ದೇವಯ್ಯನಹುಂಡಿ ಸ್ಮಶಾನಕ್ಕೆ ಮೂಲ ಸೌಕರ್ಯ ಒದಗಿಸುವ ಭರವಸೆ
ಮೈಸೂರು: ಮಹಾಪೌರ ಶಿವಕುಮಾರ್ ಅಶೋಕಪುರಂ, ದೇವಯ್ಯನಹುಂಡಿಯಲ್ಲಿ ಪಾದಯಾತ್ರೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿ. ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಮೈಸೂರು-ಮಾನಂದವಾಡಿ ರಸ್ತೆಯಲ್ಲಿರುವ ಬೇಸ್ ಪಿಯುಸಿ ಕಾಲೇಜಿನ ಬಳಿಯಿಂದ ಪಾದಯಾತ್ರೆ ಆರಂಭಿಸಿದ ಮಹಾಪೌರರು ಅಶೋಕಪುರಂ ೫ನೇ ಕ್ರಾಸ್‌ನಿಂದ ೧೦ನೇ ಕ್ರಾಸ್ ತನಕ ಸಂಚರಿಸಿದರು. ಈ ವೇಳೆ ಕಳೆದ ತಿಂಗಳು ಮಳೆಯಿಂದಾಗಿ ಮನೆಗಳು ಹಾನಿಗೀಡಾಗಿರುವ ಬಗ್ಗೆ ಮಹಾಪೌರರ ಗಮನ ಸೆಳೆದ ನಿವಾಸಿಗಳು ಕೂಡಲೇ ಮನೆ ಮಂಜೂರು ಮಾಡಿಸಿಕೊಡುವಂತೆ ಕೋರಿದರು.
ನಗರಪಾಲಿಕೆ ಸದಸ್ಯರಾದ ಪಲ್ಲವಿ ಬೇಗಂ ಅವರು ಮಾತನಾಡಿ, ಮಳೆಯಿಂದಾಗಿ ಅಶೋಕಪುರಂ ಅಡ್ಡರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಡಾಂಬರೀಕರಣಕ್ಕೆ ವಿಶೇಷ ಅನುದಾನ ಮಂಜೂರು ಮಾಡಿಕೊಡಬೇಕು ಮನವಿ ಮಾಡಿದರಲ್ಲದೆ, ವೀಳ್ಯದೆಲೆ ಬೆಳೆಗಾರರಲ್ಲಿ ಕೆಲವರಿಗೆ ಇನ್ನೂ ಪರ್ಯಾಯ ಜಾಗ ಮತ್ತು ಹಕ್ಕುಪತ್ರ ನೀಡಿಲ್ಲ ಎಂದು ಹೇಳಿದರು.
ದೇವಯ್ಯನಹುಂಡಿ, ಶ್ರೀರಾಂಪುರ ಎರಡನೇ ಹಂತದ ಸ್ಮಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಮೇಯರ್, ಕಾಂಪೌಂಡ್, ನೀರಿನ ವ್ಯವಸ್ಥೆ, ತೆರೆದ ಶೆಲ್ಟರ್ ನಿರ್ಮಾಣ ಹಾಗೂ ಸ್ನಾನದ ಕೊಠಡಿಯನ್ನು ನಿರ್ಮಿಸಿಕೊಡುವ ಭರವಸೆ ನೀಡಿದರು.
ಈ ವೇಳೆ ದೇವಯ್ಯನಹುಂಡಿ ನಿವಾಸಿಗಳು, ಇಲ್ಲಿರುವ ಸ್ಮಶಾನದ ಜಾಗವನ್ನು ದೇವಯ್ಯನಹುಂಡಿಗೆ ಸೀಮಿತವೆಂದು ಜಿಲ್ಲಾಧಿಕಾರಿಗಳು ಜಾಗ ಮಂಜೂರು ಮಾಡಿದ್ದಾರೆ. ಮಹದೇವಪುರ, ರಮಾಬಾಯಿನಗರ, ಮುನಿಸ್ವಾಮಿನಗರದಿಂದ ಅಂತ್ಯಕ್ರಿಯೆ ಮಾಡಲು ಬರುವವರಿಗೆ ಅವಕಾಶ ನೀಡಬಾರದು ಎಂದು ಎಂದು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಮಹಾಪೌರರು ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಶ್ವಿನಿ ಕಲ್ಯಾಣ ಮಂಟಪದ ಎದುರು ಇರುವ ಖಾಲಿ ಜಾಗದಲ್ಲಿ ವ್ಯಾಯಾಮ ಶಾಲೆ ಮತ್ತು ಅಂಬೇಡ್ಕರ್ ಪುತ್ತಳಿಯನ್ನು ನಿರ್ಮಿಸಿಕೊಡುವಂತೆ ನಿವಾಸಿಗಳು ಮನವಿ ಸಲ್ಲಿಸಿದರು. ಆದರೆ, ಕೆಲವರು ಮುಖ್ಯರಸ್ತೆಯಾಗಿರುವ ಕಾರಣ ಉಳಿದ ಜಾಗದಲ್ಲಿ ರಸ್ತೆ ನಿರ್ಮಿಸಿದರೆ ಉತ್ತಮವಾಗಲಿದೆ ಎಂದರು. ಈ ವೇಳೆ ಮಹಾಪೌರರು ಸ್ಥಳೀಯ ನಗರಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ, ಮತ್ತೊಮ್ಮೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಬಳಿಕ ಮಾನಂದವಾಡಿ, ಶ್ರೀರಾಂಪುರ ಕಡೆಗಳಲ್ಲಿ ನಡೆಯುತ್ತಿರುವ ರಸ್ತೆಗಳ ಕಾಮಗಾರಿಯನ್ನು ಪರಿಶೀಲಿಸಿದರು. ವಾಣಿವಿಲಾಸ ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರರಾದ ಸುವರ್ಣ, ವಲಯ ಸಹಾಯಕ ಆಯುಕ್ತ ನಾಗರಾಜು, ಸಹಾಯಕ ಕಂದಾಯ ಅಧಿಕಾರಿ ಬೆಟ್ಟಯ್ಯ, ಕಿರಿಯ ಅಭಿಯಂತರ ದಯಾನಂದ್, ವರ್ಕ್ ಇನ್‌ಸ್ಪೆಕ್ಟರ್‌ಗಳು, ಹೆಲ್ತ್ ಇನ್‌ಸ್ಪೆಕ್ಟರ್‌ಗಳು ಹಾಜರಿದ್ದರು.
ಅಧಿಕಾರಿಗೆ ತರಾಟೆ
ಮೈಸೂರು: ಅಶೋಕಪುರಂನ ರಸ್ತೆಬದಿಯಲ್ಲಿ ಚರಂಡಿ ಕಲ್ಲುಚಪ್ಪಡಿಗಳು, ರಸ್ತೆಯ ನಾಮಫಲಕಗಳು ಮುರಿದು ಬಿದ್ದಿರುವುದನ್ನು ಗಮನಿಸಿದ ಮಹಾಪೌರರು, ಚರಂಡಿಗಳು ಕುಸಿದು ನೀರು ಸರಾಗವಾಗಿ ಹೋಗಲು ಸಾಧ್ಯವಾಗುತ್ತಿಲ್ಲ. ಇಂತಹ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲವೇ? ನಾಮಫಲಕಗಳು ಸರ್ಕಾರದ ಆಸ್ತಿ ಎಂಬುದು ಗೊತ್ತಿಲ್ಲವೇ ಎಂದು ಸಂಬಂಧಪಟ್ಟ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಅಶೋಕಪುರಂ ಬಡಾವಣೆಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲು ಕ್ರಿಯಾಯೋಜನೆ ರೂಪಿಸುವಂತೆ ಸೂಚಿಸಿದರು.
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…
ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…
ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…
ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…