cm siddramiah and dk shiv kumar
ಸಿದ್ದರಾಮಯ್ಯ ಪರ ನಿಲ್ಲದಿದ್ದರೆ ರಾಜ್ಯದಲ್ಲಿ ಪಕ್ಷ ಅಸ್ತಿತ್ವ ಕಳೆದುಕೊಳ್ಳುವ ಆತಂಕ
ಮುಖ್ಯಮಂತ್ರಿ ಸಿದ್ದರಾಮಯ್ಯ ಎಸೆದ ದಾಳ ದಿಲ್ಲಿಯ ಕಾಂಗ್ರೆಸ್ ವರಿಷ್ಠರನ್ನು ತಬ್ಬಿಬ್ಬುಗೊಳಿಸಿದೆ. ಈ ಹಿಂದೆ ನಡೆದಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸದಂತೆ ಕಾಂಗ್ರೆಸ್ ವರಿಷ್ಠರು ತಡೆದಿದ್ದರಲ್ಲ ಆ ಸಂದರ್ಭದಲ್ಲಿ ಇದು ಡಿಸಿಎಂ ಡಿಕೆಶಿಯ ವಿಜಯ ಎಂಬಂತೆ ಪ್ರತಿಬಿಂಬಿಸಲಾಗಿತ್ತು. ಅರ್ಥಾತ್, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಅಹಿಂದ ವರ್ಗಗಳ ಪವರ್ ಹೆಚ್ಚು ಅಂತ ಸಾಬೀತುಪಡಿಸಿ ಒಕ್ಕಲಿಗ, ಲಿಂಗಾಯತ ಸಮುದಾಯಗಳ ಶಕ್ತಿ ಕಡಿಮೆ ಎನ್ನುವುದನ್ನು ಸಂಕೇತಿಸುತ್ತಿತ್ತು. ಹೀಗಾಗಿ ಈ ಸಮೀಕ್ಷೆಯ ವರದಿಗೆ ಡಿಕೆಶಿ ಅಡ್ಡಗಾಲು ಹಾಕಿದರು ಎಂದು ಹೇಳುವ ಕೆಲಸವಾಗಿತ್ತು.
ಇನ್ನು ಈ ವರದಿಯ ನಿರಾಕರಣೆಯಿಂದ ಸಿದ್ದರಾಮಯ್ಯ ಅವರಿಗೆ ಬೇಸರವಾಗಬಹುದು ಎಂಬ ಕಾರಣಕ್ಕಾಗಿ, ಇಂತಹ ಸಮೀಕ್ಷೆಯನ್ನು ಪುನಃ ನಡೆಸುವಂತೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಽ ಅವರು ಸೂಚಿಸಿದ್ದರು. ಆದರೆ ಯಾವಾಗ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಿದ್ದರಾಮಯ್ಯ ಸಜ್ಜಾದರೋ, ಇದಾದ ನಂತರ ಕಾಂಗ್ರೆಸ್ಸಿನ ಸ್ಥಳೀಯ ನಾಯಕರು ಮಾತ್ರವಲ್ಲ, ಸ್ವತಃ ದಿಲ್ಲಿಯ ವರಿಷ್ಠರೇ ತಬ್ಬಿಬ್ಬಾಗಿದ್ದಾರೆ. ಅವರಿಗೀಗ ಸಿದ್ದರಾಮಯ್ಯ ಇಟ್ಟ ಹೆಜ್ಜೆ ಮತ್ತು ಅದು ಎಬ್ಬಿಸಿರುವ ಕೋಲಾಹಲವನ್ನು ನೋಡಿದ ಮೇಲೆ ಆತಂಕ ಶುರುವಾಗಿದೆ. ಇವತ್ತು ಸಿದ್ದರಾಮಯ್ಯ ಅವರು ಡಬ್ಬದಿಂದ ಹೊರತೆಗೆದು ಬಿಟ್ಟ ಭೂತವನ್ನು ನಿಯಂತ್ರಿಸಲು ಸ್ವತಃ ಸಿದ್ದರಾಮಯ್ಯ ಅವರೇ ಇರಬೇಕು. ಇಲ್ಲದಿದ್ದರೆ ಆ ಭೀತಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನೇ ನುಂಗಬಹುದು ಅನ್ನಿಸತೊಡಗಿದೆ.
ಕಾರಣ ಇಂದು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತ ನಡೆಯಲಿರುವ ಪರೋಕ್ಷ ಜನಗಣತಿ ಕಾರ್ಯದಿಂದ ಒಂದು ವಿಷಯ ನಿಸ್ಸಂಶಯವಾಗಿ ಸಾಬೀತಾಗಲಿದೆ. ಅದೆಂದರೆ ಅಹಿಂದ ವರ್ಗಗಳ ಶಕ್ತಿ ಬಲಿಷ್ಠ ವರ್ಗಗಳಿಗಿಂತ ಹೆಚ್ಚು ಎಂಬುದು. ಆದರೆ ಇದು ಅಧಿಕೃತವಾಗಿ ಸಾಬೀತಾಗುವುದು ಬಲಿಷ್ಠ ವರ್ಗಗಳಿಗೆ ಬೇಕಿಲ್ಲ. ಹೀಗಾಗಿ ಸಹಜವಾಗಿಯೇ ಆ ವರ್ಗಗಳಿಂದ ಪ್ರತಿಭಟನೆ ಶುರುವಾಗಿದೆ. ಅದರೆ ಈ ಪ್ರತಿಭಟನೆಯಿಂದ ಕಾಂಗ್ರೆಸ್‌ನ ಸ್ಥಳೀಯ ಒಕ್ಕಲಿಗ, ಲಿಂಗಾಯತ ನಾಯಕರು ಕಂಗಾಲಾದರೆ ಪುನಃ ವರಿಷ್ಠರಿಗೆ ದೂರು ಹೋಗುತ್ತದೆ. ಆದರೆ ಈ ಸಲ ದೂರು ಹೋದರೆ ಕಾಂಗ್ರೆಸ್ ವರಿಷ್ಠರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತಡೆಕೊಡುವುದು ಕಷ್ಟ. ಹಾಗೇನಾದರೂ ಅವರು ತಡೆಕೊಡಲು ಮುಂದಾದರೆ ಸಿದ್ದ ರಾಮಯ್ಯ ಕನಲುತ್ತಾರೆ ಮತ್ತು ಮುಲಾಜಿಲ್ಲದೆ ಅದನ್ನು ಪ್ರತಿಭಟಿಸುತ್ತಾರೆ. ಹಾಗೇನಾದರೂ ಆದರೆ ಇವತ್ತು ಕಾಂಗ್ರೆಸ್ ಬೆನ್ನ ಹಿಂದಿರುವ ಅಹಿಂದ ವರ್ಗಗಳು ಕನಲುತ್ತವೆ ಮತ್ತು ಇದು ಕೈ ಪಾಳೆಯದ ಶಕ್ತಿಯನ್ನು ಕುಗ್ಗಿಸಲಿದೆಯಲ್ಲದೇ ಜಾ.ದಳ- ಬಿಜೆಪಿ ಮಿತ್ರಕೂಟದ ಶಕ್ತಿಯನ್ನು ಹಿಗ್ಗಿಸಲಿದೆ. ಹಾಗಾಗಬಾರದು ಎಂದರೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಗೆ ಕಾಂಗ್ರೆಸ್ ವರಿಷ್ಠರು ಅಡ್ಡಗಾಲು ಹಾಕಬಾರದು ಮತ್ತು ಬಲಿಷ್ಠ ವರ್ಗಗಳ ಸದ್ಯದ ಆಕ್ರೋಶವನ್ನು ಎದುರಿಸಲು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವಂತೆ ನೋಡಿಕೊಳ್ಳಬೇಕು.
ಅಂದ ಹಾಗೆ ಇವತ್ತಿನ ಪರಿಸ್ಥಿತಿ ಏನು? ಬಿಹಾರ ವಿಧಾನಸಭೆ ಚುನಾವಣೆಯ ನಂತರ ಕರ್ನಾಟಕದಲ್ಲಿ ನಾಯಕತ್ವ ಬದಲಾಗಬಹುದು ಎಂಬ ಅನುಮಾನ ಪ್ರತಿಧ್ವನಿಸುತ್ತಲೇ ಇದೆ. ಈ ಅನುಮಾನ ನಿಜವೇ ಆದರೆ ಕಾಂಗ್ರೆಸ್ ಪಕ್ಷ ಬಕಾಬರಲೆ ಏಟು ತಿನ್ನುತ್ತದೆ. ಕಾರಣ ಇವತ್ತು ಸಿದ್ದರಾಮಯ್ಯ ಉರುಳಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ. ಇಂತಹ ಸಮೀಕ್ಷೆ ಅಕ್ಟೋಬರ್ ಮೊದಲ ವಾರ ಪೂರ್ಣವಾಗಿ ನಂತರದ ದಿನಗಳಲ್ಲಿ ವರದಿ ಬರಲಿದೆ. ಹೀಗೆ ಬರಲಿರುವ ವರದಿಯ ಪರವಾಗಿ ನಿಲ್ಲದೆ ಕಾಂಗ್ರೆಸ್‌ಗೆ ಅನ್ಯ ಮಾರ್ಗವಿಲ್ಲ. ಒಂದು ವೇಳೆ ನಿಂತರೆ ಬಲಿಷ್ಠ ವರ್ಗಗಳ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ. ಅಂದ ಹಾಗೆ ಬಲಿಷ್ಠ ವರ್ಗಗಳ ಆಕ್ರೋಶ ಯಾವ ಹಂತಕ್ಕಾದರೂ ಹೋಗಬಹುದು. ಆದರೆ ಇದನ್ನು ಎದುರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯ ಅವರ ನಾಯಕತ್ವ ಇರಲೇಬೇಕು. ಒಂದು ವೇಳೆ ಇಲ್ಲದಿದ್ದರೆ ಅದನ್ನು ಎದುರಿಸುವ ಶಕ್ತಿ, ಚಾಕಚಕ್ಯತೆ ಕಾಂಗ್ರೆಸ್‌ನ ಉಳಿದ ನಾಯಕರಲ್ಲಿಲ್ಲ.
ಈ ಹಿಂದೆ ಜಾತಿಯ ಹುತ್ತಕ್ಕೆ ದೇವರಾಜ ಅರಸರು ಕೈ ಹಾಕಿದರಲ್ಲ, ಆ ಸಂದರ್ಭದಲ್ಲಿ ಬಲಿಷ್ಠ ವರ್ಗಗಳ ಆಕ್ರೋಶ ಎದುರಾದಾಗ ಅರಸರು ಅಧಿಕಾರದಲ್ಲಿರಬೇಕಿತ್ತು. ಅದರೆ ೧೯೮೩ರ ವಿಧಾನಸಭೆ ಚುನಾವಣೆಗೂ ಮುನ್ನ ಅವರು ಪದಚ್ಯುತರಾಗಿದ್ದರಿಂದ ನಂತರ ಸಿಎಂ ಅದ ಗುಂಡೂರಾಯರಿಗೆ ಅದನ್ನು ಭರಿಸುವ ಶಕ್ತಿ ಇರಲಿಲ್ಲ. ಪರಿಣಾಮ ಕಾಂಗ್ರೆಸ್ ಸೋತು ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬಂತು.
ಮುಂದೆ ಜಾತಿಯ ಹುತ್ತಕ್ಕೆ ಕೈ ಹಾಕಿದ ವೀರಪ್ಪ ಮೊಯ್ಲಿ ಅವರ ನೇತೃತ್ವದಲ್ಲೇ ೧೯೯೪ರ ಚುನಾವಣೆಯನ್ನು ಕಾಂಗ್ರೆಸ್ ಎದುರಿಸಿತಾದರೂ, ಸ್ವಯಂ ಮೊಯ್ಲಿಯವರಿಗೇ ಜನಶಕ್ತಿಯ ಬೆಂಬಲ ಸಿಗಲಿಲ್ಲ. ಹೀಗಾಗಿ ಬಲಿಷ್ಠ ವರ್ಗಗಳ ಆಕ್ರೋಶಕ್ಕೆ ಬಲಿಯಾದ ಕಾಂಗ್ರೆಸ್ ಪಕ್ಷಕ್ಕೆ ನಲವತ್ತು ಸೀಟುಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದರೆ ಇವತ್ತು ಜಾತಿಯ ಹುತ್ತಕ್ಕೆ ಕೈ ಹಾಕಿರುವ ಸಿದ್ದರಾಮಯ್ಯ ಅವರಿಗೆ ಬಲಿಷ್ಠ ವರ್ಗಗಳ ಚಕ್ರವ್ಯೂಹದಿಂದ ಹೊರಬರುವ ಚಾಕಚಕ್ಯತೆ ಇದೆ. ಆದರೆ ಅವರ ಚಾಕಚಕ್ಯತೆ ಕೆಲಸ ಮಾಡಬೇಕೆಂದರೆ ಅವರು ಮುಂದಿನ ವಿಧಾನಸಭೆ ಚುನಾವಣೆಯವರೆಗೆ ಸಿಎಂ ಗದ್ದುಗೆಯ ಮೇಲಿರಬೇಕು. ಒಂದು ವೇಳೆ ಇದಾಗದಿದ್ದರೆ ಇವತ್ತು ದೊಡ್ಡಮಟ್ಟದಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತಿರುವ ಅಹಿಂದ ವರ್ಗಗಳು ಚದುರಿ ಚೆಲ್ಲಾಪಿಲ್ಲಿಯಾಗುತ್ತವೆ. ಪರಿಣಾಮ ಮುಂದಿನ ವಿಧಾನಸಭೆ ಚುನಾವಣೆಯ ನಂತರ ಬಿಜೆಪಿ ಮಿತ್ರಕೂಟ ಕರ್ನಾಟಕದ ಅಧಿಕಾರ ಗದ್ದುಗೆ ಹಿಡಿಯುವುದು ಪಕ್ಕಾ ಆಗುತ್ತದೆ. ಇವತ್ತು ಇದನ್ನು ಊಹಿಸಿರುವುದರಿಂದಲೇ ದಿಲ್ಲಿಯ ಕಾಂಗ್ರೆಸ್ ವರಿಷ್ಠರು ಕಂಗಲಾಗಿದ್ದಾರೆ. ಹೀಗಾಗಿ ಸದ್ಯದ ವಾತಾವರಣವನ್ನು ಗಮನಿಸಿದರೆ ಕರ್ನಾಟಕದಲ್ಲಿ ಕೇಳಿ ಬರುತ್ತಲೇ ಇರುವ ಅಧಿಕಾರ ಹಂಚಿಕೆಯ ಮಾತು ಕ್ಷೀಣವಾಗುತ್ತಾ ಹೋಗಲಿದೆ.
” ಇವತ್ತು ಜಾತಿಯ ಹುತ್ತಕ್ಕೆ ಕೈ ಹಾಕಿರುವ ಸಿದ್ದರಾಮಯ್ಯ ಅವರಿಗೆ ಬಲಿಷ್ಠ ವರ್ಗಗಳ ಚಕ್ರವ್ಯೂಹದಿಂದ ಹೊರಬರುವ ಚಾಕಚಕ್ಯತೆ ಇದೆ. ಆದರೆ ಅವರ ಚಾಕಚಕ್ಯತೆ ಕೆಲಸ ಮಾಡಬೇಕೆಂದರೆ ಅವರು ಮುಂದಿನ ವಿಧಾನಸಭೆ ಚುನಾವಣೆಯವರೆಗೆ ಸಿಎಂ ಗದ್ದುಗೆಯ ಮೇಲಿರಬೇಕು”
ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತ
ಮಂಡ್ಯ: ಸಿಎಂ ಸಿದ್ದರಾಮಯ್ಯ ರೈತರ ಬಗ್ಗೆ ಹಾಗೂ ಸಾಮಾನ್ಯರ ಬಗ್ಗೆ ಅತೀ ಹೆಚ್ಚಿನ ಕಾಳಜಿ ಇಟ್ಟುಕೊಂಡಿದ್ದಾರೆ ಎಂದು ಕೃಷಿ ಹಾಗೂ…
ಮಂಡ್ಯ: ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯಲಿರುವ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಕೃಷಿ…
ಬೆಂಗಳೂರು: ಸೋಮವಾರದಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗುವ ಚಳಿಗಾಲದ ಅಧಿವೇಶನದ ವೇಳೆ ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ…
ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…
ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…
ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್ ಪುಟಿನ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…