ಎಡಿಟೋರಿಯಲ್

ರಾಜೀನಾಮೆಯ ರಾಜಕೀಯ ಚಟ ಮತ್ತು ಉತ್ತರದಾಯಿತ್ವ

ನಾ. ದಿವಾಕರ

ಸ್ವತಂತ್ರ ಭಾರತದ ಪ್ರಜಾತಂತ್ರ-ಗಣತಂತ್ರ ವ್ಯವಸ್ಥೆಯಲ್ಲಿ ಭಾರತ ಕಳೆದುಕೊಂಡಿರುವ ಅಮೂಲ್ಯ ವಸ್ತುಗಳೇನಾದರೂ ಇದ್ದರೆ ಅದು ಸಾಂವಿಧಾನಿಕ ನೈತಿಕತೆ ಮತ್ತು ಆಳ್ವಿಕೆಯ ಉತ್ತರದಾಯಿತ್ವ . ಇನ್ನು ಸರಿಪಡಿಸಲಾಗದಷ್ಟು ಅಥವಾ ಮರಳಿ ಗಳಿಸಬಾರದ ರೀತಿಯಲ್ಲಿ ಕಣ್ಮರೆಯಾಗಿರುವ ಈ ಎರಡೂ ಆಡಳಿತಾತ್ಮಕ ಮೌಲ್ಯಗಳನ್ನು ನಾವು ಕಳೆದುಕೊಂಡಿದ್ದೇವೆ. ಇದಕ್ಕೆ ಪುಷ್ಟಿ ನೀಡುವ ರೀತಿಯಲ್ಲಿ ಸಾಂವಿಧಾನಿಕ ತನಿಖಾ ಸಂಸ್ಥೆಗಳು ಹಾಗೂ ಇತರ ಕಾನೂನಾತ್ಮಕ-ಆಡಳಿತಾತ್ಮಕ ಸಂಸ್ಥೆಗಳು ಆಡಳಿತಾರೂಢ ಪಕ್ಷಗಳಿಗೆ ಅಧಿನವಾಗಿ ನಡೆದುಕೊಳ್ಳುವ ಪರಂಪರೆಗೂ ಸ್ವತಂತ್ರ ಭಾರತದಷ್ಟೇ ವರ್ಷಗಳಾಗಿವೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಇದು ಪರಾಕಾಷ್ಠೆ ತಲುಪಿದ್ದು, ಮತ-ಧರ್ಮದ ಅಸ್ಮಿತೆಗಳ ನಡುವೆ ನಿಷ್ಕರ್ಷೆಯಾಗುವ ಹಂತ ತಲುಪಿದೆ.

ಈ ನಡುವೆಯೇ ವರ್ತಮಾನದ ಭಾರತೀಯ ಸಮಾಜ ಹಲವು ಸಮಾಜಘಾತುಕ ಚಟುವಟಿಕೆಗಳಿಗೆ ತವರು ಮನೆಯಂತಾಗಿದೆ. ಭಯೋತ್ಪಾದನೆ, ಮತೀಯ-ಕೋಮುದ್ವೇಷ, ಮತಾಂಧರ ಆಕ್ರಮಣಗಳು, ಅಸ್ಪೃಶ್ಯತೆಯನ್ನೂ ಒಳಗೊಂಡಂತೆ ಸಾಮಾಜಿಕ ಬಹಿಷ್ಕಾರ ಮತ್ತು ಅಂತರ್ಜಾತಿ ವಿವಾಹದ ಹಿನ್ನೆಲೆಯಲ್ಲಿ ನಡೆಯುವ ಹತ್ಯೆಗಳು, ಜಾತಿ ದೌರ್ಜನ್ಯಗಳು, ಮಹಿಳೆಯರ ಮೇಲಿನ ನಿರಂತರ ಅತ್ಯಾಚಾರ-ದೌರ್ಜನ್ಯಗಳು, ಮತಾಂತರ ಮತ್ತು ಆಹಾರ ಸಂಸ್ಕೃತಿಯ ನೆಲೆಯಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹಾಗೂ ವ್ಯಕ್ತಿಗತ ನೆಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕೊಲೆಗಳು, ನಮ್ಮ ಸಮಾಜವನ್ನು ಶತಮಾನಗಳಷ್ಟು ಹಿಂದಕ್ಕೆ ಕೊಂಡೊಯ್ದಿವೆ. ರೈತರ ಆತ್ಮಹತ್ಯೆಯನ್ನು ಹೊರತುಪಡಿಸಿ ಉಳಿದೆಲ್ಲವೂ ಮಾನವ ಸಮಾಜದ ಒಳಗೇ ಸಹಮಾನವರಿಂದ ನಡೆಯುವ ದುಷ್ಕ ತ್ಯಗಳಾಗಿರುತ್ತವೆ.

ಮಹಿಳಾ ಸಮುದಾಯದ ದೃಷ್ಟಿಯಿಂದ ನೋಡಿದಾಗ ಮಥುರಾದಿಂದ ಭನ್ವಾರಿ ದೇವಿ, ಸೌಜನ್ಯ, ನಿರ್ಭಯ ಮತ್ತು ಇತ್ತೀಚಿನ ಅಭಯ ಪ್ರಕರಣದವರೆಗೂ, ಅಮಾನುಷ ಘಟನೆಗಳು ನಮ್ಮ ಸಮಾಜಕ್ಕೆ ಕಳಂಕಪ್ರಾಯವಾಗಿ ಪರಿಣಮಿಸಿವೆ. ದಲಿತ ಜಗತ್ತಿನಲ್ಲಿ ಬಿಹಾರದಿಂದ ಕರ್ನಾಟಕದವರೆಗೆ ಶೋಷಿತ ಸಮುದಾಯದ ಜನರ ಜೀವಂತ ದಹನಕ್ಕೆ, ಮಾರಣಾಂತಿಕ ಹಲ್ಲೆಗೆ, ಇಡೀ ಕಾಲೋನಿಗಳನ್ನೇ ಸುಟ್ಟುಹಾಕುವ ಘಟನೆಗಳು ಕೀಲ್ವೆನ್ಮಣಿಯಿಂದ ಕೊಪ್ಪಳದವರೆಗೂ ವಿಸ್ತರಿಸಿದೆ.

ಸಾಂಸ್ಕೃತಿಕ ರಾಜಕೀಯ ಆಯಾಮ
ಕಳೆದ ಮೂರು ದಶಕಗಳಲ್ಲಿ ದೇಶದ ರಾಜಕಾರಣ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಒಂದು ಭಾಗವಾಗಿರುವ ಮತೀಯವಾದ, ಮತಾಂಧತೆ ಮತ್ತು ಮತದ್ವೇಷದ ವಾತಾವರಣದಲ್ಲಿ, ಕೋಮು ದ್ವೇಷಕ್ಕೆ ಬಲಿಯಾದ ನೂರಾರು ಜೀವಗಳು ನಮಗೆ ಎದುರಾಗುತ್ತವೆ. ಅಕ್ಲಾಖ್-ಪೆಹ್ಲೂಖಾನ್‌ನಿಂದ ಇತ್ತೀಚಿನ ಪ್ರವೀಣ್ ನೆಟ್ಟಾರು-ಸುಹಾಸ್ ಶೆಟ್ಟಿ ಮತ್ತು ಫಾಝಿಲ್ ವರೆಗೆ ಅಮಾಯಕರು ಅನ್ಯ ಮತದ್ವೇಷದ ಕಾರಣಕ್ಕಾಗಿಯೇ ಬಲಿಯಾಗಿದ್ದಾರೆ. ಡಿಜಿಟಲ್ ವೈಜ್ಞಾನಿಕ ಯುಗದ ತಂತ್ರಜ್ಞಾನಗಳು ಮಾನವ ಸಮಾಜವನ್ನು ಉನ್ನತಿಗೆ ಕೊಂಡೊಯ್ಯುವುದಕ್ಕಿಂತಲೂ ಹೆಚ್ಚಾಗಿ ಮನುಷ್ಯನಲ್ಲಿನ ಹಿಂಸೆ, ಕ್ರೌರ್ಯ, ಅಸಹನೆ, ದ್ವೇಷ ಮತ್ತು ಪ್ರತೀಕಾರದ ಮನೋಧೋರಣೆಗಳನ್ನು ಈಡೇರಿಸುವ ಹೊಸ ತಂತ್ರಗಳನ್ನು ಕಲಿಸಿಕೊಟ್ಟಿವೆ.

ಈ ರೂಪಾಂತರಗೊಂಡ ಅಪರಾಧಕ ಜಗತ್ತಿನ ನಡುವೆ, ಸ್ವತಂತ್ರ ನಾಗರಿಕರಾಗಿ ನಾವು ಯೋಚಿಸಬೇಕಾಗಿರುವುದು, ಈ ದುರಂತಮಯ ಸಮಾಜಕ್ಕೆ ಕಾರಣಕರ್ತರು ಯಾರು? ಅಪರಾಧ ಶೂನ್ಯದಲ್ಲಿ ಸಂಭವಿಸುವುದಿಲ. ಅಪರಾಧಿಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುವುದಿಲ್ಲ ಜೀವಹರಣದ ಕೃತ್ಯಗಳು ಆಧುನಿಕ ಸಮಾಜದ ನಡುವೆಯೇ ಸಂಭವಿಸುತ್ತಿವೆ. ಎಲ್ಲ ಘಟನೆಗಳಿಗೂ ಚುನಾಯಿತ ಸರ್ಕಾರಗಳೇ ನೇರ ಕಾರಣವಾಗಲಾರವು. ಆದರೆ ರಾಜಕೀಯ ಪಕ್ಷಗಳು ತಮ್ಮ ಸ್ವಹಿತಾಸಕ್ತಿ-ಅಸ್ತಿತ್ವ-ಅಧಿಕಾರಕ್ಕಾಗಿ ಸಮಾಜದ ಒಂದು ವರ್ಗವನ್ನು ಪೋಷಿಸುವ, ಉತ್ತೇಜಿಸುವ ಪ್ರಕ್ರಿಯೆಯನ್ನೂ ಗುರುತಿಸಬಹುದು.

ಭಾರತದಲ್ಲಿ ದೈವಭಕ್ತಿಯ ಉನ್ಮಾದ ಮತ್ತು ಅದರಿಂದ ಸೃಷ್ಟಿಯಾಗುವ ಸಮೂಹ ಸನ್ನಿಯ ಪರಿಣಾಮ ಸಾವಿರಾರು ಸಾವುಗಳು ಕಳೆದ ಐವತ್ತು ವರ್ಷಗಳಲ್ಲಿ ಸಂಭವಿಸಿವೆ. ಇತ್ತೀಚಿನ ಕುಂಭಮೇಳ ಒಂದು ಜ್ವಲಂತ ನಿದರ್ಶನ. ಈ ಧಾರ್ಮಿಕ ಉನ್ಮಾದ ಮತ್ತು ಸಮೂಹ ಸನ್ನಿ ಮೆಕ್ಕಾದಲ್ಲೂ ೨೦೧೫ರಲ್ಲಿ ೨೦೦೦ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡಿತ್ತು. ೧೯೫೪ರ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ೫೦೦ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಧಾರ್ಮಿಕ ಉತ್ಸವ-ಸಮಾರಂಭಗಳಲ್ಲಿ ೨,೫೦೦ಕ್ಕೂ ಹೆಚ್ಚು ಜನರು ಕಾಲ್ತುಳಿತದಿಂದ ಜೀವ ಕಳೆದುಕೊಂಡಿರುವುದನ್ನು ವಿಕಿಪೀಡಿಯಾ ದಾಖಲಿಸಿದೆ. ಸಿನೆಮಾ ಹೀರೋಗಳನ್ನು ದೈವೀಕವಾಗಿಸಿ ಅವರಿಗೆ ಕ್ಷೀರಾಭಿಷೇಕದಿಂದ ಹಿಡಿದು ಪೂಜಾರಾಧನೆ ಮಾಡುವವರೆಗೂ ವಿಸ್ತರಿಸುವ ಸಮೂಹ ಸನ್ನಿಗೆ ಮಿಲೆನಿಯಂ ಮಕ್ಕಳೂ ಸೇರಿದಂತೆ ಯುವ ಸಮೂಹ ಬಲಿಯಾಗಿರುವುದು ವಾಸ್ತವ. ಈ ಸಾಮಾಜಿಕ ವಿಕೃತಿಗಳಿಗೆ ಈಗ ಐಪಿಎಲ್ ಎಂಬ ಜೂಜಾಟ ಕ್ರಿಕೆಟ್ ಸ್ಪರ್ಶವನ್ನೂ ನೀಡಿದೆ. ಕ್ರಿಕೆಟ್ ಸಮೂಹ ಸನ್ನಿಗೆ ಚಿನ್ನಸ್ವಾಮಿ ಕ್ರೀಡಾಂಗಣದ ದುರಂತ ಸ್ಪಷ್ಟ ಉದಾಹರಣೆಯಾಗಿದೆ.

ಜವಾಬ್ದಾರಿ ಮತ್ತು ಉತ್ತರದಾಯಿತ್ವ
ಆದರೆ ಭಾರತ ಇದಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದೆ. ಈ ನಡುವೆಯೇ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ೧೧ ಜನರು ಸಾವನ್ನಪ್ಪಿರುವುದು ರಾಜ್ಯವನ್ನು ತಲ್ಲಣಗೊಳಿಸಿದೆ. ಐಪಿಎಲ್ ಪಂದ್ಯಾವಳಿಯಲ್ಲಿ ೧೮ ವರ್ಷಗಳ ನಂತರ ಪ್ರಶಸ್ತಿ ಪಡೆದ ಆರ್‌ಸಿಬಿ ತಂಡವನ್ನು ಸನ್ಮಾನಿಸುವ ರಾಜ್ಯ ಸರ್ಕಾರದ ತವಕ ಮತ್ತು ಆತುರದ ನಡೆ, ಪೂರ್ವಸಿದ್ಧತೆಗಳಿಲ್ಲದೆಯೇ ಏರ್ಪಡಿಸಲಾದ ಸಾರ್ವಜನಿಕ ಕಾರ್ಯಕ್ರಮ ಈ ದುರ್ಘಟನೆಗೆ ಕಾರಣವಾಗಿದೆ.

ಆಡಳಿತ ಜವಾಬ್ದಾರಿ ಮತ್ತು ಆಳ್ವಿಕೆಯ ಉತ್ತರದಾಯಿತ್ವ ಇವೆರಡೂ ಬೇರ್ಪಡಿಸಬಾರದ, ಬೇರ್ಪಡಿಸಲಾಗದ ಅಂಶಗಳು. ಉತ್ತರದಾಯಿತ್ವ ಇಲ್ಲದ ಜವಾಬ್ದಾರಿ ಕೇವಲ ತೋರಿಕೆಯಾಗುತ್ತದೆ. ಸಾಂವಿಧಾನಿಕವಾಗಿ ಇದು ಅಪೇಕ್ಷಿತವಾಗಲಾರದು. ಸರ್ಕಾರ ಯಾವುದೇ ಪಕ್ಷದಿಂದ ರಚನೆಯಾದರೂ, ಸಾಮಾಜಿಕ ಶಾಂತಿ, ಸೌಹಾರ್ದತೆ ಮತ್ತು ಸಮನ್ವಯವನ್ನು ಕಾಪಾಡುವುದು ಅವುಗಳ ಕರ್ತವ್ಯ. ಇದಕ್ಕೆ ಸಾಂವಿಧಾನಿಕ ನೈತಿಕತೆ ಮತ್ತು ಆಡಳಿತಾತ್ಮಕ ಉತ್ತರದಾಯಿತ್ವದ ಪ್ರಜ್ಞೆ ಮುಖ್ಯವಾಗುತ್ತದೆ. ಭಾರತದ ರಾಜಕೀಯ ಪಕ್ಷಗಳಲ್ಲಿ ಈ ಎರಡೂ ಮೌಲ್ಯಗಳು ನಶಿಸಿಹೋಗುತ್ತಿರುವುದು ದುರಂತವಾದರೂ ವಾಸ್ತವ.

ಈ ಹಿನ್ನೆಲೆಯಲ್ಲಿ ಗಮನಿಸಬೇಕಿರುವುದು ಕರ್ನಾಟಕದ ವಿರೋಧ ಪಕ್ಷಗಳಾದ ಬಿಜೆಪಿ-ಜಾ. ದಳ ನಾಯಕರಿಂದ ಮುಖ್ಯಮಂತ್ರಿ-ಉಪಮುಖ್ಯವ ಮಂತ್ರಿಯ ರಾಜೀನಾಮೆಯ ಆಗ್ರಹ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ಅಭಿಯಾನವನ್ನೇ ಹಮ್ಮಿಕೊಂಡಿದೆ. ಯಾವುದೇ ದುರ್ಘಟನೆಗಳಿಗೆ ನೈತಿಕ ಜವಾಬ್ದಾರಿ ಹೊರುವ ಮನೋಭಾವನೆ ಯಾವ ರಾಜಕೀಯ ಪಕ್ಷಗಳಲ್ಲೂ ಉಳಿದಿಲ್ಲ ಎನ್ನುವುದು ಸಮಕಾಲೀನ ಭಾರತ ನಿರೂಪಿಸಿರುವ ಕಟು ಸತ್ಯ.

ಕರ್ನಾಟಕದಲ್ಲೇ ಯಾವ ಮುಖ್ಯಮಂತ್ರಿಯೂ, ಯಾವ ಸಚಿವರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದ ನಿದರ್ಶನಗಳು ನಮ್ಮ ಮುಂದಿಲ್ಲ. ಹಾಗೆ ಸರ್ಕಾರಗಳ ನಿರ್ಲಕ್ಷ್ಯದಿಂದ ಸಾರ್ವಜನಿಕ ಜೀವನದಲ್ಲಿ ಅಮಾಯಕ ಜೀವಗಳು ಬಲಿಯಾದಾಗಲೆಲ್ಲಾ, ಆಳ್ವಿಕೆಯ ವಾರಸುದಾರರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದೇ ಆದರೆ, ಬಹುಶಃ ವರ್ತಮಾನ ಭಾರತದ ಯಾವ ರಾಜಕೀಯ ಪಕ್ಷವೂ ಅಧಿಕಾರಕ್ಕೆ ಅರ್ಹವಾಗುವುದಿಲ್ಲ.

ಸಾಂವಿಧಾನಿಕ ಮೌಲ್ಯಗಳನ್ನು, ಪ್ರಜಾಪ್ರಭುತ್ವವನ್ನು ಸಂರಕ್ಷಿಸಲು ದೇಶಾದ್ಯಂತ ನಿರಂತರ ಹೋರಾಟಗಳು ನಡೆಯುತ್ತಿರುವ ಸಂದರ್ಭದಲ್ಲಿ ಆಳ್ವಿಕೆಯ ಜವಾಬ್ದಾರಿ ಮತ್ತು ಆಳುವವರ ಉತ್ತರದಾಯಿತ್ವದ ಪ್ರಶ್ನೆಯನ್ನು ತಳಸಮಾಜದವರೆಗೂ ಕೊಂಡೊಯ್ದಾಗ, ಜನಸಾಮಾನ್ಯರಲ್ಲಿ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಇಮ್ಮಡಿಯಾಗುತ್ತದೆ. ತಮ್ಮ ಸರ್ಕಾರವಿದ್ದಾಗ ನಡೆಯುವ ದುರ್ಘಟನೆಗಳಿಗೆ ಕಾನೂನು ಪ್ರಕ್ರಿಯೆ ತನ್ನದೇ ಆದ ರೀತಿಯಲ್ಲಿ ನಿಭಾಯಿಸುತ್ತದೆ ಎಂಬ ಕಾರಣ ನೀಡುವ ಪಕ್ಷಗಳೇ, ವಿರೋಧ ಪಕ್ಷಗಳಾಗಿದ್ದಾಗ ಚುನಾಯಿತ ಸರ್ಕಾರ ಅಥವಾ ಮುಖ್ಯಮಂತ್ರಿಗಳು ‘ ನೈತಿಕ ಹೊಣೆ ಹೊತ್ತು ’ ರಾಜೀನಾಮೆ ನೀಡಲು ಆಗ್ರಹಿಸುವುದು Hypocracy ಎನಿಸುವುದಿಲ್ಲವೇ ?

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪೌರ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಿ

ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…

3 hours ago

ಓದುಗರ ಪತ್ರ: ಪರೀಕ್ಷೆ ವೇಳೆ ಆರೋಗ್ಯ ಏರುಪೇರಾದರೆ ಬದಲಿ ವ್ಯವಸ್ಥೆ ಕಲ್ಪಿಸಿ

ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…

3 hours ago

ಓದುಗರ ಪತ್ರ: ಅಂಚೆ ಕಚೇರಿ ಚಲನ್‌ಗಳು ಕನ್ನಡದಲ್ಲಿರಲಿ

ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…

4 hours ago

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ರಾಜ್ಯ ಸರ್ಕಾರದ ಮೇಲೆ ರಾಜ್ಯಪಾಲರ ಸವಾರಿಗೆ ಬೇಕಿದೆ ಕಡಿವಾಣ

ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…

4 hours ago

ಮೂಗಿನ ನೇರಕ್ಕೆ ಇತಿಹಾಸವನ್ನು ತಿರುಚುವುದಿದೆಯಲ್ಲಾ….

‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…

4 hours ago

ಸಂವಿಧಾನ ನಮ್ಮ ಬಳಿ ಇದೆ, ಆದರೆ ಅದರ ಧ್ವನಿ ಎಲ್ಲಿದೆ?

ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…

4 hours ago