ಅಂಕಣಗಳು

ಕೂದಲೆಳೆ ಅಂತರದಲ್ಲಿ ಎಸ್.ಎಂ.ಕೃಷ್ಣ ಕೈತಪ್ಪಿದ ಪ್ರಧಾನಿ ಹುದ್ದೆ

ಬೆಂಗಳೂರು ಡೈರಿ

ಆರ್.ಟಿ.ವಿಠ್ಠಲಮೂರ್ತಿ

ಇಪ್ಪತ್ತು ವರ್ಷದ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಎಸ್.ಎ.ಕೃಷ್ಣ ಪ್ರಧಾನಿಯಾಗುವ ಸಾಧ್ಯತೆ ಇತ್ತು

ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಎಸ್.ಎ.ಕೃಷ್ಣ ಪ್ರಧಾನಿಯಾಗುವ ಸಾಧ್ಯತೆ ಇತ್ತೇ? ಹಾಗೆಂಬ ಪ್ರಶ್ನೆಗೆ ರಾಜಕೀಯ ವಲಯಗಳು ಹೌದು ಎಂದು ಉತ್ತರ ನೀಡುತ್ತವೆ. ಕಾರಣ ೨೦೦೪ರ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನೇತೃತ್ವದಲ್ಲಿ ಎದುರಿಸಿತ್ತು.

ಗಮನಿಸಬೇಕಾದ ಸಂಗತಿ ಎಂದರೆ ಸಂಕಷ್ಟಗಳ ನಡುವೆಯೇ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಎಸ್.ಎಂ.ಕೃಷ್ಣ ಕೂಡ ೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ನಾಯಕತ್ವದ ಕಾಂಗ್ರೆಸ್ ಮರಳಿ ಅಧಿಕಾರ ಗದ್ದುಗೆ ಹಿಡಿಯುತ್ತದೆ ಎಂದು ನಂಬಿಕೊಂಡಿದ್ದರು. ಹೀಗಾಗಿಯೇ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್‌ನ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಕರ್ನಾಟಕದಲ್ಲಿ ತಮ್ಮ ಸಾಧನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ ಮರುದಿನ ಪತ್ರಕರ್ತರು ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ್ದರು.

ಆ ಹೊತ್ತಿನಲ್ಲಿ ವಿಧಾನಸೌಧದ ಪಕ್ಕ ನಿರ್ಮಾಣವಾಗುತ್ತಿದ್ದ ವಿಕಾಸಸೌಧದ ಕಾಮಗಾರಿಯನ್ನು ಪರಿಶೀಲಿಸುತ್ತಿದ್ದ ಎಸ್.ಎಂ.ಕೃಷ್ಣ ಅವರ ಬಳಿ ಪತ್ರಕರ್ತರು, ಗುಲಾಂ ನಬಿ ಆಜಾದ್ ವ್ಯಕ್ತಪಡಿಸಿದ ಅನುಮಾನದ ಕುರಿತು ಕೇಳಿದಾಗ ಸಹಜವಾಗಿಯೇ ಅವರು ವ್ಯಗ್ರರಾಗಿದ್ದರು. ಅಷ್ಟೇ ಅಲ್ಲ, ಕರ್ನಾಟಕದ ಬಗ್ಗೆ ಗುಲಾಂ ನಬಿ ಆಜಾದ್ ಅವರಿಗೇನು ಗೊತ್ತು? ಎಂದು ಮರುಪ್ರಶ್ನಿಸಿದ್ದರು.

ಅವತ್ತು ಎಸ್.ಎಂ.ಕೃಷ್ಣ ಅವರಾಡಿದ ಮಾತಿನಲ್ಲಿ ಎರಡು ಅಂಶಗಳು ಎದ್ದು ಕಾಣುತ್ತಿದ್ದವು. ಮೊದಲನೆಯದಾಗಿ, ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಅವರಿಗಿದ್ದ ವಿಶ್ವಾಸ. ಎರಡನೆಯದಾಗಿ ಗುಲಾಂ ನಬಿ ಆಜಾದ್ ಅವರಂತಹ ಬಲಿಷ್ಠ ನಾಯಕನ ವಿರುದ್ಧವೇ ಮಾತನಾಡುವ ಮೂಲಕ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ತಮಗಿದ್ದ ಪವರ್ ಬಗೆಗಿನ ವಿಶ್ವಾಸ. ವಸ್ತುಸ್ಥಿತಿ ಎಂದರೆ ರಾಷ್ಟ್ರಮಟ್ಟದಲ್ಲಿ ವನವಾಸದಲ್ಲಿದ್ದ ಕಾಂಗ್ರೆಸ್ ಪಕ್ಷ ದೇಶದಲ್ಲಿ ತಲೆ ಎತ್ತಿ ನಿಲ್ಲಲು ಕೃಷ್ಣ ನೀಡಿದ್ದ ಕೊಡುಗೆ ಅಪಾರ. ೧೯೯೮ರಲ್ಲಿ ದಿಲ್ಲಿ ಗದ್ದಿಗೆಯಿಂದ ದೂರ ಉಳಿದಿದ್ದ ಕಾಂಗ್ರೆಸ್ ಪಕ್ಷ ಸತತ ಆರು ವರ್ಷಗಳ ಕಾಲ ಅಧಿಕಾರ ಹೀನ ಸ್ಥಿತಿಯಲ್ಲಿತ್ತು. ೧೯೯೬ರಲ್ಲಿ ಅದು ತೃತೀಯ ರಂಗ ಸರ್ಕಾರಕ್ಕೆ ಬೆಂಬಲ ನೀಡಿತ್ತಾದರೂ ಎರಡು ವರ್ಷಗಳ ಕಾಲದ ಆ ಸಖ್ಯದಿಂದ ಅದು ದೊಡ್ಡ ಮಟ್ಟದ ಶಕ್ತಿಯನ್ನೇನೂ ಪಡೆದಿರಲಿಲ್ಲ. ೧೯೯೮ರಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆರು ವರ್ಷಗಳ ಕಾಲ ದಿಲ್ಲಿ ಗದ್ದಿಗೆಯಿಂದ ದೂರವೇ ಉಳಿದಿದ್ದ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಟಾನಿಕ್ ನೀಡಿದವರು ಎಸ್.ಎಂ.ಕೃಷ್ಣ.

೧೯೯೯ರಲ್ಲಿ ಕರ್ನಾಟಕದ ಅಧಿಕಾರ ಚುಕ್ಕಾಣಿ ಹಿಡಿದ ಕೃಷ್ಣ ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ಟಾನಿಕ್ ನೀಡಿದರು. ಅರ್ಥಾತ್, ಈ ಅವಧಿಯಲ್ಲಿ ಆಂಧ್ರಪ್ರದೇಶ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಪಕ್ಷ ಮರಳಿ ಅಧಿಕಾರ ಗದ್ದಿಗೆ ಹಿಡಿಯಲು ಶಕ್ತಿ ತುಂಬಿದರು. ಚುನಾವಣೆಯ ರಣಾಂಗಣದಲ್ಲಿ ಸುಖಾಸುಮ್ಮನೆ ಗೆಲ್ಲಲು ಸಾಧ್ಯವಿಲ್ಲ. ಬದಲಿಗೆ ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳೊಂದಿಗೆ ಯುದ್ಧ ಮಾಡಬೇಕು. ಹಾಗೆ ಕಾಂಗ್ರೆಸ್ ಪಕ್ಷ ಎದುರಾಳಿಗಳ ಜತೆ ಖಾಡಾಖಾಡಿ ಯುದ್ಧ ಮಾಡಲು ಅಗತ್ಯವಾದ ಶಕ್ತಿಯನ್ನು ಕೃಷ್ಣ ದೊಡ್ಡ ಮಟ್ಟದಲ್ಲಿ ತುಂಬಿದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಕೃಷ್ಣ ಸದಾ ಕಾಲ ಹತ್ತಿರವಾಗಿದ್ದರು.

ಸೋನಿಯಾ-ಕೃಷ್ಣ ಅವರ ನಡುವೆ ಎಂತಹ ವಿಶ್ವಾಸವಿತ್ತು ಎಂದರೆ ರಾಷ್ಟ್ರ ಮಟ್ಟದಲ್ಲಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಸೋನಿಯಾ ಅವರು ಕೃಷ್ಣರ ಸಲಹೆಯನ್ನು ಪಡೆಯುತ್ತಿದ್ದರು. ಇದೇ ರೀತಿ ಐದು ವರ್ಷಗಳ ಕಾಲದ ತಮ್ಮ ಆಡಳಿತಾವಧಿಯಲ್ಲಿ ರಾಜ್ ಅಪಹರಣ, ಕಾವೇರಿ ವಿವಾದ, ಬರಗಾಲದಂತಹ ಹಲವು ಸಂಕಟಗಳ ನಡುವೆಯೂ ಹಲವು ಮಹತ್ವದ ಕಾರ್ಯಕ್ರಮಗಳನ್ನು ನೀಡಿ ಕರ್ನಾಟಕವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಿದ್ದ ಕೃಷ್ಣ ಸಹಜವಾಗಿಯೇ ಸೋನಿಯಾ ಇಷ್ಟಪಡುವ ನಾಯಕರಾಗಿ ಬೆಳೆದಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ ಜಾಗತೀಕರಣ ದೇಶವನ್ನು ಪ್ರವೇಶಿಸಿದ ನಂತರ ಅದನ್ನು ಎನ್‌ಕ್ಯಾಶ್ ಮಾಡಿಕೊಂಡು ಕರ್ನಾಟಕವನ್ನು ವಿಶ್ವದ ಗಮನ ಸೆಳೆಯುವ ಮಟ್ಟಕ್ಕೆ ತೆಗೆದುಕೊಂಡು ಹೋದ ಕೃಷ್ಣ ಅವರಲ್ಲಿ ಸೋನಿಯಾ ಬಯಸಿದ ಲಕ್ಷಣಗಳೆಲ್ಲ ಮೇಳೈಸಿದ್ದವು. ಹೀಗಾಗಿ ೨೦೦೪ರ ಲೋಕಸಭಾ ಚುನಾವಣೆ ಮುಗಿದ ನಂತರ, ತಮ್ಮನ್ನು ವಿದೇಶಿ ಮಹಿಳೆ ಎಂದು ಮೂದಲಿಸಿ ಬಿಜೆಪಿ ಯಶಸ್ವಿಯಾದ ನಂತರ ಭವಿಷ್ಯದ ಪ್ರಧಾನಿಯನ್ನು ಹುಡುಕಲು ಸೋನಿಯಾ ಗಾಂಧಿ ಮುಂದಾದರು. ಈ ಸಂದರ್ಭದಲ್ಲಿ ಅವರ ಮನಸ್ಸಿಗೆ ಬಂದ ಮೊದಲ ಹೆಸರು ಎಸ್.ಎಂ.ಕೃಷ್ಣ. ಆದರೆ ಸೋನಿಯಾ ಗಾಂಧಿ ಅವರ ಕಣ್ಣಲ್ಲಿ ಪ್ರಧಾನಿ ಹುದ್ದೆಯ ಕ್ಯಾಂಡಿಡೇಟ್ ಆಗಿ ಎಮರ್ಜ್ ಆಗಿದ್ದ ಕೃಷ್ಣ ಅವರ ಹೆಸರು ಚರ್ಚೆಗೆ ಬಂದಾಗ, ಹೈಕಮಾಂಡ್‌ನ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರು.

ಇಂತಹ ವಿರೋಧಕ್ಕೆ ಅವರು ನೀಡಿದ ಕಾರಣವೆಂದರೆ, ೨೦೦೪ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸೋತಿದೆ ಎಂಬುದು. ತಮ್ಮ ರಾಜ್ಯದಲ್ಲೇ ಪಕ್ಷವನ್ನು ಮೇಲಕ್ಕೆತ್ತಲಾಗದ ಎಸ್.ಎಂ.ಕೃಷ್ಣ ಅವರು ದೇಶದ ಪ್ರಧಾನಿ ಹುದ್ದೆಗೆ ಪರಿಗಣಿಸಲ್ಪಟ್ಟರೆ ಭಾರೀ ವಿರೋಧ ವ್ಯಕ್ತವಾಗುತ್ತದೆ ಎಂಬುದು ಈ ನಾಯಕರು ಕೊಟ್ಟ ಕಾರಣ. ಪರಿಣಾಮ ಕೃಷ್ಣ ಅವರ ಹೆಸರು ಹಿಂದೆ ಸರಿದು ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರ ಹೆಸರು ಮುಂಚೂಣಿಗೆ ಬಂತು ಅಂದ ಹಾಗೆ ಮನಮೋಹನ್ ಸಿಂಗ್ ಅವರ ಹೆಸರನ್ನು ಯಾರೂ ವಿರೋಧಿಸಲಿಲ್ಲ. ಕಾರಣ ಮೊದಲನೆಯದಾಗಿ ಅವರು ತಂತ್ರಗಾರಿಕೆ ಬಲ್ಲ ರಾಜಕಾರಣಿಯಾಗಿರಲಿಲ್ಲ. ಅವತ್ತಿನ ಸ್ಥಿತಿಯಲ್ಲಿ ಸೋನಿಯಾ ಗಾಂಧಿ ಅವರ ಜಾಗವನ್ನು ಒಬ್ಬ ರಾಜಕಾರಣಿ ತುಂಬುವುದಕ್ಕಿಂತ ಅರ್ಥಶಾಸ್ತ್ರಜ್ಞರೊಬ್ಬರು ಭರ್ತಿ ಮಾಡುವುದು ಕಾಂಗ್ರೆಸ್‌ನ ಸೋನಿಯಾ ನಿಷ್ಠ ಪಡೆಗೆ ಬೇಕಿತ್ತು. ಅದಕ್ಕಿದ್ದ ಮತ್ತೊಂದು ಕಾರಣವೆಂದರೆ ರಾಜೀವ್ ಗಾಂಧಿನಿಧನದ ನಂತರ ಪ್ರಧಾನಿಯಾದ ಪಿ.ವಿ.ನರಸಿಂಹರಾವ್ ಅವರು ಗಾಂಧಿ ಕುಟುಂಬದ ಕೈಗೊಂಬೆಯಾಗುವ ಬದಲು ಸ್ವಯಂಶಕ್ತಿಯಿಂದ ದೇಶವನ್ನಾಳಿದ್ದರು.

ವೈಯಕ್ತಿಕವಾಗಿ ಸೋನಿಯಾ ಗಾಂಧಿ ಅವರಿಗೆ ಎಸ್.ಎಂ.ಕೃಷ್ಣ ಬೇಕಾದವರಾಗಿದ್ದರೂ, ಗಾಂಧಿ ಕುಟುಂಬದ ನಿಷ್ಠರ ಪಡೆಗೆ ಬೇಕಿರಲಿಲ್ಲ. ಕೃಷ್ಣ ಅವರು ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದರೂ, ಜಾಗತೀಕರಣವನ್ನು ಎನ್‌ಕ್ಯಾಶ್ ಮಾಡಬಲ್ಲ ಅವರ ಜಾಣ್ಮೆ, ದೇಶದ ವಿವಿಧ ರಾಜ್ಯಗಳಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬರಲು ಕೃಷ್ಣ ಅವರು ನೀಡಿದ ಕೊಡುಗೆ, ಗಾಂಧಿ ನಿಷ್ಠ ಪಡೆಗೆ ಮತ್ತೊಬ್ಬ ಪಿ.ವಿ.ನರಸಿಂಹರಾಯರು ಎದ್ದು ನಿಲ್ಲಬಹುದು ಎಂಬ ಭಾವನೆ ಮೂಡಿಸಿತು. ಹೀಗಾಗಿ ಪ್ರಧಾನಿ ಹುದ್ದೆಯ ರೇಸಿನಿಂದ ಎಸ್. ಎಂ.ಕೃಷ್ಣ ಸೈಡ್‌ಲೈನಿಗೆ ಸರಿದರು. ಮುಂದೆ ಕೃಷ್ಣ ಅವರ ಬಗೆಗಿದ್ದ ಸೋನಿಯಾ ಅಭಿಮಾನ ಅವರಿಗೆ ಮಹಾರಾಷ್ಟ್ರದ ರಾಜ್ಯಪಾಲ ಹುದ್ದೆ, ಕೇಂದ್ರ ವಿದೇಶಾಂಗ ಹುದ್ದೆಗಳನ್ನು ದೊರಕಿಸಿಕೊಟ್ಟಿತಾದರೂ, ಕರ್ನಾಟಕಕ್ಕೆ ಎರಡನೇ ಬಾರಿ ದಕ್ಕಬಹುದಾಗಿದ್ದ ಪ್ರಧಾನ ಮಂತ್ರಿ ಹುದ್ದೆ ಕೂದಲೆಳೆಯ ಅಂತರದಲ್ಲಿ ತಪ್ಪಿ ಹೋಗಿತ್ತು.

ಕೊನೆಯ ಮಾತು: ೨೦೦೪ರಲ್ಲಿ ಪ್ರಧಾನಿ ಹುದ್ದೆಯ ವಿಷಯ ಬಂದಾಗ ಎಸ್.ಎಂ.ಕೃಷ್ಣ ಅವರ ಹೆಸರು ಚರ್ಚೆಗೆ ಬಂದಿತ್ತು ಅಂತ ಸ್ವತಃ ಮನಮೋಹನ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಿದ್ದರು.

” ಸೋನಿಯಾ ಗಾಂಧಿ ಅವರ ಕಣ್ಣಲ್ಲಿ ಪ್ರಧಾನಿ ಹುದ್ದೆಯ ಕ್ಯಾಂಡಿಡೇಟ್ ಆಗಿ ಎಮರ್ಜ್ ಆಗಿದ್ದ ಕೃಷ್ಣ ಅವರ ಹೆಸರು ಚರ್ಚೆಗೆ ಬಂದಾಗ, ಹೈಕಮಾಂಡ್‌ನ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದರು. ಇಂತಹ ವಿರೋಧಕ್ಕೆ ಅವರು ನೀಡಿದ ಕಾರಣವೆಂದರೆ, ೨೦೦೪ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸೋತಿದೆ ಎಂಬುದು. ತಮ್ಮ ರಾಜ್ಯದಲ್ಲೇ ಪಕ್ಷವನ್ನು ಮೇಲಕ್ಕೆತ್ತಲಾಗದ ಎಸ್.ಎಂ.ಕೃಷ್ಣ ದೇಶದ ಪ್ರಧಾನಿ ಹುದ್ದೆಗೆ ಪರಿಗಣಿಸಲ್ಪಟ್ಟರೆ ಭಾರೀ ವಿರೋಧ ವ್ಯಕ್ತವಾಗುತ್ತದೆ ಎಂಬುದು ಈ ನಾಯಕರು ಕೊಟ್ಟ ಕಾರಣ. ಪರಿಣಾಮ ಕೃಷ್ಣ ಅವರ ಹೆಸರು ಹಿಂದೆ ಸರಿದು ಆರ್ಥಿಕ ತಜ್ಞ ಮನಮೋಹನ ಸಿಂಗ್ ಅವರ ಹೆಸರು ಮುಂಚೂಣಿಗೆ ಬಂತು” .

ಆಂದೋಲನ ಡೆಸ್ಕ್

Recent Posts

ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ: ಗುಂಡು ಹಾರಿಸಿಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. ವಿರಾಜಪೇಟೆ ಹೊರವಲಯದ ಅರಮೇರಿ ಬಳಿಯ ನಾಲ್ಕನೇ ರಸ್ತೆಯಲ್ಲಿ…

28 mins ago

ಟಾಕ್ಸಿಕ್‌ ಚಿತ್ರಕ್ಕೆ ಮತ್ತೊಂದು ಸಂಕಷ್ಟ: ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಕೆ

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಟಾಕ್ಸಿಕ್‌ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಟಾಕ್ಸಿಕ್‌ ಚಿತ್ರದ ವಿರುದ್ಧ ಮಕ್ಕಳ ಹಕ್ಕುಗಳ…

49 mins ago

ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ಘೋಷಣೆ ಕೂಗಿದ್ದ ಮಹಿಳೆ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಜೈ ಬಾಂಗ್ಲಾ ಎಂದು ದೇಶ ವಿರೋಧ ಘೋಷಣೆ ಕೂಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಬ್ಬಗೋಡಿ ಠಾಣೆ ಪೊಲೀಸರು…

1 hour ago

ನಟ ಕಿಚ್ಚ ಸುದೀಪ್‌ ವಿರುದ್ಧ ಮತ್ತೊಂದು ದೂರು ದಾಖಲು

ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಮತ್ತು ಅದರ ನಿರೂಪಕ ನಟ ಕಿಚ್ಚ ಸುದೀಪ್‌ ವಿರುದ್ಧ…

2 hours ago

ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವು

ಹಾಸನ: ಕಾಡಾನೆ ದಾಳಿಗೆ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಮೋಗಲಿ ಗ್ರಾಮದಲ್ಲಿ…

2 hours ago

ಓದುಗರ ಪತ್ರ: ಚಾ.ಬೆಟ್ಟ: ಮೂಲ ಸ್ವರೂಪಕ್ಕೆ ಧಕ್ಕೆಯಾಗದಿರಲಿ

ಚಾಮುಂಡಿ ಬೆಟ್ಟದಲ್ಲಿ ಪ್ರಸಾದ ಯೋಜನೆಯಡಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹಾಗೂ ಪ್ರಜ್ಞಾವಂತ…

6 hours ago