ಜಿಲ್ಲೆಗಳು

ಆನೆ ಓಡಿಸುವ ಟಾಸ್ಕ್‌ ಗೆ ಹೊಸ ಫೋರ್ಸ್‌…!

ಹೊರಗುತ್ತಿಗೆ ಸಿಬ್ಬಂದಿ ಬಳಸಿ ಆನೆ ಹಾವಳಿ ತಡೆಗಟ್ಟಲು ಮುಂದಾಗಿದೆ ಸರಕಾರ

ಮೈಸೂರು: ಕರ್ನಾಟಕದಲ್ಲಿ ಆನೆ ಉಪಟಳ ಅಧಿಕವಿರುವ ಮ್ಯೆಸೂರು, ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆ ನಿಯಂತ್ರಣಕ್ಕೆ ಪ್ರತ್ಯೇಕ ಟಾಸ್ಕ್ ಪೋರ್ಸ್ ರಚಿಸಿ ಸರಕಾರ ಆದೇಶ ಹೊರಡಿಸಿದೆ.

ಇವುಗಳ ಮುಖ್ಯ ಉದ್ಧೇಶ ಆನೆಗಳ ಸಂರಕ್ಷಣೆ. ಜನ ವಸತಿ ಪ್ರದೇಶಗಳ ಸಮೀಪ ಕಾಡಾನೆ ಕಾಣಿಸಿಕೊಂಡಾಗ ಅವುಗಳನ್ನು ಮತ್ತೆ ಕಾಡಿಗೆ ಅಟ್ಟುವುದು, ಅರಿವಳಿಕೆ ನೀಡಿ ಬೇರೆ ಅರಣ್ಯ ಪ್ರದೇಶಕ್ಕೆ ಬಿಡುವುದು ಇತ್ಯಾದಿ. ಆದರೆ ಈ ವಿಶೇಷ ಕಾರ್ಯಪಡೆ ಆನೆ ಹಾವಳಿಯಿಂದ ತತ್ತರಿಸಿರುವ ಜನರಿಗೆ ನೆಮ್ಮದಿ ತರಬಲ್ಲುದೇ ಎನ್ನುವುದು ಇನ್ನೂ ಸಂಶಯವಾಗಿ ಉಳಿದಿದೆ.

ಈ ಕಾರ್ಯಪಡೆ ರಾಜ್ಯಕ್ಕೆ ಹೊಸದೇನೂ ಅಲ್ಲ. ವಿರಾಜಪೇಟೆ ಅರಣ್ಯ ವಿಭಾಗದಲ್ಲಿ 2014ರಲ್ಲಿಯೇ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್ ( ಆರ್.ಆರ್.ಟಿ.) ರಚಿಸಿ ಆನೆಗಳ ಹಾವಳಿ ತಪ್ಪಿಸುವ ಪ್ರಯತ್ನ ನಡೆದಿತ್ತು. ಆನೆಗಳು ಜನವಸತಿ ಪ್ರದೇಶಕ್ಕೆ ಕಾಲಿಟ್ಟೊಡನೆ ಕ್ಷಿಪ್ರವಾಗಿ ಗ್ರಾಮಸ್ಥರಿಗೆ ಮಾಹಿತಿ ನೀಡಿ ಓಡಿಸಲು ಸಜ್ಜಾಗುವುದು ಈ ತಂಡದ ಕೆಲಸವಾಗಿತ್ತು.

 

ಈಗ ಆರಂಭಿಸಿರುವ ವಿಶೇಷ ಕಾರ್ಯಪಡೆ ಉದ್ದೇಶವೂ ಇದಕ್ಕಿಂತ ಭಿನ್ನವಾಗಿಲ್ಲ. ನೂತನ ಟಾಸ್ಕ್ ಫೋರ್ಸ್‌ನಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಎ.ಸಿ.ಎಫ್, ವಲಯ ಅರಣ್ಯಾಧಿಕಾರಿ, ನಾಲ್ವರು ಡಿ.ಆರ್.ಎಫ್.ಓ., ಎಂಟು ಮಂದಿ ಅರಣ್ಯ ರಕ್ಷಕರು, 32 ಹೊರಗುತ್ತಿಗೆ ಆಧಾರದ ಸಿಬ್ಬಂದಿ ಇರಲಿದ್ದಾರೆ ಎಂದು ಸರಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಆನೆ ಹಾವಳಿ ಇರುವ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಟಾಸ್ಕ್ ಫೋರ್ಸ್ ಸಹಾಯವಾಣಿ ಕೇಂದ್ರ ಸ್ಥಾಪಿಸಲಾಗುತ್ತದೆ. ಸಹಾಯವಾಣಿಗೆ ಕರೆ ಮಾಡಿದ ತಕ್ಷಣ ಟಾಸ್ಕ್ ಪೋರ್ಸ್ ತಂಡ ಆನೆಯನ್ನು ಮರಳಿ ಕಾಡಿಗೆ ಅಟ್ಟಲು ಎಲ್ಲ ಸಿದ್ಧತೆಯೊಂದಿಗೆ ಸ್ಥಳಕ್ಕೆ ಧಾವಿಸುತ್ತದೆ ಎಂದು ಸರಕಾರ ಮಾಹಿತಿ ನೀಡಿದೆ. ಆದರೆ ಈಗ ಕಾರ್ಯಪಡೆಗೆ ನೇಮಕಗೊಂಡಿರುವ ಮುಖ್ಯಸ್ಥರಲ್ಲಿ ಹಲವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಇವರಿಂದ “ಕ್ಷಿಪ್ರʼ ಕಾರ್ಯಾಚರಣೆ ಸಾಧ್ಯವೇ ಎನ್ನುವುದು ಜನರ ಪ್ರಶ್ನೆ. ಕಾರ್ಯಪಡೆಯ ಬಹುಪಾಲು ಸಿಬ್ಬಂದಿ ಹೊರಗುತ್ತಿಗೆಯ ಮೇಲೆ ಆಯ್ಕೆಯಾಗುವ ಅನನುಭವಿಗಳು. ಇವರಿಂದ ಆನೆ ಹಿಂಡನ್ನು ಓಡಿಸುವ ಕ್ಲಿಷ್ಟ ಕೆಲಸ ಸಾಧ್ಯವೇ ಎಂಬ ಸಂತ್ರಸ್ತರ ಪ್ರಶ್ನೆಗೆ ಕಾಲವೇ ಉತ್ತರ ಹೇಳಬೇಕಾಗಿದೆ.

ಇನ್ನೊಂದು ತಂಡ ರಚನೆ ಮಾಡುವ ಬದಲು ಸರಕಾರ ಆನೆ ಹಾವಳಿ ಹೆಚ್ಚಾಗಲು ಕಾರಣವಾದ ಅಂಶಗಳ ಬಗ್ಗೆ ಮೊದಲು ಗಮನ ಹರಿಸಬೇಕಿತ್ತು. ಎತ್ತಿನ ಹೊಳೆಯಂತಹ ಯೋಜನೆಗಳು ಬಂದ ಬಳಿಕ ಮಲೆನಾಡು ಮತ್ತು ಕೊಡಗಿನಲ್ಲಿ ಆನೆಗಳ ವಲಸೆ ಪ್ರಮಾಣ ಹೆಚ್ಚಾಗಿದೆ. ಆನೆಗಳ ಕಾರಿಡಾರ್‌ ಬಗ್ಗೆ ಮಾತನಾಡುವ ಸರಕಾರ ಇವುಗಳ ದಾರಿಯನ್ನೇ ತಡೆದು ಒಂದೇ ಕಾಡಿಗೆ ಸೀಮಿತವಾಗುವಂತೆ ಮಾಡಿದೆ. ಕೊಡಗಿನಲ್ಲಿ ಕಾಫಿ ತೋಟದಲ್ಲಿ ಹುಟ್ಟಿ ಇಲ್ಲಿಯೇ ಬೆಳೆದ ಆನೆಗಳ ಹೊಸ ಸಂತತಿ ಇವೆ. ಕಾಡನ್ನೇ ನೋಡದ ಈ ಆನೆಗಳನ್ನು ಅರಣ್ಯಕ್ಕೆ ಬಿಟ್ಟರೆ ಮತ್ತೆ ಕಾಫಿ ತೋಟ ಹುಡುಕಿಕೊಂಡು ಬರುತ್ತವೆ. ಆನೆಗಳು ನಾಡಿಗೆ ಬರಲು ಕಾರಣವಾದ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಕೇವಲ ಕಾರ್ಯಪಡೆ ರಚನೆಯಿಂದ ಏನೂ ಪ್ರಯೋಜನವಾಗಲಾರದು ಎನ್ನುವುದು ಈ ಭಾಗದ ಜನರ ಅಭಿಪ್ರಾಯ.

ಆನೆಗಳ ಚಲನ ವಲನ ವೀಕ್ಷಣೆಗೆ ರೇಡಿಯೋ ಕಾಲರ್ ಅಳವಡಿಸುವ ಸಂಪ್ರದಾಯವನ್ನು ಆರಂಭಿಸಿ ದಶಕಗಳೇ ಸಂದಿವೆ. ಆದರೆ ಆನೆಗಳ ಇರುವಿಕೆಯನ್ನು ಮೊದಲೇ ತಿಳಿಸಿ ಅಪಾಯವನ್ನು ತಪ್ಪಿಸಿದ ಉದಾಹರಣೆಗಳು ಬಹಳ ವಿರಳ. ಆನೆ ಕಂದಕ, ಸೋಲಾರ್ ಹ್ಯಾಂಗಿಂಗ್ ಬೇಲಿ, ರೈಲ್ವೇ ಕಂಬಿ ಬೇಲಿಯನ್ನೂ ಚಾಕಚಕ್ಯತೆಯಿಂದ ದಾಟುವ ಆನೆಗಳನ್ನು ತಡೆಯಲು ಟಾಸ್ಕ್ ಪೋರ್ಸ್ ಬದಲು ಅವು ಕಾಡಿನಲ್ಲಿಯೇ ಉಳಿಯುವಂತೆ ಮಾಡುವ ಉಪಕ್ರಮಗಳು ಅಗತ್ಯ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿ ಬರುತ್ತಿದೆ.

ಕಾಫಿ ತೋಟದ ಎಲ್ಲ ಆನೆಗಳನ್ನೂ ಹಿಡಿದು ಸ್ಥಳಾಂತರಿಸುವಂತೆ ತೋಟ ಮಾಲೀಕರು,ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಆದರೆ ಸರಕಾರದ ಮುಂದೆ ಈ ಬಗ್ಗೆ ಯಾವುದೇ ಕ್ರಿಯಾ ಯೋಜನೆ ಇಲ್ಲ. ಟಾಸ್ಕ್‌ ಫೋರ್ಸ್ ಘೋಷಣೆ ಮುಂಬರುವ ಚುನಾವಣೆಗೆ ನೀಡಿರುವ ಆಶ್ವಾಸನೆ ಎನ್ನುತ್ತಾರೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್.

‌ಆನೆ ಹಾವಳಿಯಿಂದ ಕಂಗೆಟ್ಟ ಜನರು ಇತ್ತೀಚೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರನ್ನು ಸುತ್ತುವರಿದು ಕೈ ಮಾಡುವಷ್ಟರ ಮಟ್ಟಿಗೆ ಹೊರಟಿದ್ದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿ. ಮಲೆನಾಡು ಮತ್ತು ಕೊಡಗಿನಲ್ಲಿ ಆನೆ ಹಾವಳಿಯ ಕಾರಣಕ್ಕೆ ನೂರಾರು ಜನರು ತಮ್ಮ ಕೃಷಿ ಜಮೀನನ್ನು ಬೀಳು ಬಿಟ್ಟಿದ್ದಾರೆ. ತಮ್ಮ ಮಕ್ಕಳನ್ನು ದೂರದ ಹಾಸ್ಟೆಲ್ ಗಳಲ್ಲಿ ಬಿಟ್ಟು ಓದಿಸುತ್ತಿದ್ದಾರೆ. ಈ ಎಲ್ಲ ಅಸಮಾಧಾನಗಳು ಸ್ಫೋಟಗೊಂಡರೆ ಮುಂದೊಂದು ದಿನ
ಆನೆ- ಮಾನವ ಸಂಘರ್ಷ ಹೊಸ ಬಿಕ್ಕಟ್ಟಿಗೆ ಕಾರಣವಾಗಬಹುದು.

ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 900ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ. ಕರ್ನಾಟಕವೊಂದರಲ್ಲಿಯೇ ಹತ್ತು ವರ್ಷಗಳಲ್ಲಿ350ಕ್ಕೂ ಹೆಚ್ಚು ಆನೆಗಳು ಮೃತಪಟ್ಟಿವೆ. ಈ ವರ್ಷ ಆಗಸ್ಟ್ ತಿಂಗಳ ಮೊದಲ ಭಾಗದವರೆಗೆ ಸುಮಾರು 30 ಆನೆಗಳು ಸಾವನ್ನಪ್ಪಿವೆ. ಕೊಡಗು ಜಿಲ್ಲೆಯಲ್ಲಿಯೇ 10ಕ್ಕೂ ಅಧಿಕ ಆನೆಗಳು ನಾನಾ ಕಾರಣಗಳಿಂದ ಸಾವನ್ನಪ್ಪಿವೆ. ರಾಜ್ಯ ಸರ್ಕಾರ ಸುಮಾರು ೧೫೦ ಕೋಟಿಗೂ ಹೆಚ್ಚು ಹಣ ಪರಿಹಾರಕ್ಕಾಗಿ ವ್ಯಯಿಸಿದೆ.

ಕಾಡಾನೆ ದಾಳಿಯಿಂದ ಮೃತಪಟ್ಟ ಕುಟುಂಬವರ್ಗಕ್ಕೆ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಸರಕಾರ ಇತ್ತೀಚೆಗೆ ಐದು ಲಕ್ಷದಿಂದ ಏಳೂವರೆ ಲಕ್ಷ ರೂ.ಗಳಿಗೆ ಏರಿಸಿತ್ತು. ಎಲಿಫೆಂಟ್ ಟಾಸ್ಕ್ ಪೋರ್ಸ್ ಜತೆ ಈಗ ಈ ಮೊತ್ತವನ್ನು 15 ಲಕ್ಷ ರೂ. ಗಳಿಗೆ ಏರಿಸಲಾಗಿದೆ. ಆದರೆ ಪರಿಹಾರ ಧನ ವಿತರಣೆ ಪ್ರಕರಣಗಳು ಕಡಿಮೆಯಾಗಿ ಪರಿಹಾರ ಕ್ರಮಗಳು ಹೆಚ್ಚಾಗಲಿ ಎನ್ನುವುದು ಜನರ ಆಶಯ.

andolana

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago