ಅಂಕಣಗಳು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ರಾಜ್ಯ ಕಾಂಗ್ರೆಸ್‌ನಲ್ಲಿ ಒಗ್ಗಟ್ಟು : ಬಿಜೆಪಿ -ಜಾ.ದಳ ನಾಯಕರಿಗೆ ಆಘಾತ

ಪರಿಷತ್ ಚುನಾವಣೆ ಫಲಿತಾಂಶದ ಮೂಲಕ ಭಿನ್ನಮತೀಯರು, ಮೈತ್ರಿ ಕೂಟಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ಡಿಕೆಶಿ

ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕುತೂಹಲದಿಂದ ಗಮನಿಸುತ್ತಿದ್ದ ಬಿಜೆಪಿ- ಜಾ.ದಳ ನಾಯಕರಿಗೆ ದೊಡ್ಡ ಮಟ್ಟದ ಆಘಾತವಾಗಿದೆ. ಅಂದ ಹಾಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ನಡೆಯುತ್ತಿದ್ದ ಅಧಿಕಾರ ಹಂಚಿಕೆಯ ಸಂಘರ್ಷ ಸಹಜವಾಗಿಯೇ ಬಿಜೆಪಿ-ಜಾ.ದಳ ಪಾಳೆಯಗಳಿಗೆ ಅಪ್ಯಾಯಮಾನವಾಗಿ ಕಾಣಿಸಿತ್ತು.

ಈ ಸಂಘರ್ಷದ ಫಲಿತಾಂಶವೇನೇ ಇರಲಿ, ಆದರೆ ಅದು ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ತಮ್ಮ ಮುಂದೆ ಗೆಲುವಿನ ಅಲೆಯನ್ನು ಸೃಷ್ಟಿಸಲಿದೆ ಎಂದು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದರು. ಆದರೆ ಇಂತಹ ತೀರ್ಮಾನದಲ್ಲಿ ಇದ್ದ ಒಂದು ಒಳಸುಳಿಯೂ ಗಮನಾರ್ಹವೇ. ಅದೆಂದರೆ ಬಿಜೆಪಿ ಪಾಳೆಯದಲ್ಲಿ ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರ ಪಾಳೆಯದಲ್ಲಿ ಒಂದು ಲೆಕ್ಕಾಚಾರ ದಟ್ಟವಾಗಿತ್ತು. ಅದೆಂದರೆ, ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳು ಸಹಜವಾಗಿಯೇ ತಮ್ಮ ಪಕ್ಷಕ್ಕೆ ದೊಡ್ಡ ಮಟ್ಟದ ಲಾಭ ತರಲಿದ್ದು,ರಾಜ್ಯದ ಮತದಾರರು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಸೈನ್ಯಕ್ಕೆ ಬಿಜೆಪಿಯೇ ಪರ್ಯಾಯ ಎಂಬ ಲೆಕ್ಕಾಚಾರಕ್ಕೆ ಬಂದಿರುತ್ತಾರೆ. ಹೀಗಾಗಿ ಜಾ.ದಳ ಜತೆ ಮೈತ್ರಿ ಇಲ್ಲದೆ ತಾವೇ ಸ್ವಯಂಬಲದ ಮೇಲೆ ಚುನಾವಣೆಗೆ ಹೋದರೆ ಅನುಕೂಲ ಎಂಬುದು.

ಕಾರಣ ಇವತ್ತಿನ ರಾಜಕೀಯ ಸನ್ನಿವೇಶನಗಳು ರೂಪುಗೊಳ್ಳುತ್ತಿರುವ ರೀತಿ ನೋಡಿದರೆ ಬಿಜೆಪಿಯೇ ಸ್ವಯಂ ಆಗಿ ನೂರಾ ಹದಿನಾಲ್ಕು ಎಂಬ ಮ್ಯಾಜಿಕ್ ನಂಬರ್ ಅನ್ನು ತಲುಪುತ್ತದೆ. ಅಷ್ಟಾದ ಮೇಲೆ ಜಾ.ದಳ ಜತೆಗಿನ ಮೈತ್ರಿಯಿಂದ ತಮಗೆ ಆಗಬೇಕಾಗಿದ್ದೇನು? ಒಂದು ವೇಳೆ ಈ ಮೈತ್ರಿಯನ್ನು ಉಳಿಸಿಕೊಂಡೇ ಚುನಾವಣೆಗೆ ಹೋದೆವು ಎಂದಿಟ್ಟುಕೊಳ್ಳಿ.ಆಗ ನಾವು ನೂರಾ ಹದಿನಾಲ್ಕು ಎಂಬ ಮ್ಯಾಜಿಕ್ ಸಂಖ್ಯೆಯನ್ನು ತಲುಪಿದರೂ ಮೈತ್ರಿ ಇದೆ ಎಂಬ ಕಾರಣಕ್ಕಾಗಿ ಪಕ್ಷದ ವರಿಷ್ಠರು ಜಾ.ದಳ ಪಕ್ಷಕ್ಕೆ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡಬಹುದು.

ಎಷ್ಟೇ ಆದರೂ ಭವಿಷ್ಯದಲ್ಲಿ ಹಳೆ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಮತ ಬ್ಯಾಂಕನ್ನು ಆಕರ್ಷಿಸುವ ಇಚ್ಛೆ ಮೋದಿ-ಅಮಿತ್ ಶಾ ಅವರಿಗಿದೆ.ಹೀಗೆ ಒಕ್ಕಲಿಗ ಮತ ಬ್ಯಾಂಕನ್ನು ಆಕರ್ಷಿಸಬೇಕು ಎಂದರೆ ಮಿತ್ರಪಕ್ಷ ಜಾ.ದಳದ ವಿಷಯದಲ್ಲಿ ಸ್ವಲ್ಪ ಹೆಚ್ಚು ಧಾರಾಳತನ ತೋರಿಸಬೇಕು.ಹೀಗೆ ಧಾರಾಳತನ ತೋರಿಸುವುದು ಎಂದರೆ ಕುಮಾರಸ್ವಾಮಿ ಅವರಿಗೆ ಸಿಎಂ ಹುದ್ದೆ ಬಿಟ್ಟುಕೊಡುವುದು.

ಆದರೆ ರಾಜ್ಯದಲ್ಲಿ ಬಿಜೆಪಿಯೇ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿರುವಾಗ ಜಾ.ದಳ ಜತೆಗಿನ ಮೈತ್ರಿಯ ಅಗತ್ಯವೇನು?ಎಂಬುದು ಯಡಿಯೂರಪ್ಪ ಪಾಳೆಯದ ಲೆಕ್ಕಾಚಾರ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಅದು ಜಾ.ದಳ ನಿಂದ ನಿರಂತರವಾಗಿ ಒಂದು ಅಂತರವನ್ನು ಕಾಪಾಡಿಕೊಂಡು ಬರುತ್ತಿತ್ತು.

ರಾಜ್ಯ ಸರ್ಕಾರದ ವಿರುದ್ಧದ ಕೆಲ ಹೋರಾಟಗಳಲ್ಲಿ ಬಿಜೆಪಿ- ಜಾ.ದಳ ಉಭಯ ಪಕ್ಷಗಳ ನಾಯಕರು ಒಗ್ಗೂಡಿ ಹೋರಾಡುವ ಕೆಲಸ ಕೆಲ ಬಾರಿ ಆಗುತ್ತಿತ್ತಾದರೂ ಒಟ್ಟಾರೆಯಾಗಿ ನೋಡಿದರೆ ಮಿತ್ರಪಕ್ಷಗಳು ಯಾವ ಮಟ್ಟದಲ್ಲಿ ಒಂದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಬೇಕಿತ್ತೋ? ಆ ಮಟ್ಟದಲ್ಲಿ ಬಿಜೆಪಿ-ಜಾ.ದಳ ನಾಯಕರು ಒಂದಾಗಿ ಕಾಣಿಸುತ್ತಿರಲಿಲ್ಲ.

ಇಂದು ಒಂದೆಡೆಯಾದರೆ ಮತ್ತೊಂದೆಡೆ ಜಾ.ದಳ ನಾಯಕರಲ್ಲಿ ಒಂದು ಅನುಮಾನವಿತ್ತು. ಅದೆಂದರೆ ದಿಲ್ಲಿಯ ಬಿಜೆಪಿ ನಾಯಕರು ಜಾ.ದಳ ಜತೆಗಿನ ಮೈತ್ರಿಯನ್ನು ಮನಸಾರೆ ಒಪ್ಪಿಕೊಂಡಿದ್ದರೂ ರಾಜ್ಯ ಬಿಜೆಪಿಯ ಒಂದು ಬಣದ ನಾಯಕರು ಜಾ.ದಳ ವಿರೋಧಿ ಮನಃಸ್ಥಿತಿಯನ್ನು ಇಟ್ಟುಕೊಂಡಿದ್ದಾರೆ ಎಂಬುದು.

ಹೀಗಾಗಿಯೇ ಜಾ.ದಳ ನಾಯಕರು ಕೂಡ ತುಂಬಾ ಎಚ್ಚರಿಕೆಯಿಂದ ಬಿಜೆಪಿಯ ಬೆಳವಣಿಗೆಗಳನ್ನು ಗಮನಿಸುತ್ತಲೇ ಇದ್ದರು. ಆದರೆ ಮೈತ್ರಿಯ ಒಳಗೆ ಇಂತಹದೊಂದು ಅಪನಂಬಿಕೆಯ ವಾತಾವರಣ ಇದ್ದರೂ ಮೇಲ್ನೋಟಕ್ಕೆ ಉಭಯ ಪಕ್ಷಗಳ ನಾಯಕರು ಮೈತ್ರಿಯ ವಿರುದ್ಧ ಅಪಸ್ವರದ ಮಾತನಾಡುತ್ತಿರಲಿಲ್ಲ. ಆದರೆ ಇಂತಹ ಪರಿಸ್ಥಿತಿಯಲ್ಲಿ ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆದ ಚುನಾವಣೆ ಮಿತ್ರಕೂಟದ ನಾಯಕರು ತಲ್ಲಣಗೊಳ್ಳುವಂತೆ ಮಾಡಿದೆ.

ಏಕೆಂದರೆ ಬಿಜೆಪಿ ಮತ್ತು ಜಾ.ದಳ ಪಕ್ಷದ ಹಲವು ಶಾಸಕರ ಮತಗಳನ್ನು ಅನಾಮತ್ತಾಗಿ ಕಿತ್ತು ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಕೊಡಿಸಿದ ಕಾಂಗ್ರೆಸ್ ನಾಯಕರು ಅದರಲ್ಲೂ ಮುಖ್ಯವಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಅವರು ರವಾನಿಸಿರುವ ಈ ಎಚ್ಚರಿಕೆಯ ಸಂದೇಶ ಬಿಜೆಪಿ-ಜಾ.ದಳ ನಾಯಕರಿಗೆ ಮಾತ್ರವಲ್ಲ, ಕಾಂಗ್ರೆಸ್ ಪಕ್ಷದಲ್ಲಿರುವ ಅವರ ವಿರೋಧಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮೊದಲಿಗೆ ಮಿತ್ರಕೂಟಕ್ಕೆ ತಲುಪಿರುವ ಸಂದೇಶವನ್ನೇ ಗಮನಿಸಿ. ಮಿತ್ರಕೂಟದ ನಾಯಕರಲ್ಲಿ ಯಾವ ಅಪನಂಬಿಕೆ ಕೆಲಸ ಮಾಡುತ್ತಿತ್ತೋ? ಅಂತಹ ಅಪನಂಬಿಕೆಯನ್ನು ಪಕ್ಕಕ್ಕಿಟ್ಟು ಒಗ್ಗೂಡಿ ನಡೆಯದಿದ್ದರೆ ಮುಂದಿನ ದಿನಗಳು ಮಿತ್ರಕೂಟದ ಪಾಲಿಗೆ ಕಬ್ಬಿಣದ ಕಡಲೆಯಾಗಲಿದೆ. ಏಕೆಂದರೆ ಉಭಯ ಪಕ್ಷಗಳ ಪ್ರಮುಖ ಶಾಸಕರನ್ನು ಕಾಂಗ್ರೆಸ್ ಕಡೆ ಸೆಳೆಯುವ ಡಿ.ಕೆ.ಶಿವಕುಮಾರ್ ಅವರ ತಂತ್ರ ಇದೇ ವೇಗದಲ್ಲಿ ಮುಂದುವರಿಯುವುದು ಶತಃಸ್ಸಿದ್ಧ. ಹೀಗಾಗಿ ಮುಂದಿನ ದಿನಗಳಲ್ಲಿ ತಮ್ಮ ಪಕ್ಷಗಳಿಗೆ ದೊಡ್ಡ ಮಟ್ಟದ ಘಾಸಿಯಾಗಬಾರದು ಎಂದಾದರೆ ಬಿಜೆಪಿ ಮತ್ತು ಜಾ.ದಳ ಮಧ್ಯದ ಅಪನಂಬಿಕೆಯ ವಾತಾವರಣ ತೊಲಗಬೇಕು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಗ್ಗೂಡಿ ಕಾಂಗ್ರೆಸ್ ಸೈನ್ಯವನ್ನು ಎದುರಿಸದಿದ್ದರೆ ಮಿತ್ರಕೂಟ ಸೋಲಿನ ಮೆಟ್ಟಿಲು ಹತ್ತುವುದು ಅನಿವಾರ್ಯವಾಗಬಹುದು. ಒಂದು ವೇಳೆ ಮುಂದಿನ ಚುನಾವಣೆಯಲ್ಲಿ ಈ ಎರಡೂ ಪಕ್ಷಗಳು ಸ್ವಯಂಬಲದ ಮೇಲೆ ಚುನಾವಣೆ ಎದುರಿಸುವ ಪರಿಸ್ಥಿತಿ ಬಂದರೆ ಅನುಮಾನವೇ ಬೇಡ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸೈನ್ಯ ಅದಕ್ಕೆ ಮರ್ಮಾಘಾತ ಉಂಟು ಮಾಡಲಿದೆ.

ಇನ್ನು ವಿಧಾನಪರಿಷತ್ತಿನ ಫಲಿತಾಂಶದ ಮೂಲಕ ಡಿ.ಕೆ.ಶಿವಕುಮಾರ್ ರವಾನಿಸಿರುವ ಮತ್ತೊಂದು ಸಂದೇಶ ಸ್ವಪಕ್ಷವಾದ ಕಾಂಗ್ರೆಸ್ ನ ನಾಯಕರಿಗೆ ಸಂಬಂಧಿಸಿದ್ದು. ಅರ್ಥಾತ್,ಮುಂದಿನ ದಿನಗಳಲ್ಲಿ ತಮ್ಮ ವಿರೋಽಗಳು ಭಿನ್ನಮತೀಯ ಶಾಸಕರ ಪಡೆ ಕಟ್ಟಿಕೊಂಡರೂ ಅವರನ್ನು ಎದುರಿಸಲು ತಾವು ಸಿದ್ಧ ಎಂಬುದು ಡಿ.ಕೆ.ಶಿವಕುಮಾರ್ ಅವರ ಸಂದೇಶ.

ಅರ್ಥಾತ್, ಇವತ್ತು ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿಯೇ ಮಿತ್ರಕೂಟದ ಹತ್ತಕ್ಕೂ ಹೆಚ್ಚು ಮಂದಿ ಶಾಸಕರನ್ನು ಕಾಂಗ್ರೆಸ್ ಕಡೆ ಸೆಳೆಯಲಾಗಿದೆ ಎಂದರೆ ಮುಂದಿನ ದಿನಗಳಲ್ಲಿ ತಮ್ಮ ಸರ್ಕಾರವನ್ನು ಉರುಳಿಸುವ ತಂತ್ರ ನಡೆದರೆ ಇದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿಪಕ್ಷಗಳ ಶಾಸಕರನ್ನು ಸೆಳೆಯಲು ತಾವು ಸಿದ್ಧ ಎಂಬುದು ಡಿ.ಕೆ.ಶಿವಕುಮಾರ್ ಅವರ ಸಂದೇಶ. ಹೀಗೆ ಅವರು ನೀಡಿರುವ ಸಂದೇಶ ಒಂದು ಕಡೆಯಿಂದ ಬಿಜೆಪಿ-ಜಾ.ದಳ ಮಿತ್ರಕೂಟಕ್ಕೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿರುವ ಅವರ ವಿರೋಧಿಗಳಿಗೆ ಎಚ್ಚರಿಕೆಯ ಗಂಟೆಯಂತೆ ಕಾಣಿಸಿಕೊಂಡಿದ್ದರೆ ಅದರಲ್ಲಿ ಅಸಹಜವೇನೂ ಇಲ್ಲ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಬಂಡಾಯದ ಹೊಳೆ

ಬಂಡಾಯದ ಹೊಳೆ ಮಿಂಚು ಹೂಮಳೆ ! ಅತಿವೃಷ್ಟಿ,ಅನಾವೃಷ್ಟಿಯ ವರದಿ ಬರೆಯುತಿಹರಂತೆ ಸಚಿವರು... ಒಂಬತ್ತು ಜಿಗಳಲ್ಲಿ ಮೋಡ ಕವಿದ ವಾತಾವರಣ, ಕಾರಣ,…

10 hours ago

ಓದುಗರ ಪತ್ರ: ಆತಂಕಕಾರಿ ವಿಚಾರ

ರಾಜ್ಯದಲ್ಲಿ ಎಂಟು ಸಾವಿರಕ್ಕೂ ಅಧಿಕ ಪೋಕ್ಸೊ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ…

10 hours ago

ಓದುಗರ ಪತ್ರ: ಜ್ಞಾಪಿಸಿಕೊಳ್ಳಬೇಕಿತ್ತು, ಕೃತಜ್ಞತೆ ಹೇಳಬೇಕಿತ್ತು…

ಮೈಸೂರಿನ ನಾರಾಯಣ ಶಾಸಿ ರಸ್ತೆಯಲ್ಲಿ, ಕಳೆದ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿವೇಕ ಸ್ಮಾರಕದ ಜಗವು ಕೆಲವು…

10 hours ago

ಮನುಕುಲದ ಏರಿಳಿತಗಳಿಗೆ ಸಾಕ್ಷಿದಾರರಾದ ಈ ಪೀಳಿಗೆಗಳು

ಶುಭಾ ಖಟಾವಕರ ಮ್ಹೆತ್ರಸ್ ಹೊಸ ಇತಿಹಾಸ ಸೃಷ್ಟಿಸಿದ ‘ಜೆನ್ ಝೀ’ ಪೀಳಿಗೆ ಸಂಪ್ರದಾಯಗಳನ್ನು ಪ್ರಶ್ನಿಸಿದ ‘ಬೂಮರ್ಸ್’ ಯುವಜನ ೧೯೦೦ ರಿಂದ…

10 hours ago

ನನೆಗುದಿಗೆ ಬಿದ್ದ ರಾಜ್‌ಘಾಟ್ ಮಾದರಿ ಗಾಂಧಿ ಸ್ಮಾರಕ

ಪುನೀತ್ ೩ ವರ್ಷ ಕಳೆದರೂ ಮುಗಿಯದ ಕಾಮಗಾರಿ: ಶೀಘ್ರ ಪೂರ್ಣಗೊಳಿಸಲು ಒತ್ತಾಯ ಮಡಿಕೇರಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾಷಣ ಮಾಡಿದ್ದ…

10 hours ago

ಅನಿಲ್ ಚಿಕ್ಕಮಾದುಗೆ ಕೈತಪ್ಪಿದ ಸಚಿವ ಸ್ಥಾನ; ಕ್ಷೇತ್ರದ ಜನರಿಗೆ ನಿರಾಸೆ

ಮಂಜು ಕೋಟೆ ಕೋಟೆ: ಸಚಿವ ಸ್ಥಾನ ದೊರೆತಿದ್ದರೆ ಹಿಂದುಳಿದ ಕ್ಷೇತ್ರದ ಅಭಿವೃದ್ಧಿಯಾಗುತ್ತಿತ್ತು ಎಂಬ ನಿರೀಕ್ಷೆ ಎಚ್.ಡಿ.ಕೋಟೆ: ಮೈಸೂರು ಪ್ರಾಂತ್ಯದ ನಾಯಕ…

11 hours ago