ಅಂಕಣಗಳು

ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳೇ ಹೆಚ್ಚಾದರೆ…

· ಪ್ರೊ.ಆರ್.ಎಂ.ಚಿಂತಾಮಣಿ

ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದರೆ ಶಿಕ್ಷಣ ಪಡೆದವರ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳುತ್ತೇವೆ. ನೌಕರರ ಪ್ರಾವಿಡೆಂಟ್ ಫಂಡ್ ಸಂಸ್ಥೆಯಲ್ಲಿ ಪಿ.ಎಫ್. ಖಾತೆಗಳ ಸಂಖ್ಯೆ ಹೆಚ್ಚಾಗುವುದಾದರೆ ಸಂಘಟಿತ ವಲಯದಲ್ಲಿ ಉದ್ಯೋಗ ಪಡೆದವರು ಹೆಚ್ಚಾಗಿರುತ್ತಾರೆ ಎಂದು ಪರಿಗಣಿಸುತ್ತೇವೆ. ರಾಷ್ಟ್ರೀಯ ಒಟ್ಟಾದಾಯ ಗಣನೀಯವಾಗಿ ಹೆಚ್ಚಾದರೆ ಅದರ ಪರಿಣಾಮವಾಗಿ ರಾಷ್ಟ್ರೀಯ ಸರಾಸರಿ ತಲಾ ಆದಾಯ (Per Capita Income) ಹೆಚ್ಚಾಗಿ ಆರ್ಥಿಕ ಬೆಳವಣಿಗೆಯಾಗುತ್ತದೆ ಪರಿಭಾವಿಸುತ್ತೇವೆ.

ಆದರೆ ದೇಶದ ಬಂದಿಖಾನೆಗಳಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದಕ್ಕೇನೆನ್ನಬೇಕು? ಅಪರಾಧಗಳು ಹೆಚ್ಚುತ್ತಿವೆ ಎನ್ನಬೇಕೇ? ಅಥವಾ ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಭಾವಿಸಬೇಕೆ? ನಮ್ಮ ಪೊಲೀಸ ರೇನಾದರೂ ಈವರೆಗೆ ಬೆಳಕಿಗೆ ಬಾರದ ಪ್ರಕರಣಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಯೆ? ನಮ್ಮ ಸಾಮಾಜಿಕ ಸ್ವಾಸ್ಥ್ಯ ಕಡಿಮೆಯಾಗುತ್ತಿದೆಯೆ? ಅಥವಾ ಎಲ್ಲದರಲ್ಲಿಯೂ ಒಂದಿಷ್ಟು ಸತ್ಯವಿದೆಯೇ?

ಇಷ್ಟೊಂದು ಪೀಠಿಕೆ ಹಾಕಲು ಕಾರಣವಿದೆ. ಇತ್ತೀಚೆಗೆ ನಮ್ಮ ದೇಶದಲ್ಲಿಯ ಜೈಲುಗಳ ಸ್ಥಿತಿಗತಿ ಬಗ್ಗೆ ನಮ್ಮ ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ (National Bureau of Crime Records of India) ವರದಿಯೊಂದನ್ನು ಪ್ರಕಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಕೈದಿಗಳ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಜೈಲುಗಳ ಅಧಿಕೃತ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳು ನಮ್ಮ ಕಾರಾಗೃಹಗಳಲ್ಲಿ ಇದ್ದುದು ಕಂಡು ಬಂದಿದೆ. 2018ರಿಂದ ಇದು ಇನ್ನೂ ಹೆಚ್ಚಾಗುತ್ತಿದ್ದು, ಆ ವರ್ಷ ಸಾಮರ್ಥ್ಯದ ಶೇ.117.6 ಇದ್ದದ್ದು 2022ರ ಹೊತ್ತಿಗೆ ಶೇ.131.4ಕ್ಕೆ ಏರಿದೆ. ಅಂದರೆ 1000 ಕೈದಿಗಳವಾಸಕ್ಕೆ ಅವಕಾಶವಿರುವ ಕಾರಾಗೃಹಗಳಲ್ಲಿ 1314 ಕೈದಿಗಳು ಇದ್ದಾರೆ. ಸುಮಾರು ಮೂರನೇ ಒಂದು ಭಾಗದಷ್ಟು ಜನ ಹೆಚ್ಚು. ಇದು ಇಡೀ ದೇಶದ ಸರಾಸರಿಯಾಗಿದ್ದರೆ (ಎಲ್ಲ ಕೇಂದ್ರೀಯ, ಜಿಲ್ಲಾ ಮತ್ತು ಇತರ ಕಾರಾಗೃಹಗಳಲ್ಲಿ) ಜಿಲ್ಲಾ ಜೈಲುಗಳಲ್ಲಿ ಇನ್ನೂ ಹೆಚ್ಚು ಶೇ.156.5 ಇರುತ್ತದೆ.

ಇನ್ನು ರಾಜ್ಯಗಳ ವಿಷಯಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕೈದಿಗಳಿದ್ದಾರೆ. ಆ ರಾಜ್ಯದಲ್ಲಿ ಕಾರಾಗೃಹಗಳ ಸಾಮರ್ಥ್ಯಕ್ಕಿಂತ ಎರಡು ಪಟ್ಟಿಗೂ ಹೆಚ್ಚು ಕೈದಿಗಳಿದ್ದಾರೆ (ಶೇ.207.6). ಇದು ಜಿಲ್ಲಾ ಕಾರಾಗೃಹಗಳ ಕತೆ ಮಾತ್ರ. ನಂತರದ ಸ್ಥಾನಗಳಲ್ಲಿ ಉತ್ತರಾಖಂಡ, ಪಶ್ಚಿಮ ಬಂಗಾಳ, ಮೇಘಾಲಯ ಮತ್ತು ಮಧ್ಯಪ್ರದೇಶಗಳಿದ್ದು, ಅನುಕ್ರಮವಾಗಿ ಶೇ.182.4, ಶೇ.181.5, ಶೇ.167.2 ಮತ್ತು ಶೇ.162.5ರಷ್ಟು ಕೈದಿಗಳು ಜಿಲ್ಲಾ ಸೆರೆಮನೆಗಳಲ್ಲಿದ್ದಾರೆ. ಉಳಿದಂತೆ ಕರ್ನಾಟಕವೂ (ಶೇ.114.5) ಸೇರಿದಂತೆ 16 ರಾಜ್ಯಗಳ ಜಿಲ್ಲಾ ಜೈಲುಗಳಲ್ಲಿ ಅವುಗಳ ಸಾಮರ್ಥ್ಯಕ್ಕೆ ಮೀರಿ (ಶೇ.100.0ಕ್ಕೂ ಹೆಚ್ಚು) ಕೈದಿಗಳಿದ್ದಾರೆ. ಉಳಿದ ಸೆರೆಮನೆಗಳಲ್ಲಿಯೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇರುತ್ತದೆ.

ವಿಚಾರಣಾಧೀನ ಕೈದಿಗಳೇ ಹೆಚ್ಚು: ಜೈಲುಗಳಲ್ಲಿರುವ ಕೈದಿಗಳಲ್ಲಿ ಎರಡು ವಿಧ. ನ್ಯಾಯಸ್ಥಾನದಲ್ಲಿ ಅಪರಾಧ ಖಚಿತಪಟ್ಟು ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅನುಭವಿಸುತ್ತಿರುವವರು ಒಂದು ಗುಂಪಾದರೆ, ಇನ್ನೊಂದು ವಿಚಾರಣಾಧೀನ ಕೈದಿಗಳದ್ದು.

ಶಿಕ್ಷಾರ್ಹ ಅಪರಾಧವೆಸಗಿದ್ದಾರೆಂದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲ್ಪಟ್ಟು ನ್ಯಾಯಾಧೀಶರ ಮುಂದೆ ಹಾಜರುಪಡಿಸಲ್ಪಟ್ಟು ನ್ಯಾಯಾಧೀಶರಿಂದ ಪ್ರಕರಣದ ವಿಚಾರಣೆ ಪೂರ್ಣಗೊಂಡು ಇತ್ಯರ್ಥವಾಗುವವರೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವವರೇ ವಿಚಾರಣಾಧೀನ ಕೈದಿಗಳು (Undertrials). ಇಂಥ ಕೈದಿಗಳ ಸಂಖ್ಯೆ ಹೆಚ್ಚಾಗಿದೆ ಎಂದರೆ ನ್ಯಾಯಾಲಯಗಳಲ್ಲಿ ಹೆಚ್ಚು ಶಿಕ್ಷಾರ್ಹ ಅಪರಾಧ ಪ್ರಕರಣಗಳ ವಿಚಾರಣೆಗಳು ನಡೆಯುತ್ತಿವೆ ಎಂದರ್ಥ. ಸಮಾಜದಲ್ಲಿ ವಿಭಿನ್ನ ಸ್ವಭಾವಗಳ ಮತ್ತು ಮಾನಸಿಕ ಸ್ಥಿತಿಗಳ ಜನರು ಇರುವುದರಿಂದ ತಪ್ಪುಗಳು ಮತ್ತು ಅಪರಾಧಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಇವುಗಳನ್ನು ನಿಯಂತ್ರಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲೆಂದೇ ಕಾಯ್ದೆಗಳು, ಪೊಲೀಸ್ ಇಲಾಖೆ, ನ್ಯಾಯಾಲಯಗಳು ಮತ್ತು ಸೆರೆಮನೆಗಳು ಇರುವುದು. ತಪ್ಪು ಮಾಡಿದರೆ ಶಿಕ್ಷೆಯಾಗುತ್ತದೆ ಎಂಬುದನ್ನು ಮುಂದಿನ ಪೀಳಿಗೆಗೆ ತೋರಿಸಿ ತಪ್ಪೆಸಗದಂತೆ ಪ್ರೇರೇಪಿಸುವುದು ಒಂದು ಸಾಮಾಜಿಕ ಉದ್ದೇಶ.

ಅಪರಾಧ ದಾಖಲೆಗಳ ಬ್ಯೂರೊ ಪ್ರಕಟಿಸಿರುವ ವರದಿಯಂತೆ ಇತ್ತೀಚಿನ ವರ್ಷಗಳಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳ ಅಂಕಿಸಂಖ್ಯೆಗಳನ್ನು (ಪ್ರತಿಶತ) ಇಲ್ಲಿರುವ ಸಂಖ್ಯಾ ಪಟ್ಟಿಯಲ್ಲಿ
ಗಮನಿಸಬಹುದು.

ಈ ವಿಚಾರಣಾಧೀನ ಕೈದಿಗಳ ಸಂಖ್ಯೆ ಕಡಿಮೆಯಾದರೆ ಕಾರಾಗೃಹಗಳ ಮೇಲಿನ ಒತ್ತಡ ತಾನೇ ಕಡಿಮೆಯಾಗುತ್ತದೆ. ಈಗ ವಿಚಾರಣೆಯಲ್ಲಿರುವ ಪ್ರಕರಣಗಳನ್ನು ನ್ಯಾಯಾಲಯಗಳ ನಿರ್ಧಾರಗಳಿಗೆ ಬಿಟ್ಟು ಮುಂದೆ ಸಮಾಜದಲ್ಲಿ ಅಪರಾಧಗಳನ್ನು ನಿಯಂತ್ರಿಸುವ ಜವಾಬ್ದಾರಿ ಸಮಾಜ, ಸರ್ಕಾರ ಮತ್ತು ಪ್ರಜ್ಞಾವಂತ ನಾಗರಿಕರು ಹೀಗೆ ಎಲ್ಲರ ಮೇಲೂ ಇರುತ್ತದೆ. ಅಪರಾಧಗಳು ಕಡಿಮೆಯಾದರೆ ಪೊಲೀಸರು ಕಾಯ್ದೆ ಸುವ್ಯವಸ್ಥೆಯ ತುರ್ತು ಕೆಲಸಗಳಲ್ಲಿ ತೊಡಗಬಹುದು.

ಅಪರಾಧ ತಡೆಯುವ ಪ್ರಯತ್ನಗಳಾಗಬೇಕು: ಭಾರತೀಯರು ಜಗತ್ತಿ ನಲ್ಲಿಯೇ ತಾಳ್ಮೆಗೆ ಹೆಸರಾದವರು. ಆದರೆ ಇತ್ತೀಚೆಗೆ ತಾಳ್ಮೆ ಕಳೆದು ಕೊಳ್ಳುತ್ತಿರುವಂತೆ ಕಾಣುತ್ತದೆ. ಇದರಿಂದಲೇ ಸಣ್ಣಪುಟ್ಟ ಕಾರಣಗಳಿಗಾಗಿ ಕದನ, ಗುಂಪು ಘರ್ಷಣೆಗಳು, ಕೌಟುಂಬಿಕ ಕಲಹಗಳು ಸಂಭವಿಸಿ ಒಮ್ಮೊಮ್ಮೆ ಕೊಲೆಗಳಲ್ಲಿ ಪರ್ಯಾವಸಾನಗೊಂಡಿರುವುದನ್ನು ವರದಿಗಳು ಹೇಳುತ್ತವೆ. ದೊಡ್ಡ ಕೈಗಾರಿಕಾ ಕುಟುಂಬಗಳಲ್ಲೂ ಚಿಕ್ಕ ಭಿನ್ನಾಭಿಪ್ರಾಯಗಳು ದೊಡ್ಡ ರೂಪ ತಾಳಿ ಕುಟುಂಬ ವಿಭಜನೆಗೋ ವಿವಾಹ ವಿಚ್ಛೇದನಕ್ಕೋ ಕಾರಣಗಳಾದದ್ದನ್ನು ಕೇಳುತ್ತಿದ್ದೇವೆ. ಇನ್ನು ಯುವಕರಲ್ಲಿ ಮಾತಿಗೆ ಮಾತು ಬೆಳೆದು ಕಾರಣವಿಲ್ಲದೇ ಜಗಳಗಳಾಗಿ ಕೊಲೆಗಳಾದ ವರದಿಗಳನ್ನು ನೋಡುತ್ತಿದ್ದೇವೆ.

ಇಂಥವೆಲ್ಲ ತಪ್ಪಬೇಕಾದರೆ ಎಳವೆಯಲ್ಲಿಯೇ ತಾಳ್ಮೆಯನ್ನು ಹಿರಿಯರು ಕಲಿಸಬೇಕು. ಮೊದಲು ತಾವೇ ತಾಳ್ಮೆ ಮತ್ತು ಸಕಾರಾತ್ಮಕ ಚಿಂತನೆಗಳ ಮಾದರಿಗಳಾಗಬೇಕು.

ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಗಳು ಕಡಿಮೆಯಾಗಬೇಕು. ಮೇಲು ಕೀಳೆಂಬ ಭಾವನೆಗಳು ಅಳಿಯಬೇಕು. ಜಾತಿ, ಧರ್ಮಗಳ ನಡುವಿನ ವೈಮನಸ್ಯ ಹೋಗಬೇಕು. ಸೋದರತ್ವ ಮತ್ತು ಸಹಬಾಳ್ವೆ ಬರಿ ಬಾಯಿ ಮಾತಿನ ಘೋಷಣೆಯಾಗದೇ ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಂಡು ಎಲ್ಲರೂ ಒಂದಾಗಿ ಬಾಳುವಂತಾಗಬೇಕು. ಯಾವುದೇ ರೀತಿಯ ಗುಂಪುಗಾರಿಕೆ
ಇರಬಾರದು.

ಈಗ ತಂತ್ರಜ್ಞಾನ ಮುಂದುವರಿದಂತೆಲ್ಲ ಸೈಬರ್ ಅಪರಾಧಗಳೂ ವಂಚನೆಗಳೂ ಹೆಚ್ಚಾಗುತ್ತಿವೆ. ಸೃಜನಶೀಲ ಕೃತಕ ಬುದ್ಧಿಮತ್ತೆಯೂ ವೇಗವಾಗಿ ವಿಸ್ತರಣೆಯಾಗುತ್ತಿದೆ. ಅದರಿಂದಲೂ ಅಪರಾಧ ಮತ್ತು ದುರುಪಯೋಗ ಹೆಚ್ಚಾಗಬಹುದು. ಕಠಿಣ ಕಾಯ್ದೆಗಳು ಬೇಕಾಗುತ್ತವೆ. ತಂತ್ರಜ್ಞಾನದಲ್ಲಿಯೇ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ಸುರಕ್ಷತಾ ತಂತ್ರಗಳನ್ನು ಅಳವಡಿಸಬೇಕು. ನೈತಿಕ ಶಿಕ್ಷಣವೂ ಬೇಕು.

andolanait

Recent Posts

ಇ-ಕೆವೈಸಿಗೆ ಗಡುವು ವಿಸ್ತರಣೆ

ಬೆಂಗಳೂರು : ತಾಂತ್ರಿಕ ದೋಷ ಹಾಗೂ ಸರ್ವರ್ ಮಂದಗತಿಯ ಕಾರಣದಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿಸಲು ಬಿಪಿಎಲ್, ಎಪಿಎಲ್ ಪಡಿತರದಾರರಿಗೆ…

3 hours ago

ಯುಪಿಐ ಶುಲ್ಕ | ನಮ್ಮ ಕಿಸೆಯೊಳಗೆ ಸರ್ಕಾರದ ಕೈ

ಬಾಲಸುಬ್ರಹ್ಮಣ್ಯ ಕಂಜರ್ಪಣೆ ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು…

3 hours ago

ಓದಗರ ಪತ್ರ | ಮರಳಿಗೆ ಮೊಳೆ ಹೊಡೆಯದೇ ದೀಪಾಲಂಕಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಿ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಂಬರುವ ಕೆಲವೇ ದಿನಗಳಲ್ಲಿ ನಡೆಯುವ ನಾಡ ಹಬ್ಬ ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ,…

3 hours ago

ಓದುಗರ ಪತ್ರ | ಮುಷ್ಕರದ ಉದ್ದೇಶವೇ ಭಂಗಗೊಳಿಸುವುದಲ್ಲವೇ ?

ಕಾರ್ಮಿಕರು ಅಥವಾ ವಿಶಾಲಾರ್ಥದಲ್ಲಿ ದುಡಿಯುವ ವರ್ಗಗಳು ತಮ್ಮ ಜೀವನಾವಶ್ಯ-ವೃತ್ತಿಕೇಂದ್ರಿತ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಉದ್ಯೋಗದಾತರ ವಿರುದ್ಧ ಮುಷ್ಕರ ಹೂಡುವುದು ಚಾರಿತ್ರಿಕವಾಗಿ ನಡೆದುಬಂದಿರುವಂತಹ…

3 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವೈಡ್‌ ಆಂಗಲ್‌ | ಅನಂತ್‌ಗೆ ಫಾಲ್ಕೆ : ಕನ್ನಡ ಚಿತ್ರರಂಗಕ್ಕೆ ಅತ್ಯುನ್ನತ ಗೌರವ

ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆಯುವ ಚಿತ್ರಗಳಿದ್ದರೂ, ಆಯಾ ವರ್ಷದಲ್ಲಿನ ಸ್ಪರ್ಧೆಯ ಕಾರಣವೋ ಇನ್ನೇನೋ, ಅನಂತನಾಗ್ ಅವರಿಗೆ ಈ ತನಕ ಆ…

3 hours ago

ಮಹಾಪಂಚ್ ಕಾರ್ಟೂನ್‌

ಮಹಾಪಂಚ್ ಕಾರ್ಟೂನ್‌ | ಸೆಪ್ಟಂಬರ್‌ 18 ಶುಕ್ರವಾರ

4 hours ago