ಮಹಾದೇಶ್ ಎಂ.ಗೌಡ
೩ ದಿನಗಳ ಜಾತ್ರೆಗೆ ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ; ಪ್ರಾಧಿಕಾರದಿಂದ ಸಕಲ ಸಿದ್ಧತೆ
ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಜಾತ್ರೆಗೆ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಕ್ಟೋಬರ್ ೮ರಿಂದ ಮೂರು ದಿನಗಳ ಕಾಲ ನಡೆಯುವ ಮಹಾಲಯ ಅಮಾವಾಸ್ಯೆ ಜಾತ್ರೆಗೆ ಸಿದ್ಧತೆಗಳು ಭರದಿಂದ ಸಾಗಿವೆ.
ಅ.೯ರಂದು ಎಣ್ಣೆ ಮಜ್ಜನ ವಿಶೇಷ ಸೇವೆ ಹಾಗೂ ಅ.೧೦ರಂದು ಮಹಾಲಯ ಅಮಾವಾಸ್ಯೆಯ ವಿಶೇಷ ಉತ್ಸವಗಳು ಜರುಗಲಿವೆ. ಅ.೧೧ರಿಂದ ನವರಾತ್ರಿ ಉಯ್ಯಾಲೆ ಉತ್ಸವದ ವಿಶೇಷ ಪೂಜೆಗಳು ನಡೆಯಲಿವೆ. ಜಾತ್ರಾ ಮಹೋತ್ಸವದ ಪ್ರಯುಕ್ತ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಜನರು ಬೆಟ್ಟಕ್ಕೆ ಭೇಟಿ ನೀಡುವ ನಿರೀಕ್ಷೆ ಇದ್ದು, ಭಕ್ತರಿಗೆ ಅನುಕೂಲ ಕಲ್ಪಿಸಲು ಪ್ರಾಧಿಕಾರದ ವತಿಯಿಂದ ಸೂಕ್ತ ಕ್ರಮ ವಹಿಸಲಾಗಿದೆ.
ನೆರಳಿನ ವ್ಯವಸ್ಥೆ: ಉಚಿತ ದರ್ಶನಕ್ಕೆ ಬರುವವರು ಮತ್ತು ೨೫೦ ರೂ. ಹಾಗೂ ೫೦೦ ರೂ. ಟಿಕೆಟ್ ಪಡೆದು ದರ್ಶನ ಮಾಡುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜನದಟ್ಟಣೆ ಹೆಚ್ಚಾದಾಗ ನೂಕುನುಗ್ಗಲು ಉಂಟಾಗದಂತೆ ಬ್ಯಾರಿಕೇಡ್ ಅಳವಡಿಸಿ ಹಾಗೂ ಸುತ್ತ ಹಗ್ಗಗಳನ್ನು ಕಟ್ಟಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.
ನಿರಂತರ ದಾಸೋಹ: ಆಗಮಿಸುವ ಲಕ್ಷಾಂತರ ಜನರು, ಪೊಲೀಸ್ ಸಿಬ್ಬಂದಿ, ಗೃಹರಕ್ಷಕ ದಳದವರು ಮತ್ತು ಅಧಿಕಾರಿ ವರ್ಗದವರಿಗೆ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ. ಭಕ್ತಾದಿಗಳು ದವಸ-ಧಾನ್ಯಗಳು, ತರಕಾರಿಗಳನ್ನು ನೀಡಿದ್ದಾರೆ.
ಹಿರಿಯ ನಾಗರಿಕರಿಗೆ ನೇರ ದರ್ಶನ: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿಗೆ ಬರುವ ೬೦ ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಆಯುಕ್ತರು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ೬೦ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರಾಜಗೋಪುರ ಗೇಟ್‌ನಲ್ಲಿ ನೇರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅವರು ಕಡ್ಡಾಯವಾಗಿ ಆಧಾರ್ ಕಾರ್ಡ್ ತೋರಿಸಿ ದರ್ಶನ ಪಡೆಯಬಹುದಾಗಿದೆ. ಅತಿಥಿ ಗಣ್ಯರು ಮತ್ತು ವಿಶೇಷ ಚೇತನರಿಗೆ ಗೇಟ್ ನಂ.೪ರಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
೨೫೦ ಬಸ್‌ಗಳ ವ್ಯವಸ್ಥೆ: ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುವುದರಿಂದ ಬೆಂಗಳೂರು, ಮೈಸೂರು, ಕೊಳ್ಳೇಗಾಲ, ಮಂಡ್ಯ, ನಂಜನಗೂಡು ಸೇರಿದಂತೆ ಇತರ ಡಿಪೋಗಳಿಂದ ೨೫೦ ಬಸ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹನೂರು ಭಾಗದಿಂದ ಹೆಚ್ಚಿನ ಭಕ್ತಾದಿಗಳು ಆಗಮಿಸಿದರೆ ಹನೂರು ಬಸ್ ನಿಲ್ದಾಣದಿಂದಲೂ ಬೆಟ್ಟಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ತಿಳಿಸಿದರು.
ಪೊಲೀಸ್ ಬಂದೋಬಸ್ತ್: ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಸೂಕ್ತ ರಕ್ಷಣೆ ನೀಡುವ ನಿಟ್ಟಿನಲ್ಲಿ ಇಬ್ಬರು ಡಿವೈಎಸ್‌ಪಿ, ನಾಲ್ವರು ಇನ್ಸ್‌ಪೆಕ್ಟರ್, ಪೊಲೀಸ್ ಸಿಬ್ಬಂದಿ ಮತ್ತು ೧೦೦ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಸೂಚನೆ: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಅಗತ್ಯ ಕ್ರಮ ವಹಿಸಲಾಗಿದೆ. ಅಂತರಗಂಗೆಯಲ್ಲಿ ಭಕ್ತಾದಿಗಳು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅರಿಶಿನ, ಕುಂಕುಮ, ಕರ್ಪೂರ ಹಚ್ಚುವುದು, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಾಧಿಕಾರದ ಜೊತೆ ಕೈಜೋಡಿಸಬೇಕು. ಪ್ರತಿದಿನ ಸ್ವಚ್ಛತೆಗಾಗಿ ಹೆಚ್ಚಿನ ಪೌರಕಾರ್ಮಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
೨.೫ ಲಕ್ಷ ಲಾಡು ಸಂಗ್ರಹ: ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲು ಪ್ರಾಧಿಕಾರದ ವತಿಯಿಂದ ೨.೫ ಲಕ್ಷ ಲಾಡುಗಳನ್ನು ಸಂಗ್ರಹಿಸಲಾಗಿದೆ. ಎರಡು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಲಾಡು ತಯಾರಿಕಾ ಘಟಕದ ಮೇಲ್ವಿಚಾರಕ ಮಹದೇವಸ್ವಾಮಿ ತಿಳಿಸಿದ್ದಾರೆ.
ಸುರಕ್ಷತೆಗೆ ಪೊಲೀಸ್ ಸಿಬ್ಬಂದಿ ನಿಯೋಜನೆ:
ಮಲೆ ಮಹದೇಶ್ವರ ಬೆಟ್ಟಕ್ಕೆ ಮಹಾಲಯ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಅವರ ಸುರಕ್ಷತಾ ದೃಷ್ಟಿಯಿಂದ ೨ ಡಿವೈಎಸ್‌ಪಿ, ೪ ಇನ್ಸ್‌ಪೆಕ್ಟರ್, ೬ ಸಬ್ ಇನ್ಸ್‌ಪೆಕ್ಟರ್, ೧೨ ಎಎಸ್‌ಐ, ೧೨೦ ಪೊಲೀಸರು, ೧೦೦ ಗೃಹರಕ್ಷಕ ದಳದ ಸಿಬ್ಬಂದಿ, ಒಂದು ಕೆಎಸ್‌ಆರ್‌ಪಿ ತುಕಡಿ ಮತ್ತು ೩ ಡಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.
” ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿವಿಧ ವಿಭಾಗಗಳ ಉಸ್ತುವಾರಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ, ಸಂಬಂಧಪಟ್ಟ ವಿಭಾಗಗಳಲ್ಲಿ ಯಾವುದೇ ದೂರು ಬಾರದಂತೆ ನೋಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಬರುವ ಭಕ್ತಾದಿಗಳಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಮತ್ತು ದಾಸೋಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಭಕ್ತಾದಿಗಳ ಜೊತೆ ಸೌಹಾರ್ದವಾಗಿ ವರ್ತಿಸುವಂತೆ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ.”
ಪುರುಷೋತ್ತಮ್, ಕಾರ್ಯದರ್ಶಿ, ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಖ್ಯಾತನಾಮರಿಗೆ ವೇದಿಕೆಯ ಕಾರ್ಯಕ್ರಮದಲ್ಲಿ ಸ್ವಲ್ಪ ಕಡಿಮೆ ಸಮಯ ದೊರೆತರೂ ಪರವಾಗಿಲ್ಲ. ಅರಳುವ ಪ್ರತಿಭೆಗಳಿಗೆ ಸಾಕಷ್ಟು ಸಮಯ ಸಿಗಬೇಕೆಂಬ ಆಶಯ ಇರಬೇಕೆಂದು…
ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಜಲಸಂರಕ್ಷಣೆಯ ಬೃಹತ್ ಕ್ರಾಂತಿಯನ್ನೇ ಮಾಡಿದ ಪಾಟೇಕರ್ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವೊಮ್ಮೆ ಕಾಲವು ತರುವ…
ಚಿರಂಜೀವಿ ಸಿ.ಹುಲ್ಲಹಳ್ಳಿ ಕಬಿನಿ ಕಿಂಗ್ ಮಹೇಂದ್ರ ತಾಲೀಮು ಅರ್ಧಕ್ಕೆ ಮೊಟಕು ಆತಂಕದಲ್ಲಿ ದಸರಾ ಗಜಪಡೆಯ ಅಭಿಮಾನಿಗಳು ಮೈಸೂರು: ಮಹಾಭಾರತದ ಭೀಮನ…
ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕೃಪೆ ತೋರಿದ ವರುಣ ಮಳೆ ಮುಂದುವರಿದರೆ ತಾಲ್ಲೂಕಿನ ದೊಡ್ಡ ಕೆರೆ ತುಂಬುವುದು ಖಚಿತ ಗುಂಡ್ಲುಪೇಟೆ:…
ಬೆಂಗಳೂರು: ತಮ್ಮ ವಿರುದ್ಧವೂ ಸ್ಟಿಂಗ್ ಆಪರೇಷನ್ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.…
ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ…