ಬದಲಾವಣೆ ಎನ್ನುವುದು ಜಗದ ನಿಯಮ ಎನ್ನುವ ನಾಣ್ಣುಡಿ ಈಗ ರಾಜಕೀಯ ರಂಗದಲ್ಲಿ ನಿರಂತರವಾಗಿ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ವಿಧಾನಸಭೆಗಳಿಗೆ ನಡೆದ ಚುನಾವಣೆ ಈ ಮೂರು ಪ್ರಮುಖ ರಾಜ್ಯಗಳಲ್ಲಿ ತಂದಿರುವ ಬದಲಾವಣೆಯ ಕಡೆಯೇ ಎಲ್ಲರ ನೋಟ. ಪಶ್ಚಿಮ ಬಂಗಾಳದಲ್ಲಿ ೩೫ ವರ್ಷಗಳ ಸಿಪಿಐ (ಎಂ) ನೇತೃತ್ವದ ಎಡ ಪಕ್ಷಗಳು ಮತ್ತು ೧೫ ವರ್ಷಗಳ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಆಡಳಿತ ಅಂತ್ಯಗೊಂಡಿದೆ. ಅಚ್ಚರಿ ಎನ್ನುವಂತೆ ಅನ್ಯಧರ್ಮಗಳನ್ನು ವಿಶೇಷವಾಗಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮಗಳನ್ನು ದ್ವೇಷಿಸುವ ಬಿಜೆಪಿಯನ್ನು ಬಂಗಾಳದ ಜನತೆ ಈ ಬಾರಿ ತಮ್ಮನ್ನಾಳುವ ಪಕ್ಷವನ್ನಾಗಿ ಆಯ್ದುಕೊಂಡಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಸಿದ್ಧಾಂತದ ಕಾಂಗ್ರೆಸ್, ಎಡಪಕ್ಷಗಳ ಮತ್ತು ಟಿಎಂಸಿ ಆಳ್ವಿಕೆಯನ್ನು ಬಂಗಾಳದ ಮತದಾರರು ಈ ಚುನಾವಣೆಯಲ್ಲಿ ತಿರಸ್ಕರಿಸಿ, ರಾಷ್ಟ್ರವಾದದ ಹೆಸರಿನಲ್ಲಿ ಕೇವಲ ಹಿಂದುತ್ವದ ರಾಜಕಾರಣ ಮಾಡುವ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ.
ಸಂವಿಧಾನದ ಮೇಲೆ ಪ್ರಮಾಣ ವಚನ ತೆಗೆದುಕೊಂಡಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಎಲ್ಲರನ್ನೂ ಸಮನಾಗಿ ನೋಡುವ ಬದಲಿಗೆ ಹಿಂದುಗಳು ಮಾತ್ರ ತಮ್ಮ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಸ್ಲಿಮರು ಟಿಎಂಸಿಗೆ ಮತ ನೀಡಿದ್ದಾರೆ. ಹಾಗಾಗಿ ತಾವು ತಮ್ಮ ಅಧಿಕಾರವನ್ನು ಹಿಂದುಗಳಿಗಾಗಿ ಮಾತ್ರ ಬಳಸುವ ಮಾತನ್ನಾಡಿರುವುದು ಇಂದಿನ ರಾಜಕಾರಣ ಎತ್ತ ಸಾಗುತ್ತಿದೆ ಎನ್ನುವ ಬಗೆಗೆ ಸಹಜ ಆತಂಕ ಉಂಟು ಮಾಡುತ್ತಿದೆ. ಹೀಗಾಗಿ ಬಿಜೆಪಿ ಆಡಳಿತದ ಮುಂದಿನ ನಡೆ ಹೇಗಿರುತ್ತದೆ ಎನ್ನುವುದನ್ನು ಗಮನಿಸಬೇಕಿದೆ.
ಈ ಬಾರಿಯ ಚುನಾವಣೆ ದೇಶದ ಗಮನ ಸೆಳೆದದ್ದು ಪಶ್ಚಿಮ ಬಂಗಾಳದ ಜೊತೆಗೆ ಮುಖ್ಯವಾಗಿ ತಮಿಳುನಾಡಿನಲ್ಲಾಗಿರುವ ರಾಜಕೀಯ ಕ್ರಾಂತಿ. ಈ ಬದಲಾವಣೆಯು ರಾಜ್ಯದಲ್ಲಿ ಹೊಸದೊಂದು ದಾರಿಯನ್ನು ಕಂಡುಕೊಂಡಿದೆ. ದ್ರಾವಿಡ ಪಕ್ಷಗಳ ಅಧಿಕಾರ ಸದ್ಯಕ್ಕೆ ಅಂತ್ಯಗೊಂಡಿದೆ. ೧೯೬೭ರಿಂದ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಆ ಪಕ್ಷದಲ್ಲಿ ೧೯೭೨ರಲ್ಲಿ ಒಡಕು ಉಂಟಾಗಿ ಅಂದಿನ ಜನಪ್ರಿಯ ನಟ ಎಂ. ಜಿ. ರಾಮಚಂದ್ರನ್ ನೇತೃತ್ವದಲ್ಲಿ ಎಐಎಡಿಎಂಕೆ ಆಗಿ ಮತ್ತೊಂದು ಪಕ್ಷ ಟಿಸಿಲೊಡೆಯಿತು. ಈ ೪೯ ವರ್ಷಗಳಲ್ಲಿ ಆ ಎರಡು ಪಕ್ಷಗಳೇ ತಮಿಳುನಾಡನ್ನು ಆಳುತ್ತಾ ಬಂದವು. ಈ ಎರಡೂ ಪಕ್ಷಗಳ ನಾಯಕತ್ವದಲ್ಲಿ ಭಿನ್ನಾಭಿಪ್ರಾಯ ಇದ್ದುದನ್ನು ಬಿಟ್ಟರೆ ಎರಡೂ ಪಕ್ಷಗಳು ತಮ್ಮ ತಮ್ಮ ಆಳ್ವಿಕೆಯಲ್ಲಿ ತಮಿಳುನಾಡಿನ ಹಿತಾಸಕ್ತಿಯನ್ನು ಎಂದೂ ನಿರ್ಲಕ್ಷಿಸಿಲ್ಲ ಎನ್ನುವುದನ್ನು ದ್ರಾವಿಡ ಪಕ್ಷಗಳ ಆಡಳಿತವನ್ನು ವಿರೋಧಿಸುವ ಜನರೂ ಒಪ್ಪಿಕೊಳ್ಳುತ್ತಾರೆ.
ಈ ಎರಡೂ ಪಕ್ಷಗಳ ಆಡಳಿತವು ಡಿಎಂಕೆ ನೇತೃತ್ವದಲ್ಲಿ ಎಂ. ಕರುಣಾ ನಿಧಿಯವರಾಗಲಿ ಮತ್ತು ಎಐಎಡಿಎಂಕೆ ನೇತೃತ್ವದ ಆಳ್ವಿಕೆಯಲ್ಲಿ ಜಯಲಲಿತಾ ಅವರಾಗಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಮತ್ತು ಬಿಜೆಪಿಯ ಜೊತೆ ಒಂದಲ್ಲಾ ಒಂದು ಕಾಲದಲ್ಲಿ ಈ ಪಕ್ಷಗಳ ಆಡಳಿತದಲ್ಲಿ ಭಾಗಿಯಾಗಿ ತಮ್ಮ ರಾಜ್ಯದ ಹಕ್ಕನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯ್ದುಕೊಂಡಿರುವುದನ್ನು ನಿರಾಕರಿಸಲಾಗದು. ಕೇಂದ್ರ ಸರ್ಕಾರದಿಂದ ನ್ಯಾಯಬದ್ಧವಾಗಿ ಸಿಗಬೇಕಾದ ಅನುದಾನವನ್ನು ತಮ್ಮ ರಾಜಕೀಯ ಶಕ್ತಿಯಿಂದ ಪಡೆದುಕೊಂಡಿರುವುದನ್ನು ತಳ್ಳಿಹಾಕಲಾಗದು.
ಕೇಂದ್ರದಲ್ಲಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಆಡಳಿತದಿಂದ ಮಾತ್ರ ಸ್ಟಾಲಿನ್ ಮುಂದಾಳತ್ವದ ಡಿಎಂಕೆ ಸರ್ಕಾರ ತಮ್ಮ ರಾಜ್ಯಕ್ಕೆ ಸಿಗಬೇಕಾದ ಅನುದಾನ ಮತ್ತು ನ್ಯಾಯಕ್ಕಾಗಿ ಗಟ್ಟಿ ನಿಲುವಿನಿಂದ ಹೋರಾಡಿದೆ. ಬಿಜೆಪಿ ಆಡಳಿತವು ಹಿಂದಿ ಹೇರಿಕೆ ವಿಷಯದಲ್ಲಿ ನಡೆಸಿದ ಕಾರ್ಯತಂತ್ರವನ್ನು ಡಿಎಂಕೆ ಆಡಳಿತವು ವಿರೋಧಿಸಿ ಬಿಜೆಪಿ ಸರ್ಕಾರವನ್ನು ಎದುರು ಹಾಕಿಕೊಂಡು ನಿಂತ ಪಕ್ಷ ಬದ್ಧತೆಯನ್ನು ಯಾರೂ ಶಂಕಿಸಲಾರರು. ಕೇಂದ್ರವು ೨೦೨೧ರಿಂದ ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯನ್ನು ವಿರೋಽಸಿಕೊಂಡು ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ತಳ್ಳಿಹಾಕಿ ದ್ವಿಭಾಷಾ ನೀತಿಗೆ ಕಟಿಬದ್ಧವಾಗಿದೆ.
ಇಂತಹ ಗಟ್ಟಿತನದ ದ್ರಾವಿಡ ಪಕ್ಷಗಳ ಆಡಳಿತವನ್ನು ಈ ಚುನಾವಣೆಯಲ್ಲಿ ಕೊನೆಗಾಣಿಸಿ ಉದಿಸಿದ ಹೊಸದೊಂದು ಮೂರನೇ ಶಕ್ತಿ ರಾಜಕಾರಣ ಈಗ ತಮಿಳುನಾಡಿನಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಜನಪ್ರಿಯ ನಟ ಜೋಸೆಫ್ ವಿಜಯ್ ಎರಡು ವರ್ಷಗಳ ಹಿಂದೆ ತಮಿಳಗ ವಿಟ್ರಿ ಕಳಗಂ ಹೆಸರಿನಲ್ಲಿ ಹುಟ್ಟುಹಾಕಿದ ರಾಜಕೀಯ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಅಧಿಕಾರ ಹಿಡಿಯುತ್ತದೆ ಎಂದು ನಂಬಿದವರ ಸಂಖ್ಯೆ ತೀರಾ ಕಡಿಮೆ ಇತ್ತು. ರಾಜಕೀಯ ಕುಟುಂಬದ ಬೇರುಗಳಿಲ್ಲದೆ, ಜಾತಿ ಬಲವಿಲ್ಲದೆ ಕೇವಲ ನಟನೆಯಿಂದ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಾನ್ಯ ಗುಣದಿಂದಲೇ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದಿರುವ ವಿಜಯ್ ಸಾಧನೆ ಈಗ ದೇಶದಾದ್ಯಂತ ಚರ್ಚೆಯ ವಿಷಯವಾಗಿದೆ.
ವಿಜಯ್ ಅವರು ಕಳೆದ ಆರು ತಿಂಗಳಿಂದ ನಡೆಸುತ್ತಾ ಬಂದ ಸಾರ್ವಜನಿಕ ಸಭೆಗಳಲ್ಲಿ ಜನವೋ ಜನ. ಕಳೆದ ವರ್ಷ ಸೆಪ್ಟೆಂಬರ್ ೨೭ರಂದು ಕರೂರಿನಲ್ಲಿ ನಡೆದ ಬೃಹತ್ ಸಭೆಯಲ್ಲಿ ಕಾಲ್ತುಳಿತದಿಂದ ೪೧ ಮಂದಿ ಸಾವಿಗೀಡಾದಾಗ ಈ ಪಕ್ಷದ ಭವಿಷ್ಯ ಇಲ್ಲಿಗೇ ಮುಗಿಯಿತು. ಈ ಘಟನೆಯಿಂದ ವಿಜಯ್ ಚೇತರಿಸಿಕೊಳ್ಳುವುದು ಕಷ್ಟ ಎನ್ನಲಾದ ಲೆಕ್ಕಾಚಾರವೆಲ್ಲ ತಲೆಕೆಳಗಾಗಿ ಚುನಾವಣೆಯಲ್ಲಿ ೧೦೮ ಸ್ಥಾನಗಳನ್ನು ಪಡೆದು ಮಿತ್ರ ಪಕ್ಷಗಳ ಬೆಂಬಲದಿಂದ ಅಧಿಕಾರಕ್ಕೆ ಬಂದಿರುವುದು ಸಾಮಾನ್ಯ ಸಂಗತಿಯಲ್ಲ ಎನ್ನುವುದು ತಮಿಳುನಾಡು ರಾಜಕೀಯದಲ್ಲೊಂದು ಇತಿಹಾಸ ಸೃಷ್ಟಿಸಿದೆ.
ಸ್ಟಾಲಿನ್ ನೇತೃತ್ವದ ಡಿಎಂಕೆ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಎನ್ನುವ ನಂಬಿಕೆ ಬಹುತೇಕ ಎಲ್ಲ ರಾಜಕೀಯ ತಜ್ಞರ ಮತ್ತು ಚುನಾವಣೆ ಸಮೀಕ್ಷೆ ನಡೆಸಿದ ಸಂಸ್ಥೆಗಳ ಲೆಕ್ಕಾಚಾರವಾಗಿತ್ತು. ಅಚ್ಚರಿ ಎನ್ನುವಂತೆ ಚುನಾವಣೆಯಲ್ಲಿ ಟಿವಿಕೆಯು ಶೇಕಡಾವಾರು ೩೪. ೯೨ ಮತಗಳನ್ನು ಪಡೆದಿದೆ. ಅಧಿಕಾರದಲ್ಲಿದ್ದ ಡಿಎಂಕೆಯ ಶೇಕಡಾವಾರು ೨೪. ೧೯ ಮತ ಗಳಿಸಿದೆ. ವಿರೋಧಿ ಎಐಎಡಿಎಂಕೆ ಶೇ. ೨೧. ೨೧ ಮತಗಳನ್ನು ಪಡೆಯುವಷ್ಟಕ್ಕೆ ತೃಪ್ತಿಪಡಬೇಕಾಯಿತು. ಟಿಎಂಕೆಯು ಅಧಿಕಾರಕ್ಕೆ ಬರಲು ಹತ್ತು ಮಂದಿ ಶಾಸಕರ ಕೊರತೆಯ ಬಿಕ್ಕಟ್ಟನ್ನು ಒಂದು ವಾರ ಎದುರಿಸಿತ್ತಾದರೂ, ಅಧಿಕಾರ ಗಳಿಸಿ ವಿಶ್ವಾಸ ಮತ ಪಡೆಯುವಾಗ ಎಐಎಡಿಎಂಕೆ ಇಬ್ಭಾಗವಾಗಿ ೨೫ ಸದಸ್ಯರ ಬೆಂಬಲ ಅನಾಯಾಸವಾಗಿ ಸಿಕ್ಕಿದ್ದರಿಂದ ಮುಖ್ಯಮಂತ್ರಿ ವಿಜಯ್ ಆಡಳಿತ ಈಗ ಭದ್ರ ಬುನಾದಿಯ ಮೇಲೆ ಸ್ಥಾಪಿತವಾಗಿರುವುದನ್ನು ಗಮನಿಸಿದರೆ ರಾಜಕಾರಣ ಎನ್ನುವುದು ಹೀಗೆಯೇ ನಡೆಯುವುದು ಎನ್ನುವುದು ಸಾಬೀತುಗೊಂಡಿದೆ.
ಮುಖ್ಯಮಂತ್ರಿಯಾಗಿ ಅಧಿಕಾರದ ವಹಿಸಿಕೊಂಡ ದಿನವೇ ವಿಜಯ್ ತೆಗೆದುಕೊಂಡ ನಿರ್ಣಯಗಳಾದ ಎಲ್ಲರಿಗೂ ಗೃಹ ಬಳಕೆಯ ವಿದ್ಯುತ್ ನೀಡಿಕೆಯಲ್ಲಿ ೨೦೦ ಯುನಿಟ್ ಉಚಿತವಾಗಿ ನೀಡುವುದು. ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಪೊಲೀಸ್ ತಂಡ ರಚನೆ ಮತ್ತು ಶಾಲಾ ಕಾಲೇಜು ಹಾಗೂ ದೇವಾಲಯ, ಮಸೀದಿ ಹಾಗೂ ಚರ್ಚ್‌ಗಳ ೫೦೦ ಮೀ. ಒಳಗೆ ಇರುವ ೭೧೪ ಮದ್ಯದ ಅಂಗಡಿಗಳ ಬಂದ್ ಮತ್ತು ಜನರ ತೆರಿಗೆ ಹಣವನ್ನು ಸುರಕ್ಷಿತವಾಗಿ ಕಾಯ್ದುಕೊಳ್ಳುವುದು. ಅಂದರೆ ಭ್ರಷ್ಟಾಚಾರಕ್ಕೆ ಅಡಳಿತದಲ್ಲಿ ಅವಕಾಶ ಇಲ್ಲದಂತೆ ನೋಡಿಕೊಳ್ಳುವ ಭರವಸೆಯನ್ನು ನೀಡಿರುವ ಕ್ರಮ ಈಗ ಜನ ಮೆಚ್ಚುಗೆಯಾಗಿದೆ.
ಆದರೆ ಮುಂದೆ ಮುಖ್ಯಮಂತ್ರಿ ವಿಜಯ್‌ಗೆ ಕಠಿಣ ಸಮಸ್ಯೆಯಾಗಿರುವುದು ಚುನಾವಣೆ ದಿನಗಳಲ್ಲಿ ನೀಡಿರುವ ಆರು ಉಚಿತ ಕೊಡುಗೆಗಳ ಭರವಸೆಯನ್ನು ಜಾರಿಗೆ ತರುವುದು. ಇದಕ್ಕಾಗಿ ಕೇವಲ ರಾಜ್ಯದ ಸಂಪನ್ಮೂಲ ಸಾಲದು. ಕೇಂದ್ರ ಸರ್ಕಾರದ ನೆರವು ಮುಖ್ಯ. ದಳಪತಿ ವಿಜಯ್ ಅಧಿಕಾರಕ್ಕೆ ಬಂದ ನಂತರ ಅವರ ಆಡಳಿತ ಎಷ್ಟು ದಿನ ಇರಬಲ್ಲದು? ಆಡಳಿತದ ಅನುಭವ ಇಲ್ಲದ ಟಿವಿಕೆ ಅಧಿಕಾರದಲ್ಲಿ ಎಷ್ಟು ದಿನ ಉಳಿಯ ಬಲ್ಲದು ಎನ್ನುವ ಲೆಕ್ಕಾಚಾರ ಎಲ್ಲೆಡೆ ನಡೆದಿದೆ. ವಿಶೇಷವಾಗಿ ವಿಜಯ್ ಬಗ್ಗೆ ವೈಯಕ್ತಿಕವಾಗಿ ಹಲವು ಕಡೆಗಳಿಂದ ದಾಳಿ ನಡೆಯುತ್ತಿದೆ. ಆದರೆ ಮುಖ್ಯಮಂತ್ರಿ ವಿಜಯ್ ಈ ಯಾವ ವಿಷಯಗಳ ಬಗೆಗೂ ಮಾತನಾಡದೆ ಮೌನವಾಗಿ ತಮ್ಮ ಆಡಳಿತದ ಕಡೆ ಗಮನ ನೀಡಿರುವುದು ಅವರ ರಾಜಕೀಯ ಎದುರಾಳಿಗಳನ್ನೂ ಅಚ್ಚರಿಗೊಳಿಸಿದೆ.
ಮುಖ್ಯವಾಗಿ ವಿಜಯ್ ಅವರು ಅಧಿಕಾರ ವಹಿಸಿಕೊಂಡ ನಂತರ ಚುನಾವಣೆಯಲ್ಲಿ ಸೋತ ಮಾಜಿ ಮುಖ್ಯಮಂತ್ರಿ ಡಿಎಂಕೆಯ ನಾಯಕ ಎಂ. ಕೆ. ಸ್ಟಾಲಿನ್ ಅವರ ಬಳಿ ತೆರಳಿ ಸೌಜನ್ಯದ ಭೇಟಿ ನೀಡಿದ್ದು. ಅದೇ ರೀತಿ ಎಂಡಿಎಂಕೆಯ ನಾಯಕ ವೈಕೋ, ಪಿಎಂಕೆಯ ಧುರೀಣ ಅನ್ಬುಮಣಿ ರಾಮದಾಸ್, ಡಿಕೆಯ ಹಿರಿಯ ನಾಯಕ ೯೩ ವರ್ಷದ ಕೆ. ವೀರಮಣಿ ಮುಂತಾದವರನ್ನು ಭೇಟಿ ಮಾಡಿ ವಿಶ್ವಾಸ ಗಳಿಸಿರುವುದು ಅವರನ್ನು ಮೆಚ್ಚುವಂತೆ ಮಾಡಿರುವ ರಾಜಕೀಯ ನಡೆ. ದ್ವೇಷದ ರಾಜಕಾರಣವೇ ವೈಭವೀಕರಿಸಿರುವ ಈ ದಿನಗಳಲ್ಲಿ ಇಂತಹ ಸೌಜನ್ಯದ ನಡೆ ಪ್ರಜಾಪ್ರಭುತ್ವದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುವ ಆಶಯವನ್ನು ಹುಟ್ಟುಹಾಕಿದೆ.
ಇನ್ನು ಕಾಂಗ್ರೆಸ್ ಒಂದು ವಾರವೆಲ್ಲ ಕಸರತ್ತು ಮಾಡಿ ಕೇರಳಂಗೆ ವಿ. ಡಿ. ಸತೀಶನ್ ಅವರನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿರುವುದು ಎಲ್ಲರೂ ಒಪ್ಪುವ ನೇಮಕ ಎಂದೇ ಹೇಳಲಾಗುತ್ತಿದೆ. ಎಲ್ ಡಿಎಫ್ ಅಧಿಕಾರದಲ್ಲಿದ್ದಾಗ ಅವರು ವಿರೋಧ ಪಕ್ಷದ ನಾಯಕರಾಗಿ ಮಾಡಿರುವ ಒಳ್ಳೆಯ ಕೆಲಸ ಅವರ ನೆರವಿಗೆ ಬಂದಿದೆ. ಅವರು ಅಧಿಕಾರ ವಹಿಸಿಕೊಂಡ ಮೇಲೆ ಆಡಳಿತ ಯಾವ ದಿಕ್ಕಿನಲ್ಲಿ ಹೋಗಲಿದೆ ಎನ್ನುವುದು ಕುತೂಹಲಕಾರಿ. ಎಲ್‌ಡಿಎಫ್ ಆಡಳಿತ ವಿದ್ದಾಗಲೂ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನವಿದ್ದ ಬಿಜೆಪಿ ಈಗ ಮೂರಕ್ಕೆ ಹೆಚ್ಚಿರುವುದು ವಿಶೇಷ. ಆದರೆ ತಮಿಳುನಾಡು ಮತ್ತು ಕೇರಳಂನಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗಣನೀಯವಾಗಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎನ್ನುವ ವಿಶ್ವಾಸ ಬಿಜೆಪಿಯ ದೆಹಲಿ ನಾಯಕರಲ್ಲಿತ್ತು. ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡು ಕೇವಲ ೨೭ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರಲಿದೆ ಎಂಬುದಾಗಿ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯನ್ನು ಹೆಣೆಯುವಲ್ಲಿ ಸಿದ್ಧಹಸ್ತರು ಎನ್ನುವ ಗೃಹ ಸಚಿವ ಅಮಿತ್ ಶಾ ಅವರ ಕಾರ್ಯತಂತ್ರ ದಕ್ಷಿಣ ರಾಜ್ಯಗಳಲ್ಲಿ ಸುಲಭವಾಗಿ ನಡೆಯುವುದಿಲ್ಲ ಎನ್ನುವುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ. ದಕ್ಷಿಣ ರಾಜ್ಯಗಳಲ್ಲಿ ಬಿಜೆಪಿ ಏಕೆ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎನ್ನುವ ವಿಷಯದಲ್ಲಿ ಅದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.
ಇಂದೋರ್ : ಕೇರಳದ ತಿರುವನಂತಪುರಂನಿಂದ ದೆಹಲಿಗೆ ತೆರಳುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಭಾನುವಾರ…
ಚಂದ್ರಶೇಖರ್ ಮೂರ್ತಿ.ಕೆ.ಎಸ್ ಟೀ ಅಂದರೆ ಬೇರೆ, ಚಹ ಅಂದರೆ ಬೇರೆ ಎಂದು ಹೇಳಿ ಚಕಿತಗೊಳಿಸಿದವರು ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿ…
ಸಿರಿ ಮೈಸೂರು ಇದು ಬೇಸಿಗೆ ಕಾಲ. ಕೆಲ ದಿನಗಳ ಹಿಂದಷ್ಟೇ ಫ್ರಾನ್ಸ್‌ನಲ್ಲಿ ಕ್ಯಾನ್ಸ್ ಫಿಲಂ ಫೆಸ್ಟಿವಲ್ ನಡೆಯಿತು. ಜಗತ್ತಿನಾದ್ಯಂತದಿಂದ ಸುರಸುಂದರ…
ವಿಕ್ರಮ್ ಹತ್ವಾರ್ ಮೊನ್ನೆ ತಮಿಳುನಾಡಿನಲ್ಲಿ ಸಿನಿಮಾ ನಟ ವಿಜಯ್ ಚುನಾವಣೆಯಲ್ಲಿ ಸಾಧಿಸಿದ ಗೆಲುವಿನ ಕುರಿತು ಅಲ್ಲಿ ಯಾವೆಲ್ಲ ಸಂಗತಿಗಳು ಪ್ರಭಾವ…
ಬೆಂಗಳೂರು: ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ರೈತರ ಜಮೀನು ಕಿತ್ತುಕೊಂಡು ದಂಧೆ ನಡೆಸಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ…