ಎಡಿಟೋರಿಯಲ್

ಕಳಚುತ್ತಿದೆ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡ

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸಟಿಕದ ಸಲಾಕೆಯಂತಿರಬೇಕು

ನುಡಿದರೆ ಲಿಂಗಮೆಚ್ಚಿ ಅಹುದಹುದೆನಬೇಕು

ನುಡಿಯೊಳಗಾಗಿ ನಡೆಯದಿದ್ದರೆ

ಕೂಡಲಸಂಗಮದೇವನೆಂತೊಲಿವನಯ್ಯಾ

-ಬಸವಣ್ಣ

ಸ್ವಜನ ಪಕ್ಷಪಾತ, ಹಗರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ರೌಡಿಸಂ, ಹೆಣ್ಣುಬಾಕತನ, ಅಧಿಕಾರಿಗಳ ಮೇಲೆ ಒತ್ತಡ ಹೇರಿ ತಮ್ಮ ತಮ್ಮ ಹಿಂಬಾಲಕರ ಮೂಲಕ ಕಾನೂನು ಬಾಹಿರ ಕೆಲಸ ಮಾಡಿಸಿ ಕೊಳ್ಳುವುದು ರಾಜಕಾರಣದ ಮಟ್ಟಿಗೆ ಹೊಸದೇನೂ ಅಲ್ಲ. ಪ್ರಜಾಪ್ರಭುತ್ವದ ಆರಂಭದ ದಿನಗಳಿಂದಲೂ ಆಳುವವರ ದೌರ್ಬಲ್ಯ ಹುಡುಕಿ, ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿ ಕಾರ್ಯ ಸಾಧನೆ ಮಾಡಿಕೊಳ್ಳುವುದು ನಡೆದೇ ಇದೆ.

ಆದರೆ, ರಾಜಕಾರಣಿಗಳ ಈ ಎಲ್ಲ ವರ್ತನೆಗಳು ಬಹಿರಂಗವಾಗಿ ತೆರೆಯ ಮೇಲೆ ಕಾಣಿಸಿಕೊಳ್ಳದೆ ತೆರೆಯ ಮರೆಯಲ್ಲಿ ನಡೆಯುತ್ತಿದ್ದರಿಂದ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಈ ಆಟಗಳು ಆಡಳಿತದ ಪಡಸಾಲೆಯಿಂದ ಆಚೆ ಕಾಣಿಸಿಕೊಳ್ಳದೆ ರಾಜಕೀಯ ನಾಯಕರುಗಳ ಮೇಲೆ ಗೌರವ ಭಾವನೆ ಉಳಿದುಕೊಂಡಿತ್ತು.

೧೯೭೦-೮೦ರ ದಶಕದವರೆಗೂ ಸ್ಟುಡಿಯೋಗಳಲ್ಲಿ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡುತ್ತಿದ್ದರಿಂದ ಚಿತ್ರ ತೆರೆಗೆ ಬಂದಾಗ ಜನ ಕುತೂಹಲದಿಂದ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಆದರೀಗ ಒಳಾಂಗಣ ಕ್ಕಿಂತ ಹೊರಾಂಗಣ ಚಿತ್ರೀಕರಣವೇ ಹೆಚ್ಚಾಗಿರುವುದರಿಂದ ಜನರಿಗೆ ಸಿನಿಮಾದ ಬಗೆಗಿನ ಕುತೂಹಲ ಉಳಿಯದೇ ಅದ್ಧೂರಿ ಪ್ರಚಾರದೊಂದಿಗೆ ತೆರೆಕಂಡ ಸಿನಿಮಾ ಪ್ರೇಕ್ಷಕರಿಲ್ಲದೆ ಒಂದೆರಡು ದಿನಗಳಲ್ಲೇ ಚಿತ್ರಮಂದಿರಗಳಿಂದ ಎತ್ತಂಗಡಿಯಾಗುವುದನ್ನು ಕಾಣ ಬಹುದು. ರಾಜಕಾರಣದ ಕತೆಯೂ ಇದಕ್ಕೆ ಹೊರತಾಗಿಲ್ಲ. ಹಿಂದೆಲ್ಲಾ ರಾಜಕಾರಣಕ್ಕೆ ಬರುವವರು ಪ್ರಾಮಾಣಿಕ ಕಳಕಳಿಯಿಂದ ಸಮಾಜದ ಸೇವೆ ಮಾಡಲು ಬರುತ್ತಿದ್ದರು. ಹೀಗಾಗಿ ಕಣದಲ್ಲಿರುವ ಉತ್ತಮರಲ್ಲಿ ಅತ್ಯುತ್ತ ಮರು ಯಾರು ಎಂಬ ಆಯ್ಕೆಯ ಸವಾಲು ಸಮಾಜದ ಮೇಲಿರುತ್ತಿತ್ತು.

ಅಂದಿನ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಸಮಾಜವೇ ಹಣ ಹೊಂದಿಸಿ ಕೊಡುವ ಪರಿಪಾಠವಿತ್ತು. ಆದರೆ, ಇಂದಿನ ರಾಜಕಾರಣದಲ್ಲಿ ಸಮಾಜ ಸೇವೆ ಗೌಣವಾಗಿ ಚುನಾವಣೆ ಎಂದರೆ ‘ಹಣ ಬಿತ್ತಿ ಬೆಳೆಯುವ’ ಪರಿಸ್ಥಿತಿಗೆ ತಂದು ನಿಲ್ಲಿಸಿಕೊಂಡಿದ್ದೇವೆ. ಗಣಿ, ರಿಯಲ್ ಎಸ್ಟೇಟ್ ಉದ್ದಿಮೆದಾರರು ತಮ್ಮ ಉದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ರಾಜಕಾರಣಕ್ಕೆ ಬರುತ್ತಿರುವುದರಿಂದ ಹಣಬಲ, ತೋಳ್ಬಲ, ಜಾತಿಯ ಬಲದ ಮಧ್ಯೆ ಜನರ ಕಷ್ಟ-ಸುಖ ವಿಚಾರಿಸುವ, ನಾಡಿನ ಅಭಿವೃದ್ಧಿ ಬಗ್ಗೆ ಚಿಂತಿಸುವ ಜನ ನಾಯಕರು ರೂಪುಗೊಳ್ಳುತ್ತಿಲ್ಲ. ಶಾಸನ ಸಭೆಗಳಲ್ಲಿ ಹಿಂದಿನವರು ಅಳೆದು-ತೂಗಿ ಮಾತನಾಡಿದರೆ, ಇಂದು ಯಾವುದೇ ವಿಷಯಗಳ ಮೇಲೆ ಗಂಭೀರ ಚರ್ಚೆ ಗಳಾಗದೆ, ತನ್ನೆದುರು ಕುಳಿತ ಮತ್ತೊಬ್ಬ ಜನಪ್ರತಿನಿಧಿಯನ್ನು ಏಕವಚನದಲ್ಲಿ, ಅಶ್ಲೀಲ ಪದ ಪ್ರಯೋಗ ಮಾಡಿ ನಿಂದಿಸುವ, ತೋಳೇರಿಸಿ, ತೊಡೆತಟ್ಟಿ ಮೇಲೆರಗುವ ಅಸಭ್ಯ ವರ್ತನೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಕಾಣುವಂತಾಗಿದೆ.

ರಾಜಕಾರಣದಲ್ಲಿ ನಾಯಕರೆನಿಸಿಕೊಂಡವರು ತೋರುತ್ತಿರುವ ಈ ವರ್ತನೆಯನ್ನೇ ಅವರ ಹಿಂಬಾಲಕರೂ ಸಮಾಜದ ಮೇಲೆ ಅದರಲ್ಲೂ ಅಧಿಕಾರಿಗಳ ಮೇಲೆ ಪ್ರಯೋಗಿಸಿ ಕಾರ್ಯಸಾಧನೆ ಮಾಡಿಕೊಳ್ಳುತ್ತಿದ್ದಾರೆ. ಶಿಡ್ಲಘಟ್ಟದಲ್ಲಿ ಸಚಿವರೊಬ್ಬರ ಪುತ್ರ ನಾಯಕ ನಟನಾಗಿ ಅಭಿನಯಿಸಿರುವ ಸಿನಿಮಾ ಪ್ರಮೋಷನ್‌ಗಾಗಿ ಸ್ಥಳೀಯ ಪುರಸಭೆಯ ಅನುಮತಿಯನ್ನೇ ಪಡೆಯದೆ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುವಂತೆ ಕಟ್ಟಿದ್ದ ಫ್ಲೆಕ್ಸ್ ತೆರವುಗೊಳಿಸಿದ ಕಾರಣಕ್ಕೆ ಅಲ್ಲಿನ ಮುಖ್ಯಾಧಿಕಾರಿಯ ಮೇಲೆ ಅದರಲ್ಲೂ ಆಕೆ ಮಹಿಳೆ ಎಂಬುದನ್ನೂ ಕಾಣದೆ ಆ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಾಚಾಮಗೋಚರವಾಗಿ ಬೈದು, ಜೀವ ಬೆದರಿಕೆ ಒಡ್ಡುವ ಮಟ್ಟಕ್ಕೆ ಇಳಿಯುವುದು ಆತನ ಅರಿವುಗೇಡಿತನವನ್ನು ತೋರುತ್ತದೆ. ಘಟನೆಯ ಬಳಿಕ ಕನಿಷ್ಠ ಸೌಜನ್ಯಕ್ಕಾದರೂ ನೊಂದ ಮಹಿಳಾ ಅಧಿಕಾರಿಗೆ ವೈಯಕ್ತಿಕವಾಗಿ ಕ್ಷಮೆ ಕೋರಿ ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸುವ ಬದಲಿಗೆ, ತಾನಾಡಿದ್ದೇ ಸರಿ, ತನ್ನ ಮಾತಿನಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡುವುದು ಧಾರ್ಷ್ಟ್ಯತನವು ರಾಜ್ಯವನ್ನು ಆಳುವ ಪಕ್ಷ ನಮ್ಮದು ಎಂಬ ಅಧಿಕಾರದ ಮದವಲ್ಲದೇ ಮತ್ತೇನು? ಮುಖ್ಯಾಧಿಕಾರಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿ ಮೂರ‍್ನಾಲ್ಕು ದಿನ ಕಳೆದರೂ ನಮ್ಮ ಪೊಲೀಸ್ ವ್ಯವಸ್ಥೆ ಆರೋಪಿಯನ್ನು ಬಂಧಿಸುವ ದುಸ್ಸಾಹಸಕ್ಕೆ ಕೈಹಾಕುವುದಿಲ್ಲ. ಬದಲಿಗೆ ಆತ ನಿರೀಕ್ಷಣಾ ಜಾಮೀನು ಪಡೆದು ಹೊರಬಂದ ಬಳಿಕ ನಡೆಯುವ ಭಾಜಭಜಂತ್ರಿ ಮೆರ ವಣಿಗೆಯ ಬಂದೋ ಬಸ್ತ್‌ಗೆ ಟೊಂಕಕಟ್ಟಿ ನಿಲ್ಲುತ್ತದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣದ ಗುಡಮಾದನಹಳ್ಳಿಯಲ್ಲಿ ಉದ್ದೇಶಿತ ‘ನಿಮ್ಹಾನ್ಸ್’ ಮಾದರಿ ಆಸ್ಪತ್ರೆ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮುಂದಾದ ಮಹಿಳಾ ಅಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಯತ್ನಿಸಿ, ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ. ಈ ಸಂಬಂಧ ದೂರು ದಾಖಲಾಗಿದೆ.

ಮೊನ್ನೆ ಶಿಡ್ಲಘಟ್ಟ, ನಿನ್ನೆ ಸಿಎಂ ಸ್ವಕ್ಷೇತ್ರ ಹೀಗೆ ಅಲ್ಲೊಂದು ಇಲ್ಲೊಂದು ಪ್ರಕರಣಗಳಾಗುತ್ತಿವೆ ಎಂಬುದಕ್ಕಿಂತಲೂ ಅಧಿಕಾರಿಗಳಿಗೆ ಕಾನೂನುಬದ್ಧವಾಗಿ ಕೆಲಸ ಮಾಡಲು ಬಿಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಗಮನಿಸ ಬೇಕಾದ ಸಂಗತಿ. ಸರ್ಕಾರಿ ನೌಕರರ ಹಿತಕಾಯಬೇಕಾದ ನೌಕರರ ಸಂಘ ಕೂಡ ಆಳುವವರ ಮರ್ಜಿಗೆ ಒಳಗಾಗಿ ಘಟನೆಯ ಬಗ್ಗೆ ಪ್ರಬಲ ಧ್ವನಿ ಎತ್ತದಿರುವುದು ದುರಂತವೇ ಸರಿ.

ರಾಜಕೀಯ ನಾಯಕರ ಹಿಂಬಾಲಕರುಗಳಾದ ನಾವು ಏನು ಮಾಡಿದರೂ ನಮ್ಮ ಬೆಂಬಲಕ್ಕೆ ನಮ್ಮ ನಾಯಕರು ಇದ್ದಾರೆ ಎಂಬ ಅಹಂನ ಮನಸ್ಥಿತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ ಏಕಾಂತವಾಗಿ ಆಡುವ ಮಾತುಗಳೂ ಬಹಿರಂಗಗೊಳ್ಳುತ್ತಾ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡವನ್ನು ಕಳಚುತ್ತಿದೆ.

ತಾವು ಧರಿಸುವ ಶ್ವೇತವಸದಂತೆಯೇ ತಮ್ಮ ಚಾರಿತ್ರ್ಯ, ನಡೆ-ನುಡಿ ಇರಬೇಕೆಂದು ಸಮಾಜ ಬಯಸುತ್ತದೆ. ಸಂಸ್ಕೃತಿಹೀನ ನಡವಳಿಕೆಯನ್ನು ಸಮಾಜ ಒಪ್ಪುವುದಿಲ್ಲ ಎನ್ನುವ ಅರಿವು ಇಂದಿನ ರಾಜಕಾರಣಿಗಳಿಗೆ ಬರಬೇಕಿದೆ.

” ರಾಜಕೀಯ ನಾಯಕರ ಹಿಂಬಾಲಕರುಗಳಾದ ನಾವು ಏನು ಮಾಡಿದರೂ ನಮ್ಮ ಬೆಂಬಲಕ್ಕೆ ನಮ್ಮ ನಾಯಕರು ಇದ್ದಾರೆ ಎಂಬ ಅಹಂನ ಮನಸ್ಥಿತಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ ಏಕಾಂತವಾಗಿ ಆಡುವ ಮಾತುಗಳೂ ಬಹಿರಂಗಗೊಳ್ಳುತ್ತಾ ರಾಜಕಾರಣಿಗಳ ಸಭ್ಯತೆಯ ಸೋಗಿನ ಮುಖವಾಡವನ್ನು ಕಳಚುತ್ತಿದೆ.”

 

 

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

22 hours ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

22 hours ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

22 hours ago

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು,…

22 hours ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

22 hours ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

22 hours ago