ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್ ಅವರ ವಾರದ ಅಂಕಣ
ಹನ್ನೆರಡು ವರ್ಷಗಳ ನಂತರ ನಡೆದ ದಕ್ಷಿಣ ರಾಜ್ಯಗಳ ಎರಡು ದಿನಗಳ ಸಮಾವೇಶ ಯಶಸ್ವಿಯಾಗಿ ಮುಗಿದಿದೆ. ಕರ್ನಾಟಕ-ತಮಿಳುನಾಡು ನಡುವೆ ಕಾವೇರಿ ವಿವಾದ, ಕೇರಳ ಮತ್ತು ತಮಿಳುನಾಡು ನಡುವೆ ಮುಲ್ಲೈಪೆರಿಯಾರ್ ಜಲಾಶಯ ಎತ್ತರಿಸಬೇಕು ಎಂಬ ವಿಷಯಗಳು ಸಮಾವೇಶದಲ್ಲಿ ಗಟ್ಟಿಯಾಗಿ ಕೇಳಿ ಬಂದವಾದರೂ ಯಾವುದೇ ರಾಜ್ಯದ ನಡುವೆ ವಿರಸ, ವರಸೆ ಮಾತುಗಳಿಲ್ಲ. ಅದೇ ರೀತಿ ವಿಶಾಲ ಆಂಧ್ರ ಪ್ರದೇಶ ಎರಡು ಭಾಗಗಳಾಗಿ ಆಂಧ್ರ ಮತ್ತು ತೆಲಂಗಾಣ ಎಂದು ವಿಭಜನೆಗೊಂಡು ಇನ್ನೂ ಬಗೆಹರಿಯದ ಕೆಲವು ಆಸ್ತಿ ಪಾಸ್ತಿ ಹಂಚಿಕೆಯ ಪ್ರಶ್ನೆಯು ಸಮಾವೇಶದಲ್ಲಿ ಪ್ರಸ್ತಾವನೆಗೊಂಡಿತು. ಆದರೂ ಪರಸ್ಪರ ಮಾತುಕತೆ ಮೂಲಕ ಈ ಎಲ್ಲ ವಿವಾದಗಳನ್ನು ಬಗೆಹರಿಸಿಕೊಳ್ಳೋಣ ಎನ್ನುವ ಒಮ್ಮತಕ್ಕೆ ಬಂದದ್ದು ಇಂತಹ ಪ್ರಾದೇಶಿಕ ಸಮಾವೇಶದ ಅವಶ್ಯಕತೆಯನ್ನು ಒತ್ತಿಹೇಳಿದಂತಿದೆ.
ದಕ್ಷಿಣ ರಾಜ್ಯಗಳನ್ನು ಬಹುಮುಖ್ಯವಾಗಿ ಕಾಡುತ್ತಿರುವುದು ಜಲವಿವಾದಗಳು. ಕರ್ನಾಟಕ ಮತ್ತು ತಮಿಳುನಾಡು ನಡುವೆ ಪರಸ್ಪರ ಮಾತುಕತೆ ನಡೆದು ಮೂರು ದಶಕಗಳೇ ಆಗಿವೆ. ೨೦೧೮ರ ಜೂನ್ ೧ರಿಂದ ಕಾವೇರಿ ನೀರು ನಿರ್ವಹಣೆ ಪ್ರಾಽಕಾರವೇ ಎಲ್ಲವನ್ನೂ ನೋಡಿಕೊಳ್ಳುತ್ತಿದೆ. ದಕ್ಷಿಣ ರಾಜ್ಯಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೌನ್ಸಿಲ್‌ನ ಅಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಆಗಿಂzಗ್ಗೆ ಉದ್ಭವಿಸುವ ಈ ಜಲವಿವಾದವನ್ನು ಪರಸ್ಪರ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರಾದರೂ, ವಿವಾದವನ್ನು ಬಗೆಹರಿಸಲು ಕೇಂದ್ರವು ಮಧ್ಯಸ್ಥಿಕೆವಹಿಸಲು ಮುಂದಾಗುವ ಬಗೆಗೆ ತುಟಿಪಿಟಕ್ಕೆನ್ನಲಿಲ್ಲ. ಕಾವೇರಿ ನದಿ ವಿವಾದದ ವಿಷಯದಲ್ಲಿ ಪರಸ್ಪರ ಬದ್ಧ ವೈರಿಗಳಂತೆ ಕರ್ನಾಟಕ ಮತ್ತು ತಮಿಳುನಾಡು ನಡೆದುಕೊಳ್ಳುವುದರಿಂದ ಸಹಜವಾಗಿ ಕೇಂದ್ರದ ಮಧ್ಯಸ್ಥಿಕೆ ಅತ್ಯಾವಶ್ಯಕ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಮಳೆ ಸಮೃದ್ಧವಾಗಿ ಸುರಿದಾಗ ಸಮಸ್ಯೆ ಉದ್ಭವಿಸುವುದಿಲ್ಲ. ಆದರೆ ಮಳೆ ಕೈಕೊಟ್ಟಾಗ ಸಹಜವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ವಿವಾದದ ಕಿಚ್ಚು ಭುಗಿಲೇಳುತ್ತದೆ.
ಮಳೆಯ ಕೊರತೆ ಬಂದಾಗಲೆಲ್ಲ ಈ ಎರಡೂ ರಾಜ್ಯಗಳು ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರದ ಮೊರೆ ಹೋಗುವುದು ಎಂದಿನಂತೆ ನಡೆದಿದೆ. ಸುಪ್ರೀಂ ಕೋರ್ಟಿನ ಮೊರೆ ಹೋಗುವುದು ಸಹಜ. ಕಾವೇರಿ ಅಚ್ಚುಕಟ್ಟು ಪ್ರದೇಶಲ್ಲಿ ಮಳೆ ಕೊರತೆಯ ವಾಸ್ತವ ಪರಿಸ್ಥಿತಿ ಕೇವಲ ರಾಜ್ಯಗಳು ನೀಡುವ ಮತ್ತು ಪ್ರಾಧಿಕಾರವೇ ತನ್ನ ಸ್ವಂತ ಮೂಲಗಳಿಂದ ಸಂಗ್ರಹಿಸುವ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಆಧರಿಸಿ ನೀಡುವ ಆದೇಶ ನದಿ ಮೇಲ್ಭಾಗದ ಕರ್ನಾಟಕಕ್ಕೆ ಸಂಕಟ ತಂದಿಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿ ಮತ್ತು ಕುಡಿಯುವ ನೀರಿನ ತೀವ್ರ ಸಮಸ್ಯೆಯನ್ನು ಎದುರಿಸುತ್ತಾ ಬಂದಿರುವುದು ಕರ್ನಾಟಕವೇ ಹೊರತು ನದಿ ಕೆಳಭಾಗದ ರಾಜ್ಯಗಳಲ್ಲ. ಕಾವೇರಿ ಪ್ರಾಧಿಕಾರವು ವಾಸ್ತವವನ್ನು ಅರಿಯದೆ ನೀಡುವ ಆದೇಶ ಕರ್ನಾಟಕದ ಪಾಲಿಗೆ ಬಿಸಿತುಪ್ಪ. ಈ ಹಿಂದೆ ಕಾವೇರಿ ಜಲ ವಿವಾದಗಳ ನ್ಯಾಯಮಂಡಳಿ ನೀರಿನ ಕೊರತೆ ಎದುರಿಸುವ ಸಂದರ್ಭ ಬಂದಾಗಲೆಲ್ಲ ಸಮಿತಿಯೊಂದನ್ನು ರಚಿಸಿ ಅದು ಕಾವೇರಿ ನದಿಯ ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ವರದಿಯನ್ನು ಪಡೆಯುತ್ತಿತ್ತು. ಇಂತಹ ಸಮಿತಿಯು ಅಚ್ಚುಕಟ್ಟು ಪ್ರದೇಶದಲ್ಲಿನ ಮಳೆಯ ಕೊರತೆ, ಬೆಳೆಗಳ ನಾಶ, ಬಿತ್ತನೆ ಮಾಡದ ಪರಿಸ್ಥಿತಿ, ಮಳೆಯ ಪ್ರಮಾಣ ಎಷ್ಟು ಆಗಿದೆ, ಇನ್ನು ಬರುವ ದಿನಗಳಲ್ಲಿ ಮಳೆ ಎಷ್ಟು ಪ್ರಮಾಣದಲ್ಲಿ ಬೀಳಬಹುದು , ರೈತರ ಪರಿಸ್ಥಿತಿ, ರಾಜ್ಯಗಳ ಮನವಿಯನ್ನು ಕೇಳಿ ವಸ್ತುಸ್ಥಿತಿಯ ವರದಿಯನ್ನು ಸಲ್ಲಿಸಿದ ಉದಾಹರಣಗಳಿವೆ. ಆದರೆ ಈ ಬಾರಿ ಮುಂಗಾರು ಅಬ್ಬರಿಸಬೇಕಾದ ಆರಂಭದ ಜೂನ್ ತಿಂಗಳಲ್ಲಿ ಮಳೆ ಬೀಳಲೇ ಇಲ್ಲ. ಈ ಪರಿಸ್ಥಿತಿಯನ್ನು ಕಾವೇರಿ ಪ್ರಾಧಿಕಾರ ಗಂಭೀರವಾಗಿ ತೆಗೆದುಕೊಳ್ಳದೇ ಹೋದುದು ದುರದೃಷ್ಟಕರ. ಇಂತಹ ಪರಿಸ್ಥಿತಿಯಲ್ಲಿ ಸಂಕಷ್ಟ ಸೂತ್ರವನ್ನು ಸಿದ್ಧಪಡಿಸಿ ಲಭ್ಯವಿರುವ ನೀರನ್ನೂ ಮತ್ತು ಸಂಕಷ್ಟವನ್ನೂ ಹಂಚಿಕೊಳ್ಳಬೇಕೆಂದು ಪ್ರಾಧಿಕಾರ ಕ್ರಮಕೈಗೊಳ್ಳಬೇಕಿತ್ತು.
ಈ ಬಗೆಗೆ ಗೃಹ ಸಚಿವ ಅಮಿತ್ ಶಾ ಅವರು ಆಸಕ್ತಿವಹಿಸಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಉದ್ಭವಿಸಿರುವ ಸದ್ಯದ ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಬೇಕೇ ವಿನಾ ಕೇವಲ ಸಲಹೆ ನೀಡಿ ಕೈತೊಳೆದುಕೊಳ್ಳುವುದಲ್ಲ. ತಮಿಳುನಾಡು ಈ ಹಿಂದೆಯೆಲ್ಲ ಮಾತುಕತೆಗೆ ಒಪ್ಪದೆ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟನ್ನೇ ಅವಲಂಬಿಸುತ್ತಾ ಬಂದಿರುವುದು ಆ ರಾಜ್ಯದ ವಿಶೇಷ. ತಮಿಳುನಾಡು ಸರ್ಕಾರಕ್ಕೆ ಅಲ್ಲಿನ ರೈತರು ಸಹಾ ಕಾನೂನು ಹೋರಾಟದಲ್ಲಿ ಒತ್ತಾಸೆಯಾಗಿzರೆ. ವಾಸ್ತವವಾಗಿ ತಮಿಳುನಾಡಿನ ರೈತರು ೧೯೯೦ರಲ್ಲಿ ಅಂದಿನ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಅವರಿಗೆ ಸಲ್ಲಿಸಿದ್ದ ಮನವಿಯೇ ನ್ಯಾಯಮಂಡಳಿ ರಚನೆಗೆ ಕಾರಣವಾದದ್ದು ಇತಿಹಾಸ. ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟಿನಲ್ಲೂ ಸರ್ಕಾರವಲ್ಲದೆ ಪ್ರತ್ಯೇಕವಾಗಿ ರೈತರು ಅರ್ಜಿ ಹಾಕಿ ವಕಾಲತ್ತು ವಹಿಸುವ ಮೂಲಕ ತಮಿಳುನಾಡಿನ ಸರ್ಕಾರದ ಪ್ರಯತ್ನಕ್ಕೆ ಹೆಗಲು ಕೊಟ್ಟರು.
ಈ ಮಧ್ಯೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಮೇಕೆ ದಾಟು ಯೋಜನೆ ಕೈಗೆತ್ತಿಕೊಳ್ಳಲು ಕರ್ನಾಟಕ ಮುಂದಾಗಿರುವುದು ನದಿ ನೀರು ಅನವಶ್ಯಕವಾಗಿ ಸಮುದ್ರ ಸೇರದಂತೆ ತಡೆಯುವ ಪ್ರಯತ್ನವಾಗಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಜಲಸಂಪನ್ಮೂಲ ಸಚಿವಾಲಯವು ಮೇಕೆದಾಟು ಯೋಜನೆ ಕೈಗೊಳ್ಳಲು ಅನುಮತಿ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಎಂದಿನಂತೆ ತಮಿಳುನಾಡು ಈ ಯೋಜನೆಯನ್ನು ವಿರೋಧಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಜೋಸೆ- ವಿಜಯ್ ಈ ಜಲವಿವಾದ ಕುರಿತು ಕರ್ನಾಟಕದ ಜೊತೆ ಮಾತುಕತೆಗೆ ಮುಂದಾದದ್ದು ಮೆಚ್ಚುವಂತಹದ್ದೇ. ಬದ್ಧ ವೈರಿ ರಾಷ್ಟ್ರಗಳೇ ಮಾತುಕತೆ ಮಾಡಿ ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುತ್ತಿರುವಾಗ ನಾವೇಕೆ ನೆರೆಹೊರೆಯ ರಾಜ್ಯದ ಜೊತೆ ಮಾತನಾಡಬಾರದು ಎಂದು ಮುಖ್ಯಮಂತ್ರಿ ವಿಜಯ್ ತೋರಿದ ಆಸಕ್ತಿ ಸಕಾಲಿಕವಾದದ್ದು. ದುರದೃಷ್ಟಕರ ಸಂಗತಿ ಎಂದರೆ ತಮಿಳುನಾಡಿನ ಉಳಿದ ರಾಜಕೀಯ ಪಕ್ಷಗಳ ಮುಖಂಡರು ಎರಡೂ ರಾಜ್ಯಗಳ ನಡುವೆ ಮಾತುಕತೆ ನಡೆಸುವ ವಿಜಯ್ ಆಸೆಗೆ ಕಲ್ಲು ಹಾಕಿ ಸಮಸ್ಯೆ ಮತ್ತಷ್ಟು ಮುಂದುವರಿಯಲು ಕಾರಣವಾಗಿದ್ದಾರೆ. ಎರಡೂ ರಾಜ್ಯಗಳ ಈ ಹೊಸ ಮುಖ್ಯಮಂತ್ರಿಗಳು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೆಡೆ ಕುಳಿತು ಸೌಹಾರ್ದಯುತವಾಗಿ ವಿವಾದವನ್ನು ತಕ್ಕಮಟ್ಟಿಗೆ ಬಗೆಹರಿಸಿಕೊಳ್ಳಬಹುದು. ಕೇಂದ್ರ ಬಯಸುವಂತೆ ಎರಡೂ ರಾಜ್ಯಗಳು ಮುಖಾಮುಖಿಯಾಗಿ ಮಾತನಾಡುವುದೇ ಇಂದಿನ ತುರ್ತು.
ಈ ಮಧ್ಯೆ ದಕ್ಷಿಣ ರಾಜ್ಯಗಳ ಸಮಾವೇಶದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಗಟ್ಟಿಯಾಗಿ ದನಿ ಎತ್ತಿರುವುದು ಇಪ್ಪತ್ತೈದು ವರ್ಷಗಳ ನಂತರ ಕೇಂದ್ರ ಸರ್ಕಾರ ಕೈಗೊಂಡಿರುವ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳ ಕ್ಷೇತ್ರ ಪುರ್ನ ವಿಂಗಡಣೆ ವಿರುದ್ಧ. ಇದುವರೆಗೆ ನಡೆದು ಬಂದಿರುವ ಜನಸಂಖ್ಯಾಧಾರಿತ ಮಾನದಂಡವನ್ನು ಬಳಸಿ ಕ್ಷೇತ್ರಗಳನ್ನು ಪುನರ್ ವಿಂಗಡಿಸಲಾಗುತ್ತಿದೆ. ಇದರಿಂದ ಲಂಗು ಲಗಾಮಿಲ್ಲದೆ ವರ್ಷ ವರ್ಷವೂ ಜನಸಂಖ್ಯೆಯ ಹೆಚ್ಚಳ ಮಾಡಿಕೊಳ್ಳುತ್ತಿರುವ ಉತ್ತರ ಭಾರತದ ರಾಜ್ಯಗಳು ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಸದಸ್ಯರನ್ನು ಹೊಂದಲಿದ್ದು, ಇಡೀ ದೇಶದ ಅಧಿಕಾರ ಸೂತ್ರ ಹಿಡಿಯುವ ರಾಜಕಾರಣದ ಮೇಲೆ ಹಿಡಿತ ಇಟ್ಟುಕೊಳ್ಳಲಿವೆ. ದಕ್ಷಿಣ ರಾಜ್ಯಗಳು ಜನಸಂಖ್ಯೆಯ ನಿಯಂತ್ರಣವನ್ನು ಕೈಗೊಂಡು ಹೆಚ್ಚು ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಿದ್ದೇ ಈಗ ಈ ರಾಜ್ಯಗಳಿಗೆ ಮುಳುವಾಗಿದೆ. ಮೂರ್ನಾಲ್ಕು ತಿಂಗಳ ಹಿಂದಿನ ಲೆಕ್ಕಚಾರದಂತೆ ಕರ್ನಾಟಕ ಮತ್ತು ತಮಿಳುನಾಡಿನ ಈಗಿನ ಲೋಕಸಭೆಯ ಪ್ರಾತಿನಿಧ್ಯ ಕೇವಲ ಆರೇಳು ಹೆಚ್ಚು ಮಂದಿ ಸದಸ್ಯರಾಗುವುದಾಗಿತ್ತು. ದಕ್ಷಿಣ ರಾಜ್ಯಗಳ ತೀವ್ರ ವಿರೋಧವನ್ನುಗಮನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ , ಈಗಿರುವ ಸದಸ್ಯ ಬಲವನ್ನು ಶೇ. ೫೦ರಷ್ಟು ಹೆಚ್ಚಿಸುವುದಾಗಿ ಮುಂದಿನ ದಿನಗಳಲ್ಲಿ ಮಂಡಿಸಲಿರುವ ತಿದ್ದುಪಡಿ ಮಸೂದೆಯ ವಿವರವನ್ನು ನೀಡಿzರೆ. ಈ ಹೊಸ ಮಾನದಂಡದ ಪ್ರಕಾರವೇ ಉತ್ತರ ಪ್ರದೇಶದಿಂದ ಲೋಕಸಭೆಗೆ ಈಗ ಆಯ್ಕೆಯಾಗುವವರ ಸಂಖ್ಯೆ ೮೦ ಇದ್ದು, ಇನ್ನು ಮುಂದೆ ಈ ಪ್ರಮಾಣವನ್ನು ಶೇ. ೫೦ರಷ್ಟು ಹೆಚ್ಚಿಸಿದರೆ ಉತ್ತರ ಪ್ರದೇಶದ ಪ್ರಾತಿನಿಧ್ಯ ೧೬೦ ಆಗಲಿದೆ. ಕರ್ನಾಟಕ ೨೮ರ ಬದಲಿಗೆ ೪೨ ಆಗಲಿದೆ. ತಮಿಳುನಾಡಿನ ೪೦ ಸದಸ್ಯರ ಸಂಖ್ಯೆ ೬೦ಕ್ಕೆ ಏರಲಿದೆ. ಇದರ ಪರಿಣಾಮ ರಾಜಕೀಯವಾಗಿ ಉತ್ತರ ಭಾರತದ ಪ್ರಾಬಲ್ಯ ಮತ್ತಷ್ಟು ಹೆಚ್ಚಲಿದೆ.
ಇದನ್ನು ಗಮನಿಸಿರುವ ಕರ್ನಾಟಕ ಮತ್ತು ತಮಿಳುನಾಡು ಕ್ಷೇತ್ರ ಪುನರ್ ವಿಂಗಡಣೆಗೆ ೧೯೭೧ರ ಜನಗಣತಿಯನ್ನೇ ಆಧರಿಸಬೇಕೆಂದು ಮತ್ತು ಸಾಧ್ಯವಾದರೆ ಈ ಕ್ಷೇತ್ರ ಪುನರ್ ವಿಂಗಡಣೆ ಕಾರ್ಯವನ್ನೇ ಮುಂದೂಡಬೇಕೆಂದು ಒತ್ತಾಯಿಸುತ್ತಿವೆ. ಆದರೆ ಈ ಒತ್ತಾಯಕ್ಕೆ ಕೇಂದ್ರ ಸರ್ಕಾರ ಯಾವರೀತಿ ಪ್ರತಿಕ್ರಿಯಿಸಲಿದೆ ಎನ್ನುವುದನ್ನು ನೋಡಬೇಕಿದೆ. ಕೆಲವು ವಿಷಯಗಳಲ್ಲಿ ತಮಿಳುನಾಡು ಕೇಂದ್ರದ ವಿರುದ್ಧ ತೊಡೆತಟ್ಟಿ ನಿಲ್ಲುವ ಜಯಮಾನ ಮೊದಲಿನಿಂದಲೂ ನಡೆದು ಬಂದಿದೆ. ಆ ರಾಜ್ಯದಲ್ಲಿ ಆಡಳಿತ ನಡೆಸುವ ಪಕ್ಷ ಬದಲಾದರೂ ಕೇಂದ್ರದ ವಿರುದ್ಧ ದನಿ ಎತ್ತುವ ಬದ್ಧತೆ ಮುಂದುವರಿದಿರುವುದನ್ನು ಮೆಚ್ಚಲೇಬೇಕು, ವಿವಾದಿತ ನೀಟ್ ಪರೀಕ್ಷೆ ನಡೆಸುವ ಅವಕಾಶವನ್ನು ರಾಜ್ಯಗಳಿಗೇ ನೀಡಬೇಕು. ಅಂತೆಯೇ ನೂತನ ಶಿಕ್ಷಣ ನೀತಿಯನ್ನು ಹಾಗೂ ತ್ರಿಭಾಷಾ ಸೂತ್ರ ಬದಲು ದ್ವಿಭಾಷಾ ಸೂತ್ರವನ್ನೇ ಮುಂದುವರಿಸುವುದಾಗಿ ವಿಧಾನಸಭೆಯಲ್ಲಿ ನಿರ್ಣಯವನ್ನೇ ಮಾಡಿದೆ. ಇದು ಕೇಂದ್ರ ಸರ್ಕಾರವನ್ನೂ ಪೇಚಿಗೆ ಸಿಲುಕಿಸಿದೆ. ನೂತನ ಶಿಕ್ಷಣ ನೀತಿಯನ್ನು ಒಪ್ಪದಿದ್ದರೆ ಈ ಬಾಬ್ತಿನಲ್ಲಿ ನೀಡುವ ಅನುದಾನವನ್ನೂ ನೀಡುವುದಿಲ್ಲ ಎನ್ನುವ ಕೇಂದ್ರದ ಎಚ್ಚರಿಕೆಗೆ ಸೊಪ್ಪು ಹಾಕಿಲ್ಲದಿರುವುದು ಆ ರಾಜ್ಯದ ಗಟ್ಟಿತನವನ್ನು ತೋರುತ್ತದೆ.
ಈ ಮಧ್ಯೆ ಕೇಂದ್ರ ಸರ್ಕಾರದ ಬೊಕ್ಕಸ ತುಂಬುವ ಮೂಲಕ ರಾಷ್ಟ್ರದ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿರುವ ಕರ್ನಾಟಕ ಮತ್ತು ತಮಿಳುನಾಡಿಗೆ ನ್ಯಾಯಬದ್ಧವಾಗಿ ಜಿಎಸ್ಟಿಯ ಪಾಲಿನಲ್ಲಿ ಬರಬೇಕಾದ ಹಣ ಬರಲೇಬೇಕು ಎಂದು ಕೇಂದ್ರವನ್ನು ಆಗ್ರಹಿಸಿರುವುದು ಉತ್ತಮ ಬೆಳವಣಿಗೆ. ಈ ಸಮಾವೇಶದಲ್ಲಿ ಕೈಗೊಂಡಿರುವ ನಿರ್ಣಯ ಮತ್ತು ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಪರಿಶೀಲಿಸಿ ಮುಂದೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳನ್ನು ರೂಪಿಸಲು ಎಲ್ಲ ದಕ್ಷಿಣ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಸಮಿತಿಯನ್ನು ರಚಿಸಲಾಗಿದೆ. ಕಾರ್ಯಾಂಗದ ಮುಖ್ಯಸ್ಥರಾದ ಈ ಉನ್ನತಾಧಿಕಾರಿಗಳು ರಾಜ್ಯಗಳ ಅಂತರಾಳವನ್ನು ಅರಿತು ಕೇಂದ್ರ ಸರ್ಕಾರಕ್ಕೆ ಕಾರ್ಯಸಾಧುವಾದ ಶಿ-ರಸುಗಳನ್ನು ಮಾಡುವ ಜೊತೆಗೆ ನಿರಂತರವಾಗಿ ಕೇಂದ್ರದ ಜೊತೆ ವ್ಯವಹರಿಸಿದಾಗ ಮಾತ್ರ ಈ ಸಮಾವೇಶ ಫಲಕಾರಿಯಾದೀತು.
” ಕೇಂದ್ರ ಸರ್ಕಾರದ ಬೊಕ್ಕಸ ತುಂಬುವ ಮೂಲಕ ರಾಷ್ಟ್ರದ ಜಿಡಿಪಿ ಹೆಚ್ಚಳಕ್ಕೆ ಕಾರಣವಾಗಿರುವ ಕರ್ನಾಟಕ ಮತ್ತು ತಮಿಳುನಾಡಿಗೆ ನ್ಯಾಯಬದ್ಧವಾಗಿ ಜಿಎಸ್ಟಿಯ ಪಾಲಿನಲ್ಲಿ ಬರಬೇಕಾದ ಹಣ ಬರಲೇಬೇಕು ಎಂದು ಕೇಂದ್ರವನ್ನು ಆಗ್ರಹಿಸಿರುವುದು ಉತ್ತಮ ಬೆಳವಣಿಗೆ. ಈ ಸಮಾವೇಶದಲ್ಲಿ ಕೈಗೊಂಡಿರುವ ನಿರ್ಣಯ ಮತ್ತು ವ್ಯಕ್ತವಾಗಿರುವ ಅಭಿಪ್ರಾಯಗಳನ್ನು ಪರಿಶೀಲಿಸಿ ಮುಂದೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳನ್ನು ರೂಪಿಸಲು ಎಲ್ಲ ದಕ್ಷಿಣ ರಾಜ್ಯಗಳ ಮುಖ್ಯಕಾರ್ಯದರ್ಶಿಗಳ ಸಮಿತಿಯನ್ನು ರಚಿಸಲಾಗಿದೆ.”
ಚೌಕಾಸಿ...! ಸಾಮಾನ್ಯವಾಗಿ ಫುಟ್ಟ್ಪಾತ್ ವ್ಯಾಪಾರದಲ್ಲಿ ನಡೆಯುವುದು ಚೌಕಾಸಿ... ಈಗ, ಫುಟ್ಪಾತ್ನಲ್ಲಿ ಪಾದಚಾರಿ-ವ್ಯಾಪಾರಿಗಳ ನಡುವೆಯೂ ನಡೆಯಬಹುದು ಓಡಾಡುವ ರಸ್ತೆಗಾಗಿ ಚೌಕಾಸಿ !…
ಕಳೆದ ಒಂದು ವಾರದಿಂದ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ಮಳೆಗಾಲದ ಅಧಿವೇಶನ, ಡಿ. ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾದ ನಂತರ…
ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮಹಾಬಲಿಪುರಂನಲ್ಲಿ ನಡೆದ ದಕ್ಷಿಣ ವಲಯ ಮಂಡಳಿಯ ಸಭೆಯಲ್ಲಿ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್…
ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಿಧನದಿಂದ ಮೌಲ್ಯನಿಷ್ಠ ರಾಜಕಾರಣದ ಒಂದು ಕೊಂಡಿಕಳಚಿದಂತಾಗಿದೆ. ಸರಳ ಹಾಗೂ ಪ್ರಾಮಾಣಿಕ ರಾಜಕಾರಣಿಯಾಗಿದ್ದ ನಾಗೇಶ್…