ಮೈಸೂರು

ಮೈಸೂರು ದಸರಾ | ದೀಪಾಲಂಕಾರಕ್ಕೆ ಈ ಬಾರಿ ಇನ್ನಷ್ಟು ಮೆರಗು

ಮೈಸೂರು :ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್‌ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿವಹಿಸಿ ಕೆಲಸ ಮಾಡಿ ಎಂದು ಅಧಿಕಾರಿಗಳು ಹಾಗೂ ದೀಪಾಲಂಕಾರ ಮಾಡುವ ವಿದ್ಯುತ್‌ ಗುತ್ತಿಗೆದಾರರಿಗೆ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಸೆಸ್ಕ್‌) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್‌ ಸಲಹೆ ನೀಡಿದರು.

ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ದಸರಾ ಮಹೋತ್ಸವದ ಸಂದರ್ಭದಲ್ಲಿ ಮಾಡಲಾಗುವ ವಿದ್ಯುತ್‌ ದೀಪಾಲಂಕಾರ ಎಲ್ಲರ ಗಮನ ಸೆಳೆಯಲಿದೆ. ಹೀಗಾಗಿ ಈ ಬಾರಿಯ ವಿದ್ಯುತ್‌ ದೀಪಾಲಂಕಾರವನ್ನು ಕಳೆದ ವರ್ಷಕ್ಕಿಂತ ಹೆಚ್ಚು ಆಕರ್ಷಕವಾಗಿ ಮಾಡಲು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ನಿಗಮದ ವತಿಯಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ” ಎಂದರು.

“ದಸರಾ ದೀಪಾಲಂಕಾರ ವಿಶ್ವಮಟ್ಟದಲ್ಲಿ ಆಕರ್ಷಣೀಯಗೊಳಿಸಲು ಸೆಸ್ಕ್‌ ಜತೆಗೆ ವಿದ್ಯುತ್‌ ಗುತ್ತಿಗೆದಾರರು ಪ್ರಮುಖ ಕಾರಣರಾಗಿದ್ದಾರೆ. ಪ್ರತಿವರ್ಷದ ರೀತಿಯಲ್ಲಿ ಈ ಬಾರಿಯೂ ಸಹ ವಿದ್ಯುತ್‌ ದೀಪಾಲಂಕಾರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ದಸರಾ ಆರಂಭದಲ್ಲಿ ಹಾಗೂ ದಸರಾ ಮುಗಿದ ಬಳಿಕವೂ ಎಲ್ಲರನ್ನೂ ಆಕರ್ಷಿಸುವ ದೀಪಾಲಂಕಾರವನ್ನು ಹೊಸತನದ ಜತೆಗೆ ಹೆಚ್ಚು ಆಕರ್ಷಕವಾಗಿ ಮಾಡುವ ಬಗ್ಗೆ ಈಗಿನಿಂದಲೇ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ದೀಪಾಲಂಕಾರವನ್ನು ಹೆಚ್ಚಿನ ಆಕರ್ಷಣೀಯವಾಗಿ ಮಾಡುವುದು ಮಾತ್ರವಲ್ಲದೇ ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ದೀಪಾಲಂಕಾರ ಮಾಡುವುದು ಮುಖ್ಯ” ಎಂದು ಸಲಹೆ ನೀಡಿದರು.

ಸುರಕ್ಷತೆಗೆ ಆದ್ಯತೆ ನೀಡಿ ; “ದಸರಾ ದೀಪಾಲಂಕಾರದ ಸೌಂದರ್ಯ ಕಣ್ತುಂಬಿಕೊಳ್ಳಲು ಸಾಕಷ್ಟು ಜನರು ಆಗಮಿಸುತ್ತಾರೆ. ಆದ್ದರಿಂದ ದೀಪಾಲಂಕಾರದ ಅಂದವನ್ನು ಹೆಚ್ಚಿಸುವುದರ ಜತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯವಾಗಿದೆ. ದಸರಾ ವೇಳೆಯಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರಲಿದೆ. ಆದ್ದರಿಂದ ಮಳೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಎಚ್ಚರವಹಿಸಿ, ದೀಪಾಲಂಕಾರ ಮಾಡುವಲ್ಲಿ ಹೆಚ್ಚಿನ ಗಮನವಹಿಸಬೇಕೆಂದು” ವಿದ್ಯುತ್‌ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ರೂಪುರೇಷೆಗಳು ಸಿದ್ಧ ; “ದಸರಾ ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಈ ಬಾರಿ ಆಕರ್ಷಕ ರೀತಿಯಲ್ಲಿ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ಜತೆಗೆ ನಗರದಲ್ಲಿರುವ ವೃತ್ತಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಬೇಕೆಂದು ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯವಿರುವ ರೂಪುರೇಷೆಗಳು, ಕೆಲವೊಂದು ಡಿಸೈನ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗುತ್ತಿದೆ” ಎಂದರು.

ಪೂರ್ವಸಿದ್ಧತೆ ಇರಲಿ ; “ದಸರಾ ಮಹೋತ್ಸವದ ಆರಂಭದಿಂದಲೇ ವಿದ್ಯುತ್‌ ದೀಪಾಲಂಕಾರಕ್ಕೂ ಚಾಲನೆ ದೊರೆಯಲಿದೆ. ಹೀಗಾಗಿ ದೀಪಾಲಂಕಾರ ಮಾಡುವ ಜವಾಬ್ದಾರಿ ಹೊತ್ತವರು ಕೊನೆಯ ಹಂತದವರೆಗೂ ಕೆಲಸ ಮಾಡದೆ, ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಕೆಲವೊಂದು ರಸ್ತೆಗಳಲ್ಲಿ ಮಾಡಲಾಗಿದ್ದ ದೀಪಾಲಂಕಾರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಹೀಗಾಗಿ ಈ ಬಾರಿ ಇಂತಹ ಸಮಸ್ಯೆಗಳು ಆಗದಂತೆ ನಿಗಾವಹಿಸಿ, ನಿಗದಿತ ಸಮಯಕ್ಕೆ ದೀಪಾಲಂಕಾರದ ಕೆಲಸಗಳನ್ನು ಪೂರ್ಣಗೊಳಿಸಿ” ಎಂದು ಸೂಚಿಸಿದರು.

“ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳ ಸುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಹೆಚ್ಚಿನ ಆಕರ್ಷಣೆಯಿಂದ ಕೂಡಿರಬೇಕಿದೆ. ಯುವ ಸಂಭ್ರಮ ಕಾರ್ಯಕ್ರಮ ದಸರಾ ಆರಂಭಕ್ಕೂ ಮೊದಲೇ ನಡೆಯುವುದರಿಂದ ಈ ಸ್ಥಳದಲ್ಲಿ ಮಾಡಲಾಗುವ ದೀಪಾಲಂಕಾರ ಎಲ್ಲರ ಆಕರ್ಷಣೆ ಮತ್ತು ಕುತೂಹಲವನ್ನು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಈ ಭಾಗಗಳಲ್ಲಿ ದೀಪಾಲಂಕಾರ ಮಾಡುವವರು ಇದನ್ನು ಗಮನದಲ್ಲಿಟ್ಟುಕೊಂಡು ದೀಪಾಲಂಕಾರ ಮಾಡಬೇಕಿದೆ” ಎಂದು ಸಲಹೆ ನೀಡಿದರು.

ಡ್ರೋನ್‌ ಶೋಗೆ ಇನ್ನಷ್ಟು ಮೆರಗು ; “ಕಳೆದ ವರ್ಷದ ದಸರಾ ಸಂದರ್ಭದಲ್ಲಿ ನಡೆದ ಡ್ರೋನ್‌ ಪ್ರದರ್ಶನ ಎಲ್ಲರ ಆಕರ್ಷಣೆ ಮತ್ತು ಮೆಚ್ಚುಗೆ ಪಡೆದಿತ್ತು. ಹೀಗಾಗಿ ಡ್ರೋನ್‌ ಶೋ ಕುರಿತಂತೆ ಜನರ ನಿರೀಕ್ಷೆಗಳು ಹೆಚ್ಚಾಗಿರಲಿದೆ. ಆದ್ದರಿಂದ ಈ ಬಾರಿಯ ಡ್ರೋನ್‌ ಶೋ ಕಾರ್ಯಕ್ರಮದ ಮೆರಗು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಡ್ರೋನ್‌ ಬಳಸಿ ಹೆಚ್ಚು ಆಕರ್ಷಣೀಯವಾಗಿಸಲು ಚಿಂತನೆ ನಡೆಸಲಾಗುತ್ತಿದೆ” ಎಂದು ಕೆ.ಎಂ. ಮುನಿಗೋಪಾಲ್‌ ರಾಜು ಅವರು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್‌, ಮೈಸೂರು ವಲಯ ಕಚೇರಿಯ ಮುಖ್ಯ ಇಂಜಿನಿಯರ್‌ ಮೃತ್ಯುಂಜಯ, ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಸುನೀಲ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಮೇಶ್‌ ಸೇರಿದಂತೆ ಸೆಸ್ಕ್‌ನ ಪ್ರಮುಖ ಅಧಿಕಾರಿಗಳು ಹಾಗೂ ವಿದ್ಯುತ್‌ ಗುತ್ತಿಗೆದಾರರು ಇದ್ದರು.

ಆಂದೋಲನ ಡೆಸ್ಕ್

Recent Posts

ಬೆಟ್ಟಗಳು ಯಾವತ್ತೂ ಸುಳ್ಳು ಹೇಳುವುದಿಲ್ಲ!

ಪ್ರತ್ಯಕ್ಷ ವರದಿ ಕೆ.ಪಿ.ನಾಗರಾಜ್‌ ಪಬ್ಲಿಕ್‌ ಟಿವಿ ಕೇರಳ ರಾಜ್ಯದ ವಯನಾಡಿನಲ್ಲಿ ಮತ್ತೆ ಬೆಟ್ಟ ಕುಸಿದಿದೆ. ಸುದ್ದಿ ವಾಹಿನಿಗಳು ಇದನ್ನು ‘ಭೂ…

1 hour ago

ಮೈಸೂರು ನೃತ್ಯ ಪರಂಪರೆಯ ತವರೂರು

ಮೈಸೂರಿನ ನೃತ್ಯ ಪರಂಪರೆಯ ವೈಭವಕ್ಕೆ ಪ್ರೇರಕ ಶಕ್ತಿ ಹಲವು ಕೆ.ರಾಮಮೂರ್ತಿ‌ ರಾವ್ ಮೈಸೂರು ಪ್ರಾಚೀನ ಕಾಲದಿಂದಲೂ ಲಲಿತಕಲೆಗಳಿಗೆ ನೆಲೆಯಾಗಿದ್ದ ಸ್ಥಳ.…

2 hours ago

ʼಮಾನವೀಯತೆ ಎಂಬುದು ನನ್ನಂಥ ಜನರಿಗೆ ಸಿಗದ ಸವಲತ್ತುʼ

ವಿಚಾರಣೆ ಇಲ್ಲದೆ ಆರು ವರ್ಷಗಳಿಂದ ಜೈಲುವಾಸದಲ್ಲಿರುವ ಉಮರ್‌ ಖಾಲಿದ್‌ ಪ್ರಥಮ ಸಂದರ್ಶನ ಈಶಾನ್ಯ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ೨೦೨೦ರಲ್ಲಿ ಜೈಲು…

2 hours ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಜುಲೈ 9 ಗುರುವಾರ

6 hours ago

ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ: ಭಾಗಮಂಡಲ, ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಏರಿಕೆ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಬ್ರಹ್ಮಗಿರಿ ತಪ್ಪಲಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಭಾಗಮಂಡಲ…

19 hours ago

ದಟ್ಟವಾದ ತೋಟದಲ್ಲಿ ಅಡಗಿದ್ದ ಓರ್ವ ಲಷ್ಕರ್‌ ಉಗ್ರನ ಹತ್ಯೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಐದು ದಿನಗಳಿಂದ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳುತ್ತಿದ್ದ ಶಂಕಿತ ಲಷ್ಕರ್‌ ಎ ತೊಯ್ಬಾ ಉಗ್ರನನ್ನು ಭದ್ರತಾ…

21 hours ago