Andolana originals

ಚಲನಚಿತ್ರ: ಪ್ರಮಾಣೀಕರಣ ಮಂಡಳಿಯದೇ ಅಂತಿಮ ತೀರ್ಪು

ವೈಡ್‌ ಆಂಗಲ್:‌ ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ 

ಇಂದು ಬಿಡುಗಡೆಯಾಗುತ್ತಿರುವ ‘ ಬಾಸ್’ಎಂದೋ ತೆರೆಗೆ ಬರಬೇಕಾಗಿತ್ತು. ಆದರೆ ಚಿತ್ರದ ಹೆಸರು, ಅದರ ಆರಂಭದ ದಿನಗಳ ಪ್ರಚಾರ ಅದಕ್ಕೆ ತಡೆಯಾಗಿತ್ತು. ನಟ ದರ್ಶನ್ ಅಭಿಮಾನಿಗಳು ಅವರನ್ನು ಡಿ-ಬಾಸ್ ಎಂದು ಸಂಬೋಧಿಸುತ್ತಾರೆ. ಮಾತ್ರವಲ್ಲ, ಈಹಿಂದೆ ಅವರು ಅಭಿನಯಿಸಿದ ಚಿತ್ರವೊಂದರ ಹೆಸರು ಕೂಡಾ ‘ ಬಾಸ್’ಆಗಿತ್ತು. ಆ ಚಿತ್ರ ಬಂದ ನಂತರ ಅವರನ್ನು ಹಾಗೆ ಕರೆದರೋ ಅಥವಾ ಮೊದಲೇ ಕರೆದರೋ ಎನ್ನುವುದು ಇಲ್ಲಿ ಪ್ರಸ್ತುತ ಅಲ್ಲ.

ಈ ಚಿತ್ರದ ಬಿಡುಗಡೆಯನ್ನು ತಡೆಯಬೇಕು, ಪ್ರಮಾಣೀಕರಣ ಮಂಡಳಿ ನೀಡಿದ ಪ್ರಮಾಣಪತ್ರವನ್ನು ರದ್ದುಪಡಿಸಬೇಕು ಮತ್ತು ಚಿತ್ರವನ್ನು ಪ್ರದರ್ಶಿಸದಂತೆ ನಿರ್ದೇಶನ ನೀಡಬೇಕು ಎಂದು ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಅವರು ಇದಕ್ಕೆ ನೀಡಿದ್ದ ಪ್ರಮುಖ ಕಾರಣಗಳು ಹೀಗಿದ್ದವು: ಸಾರ್ವಜನಿಕವಾಗಿ ದರ್ಶನ್ ಅವರನ್ನು ‘ ಡಿ-ಬಾಸ್’ಎಂದು ಗುರುತಿಸುತ್ತಾರೆ. ಚಿತ್ರದ ಟೀಸರ್‌ನಲ್ಲಿ ‘ ಇನ್ಸ್‌ಪೈರ್ಡ್ ಬೈ ಟ್ರೂ ಈವೆಂಟ್ಸ್’ ಎಂದು ಹೇಳಲಾಗಿದೆ. ಮಾತ್ರವಲ್ಲ, ಅಲ್ಲಿ ತೋರಿಸಿದ ಹಲವು ದೃಶ್ಯಗಳು ಈಗ ನಡೆಯುತ್ತಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೋಲುತ್ತವೆ. ಇದರಿಂದ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿ, ನ್ಯಾಯಯುತ ವಿಚಾರಣೆಯ ಹಕ್ಕಿಗೆ ಧಕ್ಕೆಯಾಗಬಹುದು.

ಆದರೆ ನಿರ್ಮಾಪಕರು ಇದನ್ನು ಒಪ್ಪಲು ತಯಾರಿರಲಿಲ್ಲ. ಅವರ ಪ್ರಕಾರ, ಚಿತ್ರದ ನಾಯಕ ನಟನಲ್ಲ, ಕ್ರಿಕೆಟ್ ಆಟಗಾರ. ಆತನ ಹೆಸರು ತನುಷ್. ‘ಬಾಸ್’ ಎನ್ನುವುದು ಅಭಿಮಾನಿಗಳು ಅವನಿಗೆ ಕೊಟ್ಟ ಬಿರುದು; ಅದು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ಸೂಚಿಸುವುದಿಲ್ಲ. ಈ ಚಿತ್ರ ಸೃಜನಾತ್ಮಕ ಕೃತಿಯೇ ಹೊರತು ಯಾರ ಜೀವನಚರಿತ್ರೆಯೂ ಅಲ್ಲ. ಪರಸ್ಪರ ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು, ಮೇಲ್ಮನವಿಯನ್ನು ವಜಗೊಳಿಸಿ ಚಿತ್ರದ ಬಿಡುಗಡೆಗೆ ಅವಕಾಶ ನೀಡಿದರು. ನ್ಯಾಯಾಲಯ ಈ ಕುರಿತಂತೆ ವ್ಯಕ್ತಪಡಿಸಿದ ಅಭಿಪ್ರಾಯ ಮುಂದಿನ ದಿನಗಳಲ್ಲಿ ಇಂತಹ ಪ್ರಸಂಗಗಳು ಮತ್ತೆ ಆಗದಂತೆ ತಡೆಯಬಹುದು. ಹಣಕಾಸಿನ ವ್ಯಾಜ್ಯಗಳಿಂದ ಚಲನಚಿತ್ರಗಳ ಬಿಡುಗಡೆಗೆ ತಡೆಯೊಡ್ಡಿದ ಸಾಕಷ್ಟು ಪ್ರಸಂಗಗಳಿವೆ. ಕೃತಿಚೌರ್ಯ ಸಂದರ್ಭದಲ್ಲೂ ಇದೆ. ಆದರೆ ‘ಬಾಸ್’ ಚಿತ್ರದ ತಡೆಗೆ ನೀಡಿದ ಕಾರಣವನ್ನು ನ್ಯಾಯಾಲಯ ಒಪ್ಪಲಿಲ್ಲ.

ಚಲನಚಿತ್ರ ನ್ಯಾಯಾಲಯವನ್ನು ಪ್ರಭಾವಿಸುವುದಿಲ್ಲ ಎನ್ನುವುದು ಅದರ ಮುಖ್ಯಾಂಶ. ಚಿತ್ರದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಪ್ರಕರಣಕ್ಕೆ ಹೋಲುವ ಕೆಲವು ಘಟನೆಗಳನ್ನು ತೋರಿಸಿದ ಮಾತ್ರಕ್ಕೆ, ಆ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಅದರಿಂದ ಪ್ರಭಾವಿತವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ನ್ಯಾಯಾಲಯಗಳು ಸಾಕ್ಷ್ಯ ಮತ್ತು ಕಾನೂನಿನ ಆಧಾರದ ಮೇಲೆ ತೀರ್ಪು ನೀಡುತ್ತವೆ; ಸಿನಿಮಾಗಳ ಆಧಾರದ ಮೇಲೆ ಅಲ್ಲ. ನ್ಯಾಯಮೂರ್ತಿಗಳು ಕಾನೂನು ತರಬೇತಿ ಪಡೆದ ತೀರ್ಪುಗಾರರು ಎಂದು ಹೇಳುವ ಮೂಲಕ, ನ್ಯಾಯಾಽಶರು ಸಾಮಾಜಿಕ ಮಾಧ್ಯಮ, ಸುದ್ದಿ ಅಥವಾ ಸಿನಿಮಾಗಳಿಂದ ಪ್ರಭಾವಿತರಾಗದೆ, ನ್ಯಾಯಾಲಯದಲ್ಲಿ ದಾಖಲಾಗುವ ಸಾಕ್ಷ್ಯಗಳ ಆಧಾರದ ಮೇಲೆ ಮಾತ್ರ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಹೇಳಿತು.

‘ಬಾಸ್’ ಸಿನಿಮಾ ಮಾತ್ರವಲ್ಲ, ಇತ್ತೀಚೆಗೆ ಒಡಿಶಾದಲ್ಲಿ ತಯಾರಾದ ಅನಿಮೇಶನ್ ಚಿತ್ರವೊಂದು ಬೇರೊಂದು ಕಾರಣದಿಂದ ಕಟಕಟೆ ಏರಿತ್ತು. ‘ಮಹಾಪ್ರಭು ಜಗನ್ನಾಥ್’- ಆ ಅನಿಮೇಟೆಡ್ ಚಿತ್ರದ ಹೆಸರು. ಅದು ಒಡಿಶಾದ ಆರಾಧ್ಯ ದೈವ ಜಗನ್ನಾಥ ಸ್ವಾಮಿ ಅವರ ಜೀವನ, ಸಂಪ್ರದಾಯ ಮತ್ತು ಭಕ್ತಿಯ ಪರಂಪರೆಯನ್ನು ಮಕ್ಕಳಿಗೂ ಸಾಮಾನ್ಯ ಪ್ರೇಕ್ಷಕರಿಗೂ ತಲುಪಿಸುವ ಉದ್ದೇಶದಿಂದ ನಿರ್ಮಿಸಲಾದ ೩ಡಿ ಅನಿಮೇಟೆಡ್ ಚಿತ್ರ. ಚಿತ್ರವನ್ನು ಕುಟುಂಬ ಮತ್ತು ವಿಶೇಷವಾಗಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ನಿರ್ಮಾಪಕರು ಇದನ್ನು ಧಾರ್ಮಿಕ ಶಿಕ್ಷಣ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಪ್ರಯತ್ನ ಎಂದು ಹೇಳಿದ್ದರು. ಆದರೆ ದೇವಸ್ಥಾನದ ಟ್ರಸ್ಟಿಗಳು ಮತ್ತು ಆಡಳಿತ ವರ್ಗ ಅದರ ವಿರುದ್ಧ ಒಡಿಶಾ ಹೈಕೋರ್ಟಿನ ಮೊರೆ ಹೋಯಿತು. ಜಗನ್ನಾಥ ಸ್ವಾಮಿಯ ರೂಪ ಮತ್ತು ಕೆಲವು ಘಟನೆಗಳನ್ನು ಅನಿಮೇಷನ್‌ನಲ್ಲಿ ಚಿತ್ರಿಸಿರುವ ವಿಧಾನವು ಸಂಪ್ರದಾಯಬದ್ಧ ನಂಬಿಕೆಗಳಿಗೆ ವಿರುದ್ಧವಾಗಿದೆ, ಪುರಿ ಜಗನ್ನಾಥ ದೇವಸ್ಥಾನದ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಚಿತ್ರದಲ್ಲಿ ಸರಿಯಾಗಿ ಪ್ರತಿಬಿಂಬಿಸಲಾಗಿಲ್ಲ, ವಿಶೇಷವಾಗಿ ರಥಯಾತ್ರೆ ನಡೆಯುತ್ತಿರುವ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾದರೆ ಕೋಟ್ಯಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಬಹುದು ಎನ್ನುವುದಾಗಿತ್ತು ಅವರ ವಾದ. ಅವರ ವಾದವನ್ನು ಪುರಸ್ಕರಿಸಿ, ಕಳೆದ ತಿಂಗಳು ತೆರೆಕಾಣಬೇಕಾಗಿದ್ದ ಚಿತ್ರಕ್ಕೆ ಒಡಿಶಾ ಹೈಕೋರ್ಟು ತಡೆ ನೀಡಿತು. ನಿರ್ಮಾಪಕರು ಸುಪ್ರೀಂ ಕೋರ್ಟಿನ ಕದ ತಟ್ಟಿದರು.

ಸುಪ್ರೀಂ ಕೋರ್ಟು ಕಲಾತ್ಮಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳ ನಡುವೆ ಸಮತೋಲನ ಸಾಽಸಲು ಪ್ರಯತ್ನಿಸಿತು. ರಥಯಾತ್ರೆ ಮುಗಿಯುವವರೆಗೆ ಚಿತ್ರವನ್ನು ಬಿಡುಗಡೆ ಮಾಡಬಾರದು, ನಂತರ ಬಿಡುಗಡೆ ಮಾಡಬಹುದು ಎಂದು ತೀರ್ಪಿತ್ತಿತು. ಬೆನ್ನ ಒಡಿಶಾ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಕೂಡಾ ತಿರಸ್ಕರಿಸಿತು. ೨೦೨೩ರಲ್ಲಿ ‘ ದ ಕೇರಳ ಸ್ಟೋರಿ’ಚಿತ್ರ ನ್ಯಾಯಾಲಯದ ಮೆಟ್ಟಲೇರಿತ್ತು. ಅದು ಕೇರಳದ ಕೆಲವು ಯುವತಿಯರನ್ನು ಪ್ರೇಮದ ಹೆಸರಿನಲ್ಲಿ ಮತಾಂತರಗೊಳಿಸಿ ನಂತರ ಐಸಿಸ್ ಉಗ್ರ ಸಂಘಟನೆಗೆ ಕೊಂಡೊಯ್ಯಲಾಗುತ್ತಿದೆ ಎನ್ನುವ ಕಥಾಹಂದರವನ್ನು ಹೊಂದಿತ್ತು. ಚಿತ್ರದ ಟೀಸರ್‌ನಲ್ಲಿ ಆರಂಭದಲ್ಲಿ ‘ ೩೨,೦೦೦ ಮಹಿಳೆಯರು’ಎಂಬ ಸಂಖ್ಯೆಯನ್ನು ಉಖಿಸಲಾಗಿತ್ತು. ಇದೇ ಅತಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ನಂತರ ಈ ಅಂಕಿಅಂಶವನ್ನು ಸಾಕ್ಷ್ಯಾಧಾರವಿಲ್ಲದೆ ಬಳಸಲಾಗಿದೆ ಎಂಬ ಟೀಕೆಯ ನಡುವೆ, ಅದನ್ನುಒಪ್ಪಿಕೊಂಡ ನಿರ್ಮಾಪಕರು ಟ್ರೇಲರ್‌ನ ವಿವರಣೆಯಲ್ಲಿ ಬದಲಾವಣೆ ಮಾಡುವುದಾಗಿ ನ್ಯಾಯಾಲಯದಲ್ಲಿ ಹೇಳಿದರು.

ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡ ಚಿತ್ರ, ಇದು ಕೇರಳದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಬಹುದು, ನೈಜ ಘಟನೆಗಳನ್ನು ಅತಿರಂಜಿತವಾಗಿ ಚಿತ್ರಿಸಲಾಗಿದೆ, ಧಾರ್ಮಿಕ ದ್ವೇಷಕ್ಕೆ ಕಾರಣವಾಗಬಹುದು ಎಂದು ಸಾರ್ವಜನಿಕ ಹಿತಾಸಕ್ತಿಯ ದೂರುಗಳೂ ಅಲ್ಲಿದ್ದವು. ಕೆಲವು ರಾಜ್ಯಗಳಲ್ಲಿ ಪ್ರದರ್ಶಕರು ಅದನ್ನು ಬಿಡುಗಡೆ ಮಾಡುವುದಿಲ್ಲ ಎಂದರೆ, ಪ. ಬಂಗಾಳ ಸರ್ಕಾರ ಅದನ್ನು ನಿಷೇಧಿಸಿತು. ಸುಪ್ರೀಂ ಕೋರ್ಟು ಈ ನಿಷೇಧವನ್ನು ಅಮಾನತುಗೊಳಿಸಿ, ಚಲನಚಿತ್ರ ಒಂದು ಅಭಿವ್ಯಕ್ತಿ, ಅದು ಇಷ್ಟವಾಗದಿದ್ದರೆ ನೋಡಬೇಡಿ, ಆದರೆ ಸರ್ಕಾರವು ಕೇವಲ ವಿರೋಧವಿದೆ ಎಂದ ಮಾತ್ರಕ್ಕೆ ನಿಷೇಽಸಲು ಬರುವುದಿಲ್ಲ.ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯದ ಕರ್ತವ್ಯ ಎಂದು ಹೇಳಿತು. ಜೊತೆಗೆ ಒಮ್ಮೆ ಕೇಂದ್ರ ಸರ್ಕಾರದ ಪ್ರಮಾಣೀಕರಣ ಮಂಡಳಿ ಪ್ರಮಾಣಪತ್ರ ನೀಡಿದ ಬಳಿಕ ರಾಜ್ಯ ಸರ್ಕಾರಗಳು ತಮ್ಮದೇ ಅಭಿಪ್ರಾಯದ ಆಧಾರದಲ್ಲಿ ಅಥವಾ ಸಾರ್ವಜನಿಕ ಒತ್ತಡದ ಕಾರಣದಿಂದ ಚಿತ್ರ ಪ್ರದರ್ಶನವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳಿತು.

ಇತ್ತೀಚೆಗೆ ಕಮಲಹಾಸನ್ ಅಭಿನಯದ ಚಿತ್ರವೊಂದನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ವಿರೋಧ ಬಂದಾಗ ಸಂಬಂಧಪಟ್ಟವರು ಸುಪ್ರೀಂ ಕೋರ್ಟಿನ ಮೆಟ್ಟಲೇರಿದ್ದರು. ಆಗ ಅದು, ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರದ ಹೊಣೆ ಎಂದು ಸರ್ಕಾರಕ್ಕೆ ಅದನ್ನು ನಿರ್ವಹಿಸುವಂತೆ ಹೇಳಿತ್ತು. ‘ ಬಾಸ್’ , ‘ ಮಹಾಪ್ರಭು ಜಗನ್ನಾಥ್’ಮತ್ತು ‘ ದ ಕೇರಳ ಸ್ಟೋರಿ’ಮುಂತಾದ ಚಿತ್ರಗಳು ಕಟಕಟೆಯೇರಿದ ಸಂದರ್ಭದಲ್ಲಿ ಬಂದ ತೀರ್ಪುಗಳಿಗೆ ಎಸ್. ರಂಗರಾಜನ್ ವಿರುದ್ಧ ಪಿ. ಜಗಜೀವನ್ ರಾಮ್ (೧೯೮೯) ಕೇಸು ಮೂಲ. ಅದೊಂದು ಐತಿಹಾಸಿಕ ತೀರ್ಪು. ರಾಷ್ಟ್ರಪ್ರಶಸ್ತಿ ಪಡೆದ ‘ ಒರೇ ಒರು ಗ್ರಾಮತ್ತಿಲೇ’ ತಮಿಳು ಚಿತ್ರದ ಕೇಸು. ಅದು ಆ ರಾಜ್ಯದ ಮೀಸಲಾತಿ ನೀತಿಯನ್ನು ವಿಶ್ಲೇಷಣಾತ್ಮಕವಾಗಿ ಹೇಳಿದ್ದ ಚಿತ್ರ. ಚಿತ್ರವು ಮೀಸಲಾತಿಯ ವಿರುದ್ಧ ಪಕ್ಷಪಾತ ಹೊಂದಿದೆ ಮತ್ತು ತಮಿಳುನಾಡಿನಲ್ಲಿ ಹಿಂಸಾತ್ಮಕ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪ್ರಚೋದಿಸಬಹುದು ಎಂದು ಮದ್ರಾಸ್ ಹೈಕೋರ್ಟ್ ಪ್ರಮಾಣಪತ್ರವನ್ನು ರದ್ದುಗೊಳಿಸಿತು.

ಸರ್ಕಾರದ ಕ್ರಮಗಳು ಮತ್ತು ನೀತಿಗಳ ಮುಕ್ತ, ಬಲವಾದ ಟೀಕೆಯನ್ನು ಪ್ರಜಪ್ರಭುತ್ವದಲ್ಲಿ ಸಹಿಸಿಕೊಳ್ಳಬೇಕು. ಅಭಿವ್ಯಕ್ತಿಯನ್ನು ನಿಷೇಧಿಸುವ ಬದಲು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ರಾಜ್ಯದ ಕರ್ತವ್ಯ ಎಂದ ಸುಪ್ರೀಂ ಕೋರ್ಟು, ಹೈಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಿತು ಮತ್ತು ಚಲನಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟಿತು. ಸಿನಿಮಾ ಮೂಲಕ ಸೃಜನಶೀಲ ಮತ್ತು ರಾಜಕೀಯ ಅಭಿವ್ಯಕ್ತಿಗೆ ಹೆಚ್ಚಿನ ಸಾಂವಿಧಾನಿಕ ರಕ್ಷಣೆ ಇದೆ ಎಂದು ಬಲಪಡಿಸಿತು. ಈ ಮೂರೂ ಪ್ರಕರಣಗಳ ಹಿನ್ನೆಲೆ ವಿಭಿನ್ನವಾಗಿದ್ದರೂ, ನ್ಯಾಯಾಲಯಗಳು ನೀಡಿದ ಸಂದೇಶ ಒಂದೇ: ಸಿನಿಮಾವನ್ನು ನಿಷೇಧಿಸುವುದು ಕೊನೆಯ ಆಯ್ಕೆಯಾಗಬೇಕು; ಕಲಾತ್ಮಕ ಅಭಿವ್ಯಕ್ತಿಗೆ ನ್ಯಾಯಾಲಯಗಳು ಸಾಧ್ಯವಾದಷ್ಟು ರಕ್ಷಣೆ ನೀಡಬೇಕು. ಕೊನೆಗೊಂದು ಪ್ರಶ್ನೆ ಉಳಿಯುತ್ತದೆ – ಇತಿಹಾಸವನ್ನೋ ಪುರಾಣವನ್ನೋ ತಿರುಚಿ, ‘ ಇದು ಕಾಲ್ಪನಿಕ ಕಥೆ’ ಎಂದು ಗುರಾಣಿಯಂತೆ ಡಿಸ್‌ಕ್ಲೈಮರ್ ಹಾಕಿದರೆ ಸಾಕೇ?

ಸುಪ್ರೀಂ ಕೋರ್ಟು ಈ ತೀರ್ಪಿನಲ್ಲಿ ಹೇಳಿದ ಮುಖ್ಯಾಂಶಗಳು ಹೀಗಿವೆ ? ಅನಿಮೇಷನ್ ಕೂಡ ಕಲೆಯೇ.

* ವಿಶೇಷವಾಗಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ ಮತ್ತು ಪುರಾಣಗಳನ್ನು ಪರಿಚಯಿಸಲು ಅನಿಮೇಷನ್ ಪರಿಣಾಮಕಾರಿ ಮಾಧ್ಯಮ.

* ನ್ಯಾಯಾಲಯಗಳು ಕಲೆಯ ವಿಷಯದಲ್ಲಿ ವಿಮರ್ಶಕರ ಪಾತ್ರ ವಹಿಸಬಾರದು.

* ಎಲ್ಲರಿಗೂ ಇಷ್ಟವಾಗಬೇಕು ಎಂಬುದು ಕಲಾಕೃತಿಯ ಮಾನದಂಡವಾಗಲಾರದು.

* ಕೇವಲ ಯಾರಿಗಾದರೂ ಆಕ್ಷೇಪವಿದೆ ಎಂಬ ಕಾರಣಕ್ಕೆ ಚಿತ್ರವನ್ನು ನಿಷೇಧಿಸಲಾಗುವುದಿಲ್ಲ.

* ಕಲಾವಿದರ ಸೃಜನಾತ್ಮಕ ಸ್ವಾತಂತ್ರ್ಯವನ್ನು ನ್ಯಾಯಾಲಯಗಳು ಸಾಧ್ಯವಾದಷ್ಟು ಗೌರವಿಸಬೇಕು.

* ಇದರ ಜೊತೆಯ ಚಿತ್ರಕ್ಕೆ ಈಗಾಗಲೇ ಕಾನೂನುಬದ್ಧವಾಗಿ ಪ್ರಮಾಣೀಕರಣ ಮಂಡಳಿಯ ಪ್ರಮಾಣಪತ್ರ ದೊರೆತಿದ್ದರೆ, ಅದನ್ನು ನಿಷೇಧಿಸುವುದು ಅಪರೂಪದ ಸಂದರ್ಭದಲ್ಲಷ್ಟೇ ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿತು. ಭಾರತ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಸಿನಿಮಾಗಳಿಗೂ ಅನ್ವಯ ಎನ್ನುವುದನ್ನು ಪುನರುಚ್ಛರಿಸಿತು.

” ಈ ಮೂರೂ ಪ್ರಕರಣಗಳ ಹಿನ್ನೆಲೆ ವಿಭಿನ್ನವಾಗಿದ್ದರೂ, ನ್ಯಾಯಾಲಯಗಳು ನೀಡಿದ ಸಂದೇಶ ಒಂದೇ: ಸಿನಿಮಾವನ್ನು ನಿಷೇಧಿಸುವುದು ಕೊನೆಯ ಆಯ್ಕೆಯಾಗಬೇಕು; ಕಲಾತ್ಮಕ ಅಭಿವ್ಯಕ್ತಿಗೆ ನ್ಯಾಯಾಲಯಗಳು ಸಾಧ್ಯವಾದಷ್ಟು ರಕ್ಷಣೆ ನೀಡಬೇಕು.”

 

 

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ…

19 seconds ago

ಓದುಗರ ಪತ್ರ: ಪ್ಲಾಸ್ಟಿಕ್ ನೋಟುಗಳ ಬಿಡುಗಡೆ ನಿರ್ಧಾರ ದೂರದೃಷ್ಟಿಯ ಹೆಜ್ಜೆ

ಆರ್‌ಬಿಐ ಮುಂದಿನ ಹಣಕಾಸು ವರ್ಷದಿಂದ (೨೦೨೭-೨೮) ಪ್ಲಾಸ್ಟಿಕ್ (ಪಾಲಿಮರ್) ನೋಟುಗಳನ್ನು ಚಲಾವಣೆಗೆ ತರಲು ನಿರ್ಧರಿಸಿರುವುದು ಸ್ವಾಗತಾರ್ಹ ಮತ್ತು ದೂರದೃಷ್ಟಿಯ ಹೆಜ್ಜೆಯಾಗಿದೆ.…

2 mins ago

ಓದುಗರ ಪತ್ರ: ಸಮಾನತೆ ಮಾತನಾಡುವವರ ನಡವಳಿಕೆ ಇದೇನಾ?

ರಾಜ್ಯ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದು ಮಹಿಳೆಯರಿಗೆ ಮಾಡಿದ ಘೋರ ಅನ್ಯಾಯ. ಅಧಿಕಾರಕ್ಕೆ ಬರುವ ಮುನ್ನ ಮಹಿಳೆಯರ ಹೆಸರಿನಲ್ಲಿ…

5 mins ago

ಕೊಡಗು ಜಿಲ್ಲೆಯಲ್ಲಿ ಶೇ.37ರಷ್ಟು ಮಳೆ ಕೊರತೆ

ನವೀನ್ ಡಿಸೋಜ ಕಳೆದ ಕೆಲ ದಿನಗಳಲ್ಲಿ ಉತ್ತಮ ಮಳೆ; ವಾಡಿಕೆ ಮಳೆ ಕೊರತೆ ವಿರಾಜಪೇಟೆ ತಾಲ್ಲೂಕಿನಲ್ಲಿ ಅತಿ ಹೆಚ್ಚು ಶೇ.೪೩…

12 mins ago

ಕಬಿನಿ ಜಲಾಶಯದಿಂದ ಹರಿಸುತ್ತಿದ್ದ ನೀರು ಸ್ಥಗಿತ

ಮಂಜು ಕೋಟೆ ಎಚ್.ಡಿ.ಕೋಟೆ: ತಾಲ್ಲೂಕಿನ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ಒಳಹರಿವ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ಸ್ಥಗಿತಗೊಳಿಸಿ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬಂದ್…

17 mins ago