ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ ಶೋಕದ ಅಲೆಗಳು ಅತ್ಯಂತ ತೀವ್ರವಾಗಿರುತ್ತವೆ. ಕೇವಲ ಐದೇ ದಿನಗಳ ಅಂತರದಲ್ಲಿ ಸಂಭವಿಸಿದ ಇಬ್ಬರು ಧ್ರುವತಾರೆಗಳ ಸಾವು ಅಂತಹದ್ದೇ ಒಂದು ಕಪ್ಪು ವಾರಕ್ಕೆ ಸಾಕ್ಷಿಯಾಯಿತು. ಒಬ್ಬರು ಕ್ಯಾಮೆರಾದ ಹಿಂದೆ ನಿಂತು ತಮ್ಮ ಅಪಾರ ಕಲ್ಪನಾಶಕ್ತಿಯಿಂದ ವಿಸ್ಮಯ ಲೋಕದ ಮಾಯಾಜಲ ಹೆಣೆದ ದೃಶ್ಯಬ್ರಹ್ಮ ಸಿಂಗೀತಂ ಶ್ರೀನಿವಾಸ ರಾವ್; ಇನ್ನೊಬ್ಬರು ರಂಗಸ್ಥಳ ಮತ್ತು ಕಪ್ಪು-ಬಿಳುಪಿನ ರಿಯಾಲಿಟಿಯ ನಡುವೆ ನಿಂತು ತಮ್ಮ ಶಾರೀರ, ಅಭಿನಯ ಹಾಗೂ ಸಮಾಜಮುಖಿ ಬದುಕಿನಿಂದಲೇ ಕೋಟ್ಯಂತರ ಜನರ ಹೃದಯ ಗೆದ್ದ ‘ನಟಸಮ್ರಾಟ್’ ನಾನಾ ಪಾಟೇಕರ್! ದಕ್ಷಿಣ ಮತ್ತು ಉತ್ತರ ಭಾರತೀಯ ಚಿತ್ರರಂಗದ ಈ ಇಬ್ಬರು ದಿಗ್ಗಜರ ಅಗಲಿಕೆ ಕೇವಲ ಇಬ್ಬರು ವ್ಯಕ್ತಿಗಳ ನಿರ್ಗಮನವಲ್ಲ; ಭಾರತೀಯ ಸಿನಿಮಾದ ಸ್ವರ್ಣಯುಗದ ಎರಡು ಅದ್ವಿತೀಯ ಅಧ್ಯಾಯಗಳು ಮುಗಿದಂತೆ! ಪ್ರಯೋಗಶೀಲ ಸಿಂಗೀತಂ ಶೀನಿವಾಸ ರಾವ್
ಸಿನಿಮಾ ಎನ್ನುವುದು ಕೇವಲ ವ್ಯವಹಾರ ಅಥವಾ ಸರಳ ಮನರಂಜನೆಯಷ್ಟೇ ಅಲ್ಲ, ಅದೊಂದು ಅನಂತ ಸೃಜನಶೀಲತೆಯ ಪ್ರಯೋಗಶಾಲೆ ಎಂದು ಜಗತ್ತಿಗೆ ನಿರೂಪಿಸಿದವರು ಸಿಂಗೀತಂ ಶ್ರೀನಿವಾಸ ರಾವ್. ೯೫ ವರ್ಷಗಳ ಸುದೀರ್ಘ ಹಾಗೂ ಸಾರ್ಥಕ ಜೀವನ ನಡೆಸಿದ ಸಿಂಗೀತಂ, ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ನೀಡಿದ ಕೊಡುಗೆ ಚಲನಚಿತ್ರ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ದಾಖಲಾಗುವಂತಹದ್ದು. ತಮ್ಮ ೯೪ನೇ ವಯಸ್ಸಿನಲ್ಲಿ ‘ಸಿಂಗ್ ಗೀತಂ’ ಚಿತ್ರವನ್ನು ನಿರ್ದೇಶಿಸಿ, ವಿಶ್ವದ ಅತ್ಯಂತ ಹಿರಿಯ ನಿರ್ದೇಶಕ ಎಂಬ ಖ್ಯಾತಿಗೆ ಭಾಜನರಾದವರು.
ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅನನ್ಯ. ಕನ್ನಡಕ್ಕೆ ಮೊದಲ ಸ್ವರ್ಣಕಮಲ ತಂದುಕೊಟ್ಟ ‘ಸಂಸ್ಕಾರ’ ಚಿತ್ರದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡಿದವರು ಸಿಂಗೀತಂ. ಅದಾಗಲೇ ಅವರು ತೆಲುಗಿನಲ್ಲಿ ಕೆ. ವಿ. ರೆಡ್ಡಿಯವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ರೆಡ್ಡಿ ನಿರ್ದೇಶನದ ‘ಪೆಳ್ಳಿನಾಟಿ ಪ್ರಮಾಣಾಲು’ ಚಿತ್ರದ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ವೇಳೆ, ಅದರ ನಿರ್ಮಾಪಕರಲ್ಲಿ ಒಬ್ಬರಾದ ಪಟ್ಟಾಭಿರಾಮ ರೆಡ್ಡಿಯವರ ಪರಿಚಯವಾಗುತ್ತದೆ. ಈ ಚಿತ್ರದ ನಂತರ ಸಿಂಗೀತಂ ಅವರ ಮೇಲೆ ಸತ್ಯಜಿತ್ ರೇ ಅವರಂತಹ ನಿರ್ದೇಶಕರ ಚಿತ್ರಗಳು ಪ್ರಭಾವ ಬೀರುತ್ತವೆ.
ಸಮಾಜವಾದದಲ್ಲಿ ಸಾಕಷ್ಟು ನಂಬಿಕೆ ಇದ್ದ ಪಟ್ಟಾಭಿರಾಮ ರೆಡ್ಡಿಯವರೂ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು. ಆಗಲೇ ಪಟ್ಟಾಭಿಯವರು ಕಲಾತ್ಮಕ, ಹೊಸ ಅಲೆಯ ಚಿತ್ರ ತೆಗೆಯಲು ಯೋಚಿಸುತ್ತಿದ್ದರು. ಜನರ ಬದುಕಿಗೆ ಹೆಚ್ಚು ಹತ್ತಿರವಾಗಬಲ್ಲ, ಸಿನಿಮಾ ಮಾಧ್ಯಮದ ಮೂಲಕ ಸದಭಿರುಚಿಯನ್ನು ಬೆಳೆಸಬಲ್ಲ ಚಿತ್ರವನ್ನು ನಿರ್ದೇಶಿಸಲು ನಿರ್ಧರಿಸಿದರು. ಆ ಚಿತ್ರಕ್ಕೆ ತಾವು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುವುದಾಗಿ ಒಪ್ಪಿಕೊಂಡರು ಸಿಂಗೀತಂ.
ಅನಂತಮೂರ್ತಿಯವರ ಕಥೆ, ಟಾಮ್ ಕೋವನ್ ಛಾಯಾಗ್ರಹಣ, ರಾಜೀವ್ ತಾರಾನಾಥರ ಸಂಗೀತ ಸಂಯೋಜನೆ, ಗಿರೀಶ್ ಕಾರ್ನಾಡ್, ಲಂಕೇಶ್, ಸ್ನೇಹಲತಾ ರೆಡ್ಡಿ ತಾರಾಬಳಗವಿದ್ದ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಚಿತ್ರಗಳ ಯುಗ ಪ್ರಾರಂಭವಾಗಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ಅದರ ನಿರ್ದೇಶನದ ಕುರಿತಂತೆ ಅಲ್ಲಲ್ಲಿ ಗಿರೀಶ್ ಕಾರ್ನಾಡರ ಹೆಸರು ಪ್ರಸ್ತಾಪವಾದದ್ದೂ ಇದೆ. ತಾಂತ್ರಿಕ ಹೊಣೆ ಹೊತ್ತಿದ್ದ ಸಿಂಗೀತಂ, ಅದು ಪಟ್ಟಾಭಿರಾಮ್ ನಿರ್ದೇಶನದ ಚಿತ್ರ ಎಂದು ಹೇಳುತ್ತಿದ್ದರು. ಕಲಾತ್ಮಕ ಚಿತ್ರಗಳಷ್ಟೇ ಅಲ್ಲ, ಅತ್ಯುತ್ತಮ ಮನರಂಜನೆಯ ಚಿತ್ರಕ್ಕಿರುವ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಕನ್ನಡಕ್ಕೆ ತಂದುಕೊಟ್ಟದ್ದೂ, ಅವರು ನಿರ್ದೇಶಿಸಿ, ಶೃಂಗಾರ ನಾಗರಾಜ್ ಜೊತೆ ಸೇರಿ ನಿರ್ಮಿಸಿದ ‘ ಪುಷ್ಪಕ ವಿಮಾನ’ ಚಿತ್ರ.
‘ಸತ್ಯ ಹರಿಶ್ಚಂದ್ರ’ಚಿತ್ರದ ವೇಳೆ ಡಾ. ರಾಜಕುಮಾರ್ ಪರಿಚಯ ಆಗಿದ್ದ ಸಿಂಗೀತಂ, ‘ಹಾಲು ಜೇನು’ ಚಿತ್ರವನ್ನು ಅವರ ಸಂಸ್ಥೆಗೆ ನಿರ್ದೇಶಿಸಿದ್ದು ಆಕಸ್ಮಿಕವೇ. ಉದ್ಯಮಿ ನಾರಾಯಣ ಎನ್ನುವವರಿಗೆ ಸಿಂಗೀತಂ, ಪಾಲಗುಮ್ಮಿ ಪದ್ಮರಾಜು ಅವರ ಸಣ್ಣಕಥೆ ಆಧರಿಸಿ, ಕನ್ನಡ ಚಿತ್ರ ನಿರ್ದೇಶಿಸಿ ಕೊಡಬೇಕಾಗಿತ್ತು. ಕೆಲಸ ಆರಂಭವಾಯಿತು. ಚಿ.ಉದಯಶಂಕರ್ ಸಂಭಾಷಣೆ ಬರೆದರು. ಅನಂತನಾಗ್ – ಲಕ್ಷ್ಮೀ ಜೋಡಿ. ಒಂದು ಹಾಡಿನ ಧ್ವನಿಮುದ್ರಣ ಆಗಿತ್ತು. ಆದರೆ ಅನಂತ್ ಅವರು ಅದಾಗಲೇ ಬಿಡುವಿಲ್ಲದ ನಟರಾಗಿದ್ದರು. ಚಿತ್ರದ ಚಿತ್ರೀಕರಣ ತಡವಾಗುತ್ತಿದ್ದಂತೆ ನಿರ್ಮಾಪಕರು ಆ ಯೋಜನೆ ಕೈಬಿಟ್ಟರು. ಆಗ ಉದಯಶಂಕರ್ ಈ ಕಥೆಯನ್ನು ರಾಜಕುಮಾರ್ ಅವರಿಗೆ ಹೇಳಿ, ಮೊದಲಿನ ನಿರ್ಮಾಪಕರಿಂದ ಹಕ್ಕನ್ನು ಪಡೆದರು. ಮೊದಲೇ ನಿಗದಿಯಾದಂತೆ ಸಿಂಗೀತಂ ಅವರೇ ನಿರ್ದೇಶಕರಾದರು. ರಾಜಕುಮಾರ್ ಸಂಸ್ಥೆ ಆ ಚಿತ್ರವನ್ನು ನಿರ್ಮಿಸಿತು. ‘ಹಾಲುಜೇನು’ ಚಿತ್ರದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದ ಸಿಂಗೀತಂ, ರಾಜಕುಮಾರ್ ಅವರ ನಟನಾ ಕೌಶಲಕ್ಕೆ ಹೊಸ ಮೆರುಗು ನೀಡಿದ ಚಿತ್ರಗಳಾದ ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಮತ್ತು ಅವರ ೨೦೦ನೇ ಮೈಲಿಗಲ್ಲಿನ ಚಿತ್ರ ‘ದೇವತಾ ಮನುಷ್ಯ’ ನಂತಹ ಸಾರ್ವಕಾಲಿಕ ಕೌಟುಂಬಿಕ ಚಿತ್ರಗಳನ್ನು ನೀಡಿದರು. ಡಾ. ರಾಜ್‌ಕುಮಾರ್ ಅವರ ಮೂವರು ಮಕ್ಕಳ ಚಿತ್ರಗಳನ್ನೂ ನಿರ್ದೇಶಿಸಿದರು. ಶಿವರಾಜ್ ಕುಮಾರ್ ಮೊದಲ ಚಿತ್ರ ‘ಆನಂದ್’, ರಾಘವೇಂದ್ರ ರಾಜ್‌ಕುಮಾರ್ ಮೊದಲ ಚಿತ್ರ ‘ಚಿರಂಜೀವಿ ಸುಧಾಕರ್’ ಮತ್ತು ಬಾಲನಟ ಪುನೀತ್ ರಾಜ್ ಕುಮಾರ್ ಅಭಿನಯದ ‘ ಎರಡು ನಕ್ಷತ್ರಗಳು’ ಕುಮಾರ ಬಂಗಾರಪ್ಪ ಅಭಿನಯದ ‘ಕ್ಷೀರ ಸಾಗರ’, ಜಗ್ಗೇಶ್ ಅವರ ‘ ಮೇಕಪ್’ ಚಿತ್ರಗಳೂ ಅವರವೇ.
ಸಿಂಗೀತಂ ಮತ್ತು ಕಮಲ್ ಹಾಸನ್ ಜೋಡಿ ಸೃಷ್ಟಿಸಿದ ‘ಪುಷ್ಪಕ ವಿಮಾನ’ ಮಾತಿಲ್ಲದ ಚಿತ್ರ ಜಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿಪತಾಕೆಯನ್ನು ಹಾರಿಸಿತು. ಯಾವುದೇ ಸಂಭಾಷಣೆ ಇಲ್ಲದೆ ಕೇವಲ ಪಾತ್ರಗಳ ಹಾವಭಾವ ಮತ್ತು ಹಿನ್ನೆಲೆ ಸಂಗೀತದಿಂದಲೇ ಕಥೆ ಹೇಳಿದ ಈ ಚಿತ್ರ ಸಾರ್ವಕಾಲಿಕ ಕ್ಲಾಸಿಕ್. ಇದರೊಂದಿಗೆ ಅಪೂರ್ವ ಸಹೋದರರ್‌ಗಳ್, ಮೈಕಲ್ ಮದನ ಕಾಮರಾಜನ್, ಮಯೂರಿ, ಭಾರತದ ಮೊದಲ ವಿeನ ಕಲ್ಪನೆಯ ಚಿತ್ರಗಳಂದಾದ ತೆಲುಗಿನ ‘ಆದಿತ್ಯ ೩೬೯’ ನಂತಹ ಚಿತ್ರಗಳು ಸಿಂಗೀತಂ ಅವರ ಅದ್ಭುತ ಕಲ್ಪನಾಶಕ್ತಿಗೆ ಸಾಕ್ಷಿಯಾಗಿವೆ. ನೈಜ ಅಭಿನಯದ ನಾನಾ ಪಾಟೇಕರ್.
ನಾನಾ ಪಾಟೇಕರ್ ಎಂದೇ ಹೆಸರಾದ ವಿಶ್ವನಾಥ್ ಪಾಟೇಕರ್ , ಗುರುವಾರ ತಮ್ಮ ೭೫ನೇ ವಯಸ್ಸಿನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾದರು. ಗೋವಾದಲ್ಲಿರುವ ತಮ್ಮ ನಿವಾಸದಲ್ಲಿದ್ದ ನಾನಾ ಅವರು, ಹಿಂದಿನ ದಿನಗಳಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದರಂತೆ. ಯಾವುದೇ ಮುಸುಕಿಲ್ಲದ ನೈಜ ಅಭಿನಯದ ಪ್ರತಿರೂಪವಾಗಿದ್ದರು ನಾನಾ. ಮುಂಬೈನ ಹವ್ಯಾಸಿ ರಂಗಭೂಮಿಯ ಅಂಗಳದಿಂದ ಬಂದ ನಾನಾ, ಯಾವುದೇ ಅಭಿನಯ ತರಬೇತಿ ಪಡೆಯದೆ, ಕೇವಲ ಬದುಕಿನ ಬಡತನ, ಅನುಭವ ಹಾಗೂ ಬೀದಿಗಳ ನಿತ್ಯಜೀವನದ ವೀಕ್ಷಣೆಯನ್ನೇ ತಮ್ಮ ಅಭಿನಯದ ಗುರುವಾಗಿಸಿಕೊಂಡು ನಟ ದೈತ್ಯನಾಗಿ ಬೆಳೆದವರು.
೧೯೭೮ರಲ್ಲಿ ‘ಗಮನ್’ ಚಿತ್ರದೊಂದಿಗೆ ಹಿಂದಿ ಚಿತ್ರರಂಗ ಪ್ರವೇಶಿಸಿದ ನಾನಾ, ಜೊತೆಗೆ ಮರಾಠಿ ಚಿತ್ರಗಳಲ್ಲೂ ನಟಿಸಿದರು. ಅಕಾಡೆಮಿ ಪ್ರಶಸ್ತಿಗೆ ನಾಮಕರಣಗೊಂಡ ‘ ಸಲಾಂ ಬಾಂಬೆ’ಯಲ್ಲಿನ ಅಭಿನಯ, ‘ ಫರಿಂದಾ’ ದಲ್ಲಿನ ಅಭಿನಯಕ್ಕಾಗಿ ಪಡೆದ ರಾಷ್ಟ್ರ ಪ್ರಶಸ್ತಿ, ಅವರನ್ನು ಹೆಚ್ಚು ಗಮನಾರ್ಹ ನಟನನ್ನಾಗಿಸಿತು. ತಾವೇ ನಿರ್ದೇಶಿಸಿ ನಟಿಸಿದ ಮೊದಲ ಚಿತ್ರ ‘ ಪ್ರಹಾರ್ -ದ ಫೈನಲ್ ಅಟ್ಯಾಕ್’ನಲ್ಲಿ ಸೈನಿಕನ ಪಾತ್ರ ನಿರ್ಹಿಸಲು, ಅವರು ಟೆರಿಟೋರಿಯಲ್ ಸೇನೆ ಸೇರಿ ಮೂರು ತಿಂಗಳ ಕಾಲ ಅನುಭವ ಪಡೆದರು. ಕಾರ್ಗಿಲ್ ಸಮರದ ವೇಳೆ, ಮರಾಠ ಲೈಟ್ ಇನೆಂಟ್ರಿ ರೆಜಿಮೆಂಟಿನಲ್ಲಿ ಮೇಜರ್ ಆಗಿ ಕೆಲಸ ಮಾಡಿದರು.
‘ಕ್ರಾಂತಿವೀರ್’, ‘ ಫರಿಂದಾ’ , ‘ಅಗ್ನಿಸಾಕ್ಷಿ’, ‘ಖಾಮೋಶಿ’, ‘ಅಬ್ ತಕ್ ಛಪ್ಪನ’, ‘ರಾಜನೀತಿ’, ‘ವೆಲ್‌ಕಮ್’ ಹಾಗೂ ಮರಾಠಿಯ ಸಾರ್ವಕಾಲಿಕ ಶ್ರೇಷ್ಠ ಚಿತ್ರ ‘ನಟಸಮ್ರಾಟ’ ಸೇರಿದಂತೆ ಅವರ ಅಭಿನಯದ ಚಿತ್ರಗಳಲ್ಲಿ ಅವರ ನಟನೆ ಪ್ರೇಕ್ಷಕರಿಗೆ ರೋಮಾಂಚನ ತರುತ್ತಿತ್ತು. ತಮ್ಮ ಸಂಭಾಷಣೆ ಹೇಳುವ ಪರಿ ಮತ್ತು ಆಂಗಿಕ ಅಭಿನಯದಿಂದಲೇ ಅವರು ಹಿಂದಿ ಚಿತ್ರರಂಗದ ಸಾಂಪ್ರದಾಯಿಕ ಶೈಲಿಯನ್ನೇ ಬದಲಾಯಿಸಿದರು. ಅಭಿನಯಕ್ಕಾಗಿ ಮೂರು ರಾಷ್ಟ್ರ ಪ್ರಶಸ್ತಿಗಳು ಹಾಗೂ ದೇಶದ ಅತ್ಯುನ್ನತ ನಾಗರಿಕ ಗೌರವ ‘ಪದ್ಮಶ್ರೀ’ ಪುರಸ್ಕಾರ, ಅವರ ನಟನೆಗೆ ಸಿಕ್ಕ ಗೌರವ.. ರಜನಿಕಾಂತ್ ಅಭಿನಯದ ತಮಿಳು ‘ಕಾಲಾ’ ಚಿತ್ರದಲ್ಲಿ ಪ್ರತಿನಾಯಕನಾಗಿ ನಟಿಸಿದ ಅವರು ಕನ್ನಡ ಚಿತ್ರವೊಂದರಲ್ಲಿ ನಟಿಸಿದ ವಿಷಯ ಬಹಳ ಮಂದಿಗೆ ತಿಳಿದಿರಲಾರದು. ನಟ ಯೋಗಿ ಅವರಿಗಾಗಿ, ಅವರ ತಂದೆ ಸಿದ್ದರಾಜು ನಿರ್ಮಿಸಿದ ‘ಯಕ್ಷ’ ಚಿತ್ರದಲ್ಲಿ ನಾನಾ ಪಾಟೇಕರ್ ಯೋಗಿ ಅವರ ತಂದೆಯ ಪಾತ್ರ ನಿರ್ವಹಿಸಿದ್ದರು.
ನಾನಾ ಪಾಟೇಕರ್ ಕೇವಲ ಬೆಳ್ಳಿಪರದೆಯ ಮೇಲೆ ನಟನಾಗಿ ಉಳಿಯಲಿಲ್ಲ, ನಿಜಜೀವನದಲ್ಲೂ ಕರುಣಾಮಯಿಯಾಗಿ ಬಾಳಿದರು. ಮಹಾರಾಷ್ಟ್ರದ ಬರಪೀಡಿತ ಪ್ರದೇಶಗಳಲ್ಲಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದ ರೈತರ ಕುಟುಂಬಗಳ ಕಣ್ಣೀರು ಒರೆಸಲು ನಟ ಮಕರಂದ್ ಅನಾಸಪುರೆ ಅವರೊಂದಿಗೆ ಸೇರಿ ’ನಾಮ್ ಫೌ-ಂಡೇಶನ್’ ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ನೆರವು, ವಿಧವೆಯರಿಗೆ ಪುನರ್ವಸತಿ ಹಾಗೂ ಹಳ್ಳಿಗಳಲ್ಲಿ ಹೂಳೆತ್ತುವ ಮೂಲಕ ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದರು. ಸಾವು ಯಾರನ್ನೂ ಕೇಳಿ ಬರುವುದಿಲ್ಲವಲ್ಲ. ಇಬ್ಬರು ಮಹಾನ್ ಚೇತನಗಳು ಒಂದೇ ವಾರದಲ್ಲಿ ಕಲಾಭಿಮಾನಿಗಳನ್ನು ಅಗಲಿರುವುದು ಭಾರತೀಯ ಸಿನಿರಂಗಕ್ಕೆ ತುಂಬಲಾರದ ನಷ್ಟ. ಚಲನಚಿತ್ರ ಇರುವವರೆಗೆ, ಕ್ಯಾಮೆರಾ ಮತ್ತು ನಟನೆ ಬದುಕಿರುವವರೆಗೆ ಸಿಂಗೀತಂ ಶ್ರೀನಿವಾಸ ರಾವ್ ಹಾಗೂ ನಾನಾ ಪಾಟೇಕರ್ ಹೆಸರುಗಳು ಚಿರಂಜೀವಿ.
” ದಕ್ಷಿಣ ಮತ್ತು ಉತ್ತರ ಭಾರತೀಯ ಚಿತ್ರರಂಗದ ಈ ಇಬ್ಬರು ದಿಗ್ಗಜರ ಅಗಲಿಕೆ ಕೇವಲ ಇಬ್ಬರು ವ್ಯಕ್ತಿಗಳ ನಿರ್ಗಮನವಲ್ಲ; ಭಾರತೀಯ ಸಿನಿಮಾದ ಸ್ವರ್ಣಯುಗದ ಎರಡು ಅದ್ವಿತೀಯ ಅಧ್ಯಾಯಗಳು ಮುಗಿದಂತೆ!”
ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…
ಮಹಾದೇಶ್ ಎಂ.ಗೌಡ ೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ ಹನೂರು: ಮಹಾಲಯ ಅಮಾವಾಸ್ಯೆ…
ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ ಗುಂಡ್ಲುಪೇಟೆ:…
ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…