಗಳ ಮೇಲೆ ಹೊಡೆದಿರುವ ಈ ಕೃತ್ಯ ಅಕ್ಷಮ್ಯ. ಬಂಡವಾಳ ವೆಚ್ಚ ಹೆಚ್ಚಳದ ಕಾರಣವೂ ಈ ನಡೆಗೆ ಸಮರ್ಥನೀಯ ಅಲ್ಲ. ಕೋವಿಡ್ ಪರಿಹಾರ ಪ್ಯಾಕೇಜಿನ ಅಂಗವಾಗಿ ಪ್ರತಿ ಬಡ ವ್ಯಕ್ತಿಗೆ ತಿಂಗಳಿಗೆ ಐದು ಕೇಜಿಗಳಷ್ಟು ಹೆಚ್ಚುವರಿ ಬೇಳೆಕಾಳು ಹಂಚಿಕೆಯನ್ನು ಇತ್ತೀಚೆಗೆ ರದ್ದು ಮಾಡಲಾಯಿತು. ಈ ಹಂಚಿಕೆಯನ್ನು ಇನ್ನಷ್ಟು ಕಾಲ ಮುಂದುವರಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿತ್ತು.
‘ಮನರೇಗ’ ಯೋಜನೆ ಹಂಚಿಕೆ ಕೂಡ 19,000 ಕೋಟಿ ರುಪಾಯಿಗಳ ಭಾರೀ ಪ್ರಮಾಣದ ಕುಸಿತ ಕಂಡಿದೆ. ಕಳೆದ ಸಾಲಿನ 89400 ಕೋಟಿ ರುಪಾಯಿಗಳ ಹಂಚಿಕೆ ಈ ವರ್ಷ 60 ಸಾವಿರ ಕೋಟಿ ರೂ.ಗಳಿಗೆ ತಗ್ಗಿರುವುದು ಕಳವಳಕಾರಿ. ಕಳೆದ ವರ್ಷದ ಕೂಲಿ ಪಾವತಿಯ ಬಾಕಿ ರೂ. 25 ಸಾವಿರ ಕೋಟಿ. ಈ ಬಾಕಿಯನ್ನು ಈ ಸಲದ ಹಂಚಿಕೆಯಲ್ಲೇ ಪಾವತಿ ಮಾಡಬೇಕಿದೆ. ಲಕ್ಷ ಕೋಟಿಯನ್ನು ದಾಟಿ ಸಾಗಬೇಕಿತ್ತು. ಆದರೆ ಬಾಕಿ ಪಾವತಿಯ ನಂತರ ಈ ವರ್ಷದ ಮನರೇಗ ಜಾರಿಗೆ ಉಳಿಯುವ ಮೊತ್ತ ಕೇವಲ ೩೫ ಸಾವಿರ ಕೋಟಿ ರುಪಾಯಿ!
ಗ್ರಾಮೀಣ ಬಡ ಕುಟುಂಬಗಳಿಗೆ ವರ್ಷದಲ್ಲಿ ನೂರು ದಿನ ಉದ್ಯೋಗ ಒದಗಿಸುವುದು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಉದ್ದೇಶ. ನೋಂದಣಿ ಮಾಡಿಕೊಂಡ ಎಲ್ಲ ಕುಟುಂಬಗಳಿಗೂ ನೂರು ದಿನಗಳ ಉದ್ಯೋಗ ಗಗನ ಕುಸುಮವೇ ಆಗಿತ್ತು. ಇಂತಹ ಅರೆಬರೆ ಯೋಜನೆಯ ಹಣವನ್ನೂ ಈ ಸಲದ ಬಜೆಟ್ಟಿನಲ್ಲಿ ಕಿತ್ತುಕೊಂಡಿರುವುದು ಅಮಾನುಷ. ಮನರೇಗ ಯೋಜನೆಯನ್ನು ಕೊಲ್ಲುವುದೇ ಕೇಂದ್ರದ ಉದ್ದೇಶವಾಗಿತ್ತು. ಹೀಗಾಗಿ ವರ್ಷದಿಂದ ವರ್ಷಕ್ಕೆ ಈ ಯೋಜನೆಯನ್ನು ಹೆಚ್ಚು ಹೆಚ್ಚು ಉಪವಾಸ ಕೆಡವುತ್ತ ಬರಲಾಗಿದೆ.
ಬಡ ಗರ್ಭಿಣಿಯರು- ಶಿಶುಗಳ ಅನ್ನಾಂಗ ಸಮಸ್ಯೆ ನೀಗಿಸುವ ಮತ್ತು ಕಿಶೋರಿಯರ ಪೋಷಣೆ ಕಾಳಜಿಯ ಸಕ್ಷಮ ಅಂಗನವಾಡಿ ಯೋಜನೆಯ ಹಂಚಿಕೆಯಲ್ಲಿ ಏರಿಕೆ ಕೂಡ ಜುಜುಬಿ. ಹೆರಿಗೆ ಸೌಲಭ್ಯ ಮತ್ತು ಇತರೆ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನು ಒಳಗೊಂಡ ‘ಸಾಮರ್ಥ್ಯ’ 2622 ಕೋಟಿ ರುಪಾಯಿಗಳಿಂದ 2582 ಕೋಟಿ ರೂ.ಗಳಿಗೆ ಇಳಿದಿದೆ.
ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಮಾಡಲಾಗಿರುವ ಹಂಚಿಕೆ 1200 ಕೋಟಿ ರುಪಾಯಿಗಳ ದೊಡ್ಡ ಕುಸಿತ ಕಂಡಿದೆ. 12800 ಕೋಟಿ ರುಪಾಯಿಯಿಂದ 11600 ಕೋಟಿ ರುಪಾಯಿಗೆ ಬಿದ್ದಿದೆ. ಕಾರ್ಮಿಕ ರಕ್ಷಣಾ ಕಾಯಿದೆಗಳನ್ನು ಕಳಚಿಯಾಯಿತು. ಇದೀಗ ಕಾರ್ಮಿಕ ಮಂತ್ರಾಲಯದ ಹಂಚಿಕೆ ಮೂರೂವರೆ ಸಾವಿರ ಕೋಟಿ ರುಪಾಯಿಗಳ ಕುಸಿತಕ್ಕೆ ಗುರಿಯಾಗಿದೆ. 16,893 ಕೋಟಿಯಿಂದ 13,221 ಕೋಟಿ ರೂ.ಗಳಿಗೆ ಇಳಿದಿದೆ. ಅಸಂಘಟಿತ ಕಾರ್ಮಿಕರಿಗೆ ಕಳೆದ ಬಜೆಟ್ಟಿನಲ್ಲಿ ನೀಡಲಾಗಿದ್ದ 10 ಲಕ್ಷ ರುಪಾಯಿಯ ವಿಮೆ ಯೋಜನೆಗೆ ಈ ವರ್ಷ ಚಿಕ್ಕಾಸೂ ಸಿಕ್ಕಿಲ್ಲ.
ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಯೋಜನೆಗಳ ಹಂಚಿಕೆಯಲ್ಲಿ ಶೇ.28ರ ದೊಡ್ಡ ಕಡಿತ ಮಾಡಲಾಗಿದೆ.
ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನಗಳ ಬಾಬ್ತಿನ ಹಂಚಿಕೆ ಕಳೆದ ವರ್ಷ ಇದ್ದಷ್ಟೇ ಇದೆ. ವೃದ್ಧರು, ವಿಧವೆಯರು ಹಾಗೂ ಅಂಗವಿಕಲರ ಸಂಖ್ಯೆ ಕಳೆದ ವರ್ಷ ಇದ್ದಷ್ಟೇ ಇದೆಯೆಂದು ಅರ್ಥವೇ?
ಆಹಾರ ಸಬ್ಸಿಡಿ, ಮನರೇಗ, ಬಿಸಿಯೂಟ, ಮಹಿಳಾ ಸಬಲೀಕರಣ ಮುಂತಾದ ಯೋಜನೆಗಳ ಹಂಚಿಕೆಗೆ ಕತ್ತರಿ ಹಾಕಲಾಗಿದೆ ಎಂದರೆ ಆಯಾ ಯೋಜನೆಯ ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕಲಾಗಿದೆ ಎಂದೇ ಅರ್ಥ. ಸರ್ಕಾರಿ ಯೋಜನೆಗಳ ನೆರಳಿನಿಂದ ಭಾರೀ ಸಂಖ್ಯೆಯ ದುರ್ಬಲರು ಹೊರ ಉಳಿದರೆಂದು ಹೇಳಲು ಪಾಂಡಿತ್ಯದ ಅಗತ್ಯ ಇಲ್ಲ.
ಇನ್ನು ಗ್ರಾಮೀಣ ಭಾರತದ ಜೀವನಾಡಿಯಾದ ಕೃಷಿಯ ಸಂಗತಿಯೇನು? 2022ರ ಹೊತ್ತಿಗೆ ಕೃಷಿ ಆದಾಯವನ್ನು ದುಪ್ಪಟ್ಟು ಮಾಡುವ ಭರವಸೆ ನೀಡಿದ್ದರು ಮೋದಿ. ದುಪ್ಪಟ್ಟು ಆಗುವುದು ಒತ್ತಟ್ಟಿಗಿರಲಿ, ಕೃಷಿ ಆದಾಯ ವರ್ಷದಿಂದ ವರ್ಷಕ್ಕೆ ಕುಸಿಯತೊಡಗಿದೆ. ಸ್ಥಿರವಾಗಿದ್ದರೆ ಅದೇ ದೊಡ್ಡ ಸಾಧನೆ. ಈ ಹಿನ್ನೆಲೆಯಲ್ಲಿ ಕೃಷಿಗೆ ಹೆಚ್ಚು ರಕ್ಷಣೆ ಒದಗಿಸಬೇಕಿತ್ತು. ಅದಕ್ಕೆ ಬದಲಾಗಿ ಇದ್ದಬದ್ದ ರಕ್ಷಣೆಯಲ್ಲೂ ಕಿತ್ತು ಖೋತಾ ಮಾಡಲಾಗಿದೆ. ರಸಗೊಬ್ಬರ ಸಬ್ಸಿಡಿ 2025 ಲಕ್ಷ ಕೋಟಿ ರುಪಾಯಿಯಿಂದ 1.75 ಲಕ್ಷ ಕೋಟಿ ರೂ.ಗೆ ಕುಗ್ಗಿ 50 ಸಾವಿರ ಕೋಟಿ ರುಪಾಯಿಯ ಭಾರೀ ಕುಸಿತ ಎದುರಿಸಿದೆ. ಹತ್ತು ಹಲವು ಕೃಷಿ ಯೋಜನೆಗಳ ಹಂಚಿಕೆಗಳು ಇದ್ದಷ್ಟೇ ಇವೆ ಅಥವಾ ಗಣನೀಯ ಹೆಚ್ಚಳ ಕಂಡಿಲ್ಲ. ತೃಣಧಾನ್ಯಗಳ ಮಹತ್ವದ ತುತ್ತೂರಿ ಊದುತ್ತಿರುವ ಸರ್ಕಾರ ಈ ಬಾಬ್ತಿನ ಬಜೆಟ್ ಹಂಚಿಕೆ ಶೂನ್ಯ. ರೈತರ ಉತ್ಪನ್ನಗಳಿಗೆ ನ್ಯಾಯಬೆಲೆ ಈಗಲೂ ಆಕಾಶ ಕುಸುಮ. ಹೀಗಿರುವಾಗ ಮಾರುಕಟ್ಟೆ ಮಧ್ಯಪ್ರವೇಶ ಮತ್ತು ಬೆಲೆ ಬೆಂಬಲ ಯೋಜನೆಗೆ ಹೋದವರ್ಷ ನೀಡಿದ್ದ 1500 ಕೋಟಿ ರುಪಾಯಿಗಳ ಹಂಚಿಕೆ ಈ ವರ್ಷ ಕೇವಲ ಒಂದು ಲಕ್ಷ ರೂ! ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿಯ ಹಂಚಿಕೆಯನ್ನು 68 ಸಾವಿರ ಕೋಟಿ ರುಪಾಯಿಯಿಂದ 60 ಸಾವಿರ ಕೋಟಿ ರುಪಾಯಿಗೆ ಇಳಿಸಲಾಗಿದೆ.
ಆದಾಯ ತೆರಿಗೆ ರಿಯಾಯಿತಿಗಳನ್ನು ಮುಂದೆ ಮಾಡಿ ಬೆನ್ನು ತಟ್ಟಿಕೊಳ್ಳಲಾಗುತ್ತಿದೆ. ಆದರೆ ಈ ರಿಯಾಯಿತಿಯ ಫಲಾನುಭವಿಗಳ ಪ್ರಮಾಣ ಅತ್ಯಲ್ಪ. ಈ ರಿಯಾಯಿತಿಯ ಬಹುತೇಕ ಫಲಾನುಭವಿಗಳು ಹತ್ತಾರು, ನೂರು, ಸಾವಿರ, ಲಕ್ಷಾಂತರ ಕೋಟಿ ರೂ. ವಹಿವಾಟಿನ ಭಾರೀ ಕಾರ್ಪೊರೇಟ್ ಕುಳಗಳು.
ಪೆಟ್ರೋಲಿಯಂ ಸಬ್ಸಿಡಿಯಲ್ಲಿ ಶೇ.75ರ ಭಾರೀ ಖೋತಾ! ಕಳೆದ ವರ್ಷ 9,171 ಕೋಟಿ ರುಪಾಯಿ ಸಬ್ಸಿಡಿ, ಈ ವರ್ಷ 2,257 ಕೋಟಿ ರೂ.ಗೆ ಇಳಿದಿದೆ. ಕೇವಲ ಎರಡು ವರ್ಷಗಳ ಹಿಂದೆ 37 ಸಾವಿರ ಕೋಟಿ ರುಪಾಯಿಗಳಷ್ಟಿತ್ತು ಈ ಸಬ್ಸಿಡಿ.
ಆರೋಗ್ಯ ಮತ್ತು ಶಿಕ್ಷಣದ ಹಂಚಿಕೆ ಹೆಚ್ಚಿಸಿರುವುದಾಗಿ ಬೀಗಿದೆ ಸರ್ಕಾರ. ಆದರೆ ಜಿಡಿಪಿ ಮತ್ತು ಬೆಲೆ ಏರಿಕೆಯ ಕೋನದಿಂದ ನೋಡಿದರೆ ಈ ಹೆಚ್ಚಳ ನಿಜಾರ್ಥದ ಹೆಚ್ಚಳವೇ? ಶೇ.6ರಷ್ಟು ಶಿಕ್ಷಣಕ್ಕೆ, ಶೇ.೩ರಷ್ಟು ಆರೋಗ್ಯಕ್ಕೆ ವೆಚ್ಚ ಮಾಡುವ ನಮ್ಮ ಗುರಿಯಿಂದ ಬಹಳ ಬಹಳ ದೂರ ಇದ್ದೇವೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಮಾಡಿರುವ ಹಂಚಿಕೆ ಜುಜುಬಿಯೇ ಸರಿ. 12 ಕೋಟಿ ರೈತರಿಗೆ ವಾರ್ಷಿಕ ಆರು ಸಾವಿರ ರುಪಾಯಿ ಕೊಡಲು ಸಾಧ್ಯವೇ ಇಲ್ಲ. ಇಷ್ಟು ವರ್ಷಗಳ ಬೆಲೆ ಏರಿಕೆ ಹಣದುಬ್ಬರದ ನಂತರವೂ ಈ ಮೊತ್ತ ಹೆಚ್ಚಿಯೇ ಇಲ್ಲ.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಂಚಿಕೆಯನ್ನು ಶೇ.60ರಷ್ಟು ಹೆಚ್ಚಿಸಿರುವುದಾಗಿ ಎದೆ ತಟ್ಟಿಕೊಳ್ಳಲಾಗಿದೆ. ಆದರೆ ಈ ಯೋಜನೆಗೆ ಸಂಬಂಧಿಸಿದ ವಿನಿಯೋಗ ಕುರಿತ ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಬೇಕಿದೆ. ಫಲಾನುಭವಿಗಳ ಸಂಖ್ಯೆಯನ್ನೇ ಹೇಳುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ನಿಚ್ಚಳ ಪಾರದರ್ಶಕ ಅಂಕಿ ಅಂಶಗಳು ವಿನಿಯೋಗ ಮತ್ತು ಫಲಾನುಭವಿಗಳ ಕುರಿತು ಹೇಳುತ್ತಿಲ್ಲ. ಅದನ್ನು ಹೇಳದೆ ಭಾರೀ ಹೆಚ್ಚಳ ಎಂದು ಹೇಳಲಾಗದು.
ವ್ಯಕ್ತಿಗತ ಆದಾಯ ತೆರಿಗೆ ರಿಯಾಯಿತಿಗಳ ಕುರಿತ ಘೋಷಣೆ ಭಾರೀ ಚಪ್ಪಾಳೆ ಗಿಟ್ಟಿಸಿತು. ಈ ಬಾಬ್ತಿನಲ್ಲಿ ಸರ್ಕಾರ ತಾನು ಬಿಟ್ಟುಕೊಟ್ಟಿರುವ ತೆರಿಗೆ 36 ಸಾವಿರ ಕೋಟಿ ರೂ. ಎಂದು ಬೊಬ್ಬೆ ಹಾಕಿದೆ. ಅಧಿಕತಮ ತೆರಿಗೆ ದರ ಶೇ.42.7 ಇದ್ದದ್ದನ್ನು ಶೇ.39ಕ್ಕೆ ಇಳಿಸಲಾಯಿತು.
ಜಿಡಿಪಿಯ ಶೇ.2.2ನ್ನು ಆರೋಗ್ಯಕ್ಕೆ ಖರ್ಚು ಮಾಡುತ್ತಿರುವುದಾಗಿ ತೋರಿಸಲಾಗಿದೆ. ಆದರೆ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರು ಮತ್ತು ನೈರ್ಮಲ್ಯ ಎರಡನ್ನೂ ಆರೋಗ್ಯದ ಬಾಬತ್ತಿಗೆ ಸೇರಿಸಲಾಗಿದೆ. ಜನರನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ.
ಬಜೆಟ್ಟಿನ ವೆಚ್ಚ ಕಡಿತ ಮತ್ತು ವಂಚಿತ ವರ್ಗಗಳ ಮೇಲೆ ಮಾಡುವ ವೆಚ್ಚವನ್ನು ಉಳ್ಳವರಿಗೆ ವರ್ಗಾವಣೆ ಮಾಡಿರುವ ಕ್ರಮಗಳಿಂದಾಗಿ ಮತ್ತು ಅವರಿಗೆ ನ್ಯಾಯವಾಗಿ ಸಿಗಬೇಕಾದ್ದನ್ನು ವಂಚಿಸಿದ ಕಾರಣ ಬಡಜನರ ಬದುಕುಗಳು ಇನ್ನಷ್ಟು ನೆಲ ಕಚ್ಚಲಿವೆ.
ಹೊಸದಿಲ್ಲಿ: ಮುಂದಿನ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪುರಸ್ಕಾರಕ್ಕೆ ಆನ್‌ಲೈನ್‌ನಲ್ಲಿ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ…
ಮೈಸೂರು : ಭಗವಾನ್ ಮಹಾವೀರ ಆದರ್ಶ ಹಾಗೂ ತತ್ವಗಳು ಅಮೂಲ್ಯವಾದವು. ಅವರ ತತ್ವ ಪಾಲಿಸದರೆ ವಿಶ್ವದಲ್ಲಿ ಶಾಂತಿ, ನೆಮ್ಮದಿ ಉಂಟಾಗಲಿದೆ…
ಮೈಸೂರು : ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.…
ಮೈಸೂರು: ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಶನ್‌ನ ಅಧ್ಯಕ್ಷ ಆರ್ಯನ್…
ಹೊಸದಿಲ್ಲಿ: ಮುಂಬೈ ದಾಳಿಯ ಸಂಚುಕೋರ ತಹವ್ವೂರ್ ರಾಣಾ ಹಸ್ತಾಂತರ ಯಶಸ್ವಿಯಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ. 26/11ರ…
ಮೈಸೂರು : ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ಚದುರಿದಂತೆ ಅಲ್ಲಲ್ಲಿ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಇಂದು ಮತ್ತು ನಾಳೆ ಮೈಸೂರು,…