ಅಂಕಣಗಳು

ಚಲನಚಿತ್ರ ರಾಜ್ಯಪ್ರಶಸ್ತಿ , ರಾಷ್ಟ್ರ ಪ್ರಶಸ್ತಿ ಪ್ರದಾನ ನಡುವೆ ಎನಿತೋ ಅಂತರ!

ವೈಡ್‌ ಆಂಗಲ್

ಬಾ.ನಾ.ಸುಬ್ರಹ್ಮಣ್ಯ 

ಕಳೆದ ವಾರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮೈಸೂರಿನಲ್ಲಿ ನಡೆಯುವುದರ ಕುರಿತು ಈ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು. ಅದನ್ನು ಬರೆಯುವ ವೇಳೆ ಜೀವಮಾನ ಸಾಧನೆಗೆ ನೀಡುವ ಪ್ರಶಸ್ತಿ ಆಯ್ಕೆ ಆಗಿರಲಿಲ್ಲ. ರಾಜಕುಮಾರ್ ಪ್ರಶಸ್ತಿಗೆ ತಾರೆ ಉಮಾಶ್ರೀ, ಕಣಗಾಲ್ ಪುಟ್ಟಣ್ಣ ಪ್ರಶಸ್ತಿಗೆ ನಂಜುಂಡೇಗೌಡ ಮತ್ತು ವಿಷ್ಣುವರ್ಧನ್ ಪ್ರಶಸ್ತಿಗೆ ರಿಚರ್ಡ್ ಕೆಸ್ಟಲಿನೋ ಅವರನ್ನು ಆಯ್ಕೆ ಸಮಿತಿ ಆರಿಸಿದೆ.

ಯಾವುದೇ ಆಯ್ಕೆ ವಿವಾದಾತೀತ ಆಗಿರುವುದಿಲ್ಲ ಎನ್ನುವುದು ಸಾರ್ವತ್ರಿಕ ಸತ್ಯ. ಈ ಹೇಳಿಕೆಯೇ ಬಹಳಷ್ಟು ಮಂದಿಗೆ ಗುರಾಣಿಯೂ ಆಗಿಬಿಡುತ್ತದೆ. ೭೨ನೇ ರಾಷ್ಟ್ರಪ್ರಶಸ್ತಿಯ ವೇಳೆ ಸಾಕಷ್ಟು ವಿವಾದ ಎದ್ದಿತ್ತು. ‘ಕೇರಳ ಸ್ಟೋರಿ’, ಶಾರುಕ್ ಖಾನ್ ಇವರುಗಳಿಗೆ ನೀಡಿದ ಪ್ರಶಸ್ತಿ ಸಾಕಷ್ಟು ಚರ್ಚೆಗೆ ದಾರಿಯಾಗಿತ್ತು. ಮೊನ್ನೆ ೨೦೨೪ರ ಸಾಲಿನ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯ ತೀರ್ಪುಗಾರರ ಸಮಿತಿಯ ಅಧ್ಯಕ್ಷರಾಗಿ ತಮ್ಮ ಶಿಫಾರಸನ್ನು ನೀಡುವ ವೇಳೆ ನಟ ಪ್ರಕಾಶ ರೈ ಅವರು ಇದನ್ನು ಅಲ್ಲಿ ಪ್ರಕಟಿಸಿದರು ಕೂಡಾ. ೨೦೨೪ರ ಸಾಲಿನ ಅತ್ಯುತ್ತಮ ನಟ ಪ್ರಶಸ್ತಿ ಮಮ್ಮುಟಿ ಅವರಿಗೆ ಬಂದಿತ್ತು. ಫೈಲ್ಸ್ ಪೈಲ್‌ಗಳ ನಡುವೆ ಮಮ್ಮುಟಿಯಂತಹವರು ಗಮನಕ್ಕೆ ಬರುವುದಿಲ್ಲ ಎಂದರು ಪ್ರಕಾಶ್. ೨೦೨೪ರ ಸಾಲಿನ ರಾಷ್ಟ್ರಪ್ರಶಸ್ತಿ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಮೊನ್ನೆಮೊನ್ನೆ ಅದಕ್ಕೆ ಚಿತ್ರಗಳನ್ನು ಆಹ್ವಾನಿಸಲಾಗಿದೆ.

ಕನ್ನಡ ಚಿತ್ರರಂಗದಲ್ಲಿ ಜೀವಿತಾವಧಿ ಸಾಧನೆ ಮಾಡಿ, ಚಿತ್ರೋದ್ಯಮದ ಬೆಳಣಿಗೆಗೆ ತಮ್ಮದೇ ಆದ ರೀತಿಯ ಕೊಡುಗೆ ನೀಡಿದವರು ಹಲವರಿದ್ದಾರೆ. ಫಾಲ್ಕೆ ಪ್ರಶಸ್ತಿಯ ಮಾದರಿಯಲ್ಲಿ ಮೊದಲು ಒಂದೇ ಒಂದು ಪ್ರಶಸ್ತಿ ನೀಡುವ ಯೋಚನೆ ಸರ್ಕಾರದ್ದಾಗಿತ್ತು. ನಿರ್ದೇಶಕ ಪುಟ್ಟಣ್ಣ ಕಣಗಾಲರ ಹೆಸರಿನಲ್ಲಿ ಆ ಪ್ರಶಸ್ತಿ ಸ್ಥಾಪನೆ ಆಯಿತು. ಹುಣಸೂರು ಕೃಷ್ಣಮೂರ್ತಿ, ಜಿ.ವಿ.ಅಯ್ಯರ್ ಮತ್ತು ಬಿ.ಎಸ್.ರಂಗ ಅವರಿಗೆ ಮೊದಲ ಮೂರು ವರ್ಷಗಳ ಪ್ರಶಸ್ತಿ ಸಂದಾಗ ಯಾವುದೇ ಅಪಸ್ವರಗಳಿರಲಿಲ್ಲ. ಮುಂದಿನ ಪ್ರಶಸ್ತಿಯನ್ನು ಬಾಲಣ್ಣನವರಿಗೆ ಪ್ರಕಟಿಸಿದಾಗ, ಈ ಪ್ರಶಸ್ತಿ ನಿರ್ದೇಶಕರಿಗೆ ಮಾತ್ರ ಸಲ್ಲಬೇಕು ಎಂದು ನಿರ್ದೇಶಕರ ವಲಯ ಸೊಲ್ಲೆತ್ತಿತು.

ಅದನ್ನು ಒಪ್ಪಿದ, ಆಗ ಮುಖ್ಯಮಂತ್ರಿಗಳಾಗಿದ್ದ ಬಂಗಾರಪ್ಪನವರು, ಇನ್ನೊಂದು ಪ್ರಶಸ್ತಿಯನ್ನು ಗುಬ್ಬಿ ವೀರಣ್ಣನವರ ಹೆಸರಿನಲ್ಲಿ ಸ್ಥಾಪಿಸಿದರು. ಚಿತ್ರೋದ್ಯಮದ ಸಮಗ್ರ ಬೆಳವಣಿಗೆಗೆ ಕೊಡುಗೆ ನೀಡಿದ ಒಬ್ಬರಿಗೆ ನೀಡುವ ಆ ಪ್ರಶಸ್ತಿಯ ಮೊದಲ ಮತ್ತು ಕೊನೆಯ ಪುರಸ್ಕ ತರು ಡಾ. ರಾಜಕುಮಾರ್. ಗುಬ್ಬಿ ವೀರಣ್ಣನವರು ನಟ, ನಿರ್ಮಾಪಕ, ಪ್ರದರ್ಶಕ, ಸ್ಟುಡಿಯೊ ಮಾಲಿಕ ಹೀಗೆ ಮೂಕಿ ದಿನಗಳಿಂದಲೇ ಚಿತ್ರೋದ್ಯಮದಲ್ಲಿ ತೊಡಗಿಸಿಕೊಂಡವರು. ಅವರ ಹೆಸರಿನ ಪ್ರಶಸ್ತಿ ರಂಗಭೂಮಿಯ ಸಾಧಕರಿಗೆ ಸಲ್ಲಬೇಕು ಎನ್ನುವ ಒತ್ತಾಯ, ಒತ್ತಡಕ್ಕೆ ಸರ್ಕಾರ ಮಣಿಯಿತು. ಗುಬ್ಬಿ ವೀರಣ್ಣ ಪ್ರಶಸ್ತಿ ಮುಂದೆ ರಂಗಭೂಮಿಯ ಸಾಧಕರಿಗೆ ಎಂದಾಯಿತು. ಅದರ ಬದಲು ರಾಜಕುಮಾರ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಯಿತು.

ಇದನ್ನೂ ಓದಿ:-ಮೈಸೂರಲ್ಲಿ ಮುಂದುವರಿದ ಹುಲಿ ದಾಳಿ : ಸರಗೂರಿನಲ್ಲಿ ರೈತ ಸಾವು

ತೆರೆಯ ಹಿಂದೆ ದುಡಿಯುವವರನ್ನು ಗುರುತಿಸಿ ನೀಡುತ್ತಿದ್ದ ಪ್ರಶಸ್ತಿಗೆ ವಿಷ್ಣುವರ್ಧನ್ ಹೆಸರನ್ನು ಅವರ ನಿಧಾನಂತರ ಇಡಲಾಯಿತು. ಈ ಬಾರಿ ತುಳು, ಕೊಡವ, ಕೊಂಕಣಿ ಮತ್ತು ಕನ್ನಡ ಚಿತ್ರಗಳ ನಿರ್ಮಾಪಕ, ನಿರ್ದೇಶಕ ರಿಚರ್ಡ್ ಕೆಸ್ಟಲಿನೋ ಅವರಿಗೆ ನೀಡಲಾಗಿದೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ, ತುಳು ಚಿತ್ರಕ್ಕೆ ಮೊದಲ ಬಾರಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ, ೨೪ ಗಂಟೆಗಳಲ್ಲಿ ‘ಸೆಪ್ಟೆಂಬರ್ ೮’ ಚಿತ್ರವನ್ನು ತಯಾರಿಸಿದವರು ಅವರು. ತಡವಾಗಿಯಾದರೂ ಅವರಿಗೆ ಈ ಪ್ರಶಸ್ತಿ ಸಂದಿದೆ.

ರಂಗಭೂಮಿ ಮತ್ತು ಚಿತ್ರರಂಗಗಳೆರಡರಲ್ಲೂ ಅಭಿನಯದಲ್ಲಿ ತಮಗೆ ತಾವೇ ಸಾಟಿ ಆಗಿರುವ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ತಮ್ಮ ಅಭಿನಯಕ್ಕೆ ಪಡೆದ ಉಮಾಶ್ರೀ ಅವರು ಈ ಬಾರಿಯ ರಾಜಕುಮಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸಂದಿರುವುದು ನಿರ್ದೇಶಕ ನಂಜುಂಡೇಗೌಡ ಅವರಿಗೆ. ೨೦೧೯ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಅವರನ್ನು ಅದೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ತಾಂತ್ರಿಕವಾಗಿ ಸರಿ ಅಲ್ಲ ಎನ್ನುವವರೂ ಇದ್ದಾರೆ. ೨೦೧೮ರ ಸಾಲಿನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ನಿರ್ದೇಶಕ ಜೋ ಸೈಮನ್ ಅವರನ್ನು ಅದೇ ಕಾರಣದಿಂದ ೨೦೧೮ರ ಸಾಲಿಗೆ ಪರಿಗಣಿಸಲಿಲ್ಲವಂತೆ. ಸಂಬಂಧಪಟ್ಟ ಮಂದಿ ಕರೆ ಮಾಡಿ ಈ ವಿಷಯ ತಿಳಿಸಿದ್ದಾಗಿ ಹೇಳುತ್ತಾರೆ ಜೋ ಸೈಮನ್.

ಅದೇನೇ ಇರಲಿ, ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳು. ಮೊನ್ನೆ ಸೋಮವಾರ, ಮುಖ್ಯಮಂತ್ರಿಗಳ ಆಶಯದಂತೆ ಮೈಸೂರಿನಲ್ಲಿ ೨೦೧೮ ಮತ್ತು ೨೦೧೯ರ ಸಾಲಿನ ಪ್ರಶಸ್ತಿ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆಯಿತು. ಹಿಂದೆ ೨೦೧೫ರಲ್ಲಿ ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆದಿತ್ತು. ಅದು ಹೊರಾಂಗಣದಲ್ಲಿ ನಡೆದರೆ ಇದು ಒಳಾಂಗಣದಲ್ಲಿ ನಡೆಯಿತು. ಸಾಮಾನ್ಯವಾಗಿ ರಾಜಧಾನಿಯ ಹೊರಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಾಗ ಚಿತ್ರೋದ್ಯಮಿಗಳನ್ನು ಮತ್ತು ಚಲನಚಿತ್ರ ಪತ್ರಕರ್ತರನ್ನು ಆಹ್ವಾನಿಸಿ, ಕರೆದುಕೊಂಡು ಹೋಗುವ ರೂಢಿ ಇತ್ತು. ಈ ಬಾರಿ ಅದು ಇರಲಿಲ್ಲ. ಪ್ರತಿಬಾರಿ ರಾಜ್ಯಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯಾ ವರ್ಷದ ಕನ್ನಡ ಚಿತ್ರರಂಗದ ರಾಷ್ಟ್ರ ಪ್ರಶಸ್ತಿ ಪುರಸ್ಕೃತರನ್ನು ಗೌರವಿಸುವ ಪರಿಪಾಠವನ್ನು ಕೂಡಾ ಈ ಬಾರಿ ಮರೆತಂತಿದೆ.

ಇನ್ನು ಸಮಾರಂಭದ ಕುರಿತು. ಶಿಷ್ಟಾಚಾರದ ಕಾರಣ ಸಾಕಷ್ಟು ಮಂದಿ ವೇದಿಕೆಯಲ್ಲಿದ್ದರು. ವೇದಿಕೆಗೆ ಅವರನ್ನು ಕರೆಯುವ ಮೂಲಕ ಗೌರವಿಸುವುದು ಅನಿವಾರ್ಯ ಇರಬಹುದು. ಆದರೆ ಸಮಾರಂಭದ ನಡುವೆಯೇ, ವೇದಿಕೆಯ ಮೇಲೆ ಪ್ರಶಸ್ತಿಪ್ರದಾನ ನಡೆಯುವ ವೇಳೆ ಇತ್ತ ಸೆಲ್ಛಿ ತೆಗೆಸಿಕೊಳ್ಳುವುದೇ ಮೊದಲಾದ ಚಟ ಕಾರ್ಯಕ್ರಮದ ಗಾಂಭೀರ್ಯಕ್ಕೆ ಎರವಾಗಿತ್ತು. ಕಾರ್ಯಕ್ರಮದ ನಿರೂಪಕರೂ ಅಲ್ಲಿ ಸೆಲ್ಛಿಗೆ ನಿಂತರು. ನಾಡಿನ ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ವೇದಿಕೆಯಲ್ಲಿ ಅದರ ಗೌರವ, ಗಾಂಭೀರ್ಯಗಳನ್ನು ಉಳಿಸುವ ಬದಲು ಇಳಿಸುವ ಪ್ರಸಂಗಗಳು ನಡೆಯದಂತೆ ಸಂಬಂಧಪಟ್ಟವರು ನಿಯಂತ್ರಿಸಬೇಕು. ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಗಾಗಿ ವೇದಿಕೆ ಯಲ್ಲಿದ್ದವರು ಮತ್ತು ಸಭಾಸದರ ಎದ್ದುನಿಂತು ನಿಮಿಷಗಳವರೆಗೆ ಗಾಯಕರು ಕರೋಕೆಗೆ ಕಾದದ್ದು ಸಲ್ಲದ ಪ್ರಸಂಗ. ತಾಂತ್ರಿಕ ತೊಡಕಾದಾಗ ತಕ್ಷಣ ತಾವೇ ನಾಡಗೀತೆ ಹಾಡಲೂ ಇಲ್ಲ. ಸಭಾಸದರ ಸದ್ದು ಕೇಳಿದ ಮೇಲೆ ಹಾಡಿದರು!

ಹೆಚ್ಚಿನ ಓದಿಗಾಗಿ:-ಓದುಗರ ಪತ್ರ: ಕಾಡಾ ಕಚೇರಿಯಲ್ಲಿ ನಾಯಿಗಳ ಹಾವಳಿ ತಪ್ಪಿಸಿ

ಕನ್ನಡ ಮತ್ತು ಪ್ರಾದೇಶಿಕ ಭಾಷಾ ಚಿತ್ರರಂಗಕ್ಕೆ ಕರ್ನಾಟಕ ಸರ್ಕಾರ ನೀಡುವ ಅತಿ ದೊಡ್ಡ ಗೌರವ ಈ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳು. ರಾಷ್ಟ್ರಮಟ್ಟದಲ್ಲೂ ಇಂತಹದೇ ಪ್ರಶಸ್ತಿಪ್ರದಾನ ಸಮಾರಂಭ ನಡೆಯುತ್ತದೆ. ಅಲ್ಲಿನ ಈ ಕಾರ್ಯ ಕ್ರಮ ನಡೆಯುವ ರೀತಿ ಗಮನಿಸಬೇಕು. ಅಲ್ಲಿ ಈ ಪ್ರಶಸ್ತಿಗಳನ್ನು ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ. ಮೂರು ಬಾರಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ಅವಕಾಶ ಈ ಅಂಕಣಕಾರನಿಗೆ ಲಭಿಸಿತ್ತು. ಮೊದಲ ಬಾರಿ ತೀರ್ಪುಗಾರನಾಗಿ, ಎರಡನೇ ಬಾರಿ ಪ್ರಶಸ್ತಿ ಪುರಸ್ಕೃತ ದೊಡ್ಡಹುಲ್ಲೂರು ರುಕ್ಕೋಜಿ ಅವರೊಂದಿಗೆ ಹಾಗೂ ಮೂರನೇ ಬಾರಿ ಸ್ವತಃ ಪ್ರಶಸ್ತಿ ಪುರಸ್ಕ ತನಾಗಿ. ಕಾರ್ಯಕ್ರಮ ಆಯೋಜನೆ, ಅಲ್ಲಿನ ಶಿಸ್ತು, ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿ ಮುಗಿದ ರೀತಿ ಎಲ್ಲವೂ ಮಾದರಿ. ೬೯ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (೨೦೨೧) ಪ್ರದಾನ ೨.೧೫ ಗಂಟೆಗಳ ಕಾಲ ನಡೆದ ಕಾರ್ಯಕ್ರಮ. ೧೦೦ಕ್ಕೂ ಹೆಚ್ಚು ಮಂದಿ ಪ್ರಶಸ್ತಿ ಪುರಸ್ಕೃತರಿಗೆ ೮೦ ನಿಮಿಷಗಳಲ್ಲಿ ಅವುಗಳನ್ನು ಕೊಡಮಾಡಲಾಯಿತು. ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರು, ರಾಜ್ಯ ಸಚಿವರು, ಕಾರ್ಯದರ್ಶಿಗಳು ಮತ್ತು ಮೂರು ತೀರ್ಪುಗಾರ ಸಮಿತಿಗಳ ಅಧ್ಯಕ್ಷರು ವೇದಿಕೆಯ ಮೇಲಿದ್ದರು. ಉಳಿದಂತೆ ಅತಿಥಿಗಳು, ಅಧಿಕಾರಿಗಳು ಎಲ್ಲರಿಗೂ ಸಭಾಂಗಣದಲ್ಲಿ ಮುಂದೆ ಎಡಭಾಗದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗಿತ್ತು.

ಪ್ರಶಸ್ತಿ ಪುರಸ್ಕೃತರು, ಆಯ್ಕೆ ಸಮಿತಿಯ ಸದಸ್ಯರಿಗೆ ಸಭಾಂಗಣದಲ್ಲಿ ಮುಂದೆ ಬಲಭಾಗದಲ್ಲಿ ಸ್ಥಳಾವಕಾಶ. ಪ್ರಶಸ್ತಿ ಪಡೆದವರ ಕುಟುಂಬದವರಿಗೆ ಮತ್ತು ಇತರ ಆಹ್ವಾನಿತರಿಗೆ ಹಿಂದೆ, ಪ್ರತ್ಯೇಕ ಆಸನಗಳು. ಇಡೀ ಕಾರ್ಯಕ್ರಮ ನೇರಪ್ರಸಾರವಾಗಿತ್ತು. ಅದರ ಕೊಂಡಿ ಈಗಲೂ ಯುಟ್ಯೂಬ್‌ನಲ್ಲಿದೆ.  https://www.youtube.com/watch?v=fT1ht ಇದರಲ್ಲಿ ಮೊದಲ ಒಂದು ಗಂಟೆ ಸಭಾಂಗಣದ ಹೊರಗೆ ಪ್ರಶಸ್ತಿ ಪುರಸ್ಕೃತರ ಪ್ರತಿಕ್ರಿಯೆ, ಮುಂದೆ ಅರ್ಧ ಗಂಟೆ ಕಾರ್ಯಕ್ರಮದ ಆರಂಭ, ಪ್ರಶಸ್ತಿ ಪುರಸ್ಕೃತ ಚಿತ್ರಗಳು, ವ್ಯಕ್ತಿಗಳ ಪರಿಚಯದ ಎವಿ, ರಾಷ್ಟ್ರಪತಿಗಳ ಆಗಮನ, ಸ್ವಾಗತ ಇತ್ಯಾದಿಗಳ ನಂತರ ಪ್ರಶಸ್ತಿ ಪ್ರದಾನ. ಮೇಲೆ ಹೇಳಿದಂತೆ ೮೦ ನಿಮಿಷಗಳಲ್ಲಿ -ಲ್ಕೆ ಪ್ರಶಸ್ತಿಯೂ ಸೇರಿದಂತೆ ಎಲ್ಲ ಪ್ರಶಸ್ತಿಗಳ ಪ್ರದಾನ, ನಂತರ ರಾಷ್ಟ್ರಪತಿಗಳ ಮಾತು ಹೀಗೆ ಯಾವುದೇ ಗೊಂದಲಗಳಿಲ್ಲದೆ, ಶಿಸ್ತುಬದ್ಧವಾಗಿ ಶಿಷ್ಟಾಚಾರವನ್ನೂ ಪಾಲಿಸಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಈ ಮಾದರಿಯಲ್ಲಿ ರಾಜ್ಯದಲ್ಲೂ ನಡೆಸಲು ಸಾಧ್ಯ. ಅದಕ್ಕೆ ಸಂಬಂಧಪಟ್ಟವರ ಇಚ್ಛಾಶಕ್ತಿ, ಜೊತೆಗಿ ದ್ದವರ ಸಹಕಾರ ಮುಖ್ಯ. ಹ್ಞಾಂ, ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್ ಪ್ರಶಸ್ತಿ, ಕಣಗಾಲ್ ಪುಟ್ಟಣ್ಣ ಪ್ರಶಸ್ತಿ ಮತ್ತು ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಮೊನ್ನೆ ನೀಡುವಾಗ ಒಬ್ಬೊಬ್ಬರಿಗೆ ಅಥವಾ ಆಯಾ ವರ್ಷದ ಸಾಧಕರಿಗೆ ಪ್ರತ್ಯೇಕವಾಗಿ ನೀಡಿದ್ದರೆ ಚೆನ್ನಿತ್ತು ಎನ್ನುವುದು ಬಹುಮಂದಿಯ ಮಾತು. ಹೌದಲ್ಲ? ೨೦೨೦ ಮತ್ತು ೨೦೨೧ರ ವಾರ್ಷಿಕ ಚಲನಚಿತ್ರ ಪ್ರಶಸ್ತಿಪ್ರದಾನದ ವೇಳೆ ಹೇಗಾಗುತ್ತದೆ ನೋಡೋಣ.

ಯಾವುದೇ ಗೊಂದಲಗಳಿಲ್ಲದೆ, ಶಿಸ್ತುಬದ್ಧವಾಗಿ ಶಿಷ್ಟಾಚಾರವನ್ನೂ ಪಾಲಿಸಿ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ಈ ಮಾದರಿಯಲ್ಲಿ ರಾಜ್ಯದಲ್ಲೂ ನಡೆಸಲು ಸಾಧ್ಯ. ಅದಕ್ಕೆ ಸಂಬಂಧಪಟ್ಟವರ ಇಚ್ಛಾಶಕ್ತಿ, ಜೊತೆಗಿದ್ದವರ ಸಹಕಾರ ಮುಖ್ಯ

ಆಂದೋಲನ ಡೆಸ್ಕ್

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

6 hours ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

8 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

8 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

9 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

9 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

10 hours ago