ಅಂಕಣಗಳು

ಚಿತ್ರೋತ್ಸವದಾಚೆ ಚಲನಚಿತ್ರ ಅಕಾಡೆಮಿಯ ದೃಷ್ಟಿ

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ನಿರ್ಮಾಣ ತರಬೇತಿ ಕಾರ್ಯಾಗಾರ, ವಿಚಾರ ಸಂಕಿರಣ

ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಾರ್ಯವ್ಯಾಪ್ತಿ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಈಗ ಸೀಮಿತವಾಗಿದೆ ಎನ್ನುವ ಅಪವಾದದಿಂದ ಅದು ಹೊರಬರುತ್ತಿದೆ. ನಾಳೆಯಿಂದ ಅಕಾಡೆಮಿ ವತಿಯಿಂದ ಚಿತ್ರರಂಗದಲ್ಲಿ ಆಸಕ್ತಿ ಹೊಂದಿರುವ ಪ್ರತಿಭೆಗಳಿಗೆ ಮೂರು ದಿನಗಳ ಚಲನಚಿತ್ರ ನಿರ್ಮಾಣ ತರಬೇತಿ ಕಾರ್ಯಾಗಾರ ಹಾಗೂ ವಿಚಾರ ಸಂಕಿರಣ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ‘ಸಿನಿ ಸಂವಾದ ೨೦೨೬’ ಎಂದು ಇದಕ್ಕೆ ಹೆಸರು.

ಇಂತಹದೊಂದು ಕಾರ್ಯಾಗಾರ ನಿಜಕ್ಕೂ ಅಗತ್ಯ. ಅಂದು ಇಂದು ಅಪವಾದಗಳನ್ನು ಹೊರತು ಪಡಿಸಿದರೆ, ಚಿತ್ರ ನಿರ್ಮಾಣದ ವಿವಿಧ ಹಂತಗಳ ಪ್ರಾಥಮಿಕ ತಿಳಿವಳಿಕೆಯೂ ಇಲ್ಲದ ಮಂದಿಯ ಪ್ರವೇಶ, ಸಾಕಷ್ಟು ಪೂರ್ವ ಸಿದ್ಧತೆ ಇಲ್ಲದೆ ಬರುವ ನಿರ್ಮಾಪಕರು, ನಿರ್ದೇಶಕರು, ತಾರಾ ವರ್ಚಸ್ಸು ಬರುತ್ತಲೇ ಅದನ್ನು ಉಳಿಸಿಕೊಳ್ಳುವ ಸ್ವಪ್ರಯತ್ನದಲ್ಲಿ ಉದ್ಯಮದ, ನಿರ್ಮಾಪಕರ ಹಿತದ ಕಡೆ ಗಮನ ಇಲ್ಲದ ತಾರೆಯರು, ಚಲನಚಿತ್ರ ಮಾಧ್ಯಮ, ಉದ್ಯಮದ ಒಳಹೊರಗುಗಳ ಕುರಿತು ಸಾಕಷ್ಟು ಮಾಹಿತಿ ಇಲ್ಲದ ನವಮಾಧ್ಯಮದ ಮಂದಿ, ಡಿಜಿಟಲ್ ಪ್ರಚಾರ, ಮಾರುಕಟ್ಟೆಯ ಕುರಿತ ಅರೆಬರೆ ಅರಿವು ಇವೆಲ್ಲ ಚಿತ್ರೋದ್ಯಮದ ವಿಶೇಷವಾಗಿ ಕನ್ನಡ ಚಿತ್ರರಂಗದಲ್ಲಿನ ಗುಣಮಟ್ಟದ ಇಳಿಮುಖ, ಪ್ರೇಕ್ಷಕರ ನಿರಾಕರಣೆಗೆ ಇರುವ ಪರೋಕ್ಷ ಕಾರಣಗಳು.

ಯಾವುದೇ ಚಿತ್ರದ ಆರಂಭಕ್ಕೆ ಮೊದಲು ಅದರ ಪೂರ್ವಸಿದ್ಧತೆ ಮುಖ್ಯ. ಚಿತ್ರೀಕರಣ ತಾಣಕ್ಕೆ ಹೋಗುವ ಮೊದಲು ಚಿತ್ರಕಥೆ ಪಕ್ಕಾ ಆಗಿರಬೇಕು. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಅದು ಇಲ್ಲ. ಸಂಭಾಷಣೆ ಕೂಡಾ. ‘ಸೆಟ್ಟಲ್ಲಿ ಕಾಯುತ್ತಿದ್ದೆ. ಸಂಭಾಷಣೆ ಈಗಷ್ಟೇ ಬಂತು’ ಎಂದು ಹೇಳಿ ಹೆಮ್ಮೆಪಡುವ ನಿರ್ದೇಶಕರು, ಕೊನೆಯವರೆಗೆ ಕಾಯುವಂತೆ ಮಾಡುವ ಬಿಡುವಿಲ್ಲದ ಮಂದಿ ಅಲ್ಲಿ ಇಲ್ಲಿ ಸಾಕಷ್ಟು ಇzರೆ. ಚಿತ್ರೀಕರಣಕ್ಕೆ ಹೊರಡುವ ಮೊದಲು, ಚಿತ್ರದ ನಿರ್ಮಾಣ ವೆಚ್ಚ, ಬಜೆಟ್ ಹಾಕುವುದು ಅತಿ ಮುಖ್ಯ. ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಮೂಲಕ ಚಿತ್ರ ನಿರ್ಮಿಸುವ ನಿರ್ದೇಶಕರಿಗೆ ಹೀಗೆ ಬಜೆಟ್ ಲೆಕ್ಕ ಹಾಕುವುದು ಸರಿಯಾಗಿ ಗೊತ್ತು.

ಸಾಮಾನ್ಯವಾಗಿ ಚಿತ್ರವೊಂದಕ್ಕೆ ಆಗಬಹುದು ಎಂದು ಹೇಳಿದ ನಿರ್ಮಾಣ ವೆಚ್ಚದ ಪ್ರತಿಶತ ೧೦ರಷ್ಟು ಹೆಚ್ಚುಕಡಿಮೆ ಆಗಬಹುದು. ಆದರೆ ಅದರ ಐದು, ಹತ್ತು, ಇಪ್ಪತ್ತು, ಮೂವತ್ತು ಪಟ್ಟು ನಿರ್ಮಾಣ ವೆಚ್ಚ ಅಂದರೆ! ಅಂತಹ ಸಾಕಷ್ಟು ಉದಾಹರಣೆಗಳು ಕಳೆದ ವರ್ಷಗಳಲ್ಲಿ ಸಿಗುತ್ತವೆ. ಕನ್ನಡ ಚಿತ್ರವೊಂದು ಇನ್ನೂರು ಕೋಟಿರೂ. ವೆಚ್ಚದಲ್ಲಿ ತಯಾರಾಗುವುದು, ವರ್ಷಗಟ್ಟಲೆ ಕಾಯುವುದು ಅಲ್ಲಿ, ಇಲ್ಲಿ ನಡೆದದ್ದಿದೆ. ಕಿರುತೆರೆ ನಿರ್ದೇಶಕ, ನಿರ್ಮಾಪಕರೊಬ್ಬರು, ಸಿನಿಮಾ ನಿರ್ಮಿಸಲು ಬಂದರು, ನಿರ್ದೇಶನವೂ ಅವರದೇ. ಎರಡು ಕೋಟಿ ರೂ. ವೆಚ್ಚದಲ್ಲಿ ಮುಗಿಯಬೇಕಾದ ಚಿತ್ರ ರೂ.ಏಳು ಕೋಟಿಯಾದರೂ ಮುಗಿದಿರಲಿಲ್ಲ. ಸಾಲ ಅವರ ಜೀವಕ್ಕೆ ಎರವಾಯಿತು! ಇದಕ್ಕೆ ಯಾರು ಹೊಣೆ? ಸಿನಿಮಾ ಅಧ್ಯಯನದತ್ತ ಈಗ ಸಾಕಷ್ಟು ಮಂದಿ ವಿದ್ಯಾರ್ಥಿಗಳು ತಿರುಗಿದ್ದಾರೆ. ವಿವಿಧ ವಿಭಾಗಗಳನ್ನು ಕಲಿಸುವ ಸಂಸ್ಥೆಗಳಿವೆ. ನಿರ್ಮಾಣ ಸಂಸ್ಥೆಗಳೂ ಇಂತಹ ಬೆಳವಣಿಗೆಗೆ ಕೈಜೋಡಿಸುತ್ತಿವೆ. ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ, ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯದ ಸಿನಿಮಾ ಸಂಬಂಧಿಸಿದ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆಯ ಶಿಕ್ಷಣಕ್ಕೆ ಸಹಯೋಗ ನೀಡಿವೆ. ಶಾಸ್ತ್ರೀಯವಾಗಿ ಸಿನಿಮಾ ಅಧ್ಯಯನ, ತರಬೇತಿ ಇಂದಿನ ಕಾರ್ಪೊರೇಟ್ ಲೋಕದ ಪ್ರಾಥಮಿಕ ಅಗತ್ಯ.

ಸಿನಿಮಾ ಸಂವಾದದ ಮೊದಲ ದಿನ ಉದ್ಘಾಟನೆಯ ನಂತರ ಗಿರೀಶ್ ಕಾಸರವಳ್ಳಿಯವರು ವಿಶ್ವ ಸಿನಿಮಾ ಮತ್ತು ಭಾರತೀಯ ಕನ್ನಡ ಚಿತ್ರರಂಗದ ಕಥನಗಾರಿಕೆ ಹಾಗೂ ನಿರೂಪಣಾ ವಿಧಾನಗಳು ಬೆಳೆದು ಬಂದ ಬಗೆಯ ಕುರಿತಂತೆ ಉಪನ್ಯಾಸ ನೀಡಲಿzರೆ. ಸಿನಿಮಾ ವಿದ್ಯಾರ್ಥಿಯೊಬ್ಬ ಮೂಲಭೂತವಾಗಿ ತಿಳಿದಿರಬೇಕಾದ ವಿಷಯ ಇದು. ಸಿನಿಮಾ ವಿದ್ಯಾರ್ಥಿ ಮಾತ್ರವಲ್ಲ, ನವಮಾಧ್ಯಮದ ಮಂದಿಗೂ ಇದು ತಿಳಿದಿದ್ದರೆ ಚೆನ್ನ. ಮೊದಲ ದಿನ ಅತ್ಯಂತ ಮಹತ್ವದ ಮುಕ್ತ ಮಾತುಕತೆಯೊಂದು ನಡೆಯಲಿದೆ. ಅದು ಇಂದಿನ ಚಿತ್ರರಂಗ ಹಾಗೂ ಚಿತ್ರ ನಿರ್ಮಾಣದ ಸ್ಥಿತಿಗತಿಯ ಕುರಿತಂತೆ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಜೊತೆ.

ಇತ್ತೀಚೆಗೆ ಚಿತ್ರವೊಂದರ ನಿರ್ದೇಶಕರು ಮತ್ತು ನಿರ್ಮಾಪಕರ ನಡುವೆ ಸೃಜನಶೀಲ ಭಿನ್ನಾಭಿಪ್ರಾಯ ಮತ್ತು ನಿರ್ಮಾಣವೆಚ್ಚದ ಏರಿಕೆಯ ಕುರಿತ ಮುಸುಕಿನ ಗುದ್ದಾಟ, ಈಗ ಬಹಿರಂಗವಾಗಿದೆ. ಮೈಸೂರು ಮೂಲದ ಹೊಸ ನಿರ್ಮಾಪಕರೊಬ್ಬರಿಗೆ ಆರಂಭದಲ್ಲಿ ಹೇಳಿದ ನಿರ್ಮಾಣ ವೆಚ್ಚ ಒಂದು ಹಂತದ ಚಿತ್ರೀಕರಣ ಮುಗಿಯುವ ವೇಳೆಗೆ ಮುಗಿದಿತ್ತು. ಅದಕ್ಕಿಂತಲೂ ವಿಶೇಷ ಎಂದರೆ, ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರಕಥೆ ಸಿದ್ಧಪಡಿಸಲು ಅವರು ತೆಗೆದುಕೊಂಡರು ಎನ್ನಲಾದ ಸಮಯ ಮತ್ತು ಆ ಚಿತ್ರೀಕರಣ ಮಾಡಲು ಅವರು ಹೇಳಿದ ಕಾಲಾವಧಿ. ಈ ಚರ್ಚೆ ಬಿಸಿಬಿಸಿಯಾಗಿ ನಡೆಯುತ್ತಲೇ ಇದೆ.

ಕೆಲವು ವಾರಗಳ ಹಿಂದೆ ನಿರ್ಮಾಪಕರೊಬ್ಬರು ತಮ್ಮ ಹಿಂದಿನ ಚಿತ್ರದ ಅನುಭವವನ್ನು ಹೇಳಿದ್ದರು. ಅವರು ನಿರ್ದೇಶಕರಿಗೆ ಒಟ್ಟು ಸಂಭಾವನೆಯ ಬದಲು ಮಾಹೆಯಾನ ನಿಗದಿಪಡಿಸಿದ್ದರಂತೆ. ಜೊತೆಗೆ ಓಡಾಟಕ್ಕೆ ಪ್ರತ್ಯೇಕ. ನಿರ್ದೇಶಕರು ವರ್ಷ ಕಳೆದರೂ ಚಿತ್ರೀಕರಣ ಮುಗಿಸಿರಲಿಲ್ಲ. ಕೊನೆಗೆ, ಅವರ ಕೈಗೆ ಇನ್ನೊಂದು ಚಿತ್ರ ಸಿಕ್ಕಿದ ನಂತರ ಇದರ ಕೆಲಸ ಮುಗಿಸಿಕೊಟ್ಟರಂತೆ. ಇದು ಒಂದು ಪ್ರಸಂಗ ಮಾತ್ರ. ಇಂತಹ ಸಾಕಷ್ಟು ಪ್ರಕರಣಗಳಿವೆ ಎನ್ನಿ. ನಿರ್ಮಾಪಕರು ಯಾವುದೇ ಚಿತ್ರ ನಿರ್ಮಾಣಕ್ಕೆ ಮೊದಲು ಸಂಬಂಧಪಟ್ಟ ತಂತ್ರಜ್ಞರು, ಕಲಾವಿದರು ಮತ್ತಿತರ ಎಲ್ಲರ ಜೊತೆಗೂ ಒಂದು ಕರಾರು ಮಾಡಿಕೊಳ್ಳಬೇಕು ಎನ್ನುವುದು ಬರಿ ಮಾತ ಉಳಿದಿದೆ. ಕೇರಳದಲ್ಲಿ ಅಲ್ಲಿನ ಕಲಾವಿದರ ಸಂಘ ಈ ಕರಾರನ್ನು ಮಾಡುತ್ತದೆ. ಇತರ ಕೆಲವು ರಾಜ್ಯಗಳಲ್ಲೂ ಇದು ಜಾರಿಯಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಬಾಯಿಮಾತಿನ ಮೂಲಕವೇ ಎಲ್ಲ ಕೆಲಸಗಳೂ ಆಗುತ್ತಿವೆ. ಭಿನ್ನಾಭಿಪ್ರಾಯ, ವಿವಾದ ಆದಾಗ ಪರಸ್ಪರ ಕೆಸರೆರಚಾಟ ನಡೆಯುತ್ತದೆ. ಅವರವರ ಮೂಗಿನ ನೇರಕ್ಕೆ ವಾದ – ಪ್ರತಿವಾದಗಳು!

ನಿರ್ಮಾಪಕರ ಸಂಘವಾಗಲಿ, ವಾಣಿಜ್ಯ ಮಂಡಳಿಯಾಗಲಿ ಈ ಕೆಲಸ ಮಾಡಬಹುದು. ನಿರ್ಮಾಪಕರ ಸಂಘಕ್ಕೆ ಈಗ ತನ್ನದೇ ಆದ ಕಟ್ಟಡ ಇದೆ. ಅಲ್ಲಿನ ಭಾರವಾಹಿಗಳಲ್ಲಿ ಬಹುತೇಕರಿಗೆ ಈ ದಿನಗಳ ರೀತಿ, ರಿವಾಜು, ಕಾನೂನು ನಿಯಮಗಳ ಪರಿಚಯ ಇಲ್ಲ ಎನ್ನುವ ಮಾತೂ ಇದೆ. ವಾರ್ತಾ ಇಲಾಖೆಯಿಂದ ಚಿತ್ರದ ಚಿತ್ರೀಕರಣಕ್ಕೆ ಅನುಮತಿ, ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು, ಇವೇ ಮೊದಲಾದ ವಿಷಯಗಳಿಗೆ ಮಧ್ಯವರ್ತಿಗಳೇ ಇವರಿಗೆ ಆಶ್ರಯ.

ಆಸಕ್ತರಿಗೆ ಇಲ್ಲಿ ಹಲವು ಗೋಷ್ಠಿಗಳಿವೆ. ಕನ್ನಡ ಚಿತ್ರರಂಗದ ಹೆಸರಾಂತ ಮಂದಿ, ಆಯಾಕ್ಷೇತ್ರದ ತಜ್ಞರು ಈ ಗೋಷ್ಠಿ/ಚರ್ಚೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ನಿರ್ದೇಶಕನ ಮಹತ್ವ ಹಾಗೂ ಆತನ ಜವಾಬ್ದಾರಿಗಳ ಕುರಿತ ಗೋಷ್ಠಿ. ಇನ್ನೊಂದೆಡೆ ಛಾಯಾಗ್ರಾಹಕರೊಂದಿಗೆ ಚಿತ್ರದ ದೃಶ್ಯ ಪರಿಕಲ್ಪನೆ ಮತ್ತು ದೃಶ್ಯ ಸಂಯೋಜನೆಯ ಕುರಿತ ಚರ್ಚೆ ನಡೆಯಲಿದೆ. ಸೃಜನಶೀಲ ಚಿತ್ರಕಥೆ ರಚನೆ, ಚಲನಚಿತ್ರ ನಿರೂಪಣಾ ವಿಧಾನ ಹಾಗೂ ಮಾದರಿಯ ಕುರಿತ ಗೋಷ್ಠಿ ಇನ್ನೊಂದು. ಇದು ಚಿತ್ರದ ಆತ್ಮ. ಸಾಹಿತ್ಯ ಕೃತಿಗಳು ಸಿನಿಮಾ ಕೃತಿಯಾಗಿ ರೂಪಾಂತರವಾಗುವ ಪ್ರಕ್ರಿಯೆಯ ಕುರಿತ ಗೋಷ್ಠಿ ಇದೆ.

ಚಲನಚಿತ್ರದಲ್ಲಿ ಕಲಾನಿರ್ದೇಶನದ ಮಹತ್ವ, ಸಂಗೀತ ಸಾಹಿತ್ಯ ಮತ್ತು ಹಿನ್ನೆಲೆ ಸಂಗೀತ ವಿನ್ಯಾಸ, ಸಿನಿಮಾ ನಟನೆಯ ಆಯಾಮ ಮತ್ತು ಪಾತ್ರ ಪ್ರವೇಶದ ಬಗ್ಗೆ ತಿಳಿವು, ಸಂಕಲನ ಕಲೆಯ ಮಹತ್ವ ಹಾಗೂ ಡಿಐ – ಧ್ವನಿ ವಿನ್ಯಾಸ ಮತ್ತು ಹೊಸ ತಂತ್ರeನ ಸೇರಿದಂತೆ – ಹೀಗೆ ಚಲನಚಿತ್ರಗಳ ನಿರ್ಮಾಣಕ್ಕೆ ಸಂಬಂಧಿಸಿದ ಗೋಷ್ಠಿಗಳು.

ಇದರ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಣದ ವೇಳೆ ಲೊಕೇಶನ್ ಅನುಮತಿ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ನಿಯಮಾವಳಿ ಮತ್ತು ರಾಜ್ಯ, ರಾಷ್ಟ್ರ ಮತ್ತಿತರ ಪ್ರಶಸ್ತಿಗಳು ಪ್ರೋತ್ಸಾಹ ಧನ ಪ್ರಕ್ರಿಯೆ ಬಗ್ಗೆ ಮಾಹಿತಿ ಮತ್ತು ವಿಚಾರ ವಿನಿಮಯ ಹೊಸದಾಗಿ ಬರುವ ನಿರ್ಮಾಪಕ/ನಿರ್ದೇಶಕರು ಅಗತ್ಯ ಅರಿತಿರಬೇಕಾದ ಮಾಹಿತಿ. ಇಲ್ಲದೆ ಹೋದರೆ ಮಧ್ಯವರ್ತಿಗಳು ಹೇಳಿದ್ದನ್ನು ಕೇಳಿ ಕೆಲಸ ಮಾಡಬೇಕಾಗುತ್ತದೆ.

ಬಹಳಷ್ಟು ಮಂದಿಗೆ ತಿಳಿದಿಲ್ಲದ ಇನ್ನೊಂದು ವಿಷಯ ಕೃತಿಸ್ವಾಮ್ಯ ಕಾಯಿದೆ. ತಮ್ಮ ಸಿನಿಮಾಗಳ ಹಕ್ಕನ್ನು ನೀಡುವಾಗ ವಹಿಸಬೇಕಾದ ಜಗ್ರತೆ, ಒಟಿಟಿ, ವೆಬ್ ಸರಣಿಗಳು, ಡಬ್ಬಿಂಗ್ ಹಕ್ಕುಗಳು ಇವೇ ಮೊದಲಾದ ಉದ್ಯಮದ ಮಾಹಿತಿಯನ್ನು ನೀಡುವ ಗೋಷ್ಠಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೂ ಇರುವುದು ಗಮನಾರ್ಹ.

ಚಿತ್ರಗಳು ಪ್ರೇಕ್ಷಕರನ್ನು ತಲುಪಲು ಇರುವ ಪ್ರದರ್ಶನ ಕೇಂದ್ರಗಳು, ವೇದಿಕೆಗಳು, ಮಾರುಕಟ್ಟೆ, ಸಿನಿಮಾ ಪ್ರಚಾರ ಇತ್ಯಾದಿಗಳ ಕುರಿತಂತೆ ಕೂಡಾ ಗೋಷ್ಠಿಯೊಂದು ಇದೆ. ನಡುವೆ ಸಮಕಾಲೀನ ನಿರ್ದೇಶಕರ ಮುಂದಿರುವ ಸವಾಲು ಮತ್ತು ಸಾಧ್ಯತೆಯ ಪ್ರಶ್ನೆ ಇದೆ. ಮಧ್ಯೆ ಪ್ರಸ್ತಾಪಿಸಿದ ನಿರ್ಮಾಪಕ- ನಿರ್ದೇಶಕರ ನಡುವಿನ ಜಟಾಪಟಿಯ ಹಿನ್ನೆಲೆಯಲ್ಲಿ ಇದು ಬಹಳ ಪ್ರಮುಖ ವಿಷಯ. ನಿರೀಕ್ಷೆಗಿಂತ ಹೆಚ್ಚು ಮಂದಿ ಆಸಕ್ತರು ಈ ವಿಚಾರಸಂಕಿರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನಲಾಗಿದೆ. ನಾಲ್ಕನೇ ದಿನ ಸಿನಿಮಾಸಕ್ತ ಮಹಿಳೆಯರಿಗಾಗಿಯೇ ಪ್ರತ್ಯೇಕ ಸಂವಾದ ಕಾರ್ಯಕ್ರಮ ಇದೆ. ಚಿತ್ರರಂಗಕ್ಕೆ ಬರಲು ಬಯಸುವ ಪ್ರತಿಭಾವಂತರಿಗೆ ಈ ಸಿನಿ ಸಂವಾದ ಉಪಯುಕ್ತವಾಗಲಿ, ಬಾರದೇ ಇರುವ ಆಸಕ್ತರಿಗೆ ಈ ವಿವರ ತಿಳಿಯಲಿ ಎನ್ನುವುದು ಆಶಯ.

” ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ ೮೫ಕ್ಕೂ ಹೆಚ್ಚು ಚಿತ್ರಗಳಲ್ಲಿ ಸೋತವುಗಳು ಬೆರಳೆಣಿಯಷ್ಟು. ಅವರ ನಿರ್ಮಾಣದ ಯಾವುದೇ ಚಿತ್ರದ ಚಿತ್ರೀಕರಣ ಆರಂಭವಾಗುವುದಕ್ಕೆ ಮೊದಲು ಪೂರ್ವಸಿದ್ಧತೆ ಸಾಕಷ್ಟು ಆಗುತ್ತಿತ್ತು. ಚಿತ್ರದ ನಿರ್ದೇಶಕರು, ಬರಹಗಾರರ ಜೊತೆ ಸ್ವತಃ ರಾಜಕುಮಾರ್ ಮತ್ತು ಅವರ ತಮ್ಮ ವರದರಾಜು ಅವರು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಅಲ್ಲಿಂದ ಹಸಿರು ನಿಶಾನೆ ಬಂದ ನಂತರವೇ ಉಳಿದ ಸಿದ್ಧತೆ. ಹೊಸಬರ ಗಮನ ಮೊದಲು ಅತ್ತ ಸಾಗಬೇಕು.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೈಸೂರಿಗೆ ಸ್ವಚ್ಛತಾ ಪ್ರಶಸ್ತಿ ತಂದ ಹೆಮ್ಮೆ

ಮೈಸೂರು ನಗರಕ್ಕೆ ಈ ಬಾರಿಯ ಕರ್ನಾಟಕದ ನಂ. ಒನ್ ಸ್ವಚ್ಛತಾ ಗರಿ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಷಯ. ಇಡೀ ನಗರದ…

2 mins ago

ಓದುಗರ ಪತ್ರ: ದಲಿತ ಹಾಗೂ ರೈತ ಚಳವಳಿಗಳೆಂಬ ಎರಡು ಕಣ್ಣುಗಳ ‘ಪ್ರಖರತೆ’ ಹೆಚ್ಚಲಿ

ಸಿ. ಎಂ.ಮುನಿಯಪ್ಪ ಹಸಾಳ ಅವರ ಕಾಲಡಿಯ ಕಣ್ಣು ಕೃತಿಯ ಕುರಿತ ಮಾತು - ಸಂವಾದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಬಿ.…

3 mins ago

ಓದುಗರ ಪತ್ರ: ಪೌರಕಾರ್ಮಿಕರ ಬದುಕು ಹಸನಾಗಿರಲಿ

ಸ್ವಚ್ಛತೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಸಾಂಸ್ಕೃತಿಕ ನಗರಿ ಮೈಸೂರು. ಇದೇ ವೇಳೆ ಹತ್ತನೆಯ ಆವೃತ್ತಿಯ ಸ್ವಚ್ಛ ಸರ್ವೇಕ್ಷಣ ಸಮೀಕ್ಷೆಯಲ್ಲಿ…

5 mins ago

ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಯಲ್ಲಿ 2.19 ಕೋಟಿ ರೂ. ಸಂಗ್ರಹ!

ಮಹಾದೇಶ್ ಎಂ.ಗೌಡ ೫ ದಿನಗಳ ಮಹೋತ್ಸವದಲ್ಲಿ ಲಾಡು ಮಾರಾಟದಲ್ಲೇ ದಾಖಲೆ; ಕಳೆದ ವರ್ಷಕ್ಕಿಂತ ಆದಾಯ ಹೆಚ್ಚಳ  ಹನೂರು: ಮಲೆ ಮಹದೇಶ್ವರ…

18 mins ago

ಸಹಕಾರ ಸಪ್ತಾಹಕ್ಕೆ ಕೇಂದ್ರ ಸರ್ಕಾರದ ಅಸಹಕಾರ

ಕೆ.ಬಿ.ರಮೇಶನಾಯಕ ಜುಲೈನಲ್ಲಿ ಅಂತಾರಾಷ್ಟ್ರೀಯ ಸಹಕಾರ ದಿನ ಆಚರಣೆಗೆ ಸೂಚನೆ  ಸಪ್ತಾಹದ ಶೀರ್ಷಿಕೆಯೇ ಬದಲು; ನ.೧೪ರಂದು ನೆಹರು ಜನ್ಮದಿನ ಮರೆಸಲು ಯತ್ನ?…

23 mins ago

ಮಹಿಳಾ ಸಬಲೀಕರಣಕ್ಕೆ ಹಲವು ಸೌಲಭ್ಯಗಳ ಆಸರೆ

ನವೀನ್ ಡಿಸೋಜ ಮಿಷನ್ ಶಕ್ತಿ ಯೋಜನೆಯಡಿ ಕೊಡಗಿನಲ್ಲಿ ೭೨ ಅರಿವು ಕಾರ್ಯಾಗಾರ; ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜಾಗೃತಿ ಮಡಿಕೇರಿ: ಮಹಿಳೆಯರ…

30 mins ago