ಅಂಕಣಗಳು

ಸಂತ್ರಸ್ತ ಹೆಣ್ಣು ಮಕ್ಕಳ ಮಾರ್ಗದೀಪ ರೋಶಿಣಿ ಪರ್ವೀನ್

೧೪ರಲ್ಲಿ ಬಾಲವಧು, ೨೪ರಲ್ಲಿ ಬಾಲ್ಯವಿವಾಹ ವಿರೋಧಿ ಕಾರ್ಯಕರ್ತೆ!

ಬಿಹಾರದ ಕಿಷನ್‌ಗಂಜ್ ಜಿಲ್ಲೆಯ ಸಿಮಾಲ್ಬಾರಿ ಎಂಬ ಗ್ರಾಮದ ರೋಶಿಣಿ ಪರ್ವೀನ್ ಒಂಬತ್ತನೇ ತರಗತಿ ತಲುಪುವ ತನಕ ಆಕೆಯ ಬದುಕು ಎಲ್ಲಾ ಮಕ್ಕಳಂತೆ ಸಾಮಾನ್ಯವಾಗಿತ್ತು. ಆದರೆ, ಒಂಬತ್ತನೇ ತರಗತಿ ತಲುಪುತ್ತಲೇ ಅವಳ ಹೆತ್ತವರು ಅವಳಿಗೆ ಮದುವೆ ಪ್ರಸ್ತಾಪಗಳನ್ನು ಹುಡುಕತೊಡಗಿದರು. ರೋಶಿಣಿಗೆ ಮುಂದೆ ಕಲಿಯುವ ಆಸೆಯಿತ್ತು. ಆದರೆ, ಅವಳ ಹೆತ್ತವರು ಅವಳ ಯಾವ ವಿರೋಧ ವನ್ನೂ ಲೆಕ್ಕಿಸದೆ, ೧೪ನೇ ಪ್ರಾಯದಲ್ಲಿ ಅವಳನ್ನು ಮದುವೆ ಮಾಡಿ ಕೊಟ್ಟರು.

ರೋಶಿಣಿಯನ್ನು ಮದುವೆಯಾದ ವ್ಯಕ್ತಿಗೆ ೪೫ರ ಪ್ರಾಯ. ಅಂದರೆ, ಅವಳ ಪ್ರಾಯದ ಮೂರು ಪಟ್ಟು ಹೆಚ್ಚಿನ ವಯಸ್ಸು! ಬಾಲಕಿ ರೋಶಿಣಿಗೆ ಆಗ ಮದುವೆ ಅಂದರೆ ಏನೆಂಬುದೇ ತಿಳಿಯದ ವಯಸ್ಸು. ಅವಳ ಗಂಡ ಅವಳ ಮೇಲೆರಗಿದಾಗ ಅವಳು ನಖಶಿಖಾಂತ ನಡುಗಿ ಹೋದಳು! ಮೂರು ತಿಂಗಳ ಬಳಿಕ, ಅಲ್ಲಿರಲು ಸಾಧ್ಯವಾಗದೆ ರೋಶಿಣಿ ತನ್ನ ತವರು ಮನೆಗೆ ಹಿಂತಿರುಗಿದಳು. ಮನೆಗೆ ಬಂದ ಸ್ವಲ್ಪ ಸಮಯದಲ್ಲಿಯೇ ತಾನು ಬಸುರಿ ಎಂಬುದು ಅವಳಿಗೆ ತಿಳಿಯಿತು. ಆಗ ಅವಳಿಗೆ ೧೫ರ ಪ್ರಾಯ. ಕೆಲವು ತಿಂಗಳ ನಂತರ ಅವಳು ಒಂದು ಗಂಡು ಮಗುವಿಗೆ ಜನ್ಮ ನೀಡಿದಳು. ಒಂದು ವರ್ಷ ಕಳೆದ ಮೇಲೂ ರೋಶಿಣಿ ತನ್ನ ಗಂಡನ ಮನೆಗೆ ವಾಪಸ್ ಹೋಗಲು ತಯಾರಿರಲಿಲ್ಲ. ಆದರೆ, ಅವಳ ಹೆತ್ತವರ ಒತ್ತಾಯದ ಕಾರಣದಿಂದಾಗಿ ಬೇರೆ ದಾರಿಯಿಲ್ಲದೆ ಅವಳು ಮಗುವಿನೊಂದಿಗೆ ಗಂಡನ ಮನೆಗೆ ಹೋದಳು. ಆದರೆ, ಅವಳ ಗಂಡ ಅಷ್ಟು ಕಾಲ ತನ್ನಿಂದ ಬೇರೆಯಿದ್ದ ರೋಶಿಣಿಯನ್ನು ಮನೆಗೆ ಸೇರಿಸಿಕೊಳ್ಳಲು ನಿರಾಕರಿಸಿ, ಅವಳಿಗೆ ತಲಾಖ್ ನೀಡಿದ್ದ.

೧೫-೧೬ ಪ್ರಾಯದ ಮಕ್ಕಳು ಸಾಮಾನ್ಯವಾಗಿ ತಮ್ಮ ಮುಂದಿನ ಭವಿಷ್ಯಕ್ಕಾಗಿ ಶಾಲಾ ಕಾಲೇಜು ಶಿಕ್ಷಣದಲ್ಲಿ ಮುಳುಗಿರುತ್ತಾರೆ. ಆದರೆ ರೋಶಿಣಿ ಪರ್ವೀನ್ ಆ ಪ್ರಾಯದಲ್ಲಿ ಅತ್ತ ತವರು ಮನೆಯ ನೆಲೆ ತಪ್ಪಿ, ಇತ್ತ ಗಂಡನ ಮನೆಯ ಆಸರೆಯೂ ಇಲ್ಲದೆ ಒಂದು ಮಗುವಿನ ಜವಾಬ್ದಾರಿಯನ್ನು ಹೊತ್ತು ಅತಂತ್ರವಾಗಿ ನಿಂತಿದ್ದಳು. ಆಕೆಗೆ ಮುಂದೇನು ಮಾಡುವುದೆಂದು ತಿಳಿಯದಾಯಿತು. ಆದರೂ ಆಕೆ ಸೋಲೊಪ್ಪಿಕೊಳ್ಳಲು ತಯಾರಿರಲಿಲ್ಲ. ಒಂದು ದೃಢ ನಿಶ್ಚಯ ಮಾಡಿದ ರೋಶಿಣಿ, ತವರು ಮನೆ, ಗಂಡನ ಮನೆ ಹಾಗೂ ಸುತ್ತಲಿನ ಸಮಾಜದ ಕೆಂಗಣ್ಣು ಎಲ್ಲವನ್ನೂ ಧಿಕ್ಕರಿಸಿ, ತನ್ನ ಹಾಗೂ ತನ್ನ ಮಗುವಿನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಲು ತಯಾರಾದಳು. ಸ್ವತಂತ್ರವಾಗಿ ಬದುಕುವ ಮೊದಲ ಹೆಜ್ಜೆಯಾಗಿ ಉದ್ಯೋಗ ಹುಡುಕಲು ಶುರು ಮಾಡಿ, ಒಂದು ಶೋ ರೂಮಲ್ಲಿ ಚಿಕ್ಕದೊಂದು ಕೆಲಸವನ್ನು ಪಡೆದರು.

ರೋಶಿಣಿಗೆ ಈಗ ೨೫ ವರ್ಷ. ಈಗ ಆಕೆ ಕೇವಲ ತನ್ನ ಬದುಕನ್ನು ಮಾತ್ರ ಕಟ್ಟಿಕೊಂಡಿಲ್ಲ. ಬದಲಿಗೆ, ಬಿಹಾರ್‌ನಲ್ಲಿ ತನ್ನಂತಹ ನೂರಾರು ಸಂತ್ರಸ್ತ ಹೆಣ್ಣುಮಕ್ಕಳಿಗೆ ಬದುಕನ್ನು ಕಟ್ಟಿಕೊಟ್ಟು, ಅವರಿಗೆ ಮಾರ್ಗದೀಪವಾಗಿದ್ದಾರೆ. ಕೌಟುಂಬಕ ದೌರ್ಜನ್ಯಗಳಿಗೆ ಒಳಗಾಗುವ ಹೆಣ್ಣುಗಳಲ್ಲದೆ ಬಾಲ್ಯವಿವಾಹ ಹಾಗೂ ಬಲಾತ್ಕಾರವಾಗಿ ವೇಶ್ಯಾವಾಟಿಕೆಗೆ ದೂಡಲ್ಪಡುವ ಹೆಣ್ಣುಮಕ್ಕಳಿಗಾಗಿ ತನ್ನ ಬದುಕನ್ನು ಮೀಸಲಾಗಿರಿಸಿದ್ದಾರೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಅವರು ಸುಮಾರು ೬೦ ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಬಲಿಯಾಗುವುದನ್ನು ತಪ್ಪಿಸಿದ್ದಾರೆ.  ೨೦೧೮ರಲ್ಲಿ ರೋಶಿಣಿ ‘ಚೈಲ್ಡ್‌ಲೈನ್ ಇಂಡಿಯಾ ಫೌಂಡೇಶನ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಸೇರಿದರು. ಅಲ್ಲಿ ಅವರಿಗೆ ಬದುಕಿನಲ್ಲಿ ತನ್ನಂತೆಯೇ ದೌರ್ಜನ್ಯ, ಅನ್ಯಾಯಗಳಿಗೊಳಗಾದ ನೂರಾರು ಮಹಿಳೆಯರ ಸಂಪರ್ಕವಾಯಿತು.

ರೋಶಿಣಿಗೆ ತಾನೇಕೆ ಇಂತಹ ಹೆಣ್ಣುಗಳ ದನಿಯಾಗಬಾರದು ಎಂಬ ಆಲೋಚನೆ ಮೂಡಿದ್ದೇ ಅವರ ಬದುಕಿನ ಗತಿಯನ್ನು ಬದಲಾಯಿಸಿತು. ಒಮ್ಮೆ ಸ್ವತಃ ಸಂತ್ರಸ್ತೆಯಾಗಿದ್ದ ರೋಶಿಣಿ ಇಂದು ಅಂತಹ ನೂರಾರು ಸಂತ್ರಸ್ತೆಯರ ಪ್ರಬಲ ದನಿಯಾಗಿದ್ದಾರೆ. ರೋಶಿಣಿ ಬಡತನ ರೇಖೆಯ ಅಡಿ ಬರುವ ಸಂತ್ರಸ್ತ ಹೆಣ್ಣುಮಕ್ಕಳ ಕುಟುಂಬಗಳಿಗೆ ಇಂದಿರಾ ಆವಾಸ್ ಯೋಜನೆ ಮೊದಲಾದ ಸರ್ಕಾರಿ ಯೋಜನೆಗಳ ಸವಲತ್ತುಗಳನ್ನು ಪಡೆಯಲು ಸಹಕರಿಸುತ್ತಾರೆ. ಅವರನ್ನು ಕೌಶಲ ಯುವ ಪ್ರೋಗ್ರಾಂ, ಬ್ಯೂಟಿ ಪಾರ್ಲರ್, ಹೊಲಿಗೆ ಕೇಂದ್ರ ಮೊದಲಾದೆಡೆಗೆ ಸೇರಿಸಿ, ಅವರು ತಮ್ಮದೇ ಸ್ವಂತ ಜೀವನದ ದಾರಿಗಳನ್ನು ಕಂಡುಕೊಂಡು ಕುಟುಂಬಗಳಿಗೆ ಹೊರೆಯಾಗದಂತೆ ಜೀವನ ಮಾಡುವಲ್ಲಿ ನೆರವಾಗುತ್ತಿದ್ದಾರೆ.

ಪ್ರಾರಂಭದಲ್ಲಿ ರೋಶಿಣಿಗೆ ಇಂತಹ ಸಂತ್ರಸ್ತ ಹೆಣ್ಣು ಮಕ್ಕಳಿಗೆ ನೆರವಾಗುವುದು ಕಷ್ಟ ಸಾಧ್ಯ ಕೆಲಸವಾಗಿತ್ತು. ಅವರ ಪರಿಚಿತರು, ನೆರೆಹೊರೆಯವರು ಆಕೆಯನ್ನು ಗಂಡ ಬಿಟ್ಟವಳೆಂದು ಜರಿದರು. ನಡತೆಗೆಟ್ಟವಳೆಂದು ಹೀಯಾಳಿಸಿದರು. ಆದರೆ, ರೋಶಿಣಿ ಅಂತಹ ಯಾವುದೇ ಟೀಕೆ, ಬೈಗುಳ, ಆರೋಪಗಳಿಗೆ ಜಗ್ಗದೆ ತನ್ನಂತಹ ಇತರ ಸಂತ್ರಸ್ತ ಹೆಣ್ಣು ಮಕ್ಕಳಿಗೆ ಸಹಕರಿಸುವುದರಿಂದ ಹಿಂದೆ ಸರಿಯಲಿಲ್ಲ. ಹಲವು ವರ್ಷಗಳ ಪರಿಶ್ರಮದ ಫಲವಾಗಿ ಅವರು ಸಿಮಲ್ವಾರಿ, ಬಾಗಲ್ವಾರಿ, ಮಹೇಶ್‌ಭಾತ್ನ, ಕೊಚಧಾಮನ್, ಬಹದೂರ್ ಗಂಜ್ ಹಾಗೂ ದಿಘಲ್ಬಂಕ್ ಮೊದಲಾದ ಗ್ರಾಮಗಳ ಶಾಲೆಗಳು ಹಾಗೂ ಜನ ಸಮುದಾಯಗಳಲ್ಲಿ ೧೫ಕ್ಕೂ ಹೆಚ್ಚು ಹೆಣ್ಣು ಮಕ್ಕಳ ತಂಡಗಳನ್ನು ರಚಿಸಿ ತನ್ನ ಸಮಾಜಸೇವೆಗೆ ಭದ್ರ ಅಡಿಪಾಯವನ್ನು ಹಾಕಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ತಂಡಗಳ ಮೂಲಕ ಆ ಹಳ್ಳಿಗಳಲ್ಲಿ ಬಾಲ್ಯ ವಿವಾಹಕ್ಕೆ ತಯಾರಿ ನಡೆಯುತ್ತಿದ್ದರೆ ಅದನ್ನು ತಿಳಿದುಕೊಂಡು, ಅಂತಹ ಕುಟುಂಬದವರಿಗೆ ಬಾಲ್ಯ ವಿವಾಹದಿಂದ ಆ ಹುಡುಗಿಗೆ ಆಗುವ ಗಂಡಾಂತರ ಹಾಗೂ ಕಾನೂನಿನ ಬಗ್ಗೆ ತಿಳಿ ಹೇಳಿ ತಡೆಯುತ್ತಾರೆ. ಕೇವಲ ಹೀಗೆ ಅರಿವು ಮೂಡಿಸುವ ಮೂಲಕವೇ ರೋಶಿಣಿ ಹಲವಾರು ಬಾಲ್ಯವಿವಾಹಗಳನ್ನು ನಿಲ್ಲಿಸಿದ್ದಾರೆ. ತಿಳಿ ಹೇಳುವುದರಿಂದ ಪ್ರಯೋಜನವಾಗದಿದ್ದಾಗ ಜಿಲ್ಲಾಧಿಕಾರಿ, ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್, ಬ್ಲಾಕ್ ಡೆವಲಪ್ಮೆಂಟ್ ಆಫೀಸರ್, ಚೈಲ್ಡ್ ಡೆವಲಪ್ಮೆಂಟ್ ಪ್ರಾಜೆಕ್ಟ್ ಆಫೀಸರ್ ಮತ್ತು ಇತರ ಸಂಬಂಧಿತ ಅಧಿಕಾರಿಗಳ ಸಹಾಯದಿಂದ ಬಾಲಕಿಯ ಹೆತ್ತವರಿಗೆ ಕಾನೂನಿನ ತಿಳಿವಳಿಕೆ ಹಾಗೂ ಭಯ ಹುಟ್ಟಿಸಿ, ಬಾಲಕಿಗೆ ೧೮ ವರ್ಷ ಪ್ರಾಯ ತುಂಬುವವರೆಗೆ ಮದುವೆ ಮಾಡುವುದಿಲ್ಲ ಎಂದು ಅವರಿಂದ ಮುಚ್ಚಳಿಕೆ ಬರೆಸಿಕೊಳ್ಳುತ್ತಾರೆ. ಹೀಗೆ ರೋಶಿಣಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ೭೦-೮೦ ಬಾಲ್ಯವಿವಾಹಗಳನ್ನು ತಡೆದಿದ್ದಾರೆ

ಬಿಹಾರ ಬಾಲ್ಯವಿವಾಹಕ್ಕೆ ಕುಪ್ರಸಿದ್ಧವಾದ ಉತ್ತರ ಭಾರತದ ರಾಜ್ಯಗಳಲ್ಲೊಂದು. ‘ನ್ಯಾಷನಲ್ ಫ್ಯಾಮಿಲಿ ಹೆಲ್ತ್ ಸರ್ವೇ’ ಪ್ರಕಾರ ಬಿಹಾರದ ೨೦-೨೪ರ ಪ್ರಾಯದ ಪ್ರತಿ ಐದು ಜನ ಮಹಿಳೆಯರಲ್ಲಿ ಇಬ್ಬರು ೧೮ ತುಂಬುವ ಮೊದಲೇ ಮದುವೆಯಾದವರಾಗಿರುತ್ತಾರೆ. ಪ್ರಾಯ ತುಂಬುವ ಮೊದಲೇ ಮಾದುವೆಯಾಗುವ ಹೆಣ್ಣು ಮಕ್ಕಳ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ತಾನೊಂದು ಜೀವಂತ ಉದಾಹರಣೆ ಎಂದು ಹೇಳುವ ರೋಶಿಣಿ ಪರ್ವೀನ್, ತನ್ನ ಬದುಕಿನ ಕೊನೆ ತನಕವೂ ಬಾಲ್ಯವಿವಾಹ ಎಂಬ ಅನಿಷ್ಟದ ವಿರುದ್ಧ ಹೋರಾಡುತ್ತೇನೆ ಎಂದು ಹೇಳುತ್ತಾರೆ. ೨೦೨೨ರಲ್ಲಿ ವಿಶ್ವಸಂಸ್ಥೆಯು ರೋಶಿಣಿ ಪರ್ವೀನ್‌ರ ಈ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಜಿನೇವಾದಲ್ಲಿ ಅವರನ್ನು ಸನ್ಮಾನಿಸಿತು.

” ರೋಶಿಣಿಗೆ ಈಗ ೨೫ ವರ್ಷ. ಈಗ ಆಕೆ ಕೇವಲ ತನ್ನ ಬದುಕನ್ನು ಮಾತ್ರ ಕಟ್ಟಿಕೊಂಡಿಲ್ಲ. ಬದಲಿಗೆ, ಬಿಹಾರ್‌ನಲ್ಲಿ ತನ್ನಂತಹ ನೂರಾರು ಸಂತ್ರಸ್ತ ಹೆಣ್ಣುಮಕ್ಕಳಿಗೆ ಬದುಕನ್ನು ಕಟ್ಟಿಕೊಟ್ಟು, ಅವರಿಗೆ ಮಾರ್ಗದೀಪವಾಗಿದ್ದಾರೆ. ಕೌಟುಂಬಕ ದೌರ್ಜನ್ಯಗಳಿಗೆ ಒಳಗಾಗುವ ಹೆಣ್ಣುಗಳಲ್ಲದೆ, ಬಾಲ್ಯವಿವಾಹ ಹಾಗೂ ಬಲಾತ್ಕಾರವಾಗಿ ವೇಶ್ಯಾವಾಟಿಕೆಗೆ ದೂಡಲ್ಪಡುವ ಹೆಣ್ಣುಮಕ್ಕಳಿಗಾಗಿ ತನ್ನ ಬದುಕನ್ನು  ಮೀಸಲಾಗಿರಿಸಿದ್ದಾರೆ.”

-ಪಂಜು ಗಂಗೊಳ್ಳಿ 

ಆಂದೋಲನ ಡೆಸ್ಕ್

Recent Posts

ಹನೂರು: ಏಕಕಾಲದಲ್ಲೇ ಕಾಣಿಸಿಕೊಂಡ ಎರಡು ಚಿರತೆಗಳು

ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…

10 hours ago

ನಾಳೆಯೊಳಗೆ ಪ್ರಯಾಣಿಕರಿಗೆ ಮರುಪಾವತಿ ಮಾಡಿ: ಇಂಡಿಗೋ ಏರ್‌ಲೈನ್ಸ್‌ಗೆ ಗಡುವು ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…

10 hours ago

ಡಿ.ಕೆ.ಶಿವಕುಮಾರ್‌ ಸಂಪುಟದಲ್ಲಿ ನನಗೆ ಸಚಿವ ಸ್ಥಾನ ಬೇಡ: ಮಾಜಿ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…

11 hours ago

ನನ್ನನ್ನು ಹೆದರಿಸ್ತೀನಿ ಅಂದ್ರೆ ಅದು ಸಾಧ್ಯವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ

ಹಾಸನ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್‌ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…

11 hours ago

ಹೇಮಾವತಿ ಜಲಾಶಯದ ಬಳಿ ಉದ್ಯಾನವನ ನಿರ್ಮಿಸಲು ಸಿಎಂ ಸಿದ್ದರಾಮಯ್ಯ ಭರವಸೆ

ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…

12 hours ago

ಮೈಸೂರು| ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆ

ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…

12 hours ago