ಅಂಕಣಗಳು

‘ರಾಮಾಯಣ’ವೂ, ‘ಪ್ರೇಮಾಯಣ’ವೂ ನಡುವೆ ‘ಕಾಂತಾರ’ವೂ

ವೈಡ್‌ ಆಂಗಲ್:ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  

ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳು

ಮುಂದಿನ ತಿಂಗಳ ಮೊದಲ ವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಭಾರತದ ಮಹಾಕಾವ್ಯ ‘ರಾಮಾಯಣ’.ಮೊನ್ನೆ ಅದರ ಪೂರ್ವಪ್ರದರ್ಶನ ಲಾಸ್ ಅಂಜೆಲ್ಸ್‌ನ ಅಕಾಡೆಮಿಯ ಚಿತ್ರಮಂದಿರದಲ್ಲಿ ನಡೆದಿದೆ. ಶ್ರೀರಾಮಚಂದ್ರನ ಕಥೆಯ ಆ ಚಿತ್ರದಲ್ಲಿ ರಾವಣನಾಗಿ ಕನ್ನಡದ ಯಶ್ ಅಭಿನಯಿಸಿದ್ದು ಮಾತ್ರವಲ್ಲ, ಅವರು ಚಿತ್ರದ ಸಹನಿರ್ಮಾಪಕರೂ ಹೌದು. ಚಿತ್ರದ ಕುರಿತಂತೆ. ವಿದೇಶಿ ಪ್ರೇಕ್ಷಕರ ಮೆಚ್ಚುಗೆ ಸಹಜವಾಗಿಯೇ ಇತ್ತು. ರಾವಣ ಪಾತ್ರದ ಮೂಲಕ ಮತ್ತು ಚಿತ್ರದ ಶ್ರೀಮಂತಿಕೆಯ ಮೂಲಕ ಯಶ್ ಹೆಚ್ಚು ಗಮನ ಸೆಳೆದದ್ದು ಸಾಮಾಜಿಕ ತಾಣಗಳಲ್ಲಿ ಕಾಣಬಹುದಿತ್ತು. ಅಲ್ಲಲ್ಲಿ ಮಿಶ್ರ ಪ್ರತಿಕ್ರಿಯೆ ಕೂಡಾ ಇತ್ತು. ಯಶ್ ಅವರು ಮೊದಲೇ ಈ ಬಗ್ಗೆ ಪ್ರೇಕ್ಷಕರ ಮುಂದೆ ಕೇವಿಯಟ್ ಸಲ್ಲಿಸಿದ್ದರು.

ಕಳೆದ ತಿಂಗಳು ಕೊನೆಯ ವಾರ ಶ್ರೀರಾಮ (ರಾಮಾಯಣದ ರಾಮನಲ್ಲ) ನಟಿಸಿದ, ಮನೋಜಕುಮಾರ್ ನಿರ್ದೇಶನದ ‘ ಪ್ರೇಮದ ಊರಲಿ’ ಚಿತ್ರ ತೆರೆಕಂಡಿತು. ‘ ರಾಮಾಯಣ’ ಮತ್ತು ‘ಪ್ರೇಮದ ಊರಲಿ’ ಚಿತ್ರಗಳಿಗೆ ಕಥಾವಸ್ತು, ನಿರ್ಮಾಣದ ಪ್ರಮಾಣ, ತಾಂತ್ರಿಕ ಉದ್ದೇಶ ಅಥವಾ ಮಾರುಕಟ್ಟೆಯ ದೃಷ್ಟಿಯಿಂದ ನೇರ ಸಂಬಂಧವಿಲ್ಲ. ಒಂದು ಭಾರತದ ಮಹಾಕಾವ್ಯವನ್ನು ಜಗತಿಕ ಮಟ್ಟದ ದೃಶ್ಯಾನುಭವವನ್ನಾಗಿ ರೂಪಿಸುವ ಬೃಹತ್ ಪ್ರಯತ್ನ. ಇನ್ನೊಂದು ಸುಮಾರು ರೂ. ೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿ, ಪ್ರೇಕ್ಷಕರ ಮೌಖಿಕ ಮೆಚ್ಚುಗೆಯ ಬಲದಿಂದ ವಾಣಿಜ್ಯ ಯಶಸ್ಸು ಕಂಡ ಕನ್ನಡ ಚಿತ್ರ. ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸವೇ ಚಿತ್ರರಂಗದ ಕುರಿತು ಒಂದು ಮಹತ್ವದ ಪ್ರಶ್ನೆಯನ್ನು ಮುಂದಿಡುತ್ತದೆ:

ಜಗತಿಕ ಪ್ರೇಕ್ಷಕರನ್ನು ತಲುಪಲು ಜಗತಿಕ ಗಾತ್ರದ ಚಿತ್ರವೇ ಬೇಕೇ? ‘ ಕಾಂತಾರ – ಒಂದು ದಂತಕಥೆ’ ಈ ಪ್ರಶ್ನೆಗೆ ಮತ್ತೊಂದು ಆಯಾಮವನ್ನು ಸೇರಿಸುತ್ತದೆ. ಅದು ಸ್ಥಳೀಯ ಕಥೆ, ಆಚರಣೆ, ಭೂಮಿಯೊಂದಿಗಿನ ಸಂಬಂಧ ಮತ್ತು ಜನರ ನಂಬಿಕೆಗಳನ್ನು ಕೇಂದ್ರದಲ್ಲಿ ಇಟ್ಟುಕೊಂಡು, ನಿರೀಕ್ಷೆಗೂ ಮೀರಿ ವಿಶಾಲ ಪ್ರೇಕ್ಷಕವರ್ಗವನ್ನು ತಲುಪಿದ ಚಿತ್ರ. ಈ ಮೂರನ್ನೂ ಒಂದೇಅಳತೆಗೋಲಿನಲ್ಲಿ ಅಳೆಯಬೇಕಾಗಿಲ್ಲ. ಅವು ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಂತೂ ಹೌದು.

‘ ಪ್ರೇಮದ ಊರಲಿ’ ಚಿತ್ರ ತೆರೆಕಂಡಾಗ ಬಹಳ ಕಡಿಮೆ ಪ್ರದರ್ಶನಗಳಿದ್ದವು. ಕುಟುಂಬ ಸಂಬಂಧಗಳು, ಪ್ರೀತಿ ಮತ್ತು ಭಾವನಾತ್ಮಕ ಅನುಭವಗಳನ್ನು ಆಧರಿಸಿದ ಕಥೆ, ಪ್ರೇಕ್ಷಕರ ಮೌಖಿಕ ಪ್ರಚಾರದ ಮೂಲಕ ಹೆಚ್ಚು ಜನರನ್ನು ತಲುಪಿತು. ನಿರ್ಮಾಪಕರ ಬಳಿ ಭಾರಿ ಪ್ರಚಾರದ ಬಜೆಟ್ ಇರಲಿಲ್ಲ. ಚಿತ್ರತಂಡವು ಮದುವೆಯ ಆಮಂತ್ರಣ ಪತ್ರಿಕೆಗಳ ಮಾದರಿಯಲ್ಲಿ ಆಹ್ವಾನಗಳನ್ನು ಹಂಚುವುದು ಸೇರಿದಂತೆ ವಿಭಿನ್ನ ಪ್ರಚಾರ ವಿಧಾನಗಳನ್ನು ಅನುಸರಿಸಿದ್ದಾಗಿ ಚಿತ್ರತಂಡ ಹೇಳಿತು. ಪೂರ್ವಪ್ರದರ್ಶನಗಳನ್ನು ಏರ್ಪಡಿಸಲಾಯಿತು. ದಿನ ಕಳೆದ ಹಾಗೆ ಪ್ರದರ್ಶನಗಳ ಸಂಖ್ಯೆ ಏರಿತು. ಗಳಿಕೆ ಈ ವೇಳೆಗೆಲ್ಲ ನೂರು ಕೋಟಿ ರೂ. ದಾಟಿದೆ.

ಒಂದು ಚಿತ್ರದಲ್ಲಿ ಜನಪ್ರಿಯ ತಾರೆಯರ ಸಮೂಹವಿಲ್ಲದಿದ್ದರೂ, ಸಾವಿರಾರು ಕೋಟಿ ರೂಪಾಯಿಗಳ ಪ್ರಚಾರವಿಲ್ಲದಿದ್ದರೂ, ಪ್ರೇಕ್ಷಕರನ್ನು ಸೆಳೆಯುವ ಸಾಮರ್ಥ್ಯವಿದ್ದರೆ ಅದರ ಮಾರುಕಟ್ಟೆ ತಾನಾಗಿ ವಿಸ್ತರಿಸಬಹುದು. ಪ್ರೇಕ್ಷಕರು ಚಿತ್ರವನ್ನು ಸ್ವೀಕರಿಸಿದಾಗ ಪ್ರದರ್ಶಕರು ಹೊಸ ಪ್ರದರ್ಶನಗಳನ್ನು ನೀಡುತ್ತಾರೆ; ಆ ಮೂಲಕ ಇನ್ನಷ್ಟು ಜನರಿಗೆ ಚಿತ್ರವನ್ನು ನೋಡುವ ಅವಕಾಶ ಸಿಗುತ್ತದೆ. ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸುವುದು ಒಂದು ಆರ್ಥಿಕ ಅನುಕೂಲ; ಪ್ರೇಕ್ಷಕರಿಗೆ ತಲುಪುವ ಕಥೆಯನ್ನು ರೂಪಿಸುವುದು ಸೃಜನಶೀಲ ಸಾಧನೆ. ಎರಡೂ ಒಂದೇ ಅಲ್ಲ. ಈ ಚಿತ್ರದ ಚಿತ್ರಕಥೆಗಾಗಿ ಮೂರು ವರ್ಷ ವ್ಯಯಿಸಿದ್ದನ್ನು ಚಿತ್ರತಂಡ ಹೇಳಿಕೊಂಡಿದೆ. ‘ ಪ್ರೇಮದ ಊರಲಿ’ – ಇನ್ನೂ ಒಂದು ಮುಖ್ಯ ಪ್ರಶ್ನೆಯನ್ನು ಮುಂದಿಡುತ್ತದೆ: ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಚಿತ್ರತಂಡವೇ ಕೋಟ್ಯಂತರ ರೂಪಾಯಿ ಪ್ರಚಾರಕ್ಕಾಗಿ ಖರ್ಚು ಮಾಡಬೇಕೇ, ಅಥವಾ ಪ್ರೇಕ್ಷಕರು ಚಿತ್ರವನ್ನು ಇಷ್ಟಪಟ್ಟಾಗ ಅವರ ಬಾಯಿಮಾತಿನ ಪ್ರಚಾರವೇ ಬಹುದೊಡ್ಡ ಪ್ರಚಾರ ಆಗಬಹುದಲ್ಲವೇ? ಇನ್ನು ‘ ಕಾಂತಾರ’ದ ಮಾತು. ರಿಷಭ್ ಶೆಟ್ಟಿ ಬರೆದು, ನಿರ್ದೇಶಿಸಿ, ಮುಖ್ಯ ಪಾತ್ರದಲ್ಲಿ ನಟಿಸಿದ ಚಿತ್ರ ‘ ಕಾಂತಾರ – ಒಂದು ದಂತಕಥೆ’. ಕರಾವಳಿ ಕರ್ನಾಟಕದ ಭೂಮಿ, ಅರಣ್ಯ, ಜನಪದ ನಂಬಿಕೆಗಳು, ಭೂತಕೋಲ, ದೈವಾರಾಧನೆ, ಕಂಬಳ, ಪರಂಪರೆಯಿಂದ ಬಂದ ಹಕ್ಕುಗಳು ಮತ್ತು ಆಡಳಿತ ವ್ಯವಸ್ಥೆಯ ನಡುವಿನ ಸಂಘರ್ಷ ಈ ಚಿತ್ರದ ಕಥಾವಸ್ತು. ಇವು ಕೇವಲ ಹಿನ್ನೆಲೆಯ ಅಲಂಕಾರಗಳಲ್ಲ. ಕಥೆಯ ಸಂಘರ್ಷ, ಪಾತ್ರಗಳ ನಡೆ, ಭಾವನಾತ್ಮಕ ತೀವ್ರತೆ ಮತ್ತು ಅಂತಿಮ ಅನುಭವವನ್ನು ರೂಪಿಸುವ ಅಂಶಗಳು. ರಿಷಭ್ ಶೆಟ್ಟಿ ತಮ್ಮ ಸಂದರ್ಶನಗಳಲ್ಲಿ ತಾವು ಬೆಳೆದು ಬಂದ ಪರಿಸರದಲ್ಲಿ ಕಂಡು ಕೇಳಿದ ಆಚರಣೆಗಳು ಮತ್ತು ಕಥೆಗಳನ್ನು ಜಗತ್ತಿಗೆ ಪರಿಚಯಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು. ‘ಸ್ಥಳೀಯ ಚಿತ್ರವೇ ಹೊಸ ಜಗತಿಕ ಚಿತ್ರ’ ಎಂಬ ಅವರ ಮಾತು ಈ ಪ್ರಸ್ತಾಪಕ್ಕೆ ಪೂರಕವಾಗುತ್ತದೆ. ‘ ಕಾಂತಾರ’ ಮೊದಲು ವಿಶ್ವಾದ್ಯಂತ ತೆರೆಕಂಡದ್ದು ಕನ್ನಡ ಚಿತ್ರವಾಗಿ. ಅದು ಯಶಸ್ಸು ಕಂಡ ನಂತರ ಬೇರೆ ಭಾಷೆಗಳಲ್ಲಿಯೂ ಬಿಡುಗಡೆ ವಿಸ್ತರಿಸಲಾಯಿತು. ಇದು ‘ಲೋಕಲ್ ಈಸ್ ಗ್ಲೋಬಲ’ ಎಂಬ ಮಾತಿಗೆ ಅತ್ಯಂತ ಸೂಕ್ತ ಉದಾಹರಣೆ.

‘ ಕಾಂತಾರ’ ಮಾತ್ರವಲ್ಲ, ‘ ಪ್ರೇಮದ ಊರಲಿ’ ಚಿತ್ರ ಕೂಡಾ ಕನ್ನಡದಲ್ಲಿ ಬಿಡುಗಡೆಯಾಯಿತು. ಅದರ ಗೆಲುವಿನ ನಾಗಾಲೋಟ ಅದನ್ನು ಇತರ ಭಾಷೆಗಳಿಗೆ ಡಬ್ ಆಗುವಂತೆ ಮಾಡಿದೆ. ಎಡೆ ಅದಕ್ಕೆ ಮುಕ್ತ ಸ್ವಾಗತ ಇದೆ. ಚಿತ್ರವೊಂಧು ಜಗತಿಕವಾಗಲು ತನ್ನ ಸ್ಥಳೀಯ ಗುರುತನ್ನು ಅಳಿಸಬೇಕಾಗಿಲ್ಲ. ಬದಲಾಗಿ, ಆ ಗುರುತನ್ನು ಅರ್ಥಪೂರ್ಣವಾಗಿ, ಕಲಾತ್ಮಕವಾಗಿ ಮತ್ತು ಪ್ರಾಮಾಣಿಕವಾಗಿ ತೆರೆಯ ಮೇಲೆ ಮೂಡಿಸಿದಾಗ ಇತರ ಭಾಷೆಗಳ ಪ್ರೇಕ್ಷಕರಿಗೂ ಅದರ ಭಾವನೆ ತಲುಪಬಹುದು. ಪ್ರತಿಯೊಂದು ಸ್ಥಳೀಯ ಕಥೆಯೂ ಜಗತಿಕ ಯಶಸ್ಸು ಪಡೆಯುತ್ತದೆ ಎಂದು ಹೇಳಲಾಗದು. ಕಥನದ ಶಿಸ್ತು, ಅಭಿನಯ, ಛಾಯಾಗ್ರಹಣ, ಸಂಗೀತ, ಸಂಕಲನ, ಧ್ವನಿ ವಿನ್ಯಾಸ, ಚಿತ್ರಮಂದಿರಗಳಲ್ಲಿ ಲಭ್ಯತೆ ಮತ್ತು ಪ್ರೇಕ್ಷಕರ ಸ್ವೀಕಾರ-ಇವೆಲ್ಲವೂ ಅಗತ್ಯ. ‘ಕಾಂತಾರ’, ‘ಪ್ರೇಮದ ಊರಲಿ’ಯದೋ ಗೆಲುವು ಸ್ಥಳೀಯತೆಯೊಂದರ ಅಲ್ಲ; ಅದನ್ನು ಚಲನಚಿತ್ರದ ಅನುಭವವನ್ನಾಗಿ ರೂಪಿಸಿದ ಕಲಾತ್ಮಕ ಸಾಮರ್ಥ್ಯದಲ್ಲಿದೆ.

ಇನ್ನು ‘ರಾಮಾಯಣ’. ಕುಮಾರವ್ಯಾಸ, ‘ತಿಣಿಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂತಿಣಿಯ ರಘುವರ ಚರಿತೆಯಲಿ ಕಾಲಿಡಿಲು ತೆರಪಿಲ್ಲ’ ಎಂದು ಹೇಳಿದರೂ, ನಮಿತ್ ಮಲ್ಹೋತ್ರಾ, ನಿರ್ದೇಶಕ ಮನೀಶ್ ತಿವಾರಿಯವರ ಮೂಲಕ ತೆರೆಗೆ ‘ರಾಮಾಯಣ’ ಬರೆಸಿಯೇ ಬಿಟ್ಟರು. ‘ರಾಮಾಯಣ’ದ ಕಥೆ ಭಾರತೀಯ ಉಪಖಂಡದ ಹಲವು ಭಾಷೆಗಳಲ್ಲಿ, ವಿಭಿನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿ ಶತಮಾನಗಳಿಂದ ಜೀವಂತವಾಗಿದೆ. ಅದರ ಪಾತ್ರಗಳು, ನೈತಿಕ ಪ್ರಶ್ನೆಗಳು, ವನವಾಸ, ಅಧಿಕಾರ, ಕರ್ತವ್ಯ, ಪ್ರೀತಿ, ತ್ಯಾಗ ಮತ್ತು ಸಂಘರ್ಷಗಳು ಭಾರತ ಮಾತ್ರವಲ್ಲದೆ ಇತರ ಅನೇಕ ದೇಶಗಳ ಸಾಂಸ್ಕೃತಿಕ ನೆನಪಿನ ಭಾಗವಾಗಿವೆ. ಇಲ್ಲಿ ಮನೀಶ್ ತಿವಾರಿಯವರ ಯೋಜನೆ ಕೇವಲ ಭಾರತೀಯ ಪ್ರೇಕ್ಷಕರಿಗೆ ಮತ್ತೊಂದು ‘ ರಾಮಾಯಣ’ವನ್ನು ತೋರಿಸುವುದಲ್ಲ. ಅತ್ಯಾಧುನಿಕ ದೃಶ್ಯ ಪರಿಣಾಮಗಳು, ದೊಡ್ಡ ಪ್ರಮಾಣದ ನಿರ್ಮಾಣ ವಿನ್ಯಾಸ, ಅಂತಾರಾಷ್ಟ್ರೀಯ ತಾಂತ್ರಿಕ ಸಹಯೋಗ ಮತ್ತು ವಿಶ್ವವ್ಯಾಪಿ ವಿತರಣೆಯ ಮೂಲಕ ಮಹಾಕಾವ್ಯವನ್ನು ಜಗತಿಕ ಚಿತ್ರಮಂದಿರದ ಅನುಭವವನ್ನಾಗಿ ರೂಪಿಸುವುದು.

ಆದರೂ ಈ ಮೂರು ಚಿತ್ರಗಳು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತವೆ: ಜಾಗತಿಕ ಮಟ್ಟದ ಯಶಸ್ಸಿಗೆ ಒಂದೇ ಮಾದರಿ ಇಲ್ಲ. ಕಡಿಮೆ ಬಜೆಟ್‌ನ ಚಿತ್ರ ಪ್ರೇಕ್ಷಕರ ವಿಶ್ವಾಸ ಗಳಿಸಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಬಹುದು, ಸ್ಥಳೀಯ ಸಂಸ್ಕೃತಿಯ ಚಿತ್ರ ತನ್ನದೇ ನೆಲದ ವೈಶಿಷ್ಟ್ಯದಿಂದ ಭಾಷೆಯ ಗಡಿಯನ್ನು ದಾಟಬಹುದು, ಮಹಾಕಾವ್ಯವೊಂದನ್ನು ವಿಶ್ವಮಟ್ಟದಲ್ಲಿ ಮರುಸೃಷ್ಟಿಸಲು ಬೃಹತ್ ತಾಂತ್ರಿಕ ಮತ್ತು ಆರ್ಥಿಕ ಹೂಡಿಕೆಯ ಮಾರ್ಗವನ್ನೂ ಆರಿಸಬಹುದು. ಇದು ಅವರವರ ಆಯ್ಕೆಗೆ ಬಿಟ್ಟದ್ದು.

ಪ್ರೇಕ್ಷಕರನ್ನು ತಲುಪಲು ದೊಡ್ಡ ಪ್ರಚಾರ ಬೇಕಾಗಬಹುದು. ಆದರೆ ಪ್ರಚಾರ ಮಾತ್ರದಿಂದ ಯಶಸ್ಸು ಖಚಿತವಾಗುವುದಿಲ್ಲ. ತಂತ್ರಜ್ಞಾನ ಕಥೆಯ ಅನುಭವವನ್ನು ವಿಸ್ತರಿಸಬಹುದು; ಆದರೆ ಕಥೆಯ ಸ್ಥಾನವನ್ನು ಆಕ್ರಮಿಸಲಾರದು. ಸ್ಥಳೀಯ ಸಂಸ್ಕೃತಿ ಚಿತ್ರದ ವೈಶಿಷ್ಟ್ಯವಾಗಬಹುದು; ಆದರೆ ಅದನ್ನು ಅರ್ಥಪೂರ್ಣವಾಗಿ ನಿರೂಪಿಸುವ ಕಲಾತ್ಮಕ ಸಾಮರ್ಥ್ಯ ಅಗತ್ಯ.

ಹಾಗೆಯೇ, ಚಿತ್ರವೊಂದರ ಮೌಲ್ಯವನ್ನು ಅದರ ನಿರ್ಮಾಣ ವೆಚ್ಚ ನಿರ್ಧರಿಸುವುದಿಲ್ಲ. ಯಶಸ್ಸನ್ನು ಅದರ ಭಾಷೆಯ ವ್ಯಾಪ್ತಿ ಮಾತ್ರ ನಿರ್ಧರಿಸುವುದಿಲ್ಲ. ಅದರ ಜಗತಿಕತೆಯನ್ನು ಅದರಲ್ಲಿರುವ ವಿದೇಶಿ ತಂತ್ರಜ್ಞಾನ ಅಥವಾ ದೊಡ್ಡ ತಾರೆಯರ ಸಮೂಹವೂ ಏಕಾಂಗಿಯಾಗಿ ನಿರ್ಧರಿಸುವುದಿಲ್ಲ. ಒಂದು ಸಣ್ಣ ಚಿತ್ರ ಪ್ರೇಕ್ಷಕರ ಹೃದಯ ಗೆದ್ದು ತನ್ನ ಮಾರುಕಟ್ಟೆಯನ್ನು ವಿಸ್ತರಿಸಬಹುದು. ಒಂದು ಸ್ಥಳೀಯ ಕಥೆ ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಬಹುದು. ಒಂದು ಮಹಾಕಾವ್ಯವನ್ನು ಜಗತಿಕ ತಾಂತ್ರಿಕ ಸಾಮರ್ಥ್ಯದೊಂದಿಗೆ ಹೊಸ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನವೂ ಭಾರತೀಯ ಚಿತ್ರರಂಗಕ್ಕೆ ಹೊಸ ಸಾಧ್ಯತೆಗಳನ್ನು ತೆರೆಯಬಹುದು.

ಚಿತ್ರರಂಗಕ್ಕೆ ಬೇಕಾಗಿರುವುದು ಒಂದೇ ಮಾದರಿಯ ಯಶಸ್ಸಿನ ಸೂತ್ರವಲ್ಲ; ವಿಭಿನ್ನ ಕಥೆಗಳು, ವಿಭಿನ್ನ ವೆಚ್ಚ ಮತ್ತು ವಿಭಿನ್ನ ಕಲಾತ್ಮಕ ದೃಷ್ಟಿಕೋನಗಳು ಬೆಳೆಯಲು ಅವಕಾಶ ನೀಡುವ ವಾತಾವರಣ. ಸ್ಥಳೀಯತೆಯೇ ಮಿತಿ ಅಲ್ಲ. ಅದು ಜಗತ್ತಿಗೆ ತೆರೆಯುವ ಬಾಗಿಲಾಗಬಹುದು. ಆದರೆ ಆ ಬಾಗಿಲನ್ನು ತೆರೆಯುವುದು ಬಜೆಟ್‌ನ ಗಾತ್ರವಲ್ಲ-ಕಥೆಯ ಸತ್ಯ, ಅದನ್ನು ಹೇಳುವ ಕಲಾತ್ಮಕ ಶಕ್ತಿ ಮತ್ತು ಪ್ರೇಕ್ಷಕರೊಂದಿಗೆ ಅದು ಕಟ್ಟಿಕೊಳ್ಳುವ ಸಂಬಂಧ.

” ಚಿತ್ರರಂಗಕ್ಕೆ ಬೇಕಾಗಿರುವುದು ಒಂದೇ ಮಾದರಿಯ ಯಶಸ್ಸಿನ ಸೂತ್ರವಲ್ಲ; ವಿಭಿನ್ನ ಕಥೆಗಳು, ವಿಭಿನ್ನ ವೆಚ್ಚ ಮತ್ತು ವಿಭಿನ್ನ ಕಲಾತ್ಮಕ ದೃಷ್ಟಿಕೋನಗಳು ಬೆಳೆಯಲು ಅವಕಾಶ ನೀಡುವ ವಾತಾವರಣ. ಸ್ಥಳೀಯತೆಯೇ ಮಿತಿ ಅಲ್ಲ. ಅದು ಜಗತ್ತಿಗೆ ತೆರೆಯುವ ಬಾಗಿಲಾಗಬಹುದು.”

 

 

 

ಆಂದೋಲನ ಡೆಸ್ಕ್

Recent Posts

ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್‌ ಪ್ರಯಾಣವೂ ದುಬಾರಿಯಾಗುತ್ತಾ?

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಸರ್ಕಾರಿ ಬಸ್‌ ಟಿಕೆಟ್‌ ದರವೂ ಹೆಚ್ಚಾಗುವ ಸಾಧ್ಯತೆ ಎದುರಾಗಿದೆ. ಅಕ್ಟೋಬರ್‌ 29ರಂದು…

3 mins ago

ಅರ್ನಬ್ ಬೆನ್ನಲ್ಲೇ ಮತ್ತೊಂದು ಆತಂಕ: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ!

ನವದೆಹಲಿ: ಅರ್ನಬ್ ಚಂಡಮಾರುತದ ಅಬ್ಬರ ತಗ್ಗುತ್ತಿರುವ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಹೊಸ ಹವಾಮಾನ ವ್ಯವಸ್ಥೆ ರೂಪುಗೊಂಡಿದೆ. ದಕ್ಷಿಣ ಅಂಡಮಾನ್ ಸಮುದ್ರ ಹಾಗೂ…

9 mins ago

ಓದುಗರ ಪತ್ರ: ಶಿಕ್ಷಕರ ‘ಮೂಲ’ ಕರ್ತವ್ಯಕ್ಕೆ ಆದ್ಯತೆ ನೀಡಿ

ಪ್ರತಿವರ್ಷ ಸೆಪ್ಟೆಂಬರ್ ಐದನೇ ತಾರೀಕು ಶಿಕ್ಷಕರನ್ನು ಹೊಗಳಲು ಇರುವ ದಿನ ಎಂದು ಕರೆಯಬಹುದು. ಆ ದಿನ ದೇಶದ ಎಲ್ಲೆಡೆ ತುಂಬಾನೆ…

11 mins ago

ಓದುಗರ ಪತ್ರ: ಮೈಸೂರು ರಾಜರ ಕೊಡುಗೆ ಮರೆಯುವಂತಿಲ್ಲ

ಮೈಸೂರು ರಾಜಮನೆತನವು ರಾಜ್ಯದ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ನೀರಾವರಿ, ಕೈಗಾರಿಕೆ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಇತಿಹಾಸದ ಪುಟಗಳಲ್ಲಿ…

12 mins ago

ಓದುಗರ ಪತ್ರ: ಸಂತೋಷ ಸಂಕಟ ತರಬಾರದು

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಗರದ ಅನೇಕ ರಸ್ತೆಗಳಿಗೆ ಹಾಕಲಾಗಿರುವ ವಿದ್ಯುತ್ ದೀಪಾಲಂಕಾರ ಕಣ್ತುಂಬಿಕೊಳ್ಳಲು ನಾನಾ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ…

14 mins ago

ಕರ್ನಾಟಕದ ರಣಜಿ ತಂಡದಲ್ಲಿ ʼಮನ್ವಂತ್‌ʼರ

ಚಿರಂಜೀವಿ ಸಿ.ಹುಲ್ಲಹಳ್ಳಿ ಭರವಸೆಯ ಆಲ್‌ರೌಂಡರ್ ಆಗಿ ಹೊರಹೊಮ್ಮುತ್ತಿರುವ ಮೈಸೂರಿನ ಯುವ ಪ್ರತಿಭೆ; ಎಡಗೈ ಶೈಲಿ ಬ್ಯಾಟರ್, ಬಲಗೈಯಲ್ಲಿ ಬೌಲಿಂಗ್ ಮೈಸೂರು:…

22 mins ago