ಅಂಕಣಗಳು

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ : ಬಿಎಸ್‌ವೈಗೆ ಲಿಂಗಾಯತ ಶಕ್ತಿಯದ್ದೇ ಚಿಂತೆ

ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್‌ ಕಡೆಗೆ ವಾಲುವ ಆತಂಕ

ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಯಡಿಯೂರಪ್ಪ ಚಿಂತೆಯಲ್ಲಿದ್ದಾರೆ. ಅವರ ಚಿಂತೆಗೆ ಕಾರಣ ದಶಕಗಳ ಹಿಂದೆ ಬಿಜೆಪಿಯ ನೆಲೆಗಟ್ಟಿಗೆ ತಾವು ತಂದು ಕೂರಿಸಿದ ಲಿಂಗಾಯತ ಶಕ್ತಿ ಮುಂದಿನ ಚುನಾವಣೆಯ ಹೊತ್ತಿಗೆ ಛಿದ್ರವಾಗಲಿದೆಯೇ? ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕಡೆ ದೊಡ್ಡ ಮಟ್ಟದಲ್ಲಿ ವಾಲಲಿದೆಯೇ? ಎಂಬುದು.

ಅಂದಹಾಗೆ ಕರ್ನಾಟಕದ ನೆಲೆಯಲ್ಲಿ ಪ್ರಬಲ ಲಿಂಗಾಯತ ಮತ ಬ್ಯಾಂಕು ಕಾಲದಿಂದ ಕಾಲಕ್ಕೆ ಕಾಂಗ್ರೆಸ್ ಮತ್ತು ಜನತಾಪರಿವಾರಗಳ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಆದರೆ ಯಾವಾಗ ರಾಮಕೃಷ್ಣ ಹೆಗಡೆ ಜನತಾದಳದಿಂದ ಉಚ್ಚಾಟಿತರಾದರೋ ಮತ್ತು ಇದರ ಬೆನ್ನಲ್ಲೇ ಲೋಕಶಕ್ತಿ ಪಕ್ಷವನ್ನು ಕಟ್ಟಿ, ಆನಂತರ ಜೆಡಿಯು ಬಲಕ್ಕೆ ಕಾರಣರಾದರೋ ಇದಾದ ನಂತರ ಲಿಂಗಾಯತ ಮತ ಬ್ಯಾಂಕು ಮೆಲ್ಲಗೆ ಬಿಜೆಪಿ ಕಡೆ ವಾಲತೊಡಗಿತು.

ಇಂತಹ ವಾಲುವಿಕೆಗೆ ಬಿಜೆಪಿ ಜತೆ ರಾಮಕೃಷ್ಣ ಹೆಗಡೆ ಸಾಧಿಸಿದ ಸಖ್ಯವೇ ಮುಖ್ಯವಾದ ಕಾರಣ, ಪರಿಣಾಮ 2004 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮಿತ್ರಕೂಟ ಎಂಬತ್ತಾಲ್ಲು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಕರ್ನಾಟಕದ ಅತ್ಯಂತ ದೊಡ್ಡ ಶಕ್ತಿಯಾಗಿ ನೆಲೆ ಆಯಿತು.

ಆದರೆ ಹೆಗಡೆ ಅವರ ನಂತರ ತಾವು ಯಾರನ್ನು ನೆಚ್ಚಬೇಕು ಎಂಬ ಪ್ರಶ್ನೆ ಬಂದಾಗ ಲಿಂಗಾಯತ ಮತ ಬ್ಯಾಂಕಿನ ಕಣ್ಣಿಗೆ ಕಾಣಿಸಿದ್ದು ಯಡಿಯೂರಪ್ಪ. ಗಮನಿಸಬೇಕಾದ ಸಂಗತಿ ಎಂದರೆ ಅಲ್ಲಿಯವರೆಗೂ ಯಡಿಯೂರಪ್ಪ ಕರ್ನಾಟಕದ ರೈತ ನಾಯಕ ಎಂದು ಪ್ರತಿಬಿಂಬಿತರಾದವರು. ರೈತಪರ ಧೋರಣೆಯೇ ಅವರ ಹೋರಾಟದ ಪ್ರೇರಣೆಯಾದ್ದರಿಂದ ಅದು ಸಹಜವೂ ಆಗಿತ್ತು.

ಆದರೆ ಯಾವಾಗ 2004ರ ವಿಧಾನಸಭಾ ಚುನಾವಣೆ ಮುಗಿಯಿತೋ ಮತ್ತು ಇದಾದನಂತರ ಯಡಿಯೂರಪ್ಪ ಅವರನ್ನು ವಿಧಾನಸಭೆಯವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡಲು ಬಿಜೆಪಿಯ ಹಲವು ನಾಯಕರು ಅಡ್ಡಗಾಲು ಹಾಕಿದರೋ ಆಗ ಲಿಂಗಾಯತ ಮತ ಬ್ಯಾಂಕು ಯಡಿಯೂರಪ್ಪ ಅವರ ಬೆನ್ನಿಗೆ ನಿಂತುಕೊಂಡಿತು.

ಅವತ್ತು ಯಡಿಯೂರಪ್ಪ ಅವರ ಹುಟ್ಟುಹಬ್ಬದ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಲಿಂಗಾಯತ ಸಮುದಾಯದ ಮಠಾಧಿಪತಿಗಳು ನೇರವಾಗಿ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿದರು. ಯಾವಾಗ ಇದು ಸಾಧ್ಯವಾಯಿತೋ ಇದಾದ ನಂತರ ದಿಲ್ಲಿಯ ಬಿಜೆಪಿ ವರಿಷ್ಠರು ಎಚ್ಚೆತ್ತರು ಮತ್ತು ಕರ್ನಾಟಕದ ನೆಲೆಯಲ್ಲಿ ಯಾರು ಯಡಿಯೂರಪ್ಪ ಅವರಿಗೆ ಅಡ್ಡಗಾಲಾಗಿದ್ದರೋ ಅವರಿಗೆ ದಿಲ್ಲಿಯ ನೆಲೆ ತೋರಿಸಿ, ಕರ್ನಾಟಕದಲ್ಲಿ ಯಡಿಯೂರಪ್ಪ ಅವರ ನೆಲೆಯನ್ನು ಭದ್ರಗೊಳಿಸಿದರು. ಹೀಗೆ ಯಡಿಯೂರಪ್ಪ ಅವರ ನೆಲೆ ಭದ್ರವಾಗಲು ಲಿಂಗಾಯತ ಬ್ಯಾಂಕ್ ಮುಖ್ಯ ಕಾರಣ ಎಂಬುದು ನಿಸ್ಸಂದೇಹ.

ಅಂದ ಹಾಗೆ ಇಂತಹ ಲಿಂಗಾಯತ ಶಕ್ತಿಯ ಬೆಂಬಲ ಪಡೆದರೂ ಯಡಿಯೂರಪ್ಪ ಮಾತ್ರ ಕರ್ನಾಟಕದ ವಿವಿಧ ಜಾತಿ, ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಮತ್ತು ಈ ಹಾದಿಯಲ್ಲಿ ಒಂದಲ್ಲ, ಎರಡಲ್ಲ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಆದರೆ ಅಂತಹ ಯಡಿಯೂರಪ್ಪನವರಿಗೀಗ ಪ್ರಬಲ ಚಿಂತೆ ಶುರುವಾಗಿದೆ. ಮತ್ತು ಈ ಚಿಂತೆಯ ಮೂಲ ದಶಕಗಳ ಕಾಲ ಬಿಜೆಪಿಯ ಜತೆಗಿದ್ದಲಿಂಗಾಯತ ಮತ ಬ್ಯಾಂಕ್ ಛಿದ್ರವಾಗಲಿದೆಯೇ? ಎಂಬುದು.
ಅವರ ಇಂತಹ ಚಿಂತೆಗೆ ಕಾರಣವೆಂದರೆ ಇತ್ತೀಚೆಗೆ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆ, ಗಮನಿಸಬೇಕಾದ ಸಂಗತಿಯೆಂದರೆ ಕೆಲ ದಿನಗಳ ಹಿಂದೆ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ವಿವಾದಗ್ರಸ್ತ ಆಡಿಯೋ, ಈ ಆಡಿಯೋದಲ್ಲಿ ಅವರು ತಮ್ಮ ಆಪ್ತರ ಜತೆ ಮಾತನಾಡುತ್ತಾ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಹೇಗೆ ಕಿಕ್ ಔಟ್ ಮಾಡಬೇಕು? ಎಂಬ ಬಗ್ಗೆ ಮಾತನಾಡುತ್ತಾರೆ. ಒಮ್ಮಿಂದೊಮ್ಮೇಲೆ ಅವರನ್ನು ಕೆಳಗಿಳಿಸಿದರೆ
ಲಿಂಗಾಯತರು ಸಿಟ್ಟಿಗೇಳುತ್ತಾರೆ, ಹೀಗಾಗಿ ಅವರ ವಿರುದ್ಧ ರಾಜ್ಯದ ಎಲ್ಲ ಮೂಲೆಗಳಿಂದ ಅಪಸ್ವರ ಏಳುವಂತೆ ನೋಡಿಕೊಳ್ಳಬೇಕು ಮತ್ತು ಮೂರ್ನಾಲ್ಕು ತಿಂಗಳುಗಳ ಕಾಲ ಇದು ಮುಂದುವರಿಯುವಂತೆ ಮಾಡಿ ಅವರನ್ನು ಕೆಳಗಿಳಿಸಬೇಕು ಎನ್ನುತ್ತಾರೆ.

ಅಂದ ಹಾಗೆ ಯಾವಾಗ ಈ ಆಡಿಯೋ ಬಹಿರಂಗವಾಯಿತೋ ಇದಾದ ನಂತರ ಆ ಮಾಜಿ ಮುಖ್ಯಮಂತ್ರಿ ಅದನ್ನು ನಿರಾಕರಿಸಿದರು ಎಂಬುದು ಬೇರೆ ಮಾತು. ಆದರೆ ಅವರೇನೇ ನಿರಾಕರಿಸಿದರೂ ಸತ್ಯವೇನು? ಎಂಬ ವಿಷಯದಲ್ಲಿ ಯಡಿಯೂರಪ್ಪ ಅವರು ಒಂದು ತೀರ್ಮಾನಕ್ಕೆ ಬಂದಾಗಿದೆ.

ಅದರ ಪ್ರಕಾರ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿರುವುದು ಪಕ್ಷದ ಹಲವು ಹಿರಿಯ ನಾಯಕರಿಗೆ ಇಷ್ಟವಿಲ್ಲ. ಕಾರಣ ಇನ್ನೂ ಚಿಕ್ಕ ವಯಸ್ಸಿನ ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನದಲ್ಲಿ ನೆಲೆಯಾದರೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ನಿಸ್ಸಂಶಯವಾಗಿ ಅವರು ಬಿಜೆಪಿ ಸರ್ಕಾರದ ಮತ್ತು ಪಕ್ಷದ ಸಾರಥಿಯಾಗುತ್ತಾರೆ.

ಹಾಗೇನಾದರೂ ಆದರೆ ಮುಂದಿನ ಇಪ್ಪತ್ತು, ಇಪ್ಪತೈದು ವರ್ಷಗಳ ಕಾಲ ಅವರನ್ನು ನಾಯಕತ್ವದಿಂದ ಅಲುಗಾಡಿಸಲು ಸಾಧ್ಯವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಇಪ್ಪತ್ತು ವರ್ಷಗಳ ಕಾಲ ಎಂದರೆ
ಮುಖ್ಯಮಂತ್ರಿಯಾಗುವ ತನ್ನ ಕನಸು, ನಿರೀಕ್ಷೆಗಳೆಲ್ಲ ಸಮಾಧಿ ಸೇರುತ್ತವೆ ಎಂಬ ಲೆಕ್ಕಾಚಾರ ಈ ಹಿರಿಯ ನಾಯಕರದು.

ಹೀಗಾಗಿ ಅಧ್ಯಕ್ಷ ಸ್ಥಾನದಲ್ಲಿ ಅವರು ಭದ್ರವಾಗಿ ನೆಲೆಯಾದರೆ ತಾನೇ ಸಮಸ್ಯೆ? ಹೀಗಾಗಿ ಅವರನ್ನು ಪಟ್ಟದಿಂದ ಕೆಳಗಿಳಿಸಲು ಈ ನಾಯಕರು ನಿರಂತರವಾಗಿ ಸಂಚು ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಹಲವು ಶಾಸಕರು ಅಡ್ಡಮತದಾನ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಕಡೆ ವಾಲಿದ್ದು ಇದರ ಭಾಗ ಎಂಬುದು ಯಡಿಯೂರಪ್ಪ ಅವರ ಚಿಂತೆ.

ಅಂದ ಹಾಗೆ ಹೀಗೆ ಅಡ್ಡಮತದಾನ ನಡೆದು, ಪಕ್ಷದಲ್ಲಿ ಹಾಹಾಕಾರ ಶುರುವಾದರೆ ಏನಾಗುತ್ತದೆ? ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅಸಹಾಯಕತೆಯೇ ಇದಕ್ಕೆ ಕಾರಣ. ಪಕ್ಷದಲ್ಲಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಅವರ ಧೋರಣೆ ಕಾರಣ ಎಂದು ಅಪಪ್ರಚಾರ ನಡೆಯುತ್ತದೆ. ಹೀಗೆ ಮಾಡಿದ ನಂತರ ವಿಜಯೇಂದ್ರ ಅವರ ವಿರುದ್ಧ ಒಂದಿಲ್ಲೊಂದು ಆಪಾದನೆ ಹೊರಿಸಿ, ಅವರು ಪಕ್ಷದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದನ್ನೇ ಹೇಳುತ್ತಾ ಸುಳ್ಳನ್ನು ಸತ್ಯವೆಂದು ಸಾಬೀತು ಪಡಿಸಲು ಯತ್ನಿಸಬಹುದು.

ಇವತ್ತು ಇಂತಹ ಅಪಪ್ರಚಾರದ ಫಲ ಏನಾಗಿದೆಯೆಂದರೆ, ವಿಜಯೇಂದ್ರ ಅವರ ಪದಚ್ಯುತಿ ಸನ್ನಿಹಿತವಾಗಿದೆ ಎಂಬ ಭಾವನೆ ಮೂಡುವಂತೆ ಮಾಡಲಾಗಿದೆ ಮತ್ತು ಅವರು ತೆರವು ಮಾಡುವ ಜಾಗಕ್ಕೆ ಲಿಂಗಾಯತ ಸಮುದಾಯದ ಆ ನಾಯಕರು ಬರುತ್ತಾರೆ, ಈ ನಾಯಕರು ಬರುತ್ತಾರೆ ಎಂಬ ಮಾತು ದಟ್ಟವಾಗಿಯೇ ಕೇಳಿಸುತ್ತಿದೆ.

ಅಂದ ಹಾಗೆ ಯಡಿಯೂರಪ್ಪನವರಿಗೆ ಇರುವ ಮಾಹಿತಿಯೆಂದರೆ, ಯಾವ ಕಾರಣಕ್ಕೂ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ವಿಜಯೇಂದ್ರ ಅವರನ್ನು ಕೆಳಗಿಳಿಸುವುದಿಲ್ಲ. ಆದರೆ ಈಗ ಹರಡಿರುವ ಸುದ್ದಿಯಿಂದ ಏನಾಗುತ್ತದೆ? ಲಿಂಗಾಯತ ಸಮುದಾಯದ ಹಲವು ಒಳಪಂಗಡಗಳು ಚೆಲ್ಲಾಪಿಲ್ಲಿಯಾಗುತ್ತವೆ.

ಇವತ್ತು ವಿಜಯೇಂದ್ರ ಅವರ ಜಾಗಕ್ಕೆ ಪಂಚಮಸಾಲಿ ಸಮುದಾಯದ ಈ ನಾಯಕ ಬಂದು ಕೂರಬಹುದು, ಆ ನಾಯಕ ಬಂದು ಕೂರಬಹುದು ಎಂಬ ಮಾತು ದಟ್ಟವಾಗಿರುವುದರಿಂದ ಅಧ್ಯಕ್ಷ ಸ್ಥಾನದ ಕತೆ ಏನೇ ಆದರೂ ಲಿಂಗಾಯತ ಮತ ಬ್ಯಾಂಕಿನಲ್ಲಿ ಒಂದು ತಲ್ಲಣ ಶುರುವಾಗಿದೆ.

ಇಂತಹ ತಲ್ಲಣಗಳನ್ನು ಬಿಜೆಪಿ ವರಿಷ್ಠರು ತಡೆಯುವ ಪ್ರಯತ್ನ ಮಾಡದೆ ಹೋದರೆ ಸಹಜವಾಗಿಯೇ ಲಿಂಗಾಯತ ಮತ ಬ್ಯಾಂಕಿನ ಗಣನೀಯ ಪ್ರಮಾಣದ ಷೇರು ಆಡಳಿತಾರೂಢ ಕಾಂಗ್ರೆಸ್ ಪಕದ ಕಡೆ ವಾಲಬಹುದು. ಎಷ್ಟೇ ಆದರೂ ಇವತ್ತು ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಡೆದ ಸಂದರ್ಭದಲ್ಲಿ ಇಂತಹ ಹೋರಾಟ ತಪ್ಪು ಎಂದು ಮಾತನಾಡಿದ್ದರು. ಅದೇ ರೀತಿ ಒಂದಿಲ್ಲೊಂದು ಸಂದರ್ಭದಲ್ಲಿ ಅವರು ನಡೆದುಕೊಳ್ಳುತ್ತಿರುವ ರೀತಿ ಕೂಡ ಹಲವು ಲಿಂಗಾಯತ ಮಠಾಧಿಪತಿಗಳಿಗೆ ಆಕರ್ಷಣೀಯವಾಗಿ ಕಾಣುತ್ತಿದೆ.

ಇಂತಹ ಸಂದರ್ಭದಲ್ಲಿ ವಿಜಯೇಂದ್ರ ಅವರ ಮೇಲೆ ಸ್ವಪಕ್ಷೀಯರು ಮಾಡುವ ಪ್ರಹಾರ ಹೀಗೇ ಮುಂದುವರಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಲಿಂಗಾಯತ ಮತ ಬ್ಯಾಂಕಿನ ಮೇಜರ್ ಷೇರು ಬಿಜೆಪಿಯಿಂದ ಹೊರಹೋಗಬಹುದು. ಹಾಗಾದಾಗ ಸಹಜವಾಗಿಯೇ ಬಿಜೆಪಿಯ ಶಕ್ತಿ ಕುಗ್ಗುತ್ತದೆ ಮತ್ತು ಅದು ಅಧಿಕಾರದ ಕನಸು ಕಾಣಲು ಜಾದಳದ ಜತೆಗಿನ ಸಖ್ಯಕ್ಕೆ ಕಾದು ಕೂರುವುದು ಅನಿವಾರ್ಯವಾಗುತ್ತದೆ. ಹೀಗೆ ಅಗಿ ಬಿಡಬಹುದು ಎಂಬುದು ಇವತ್ತು ಯಡಿಯೂರಪ್ಪ ಅವರ ಅನುಮಾನ. ಹೀಗಾಗಿ ಅವರು ಲಿಂಗಾಯತ ಮತ ಬ್ಯಾಂಕಿನ ಹೆಜ್ಜೆಯ ಬಗ್ಗೆ ಮತ್ತು ಆ ಹೆಜ್ಜೆ ಬಿಜೆಪಿಯಿಂದ ಪಲ್ಲಟಗೊಳ್ಳಲು ತಮ್ಮ ಪಕ್ಷದ ನಾಯಕರು ನೀಡುತ್ತಿರುವ ಕೊಡುಗೆಯ ಬಗ್ಗೆ ಚಿಂತೆಗೀಡಾಗಿದ್ದಾರೆ. ಅವರ ಚಿಂತೆಗೆ ಈಗ ಮದ್ದು ಕೊಡುವವರು ಯಾರು?

Ph: 9448090990 Email: rtv1967@gmail.com

 

ಆಂದೋಲನ ಡೆಸ್ಕ್

Recent Posts

911 ಅಕ್ರಮ ವಿದೇಶಿ ನುಸುಳುಕೋರರು ಪತ್ತೆ : ಗೃಹ ಸಚಿವ ಖರ್ಗೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ 911 ಅಕ್ರಮ ವಿದೇಶ ನುಸುಳುಕೋರರು ಇರೋದಾಗಿ ಖುದ್ದು…

3 hours ago

ಕಾವೇರಿ ವನ್ಯಧಾಮದಲ್ಲಿ 8 ಕಳ್ಳಬೇಟೆ ಶಿಬಿರ ಧ್ವಂಸ : ಎಫ್‌ಐಆರ್ ದಾಖಲು, ತನಿಖೆ ಚುರುಕು

ಹನೂರು : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯ ವ್ಯಾಪ್ತಿಯಲ್ಲಿ ಆಗಸ್ಟ್ 15ರಿಂದ 19ರವರೆಗೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಇಲಾಖಾ…

4 hours ago

1984 ಸಿಖ್‌ ವಿರೋಧಿ ದಂಗೆ ಪ್ರಕರಣ; ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಸಜ್ಜನ್‌ ಕುಮಾರ್‌ ನಿಧನ

ಹೊಸದಿಲ್ಲಿ : ಸಾವಿರಾರು ಜನರ ಸಾವಿಗೆ ಕಾರಣವಾದ 1984ರ ಸಿಖ್ ವಿರೋಧಿ ಗಲಭೆಯ ಸಂದರ್ಭದಲ್ಲಿ ಐವರು ವ್ಯಕ್ತಿಗಳ ಹತ್ಯೆ ಪ್ರಕರಣದಲ್ಲಿ…

6 hours ago

ನಾರಾಯಣಸ್ವಾಮಿಗೆ ಕಮಾಂಡೆಂಟ್‌ ಬೆಳ್ಳಿ ಪದಕ

ಮೈಸೂರು: ನಗರದ ಸಂತ ಮರಿಯಾ ದಿ ಮಥಿಯಾಸ್ ಶಾಲೆಯ ಶಿಕ್ಷಕ ನಾರಾಯಣಸ್ವಾಮಿ ಅವರು ಮೈಸೂರು ೩ ಕರ್ನಾಟಕ ರಾಷ್ಟ್ರೀಯ ಕೆಡೆಟ್…

6 hours ago

ಹನೂರು ಎನ್‌ಕೌಂಟರ್‌ ಬೆನ್ನಲ್ಲೇ ಕಳ್ಳಬೇಟೆ ಕಡಿವಾಣಕ್ಕೆ ಸರ್ಕಾರದ ಚಿಂತನೆ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ ಆ ಭಾಗದಲ್ಲಿ ನಡೆಯುತ್ತಿರುವ ಕಳ್ಳಬೇಟೆ ಪ್ರಕರಣಗಳನ್ನು ರಾಜ್ಯ…

10 hours ago

ಟೋಲ್ ಬಳಿ ಸೈನ್ ಬೋರ್ಡ್‌ಗೆ ಖಾಸಗಿ ಬಸ್ ಡಿಕ್ಕಿ; ಇಬ್ಬರು ದುರ್ಮರಣ, 20ಕ್ಕೂ ಹೆಚ್ಚು ಜನರಿಗೆ ಗಾಯ

ಮಂಡ್ಯ: ಟೋಲ್‌ ಬಳಿಯ ಸೈನ್ ಬೋರ್ಡ್‌ಗೆ ಅತಿ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ…

11 hours ago