ಭಾರತ ತನ್ನ 74ನೇ ಗಣತಂತ್ರ ದಿನವನ್ನು ಆಚರಿಸುತ್ತಿದೆ. ಅಂದರೆ ಸ್ವತಂತ್ರ ಭಾರತ ತನ್ನದೇ ಆದ ಒಂದು ಸಂವಿಧಾನವನ್ನು ತನಗೇ ಅರ್ಪಿಸಿಕೊಂಡು73 ವರ್ಷಗಳು ಕಳೆದಿವೆ. ‘ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ’ ಎಂಬ ಘೋಷ ವಾಕ್ಯದ ಹಿಂದೆ ನಾವು ಎಂದರೆ ಯಾರು ? ಈ ದೇಶದ ಸಮಸ್ತ ಪ್ರಜೆಗಳು. ಜಾತಿ, ಮತ, ಧರ್ಮ, ಭಾಷೆ, ಪ್ರಾಂತ್ಯ ಮತ್ತು ಸಾಮುದಾಯಿಕ ಅಸ್ಮಿತೆಗಳನ್ನು ದಾಟಿ ಅನ್ವಯಿಸುವ ಈ ಘೋಷ ವಾಕ್ಯದ ನೆರಳಿನಲ್ಲೇ ಭಾರತದ ಗಣತಂತ್ರ 73 ವರ್ಷಗಳನ್ನು ಪೂರೈಸಿದೆ.
ಜನವರಿ 26ರ ಗಣತಂತ್ರ ದಿನದ ಸಂದರ್ಭದಲ್ಲಿ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ಸಮಾರಂಭವು ಈ ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವವನ್ನು ಜಗತ್ತಿಗೆ ಸಾರಿ ಹೇಳುವ ಸಂದೇಶವನ್ನು ರವಾನಿಸುತ್ತದೆ. ಕರ್ತವ್ಯ ಪಥದಲ್ಲಿ ನಡೆಯುವ ಸಾಂಪ್ರದಾಯಿಕ ಮೆರವಣಿಗೆಯಲ್ಲಿ ದೇಶದ ಸಶಸ್ತ್ರ ಪಡೆಗಳು, ಅರೆಸೇನಾ ಪಡೆಗಳು, ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಮತ್ತು ಮಕ್ಕಳಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದೇಶವನ್ನು ಒಂದುಗೂಡಿಸಿರುವ ವೈವಿಧ್ಯತೆಯನ್ನು ಬಿಂಬಿಸುವುದೇ ಅಲ್ಲದೆ, ಸ್ವತಂತ್ರ ಭಾರತದ ಜೀವನಾಡಿ ಎಂದೇ ಭಾವಿಸಲಾಗುವ ಬಹುಸಾಂಸ್ಕೃತಿಕ ವೈವಿಧ್ಯತೆಯನ್ನೂ ಜಗತ್ತಿನ ಮುಂದೆ ತೆರೆದಿಡುತ್ತದೆ.
ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನವಾದ ಜನವರಿ 23ರಿಂದ ಆರಂಭವಾಗುವ ಗಣರಾಜ್ಯೋತ್ಸವದ ಸಂಭ್ರಮವು ಜನವರಿ 30ರ ಹುತಾತ್ಮ ದಿನದಂದು ಸಮಾರೋಪಗೊಳ್ಳುತ್ತದೆ. ಅಂದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮದೇ ಆದ ಸೈದ್ಧಾಂತಿಕ ಮಾರ್ಗವನ್ನು ಅನುಸರಿಸಿ, ದೇಶದ ಪ್ರಪ್ರಥಮ ಸೇನೆಯನ್ನು ಕಟ್ಟುವ ಮೂಲಕ ವಸಾಹತುಶಾಹಿ ಬ್ರಿಟೀಷರಲ್ಲಿ ಎದೆನಡುಕ ಹುಟ್ಟಿಸಿದ್ದ ಸುಭಾಷ್ ಚಂದ್ರ ಬೋಸ್ ಅವರನ್ನು ಸ್ಮರಿಸುತ್ತಲೇ ಆರಂಭವಾಗುವ ಸಂಭ್ರಮಾಚರಣೆಯು, ತಮ್ಮ ಅಹಿಂಸಾ ಮಾರ್ಗದ ಮೂಲಕವೇ ದೇಶದ ಸಮಸ್ತ ಜನತೆಯನ್ನು ಒಂದುಗೂಡಿಸಿ, ಎಲ್ಲ ಸಮುದಾಯಗಳನ್ನೊಳಗೊಂಡ ಸಮನ್ವಯದ ಸಂದೇಶವನ್ನು ಸಾರುವುದರೊಂದಿಗೆ, ಕೂಡಿಬಾಳುವ ಉದಾತ್ತ ಮಾರ್ಗದಲ್ಲಿ ನಡೆದು ಬ್ರಿಟೀಷರನ್ನು ಎದುರಿಸಿದ್ದ ಮಹಾತ್ಮ ಗಾಂಧಿ ಹತ್ಯೆಯಾದ ದಿನದಂದು ಸಮಾರೋಪಗೊಳ್ಳುತ್ತದೆ. ಈ ಇಬ್ಬರು ಮಹಾನ್ ವ್ಯಕ್ತಿಗಳೂ ಅಸಹಜ ಸಾವಿಗೆ ತುತ್ತಾದವರೇ. ಈ ಮಹಾನ್ ನಾಯಕರ ನಡುವೆ ತಾತ್ವಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ, ಭಾರತದ ಬಹುಸಂಸ್ಕೃತಿ ಮತ್ತು ವೈವಿಧ್ಯತೆಯ ಬಗ್ಗೆ, ಬಹುತ್ವದ ಬಗ್ಗೆ ಯಾವುದೇ ಅಂತರ ಇರಲಿಲ್ಲ ಎನ್ನುವುದು ಸರ್ವವೇದ್ಯ. ಈ ತತ್ವಗಳನ್ನು ಆಧರಿಸಿಯೇ ಡಾ ಬಿ.ಆರ್. ಅಂಬೇಡ್ಕರ್ ಭಾರತದ ಸಂವಿಧಾನಕ್ಕೆ ಒಂದು ಸ್ಪಷ್ಟ ರೂಪ ನೀಡಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕಿದೆ.
ಗಣತಂತ್ರ ಭಾರತ ನಡೆದುಬಂದ ಹಾದಿಯನ್ನು ಅವಲೋಕನ ಮಾಡುವ ಪ್ರತಿಯೊಂದು ಸಂದರ್ಭದಲ್ಲೂ ನವೆಂಬರ್ 25 1949ರಂದು ಸಂವಿಧಾನ ರಚನಾ ಮಂಡಲಿಯಲ್ಲಿ ಮಾಡಿದ ಭಾಷಣದ ಒಂದು ತುಣುಕನ್ನು ನೆನೆಯುವುದು ಅತ್ಯವಶ್ಯವಾಗಿದೆ. ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ‘‘ ನಾವು ಪ್ರಜಾಪ್ರಭುತ್ವವನ್ನು ಕೇವಲ ಅದರ ಸ್ವರೂಪದಲ್ಲೇ ಉಳಿಸಿಕೊಳ್ಳದೆ ವಾಸ್ತವವಾಗಿ ನಿರ್ವಹಿಸಬೇಕಾದರೆ ಏನು ಮಾಡಬೇಕು’ ನನ್ನ ಅಭಿಪ್ರಾಯದಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ ಎಂದರೆ ನಮ್ಮ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಂವಿಧಾನಿಕ ವಿಧಾನಗಳನ್ನು ಅನುಸರಿಸಲು ಬದ್ಧರಾಗಬೇಕು. ಸಾಂವಿಧಾನಿಕ ವಿಧಾನಗಳು ಮುಕ್ತವಾಗಿದ್ದರೆ ಅಲ್ಲಿ ಅಸಾಂವಿಧಾನಿಕ ವಿಧಾನಗಳಿಗೆ ಯಾವುದೇ ರೀತಿಯ ಸಮರ್ಥನೆ ಇರಲು ಸಾಧ್ಯವಿಲ್ಲ, ಈ ವಿಧಾನಗಳು ಅರಾಜಕತೆಯ ಸಂಕೇತಗಳಾಗಿದ್ದು, ಅವುಗಳನ್ನು ಎಷ್ಟು ಬೇಗನೆ ನಿವಾರಿಸುತ್ತೇವೆಯೋ ಅಷ್ಟು ಒಳಿತಾಗುತ್ತದೆ. ಎರಡನೆಯದಾಗಿ, ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಬರುವುದರಲ್ಲಿ ಆಸಕ್ತಿ ಇರುವ ಪ್ರತಿಯೊಬ್ಬರೂ ‘ಪ್ರಜೆಗಳು ತಮ್ಮ ಸ್ವಾತಂತ್ರ್ಯವನ್ನು ಮಹಾನ್ ವ್ಯಕ್ತಿಯೊಬ್ಬರ ಪದತಳದಲ್ಲಿರಿಸುವುದಾಗಲೀ, ಆ ವ್ಯಕ್ತಿಗೆ ರಾಜಕೀಯ ಮಾರ್ಗದಲ್ಲಿ ಪ್ರಜೆಗಳ ಸಾಂಸ್ಥಿಕ ನೆಲೆಗಳನ್ನು ಬುಡಮೇಲು ಮಾಡುವ ಅಧಿಕಾರವನ್ನು ಕಲ್ಪಿಸುವುದಾಗಲೀ ಮಾಡಕೂಡದು’ ಎಂಬ ಜಾನ್ ಸ್ಟುವರ್ಟ್ ಮಿಲ್ ಅವರ ಎಚ್ಚರಿಕೆಯ ಮಾತುಗಳನ್ನು ಗಮನಿಸಬೇಕಿದೆ.
ಡಾ. ಬಿ. ಆರ್. ಅಂಬೇಡ್ಕರ್ ಅವರ ಈ ಅಮೂಲ್ಯ ಸಂದೇಶಾತ್ಮಕ ಮಾತುಗಳನ್ನು ನಾವು ಪುನರ್‌ಮನನ ಮಾಡಿಕೊಳ್ಳಬೇಕಾಗಿರುವುದೇ ಸ್ವತಂತ್ರ ಭಾರತದ ದುರಂತ ಎನಿಸುತ್ತದೆ. ಇಂದು ನಾವು ಅನುಸರಿಸಲು ಪಣತೊಡುತ್ತಿರುವ ಸುಭಾಷ್ ಚಂದ್ರ ಬೋಸ್ ಅವರ ಮಾರ್ಗಕ್ಕೂ, ದ್ವೇಷಾಸೂಯ ಮನೋಧರ್ಮಕ್ಕೆ ಬಲಿಯಾಗಿ ಹುತಾತ್ಮರಾದ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಹಾದಿಗೂ, ಡಾ ಬಿ. ಆರ್. ಅಂಬೇಡ್ಕರ್ ಹಾಕಿಕೊಟ್ಟ ಸಾಂವಿಧಾನಿಕ ವಾರ್ಗಕ್ಕೂ ಅಂತರವೇನಿದೆ ? ಈ ಮಾರ್ಗಗಳಲ್ಲಿ ಕಂಡುಬರುವ ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಹೊರಗಿಟ್ಟು ನೋಡಿದಾಗ, ಭಾರತದ ಸಂವಿಧಾನ ಅಪೇಕ್ಷಿಸುವ ಪ್ರಜಾಪ್ರಭುತ್ವ, ಸಮಾನತೆ, ಸೋದರತೆ, ಸಾಮಾಜಿಕ ಸಾಮರಸ್ಯ ಮತ್ತು ಸಮನ್ವಯ ಹಾಗೂ ಸೌಹಾರ್ದತೆ ಈ ಎಲ್ಲ ಧ್ಯೇಯಗಳೂ ಸಹ ಈ ಮೂವರು ಮಹಾನ್ ನಾಯಕರ ಮಾರ್ಗಗಳ ಮೈಲಿಗಲ್ಲುಗಳಾಗಿ ಕಾಣುವುದಲ್ಲವೇ ?
ಹಸಿವು, ಬಡತನ, ದಾರಿದ್ರ್ಯ ಮತ್ತು ದೌರ್ಜನ್ಯ, ಇವುಗಳಿಂದ ಸೃಷ್ಟಿಯಾಗುವ ಅಸಮಾನತೆಯ ನೆಲೆಗಳು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಾಂವಿಧಾನಿಕ ಆಶಯ ಮತ್ತು ಮೌಲ್ಯಗಳಿಗೆ ವ್ಯತಿರಿಕ್ತವಾಗಿದೆಯೋ ಇಲ್ಲವೋ ಎಂದು ತಿಳಿಯಬೇಕಾದರೆ ನಾವು, ತಳಮಟ್ಟದ ಜನಸಾಮಾನ್ಯರ ನಡುವೆ , ನೆಲದ ಮೇಲೆ ನಿಂತು ಸುತ್ತ ಕಣ್ಣಾಡಿಸಬೇಕಿದೆ. ಭಾರತದ ಪ್ರಜೆಗಳಾದ ನಾವು ಈ ಆದ್ಯತೆಯೊಂದಿಗೆ ಮುನ್ನಡೆಯುವುದೇ ಆದರೆ ಜನವರಿ 26ರ ಗಣತಂತ್ರ ದಿನದ ಆಚರಣೆಯೂ ಸಾರ್ಥಕವಾದೀತು.
ಡಾ ಬಿ. ಆರ್. ಅಂಬೇಡ್ಕರ್ ಅವರ ಈ ಅಮೂಲ್ಯ ಸಂದೇಶಾತ್ಮಕ ಮಾತುಗಳನ್ನು ನಾವು ಮತ್ತೆ ಮತ್ತೆ ಪುನರ್‌ಮನನ ಮಾಡಿಕೊಳ್ಳಬೇಕಾಗಿರುವುದೇ ಸ್ವತಂತ್ರ ಭಾರತದ ದುರಂತ ಎನಿಸುತ್ತದೆ. ಸಂವಿಧಾನದ ಮೂಲ ಸ್ವರೂಪ ಮತ್ತು ಮೂಲ ಆಶಯಗಳನ್ನು ಅಂಬೇಡ್ಕರ್ ಈ ಮಾತುಗಳಲ್ಲೇ ಅಡಗಿಸಿಟ್ಟಿದ್ದಾರಲ್ಲವೇ ? ಇಂದು ನಾವು ಅನುಸರಿಸಲು ಪಣತೊಡುತ್ತಿರುವ ಸುಭಾಷ್ ಚಂದ್ರ ಬೋಸ್ ಅವರ ಮಾರ್ಗಕ್ಕೂ, ದ್ವೇಷಾಸೂಯಯ ಮನೋಧರ್ಮಕ್ಕೆ ಬಲಿಯಾಗಿ ಹುತಾತ್ಮರಾದ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಹಾದಿಗೂ, ಡಾ ಬಿ. ಆರ್. ಅಂಬೇಡ್ಕರ್ ಹಾಕಿಕೊಟ್ಟ ಸಾಂವಿಧಾನಿಕ ಮಾರ್ಗಕ್ಕೂ ಅಂತರವೇನಿದೆ ?
ಮೇಲುಕೋಟೆ: ಮಾ.೨೩ರಿಂದ ಏ.೩ರವರೆಗೆ ನಡೆಯುವ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಪ್ರಖ್ಯಾತ ವೈರಮುಡಿ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ ಎಂದು…
ಮೊಬೈಲ್ ಸ್ಟೇಟಸ್ ! ಶಾಲೆಗಳಲ್ಲಿ ಮೊಬೈಲ್ ನಿಷೇಧ..? ಸರ್ಕಾರದ ಮೆಸೇಜ್‌ಗೆ ಲೈಕ್ ನೀಡಬಹುದು ಪೋಷಕರು ! ಆದರೆ, ಸ್ಟೂಡೆಂಟ್‌ಗಳು ?…
ಫೆ.೨೮ರ ಶನಿವಾರದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಎಲ್ಲಾ ಕಾಲೇಜುಗಳಲ್ಲಿ ವ್ಯವಸ್ಥಿತವಾಗಿ ಪಾಠವನ್ನು ಮುಗಿಸಿ ಮಾದರಿ ಪ್ರಶ್ನೆ ಪತ್ರಿಕೆ…
ಮೈಸೂರು ಜಿಲ್ಲೆ, ಹೆಗ್ಗಡದೇವನ ಕೋಟೆ ತಾಲ್ಲೂಕು ವನಸಿರಿಗೆ ಹೆಸರುವಾಸಿ, ಇಲ್ಲಿನ ಉತ್ತಮ ಹವಾಗುಣಕ್ಕೆ ಸನಿಹದಲ್ಲೇ ಇರುವ ಅರಣ್ಯ ಪ್ರದೇಶ ಕೂಡ…
ನವೀನ್ ಡಿಸೋಜ ೩೦ ಡಿಗ್ರಿ ಸೆಲ್ಸಿಯಸ್ ದಾಟುತ್ತಿರುವ ತಾಪಮಾನ; ಅಗತ್ಯ ಮುನ್ನೆಚ್ಚರಿಕೆಗೆ ವೈದ್ಯರ ಸಲಹೆ ಮಡಿಕೇರಿ: ಫೆಬ್ರವರಿ ತಿಂಗಳು ಕೊನೆಗೊಳ್ಳುತ್ತಿರುವಂತೆಯೇ…
ಸಫಾರಿ ಪುನಾರಂಭದ ಸಂಬಂಧ ‘ಆಂದೋಲನ’ ದಿನಪತ್ರಿಕೆಯು ನಡೆಸಿದ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇದಕ್ಕೆ ಪೂರಕವಾಗಿ ಪತ್ರಿಕೆ ನಡೆಸಿದ…