ಆಶಾದಾಯಕ ಕನಸು ಬಿತ್ತುವ ಕೆಲಸಕ್ಕೆ ಚಾಲನೆ ಸಿಗಬೇಕು
ಕರ್ನಾಟಕದ ರಾಜಕೀಯ ಚರಿತ್ರೆಯ ದಿಕ್ಕು ೧೯೮೩ ರಲ್ಲಿ ಬದಲಾಯಿತು. ಅರ್ಥಾತ್, ಸ್ವಾತಂತ್ರ್ಯೋತ್ತರ ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ಬೇರೊಂದು ಶಕ್ತಿ ಮೇಲೇಳುವುದನ್ನು ನೋಡಿತು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಕೆ.ಸಿ.ರೆಡ್ಡಿಯವರ ಅಧ್ಯಕ್ಷತೆಯಲ್ಲಿ ರಚನೆಯಾದ ಜವಾಬ್ದಾರಿ ಸರ್ಕಾರ ಪ್ರಜಪ್ರಭುತ್ವದ ಆರಂಭಿಕ ಘಟ್ಟವಾದರೆ ೧೯೫೨ರ ಮೊದಲ ಸಾರ್ವತ್ರಿಕ ಚುನಾವಣೆಯ ನಂತರ ಕೆಂಗಲ್ ಹನುಮಂತಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು.
ಮುಂದೆ ೧೯೮೩ ರವರೆಗೆ ನಡೆದ ಐದು ವಿಧಾನಸಭೆ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷವೇ ಜಯಭೇರಿ ಬಾರಿಸಿತು. ಅಷ್ಟೊತ್ತಿಗಾಗಲೇ ಕಾಂಗ್ರೆಸ್ ಹೈಕಮಾಂಡ್ ಯಾವ ಮಟ್ಟದಲ್ಲಿ ಸರ್ವಾಧಿಕಾರಿ ಮನಃಸ್ಥಿತಿಯನ್ನು ಬೆಳೆಸಿಕೊಂಡಿತ್ತೆಂದರೆ, ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಕಿತ್ತೆಸೆಯುವ,ತಮಗೆ ಬೇಕಾದ ಜೀ ಹುಜೂರ್‌ಗಳನ್ನು ಆ ಜಗಕ್ಕೆ ತರುವುದು ಕಾಂಗ್ರೆಸ್ ಅಧಿನಾಯಕಿ ಇಂದಿರಾಗಾಂಧಿಯವರಿಗೆ ಬೊಂಬೆಯಾಟದಷ್ಟು ಸಲೀಸಾಗಿ ಹೋಗಿತ್ತು.
ಇಂತಹ ಕಾಲಘಟ್ಟದಲ್ಲಿ ಇಂದಿರಾಗಾಂಧಿ ಅವರ ಸರ್ವಾಧಿಕಾರಿ ಧೋರಣೆಗೆ ಶಾಕ್ ನೀಡಿದ್ದು ಕರ್ನಾಟಕ. ಅರ್ಥಾತ್ ೧೯೮೩ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಅಡ್ಡಡ್ಡ ಮಲಗಿಸಿ ಜನತಾರಂಗ ಸರ್ಕಾರ ಅಸ್ತಿತ್ವಕ್ಕೆ ಬರುವಂತೆ ಆಯಿತು. ಖ್ಯಾತ ಸಮಾಜವಾದಿ ನಾಯಕರಾದ ಡಾ.ರಾಮಮನೋಹರ ಲೋಹಿಯಾ ಅವರು ಹೇಳಿದಂತೆ ‘ಬಂಡೆಯಂತೆ ಜಡವಾಗಿದ್ದ ವ್ಯವಸ್ಥೆ’ಯನ್ನು ಕರ್ನಾಟಕದ ಜನ ಮೊದಲ ಬಾರಿ ಒಡೆದು ಹಾಕಿದರು. ಕರ್ನಾಟಕದ ಚರಿತ್ರೆಯ ದಿಕ್ಕನ್ನು ಬದಲಿಸಲು ಅವತ್ತು ದೊಡ್ಡ ಮಟ್ಟದ ಕಾಣಿಕೆ ನೀಡಿದ್ದು ದಲಿತ ಚಳವಳಿ,ರೈತ ಚಳವಳಿ ಮತ್ತು ಕನ್ನಡ ಪರ ಚಳವಳಿ. ಈ ಚಳವಳಿಗಳು ನೈತಿಕತೆಯ ಪರಾಕಾಷ್ಠೆಯೊಂದಿಗೆ ಮುಗಿಬಿದ್ದ ರೀತಿ ಜಡವಾಗಿದ್ದ ಕರ್ನಾಟಕದ ರಾಜಕೀಯ ಚರಿತ್ರೆಗೆ ಪುನಃ ಚಲನಶೀಲತೆ ತಂದವು.
ಇತಿಹಾಸದ ಈ ಪುಟಗಳನ್ನು ಏಕೆ ತೆರೆದುನೋಡಬೇಕು ಎಂದರೆ ಅಂದಿನ ಜಡತ್ವದ ಇತಿಹಾಸ ಮತ್ತೆ ಮರುಕಳಿಸಿದೆ. ಅದು ಬರೀ ಜಡತ್ವವಲ್ಲ, ಜಡತ್ವದ ಪರಾಕಾಷ್ಠೆ. ವಿಪರ್ಯಾಸವೆಂದರೆ,ಅವತ್ತು ಇಂತಹ ಜಡತ್ವದ ಮೂಲ ಆಡಳಿತಾರೂಢ ಕಾಂಗ್ರೆಸ್ ಪಕ್ಷವಾದರೆ ಇಂದಿನ ಜಡತ್ವಕ್ಕೆ ಒಟ್ಟಾರೆ ರಾಜಕೀಯ ವ್ಯವಸ್ಥೆಯೇ ಮೂಲ ಕಾರಣವಾಗಿದೆ. ಈ ಜಡತ್ವ ಯಾವ ಮಟ್ಟದಲ್ಲಿದೆ ಎಂದರೆ ಈ ರಾಜಕೀಯ ವ್ಯವಸ್ಥೆಗೆ ಕನಸುಗಳಿಲ್ಲ. ಆಡಳಿತ ನಡೆಸುವವರ ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಕ್ಯಾಂಡಿಡೇಟುಗಳೇ ಇಲ್ಲ. ನೇರವಾಗಿ ಹೇಳಬೇಕೆಂದರೆ ಜಗತೀಕರಣದ ಆರಾಧಕರು ರಾಜಕೀಯ ವ್ಯವಸ್ಥೆಯ ಎಲ್ಲ ಕೋನಗಳಲ್ಲೂ ತಲೆಯೆತ್ತಿ ನಿಂತಿದ್ದಾರೆ.
ಜಗತೀಕರಣದ ಆರಾಧಕರು ತಲೆ ಎತ್ತಿದರೆ ಮತ್ತು ಅವರೇ ವ್ಯವಸ್ಥೆಯ ಮುಂಚೂಣಿಯಲ್ಲಿ ನಿಂತರೆ ಹಿಂದೆ ನಿಂತ ಜನಸಾಮಾನ್ಯರಿಗೆ ಜಾಗತೀಕರಣವನ್ನು ಆರಾಧಿಸುವುದೇ ಆದರ್ಶವಾಗುತ್ತದೆ, ಅದೇ ಮೌಲ್ಯವಾಗುತ್ತದೆ. ಇದರ ಪರಿಣಾಮವೆಂದರೆ ದುಡ್ಡಿಲ್ಲದೆ ಬದುಕಿಲ್ಲ, ಅದನ್ನು ಗಳಿಸಲು ಯಾವ ಮಾರ್ಗ ಹಿಡಿದರೂ ತಪ್ಪಿಲ್ಲ ಎಂಬ ಭಾವನೆ ನೆಲೆಯೂರುವುದು.
ಕೆಲವೇ ಕಾಲದ ಹಿಂದೆ ಈ ವ್ಯವಸ್ಥೆಯಲ್ಲಿ ಬೆಳೆಯುವ ಮಕ್ಕಳಿಗೆ ಒಬ್ಬ ಶಿಕ್ಷಕ, ಒಬ್ಬ ಉಪನ್ಯಾಸಕ, ಒಬ್ಬ ಸಂಗೀತಗಾರ, ಒಬ್ಬ ರಂಗಕರ್ಮಿ, ಒಬ್ಬ ಸಮಾಜಸೇವಕ ಆದರ್ಶಪ್ರಾಯರಾಗಿದ್ದರು. ಆದರೆ ಇವತ್ತಿನ ಪೀಳಿಗೆಗೆ ಇವರ‍್ಯಾರೂ ಆದರ್ಶಪ್ರಾಯರಲ್ಲ. ಯಾಕೆಂದರೆ ಕೊಳ್ಳುಬಾಕ ಸಂಸ್ಕೃತಿಯ ಆರಾಧಕರಾಗಿ ಬೆಳೆಯುತ್ತಿರುವ ಮಕ್ಕಳಿಗೆ ಇವರು ಹಣ ಗಳಿಸುವ ಯಂತ್ರಗಳಂತೆ ಕಾಣುತ್ತಿಲ್ಲ.
ಪರಿಣಾಮ? ಇಡೀ ವ್ಯವಸ್ಥೆಯೇ ಅಯೋಮಯವಾಗಿದೆ. ತುಂಬ ಹಿಂದಕ್ಕೆ ಹೋಗುವುದೇನೂ ಬೇಡ. ಕೇವಲ ಒಂದು ವರ್ಷದ ಹಿಂದೆ ಮನೆಯ ದಿನನಿತ್ಯದ ವಸ್ತುಗಳಿಗಾಗಿ ಮಾಸಿಕ ಐದು ಸಾವಿರ ರೂ. ವೆಚ್ಚ ಮಾಡುತ್ತಿದ್ದವರು, ಇವತ್ತು ಅಷ್ಟೇ ವಸ್ತುಗಳಿಗಾಗಿ ಹತ್ತು ಸಾವಿರ ರೂ ವ್ಯಯಿಸಬೇಕಾಗಿದೆ. ಜಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ, ಬರಗಾಲದಂತಹ ವಿಕೋಪಗಳು ಈ ಪ್ರಮಾಣವನ್ನು ಕೆಲವೇ ದಿನಗಳಲ್ಲಿ ಹದಿನೈದು ಸಾವಿರ ರೂಪಾಯಿಗಳ ಮಟ್ಟಕ್ಕೆ ಏರಿಸಬಹುದು. ಇಂತಹ ಸಂದರ್ಭದಲ್ಲಿ ನಮ್ಮ ನೈತಿಕ ಕೇಂದ್ರಗಳು ಪರಿಣಾಮಕಾರಿಯಾಗಿ ಕೆಲಸ ಮಾಡದಿದ್ದರೆ, ಗಾಂಧಿ, ಬುದ್ಧ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಎತ್ತಿ ಹಿಡಿಯದಿದ್ದರೆ, ಜನ ಜಗತೀಕರಣದ ತಿರುಗಣಿಯಲ್ಲಿ ಹೈರಾಣಾಗುವುದಷ್ಟೇ ಅಲ್ಲ, ಈ ತಿರುಗಣಿಯಲ್ಲಿ ಸಿಲುಕಿಕೊಂಡ ಕಾರಣಕ್ಕಾಗಿ ಅದನ್ನೇ ಅನಿವಾರ್ಯವೆಂದು ಪರಿಗಣಿಸುವುದು ಸಹಜ. ಇದೇ ಜಂಗಲ್ ರಾಜ್‌ನ ಹೆಬ್ಬಾಗಿಲು. ಜಂಗಲ್ ರಾಜ್‌ನಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವೇದಿಕೆಗಳಿಲ್ಲ.
ಶಕ್ತಿಯಿದ್ದವನು ಬದುಕಬಲ್ಲ ಎಂಬುದೇ ಅಲ್ಲಿ ಅಂತಿಮ ಸತ್ಯ. ಇವತ್ತು ಇಂತಹ ಜಂಗಲ್‌ರಾಜ್‌ನ ಹೆಬ್ಬಾಗಿಲ ತನಕ ತಲುಪಿರುವ ನಾವು ಒಮ್ಮೆ ಒಳಹೊಕ್ಕೆವೆಂದರೆ ಮರಳಿ ಹೊರಬರುವುದು ಕಷ್ಟ. ಹೀಗಾಗಬಾರದು ಎಂದಿದ್ದರೆ ೧೯೮೩ ರಲ್ಲಿ ಘಟಿಸಿದ ಆ ಚರಿತ್ರಾರ್ಹ ಘಟನೆ ಮರುಕಳಿಸಬೇಕು. ಕರ್ನಾಟಕದ ದಲಿತ ಚಳವಳಿ, ರೈತ ಚಳವಳಿ, ಕನ್ನಡ ಪರ ಚಳವಳಿಗಳು ಮತ್ತೆ ತಮ್ಮ ಐತಿಹಾಸಿಕ ಲಯಕ್ಕೆ ಮರಳಬೇಕು.
ಅಂದ ಹಾಗೆ ಕರ್ನಾಟಕದ ಸಾಮಾಜಿಕ ನ್ಯಾಯದ ವ್ಯವಸ್ಥೆ ಕುಸಿಯುವ ಹಂತದಲ್ಲಿದ್ದಾಗ ಅದನ್ನು ಎತ್ತಿ ಹಿಡಿದು ದಿಕ್ಕು ದೆಸೆ ತೋರಿಸಿದ್ದು ದಲಿತ ಚಳವಳಿ. ಇವತ್ತು ಈ ಚಳವಳಿಯ ನದಿ ಹಲವು ನಾಲೆಗಳಾಗಿ ಹರಿಯುತ್ತಿರಬಹುದು. ಆದರೆ ಅವೆಲ್ಲ ನಾಲೆಗಳು ಒಂದು ಪಾತ್ರದಡಿ ಒಂದಾದರೆ, ಅದರ ಶಕ್ತಿ ಏಕತ್ರಗೊಂಡರೆ ಕರ್ನಾಟಕದ ಚರಿತ್ರೆ ಮತ್ತೊಮ್ಮೆ ಬದಲಾಗುವ ಸಾಧ್ಯತೆ ಇದೆ. ಇವತ್ತು ಡಾ.ಹೆಚ್.ಸಿ.ಮಹದೇವಪ್ಪ ಅವರಂತಹ ದಲಿತ ನಾಯಕರು ಇರುವ ಸಂದರ್ಭದಲ್ಲಿ ದಲಿತ ಚಳವಳಿ ತನ್ನೆಲ್ಲ ಶಕ್ತಿಯನ್ನು ಆವಾಹಿಸಿಕೊಳ್ಳಲು ಸಾಧ್ಯವಿದೆ.
ಅಂದ ಹಾಗೆ ಚಳವಳಿ ಒಂದು ರಾಜಕೀಯ ಶಕ್ತಿಯಾಗುವ ಬದಲು ಒಂದು ಒತ್ತಡದ ಕೇಂದ್ರವಾಗುವುದು ಮುಖ್ಯ ಮತ್ತು ರಾಜಕೀಯದ ಅಪಾಯಕಾರಿ ಆಟಗಳನ್ನು ಬಲ್ಲ, ಮತ್ತು ದಲಿತರ ನಿಜವಾದ ಸಾಂಸ್ಕೃತಿಕ ನಾಯಕರಾಗಿ ಮೇಲೆದ್ದು ನಿಂತಿರುವ ಹೆಚ್.ಸಿ.ಮಹದೇವಪ್ಪ ಅವರಂತಹವರ ಭುಜ ಇಂತಹ ಒತ್ತಡದ ಕೇಂದ್ರದ ನಡುವಿನಲ್ಲಿದ್ದರೆ ಕರ್ನಾಟಕದ ರಾಜಕೀಯ ಚರಿತ್ರೆ ಬದಲಾಗುವುದು ಅಸಂಭವವಲ್ಲ. ಅಂದ ಹಾಗೆ ಅಸಮಾನತೆಯನ್ನು ಬಯಸುವ ಈ ನೆಲದ ಶೋಷಕರಿಗೆ ಮತ್ತು ಅವರನ್ನು ಎದುರಿಸಬೇಕಾದ ಶೋಷಿತರಿಗೆ ಸಂವಿಧಾನದ ಶಕ್ತಿ, ಮಹತ್ವ ಮತ್ತು ಅನಿವಾರ್ಯತೆಗಳನ್ನು ಎತ್ತಿ ತೋರಿಸಿದವರು ಹೆಚ್. ಸಿ. ಮಹದೇವಪ್ಪ. ಅಂತಹ ನಾಯಕರು ಈಗ ಮತ್ತೊಮ್ಮೆ ಸಮಾನತೆಗಾಗಿ ಸಂಘರ್ಷಕ್ಕೆ ಅಣಿಯಾಗಬೇಕಿದೆ. ಆ ಮೂಲಕ ದಲಿತ ಶಕ್ತಿ ಮತ್ತೊಮ್ಮೆ ತನ್ನ ವಿರಾಟ್ ರೂಪವನ್ನು ಪ್ರದರ್ಶಿಸುವ ಅಗತ್ಯವಿದೆ. ಅಂದ ಹಾಗೆ ಇದೇ ಮಾತು ವಿವಿಧ ಕಾರಣಗಳಿಗೆ ಹೋಳುಗಳಾಗಿ ಹೋಗಿರುವ ರೈತ ಚಳವಳಿ ಮತ್ತು ಕನ್ನಡ ಪರ ಚಳಚಳಿಗಳಿಗೂ ಅನ್ವಯವಾಗುತ್ತದೆ.
ಜಗತೀಕರಣದ ಭರಾಟೆಯಲ್ಲಿರುವ ವ್ಯವಸ್ಥೆಗೆ ಇದು ಅಸಂಭವ ಅನ್ನಿಸಬಹುದು. ಆದರೆ ಅದರ ಅನ್ನಿಸಿಕೆಗೂ ಕಾರಣಗಳಿವೆ. ಇಂತಹ ಕಾರಣಗಳಲ್ಲಿ ಬಹುಮುಖ್ಯವಾದ ಕಾರಣವೆಂದರೆ ಅದಕ್ಕೆ ಕನಸುಗಳನ್ನು ತೋರಿಸುವವರು ಇಲ್ಲದೇ ಇರುವುದು. ಇದು ಅದರ ತಪ್ಪೂ ಅಲ್ಲ. ಯಾಕೆಂದರೆ ಅಂತಹ ಕನಸು ಕಾಣುವ ಸಾಧ್ಯತೆಗಳನ್ನು ನಮ್ಮ ರಾಜಕೀಯ ವ್ಯವಸ್ಥೆ ಯಾವತ್ತೋ ಹಾಳು ಮಾಡಿಬಿಟ್ಟಿದೆ .ಅಷ್ಟೇ ಅಲ್ಲ. ವ್ಯವಸ್ಥೆಯ ಹೊರ ಮತ್ತು ಒಳಕಣ್ಣುಗಳಿಗೆ ಕಪ್ಪು ಬಟ್ಟೆಯನ್ನು ಸುತ್ತಿ ಬಿಟ್ಟಿದೆ. ಹಾಗಂತ ಇದು ಬಿಚ್ಚಲಾಗದಷ್ಟು ಬಲಿಷ್ಠ ಕಣ್ಪಟ್ಟಿ ಅಂತಲೂ ಅಲ್ಲ. ಆದರೆ ಅದನ್ನು ಬಿಚ್ಚಿ ಬಿಸಾಡುವ ಶಕ್ತಿ ಇರುವುದು ನಮ್ಮ ಚಳವಳಿಗಳಿಗೆ ಮಾತ್ರ. ಒಮ್ಮೆ ಇಂತಹ ಕನಸು ಬಿತ್ತುವ ಕೆಲಸ ಆರಂಭವಾದರೆ ನಾಡಿನ ಅಸಂಖ್ಯಾತ ಜನ ಚಳವಳಿಗಳ ಹಿಂದೆ ಶಕ್ತಿಯಾಗಿ ನಿಲ್ಲಲು ತಯಾರಾಗುತ್ತಾರೆ. ಅಂದ ಹಾಗೆ ಇದು ಅಸಾಧ್ಯವೆಂಬ ಭಾವನೆ ಯಾರದರೂ ಇದ್ದರೆ ಅದು ಸಿನಿಕತನವೇ ಹೊರತು ಬೇರೇನಲ್ಲ. ಯಾಕೆಂದರೆ ಕರ್ನಾಟಕದ ರಾಜಕಾರಣ ಇವತ್ತು ‘ಸ್ಟಿಂಗ್ ಆಪರೇಷನ್ ಕಿಂಗು’ಗಳ ಕೈಗೆ ಸಿಲುಕಿರುವುದನ್ನು ಅಸಹನೆಯಿಂದ ನೋಡುತ್ತಿರುವ ದೊಡ್ಡ ವರ್ಗವೇ ಇದೆ.
ಈ ವರ್ಗಕ್ಕೆ ಸ್ಟಿಂಗ್ ಆಪರೇಷನ್ನಿನ ಕಾಲಘಟ್ಟ ಭ್ರಮನಿರಸನವನ್ನು ಮಾತ್ರವಲ್ಲ, ಇಂತಹ ಕಾಲಘಟ್ಟವನ್ನು ಕಿತ್ತು ಹಾಕುವ ಹುಕ್ಕಿಯೂ ಇದೆ. ಆದರೆ ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಸೇರಬೇಕೆಂದರೆ ಒಂದು ಆಶಾದಾಯಕ ಕನಸು ಬಿತ್ತುವ ಕೆಲಸ ಆರಂಭವಾಗಬೇಕು ಮತ್ತು ದಲಿತ ಚಳವಳಿಯೇ ಇಂತಹ ಕೆಲಸಕ್ಕೆ ವಿಧ್ಯುಕ್ತ ಚಾಲನೆ ನೀಡಬೇಕು. ಸಾವಿರಾರು ವರ್ಷಗಳ ಅಸಮಾನತೆಗೆ, ಇಂತಹ ಅಸಮಾನತೆಯ ಕ್ರೂರ ಪರಂಪರೆಯ ವಿರುದ್ಧ ನಿರ್ಣಾಯಕ ಹೋರಾಟ ಆರಂಭ ಮಾಡಿದ್ದೇ ದಲಿತ ಶಕ್ತಿ. ಇಂತಹ ಶಕ್ತಿ ಪುನಃ ತನ್ನ ವಿರಾಟ್ ಶಕ್ತಿಯೊಂದಿಗೆ ಮೇಲೆದ್ದು ನಿಲ್ಲುವ, ಕರ್ನಾಟಕದ ರಾಜಕೀಯ ಚರಿತ್ರೆಯನ್ನು ಮರಳಿ ಸಾಮಾಜಿಕ ನ್ಯಾಯದ ಹಳಿಯ ಮೇಲೆ ನಿಲ್ಲಿಸುವ ಧೀಶಕ್ತಿಯನ್ನು ಪಡೆಯಬೇಕು. ಇವತ್ತು ವ್ಯವಸ್ಥೆಯ ಶೋಷಿತರು, ರೈತರು ಮತ್ತು ಕನ್ನಡಿಗರು ಅನುಭವಿಸುತ್ತಿರುವ ಎಲ್ಲ ಪಿಡುಗುಗಳಿಂದ ಮುಕ್ತಿ ದೊರಕಿಸಿಕೊಡುವ ಕೈಂಕರ್ಯಕ್ಕೆ ಸಜಗಬೇಕು. ಇದು ಸಾಧಿತವಾಗಬೇಕು ಮತ್ತು ಸಾಽತವಾಗಬೇಕು ಅಷ್ಟೇ. ಮುಂದಿನ ಪೀಳಿಗೆ ಬದುಕಲು ಇದನ್ನು ಹೊರತುಪಡಿಸಿದರೆ ಬೇರೆ ಮಾರ್ಗ ಇಲ್ಲ.
” ಡಾ.ಹೆಚ್.ಸಿ.ಮಹದೇವಪ್ಪ ಅವರಂತಹ ದಲಿತ ನಾಯಕರು ಇರುವ ಸಂದರ್ಭದಲ್ಲಿ ದಲಿತ ಚಳವಳಿ ತನ್ನೆಲ್ಲ ಶಕ್ತಿಯನ್ನು ಆವಾಹಿಸಿಕೊಳ್ಳಲು ಸಾಧ್ಯವಿದೆ. ಅಂದ ಹಾಗೆ ಚಳವಳಿ ಒಂದು ರಾಜಕೀಯ ಶಕ್ತಿಯಾಗುವ ಬದಲು ಒಂದು ಒತ್ತಡದ ಕೇಂದ್ರವಾಗುವುದು ಮುಖ್ಯ.”
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಮಾಗಡಿ ರಸ್ತೆಯಲ್ಲಿತ್ತು ದೊಡ್ಡ ಮೋರಿ, ಮರಗಳ ತೋಪು, ಸುತ್ತಲೂ ಕತ್ತಲಿನಿಂದ ಕೂಡಿದ್ದ ನಿರ್ಜನ ಪ್ರದೇಶ…
ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಕೇಂದ್ರ ಚುನಾವಣಾ ಆಯೋಗ ಮತದಾರರ ಸಂವಿಧಾನಬದ್ಧ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು…
ವರದಿ ರೂಪ: ರವಿಚಂದ್ರ ಚಿಕ್ಕೆಂಪಿಹುಂಡಿ ಡೆಡ್ ಬಾಡಿ ಬಿಸಾಕುವ ಸಮಯದಲ್ಲಿ ರಾಘವೇಂದ್ರ ಮತ್ತು ಕಾರ್ತಿಕ್ ಮಧ್ಯೆ ಗಲಾಟೆಯಾಗಿ, ಆತ ಸರೆಂಡರ್…
ನವೀನ್ ಡಿಸೋಜ ೫೦ ಮಳಿಗೆಗಳಲ್ಲಿ ಕಾಫಿ ವೈವಿಧ್ಯ; ೧೩ ಸಾಧಕ ಕೃಷಿಕರಿಗೆ ಸನ್ಮಾನ, ೬೮ ಪೌರಕಾರ್ಮಿಕರಿಗೆ ಗೌರವ ಮಡಿಕೇರಿ: ಮಂಜಿನ…
ಮಂಜು ಕೋಟೆ ವರದರಾಜಸ್ವಾಮಿ, ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ೯ ದಿನಗಳು ವಿವಿಧ ಕಾರ್ಯಕ್ರಮ ಎಚ್.ಡಿ.ಕೋಟೆ: ವಿಶ್ವ ವಿಖ್ಯಾತ ಮೈಸೂರು ದಸರಾ ಭಾನುವಾರ…