ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಮುಖ್ಯಮಂತ್ರಿಯನ್ನು ಬದಲಿಸಿದರೆ ಅಹಿಂದ ಮತ ಬ್ಯಾಂಕ್ ಕುಸಿಯುವ ಭೀತಿ
ಕರ್ನಾಟಕದ ರಾಜಕಾರಣಕ್ಕೆ ಸಂಬಂಧಿಸಿದಂತೆ ದಿಲ್ಲಿಯ ಕಾಂಗ್ರೆಸ್ ವರಿಷ್ಠರು ಧರ್ಮಸಂಕಟದಲ್ಲಿದ್ದಾರೆ. ಅರ್ಥಾತ್,ಅವರಿಗೆ ಸತ್ಯ ಗೊತ್ತಿದೆ. ಆದರೆ ಸತ್ಯವನ್ನು ಅರಗಿಸಿಕೊಳ್ಳುವುದಕ್ಕಿಂತ ಇನ್ನೊಬ್ಬರಿಗೆ ಅರಗಿಸಿಕೊಳ್ಳುವಂತೆ ಹೇಳಲು ಪರದಾಡುತ್ತಿದ್ದಾರೆ.
ಅಂದ ಹಾಗೆ ಅವರಿಗೆ ಗೊತ್ತಿರುವ ಸತ್ಯವೆಂದರೆ, ಕರ್ನಾಟಕದಲ್ಲಿ ಸರ್ಕಾರದ ನೇತೃತ್ವ ವಹಿಸಿರುವ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದು ಕಷ್ಟ ಎಂಬುದು. ಆದರೆ ಈ ಸತ್ಯವನ್ನು ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೇಳಲು ಕಷ್ಟಪಡುತ್ತಿದ್ದಾರೆ.
ನೇರವಾಗಿ ಹೇಳಬೇಕೆಂದರೆ ಸಿದ್ದರಾಮಯ್ಯ ಅವರು ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಕಾಂಗ್ರೆಸ್‌ಗಿರುವ ಅಹಿಂದ ಫೇಸ್ ಕಟ್ಟು. ಈ ಫೇಸ್ ಕಟ್ಟನ್ನು ಬದಲಿಸಿದರೆ ಪರಿಣಾಮ ಏನಾಗುತ್ತದೆ ಎಂಬುದು ಕಾಂಗ್ರೆಸ್ ವರಿಷ್ಠರಿಗೆ ಗೊತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ರಾಹುಲ್ ಗಾಂಧಿಯವರು ದೇಶದೆಲ್ಲೆಡೆ ತಿರುಗಾಡುತ್ತಾ ಅಹಿಂದ ವರ್ಗಗಳ ವಿಷಯದಲ್ಲಿ ತಮ್ಮ ಪಕ್ಷಕ್ಕಿರುವ ಬದ್ಧತೆಯ ಬಗ್ಗೆ ಮಾತನಾಡುತ್ತಾರೆ.ಬಲಿಷ್ಠ ವರ್ಗಗಳ ಮುಷ್ಟಿಯಲ್ಲಿರುವ ಹರಿಯಾಣ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ನಾಯಕರೊಬ್ಬರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.
ಹೀಗೆ ಅವರು ಮಾಡುತ್ತಿರುವ ಕೆಲಸ ಉದ್ದೇಶಪೂರ್ವಕವಲ್ಲ, ಬದಲಿಗೆ ಅನಿವಾರ್ಯದ್ದು. ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆ ಅಂತ ಕಲ್ಪಿಸಿಕೊಡುವ ಶಕ್ತಿ ಇದ್ದರೆ ಅದು ಅಹಿಂದ ವರ್ಗಗಳಿಗೆ. ಹೀಗಾಗಿ ಅಹಿಂದ ವರ್ಗಗಳ ವಿಷಯ ಬಂದರೆ ರಾಹುಲ್ ಗಾಂಧಿ ತುಂಬಾ ಎಚ್ಚರಿಕೆಯಿಂದಿರುತ್ತಾರೆ.
ಇವತ್ತು ಸಿದ್ದರಾಮಯ್ಯ ಅವರ ವಿಷಯದಲ್ಲೂ ಅವರು ದುಡುಕದೇ ಇರುವುದಕ್ಕೆ ಇದೇ ಮುಖ್ಯ ಕಾರಣ. ಇವತ್ತು ಕರ್ನಾಟಕದ ಅಹಿಂದ ವರ್ಗಗಳ ಪಾಲಿಗೆ ಸಾಲಿಡ್ಡು ನಾಯಕರಾಗಿರುವ ಸಿದ್ದರಾಮಯ್ಯ ಎಲ್ಲಿಯವರಿಗೆ ಸಿಎಂ ಹುದ್ದೆಯಲ್ಲಿರುತ್ತಾರೋ ಅಲ್ಲಿಯವರೆಗೆ ಅಹಿಂದ ವರ್ಗಗಳ ಮತ ಬ್ಯಾಂಕು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಜತೆಗಿರುತ್ತದೆ. ಆದರೆ ಒಂದು ಸಲ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ಬಯಸಿದರೆ ಅನುಮಾನವೇ ಬೇಡ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮಕಾಡೆ ಮಲಗುತ್ತದೆ. ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕರ್ನಾಟಕದ ರಾಜಕಾರಣವನ್ನು ಅಧ್ಯಯನ ಮಾಡುತ್ತಿರುವ ರಾಹುಲ್ ಗಾಂಧಿಯವರಿಗೆ ಇದು] ಮನದಟ್ಟಾಗಿದೆ. ಆದರೆ ಅವರಿಗೆ ಮನದಟ್ಟಾದರೂ ರಾಹುಲ್ ಗಾಂಧಿಯವರ ಹಿಂದಿರುವ ಶಕ್ತಿಗಳಿಗೆ ಅರ್ಥವಾಗುತ್ತಿಲ್ಲ.
ಅರ್ಥಾತ್, ರಾಹುಲ್ ಗಾಂಧಿಯವರ ಸಹೋದರಿ ಪ್ರಿಯಾಂಕಾ ಗಾಂಧಿ ಇರಬಹುದು, ಪ್ರಿಯಾಂಕಾ ಗಾಂಧಿಯವರ ಪತಿ ರಾಬರ್ಟ್ ವಾಧ್ರಾ ಇರಬಹುದು ಮತ್ತು ಮಗಳು, ಅಳಿಯನ ವಿಷಯ ಬಂದರೆ ವಿವಶರಾಗುವ ಸೋನಿಯಾ ಗಾಂಧಿ ಅವರಿರಬಹುದು. ಈ ಮೂವರು ಸಿದ್ದರಾಮಯ್ಯ ಅವರ ವಿರೋಧಿಗಳೇನಲ್ಲ. ಆದರೆ ಅವರು ಡಿ.ಕೆ.ಶಿವಕುಮಾರ್ ಅವರ ಪರವಾಗಿರುವವರು. ಕುತೂಹಲದ ಸಂಗತಿ ಎಂದರೆ ಸೋನಿಯಾ ಗಾಂಧಿ, ರಾಬರ್ಟ್ ವಾಧ್ರಾ ಮತ್ತು ಪ್ರಿಯಾಂಕಾ ಗಾಂಧಿ ಅವರು ಇವತ್ತು ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಒತ್ತಾಸೆಯಾಗಿದ್ದಾರೆ.
ಆದರೆ ಅವರ ಒತ್ತಾಸೆಯನ್ನು ರಾಹುಲ್ ಗಾಂಧಿ ಅವರು ಮುಖ್ಯವಾಗಿ ಪರಿಗಣಿಸುವುದಿಲ್ಲ. ಏಕೆಂದರೆ ತಾಯಿ, ಸಹೋದರಿ ಮತ್ತು ಅಳಿಯ ಸೇರಿದರೆ ಡಿ.ಕೆ.ಶಿವಕುಮಾರ್ ಅವರ ಪರ ಬ್ಯಾಟಿಂಗ್ ಮಾಡುತ್ತಾರೆ ಎಂಬುದು ರಾಹುಲ್ ಗಾಂಧಿಯವರಿಗೆ ಗೊತ್ತಿದೆ. ಹೀಗಾಗಿ ಅವರು ಯಾರು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿ ಬೇರೆ ಒಬ್ಬರನ್ನು ಮುಖ್ಯಮಂತ್ರಿ ಮಾಡಲು ಬಯಸುತ್ತಿಲ್ಲ.
ಕುತೂಹಲದ ಸಂಗತಿಯೆಂದರೆ ತಮ್ಮ ಮನದಿಂಗಿತವವನ್ನು ಅವರು ಕರ್ನಾಟಕದ ಹಲವು ನಾಯಕರ ಬಳಿ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಇತ್ತೀಚೆಗೆ ದಿಲ್ಲಿಗೆ ಹೋದ ಇಬ್ಬರು ಯುವ ಮಂತ್ರಿಗಳ ಬಳಿ ಮಾತನಾಡಿದ ರಾಹುಲ್ ಗಾಂಧಿ, ಇವತ್ತಿನ ದಿನಗಳಲ್ಲಿ ಕರ್ನಾಟಕದ ಸಿಎಂ ಆಗಬೇಕಾಗಿದ್ದವರು ನೀವು. ಆದರೆ ನೀವು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ನೀವು ಎಷ್ಟೇ ಒಳ್ಳೆಯ ಆಡಳಿತ ಕೊಟ್ಟರೂ ಜನನಾಯಕರಾಗುವುದು ಕಷ್ಟ.ಹೀಗಾಗಿ ಇವತ್ತಿನಿಂದಲೇ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.
ಇದರರ್ಥ ಬೇರೇನೂ ಅಲ್ಲ, ಸಿದ್ದರಾಮಯ್ಯ ಅವರು ಕೆಳಗಿಳಿದ ನಂತರ ಯುವ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಕನಸು ರಾಹುಲ್ ಗಾಂಧಿಯವರಿಗಿದೆ. ಆದರೆ ಅದೇನೇ ಮಾಡಿದರೂ ಅವರಿಗೆ ಡಿ.ಕೆ.ಶಿವಕುಮಾರ್ ಅವರನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಆದರೆ ಅದನ್ನು ಬಾಯಿ ಬಿಟ್ಟು ಹೇಳುವಂತಿಲ್ಲ. ಹೀಗಾಗಿ ಪರೋಕ್ಷವಾಗಿ ಯುವ ಸಚಿವರಿಬ್ಬರಿಗೆ ಅವರು ಒತ್ತಾಸೆ ಕೊಡುತ್ತಾರೆ.
ಅದೇ ರೀತಿ ಈ ಸಚಿವರು ದಿಲ್ಲಿಗೆ ಬಂದು ತಮ್ಮ ಬಳಿ ಅಧಿಕಾರ ಹಂಚಿಕೆಯ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಮಧ್ಯೆ ನಡೆದಿರುವ ಸಂಘರ್ಷದ ಬಗ್ಗೆ ಹೇಳಿದರೆ, ರೀ ನಾವು ಸಿದ್ದರಾಮಯ್ಯನವರ ಮನವೊಲಿಸದೆ ಮುಖ್ಯಮಂತ್ರಿ ಹುದ್ದೆಯ ವಿಷಯವನ್ನು ಸೆಟ್ಲ್ ಮಾಡಲು ಆಗುವುದಿಲ್ಲ. ಹೀಗಾಗಿ ಮೊದಲು ಸಿದ್ದರಾಮಯ್ಯನವರ ಮನವೊಲಿಸಿರಿ. ಆನಂತರ ಡಿ.ಕೆ.ಶಿವಕುಮಾರ್ ಅವರನ್ನು ತಂದು ಸಿಎಂ ಹುದ್ದೆಯಲ್ಲಿ ಕೂರಿಸೋಣ. ಹಾಗಂತ ಡಿ.ಕೆ. ಶಿವಕುಮಾರ್ ಅವರ ಬಳಿ ಈ ವಿಷಯವನ್ನು ಪ್ರಸ್ತಾಪಿಸಿ ಎಂದು ಹೇಳಿ ಕಳಿಸುತ್ತಾರೆ.
ಆದರೆ ಯಾರೇನೇ ಆಟವಾಡಲಿ, ಡಿ.ಕೆ.ಶಿವಕುಮಾರ್ ಮಾತ್ರ ತಮ್ಮ ಹಠ ಬಿಡುತ್ತಿಲ್ಲ. ಬದಲಿಗೆ ತಮಗೆ ಮುಖ್ಯಮಂತ್ರಿ ಪದವಿ ಸಿಗಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಹೀಗೆ ಅವರು ಒತ್ತಡ ಹೇರಿದಂತೆಲ್ಲ ರಾಹುಲ್ ಗಾಂಧಿ ಚಿಂತಾಕ್ರಾಂತರಾಗುತ್ತಾರೆ. ಈ ನಾಯಕತ್ವ ಹಂಚಿಕೆಯ ವಿಷಯದಲ್ಲಿ ತಾವು ಸ್ವಲ್ಪ ದುಡುಕಿದರೂ ಕಾಂಗ್ರೆಸ್ ಸರ್ಕಾರ ಕುಸಿಯುತ್ತದೆ ಎಂಬುದು ಅವರ ಸ್ಪಷ್ಟ ಆತಂಕ.
ಏಕೆಂದರೆ ಕರ್ನಾಟಕದಲ್ಲಿ ಅಹಿಂದ ವರ್ಗಗಳ ಮತ ಬ್ಯಾಂಕು ಸಾಲಿಡ್ಡಾಗಿ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಆದರೆ ಈ ಮಾತನ್ನು ಡಿ.ಕೆ.ಶಿವಕಮಾರ್ ಅವರಿಗೆ ಹೇಳುವುದು ರಾಹುಲ್ ಗಾಂಧಿಯವರಿಗೆ ಕಷ್ಟವಾಗುತ್ತಿದೆ. ಏಕೆಂದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಅಗತ್ಯವಾದ ಶಕ್ತಿಯ ಮೇಜರ್ ಪಾಲು ಕೊಟ್ಟವರು ಡಿ.ಕೆ. ಶಿವಕುಮಾರ್. ಅದಕ್ಕೂ ಮುನ್ನ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರಿಗೆ ಬಗ್ಗದೆ ಜೈಲಿಗೆ ಹೋದವರು.
ಹೀಗೆ ಪಕ್ಷಕ್ಕಾಗಿ ಯಾವುದೇ ಬಗೆಯ ಹೋರಾಟ ಮತ್ತು ಸಂಕಷ್ಟದಲ್ಲಿ ಪಕ್ಷಕ್ಕೆ ಬೇಕಾಗುವ ಅನಿವಾರ್ಯ ನಾಯಕ ಅನ್ನಿಸಿಕೊಳ್ಳುವ ಡಿ.ಕೆ.ಶಿವಕುಮಾರ್ ಅವರು ಭವಿಷ್ಯದಲ್ಲೂ ಬೇಕಲ್ಲ? ಹೀಗಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕದ ರಾಜಕಾರಣದ ತಳಬುಡವನ್ನು ವಿವರಿಸಲು ರಾಹುಲ್ ಗಾಂಧಿ ಹಿಂಜರಿಯುತ್ತಿದ್ದಾರೆ. ಪರಿಣಾಮ? ಒಂದು ಕಡೆ ಸಿದ್ದರಾಮಯ್ಯ ಅವರು ಹೇಳಿದಂತೆ ಸಂಪುಟ ಸರ್ಜರಿಗೆ ಅವರು ಮುಂದಾಗುತ್ತಿಲ್ಲ. ಅದೇ ರೀತಿ ಡಿ.ಕೆ. ಶಿವಕುಮಾರ್ ಅವರ ಜತೆ ಮುಕ್ತವಾಗಿ ಮಾತನಾಡುವುದಕ್ಕೂ ತಯಾರಾಗುತ್ತಿಲ್ಲ.
ಹೀಗಾಗಿ ಅಧಿಕಾರ ಹಂಚಿಕೆಯ ಮಾತು ಬಂದಾಗಲೆಲ್ಲ ಡಿ.ಕೆ. ಶಿವಕುಮಾರ್ ಅವರು ತಮ್ಮ ಪಟ್ಟು ಹಾಕಿಕೊಂಡು ಮುಂದಿನ ಹೆಜ್ಜೆ ಇಡುತ್ತಾರೆ. ಅದೇ ರೀತಿ ಸಿದ್ದರಾಮಯ್ಯ ಅವರು ಕೂಡ ತಮ್ಮ ಪಟ್ಟು ಹಾಕಿಕೊಂಡು ಮುಂದುವರಿಯುತ್ತಾರೆ. ಪರಿಣಾಮ ಏನಾಗಿದೆ ಎಂದರೆ ಯಾವತ್ತೋ ನಡೆಯಬೇಕಿದ್ದ ಸಂಪುಟ ಪುನಾರಚನೆ ಕಾರ್ಯ ವಿಳಂಬವಾಗುತ್ತಲೇ ನಡೆದಿದೆ. ಯಥಾ ಪ್ರಕಾರ ಇದರ ಹಿಂದೆ ಕೇಳುತ್ತಿರುವುದೂ ಒಂದೇ ಮಾತು. ಸಿದ್ದರಾಮಯ್ಯ ಅವರು ಹೇಳಿದಂತೆ ಸಂಪುಟ ಪುನಾರಚನೆ ಮಾಡುವ ಮುನ್ನ ಮುಖ್ಯಮಂತ್ರಿ ಹುದ್ದೆಯ ವಿಷಯವನ್ನು ಸೆಟ್ಲ್ ಮಾಡಿ ಎಂಬುದು. ಅವರ ಮಾತನ್ನು ಸ್ವೀಕರಿಸಲು ರಾಹುಲ್ ಗಾಂಧಿ ಅವರಿಗೆ ಆಗುತ್ತಿಲ್ಲ. ಹಾಗೊಂದು ವೇಳೆ ತಾವು ಮಾತನಾಡಿದರೆ ಸರ್ಕಾರಕ್ಕೆ ಅಪಾಯ ನಿಶ್ಚಿತ ಎಂಬುದು ಅವರಿಗೆ ಗೊತ್ತಿದೆ.
ಹೀಗಾಗಿ ಯಥಾ ಪ್ರಕಾರ ಅವರು ಅಧಿಕಾರ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳಲು ಫೆಬ್ರವರಿ ೧ರ ಗಡುವು ಕೊಟ್ಟಿದ್ದಾರೆ. ಆದರೆ ಇದು ಕೂಡ ಸಮಯ ತಳ್ಳುವ ನೀತಿಯೇ ಎಂಬುದು ಕಾಂಗ್ರೆಸ್ ವಲಯಗಳ ಅಭಿಪ್ರಾಯ. ಅರ್ಥಾತ್, ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಆಗುವ ಅಪಾಯವೇನು? ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಹೇಳಲು ರಾಹುಲ್ ಗಾಂಧಿ ಇನ್ನೂ ಮೀನಮೇಷ ಎಣಿಸುತ್ತಿದ್ದಾರೆ.
” ಕರ್ನಾಟಕದಲ್ಲಿ ಅಹಿಂದ ವರ್ಗಗಳ ಮತ ಬ್ಯಾಂಕು ಸಾಲಿಡ್ಡಾಗಿ ಸಿದ್ದರಾಮಯ್ಯನವರ ಬೆನ್ನಿಗೆ ನಿಂತಿದೆ. ಆದರೆ, ಈ ಮಾತನ್ನು ಡಿ.ಕೆ.ಶಿವಕಮಾರ್ ಅವರಿಗೆ ಹೇಳುವುದು ರಾಹುಲ್ ಗಾಂಧಿಯವರಿಗೆ ಕಷ್ಟವಾಗುತ್ತಿದೆ.”
ಮಹಾದೇಶ್ ಎಂ ಗೌಡ, ಹನೂರು ತಾಲ್ಲೂಕು ವರದಿಗಾರರು ಹನೂರು: ಗುಂಡ್ಲುಪೇಟೆ ತಾಲೂಕಿನ ನಂಜದೇವನಪುರ ಗ್ರಾಮ ಸುತ್ತಮುತ್ತಲು ಬೀಡುಬಿಟ್ಟಿದ್ದ ಎರಡು ಹುಲಿ…
ಹುಣಸೂರು: ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಭರಣ ಮಳಿಗೆಯೊಂದರಲ್ಲಿ ಡಿಸೆಂಬರ್.28ರಂದು ನಡೆದ 10 ಕೋಟಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ…
ಬೆಂಗಳೂರು: ಅಣ್ಣ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿಯಿಂದ ಒಳ್ಳೆಯ ಸುದ್ದಿ ಸಿಗುತ್ತದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಡಿಸಿಎಂ…
ದಾವಣಗೆರೆ: ಕೆಲ ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಕಿತ್ತೂರು ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಮೃತಪಟ್ಟಿರುವ ಘಟನೆ ನಡೆದ…
ನುಡಿದರೆ ಮುತ್ತಿನ ಹಾರದಂತಿರಬೇಕು ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು ನುಡಿದರೆ ಸಟಿಕದ ಸಲಾಕೆಯಂತಿರಬೇಕು ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ…
ನವೀನ್ ಡಿಸೋಜ ನಗರಕ್ಕೆ ನೀರು ಸರಬರಾಜಾಗುವ ಎಲ್ಲ ಮೂಲಗಳಲ್ಲೂ ನೀರು ಸಮೃದ್ಧ; ಅಗತ್ಯ ಮುನ್ನೆಚ್ಚರಿಕೆ ಕ್ರಮ ಮಡಿಕೇರಿ: ಕಳೆದ ಸಾಲಿನಲ್ಲಿ…