ಅಂಕಣಗಳು

ನಾ.ದಿವಾಕರ ವಾರದ ಅಂಕಣ: ಯುವ ಸಮಾಜದ ಗುರಿ ಆದ್ಯತೆ ಮತ್ತು ಜವಾಬ್ದಾರಿ

ನಾ.ದಿವಾಕರ

ಭಾರತ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ. ಬಿಹಾರದ ಚುನಾವಣೆಗಳು ಇದನ್ನು ಮತ್ತಷ್ಟು ಸ್ಪಷ್ಟಪಡಿಸಿವೆ. ನವ ಉದಾರವಾದ ಮತ್ತು ಮಾರುಕಟ್ಟೆ ನೀತಿಗಳು ತಳಸಮಾಜದಲ್ಲಿ ಸೃಷ್ಟಿಸಿರುವ ತಲ್ಲಣಗಳನ್ನು ವರ್ತಮಾನದ ಜೀವನ, ಜೀವನೋಪಾಯಗಳ ವ್ಯಾಪ್ತಿಯಿಂದ ಹೊರತಾಗಿ, ಇಂದಿನ ಭಾರತವನ್ನು ಪ್ರಧಾನವಾಗಿ ಪ್ರತಿನಿಧಿಸುವ ಯುವ ಸಮಾಜವನ್ನು ಕಾಡುತ್ತಿರುವ ಭವಿಷ್ಯದ ಪ್ರಶ್ನೆಗಳನ್ನು ಗಂಭೀರವಾಗಿ ಅವಲೋಕನ ಮಾಡಬೇಕಿದೆ. ಮಾರುಕಟ್ಟೆ ಆರ್ಥಿಕತೆಯನ್ನು ಸ್ವಾಗತಿಸುವ ಮೂಲಕ, ತಳಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆಗಳನ್ನು ಸಮ್ಮಾನಿಸುವ ಒಂದು ಅರ್ಥವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. ಈ ಪ್ರತಿಪಾದನೆಯನ್ನು ವ್ಯಾಖ್ಯಾನಿಸುವ ಹಾಗೂ ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಜನತೆಗೆ ವ್ಯವಸ್ಥಿತವಾಗಿ ತಲುಪಿಸುವ ಬೌದ್ಧಿಕ ಚಿಂತನಾಧಾರೆಗಳನ್ನೂ ಸೃಷ್ಟಿಸಲಾಗಿದೆ.

ವಿಪರ್ಯಾಸವೆಂದರೆ, ಭಾರತದ ಬಹುತೇಕ ರಾಜಕೀಯ ಪಕ್ಷಗಳು ರಾಜಕೀಯ ಅರ್ಥಶಾಸ್ತ್ರದ (Political Economy) ಒಳಸುಳಿಗಳನ್ನು ಪರಾಮರ್ಶಿಸುವುದಿಲ್ಲ. ಎಲ್ಲ ರಾಷ್ಟ್ರೀಯ-ಪ್ರಾದೇಶಿಕ ಪಕ್ಷಗಳಿಗೂ ಅಧಿಕಾರ ರಾಜಕಾರಣವೇ ಪ್ರಧಾನ ಗುರಿಯಾಗಿದ್ದು, ವರ್ತಮಾನದ ಭಾರತವನ್ನು, ವಿಶೇಷವಾಗಿ ಶೋಷಿತ ಜನರನ್ನು, ಯುವ ಸಮೂಹವನ್ನು ದಿಕ್ಕುತಪ್ಪಿಸುತ್ತಿರುವ ರಾಜಕೀಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಶಕ್ತಿಗಳನ್ನು ಎದುರಿಸಲು ಅಗತ್ಯವಾದ ನಿರೂಪಣೆಗಳನ್ನು (Narrtives) ಸೃಷ್ಟಿಸಲಾಗುತ್ತಿಲ್ಲ. ವರ್ತಮಾನದ ಯುವ ಸಮಾಜ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ತಲ್ಲಣಗಳನ್ನು ಹಾಗೂ ಸಾಂಸ್ಕೃತಿಕ ತಲ್ಲಣಗಳನ್ನು ಬಿಂಬಿಸುವ ಹೊಸ ನಿರೂಪಣೆಗಳನ್ನು ಸೃಷ್ಟಿಸುವುದು ಇವತ್ತಿನ ಅಗತ್ಯತೆಯಾಗಿದೆ.

ಯುವ ಜನಾಂಗದ ದೃಷ್ಟಿಕೋನ:

ಭಾರತದ ಯುವ ಸಮೂಹ ಈ ಸೂಕ್ಷ್ಮ ಬದಲಾವಣೆಗಳನ್ನು ವರ್ತ ಮಾನದ ಸಂದರ್ಭದಲ್ಲಿಟ್ಟು ನೋಡಬೇಕಿದೆ. ಸೈದ್ಧಾಂತಿಕವಾಗಿ ಈ ಜನಾಂಗವನ್ನು ಆಕರ್ಷಿಸುವ ಮಾರ್ಕ್ಸ್‌ವಾದ, ಅಂಬೇಡ್ಕರ್‌ವಾದ, ಲೋಹಿಯಾವಾದ ಮೊದಲಾದ ಸೈದ್ಧಾಂತಿಕ ಚಿಂತನೆಗಳು ಭವಿಷ್ಯವನ್ನು ಕಟ್ಟಲು ನೆರವಾಗುವ ಬೌದ್ಧಿಕ ಪರಿಕರಗಳಷ್ಟೆ. ಪ್ರಭುತ್ವದೊಡನೆ ಸಂಘರ್ಷಕ್ಕಿಳಿಗಾದ ಇವು ಅಸ್ತ್ರಗಳೂ ಆಗುತ್ತವೆ. ಆದರೆ ಇದನ್ನು ಡಿಜಿಟಲ್ ಯುಗದ ಭಾರತದಲ್ಲಿ ಅನುಸರಿಸುವಾಗ, ಸಮಕಾಲೀನ ಪರಿಸ್ಥಿತಿಗಳನ್ನು ಗಂಭೀರವಾಗಿ ಅರಿತು ಮುನ್ನಡೆಯಬೇಕಿದೆ. ಈ ಬದಲಾವಣೆಯ ಹಂತದಲ್ಲಿ ಬಹಳ ಮುಖ್ಯವಾಗಿ ಗಮನಿಸಬೇಕಿರುವುದು, ರಾಜಕೀಯ ಪರಿಭಾಷೆಯಲ್ಲಿ ನಾವು ವ್ಯಾಖ್ಯಾನಿಸುತ್ತಿರುವ ಫ್ಯಾಸಿಸಂ, ಮನುವಾದ ಇತ್ಯಾದಿಗಳಿಗೆ ಮೂಲ ತಳಪಾಯ ಒದಗಿಸುತ್ತಿರುವುದು ನವ ಉದಾರವಾದದ ಬಂಡವಾಳಶಾಹಿ ಅರ್ಥವ್ಯವಸ್ಥೆ. ಸಾಮಾಜಿಕ ಮೇಲ್ ಚಲನೆ, ಆರ್ಥಿಕ ಪ್ರಗತಿ ಹಾಗೂ ನಗರೀಕರಣಕ್ಕೆ ತೆರೆದುಕೊಂಡ ಶೋಷಿತ ಸಮಾಜವನ್ನು ಪ್ರತಿನಿಧಿಸುವ ಸಮುದಾಯಗಳೂ ಕೂಡ ವಾಸ್ತವಗಳಿಗೆ ವಿಮುಖವಾಗಿರುವುದನ್ನು ಯುವ ಜನಾಂಗ ಸೂಕ್ಷ್ಮವಾಗಿ ಗಮನಿಸಬೇಕಿದೆ.

ಭಾರತದ ಸಂವಿಧಾನ ಮತ್ತು ಅದರ ಆಶಯಗಳು ಮೂಲತಃ ಸಮಾಜವಾದ, ಸಮಾನತೆ ಮತ್ತು ಜಾತ್ಯತೀತತೆಯೇ ಆದರೂ, ಈ ಆಶಯಗಳನ್ನು ಮೀರಿ ನಡೆಯುವ ಅಧಿಕಾರವನ್ನು ಸಂಸದೀಯ ಪ್ರಜಾತಂತ್ರದ ಆಳ್ವಿಕೆಗಳು ಪಡೆಯುತ್ತವೆ. ಈ ಮೌಲ್ಯಗಳನ್ನು ರಕ್ಷಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತವೆ. ೨೦೧೪ರ ನಂತರದ ಬದಲಾದ ಭಾರತವನ್ನು ಗಮನಿಸಿದರೆ, ಇದರ ಸೂಕ್ಷ್ಮವೂ ಅರ್ಥವಾಗುತ್ತದೆ. ಉದ್ಯೋಗ ಮೀಸಲಾತಿ, ಶೈಕ್ಷಣಿಕ ಅವಕಾಶ, ಪ್ರಾಥಮಿಕ ಹಂತದಿಂದ ಉನ್ನತ ವ್ಯಾಸಂಗದವರೆಗೆ ಶಿಕ್ಷಣದ ಸಮಾನ ಅವಕಾಶಗಳು, ಧಾರ್ಮಿಕ-ಉಪಾಸನಾ ಸ್ವಾತಂತ್ರ್ಯ- ಮೂಲಭೂತ ಮಾನವ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವನ್ನೂ ಸಂವಿಧಾನ ಖಾತ್ರಿಗೊಳಿಸಿದರೂ, ಸಂವಿಧಾನದ ಚೌಟ್ಟಿನೊಳಗೆ ಈ ಆಶಯಗಳನ್ನು ಮೀರುವಂತಹ ಕಾನೂನುಗಳನ್ನು ರಚಿಸಲು ಅವಕಾಶ ಇರುತ್ತದೆ.

ಈ ದೃಷ್ಟಿಯಿಂದ ನೋಡಿದಾಗ, ಸಂವಿಧಾನವನ್ನು ನಿತ್ಯ ಪಠಿಸುತ್ತಾ, ಸಾಂವಿಧಾನಿಕ ಹಕ್ಕುಗಳಿಗಾಗಿ ಪ್ರತಿಯೊಂದು ಹಂತದಲ್ಲೂ ಹೋರಾಡುತ್ತಲೇ ಬಂದಿರುವ ವಿದ್ಯಾರ್ಥಿ ಯುವಜನರು, ಇದರಿಂದಾಚೆಗಿನ ಅಪಾಯಕಾರಿ ಬೆಳವಣಿಗೆಗಳನ್ನು ಗುರುತಿಸಬೇಕಿದೆ. ಉನ್ನತ ಶಿಕ್ಷಣ ಸಾಮಾನ್ಯರ ಕೈಗೆಟುಕದಂತಾಗಿರುವುದು, ಉತ್ತಮ ಆರೋಗ್ಯ ಸೌಲಭ್ಯಗಳೆಲ್ಲವೂ ಮಾರುಕಟ್ಟೆಯ ವಶದಲ್ಲಿರುವುದು, ಔದ್ಯೋಗಿಕ ಕ್ಷೇತ್ರವನ್ನು ಬಂಡವಾಳಶಾಹಿಗಳೇ ಆಕ್ರಮಿಸಿರುವುದು, ಈ ಸಾಂವಿಧಾನಿಕ ನಿಯಮಗಳನ್ನು ನಿಷ್ಛಲಗೊಳಿಸುತ್ತವೆ. ಎಂಬ ಸೂಕ್ಷ್ಮಅರಿವು ನಮಗಿರಬೇಕಿದೆ. ಈ ಜಟಿಲ ಸಿಕ್ಕುಗಳ ನಡುವೆ ತಮ್ಮ ಭವಿಷ್ಯದ ಕನಸು ಕಾಣುತ್ತಿರುವ ಯುವ ಸಮೂಹಕ್ಕೆ ನಿತ್ಯ ಸಂಘರ್ಷಗಳಲ್ಲಿ ಮಾರ್ಕ್ಸ್ ಮತ್ತು ಅಂಬೇಡ್ಕರ್ ಅವರ ಆಲೋಚನೆಗಳು ರಕ್ಷಾಕವಚಗಳಾಗಿರುತ್ತವೆ. ಆದರೆ ವರ್ತಮಾನದ ಸಮಾಜದಲ್ಲಿ ಜನಪರ/ಪ್ರಗತಿಪರ ಎಂದು ಕರೆಯಲ್ಪಡುವ ಜನಾಂದೋಲನಗಳೂ ಸೈದ್ಧಾಂತಿಕವಾಗಿ ವಿಘಟನೆಗೊಳಗಾಗಿದ್ದು, ಸಂಘಟನಾತ್ಮಕ ಆಶಯಗಳಿಗೂ, ಯುವ ಜನಾಂಗದ ಆದ್ಯತೆಗಳಿಗೂ ಅಪಾರ ಅಂತರ ಇರುವುದನ್ನು ಗಮನಿಸಬೇಕಿದೆ.

ನಿರಂತರ ಸಂಘರ್ಷದಲ್ಲಿ ತೊಡಗಿರುವ ವಿದ್ಯಾರ್ಥಿ-ಯುವ ಸಮೂಹದ ಆದ್ಯತೆಗಳು ಪ್ರಧಾನವಾಗಿ ಕೈಗೆಟುಕುವ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಸುಭದ್ರ ಭವಿಷ್ಯವನ್ನು ರೂಪಿಸಬಹುದಾದ ಉದ್ಯೋಗ. ಇವೆರಡೂ ಮಾರುಕಟ್ಟೆಯ ಜಗುಲಿಯಿಂದಲೇ ಪಡೆಯಬೇಕಾದ ಪರಿಸ್ಥಿತಿಯನ್ನು ಈ ಸಮಾಜವು ಎದುರಿಸುತ್ತಿದೆ. ಹಾಗಾಗಿಯೇ ವಿದ್ಯಾರ್ಜನೆಯನ್ನು ಮಧ್ಯದಲ್ಲೇ ತೊರೆದು ಮಾರುಕಟ್ಟೆಯಲ್ಲಿ ಅವಕಾಶಗಳಿಗಾಗಿ ಹಂಬಲಿಸುವವರಷ್ಟು ಸಂಖ್ಯೆಯಲ್ಲೇ, ವಿದ್ಯಾಭ್ಯಾಸದ ವೆಚ್ಚ ಸರಿದೂಗಿಸಲು ಗಿಗ್ ಕಾರ್ಮಿಕರಾಗಿ ದುಡಿಯುವವರ ಸಂಖ್ಯೆಯನ್ನೂ ಗುರುತಿಸಬಹುದು. ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಅಂಚಿಗೆ ತಳ್ಳಲ್ಪಡುವುದು ಮಹಿಳಾ ಸಮೂಹ ಎನ್ನುವುದೂ ಗಮನಿಸಬೇಕಾದ ಅಂಶ. ಹಾಗಾಗಿಯೇ ಭಾರತೀಯ ಮಹಿಳೆ ಮಾರು ಕಟ್ಟೆ-ಜಾತಿ ಮತ್ತು ಲಿಂಗತ್ವ ಈ ಮೂರೂ ದಿಕ್ಕುಗಳಿಂದ ಶೋಷಿತಳಾಗಿದ್ದಾಳೆ.

ಇಂದಿನ ಭಾರತದ ಯುವ ಜನಾಂಗ, ಸಿದ್ಧಾಂತಗಳ ಗೋಡೆಗಳನ್ನು ದಾಟಿ ನೋಡುವ ವಿವೇಕ ಬೆಳೆಸಿಕೊಳ್ಳಬೇಕಿದೆ. ೨೦೨೫ರ ಭಾರತವನ್ನು ೧೯೪೭ಕ್ಕೆ ಇರಲಿ, ೧೯೯೦ರ ಸನ್ನಿವೇಶಕ್ಕೂ ಹೋಲಿಸಲಾಗುವುದಿಲ್ಲ. ಈ ರೂಪಾಂತರಗೊಂಡ ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಗ್ರಾಂಥಿಕವಾಗಿ ಸುಸ್ಥಿತಿಯಲ್ಲಿದೆ, ಆಚರಣಾತ್ಮಕವಾಗಿ ಆರೋಗ್ಯಕರವಾಗಿವೆ, ಆದರೆ ಆಂತರಿಕವಾಗಿ ಈ ಎರಡೂ ಉದಾತ್ತ ಮೌಲ್ಯಗಳು ಶಿಥಿಲವಾಗುತ್ತಲೇ ಇವೆ. ತತ್ಪರಿಣಾಮವಾಗಿ, ಈ ಎರಡೂ ಮೌಲ್ಯಗಳ ಫಲಾನುಭವಿಗಳಾಗಬೇಕಾದ, ಭವಿಷ್ಯದ ನಿರ್ಮಾತೃಗಳು ಅಂದರೆ ವಿದ್ಯಾರ್ಥಿ ಯುವ ಜನರು, ದಿಕ್ಕುಗಾಣದಂತಾಗಿದ್ದಾರೆ. ಅಸ್ತಿತ್ವವಾದಿ ರಾಜಕೀಯ ಪಕ್ಷಗಳಿಗೆ ಇದು ಮುಖ್ಯವಾಗುವುದೂ ಇಲ್ಲ. ಹಾಗೊಮ್ಮೆ ಆಗಿದ್ದರೆ ನವ ಉದಾರವಾದಿ ಆರ್ಥಿಕತೆಯ ವಿರುದ್ಧ, ಕಾರ್ಪೊರೇಟಿಕರಣ ಪ್ರಕ್ರಿಯೆಯ ವಿರುದ್ಧ ದೇಶವ್ಯಾಪಿ ಜನಾಂದೋಲನಗಳು ರೂಪುಗೊಳ್ಳುತ್ತಿದ್ದವು. ಅಂಬೇಡ್ಕರ್‌ವಾದಿ ರಾಜಕೀಯ ಪಕ್ಷಗಳೇ, ಎಡಪಕ್ಷಗಳ ಜೊತೆಗೂಡಿ, ನವ ಉದಾರವಾದದ ವಿರುದ್ಧ ರಾಜಕೀಯ ಪ್ರಜ್ಞೆ ಮೂಡಿಸಲು, ತಳಸಮಾಜದ ತಳಪಾಯವನ್ನು ತಲುಪುತ್ತಿದ್ದವು.

ಮತ್ತೊಂದೆಡೆ ಮಹಿಳಾ ದೌರ್ಜನ್ಯ, ಜಾತಿ ತಾರತಮ್ಯಗಳು, ಅಸಮಾನತೆ, ಅಸ್ಪಶ್ಯತೆಯಂತಹ ಹೀನಾಚರಣೆಗಳು, ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿ ಇವೆಲ್ಲವೂ ರಾಜಕೀಯ ಸಿದ್ಧಾಂತಗಳಿಗೆ ಅನುಸಾರವಾಗಿ ಪರಿಗಣಿ ಸಲ್ಪಡುವುದರಿಂದ, ಅತ್ಯಂತ ಕ್ರೂರ ಅಪರಾಧಗಳನ್ನೂ ಸಾಪೇಕ್ಷವಾಗಿಯೇ (Relative terms) ನೋಡಲಾಗುತ್ತಿದೆ. ನ್ಯಾಯಕ್ಕಾಗಿ ಹೋರಾಡುವ ಕೆಲವೇ ದನಿಗಳನ್ನು ಅಪರಾಧಿಗಳನ್ನಾಗಿ ನೋಡಲಾಗುತ್ತಿದೆ. ಕೆಲವು ಸಂದರ್ಭಗಳಲ್ಲ ವಿದ್ಯಾರ್ಥಿ-ಯುವಜನಾಂಗವೂ ಅಪರಾಧಿ ಸ್ಥಾನದಲ್ಲಿ ನಿಲ್ಲುವ ಸಾಧ್ಯತೆಗಳಿವೆ.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತದ ಯುವ ಜನಾಂಗ ಸಾಗುವುದಾದರೂ ಯಾವ ದಿಕ್ಕಿನಲ್ಲಿ? ಹಿರಿಯ ತಲೆಮಾರಿನ ಅನುಭವಗಳಿಗೆ ಕಿವಿಯಾಗಿ, ವರ್ತಮಾನದ ಶೋಷಿತ ವರ್ಗಗಳಿಗೆ ಕಣ್ಣಾಗಿ, ಎಲ್ಲ ಅವಕಾಶವಂಚಿತ ಸಮಾಜಗಳಿಗೆ ಹೆಗಲಾಗುವ ಆಲೋಚನೆಯನ್ನು ರೂಢಿಸಿಕೊಳ್ಳಬೇಕು. ಇದು ಯುವ ಸಮಾಜದ ಮೇಲಿರುವ ದೊಡ್ಡ ಜವಾಬ್ದಾರಿ. ಸಾಮಾಜಿಕ ಚಳವಳಿಗಳು, ಸಂಘಟನೆಗಳು ಮತ್ತು ಹಿರಿಯ ತಲೆಮಾರಿನ ಬೌದ್ಧಿಕ ವಲಯ ಈ ರಥ ವನ್ನು ಮುಂದಕ್ಕೆ ಎಳೆಯುವ ಜವಾಬ್ದಾರಿಯನ್ನು ಹೊರಬೇಕಿದೆ. ಭವಿಷ್ಯದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕಾದರೆ, ಇದು ಅತ್ಯಗತ್ಯ.

” ಭಾರತದ ಸಂವಿಧಾನ ಮತ್ತು ಅದರ ಆಶಯಗಳು ಮೂಲತಃ ಸಮಾಜವಾದ, ಸಮಾನತೆ ಮತ್ತು ಜಾತ್ಯತೀತತೆಯೇ ಆದರೂ, ಈ ಆಶಯಗಳನ್ನು ಮೀರಿ ನಡೆಯುವ ಅಧಿಕಾರವನ್ನು ಸಂಸದೀಯ ಪ್ರಜಾತಂತ್ರದ ಆಳ್ವಿಕೆಗಳು ಪಡೆಯುತ್ತವೆ. ಈ ಮೌಲ್ಯಗಳನ್ನು ರಕ್ಷಿಸುವ ನೈತಿಕ-ಸಾಂವಿಧಾನಿಕ ಜವಾಬ್ದಾರಿ ಚುನಾಯಿತ ಸರ್ಕಾರಗಳ ಮೇಲಿರುತ್ತವೆ.”

ಆಂದೋಲನ ಡೆಸ್ಕ್

Recent Posts

ಸಿಎಂ ಬದಲಾವಣೆ ಚರ್ಚೆಗೆ ಸಚಿವ ದಿನೇಶ್‌ ಗುಂಡೂರಾವ್‌ ಪ್ರತಿಕ್ರಿಯೆ

ಮೈಸೂರು: ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಸಿಎಂ ಬದಲಾವಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ…

28 mins ago

ಮಂಡ್ಯ| ಬೋನಿಗೆ ಬಿದ್ದ ಚಿರತೆ: ಗ್ರಾಮಸ್ಥರು ನಿರಾಳ

ಮಂಡ್ಯ: ಉಪಟಳ ನೀಡುತ್ತಿದ್ದ ಚಿರತೆ ಬೋನಿಗೆ ಬಿದ್ದಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡಹೊಸಗಾವಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೆನ್ನಮ್ಮ…

57 mins ago

ರಾಜ್‌ಘಾಟ್‌ಗೆ ಭೇಟಿ ನೀಡಿ ರಾಷ್ಟ್ರಪತಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮನ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್‌

ರಾಜ್‌ಘಾಟ್‌ಗೆ ಭೇಟಿ ನೀಡಿದ ವ್ಲಾಡಿಮಿರ್‌ ಪುಟಿನ್‌, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು. ದೆಹಲಿಯಲ್ಲಿ ರಾಷ್ಟ್ರಪತಿ…

1 hour ago

ರಾಜ್ಯದ ಹಲವು ಜಿಲ್ಲೆಗಳಲ್ಲಿ ಒಣಹವೆ: ಕೆಲವೆಡೆ ಮಂಜು ಕವಿದ ವಾತಾವರಣ

ಬೆಂಗಳೂರು: ರಾಜ್ಯದ ಹಲವೆಡೆ ಒಣಹವೆ ಇದ್ದರೆ ಮತ್ತೆ ಕೆಲವೆಡೆ ಮಂಜು, ಮೋಡ ಕವಿದ ವಾತಾವರಣ ಮುಂದುವರೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ…

2 hours ago

ಹಾಸನ | ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆ

ಹಾಸನ: ನಾಪತ್ತೆಯಾಗಿದ್ದ ಗರ್ಭಿಣಿ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,…

2 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಮರಗಳ ಮಾರಣಹೋಮ: ಎಫ್‌ಐಆರ್‌ ದಾಖಲು

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ರಸ್ತೆ ನಿರ್ಮಾಣ ಕಾರ್ಯಕ್ಕಾಗಿ ಮರಗಳ ಮಾರಣ ಹೋಮ ನಡೆದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಮಲೆ…

3 hours ago