ಮಂಡ್ಯ

ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮಗಳು ಸಹಕಾರಿ :ಪಿ.ಎಂ ನರೇಂದ್ರ ಸ್ವಾಮಿ

ಮಂಡ್ಯ: ಸಾರ್ವಜನಿಕರ ದೂರು ಅಹವಾಲುಗಳನ್ನು ಸ್ವೀಕಾರ ಮಾಡಿ ಅವರ ಸಮಸ್ಯೆಗಳನ್ನು ಸ್ಥಳದಲ್ಲೇ ಅಥವಾ ಅತಿ ಶೀಘ್ರವಾಗಿ ಪರಿಹರಿಸುವ ಕಾರ್ಯಕ್ರಮವೇ ಜನಸ್ಪಂದನ. ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಳವಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಎಂ ನರೇಂದ್ರಸ್ವಾಮಿ ಹೇಳಿದರು.

ಅವರು ಇಂದು(ಜೂ.24) ಮಳವಳ್ಳಿ ಟೌನ್ ಅಂಬೇಡ್ಕರ್ ಭವನದಲ್ಲಿ ನಡೆದ ಜನ ಸ್ಪಂದನ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಮುಖ್ಯಮಂತ್ರಿಗಳ ಆಶಯದಂತೆ ಈ ಕಾರ್ಯಕ್ರಮವನ್ನು ಜಿಲ್ಲಾ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿಸಿ. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೊತ್ತು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದರು.

ಕಂದಾಯ ಇಲಾಖೆಯಲ್ಲಿ ಕೆಲವು ಸಿಬ್ಬಂದಿಗಳ ಅಸಡ್ಡೆಯಿಂದ, ಕೆಲವು ಸಂದರ್ಭದಲ್ಲಿ ಸಾರ್ವಜನಿಕರು ಮಾಹಿತಿ ಕೊರತೆಯಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತದೆ. ಸಮಸ್ಯೆಗಳು ಅಣ್ಣ- ತಮ್ಮಂದಿರಲ್ಲಿ ಆಸ್ತಿ ವ್ಯಜ್ಯವನ್ನು ಉಂಟು ಮಾಡುತ್ತದೆ ಎಂದರು.

100 ಕ್ಕೆ 70 ಭಾಗದಷ್ಟು ಆಸ್ತಿಗಳು ಇನ್ನೂ ಕೂಡ ಪೌತಿ ಖಾತೆಗಳು ಆಗಿಲ್ಲ. ಕೆಲವರು ಸ್ವಂತ ಊರು ಬಿಟ್ಟು ಬೇರೆ ಕಡೆ ಇರುವುದು, ಆಸ್ತಿ ಭಾಗವಾಗದೇ ತಾತ, ಮುತ್ತಾತನ ಹೆಸರಿನಲ್ಲೇ ಇರುವುದು, ಕುಟುಂಬದವರು ಒಟ್ಟಿಗೆ ಸೇರಿ ಪೌತಿ ಖಾತೆ ಮಾಡಿಸಿಕೊಳ್ಳದೇ ಇರುವುದು, ಇದಕ್ಕೆ ಅನೇಕ ಕಾರಣಗಳು ಇರಬಹುದು. ಈ ಒಂದು ಸಮಸ್ಯೆ ಅಕ್ರಮ ಆಸ್ತಿ ಗಳಿಕೆಗೆ ದಾರಿ ಮಾಡಿಕೊಡಬಹುದು. ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಒಂದು ಸಮಸ್ಯೆ ಆದರೆ ವೈದ್ಯರು ರೋಗಿಗಳನ್ನು ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂಬುದು ಇನ್ನೊಂದು ಸಮಸ್ಯೆ. ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ರೀತಿ ಮನಪರಿವರ್ತನೆ ಮಾಡಿಕೊಳ್ಳಬೇಕಿದೆ ಎಂದರು.

ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಸರ್ಕಾರದ ಆಸ್ತಿಗಳ ವ್ಯಾಪ್ತಿಯನ್ನು ಮೊದಲು ಗುರುತು ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಕಳೆದ 7-8 ವರ್ಷಗಳಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆಯ್ಕೆ ಪ್ರಕ್ರಿಯೆಗಳು ನಡೆದಿಲ್ಲ ಪಿ.ಡಿ.ಒ ಗಳ ಕೊರತೆಯಿಂದಾಗಿ ಒಬ್ಬ ಪಿಡಿಒ 2,3 ಪಂಚಾಯಿತಿಗಳನ್ನು ನೋಡಿಕೊಳ್ಳುವ ಪರಿಸ್ಥಿತಿ ಇದೆ ಎಂದರು.

ಪಂಚಾಯಿತಿಗಳಲ್ಲಿ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿ ಕೆರೆ, ಕಟ್ಟೆಗಳ ಒತ್ತುವರಿ ತೆರವುಗೊಳಿಸಿ ಮಳೆ ನೀರು ನಿಲ್ಲುವುದಕ್ಕೆ ಅವಕಾಶ ಮಾಡಿಕೊಡಿ. ಇದರಿಂದ ಜನ ಜಾನುವರುಗಳಿಗೆ ಉಂಟಾಗುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಅಂತರ್ಜಾಲದ ಮಟ್ಟ ಕುಸಿಯುವಿದಿಲ್ಲ. ಮುಂದಿನ ಪೀಳಿಗೆಯವರು ನೀರಿಗಾಗಿ ಕಷ್ಟ ಪಡಬಾರದು ಎಂದರೆ ಇಂದಿನಿಂದಲೇ ಕೆರೆ, ಕಟ್ಟೆ, ಬಾವಿ ಗಳಲ್ಲಿ ನೀರು ಇರುವಂತೆ ನೋಡಿಕೊಳ್ಳಿ, ಗಿಡಗಳನ್ನು ಬೆಳೆಸಿ, ಮಳವಳ್ಳಿ ತಾಲ್ಲೂಕಿನಲ್ಲಿ ಕುಡಿಯೋ ನೀರಿಗೆ ಸಂಬಂಧ ಪಟ್ಟಂತೆ ಕೇವಲ 2 ಹಳ್ಳಿಗಳನ್ನು ಬಿಟ್ಟರೆ ಇನ್ನೂಳಿದ ಯಾವುದೇ ಹಳ್ಳಿಗಳಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆಗಳು ಇಲ್ಲ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ, ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಜಿಲ್ಲಾ ಮಟ್ಟಕ್ಕೆ ಬರುವ ಬದಲು ಆಧಿಕಾರಿಗಳೇ ಜನರ ಬಳಿಗೆ ತಾಲ್ಲೂಕು/ ಹೋಬಳಿ ಮಟ್ಟಕ್ಕೆ ಬಂದು ‌ಸಮಸ್ಯೆ ಪರಿಹರಿಸಬೇಕು ಎಂಬುದು ಜನಸ್ಪಂದನದ ಉದ್ದೇಶವಾಗಿದೆ ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಜನಸ್ಪಂದನದಲ್ಲಿ ಸ್ವೀಕೃತವಾಗಿರುವ ಶೇ 100 ರಷ್ಟು ಅರ್ಜಿಗಳಿಗೆ ಪರಿಹಾರ ನೀಡಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಾನೂನು ಪರಿಮಿತಿಯ ಹೊರಭಾಗದಲ್ಲಿರುತ್ತದೆ ಅಂತಹ ಸಮಸ್ಯೆಗಳನ್ನು ಪರಿಹರಿಸುವುದು ಕಷ್ಟಕರ. ಕಾನೂನು ವ್ಯಾಪ್ತಿಯಲ್ಲಿ ಇರುವ ಅರ್ಜಿಗಳನ್ನು ಶೀಘ್ರ ಹಾಗೂ ಪಾರದರ್ಶಕವಾಗಿ ವಿಲೇವಾರಿ ಮಾಡಲಾಗಿದೆ ಎಂದರು‌.

ಈ ಹಿಂದೆ ಮಳವಳ್ಳಿ ಯಲ್ಲಿ ನಡೆದ ಜ‌ನತಾ ದರ್ಶನ ಕಾರ್ಯಕ್ರಮದಲ್ಲಿ 310 ಕ್ಕೂ ಹೆಚ್ಚು ಅರ್ಜಿ ಸ್ವೀಕೃತವಾಗಿತ್ತು. ಅದರಲ್ಲಿ 170 ಅರ್ಜಿಗಳು ಕಂದಾಯ ಇಲಾಖೆಗೆ ಸೇರಿರುತ್ತದೆ ಅದರಲ್ಲಿ ಆರ್.ಟಿ.ಸಿ ತಿದ್ದುಪಡಿ ಅರ್ಜಿಗಳೇ ಹೆಚ್ಚು, 110 ಅರ್ಜಿಗಳಲ್ಲಿ ನಮೂದಿಸಲಾಗಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇನ್ನುಳಿದ 60 ಅರ್ಜಿಗಳು ಕಾನೂನು ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಎಲ್ಲಾ ಅರ್ಜಿಗಳಿಗೂ ಹಿಂಬರಹ ನೀಡಲಾಗಿದೆ ಎಂದು ತಿಳಿಸಿದರು.

ಕಂದಾಯ ನ್ಯಾಯಾಲಯದಲ್ಲಿ ಕಳೆದ ಒಂದು ವರ್ಷದಲ್ಲಿ ಇದ್ದ 10 ಸಾವಿರ ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಮಳವಳ್ಳಿ 1200 ಅರ್ಜಿಗಳ ಪೈಕಿ1049 ಇತ್ಯರ್ಥ ಮಾಡಲಾಗಿದೆ ಎಂದರು.

ರೈತ ಮೃತಪಟ್ಟ ನಂತರ ವರಸುದಾರ ಪೌತಿ ಖಾತೆ ಮಾಡಿಸಿಕೊಳ್ಳಲು ತಾಲ್ಲೂಕು ಕಚೇರಿಗೆ ಅಲೆದಾಟ ಮಾಡುವುದು ಬೇಡ ಎಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪೌತಿ ಖಾತಾ ಆಂದೋಲನ ನಡೆಸಲಾಗುತ್ತಿದೆ. ತಹಶೀಲ್ದಾರ್ ಹಂತದಲ್ಲಿ ಸುಮಾರು 18 ಆಂದೋಲನಗಳನ್ನು ನಡೆಸಿ ಸುಮಾರು 3100 ರೈತರ ಪೌತಿ ಖಾತೆ ಮಾಡಿಕೊಡಲಾಗಿದೆ.ಕಳೆದ ಜೂನ್ ನಿಂದ ಇಲ್ಲಿಯವರೆಗೆ 5200 ಆರ್.ಟಿಸಿ ತಿದ್ದುಪಡಿ ಕೆಲಸಗಳು, 2100 ತತ್ಕಾಲ್ ಪೋಡಿ, 4000 ಹದ್ದುಬಸ್ತು ಕೆಲಸಗಳನ್ನು ಮಾಡಲಾಗಿದೆ. ಕಂದಾಯ ಇಲಾಖೆಯಲ್ಲಿ ಸುಧರಣಾ ಕೆಲಸಗಳು ನಡೆಯುತ್ತಿವೆ ಎಂದರು.

ಮಂಡ್ಯ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆಯಾದ ನಂತರ ಜಿಲ್ಲೆಯಲ್ಲಿ 79000 ರೈತರಿಗೆ 34 ಕೋಟಿ ರೂ ಪರಿಹಾರ ಹಣ ಪಾವತಿಸಲಾಗಿದೆ. ಮಳವಳ್ಳಿ ತಾಲ್ಲೂಕಿನಲ್ಲಿ 11599 ರೈತರಿಗೆ 4 ಕೋಟಿ 63 ಲಕ್ಷ ರೂ ಬರ ಪರಿಹಾರ ಪಾವತಿಸಲಾಗಿದೆ.ಬರ ಪರಿಹಾರವನ್ನು ಎನ್‌ಡಿ.ಆರ್.ಎಫ್ ನಿಯಮದ ಪ್ರಕಾರ ಹಾಗೂ ನಿಗಧಿತ ಬೆಳೆಗಳಿಗೆ ಮಾತ್ರ ನೀಡಲಾಗುವುದು ಎಂದರು‌.

ಕಂದಾಯ ಭೂ ವ್ಯಾಜ್ಯಗಳನ್ನು ಕಡಿಮೆ ಮಾಡಲು ಆಧಾರ್ ಸೀಡಿಂಗ್ ಪ್ರಕ್ರಿಯೆ ನಡೆಸಲಾಗುತ್ತಿದೆ‌. ರೈತರು ಆರ್.ಟಿ‌.ಸಿಗಳಿಗೆ ಆಧಾರ್ ಸೀಡಿಂಗ್ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಶೇ30 ರಷ್ಟು ಮಾತ್ರ ಆಧಾರ್ ಸೀಡಿಂಗ್ ಆಗಿದ್ದು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಬೇಕು ಎಂದರು‌.

ಬೆಳೆ ವಿಮೆ ಮಾಡಿಕೊಳ್ಳಲು ಜುಲೈ 15 ರವರೆಗೆ ಅವಕಾಶವಿದೆ‌. ಕಳೆದ ಬಾರಿ ಸುಮಾರು 72 ಸಾವಿರ ರೈತರು ಬೆಳೆ ವಿಮೆ ಮಾಡಿಸಿಕೊಂಡು ಬೆಳೆ ನಷ್ಠದ ಹಿನ್ನಲೆ 25 ಕೋಟಿ ಕ್ಲೈಮ್ ಮಾಡಿಕೊಳ್ಳಲಾಗಿದೆ‌ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಲ್ಲೂಕು ನೋಡಲ್ ಅಧಿಕಾರಿ ಕೆ.ಎಂ ಸುರೇಶ್ ಕುಮಾರ್, ಜಿಲ್ಲಾ ಪಂಚಾಯತ್ ನ ಉಪಕಾರ್ಯದರ್ಶಿ ಆನಂದ್, ತಹಶೀಲ್ದಾರ್ ಲೋಕೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಮಮತ, ಸೇರಿದಂತೆ ಇನ್ನಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಚಂದು ಸಿಎನ್

ಮೈಸೂರು ಜಿಲ್ಲೆಯ ಹುಣಸೂರಿನ ಚಲ್ಲಹಳ್ಳಿ ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆದು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಬಳಿಕ ಪತ್ರಿಕೋದ್ಯಮ ಕ್ಷೇತ್ರದಲ್ಲಿ 2 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಾಚೀನ ಪಳಿಯುಳಿಕೆ ಹಾಗೂ ಇತಿಹಾಸದ ಕಡೆ ಎಲ್ಲಿಲ್ಲದ ಒಲವು. ಪ್ರವಾಸ, ಪುಸ್ತಕ ಓದುವುದು ನೆಚ್ಚಿನ ಹವ್ಯಾಸಗಳಾಗಿವೆ. ಮೊಬೈಲ್‌ ಸಂಖ್ಯೆ: 9164535321.

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago