ಅಂಕಣಗಳು

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಜೆಪಿ ಷಡ್ಯಂತ್ರದಿಂದ ಹಲವು ಪಕ್ಷಗಳು ಒಡಕಿನತ್ತ?

ದೇಶದ ಹಲವು ಕಡೆ ಮತ್ತೆ ಪಕ್ಷಾಂತರದ ಹಾವಳಿ ಶುರುವಾಗಿದೆ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಕೈವಾಡವಿಲ್ಲದೆ ಈ ಪಕ್ಷಾಂತರ ಪರ್ವ ನಡೆಯುತ್ತಿಲ್ಲ ಎನ್ನುವುದು ಬೆಳಕಿನಷ್ಟೇ ಸತ್ಯ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿಯ ವಿಧಾನಸಭಾ ಚುನಾವಣೆ ನಡೆದ ಮೇಲೆ ದೇಶದ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ಈ ರಾಜ್ಯಗಳಲ್ಲಿ ಚುನಾವಣೆ ಮೂಲಕ ಆದ ಬದಲಾವಣೆಯಷ್ಟೇ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಹದಿನೈದು ವರ್ಷ ಬಂಗಾಳವನ್ನು ಆಳಿದ ತೃಣ ಮೂಲ ಕಾಂಗ್ರೆಸ್ ಒಡೆದು ಹೋಳಾಗಿ ಅತಂತ್ರವಾಗುತ್ತಿದೆ. ಇತ್ತ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿಯ ಏಳು ಮಂದಿ ರಾಜ್ಯಸಭೆ ಸದಸ್ಯರು ಈಗಾಗಲೇ ಬಿಜೆಪಿಗೆ ಜಿಗಿದಿದ್ದು, ಆ ಪಕ್ಷದ ಅಸ್ತಿತ್ವವೇ ನಾಶವಾಗುತ್ತಿದೆ.

ಮಹಾರಾಷ್ಟ್ರದಲ್ಲಿ ೨೦೨೨ರಲ್ಲಿ ಶಿವಸೇನೆ ಇಬ್ಭಾಗವಾದಾಗ ಬಿಜೆಪಿ ಜೊತೆಗಿರದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತೆ ಪಕ್ಷಾಂತರದ ಹೊಡೆತಕ್ಕೆ ಗುರಿಯಾಗುತ್ತಿದೆ. ಬಿಜೆಪಿಯ ನಾಯಕರು, ಮುಖ್ಯವಾಗಿ ಪಕ್ಷದ ಆಗು ಹೋಗುಗಳೆಲ್ಲವನ್ನೂ ತೆರೆಮರೆಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಕುಳಿತು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹೆಚ್ಚೂ ಕಡಿಮೆ ಮುಗಿಸಿದ ಮೇಲೆ ಉದ್ಧವ್ ಠಾಕ್ರೆಯ ಶಿವಸೇನೆಯ ಮೇಲೆ ಅವರ ಕಾಕದೃಷ್ಟಿ ಬಿದ್ದಿದೆ. ಅಷ್ಟೇ ಅಲ್ಲದೆ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಒಡೆದು ಹೋಳು ಮಾಡುವ ಷಡ್ಯಂತರ ನಡೆದಿರುವ ಸೂಚನೆಗಳು ಕಾಣುತ್ತಿವೆ. ಇತ್ತ ೩೭ ಲೋಕಸಭೆ ಸದಸ್ಯರನ್ನು ಹೊಂದಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮೇಲೂ ಶಾ ಅವರ ಕೆಂಗಣ್ಣು ಬಿದ್ದಿದೆ ಎನ್ನಲಾಗಿದೆ.

ಹಿಂದಿನ ಸಂಸತ್ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಕ್ಷೇತ್ರ ಮರುವಿಂಗಡಣೆಯ ಜೊತೆಗೆ ಮತ್ತೊಮ್ಮೆ ಮಹಿಳಾ ಮಸೂದೆಗೆ ರಾಜ್ಯಸಭೆಯಲ್ಲಿ ಸೋಲುಂಟಾದ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಆ ಮಸೂದೆಯನ್ನು ಸುಲಭವಾಗಿ ಪಾಸು ಮಾಡಿಕೊಳ್ಳಲು ಈಗ ಪ್ರಾದೇಶಿಕ ಪಕ್ಷಗಳನ್ನು ನುಂಗಲು ಹೊರಟಿದೆ. ರಾಜ್ಯಸಭೆಯಲ್ಲಿನ ಟಿಎಂಸಿಯಲ್ಲಿಯೂ ಒಡಕು ಉಂಟಾಗಿದೆ. ಈಗಾಗಲೇ ಮೂವರು ರಾಜ್ಯಸಭೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರೆ, ಇನ್ನು ೨೦ ಮಂದಿ ಸದಸ್ಯರು ಒಬ್ಬರೂ ಸದಸ್ಯರಿಲ್ಲದ ತ್ರಿಪುರಾದ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾಗೆ ಸೇರ್ಪಡೆ ಆಗುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಲೋಕಸಭೆಯಲ್ಲೂ ಈ ಪಕ್ಷದಲ್ಲಿ ಬಿರುಕು ಬಿಟ್ಟಿದೆ. ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲೂ ಪಕ್ಷ ಒಡೆದು ಎರಡು ಹೋಳಾಗಿವೆ. ಇದರಿಂದಾಗಿ ಬಂಗಾಳದಲ್ಲಿ ಟಿಎಂಸಿ ಈಗ ಚಿಂದಿ ಚಿತ್ರಾನ್ನವಾಗಿದೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ತಮ್ಮ ಪಕ್ಷದ ಸಂಸತ್ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಪ್ರಯಾಸ ಮಾಡುತ್ತಿzರೆ. ಈಗಿನ ಪಕ್ಷಾಂತರ ವಿದ್ಯಮಾನವನ್ನು ಗಮನಿಸಿದರೆ ಯಾರು ಎಲ್ಲಿ ಹೋಗುತ್ತಾರೆ ಎಂದು ಹೇಳುವುದೇ ಕಷ್ಟವಾಗಿದೆ. ಅಂತೂ ಈ ಒಡಕೆಲ್ಲ ನಡೆಯುತ್ತಿರುವುದು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಭದ್ರಪಡಿಸಲು ಅಂದರೆ ತಾನು ಕಾಯ್ದೆ ಮೂಲಕ ತರಬೇಕೆಂದಿರುವ ಬದಲಾವಣೆಯನ್ನು ಸುಲಭವಾಗಿ ಮಾಡಿಕೊಳ್ಳಲು ಈ ಎಲ್ಲ ಅವತಾರಗಳನ್ನು ಬಿಜೆಪಿ ಮಾಡುತ್ತಿರುವುದು ರಹಸ್ಯವಾಗೇನೂ ಉಳಿದಿಲ್ಲ. ಬಹುತೇಕ ಪಕ್ಷಾಂತರವನ್ನು ಎನ್‌ಡಿಎ ಮೈತ್ರಿಕೂಟದಲ್ಲಿರುವ ಆಯಾ ರಾಜ್ಯಗಳ ಪಕ್ಷಗಳ ಜೊತೆ ವಿಲೀನವಾಗುವ ತಂತ್ರವನ್ನು ರೂಪಿಸಲಾಗಿದೆ. ಹಾಗಾಗಿ ಉದ್ಧವ್ ಠಾಕ್ರೆ ಶಿವಸೇನೆಯಿಂದ ಸಿಡಿದು ಬರುವ ಬಣ, ಏಕ್‌ನಾಥ್ ಶಿಂಧೆ ನೇತೃತ್ವದ ಪಕ್ಷದ ಜೊತೆ ವಿಲೀನವಾಗುವ ಪ್ರಕ್ರಿಯೆ ನಡೆದಿದೆ.

ಹೀಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದಿಂದ ಒಡೆದು ಹೋಳಾಗಿ ಹೋಗುವ ಬಣಗಳ ಸದಸ್ಯರ ಸದಸ್ಯತ್ವವನ್ನು ರದ್ದು ಮಾಡುವಂತೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಲಿಖಿತ ರೂಪದಲ್ಲಿ ಮನವಿ ಮಾಡುತ್ತಿದ್ದರೂ ಅದು ಕಾರ್ಯಗತವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಎಲ್ಲದರ ನಡುವೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ದ್ವೈವಾರ್ಷಿಕ ರಾಜ್ಯಸಭೆ ಚುನಾವಣೆ ನಡೆದಿದ್ದರೂ, ಬಿಜೆಪಿಗೆ ರಾಜ್ಯಸಭೆಯಲ್ಲಿ ಸ್ಪಷ್ಟ ಬಹುಮತ ಈಗ ಬಂದಾಗಿದೆ. ಯಾವುದೇ ಮಸೂದೆ ಸುಲಭವಾಗಿ ಅಂಗೀಕಾರವಾಗಬೇಕಾದರೆ ಆಳುವ ಪಕ್ಷ ಒಟ್ಟು ೨೪೫ ಸದಸ್ಯರ ಪೈಕಿ ಕನಿಷ್ಠ ೧೨೩ ಸದಸ್ಯರ ಬೆಂಬಲ ಬೇಕೇ ಬೇಕು. ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ೨೬ ಸ್ಥಾನಗಳ ಪೈಕಿ ಬಿಜೆಪಿ ೧೯ ಸ್ಥಾನಗಳನ್ನು ಗೆದ್ದುಕೊಂಡಿದೆ. ಈಗ ಆಳುವ ಪಕ್ಷದ ಬಲ ೧೫೦ಕ್ಕೆ ಮುಟ್ಟಿದೆ ಎಂದೇ ಹೇಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಟಿಎಂಸಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣ, ಆಮ್ ಆದ್ಮಿ ಪಾರ್ಟಿಯಲ್ಲಿ ನಡೆದ ಪಕ್ಷಾಂತರವನ್ನು ಗಮನಿಸಿದರೆ ಇಲ್ಲಿ ಯಾವುದೇ ಸಿದ್ಧಾಂತದ ಗೊಂದಲವೇನಿಲ್ಲ. ಸದಸ್ಯರನ್ನು ಖರೀದಿಸುವುದು ಮತ್ತು ಭ್ರಷ್ಟಾಚಾರ ಮತ್ತಿತರೆ ಕ್ರಿಮಿನಲ್ ಪ್ರಕರಣ ಹಾಗೂ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರೆ ಅಂತಹವರ ಮೇಲೆ ಸಿಬಿಐ, ಇಡಿ ದಾಳಿ ನಡೆಸುವ ಬೆದರಿಕೆಯ ಕಾನೂನು ಅಸವನ್ನು ಬಳಸುವ ಮೂಲಕ ಪಕ್ಷಗಳನ್ನು ಒಡೆಯುವ ತಂತ್ರಗಾರಿಕೆ ನಡೆದಿರುವುದಾಗಿ ಹೇಳಲಾಗುತ್ತಿದೆ.

ಪಕ್ಷಾಂತರ ಇತಿಹಾಸವನ್ನು ಗಮನಿಸಿದರೆ ೧೯೬೭ರಲ್ಲಿ ಹರಿಯಾಣದಲ್ಲಿ ಮೊದಲ ಬಾರಿಗೆಪಕ್ಷಾಂತರ ಆರಂಭವಾಗಿದ್ದು ಮುಂದೆ ಆ ಪಿಡುಗು ಹಲವು ರಾಜ್ಯಗಳಿಗೆ ವ್ಯಾಪಿಸಿತು. ಈ ಪಕ್ಷಾಂತರವನ್ನು ತಡೆಗಟ್ಟಲು ೧೯೮೫ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಪಕ್ಷಾಂತರ ನಿಷೇಧ ಮಸೂದೆಯನ್ನು ಜರಿಗೆ ತಂದು ಸಂವಿಧಾನದ ೫೨ನೇ ತಿದ್ದುಪಡಿ ಮಾಡಿದರು. ಆದರೂ ಹಲವು ಕಳ್ಳಮಾರ್ಗಗಳ ಮೂಲಕ ಪಕ್ಷಾಂತರ ಮುಂದುವರಿಯಿತು. ಪಕ್ಷಾಂತರ ಮಾಡುವ ಸದಸ್ಯರ ಸದಸ್ಯತ್ವ ರದ್ದಾಗುವ ಈ ಮಸೂದೆ ಜರಿಗೆ ಬಂದಿತಾದರೂ, ಪಕ್ಷವು ಒಡೆದು ಹೋಳಾದರೆ ಒಂದನೇ ಮೂರರಷ್ಟು ಬಹುಮತವಿದ್ದರೆ ಅದನ್ನು ಮಾನ್ಯ ಮಾಡಲಾಯಿತು. ಆದರೆ ಈ ಅವಕಾಶವನ್ನು ರಾಜಕೀಯ ಪಕ್ಷಗಳು ಧಾರಾಳವಾಗಿ ಬಳಸಿಕೊಳ್ಳಲು ಶುರು ಮಾಡಿದ್ದರಿಂದ ೨೦೦೩ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಒಂದನೇ ಮೂರರಷ್ಟು ಬಹುಮತದ ಬದಲಿಗೆ ಎರಡನೇ ಮೂರರಷ್ಟು ಬಹುಮತದೊಂದಿಗೆ ಒಡೆದು ಹೋಳಾಗಿ ಬರುವ ಗುಂಪು ಮತ್ತೊಂದು ಪಕ್ಷದ ಜೊತೆ ವಿಲೀನವಾಗಲು ಮತ್ತೆ ಸಂವಿಧಾನದ ೯೧ನೇ ತಿದ್ದುಪಡಿಯಾಗಿ ಸುಧಾರಿತ ಪಕ್ಷಾಂತರ ವಿರೋಧಿ ಮಸೂದೆಯನ್ನು ಅಂಗೀಕರಿಸಿತು.

ಇಷ್ಟಾದರೂ ಪಕ್ಷ ಒಡೆದು ಪಕ್ಷಾಂತರ ಮಾಡುವ ಕ್ರಿಯೆ ನಿಂತಿಲ್ಲ. ಪಕ್ಷಾಂತರವನ್ನು ಪರೋಕ್ಷವಾಗಿ ಬೆಂಬಲಿಸುತ್ತಾ ಸಕ್ರಿಯವಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಆಡಳಿತದಲ್ಲಿ ಬಿಜೆಪಿ ವಿರೋಧ ಪಕ್ಷಗಳು ಉಳಿಯುವುದೇ ಕಷ್ಟವಾಗಿರುವ ವಾತಾವರಣ ಸೃಷ್ಟಿಸಲಾಗುತ್ತಿರುವುದು ವಿಪರ್ಯಾಸ. ಹಾಗಾಗಿ ಪಕ್ಷಾಂತರ ಪಿಡುಗಿಗೆ ಕೊನೆ ಹಾಡುವ ಯಾವ ಸೂಚನೆಯೂ ಕಾಣದಿರುವುದು ಜನತಂತ್ರ ಮೌಲ್ಯಗಳು ನಾಶವಾಗುತ್ತಿರುವುದರ ಸ್ಪಷ್ಟ ಸೂಚನೆಯಂತಿದೆ.

ಸಂವಿಧಾನದ ನೈತಿಕತೆಯನ್ನು ಕಾಪಾಡಬೇಕೆಂದು ಆಗಾಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಒಡೆದು ಆಳುವ ಮತ್ತು ವಿರೋಧ ಪಕ್ಷಗಳ ದಮನ ಕಾರ್ಯವನ್ನು ನಿಲ್ಲಿಸಿ ಪಕ್ಷಾಂತರ ವಿರೋಧಿ ಮಸೂದೆಯನ್ನು ಗಟ್ಟಿ ಮಾಡುವ ಕಡೆ ಗಮನ ಕೊಡಬೇಕಾಗಿರುವುದು ಇಂದಿನ ತುರ್ತು. ಈಗ ನಡೆಯುತ್ತಿರುವ ಪಕ್ಷಾಂತರವನ್ನು ಗಮನಿಸಿದರೆ ಸಂವಿಧಾನದ ೧೦ನೇ ಶೆಡ್ಯೂಲ್ ನಿಷ್ಪ್ರಯೋಜಕವಾಗುತ್ತಿರುವುದು ದುರಂತ. ಸಂವಿಧಾನದ ನೈತಿಕತೆಯನ್ನು ಕಾಪಾಡಬೇಕಾದರೆ ಮತ್ತೆ ಪಕ್ಷಾಂತರ ವಿರೋಧಿ ಕಾಯ್ದೆಯ ಪುನರ್ ಪರಿಶೀಲನೆಯ ಅವಶ್ಯಕತೆ ಕಡೆಗೆ ಪ್ರಧಾನಿ ಮೋದಿ ಗಮನ ನೀಡಬೇಕಿದೆ. ಆದರೆ ಈ ಪುನರ್ ಪರಿಶೀಲನೆಯು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಿಂದ ಸಾಧ್ಯವೇ ಎನ್ನುವುದು ಊಹೆಗೂ ನಿಲುಕದ ಪ್ರಶ್ನೆ.

” ಬಿಜೆಪಿಯ ನಾಯಕರು, ಮುಖ್ಯವಾಗಿ ಪಕ್ಷದ ಆಗು ಹೋಗುಗಳೆಲ್ಲವನ್ನೂ ತೆರೆಮರೆಯಲ್ಲಿ ನಿಯಂತ್ರಿಸುತ್ತಾ ಬಂದಿರುವ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ ಕುಳಿತು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಹೆಚ್ಚೂ ಕಡಿಮೆ ಮುಗಿಸಿದ ಮೇಲೆ ಉದ್ಧವ್ ಠಾಕ್ರೆಯ ಶಿವಸೇನೆಯ ಮೇಲೆ ಅವರ ಕಾಕದೃಷ್ಟಿ ಬಿದ್ದಿದೆ. ಅಷ್ಟೇ ಅಲ್ಲದೆ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಒಡೆದು ಹೋಳು ಮಾಡುವ ಷಡ್ಯಂತರ ನಡೆದಿರುವ ಸೂಚನೆಗಳು ಕಾಣುತ್ತಿವೆ.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮೇಲ್ಮನೆಯ ಗಾಂಭೀರ್ಯ ಹೆಚ್ಚಿಸುವಂತೆ ಕಾರ್ಯನಿರ್ವವಹಿಸಲಿ

ರಾಜ್ಯ ವಿಧಾನ ಸಭೆಯಿಂದ ವಿಧಾನ ಪರಿಷತ್ತಿನ ಏಳು ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್ ೫ ಹಾಗೂ ಬಿಜೆಪಿ…

18 mins ago

ಓದುಗರ ಪತ್ರ: ದೇವಿಯ ನೇರ ದರ್ಶನ ಭಾಗ್ಯ ಕಲ್ಪಿಸಿ

ಆಷಾಢ ಶುಕ್ರವಾರಗಳಂದು ( ಜುಲೈ ೧೭, ೨೪, ೩೧, ಆಗಸ್ಟ್ ೭ ರಂದು ಆಷಾಢ ಶುಕ್ರವಾರಗಳು) ಸಾವಿರಾರು ಭಕ್ತರು ಚಾಮುಂಡಿ…

20 mins ago

ಓದುಗರ ಪತ್ರ: ಕಾಲಾವಕಾಶ ನೀಡಬೇಕು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸದ್ಯ,ಪೊಲೀಸ್ ಇಲಾಖೆಯ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿ ಲಿಖಿತ ಪರೀಕ್ಷಾ ದಿನಾಂಕ…

23 mins ago

ಶಿವಸ್ವಾಮಿಯವರೊಳಗಿನ ಕನ್ನಡದ ಮೇಷ್ಟ್ರು ನಿವೃತ್ತರಾಗುವುದಿಲ್ಲ

ಸಿ.ಎಂ.ನರಸಿಂಹಮೂರ್ತಿ ಪಾಠ ಪ್ರವಚನಗಳ ಜೊತೆ ವಿದ್ಯಾರ್ಥಿಗಳ ನೋವು ನಲಿವುಗಳಿಗೂ ಸ್ಪಂದಿಸುತ್ತಿದ್ದ ಈ ಗುರುಗಳ ಗುಣ ದೊಡ್ಡದು ಶಿವಸ್ವಾಮಿ ಎಂಬ ಕನ್ನಡದ…

3 hours ago

ಸಸ್ಯಾಹಾರಿಗಳ ದುಃಸ್ವಪ್ನ ಮಕಾವ್ ಮತ್ತು ಹಾಂಗ್‌ಕಾಂಗ್…

ಸಿರಿ ಮೈಸೂರು ಮಾಂಸಾಹಾರಿಗಳಿಗೆ ಮಾತ್ರ ಇಲ್ಲಿ ಸಿಗುವಷ್ಟು ವೈವಿಧ್ಯದ ಆಹಾರಗಳು ಇನ್ನೆಲ್ಲೂ ಸಿಗಲಾರವು. ನೀವೂ ಮಾಂಸಾಹಾರಿ ಆಗಿದ್ದರೆ ಹಾಂಗ್‌ಕಾಂಗ್‌ಗೆ ಬಂದಾಗ…

3 hours ago

ವಿಶ್ವ ಸಂಗೀತ ದಿನದಂದು ರಮ್ಮನಹಳ್ಳಿಯ ಜನಪದ ಗಾಯಕ ಅಂಕಪ್ಪನವರ ಕುರಿತು…

ಡಾ.ಮೈಸೂರು ಉಮೇಶ್ ಹತ್ತಾರು ಜನಪದ ಕಾವ್ಯ, ನೂರಾರು ತತ್ವಪದ ಮತ್ತು ಭಜನೆ ಪದಗಳನ್ನು ಹಾಡುವ ಅಂಕಪ್ಪ ಈ ನೆಲದ ಸಂಪತ್ತು …

3 hours ago