• ಭ್ರಮರಾಂಬ ಡಿ.ಹೊನ್ನುಗುಡಿ
ಇತ್ತೀಚೆಗೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗಿರುವವರ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಹೆಚ್ಚಾಗುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಹಿಂಸಿಸಿ ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಈ ನಡುವೆ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ಲಭ್ಯವಿದ್ದರೂ ಅವರಿಗೆ ನಾವು ಸೂಕ್ತವಾದ ಕಡೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸದಿರುವುದೂ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಲಿದೆ.
ನಮ್ಮ ಕುಟುಂಬದಲ್ಲೋ ಅಥವಾ ನಮ್ಮ ಆಪ್ತ ವಲಯದಲ್ಲೋ ಯಾರಾದರೂ ಮಾನಸಿಕ ಸಮಸ್ಯೆಯುಳ್ಳವರು ಇದ್ದರೆ ನಾವು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ನುರಿತ ಅಥವಾ ವೃತ್ತಿಪರ ವೈದ್ಯರ ಬಳಿ ಕರೆದುಕೊಂಡು ಹೋಗುವ ಬದಲು ಗುಡಿ, ಮಂದಿರ, ಚರ್ಚ್, ಮಸೀದಿಗಳಿಗೆ ಕರೆದುಕೊಂಡು ಹೋಗಿ ಒಂದು ವಿಭಿನ್ನ ರೀತಿಯ ಚಿಕಿತ್ಸೆ ಕೊಡಿಸಲು ಮುಂದಾಗುತ್ತೇವೆ. ಇದು ಅವರಿಗೆ ಮತ್ತಷ್ಟು ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ. ಇದಷ್ಟೇ ಅಲ್ಲದೆ ಸರಿಯಾಗಿ ಮಾನಸಿಕ ವೈದ್ಯರು ಎಂದು ದೃಢೀಕರಣಗೊಂಡಿರದ, ವೃತ್ತಿಪರರಲ್ಲದ ವೈದ್ಯರ ಬಳಿ ಕರೆದುಕೊಂಡು ಹೋಗುವುದರಿಂದ ಅವರ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ.
ಮಾನಸಿಕ ಸಮಸ್ಯೆಯುಳ್ಳವರಿಗೆ ಎಲ್ಲಿ ಚಿಕಿತ್ಸೆ ಕೊಡಿಸಬೇಕು?: ಮಾನಸಿಕ ಆರೋಗ್ಯ ಆರೈಕೆ ಕಾಯಿದೆ 2017ರ ಅಡಿಯಲ್ಲಿ ನೋಂದಣಿಯಾಗಿರುವ ಮಾನಸಿಕ ಆರೋಗ್ಯ ತಜ್ಞರ ಬಳಿ ಮಾನಸಿಕ ಸಮಸ್ಯೆಯುಳ್ಳವರನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಉತ್ತಮ. ಉದಾ: ಮನೋವೈದ್ಯರು, ಕ್ಲಿನಿಕಲ್ ಸೈಕಾಲಜಿಸ್ಟ್‌ಗಳು, ಮನೋ ಸಾಮಾಜಿಕ ಕಾರ್ಯಕರ್ತರು, ರಿಹಬಿಲಿಟೇಶನ್ ಸೈಕಾಲಜಿ ತಂಡದವರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬಹುದು. ಇದರ ಹೊರತಾಗಿ ನಾವು ಮಾನಸಿಕ ಸಮಸ್ಯೆಯುಳ್ಳವರನ್ನು ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಕರೆದುಕೊಂಡು ಹೋಗುವುದರಿಂದ ಅಲ್ಲಿ ಅವರಿಗೆ ಹೇಗೆ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಯದೆ ಅವರನ್ನು ಕಟ್ಟಿ ಹಾಕುವುದು, ಹೊಡೆಯುವುದು, ಕೂಡಿಹಾಕುವುದು ಮುಂತಾಗಿ ಹಿಂಸಿಸುವುದು ನಡೆಯುತ್ತದೆ. ಇದು ಪ್ರಮುಖವಾಗಿ ಅಲ್ಲಿ ಮಾನಸಿಕ ಸಮಸ್ಯೆಯುಳ್ಳವರ ಮಾನವ ಹಕ್ಕುಗಳ ಉಲ್ಲಂಘನೆಯಾಗಲಿದೆ.
ಮನೋರೋಗಿಗಳ ಮೇಲೆ ಮಾನವ ಹಕ್ಕುಗಳನ್ನು ಅವರಿಗೆ ನಿರಾಕರಿಸುವುದರಿಂದ ಅವರು ಒಬ್ಬಂಟಿ ಎಂಬ ಭಾವನೆ ಮೂಡಬಹುದು, ಅವರು ಸಮಾಜದಿಂದ ದೂರ ಉಳಿಯಬಹುದು. ಇದರಿಂದಾಗಿ ತನಗೆ ಯಾರೂ ಇಲ್ಲ ಎಂಬ ಖಿನ್ನತೆಗೆ ಒಳಗಾಗಿ ಅವರಲ್ಲಿ ಕಾಯಿಲೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು. ಜತೆಗೆ ಅವರು ಆತ್ಮಹತ್ಯೆಗೂ ಪ್ರಯತ್ನಿಸಬಹುದು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಪ್ತರಿಲ್ಲದೆ ಅವರು ಹಿಂಸೆಯನ್ನು ಅನುಭವಿಸಬಹುದು. ಈ ರೀತಿಯಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಅದು ಮನೋರೋಗಿಗಳ ಬದುಕಿನಲ್ಲಿ ಸಾಕಷ್ಟು ಪರಿಣಾಮವನ್ನು ಬೀರಲಿದೆ.
ಒಂದು ಕುಟುಂಬ ಎಂದಾಗ ನಮ್ಮಲ್ಲಿ ಯಾರಾದರೂ ಮಾನಸಿಕ ಸಮಸ್ಯೆಯುಳ್ಳವರು ಇದ್ದರೆ ಅಂತಹವರ ಆರೈಕೆ ಮಾಡುವುದು ಒಂದು ಬಹುಮುಖಿ ಕೆಲಸ. ಇದರಲ್ಲಿ ಮಾನಸಿಕ ಸಮಾಜ ಕಾರ್ಯಕರ್ತರ ಪಾತ್ರವೂ ಬಹಳ ಮುಖ್ಯವಾಗಿರುತ್ತದೆ. ಸೂಕ್ತ ಮಾರ್ಗದರ್ಶನ ನೀಡುವುದರಿಂದ ನಾವು ಮನೋರೋಗಿಗಳ ಆರೈಕೆ ಮಾಡಬಹುದು. ಮಾನಸಿಕ ಸಮಸ್ಯೆ ಉಳ್ಳವರು ತುಂಬಾ ಸೂಕ್ಷ್ಮವಾಗಿರುವುದರಿಂದ ಅವರಿಗೆ ನಾವು ಚುಚ್ಚು ಮಾತುಗಳನ್ನು ಆಡುವುದು, ನಿಂದನೆ ಮಾಡಬಾರದು. ಕುಟುಂಬ ಅವರನ್ನು ಉತ್ತಮವಾಗಿ ನೋಡಿಕೊಳ್ಳುವ ಮೂಲಕ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇದು ಕುಟುಂಬ ಮಾತ್ರವಲ್ಲದೇ ಸಮಾಜವೂ ಇಂತಹ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಗಳನ್ನು ಕಂಡಾಗ ಅವರನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಬೇಕು. ಅವರಿಗೆ ಸಹಾಯ ಮಾಡಿ ಸರಿಯಾದ ಚಿಕಿತ್ಸೆ ಕೊಡಿಸಬೇಕು. ಆದ್ದರಿಂದ ಒಮ್ಮೆ ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿ ಗುಣವಾಗಲು ಒಂದು ಕುಟುಂಬವಾಗಲಿ ಅಥವಾ ಸಮಾಜವಾಗಲಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಬೇಕು. ಅವರನ್ನು ಎಲ್ಲರೊಂದಿಗೆ ಬೆರೆಯಲು ಬಿಟ್ಟು, ಪ್ರೀತಿ ವಿಶ್ವಾಸದಿಂದ ಕಂಡಾಗ ಮಾತ್ರ ಅವರು ಗುಣವಾಗಲು ಸಾಧ್ಯ. ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿರುವ ನಾವು ಮಾನಸಿಕ ಸಮಸ್ಯೆಯುಳ್ಳ ವ್ಯಕ್ತಿಯನ್ನು ಕಂಡಾಗ ಅವರನ್ನು ಹಿಂಸಿಸಿ ಅವರ ಹಕ್ಕುಗಳನ್ನು ಕಸಿಯುವ ಬದಲು ಅವರು ಗುಣಮುಖರಾಗಿ ನಮ್ಮಂತೆಯೇ ಜೀವನ ಸಾಗಿಸಲು ಸಹಕರಿಸೋಣ.
b.honnugudi@gmail.com
ಹೊಸದಿಲ್ಲಿ: ಮಾಜಿ ಪ್ರಧಾನಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಹೆಚ್.ಡಿ. ದೇವೇಗೌಡರು ಶುಕ್ರವಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ…
ವಿಧಾನಸಭೆ : ರಾಜ್ಯದಲ್ಲಿರುವ ಮಹಾನಗರಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಚಾಲಕರು, ಲೋಡರ್ ಗಳು, ತ್ಯಾಜ್ಯ ಸಂಗ್ರಹಕಾರರು ಸೇರಿದಂತೆ ಇನ್ನಿತರೆ…
ಮೈಸೂರು : ಕಲರ್ಸ್ ಕನ್ನಡ ವಾಹಿನಿಯ ‘ಗಿಚ್ಚಿ ಗಿಲಿಗಿಲಿ ಜೂನಿಯರ‍್ಸ್’ ರಿಯಾಲಿಟಿ ಷೋಗಾಗಿ ಡಿ.20 ರಂದು ಬೆಳಿಗ್ಗೆ 11 ಗಂಟೆಗೆ…
ಬೆಳಗಾವಿ : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…
ಮೈಸೂರು : ಸಿನಿಮಾಗಳು ಮನರಂಜನೆಗಷ್ಟೇ ಸೀಮಿತವಾಗದೆ ಸಾಮಾಜಿಕ ಜವಾಬ್ದಾರಿಯುಳ್ಳ ಶಿಕ್ಷಣದ ಮಾಧ್ಯಮವಾಗಬೇಕು ಎಂದು ಖ್ಯಾತ ನಿರ್ದೇಶಕ ಬಿ.ಸುರೇಶ್ ಆಶಿಸಿದರು. ನಗರದ…
ಮೈಸೂರು : ಅಲ್ಪಸಂಖ್ಯಾತರ ಸಮುದಾಯ ವಾಸಿಸುವ ಸ್ಥಳಗಳಲ್ಲಿ ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕ ಪದ್ಧತಿಗಳ ದುಷ್ಪರಿಣಾಮಗಳ ಕುರಿತು ಅರಿವು ಕಾರ್ಯಕ್ರಮಗಳನ್ನು…