ಎಡಿಟೋರಿಯಲ್

ಆಂದೋಲನ ಓದುಗರ ಪತ್ರ : 24 ಬುಧವಾರ 2022

ಓದುಗರ ಪತ್ರ

ಸಚಿವರು ಕೊಟ್ಟ ಮಾತು ಉಳಿಸಿಕೊಳ್ಳಿ

ಪೌರಕಾರ್ಮಿಕರ ಸೇವೆಯನ್ನು ಎರಡು ತಿಂಗಳಲ್ಲಿ ಖಾಯಂಗೊಳಿಸುವುದಾಗಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿರುವುದು ಸ್ವಾಗತಾರ್ಹ. ಪೌರಕಾರ್ಮಿಕರ ಸೇವೆ ಖಾಯಂಗೊಳಿಸ–ಬೇಕೆಂಬ ಬೇಡಿಕೆಗೆ ದಶಕಗಳ ಇತಿಹಾಸ ಇದೆ. ಎಲ್ಲ ರಾಜಕೀಯ ಪಕ್ಷಗಳೂ ಬರೀ ಭರವಸೆ ನೀಡುತ್ತಾ ಬಂದಿವೆ. ರಾಜ್ಯದಲ್ಲಿ ಎಂಟ್ಹತ್ತು ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ಸಚಿವರು ಚುನಾವಣಾ ಲಾಭಕ್ಕಾಗಿ ಈ ಭರವಸೆ ನೀಡಿಲ್ಲ ಎಂದು ನಂಬೋಣ. ಒಂದು ವೇಳೆ  ಎರಡು ತಿಂಗಳೊಳಗೆ ಈ ಭರವಸೆ ಈಡೇರಿಸದೇ ಇದ್ದಲ್ಲಿ, ಪೌರಕಾರ್ಮಿಕರು ರಾಜ್ಯ ಸರ್ಕಾರದ ಎಲ್ಲಾ ಸಚಿವರು, ಮತ್ತು ಕಾರ್ಯದರ್ಶಿಗಳ ಮಟ್ಟದಲ್ಲಿರುವ ಹಿರಿಯ ಐಎಎಸ್ ಅಧಿಕಾರಿಗಳ ಮನೆಯ ಸುತ್ತಮುತ್ತ ಕಸ ತೆಗೆಯದೇ ಪ್ರತಿಭಟನೆ ಮಾಡಬೇಕು. ಆಗಲಾದರೂ ಕೊಟ್ಟ ಭರವಸೆ ಈಡೇರುತ್ತದೆ.
-ಚಂದ್ರೇಗೌಡ, ಕನ್ನೇಗೌಡನ ಕೊಪ್ಪಲು, ಮೈಸೂರು.


 

ಆಹಾರ ಸಂಸ್ಕೃತಿ ಅವಹೇಳನ ಸಲ್ಲದು

ಪ್ರಕೃತಿಯಲ್ಲಿರುವ ಪ್ರತಿಯೊಂದು ಮೂಕ  ಪ್ರಾಣಿಗಳು ಮತ್ತು ಸಸ್ಯಗಳಿಗೂ ಮನುಷ್ಯನಂತೆಯೇ ಬದುಕುವ ಹಕ್ಕಿದ್ದರೂ ತನ್ನ ಸ್ವಾರ್ಥಕ್ಕಾಗಿ ಎಲ್ಲವನ್ನೂ ತಿಂದು ತೇಗುವ ಮನುಷ್ಯ ಸಸ್ಯಾಹಾರ- ಮಾಂಸಾಹಾರದ ಹೆಸರಲ್ಲಿ ಮೇಲು ಕೀಳೆಂಬ ಭೇದಭಾವ, ತಾರತಮ್ಯ ಮಾಡುವುದು ಸರಿಯೇ? ರಾಜಕೀಯ ಪಕ್ಷದ ನಾಯಕರೊಬ್ಬರು ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿರುವುದು ಮಹಾಪಾಪವೆಂಬಂತೆ ವಾದ ಮಾಡುವವರಿಗೆ ಇದು ತಿಳಿದಿಲ್ಲವೇ? ಮನುಷ್ಯ ದೇಹವೇ ಮೂಳೆ, ಮಾಂಸ, ರಕ್ತದ ರಚನೆಯೆಂಬುದು? ಮಾಂಸ ತಿಂದವರು ದೇವಸ್ಥಾನಕ್ಕೆ ಪ್ರವೇಶಿಸಬಾರದೆನ್ನುವವರಿಗೆ ತಿಳಿದಿಲ್ಲವೇ? ದೇವಸ್ಥಾನಗಳನ್ನು ನಿರ್ಮಿಸಲು ಕಲ್ಲು, ಮಣ್ಣನ್ನು ತಲೆ ಮೇಲೆ ಹೊತ್ತವರು ಮಾಂಸಾಹಾರಿಗಳೆಂಬುದು ಗೊತ್ತಿಲ್ಲವೆ? ದೇವರು ಧರ್ಮದ ಹೆಸರಿನಲ್ಲಿ ಪ್ರಪಂಚದ ಬಹುತೇಕ ಜನರ ಆಹಾರವಾಗಿರುವ ಮಾಂಸಾಹಾರದ ಹೆಸರಲ್ಲಿ ನಿಂದನೆ ಮಾಡುವುದು ದೇವರಿಗೇ ಮಾಡುವ ಅಪಮಾನವಲ್ಲದೆ ಮತ್ತೇನೂ ಅಲ್ಲ. ಸ್ವಾಮಿ ವಿವೇಕಾನಂದರೇ ಹೇಳಿರುವ ಹಾಗೆ ಭಾರತದಲ್ಲಿ ಮಾಂಸಾಹಾರದ ಸೇವನೆ ಮಾಡದವರೇ ಇರಲಿಲ್ಲ, ಯಜ್ಞ ಯಾಗಾದಿಗಳಲ್ಲಿ ಹವಿಸ್ಸೆಂಬ ಹೆಸರಲ್ಲಿ ಪ್ರಾಣಿಗಳ ರಕ್ತ, ಮಾಂಸವನ್ನು ಅರ್ಪಿಸುತ್ತಿದ್ದದ್ದು ಈಗಲೂ ಅರ್ಪಿಸುತ್ತಿರುವುದು ಸುಳ್ಳೇ?  ಜಗತ್ತಿಗೇ ಶಾಂತಿ, ಕರುಣೆ, ಪ್ರೀತಿಯ ಮಹತ್ವವನ್ನು ಬೋಧಿಸಿದ ಬುದ್ಧ ಮತ್ತು ಏಸುಕ್ರಿಸ್ತರಿಬ್ಬರೂ ಮಾಂಸಾಹಾರವನ್ನು  ವಿರೋಧಿಸದಿರುವಾಗ ಸಸ್ಯಾಹಾರಿಗಳೆಂದುಕೊಂಡು ಸಮಾಜ, ದೇಶವನ್ನು ಒಡೆಯುವ, ದೇವರ ಹೆಸರಲ್ಲಿ ದುಡಿಯದೇ ಬದುಕುವವರಿಗೆ ಆಹಾರ ಸಂಸ್ಕೃತಿಯನ್ನು ಅವಹೇಳನ ಮಾಡುವ ನೈತಿಕತೆ ಇದೆಯೇ?
– ಮಲ್ಲಿಕಾರ್ಜುನಪ್ಪ ಪಿ., ಮಹಾರಾಜ ಕಾಲೇಜು, ಮೈಸೂರು.


ಕಾಲಮಿತಿಯೊಳಗೆ ದಂಡ ವಸೂಲಿ ಮಾಡಿ

ಸಂಚಾರ ನಿಯಮಗಳ ಉಲ್ಲಂಘನೆಯ ಪ್ರಕರಣಗಳಲ್ಲಿ ದಂಡ ವಸೂಲಾತಿಗಾಗಿ ಲೋಕ ಅದಾಲತ್‌ನಿಂದ  ತಿಳಿವಳಿಕೆ ಪತ್ರವನ್ನು ಹೊರಡಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರುಗಳ ನೋಂದಾಯಿತ ಫೋನ್ ನಂಬರ್‌ಗಳಿಗೆ ಸಂದೇಶವನ್ನು ಕಳುಹಿಸಿ ದಂಡ ಪಾವತಿಸಲು ತಿಳಿವಳಿಕೆ ನೀಡಲಾಗುತ್ತಿದೆ. ಇಷ್ಟರಮಟ್ಟಿಗೆ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಸರ್ಕಾರದ ಬೊಕ್ಕಸ ತುಂಬಿಸುವ ಕೆಲಸದಲ್ಲಿ ನಿರತರಾಗಿರುವ ಪೊಲೀಸ್ ಇಲಾಖೆ ಮತ್ತು ಲೋಕ ಅದಾಲತ್ ಅಧಿಕಾರಿಗಳನ್ನು ಶ್ಲಾಘಿಸಬೇಕು. ಆದರೆ ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಲೋಪ ಉಂಟಾಗುತ್ತಿದೆ. ಕೇವಲ ದಂಡ ಪಾವತಿಯ ಶಿಕ್ಷೆ ಇರುವ  ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ಕಾಲಾವಧಿ ಮೀರಿದರೆ ದಂಡಪ್ರಕ್ರಿಯಾ ಸಂಹಿತೆ ಕಲಂ ೪೬೮(೨)(ಎ)ರಂತೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ ಕಾರಣ ಉಲ್ಲಂಘನೆಯಾದ ೬ ತಿಂಗಳ ಒಳಗೆ ಸೂಕ್ತ ಕ್ರಮ ಕೈಗೊಂಡು ತಮ್ಮ ದಕ್ಷತೆಯನ್ನು ಮೆರೆಯಬೇಕಾಗಿ ವಿನಂತಿ.
-ಎಸ್.ರವಿ, ವಕೀಲ, ಮೈಸೂರು.


ನಾಡಿನ ಹಿರಿಮೆ ಕಾಪಾಡೋಣ

ನಮ್ಮ ನಾಡಿನಲ್ಲಿ ಹಿಂಸೆಯ ವಾತಾವರಣ ಸೃಷ್ಟಿಯಾಗುತ್ತಿರುವುದು ಆತಂಕ ತಂದಿದೆ. ಈ ಹಿಂದೆ ವಚನಕಾರ ಬಸವಣ್ಣ ‘ದಯವೇ ಧರ್ಮದ ಮೂಲವಯ್ಯಾ’ ಎಂಬ ಸಂದೇಶ ಸಾರಿದ್ದರು. ವರಕವಿ ದ.ರಾ.ಬೇಂದ್ರೆ ‘ಜಗದೇಳಿಗೆ ಯಾಗುವುದಿದೆ ಕರ್ನಾಟಕದಿಂದೆ…’ ಎಂದು ಜಗತ್ತಿನ ಏಳಿಗೆಗೆ ಕನ್ನಡನಾಡು ಮುನ್ನುಡಿ ಬರೆಯುತ್ತದೆ ಎಂದಿದ್ದರು. ಇದೀಗ ನಾಡಿನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಈ ಮಹನೀಯರ ಸಂದೇಶಗಳಿಗೆ ಧಕ್ಕೆ ತರುವಂಥ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಮನದಟ್ಟಾಗುತ್ತದೆ. ಇದು ನಿಜಕ್ಕೂ ಕನ್ನಡಿಗರು ತಲೆತಗ್ಗಿಸುವಂತಹ ಸಂಗತಿ. ಇಂತಹ ಕೃತ್ಯಗಳಿಗೆ ಎಲ್ಲರೂ ಸೇರಿ ಕಡಿವಾಣ ಹಾಕಿ, ನಮ್ಮ ನಾಡಿನ ಹಿರಿಮೆಯನ್ನು ಕಾಪಾಡಬೇಕಿದೆ.
   -ಪವನ್ ಕಲ್ಯಾಣ್, ಮಹಾರಾಜ ಕಾಲೇಜು, ಮೈಸೂರು

andolanait

Recent Posts

ಓದುಗರ ಪತ್ರ: ಕಾನೂನು ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತೆ?

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ವಿಧೇಯಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಡಿ.೧೮ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ…

6 mins ago

ಓದುಗರ ಪತ್ರ:  ಸಾಮಾಜಿಕ ಬಹಿಷ್ಕಾರ ನಿಷೇಧ ಕಾನೂನು ಸ್ವಾಗತಾರ್ಹ

ರಾಜ್ಯದಲ್ಲಿ ‘ಸಾಮಾಜಿಕ ಬಹಿಷ್ಕಾರ ನಿಷೇಧ ’ ಕಾನೂನನ್ನು ಜಾರಿಗೊಳಿಸಲು ಮುಂದಾಗಿರುವ ರಾಜ್ಯಸರ್ಕಾರದ ಕ್ರಮ ಶ್ಲಾಘನೀಯ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ಸಾರ್ವಭೌಮತೆ,…

9 mins ago

ಓದುಗರ ಪತ್ರ:  ‘ರಾಮ ಜಪ’ ಮಸೂದೆ ತಿರಸ್ಕರಿಸಿ

ಬುದ್ಧನ ಚಿಂತನೆಗಳನ್ನು ಭಾರತದಿಂದ ಓಡಿಸಿದಂತೆ, ಮಹಾತ್ಮ ಗಾಂಧೀಜಿಯವರನ್ನು ಭಾರತೀಯರ ಮನಸ್ಸಿನಿಂದಿಂದಲೇ ತೆಗೆದುಹಾಕುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಕುತಂತ್ರ ಬಯಲಾಗಿದೆ.…

12 mins ago

‘ಮಾದಾರಿ ಮಾದಯ್ಯ’ ವರ್ತಮಾನದ ಅವಶ್ಯ ರಂಗ ಪ್ರಯೋಗ

ಮಹದೇವ ಶಂಕನಪುರ ಎಚ್.ಎಸ್.ಶಿವಪ್ರಕಾಶ್ ಅವರ ನಾಟಕ ‘ಮಾದಾರಿ ಮಾದಯ್ಯ’ ಕಳೆದ ೩೫ ವರ್ಷಗಳಿಂದಲೂ ಕನ್ನಡ ನೆಲದಲ್ಲಿ ಅಭಿನಯಿಸಲ್ಪಡುತ್ತಿದೆ. ಮೊದಲಿಗೆ ೧೯೯೦ರಲ್ಲಿ…

55 mins ago

ಅಯೋಧ್ಯೆಯಲ್ಲಿ ಗಣಪತಿ ಆಶ್ರಮ ಶಾಖೆ ಉದ್ಘಾಟನಾ ಕಾರ್ಯಕ್ರಮ

ಮೈಸೂರು: ದೇಶ-ವಿದೇಶಗಳಲ್ಲಿ ಜನ ಸಮೂಹವನ್ನು ಹೊಂದಿರುವ ಅವಧೂತ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ನೂತನ ಶಾಖೆಯನ್ನು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ…

4 hours ago

ಜನವರಿ.5ಕ್ಕೆ ಮೈಸೂರು ವಿವಿ 106ನೇ ಘಟಿಕೋತ್ಸವ

ಕುಲಪತಿ ಲೋಕನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ೧೦೬ನೇ ಘಟಿಕೋತ್ಸವವನ್ನು ಜ.೫ರಂದುನಡೆಸಲು ತೀರ್ಮಾನಿಸಲಾಗಿದ್ದು, ಘಟಿಕೋತ್ಸವ…

4 hours ago