ಸಂಪಾದಕೀಯ

ದಸರಾ ಸರ್ವಜನಾಂಗದ ಶಾಂತಿಯ ತೋಟದ ಬಿಂಬವಾಗಲಿ

ಪ್ರಸಕ್ತ ವರ್ಷದ ನಾಡಹಬ್ಬ ಮೈಸೂರು ದಸರಾಗೆ ಸೋಮವಾರ ಚಾಲನೆ ದೊರೆಯಲಿದ್ದು, ಜನತೆ ಉತ್ಸವದ ಆಚರಣೆಗೆ ಸಿದ್ಧರಾಗಿದ್ದಾರೆ. ಚಾಮುಡಿಬೆಟ್ಟದಲ್ಲಿ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ- ೨೦೨೫ ಪುರಸ್ಕೃತರಾದ ಸಾಹಿತಿ ಬಾನು ಮುಷ್ತಾಕ್ ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ.

ಜಿಲ್ಲಾಡಳಿತ, ಪೊಲೀಸ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು ಸಜ್ಜಾಗಿದ್ದಾರೆ. ಅವರವರ ಪಾಲಿನ ಕರ್ತವ್ಯಗಳಲ್ಲಿ ಲೋಪ ಉಂಟಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಈ ಬಾರಿ ದಸರಾ ಉದ್ಘಾಟನೆಗೆ ಬಾನು ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡುತ್ತಿದ್ದಂತೆ, ಕೆಲ ಹಿಂದೂ ಮೂಲ ಭೂತವಾದಿಗಳಿಂದ ಬಾನು ಅವರು ದಸರಾ ಉದ್ಘಾಟಿಸುವುದು ಸಂಸ್ಕಾರ, ಸಂಸ್ಕೃತಿಗೆ ಅಪಚಾರ ಎಂಬ ಪ್ರತಿರೋಧ ಕೇಳಿಬಂದಿತು. ಬಾನು ಅವರ ಧರ್ಮ ಕೂಡ ಇದನ್ನು ಒಪ್ಪುವುದಿಲ್ಲ ಎಂಬುದಾಗಿ ಬದಲಿ ದಾರಿಯಲ್ಲಿ ತಮ್ಮ ಒತ್ತಾಯವನ್ನು ಮುಂದಿಡುವ ಪ್ರಯತ್ನವನ್ನೂ ನಡೆಸಿದರು. ಆದರೆ, ಬಾನು ಅವರು ದಸರಾವನ್ನು ಹಿಂದೂ ಧರ್ಮವನ್ನು ಗೌರವಿಸಿ ಅತ್ಯಂತ ಖುಷಿಯಿಂದ ಉದ್ಘಾಟಿಸಲು ಸಿದ್ಧ ಎಂದಿದ್ದು, ಹಲವು ಹಿಂದೂ ಪರ ಸಂಘಟನೆಗಳಿಗೆ ಅರಗಿಸಿಕೊಳ್ಳಲು ಆಗಲಿಲ್ಲ.

ಬಾನು ಅವರು ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿ ಕೆಲ ಸಂಘಟನೆಗಳು ಚಾಮುಂಡಿಬೆಟ್ಟ ಚಲೋ ಕೂಡ ಹಮ್ಮಿಕೊಳ್ಳಲು ಮುಂದಾಗಿದ್ದು, ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಅದು ವಿಫಲವಾಯಿತು. ಯಾವಾಗ ಬಾನು ಅವರನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾದವೋ, ಆಗ ಅವರ ಪರ ಕೂಡ ಕೆಲ ಸಂಘಟನೆಗಳು ನಿಂತಿದ್ದು ಸರ್ವವೇದ್ಯ ಸಂಗತಿ. ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯದಿರುವುದು ಮೆಚ್ಚಬೇಕಾದ ದಿಟ್ಟ ನಿಲುವು.

ಏತನ್ಮಧ್ಯೆ, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಲು ಅವಕಾಶ ನೀಡದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈ ಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಕೂಡ ಆಗಿತ್ತು. ಆದರೆ, ಎರಡೂ ನ್ಯಾಯಾಲಯಗಳಲ್ಲಿ ಅರ್ಜಿಯನ್ನು ವಜಾಗೊಳಿಸಲಾಯಿತು. ಇದರಿಂದ ಬಾನು ಅವರಿಗೆ ಮತ್ತು ಸರ್ಕಾರದ ನಿರ್ಧಾರಕ್ಕೆ ಆನೆಬಲ ಬಂದಿತು. ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಧೀಶರು, ನೀವು ಸಂವಿಧಾದನ ಪ್ರಸ್ತಾವನೆಯನ್ನು ಓದಿದ್ದೀರೋ ಇಲ್ಲವೋ? ಎಂದು ತರಾಟೆಗೆ ತೆಗೆದುಕೊಂಡು ಈ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ತಳ್ಳಿಹಾಕಿದ್ದರು.

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿದ್ದಕ್ಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುವ ಅಗತ್ಯ ಇತ್ತೆ ಎಂಬ ಪ್ರಶ್ನೆಯೊಂದಿಗೆ ವಿರೋಧಿಸುತ್ತಿದ್ದವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ದಸರಾ ಸಾಂಸ್ಕೃತಿಕ ಉತ್ಸವ. ಇದು ಸಾಹಿತ್ಯ, ಸಂಗೀತ, ನಾಟ್ಯ, ಜಾನಪದ ಕಲೆ, ನಾಟಕೋತ್ಸವ,ಯುವಜನರ ಎದೆಯಲ್ಲಿ ಹರ್ಷೋಲ್ಲಾಸ ಮೂಡಿಸುವ ಯುವ ಸಂಭ್ರಮ, ಯುವ ದಸರಾ ಇತ್ಯಾದಿ ಕಲಾ ಪ್ರತಿಭೆಗಳ ಸಂಗಮವೂ ಹೌದು. ಇಂತಹ ಜನಪರ ಹಬ್ಬವನ್ನು ಜಾತಿ, ಮತ, ಧರ್ಮ, ವರ್ಗಭೇದ ಇಲ್ಲದೆ ಎಲ್ಲರೂ ಒಟ್ಟಾಗಿ ಆಚರಿಸುವುದರಲ್ಲಿ ನಿಜವಾದ ಪ್ರಜಾತಂತ್ರದ ಸೊಗಡು ಇದೆ. ಮುಖ್ಯವಾಗಿ ಸಂವಿಧಾನದಲ್ಲಿ ಯಾವುದೇ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಮಾಡಬಾರದು ಎಂಬುದನ್ನು ಪ್ರಸ್ತಾಪಿಸಲಾಗಿದೆ. ಹಾಗಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುವುದು ಸಂವಿಧಾನವನ್ನು ವಿರೋಧಿಸಿದಂತೆ ಎಂಬುದು ಗಮನಿಸಬೇಕಾದ ಅಂಶ.

ಮೈಸೂರು ಸಂಸ್ಥಾನವನ್ನು ಆಳ್ವಿಕೆ ಮಾಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ೧೯೨೭ರಲ್ಲಿ ನಡೆದ ದಸರಾ ಹಬ್ಬದ ಜಂಬೂಸವಾರಿಯಲ್ಲಿ ಅಂದಿನ ದಿವಾನರಾಗಿದ್ದ ಮಿರ್ಜಾ ಮೊಹಮ್ಮದ್ ಇಸ್ಮಾಯಿಲ್ ಅವರನ್ನು ತಮ್ಮ ಜೊತೆಗೆ ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ನಾಲ್ವಡಿ, ಅದರ ಮುಂದಿನ ವರ್ಷವೂ ಮಿರ್ಜಾ ಅವರನ್ನು ಅಂಬಾರಿಯಲ್ಲಿ ಜೊತೆಗೆ ಕರೆದೊಯ್ದರು. ಹೀಗಿರುವಾಗ ವರ್ಷಕ್ಕೊಮ್ಮೆ ಬರುವ ದಸರಾ ಹಬ್ಬವು ಸೌಹಾರ್ದತೆಯನ್ನು ಇಮ್ಮ ಡಿಸಬೇಕೇ ಹೊರತು , ದ್ವೇಷ, ಸೇಡು, ರಾಜಕೀಯಕ್ಕೆ ವೇದಿಕೆಯಾಗಬಾರದು. ಇದು ಪಕ್ಷಾತೀತವಾಗಿ, ಧರ್ಮಾತೀತವಾಗಿ ಎಲ್ಲ ನಾಯಕರೂ ಒಗ್ಗೂಡಿ ನಡೆಸ ಬೇಕಾದ ಸಾಂಸ್ಕೃತಿಕ ಹಬ್ಬ ಎಂಬುದನ್ನು ಮರೆಯಬಾರದು. ಕವಿ ಕುವೆಂಪು ಅವರು ನಾಡಗೀತೆಯಲ್ಲಿ ಹೇಳಿದಂತೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರ ನಾಗರಿಕ, ಎಲ್ಲ ರಾಜಕೀಯ ನಾಯಕರೂ ಚಿಂತಿಸಿ, ಒಗ್ಗಟ್ಟಿನಿಂದ ಹೆಜ್ಜೆ ಹಾಕಬೇಕು.

” ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಬಾರದು ಎಂದು ಆಗ್ರಹಿಸಿ ಕೆಲ ಸಂಘಟನೆಗಳು ಚಾಮುಂಡಿಬೆಟ್ಟ ಚಲೋ ಕೂಡ ಹಮ್ಮಿಕೊಳ್ಳಲು ಮುಂದಾಗಿದ್ದು, ಪೊಲೀಸರು ಅನುಮತಿ ನೀಡದ ಹಿನ್ನೆಲೆಯಲ್ಲಿ ಅದು ವಿಫಲ ವಾಯಿತು. ಯಾವಾಗ ಬಾನು ಅವರನ್ನು ವಿರೋಧಿಸಿ ಪ್ರತಿಭಟನೆಗಳು ಶುರುವಾದವೋ, ಆಗ ಅವರ ಪರ ಕೂಡ ಕೆಲ ಸಂಘಟನೆಗಳು ನಿಂತಿದ್ದು ಸರ್ವವೇದ್ಯ ಸಂಗತಿ. ರಾಜ್ಯ ಸರ್ಕಾರ ಮಾತ್ರ ಈ ವಿಷಯದಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿಯದಿರುವುದು ಮೆಚ್ಚಬೇಕಾದ ದಿಟ್ಟ ನಿಲುವು”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಹಿರಿಯೂರಿನಲ್ಲಿ ₹2,328 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ | ‘ನುಡಿದಂತೆ ನಡೆಯುತ್ತೇನೆ’ ಎಂದ ಡಿಕೆಶಿ

ಚಿತ್ರದುರ್ಗ:  ‘ನಾನು ಬರೀ ಖಾಲಿ ಮಾತನಾಡುವ ಗಿರಾಕಿ ಅಲ್ಲ. ರಾಜ್ಯದ ಪ್ರಜಾ ಸೇವಕನಾಗಿ ನುಡಿದಂತೆ ನಡೆಯುತ್ತೇನೆ’ ಎಂದು ಮುಖ್ಯಮಂತ್ರಿ ಡಿ.ಕೆ.…

5 hours ago

ಪರಿಷತ್ ಚುನಾವಣೆ ಸೋಲು | ‘ನನ್ನನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಬೇಕು’ ಎಂದ ಕೆ.ಎನ್. ರಾಜಣ್ಣ

ಬೆಂಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅನುಭವಿಸಿದ ಸೋಲಿಗೆ ನೈತಿಕ ಹೊಣೆ ಹೊತ್ತು, ತಮ್ಮನ್ನೂ ಸೇರಿ 26 ಕಾಂಗ್ರೆಸ್ ಶಾಸಕರು ಶಾಸಕ…

6 hours ago

ಗುಂಡ್ಲುಪೇಟೆ: ಗರ್ಭಿಣಿ ಆನೆಯ ಮೃತದೇಹ ಪತ್ತೆ

ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗೋಪಾಲಸ್ವಾಮಿ ಬೆಟ್ಟದ ವ್ಯಾಪ್ತಿಯಲ್ಲಿ ಸುಮಾರು 35 ವರ್ಷ ವಯಸ್ಸಿನ…

7 hours ago

ಮುರುಸು ಚಂಡಮಾರುತ ಎಫೆಕ್ಟ್:‌ ರಾಜ್ಯದಲ್ಲಿ ನಾಲ್ಕು ದಿನ ಭಾರೀ ಮಳೆ ಸಾಧ್ಯತೆ

ಬೆಂಗಳೂರು:  ಬಂಗಾಳ ಉಪಸಾಗರದಲ್ಲಿ ರೂಪುಗೊಂಡಿರುವ ‘ಮುರಸು’ ಚಂಡಮಾರುತದ ಪರಿಣಾಮ ಕರ್ನಾಟಕದಲ್ಲೂ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ…

7 hours ago

ಸ್ಕೂಟರ್‌ಗೆ ಸಾರಿಗೆ ಬಸ್ ಡಿಕ್ಕಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಾವು

ಮೈಸೂರು: ಅರಮನೆ ಸಮೀಪದ ಚಾಮರಾಜ ವೃತ್ತದ ಬಳಿ ಸ್ಕೂಟರ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ 17 ವರ್ಷದ ವಿದ್ಯಾರ್ಥಿನಿ…

9 hours ago

ಕೆ.ಆರ್.ನಗರದಲ್ಲಿ ತಾಯಿ–ನವಜಾತ ಶಿಶು ಸಾವು, ವೈದ್ಯರ ನಿರ್ಲಕ್ಷ್ಯವೆಂದು ಆರೋಪಿಸಿ ಪ್ರತಿಭಟನೆ

ಕೆ.ಆರ್.ನಗರ: ಇಲ್ಲಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ 25 ವರ್ಷದ ಸುಶ್ಮಿತಾ ಹಾಗೂ ಅವರ ನವಜಾತ ಶಿಶು…

10 hours ago