ಮೈಸೂರು: ಇವರೆಲ್ಲರೂ ಇಷ್ಟು ದಿನ ಎಲ್ಲಿಗೆ ಹೋಗಿದ್ದರು ? ಬೀದಿ ಬೀದಿಗಳಲ್ಲಿ ಮಕ್ಕಳ ಪೀಪಿ, ಬಲೂನು ಊದುತ್ತಾ, ಆಟಿಕೆ ವಸ್ತುಗಳನ್ನು ಪ್ರದರ್ಶಿಸುತ್ತಾ ಮಕ್ಕಳ ಮುಖದಲ್ಲಿ ಮಂದಹಾಸಕ್ಕೆ ಕಾರಣರಾಗುತ್ತಿದ್ದವರು ಕಳೆದ ಎರಡು ವರ್ಷಗಳಿಂದ ಕಾಣದೇ ಹೋಗಿದ್ದರು. ಚಿಕ್ಕವರ ನಗು, ದೊಡ್ಡವರ ಚೌಕಾಶಿಯ ನಡುವೆ ಸಣ್ಣಪುಟ್ಟ ವಸ್ತುಗಳನ್ನು ಮಾರುತ್ತಾ ತಮ್ಮ ಬದುಕಿನ ಬಂಡಿಯನ್ನು ಎಳೆಯುತ್ತಿದ್ದ ಇವರು ಈಗ ಮತ್ತೆ ಕಾಣಿಸಿಕೊಂಡಿದ್ದಾರೆ. ಒಂದಲ್ಲ, ಎರಡಲ್ಲ ಸಾವಿರಾರು ಸಂಖ್ಯೆಯಲ್ಲಿ.
ಕೊರೊನಾ ಎಂಬ ಮಾಹಾ ಮಾರಿ ಉಳ್ಳವರು,ಇಲ್ಲದವರು ಸೇರಿ ಎಲ್ಲರನ್ನೂ ಬಲಿ ಪಡೆಯುತ್ತಿದ್ದಾಗ ಸರಕಾರ ಬಾಗಿಲು ಮುಚ್ಚಿ ಮನೆಯಲ್ಲಿ ಕೂರಲು ತಿಳಿಸಿತ್ತು. ಆದರೆ ಮನೆಯೇ ಇಲ್ಲದ ಇವರಿಗೆ ಬದುಕಿನ ಬಾಗಿಲೇ ಮುಚ್ಚಿ ಹೋಗಿತ್ತು. ಆ ಕಷ್ಟದ ದಿನಗಳು ಸಾಗಿ ಈಗ ಮತ್ತೆ ಬಯಲಿಗೆ ಬರುವ ಅವಕಾಶ ಸಿಕ್ಕಿದೆ. ನಾಡ ಹಬ್ಬ ದಸರೆಯ ಬೆಳಕಿನಲ್ಲಿ ಕೂಳು ಹುಡುಕುತ್ತಾ ಇವರು ಮತ್ತೆ ಬೀದಿಗೆ ಬಂದಿದ್ದಾರೆ. ಬಲೂನು ಬೇಕೇ, ಆಟಿಕೆ ಬೇಕೇ, ಬಾಚಣಿಗೆ ಬೇಕೇ ಎಂದು ಕೇಳುತ್ತಾ ಮೈಸೂರಿನ ಬೀದಿ ಬೀದಿಗಳಲ್ಲಿ ಸಾಗುತ್ತಿದ್ದಾರೆ.
ದಸರಾ ಕೇವಲ ಸಂಭ್ರಮದ ಗೂಡಾಗದೇ ರಾಜ್ಯ ಮತ್ತು ಹೊರರಾಜ್ಯದ ಸಾವಿರಾರು ಬೀದಿ ವ್ಯಾಪಾರಿಗಳಿಗೆ ಎಷ್ಟೋ ವರ್ಷಗಳಿಂದ ಆಸರೆಯಾಗಿದೆ. ಎರಡು ವರ್ಷಗಳ ಕಾಲ ದಸರೆಯ ತೇರು ಸ್ಥಗಿತಗೊಂಡಾಗ ಎಲ್ಲರಿಗಿಂತ ಹೆಚ್ಚು ಪರಿತಪಿಸಿದ ಇವರು ಇದೀಗ ತಮ್ಮದೇ ಊರಿನ ಜಾತ್ರೆಗೆ ಬರುವಂತೆ ಸಂಸಾರದ ಸಮೇತವಾಗಿ ಮೈಸೂರಿಗೆ ಬಂದಿದ್ದಾರೆ. ಇನ್ನೊಂದಿಷ್ಟು ಆಟದ ಸಾಮಾನುಗಳನ್ನು ತರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಇವರಲ್ಲಿ ಅವರಿವರು ಎನ್ನುವ ಪ್ರಶ್ನೆ ಇಲ್ಲ. ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು, ಉತ್ತರದವರಾದರೆ “ಹಿಂದಿʼಯವರು. ಭಾಷಾ ಭಿನ್ನತೆಯೊಂದೇ ಇವರ ಐಡೆಂಟಿಟಿ. “ನಾವು ಕನ್ನಡದವ್ರುʼ ಎಂದರೆ ಹೆಚ್ಚಿನವರು ಉತ್ತರ ಕರ್ನಾಟಕದ ಮಂದಿ. ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಬಳ್ಳಾರಿ ಹೀಗೆ ಬಿಸಿಲ ನಾಡಿನ ನೂರಾರು ಮಂದಿ ಮೈಸೂರಿನ ದಸರೆಗೆ ಬಂದಿದ್ದಾರೆ. ಇವರ ಗಮ್ಯ ದಸರೆಯ ವೈಭವವಲ್ಲ. ಇಲ್ಲಿಗೆ ಬರುವ ಕೊಳ್ಳುವ ಜನರ ಮೇಲಷ್ಟೇ ಇವರ ಕಣ್ಣು.
ಇನ್ನು ದೂರದ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಅಸ್ಸಾಂ, ಒರಿಸ್ಸಾ ಮುಂತಾದ ಉತ್ತರದ ರಾಜ್ಯಗಳಿಂದ ಹಿಡಿದು ದಕ್ಷಿಣದ ತಮಿಳುನಾಡು, ಆಂಧ್ರ, ತೆಲಂಗಾಣದಿಂದಲೂ ದಸರೆಯ ನಡುವೆ ಬದುಕು ಅರಸಿ ಸಾವಿರಾರು ಮಂದಿ ಬಂದಿದ್ದಾರೆ. ಕೊಳ್ಳುವವರ ಜತೆ ತಿನ್ನುವವರು ಇವರಿಗೆ ಇಷ್ಟ. ಪಾನಿಪುರಿ, ಜರ್ದಾ, ಸುಪಾರಿ, ಒಣ ಹಣ್ಣುಗಳ ಜತೆ ಕಂಬಳಿ, ಹಾಸುಗಂಬಳಿ, ಬಟ್ಟೆ ಬರೆ.. ಇತ್ಯಾದಿ ವಸ್ತುಗಳು ಇವರ ಮಾರಾಟದ ಸರಕುಗಳು. ಈ ಸರಕುಗಳ ಜತೆ ಎಷ್ಟೋ ವರ್ಷಗಳಿಂದ ಇವರು ದಸರೆಯ ಭಾಗವಾಗಿದ್ದಾರೆ.
ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ದಸರಾ ಆಚರಣೆ ತಮ್ಮ ಪಾಲಿಗೆ ಸಂಜೀವಿನಿಯಾಗಬಹುದೆನ್ನುವ ನಿರೀಕ್ಷೆ ಇವರದು. ದೀಪಾಲಂಕೃತ ನಗರದಲ್ಲಿ ಅರೆಗತ್ತಲಿನ ಮೂಲೆ ಹುಡುಕುತ್ತಾ ಇವರು ತಮ್ಮ ಉತ್ಪನ್ನಗಳನ್ನು ಮಾರಲು ಪ್ರಯತ್ನಿಸುತ್ತಾರೆ. ಅಧಿಕಾರಿಗಳು ಮತ್ತು ಪೊಲೀಸರ ನಿರ್ಬಂಧದ ನಡುವೆ, ಸಿರಿವಂತ ಜನರ ಕೆಂಗಣ್ಣಿನ ನಡುವೆ ಇವರ ಜೋಳಿಗೆ ತುಂಬಿಸುವ ಕಾಯಕ ಮುಂದುವರಿಯುತ್ತದೆ.
ಇವರ ಗ್ರಾಹಕರಾರೂ ಶ್ರೀಮಂತರಲ್ಲ. ಇವರದ್ದೇ ಓರಗೆಯ ಸಣ್ಣ ಜೇಬಿನ ಜನ ಇವರ ಪಾಲಿನ ದೇವರು. ಆದರೆ ಇತ್ತೀಚೆಗೆ ಈ ಜನರೂ ಮಾಲ್ ಗಳ ಬೆನ್ನು ಬಿದ್ದಿದ್ದಾರೆ. ಮಾಲ್ ಗಳಲ್ಲಿ ಸಿಗುವ ವೆರೈಟಿ, ಆಕರ್ಷಣೆ ಇವರ ಮಾಲಿಗಿಲ್ಲ ಎನ್ನುವುದು ಕೆಲವರ ಕಂಪ್ಲೇಂಟು. ಆದರೂ ಸಾವಿರಾರು ಜನರ ಪೈಕಿ ಕೆಲವು ಜನರಾದರೂ ತಮ್ಮ ಕೈಯಲ್ಲಿರುವ ಉತ್ಪನ್ನಗಳಿಗೆ ಗ್ರಾಹಕರಾದಾರು ಎನ್ನುವುದು ನಂಬಿಕೆ.
ನಗರದ ಹಾರ್ಡಿಂಜ್ ಸರ್ಕಲ್, ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಭಾಗ, ದೇವರಾಜು ಅರಸು ರಸ್ತೆ, ಚಿಕ್ಕ ಗಡಿಯಾರ ವೃತ್ತ ಸೇರಿ ಎಲ್ಲ ಕಡೆಗಳಲ್ಲಿ ಪಳ ಪಳ ಹೊಳೆಯುವ ಬಲೂನುಗಳು ಪ್ಲಾಸ್ಟಿಕ್ ಬೊಂಬೆಗಳು, ಪ್ರಾಣಿಗಳ ಮುಖವಾಡ, ಬಣ್ಣ ಬಣ್ಣದ ಆಟಿಕೆಗಳು, ಸದ್ದುಮಾಡುತ್ತಿವೆ. ಸಂಜೆಯ ಹೊತ್ತಿಗೆ ಮಹಾರಾಜ ಮೈದಾನ, ವಸ್ತುಪ್ರದರ್ಶನ ಆವರಣ ಇವರ ಪಾಲಿಗೆ ನೆಚ್ಚಿನ ತಾಣಗಳು.
ಮೈಸೂರಿನ ದಸರೆ ಎಂದರೆ ಸಂಗೀತ, ಕಲೆ, ಪರಂಪರೆ, ಮೋಜು,ಮಸ್ತಿ ಎಲ್ಲವೂ ಹೌದು. ಹಲವರಿಗೆ ಇದು ಸಂಭ್ರಮದ ಗೂಡಾದರೆ ಕೆಲವರಿಗೆ ಬದುಕಿನ ಗೂಡು ಅರಸುವ ತಾಣ. ಬದುಕು ಕಟ್ಟಿಕೊಳ್ಳುವ ಹಬ್ಬ…
ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…
ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…
ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…
ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…
ಮೈಸೂರು ನಗರವನ್ನು ಫ್ಲೆಕ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿರುವುದು ಸ್ವಾಗತಾರ್ಹವಾಗಿದೆ. ದಸರಾ ಸಮಯದಲ್ಲಿ ಮೈಸೂರಿನಲ್ಲಿ ತಮ್ಮದೂ ಸೇರಿದಂತೆ ಯಾರ ಫ್ಲೆಕ್ಸ್ ಅಥವಾ…
ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…