ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ
ಚಿತ್ರಮಂದಿರಗಳಲ್ಲಿ ಪ್ರವೇಶ ದರ ಗರಿಷ್ಟ ಮೊತ್ತ ೨೦೦ ರೂ. ಅಸಾಧ್ಯವೇ?
ಕನ್ನಡ ಚಿತ್ರರಂಗ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ದುಡಿಯುವ ಕಾರ್ಯಕರ್ತರ ಸಾಮಾಜಿಕ ಭದ್ರತೆಗಾಗಿ ಕರ್ನಾಟಕ ಸರ್ಕಾರ, ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ – ೨೦೨೪ ಜರಿಗೆ ತರಲು ಶಾಸನಾತ್ಮಕ ಕ್ರಮ ಕೈಗೊಂಡಿತಷ್ಟೇ. ೨೩ ಸೆಪ್ಟೆಂಬರ್ ೨೦೨೪ರಂದು ರಾಜ್ಯಪಾಲರ ಅನುಮೋದನೆ ಪಡೆದ ಈ ಕಾಯಿದೆ ರಾಜ್ಯಪತ್ರದಲ್ಲಿ ಪ್ರಕಟವಾಯಿತು.
ಈಗಾಗಲೇ ಇದೇ ಅಂಕಣದಲ್ಲಿ ಪ್ರಸ್ತಾಪಿಸಿದಂತೆ, ಕಾಯಿದೆಯ ಪ್ರಕಾರ ಸಿನಿಮಾ ಟಿಕೆಟ್‌ಗಳು, ಚಂದಾ ಶುಲ್ಕ ಹಾಗೂ ಸಂಬಂಧಿತ ಸಂಸ್ಥೆಗಳ ಆದಾಯದ ಮೇಲೆ ಕನಿಷ್ಠ ಶೇ.೧ ಮತ್ತು ಗರಿಷ್ಟ ಶೇ.೨ರೊಳಗಿನ ಕಲ್ಯಾಣ ಉಪಕರ ವಿಧಿಸಲು ಅವಕಾಶ ಕಲ್ಪಿಸಲಾಯಿತು. ಕರಡು ನಿಯಮಗಳಲ್ಲಿ ದರವನ್ನು ಶೇ.೨ಕ್ಕೆ ನಿಗದಿಪಡಿಸಲು ಪ್ರಸ್ತಾಪಿಸಿ, ೩ ನವೆಂಬರ್ ೨೦೨೫ರಂದು ಅಂತಿಮಗೊಳಿಸಲಾಯಿತು. ಎಲ್ಲ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ, ಸಿನಿಮಾ ಟಿಕೆಟ್‌ಗಳ ಮೇಲೆ ಶೇ.೨ ಸೆಸ್ ವಿಧಿಸುವುದು ಅಂತಿಮ ನಿಯಮಗಳಲ್ಲಿ ಸ್ಪಷ್ಟವಾಗಿದೆ. ಪ್ರದರ್ಶನ ಗೃಹಗಳು ಮಾತ್ರವಲ್ಲ, ಮಾಸಿಕ, ವಾರ್ಷಿಕ ಶುಲ್ಕ ವಿಧಿಸುವ ಒಟಿಟಿ ತಾಣಗಳು, ಮತ್ತಿತರ ಮನರಂಜನಾ ತಾಣಗಳೂ ಈ ಉಪಕರವನ್ನು ನೀಡಬೇಕಾಗಿತ್ತು.
ಈ ಹಣವನ್ನು ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಸಾಮಾಜಿಕ ಭದ್ರತಾ ಮತ್ತು ಕಲ್ಯಾಣ ನಿಧಿಗೆ ವರ್ಗಾಯಿಸಿ, ಅಪಘಾತ, ವೈದ್ಯಕೀಯ ನೆರವು, ಮರಣ ಪರಿಹಾರ, ಮಕ್ಕಳ ಶಿಕ್ಷಣ, ಮಾತೃತ್ವ ನೆರವು ಮತ್ತು ಪಿಂಚಣಿ ಮುಂತಾದ ಯೋಜನೆಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ. ಇದೀಗ ಉಪಕರ ವಸೂಲಿ ಪ್ರಾರಂಭಿಸಲು ನೀಡಲಾದ ಇಲಾಖಾ ಆದೇಶಗಳನ್ನು ಮಲ್ಟಿಪ್ಲೆಕ್ಸ್ ಅಸೋಸಿಯೇಶನ್ ಮತ್ತು ಪಿವಿಆರ್ ಐನಾಕ್ಸ್ ಪ್ರಶ್ನಿಸಿದ್ದು, ಮೂಲ ಕಾಯಿದೆಗೆ ಜರಿಗೆ ಬರುವ ದಿನಾಂಕವನ್ನು ನಿಗದಿಪಡಿಸುವ ಪ್ರತ್ಯೇಕ ರಾಜ್ಯಪತ್ರ ಅಧಿಸೂಚನೆ ಹೊರಡಿಸದೆ ಸುತ್ತೋಲೆ ಮೂಲಕ ಉಪಕರ ವಸೂಲಿ ಮಾಡಬಹುದೇ ಎಂಬ ಪ್ರದರ್ಶಕರ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಕಳೆದ ತಿಂಗಳು ೯ರಂದು ಸರ್ಕಾರಕ್ಕೆ ನೋಟಿಸ್ ನೀಡಿ ಕೇಳಿತು.
ಕೂಡಲೇ ಕಾರ್ಮಿಕ ಇಲಾಖೆ ಹೊರಡಿಸಿದ ಸುತ್ತೋಲೆಯನ್ನು ಹಿಂದೆಗೆದುಕೊಳ್ಳುವುದಾಗಿ ಸರ್ಕಾರ ನ್ಯಾಯಾಲಯಕ್ಕೆ ಹೇಳುವುದರೊಂದಿಗೆ ಸುತ್ತೋಲೆ ಪ್ರಕರಣ ಮುಗಿಯಿತು. ಅದರ ಬೆನ್ನ ಸರ್ಕಾರ ಸೆಪ್ಟೆಂಬರ್ ೩೦ರಿಂದ ಈ ಉಪಕರ ಸಂಗ್ರಹಿಸುವ ಆದೇಶವನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿತು. ಇದೀಗ ರಾಜ್ಯ ಸರ್ಕಾರ ಪರಿಚಯಿಸಿರುವ ಕರ್ನಾಟಕ ಚಲನಚಿತ್ರ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ದಿ) ಕಾಯ್ದೆ – ೨೦೨೪ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್, ಪಿವಿಆರ್ ಐನಾಕ್ಸ್ ಹಾಗೂ ವಿನಾಯಕ ಚಿತ್ರಮಂದಿರಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಮೊನ್ನೆ ಬುಧವಾರ ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠಕ್ಕೆ ಸರ್ಕಾರದ ಪರ ವಕೀಲರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ವೇಳೆ ನ್ಯಾಯಪೀಠವು, ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನೇ ಪ್ರಶ್ನಿಸಲಾಗಿದ ಹಿನ್ನೆಲೆಯಲ್ಲಿ ಎರಡು ವಾರಗಳವರೆಗೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿದೆ. ಇದೇ ತಿಂಗಳ ೨೬ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಮನರಂಜನಾ ತೆರಿಗೆಯನ್ನು ಈಗಾಗಲೇ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ತಂದಿರುವ ಹಿನ್ನೆಲೆಯಲ್ಲಿ ಮತ್ತೆ ರಾಜ್ಯ ಮಟ್ಟದಲ್ಲಿ ತೆರಿಗೆ ವಿಽಸುವುದಕ್ಕೆ ಅವಕಾಶವಿಲ್ಲ. ಅಲ್ಲದೆ ಸರಕು ಮತ್ತು ಸೇವಾ ತೆರಿಗೆ ಮೂಲಕ ೧೫% ರಷ್ಟು ತೆರಿಗೆ ರಾಜ್ಯ ಸರ್ಕಾರಕ್ಕೆ ಹೋಗುತ್ತಿದೆ (ಮನರಂಜನಾ ತೆರಿಗೆಯ ಅರ್ಧದಷ್ಟು ಕೇಂದ್ರ, ಇನ್ನರ್ಧ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ. ಪ್ರವೇಶದರ ೧೦೦ರೂ.ಗಿಂತ ಕಡಿಮೆ ಇದ್ದರೆ ೫%, ೧೦೦ ರೂ.ಗಿಂತ ಹೆಚ್ಚಿದ್ದರೆ ಅದು ೧೮% ಆಗಿರುತ್ತದೆ. ಅಂದರೆ ೯%ರಷ್ಟು ಮಾತ್ರ ರಾಜ್ಯ ಸರ್ಕಾರದ ಪಾಲಿಗೆ ಬರುತ್ತದೆ. ೧೫% ರಾಜ್ಯ ಸರ್ಕಾರಕ್ಕೆ ಬರುವ ಪ್ರಸಂಗವೇ ಇಲ್ಲ.) ಎನ್ನುವ ವಾದ ಅಲ್ಲಿತ್ತು. ಪ್ರತ್ಯೇಕ ಶುಲ್ಕ ವಿಧಿಸಿ, ಅದನ್ನು ಚಿತ್ರಮಂದಿರದ ಸೌಲಭ್ಯಕ್ಕಾಗಿ ಬಳಸಲು ಅವಕಾಶ ಇದೆ. ಇತರ ಮನರಂಜನಾ ಮಾಧ್ಯಮಗಳ ಮಂದಿಗೆ ಉಪಕರದ ಮೂಲಕ ಸೌಲಭ್ಯ ನೀಡುವುದರ ಕುರಿತಂತೆ ಪ್ರಶ್ನೆ ಇಲ್ಲಿ ಏಳಲಿದೆ. ಆದ್ದರಿಂದ ಸರ್ಕಾರದ ಈ ಕಾಯಿದೆ ಸಂವಿಧಾನ ಬಾಹಿರವಾಗಲಿದೆ ಎನ್ನುವ ವಾದ ಅರ್ಜಿದಾರರಲ್ಲಿ ಒಬ್ಬರದು.
ಮತ್ತೊಬ್ಬ ಅರ್ಜಿದಾರರದೂ ಅದೇ ವಾದ. ಅವರು, ಇಡೀ ಕಾಯಿದೆಯನ್ನು ಪ್ರಶ್ನಿಸಿದ್ದಾರೆ. ಸಂಗ್ರಹ ಮಾಡಿದ ಉಪಕರವನ್ನು ಚಲನಚಿತ್ರ ಮಾತ್ರವಲ್ಲದೆ ನಾಟಕ, ನೃತ್ಯ ಮತ್ತಿತರ ಅಕಾಡೆಮಿಗಳ ಜೊತೆ ಗುರುತಿಸಿಕೊಂಡಿರುವ ಕಾರ್ಯಕರ್ತರ ಕಲ್ಯಾಣಕ್ಕೆ ಬಳಸಲಾಗುವುದು ಎಂದು ಕಾಯಿದೆ ಹೇಳುತ್ತಿದೆ. ಹೀಗೆ ಮಾಡಲಾಗದು ಎನ್ನುವುದು ಅವರ ವಾದ.
ಮುಂದೇನಾಗುತ್ತದೋ ಅಕ್ಟೋಬರ್ ೨೬ರಂದು ತಿಳಿಯಲಿದೆ. ಸಿನಿಮಾ ಸಂಬಂಧಪಟ್ಟ, ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಯಾವುದೇ ಆದೇಶ ಬಂದರೂ ಅದನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಲೇರುವುದು ಹೊಸದೇನೂ ಅಲ್ಲ. ಹಿಂದೆ, ಸರಕು ಮತ್ತು ಸೇವಾ ತೆರಿಗೆ ಜಾರಿ ಆಗುವ ಮೊದಲು, ರಾಜ್ಯ ಸರ್ಕಾರಗಳೇ ಮನರಂಜನಾ ತೆರಿಗೆ ವಿಧಿಸುತ್ತಿದ್ದ ದಿನಗಳು. ಮೊದಲು ಕನ್ನಡ ಚಿತ್ರಗಳಿಗೆ ೫೦% ತೆರಿಗೆ ವಿನಾಯಿತಿ ಇತ್ತು. ನಂತರ ಸಿದ್ಧರಾಮಯ್ಯ ಅವರು ಕನ್ನಡ ಚಿತ್ರಗಳಿಗೆ ಸಂಪೂರ್ಣ ತೆರಿಗೆ ವಿನಾಯಿತಿ ಪ್ರಕಟಿಸಿದಾಗ, ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ ಪ್ರಸಂಗವೂ ಇತ್ತು.
ಸರ್ವೋಚ್ಚ ನ್ಯಾಯಾಲಯ ಈ ಅರ್ಜಿಯನ್ನು ರಾಜ್ಯದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಿತೆನ್ನಿ. ಕನ್ನಡ ಚಿತ್ರಗಳಿಗೆ ಮಾತ್ರ ಸಂಪೂರ್ಣ ತೆರಿಗೆ ವಿನಾಯಿತಿ ನೀಡುವುದು ಸಂವಿಧಾನ ವಿರೋಧ ಎನ್ನುವ ವಾದ ಅಲ್ಲಿತ್ತು ಎನ್ನುವುದಾಗಿ ವರದಿಯಾಗಿತ್ತು. ಯಾವುದೇ ಕಾನೂನು, ನಿಯಮ, ಆದೇಶ ಅವುಗಳನ್ನು ನ್ಯಾಯಾಲಯದಲ್ಲಿ ಬಳಸುವವರ ತಿಳಿವಳಿಕೆ, ಜಣ್ಮೆ ಮತ್ತು ವಾದ ಮಂಡನೆಯ ರೀತಿಯ ಮೂಲಕ ಬಹಳಷ್ಟು ಸಂದರ್ಭದಲ್ಲಿ -ಲಿತಾಂಶ ಕೊಡುತ್ತದೆ ಎನ್ನುವ ಅನುಭವಿಗಳ ಮಾತು ಸುಳ್ಳೇನೂ ಅಲ್ಲ. ‘ಹಣ, ಅಧಿಕಾರ ಇರುವ ಜಗದಲ್ಲಿ ಪ್ರತಿಭೆ, ಯೋಗ್ಯತೆಗಳ ಸದ್ದಡಿಗಿರುತ್ತದೆ’ ಎನ್ನುವ ಮಾತಿನಂತೆ!
ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಲ್ಲಿ ಚಿತ್ರಮಂದಿರಗಳ ಪ್ರವೇಶದರ ಬಹಳ ಕಡಿಮೆ. ೨೦೦ ರೂ.ಗಳ ವರೆಗೆ ಗರಿಷ್ಟ ಮೊತ್ತವಾದರೆ, ಮುಂದಿನ ಕೆಲವು ಸಾಲುಗಳಿಗೆ ೫೦ -೬೦ ರೂಪಾಯಿ. ರಾಜ್ಯ ಕೂಡಾ ಅಂತಹದೊಂದು ನಿರ್ಧಾರ ಮಾಡಿ ಆದೇಶ ಹೊರಡಿಸಿತ್ತು. ಅದರ ವಿರುದ್ಧ ಇದೇ ಮಂದಿ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯ ಆಗ ಷರತ್ತೊಂದನ್ನು ಮುಂದಿಟ್ಟು, ಪ್ರದರ್ಶಕರು ಎಷ್ಟು ಬೇಕಾದರೂ ಪ್ರವೇಶ ಶುಲ್ಕ ವಿಧಿಸಬಹುದು ಎಂದು ಹೇಳಿತು.
ಬಹಳ ವಿಶೇಷವಾದ ಷರತ್ತದು. ಒಂದು ವೇಳೆ ಸರ್ಕಾರದ ಆದೇಶದಂತೆ ಚಿತ್ರಮಂದಿರದಲ್ಲಿ ೨೦೦ರೂ. ಗರಿಷ್ಠ ಪ್ರವೇಶ ದರ ಜರಿಗೆ ಬಂದರೆ, ಅಲ್ಲಿಯವರೆಗೆ ಸಂಗ್ರಹಿಸಿದ ಹೆಚ್ಚುವರಿ ಮೊತ್ತವನ್ನು ಆಯಾ ಪ್ರೇಕ್ಷಕರಿಗೆ ಮರುಪಾವತಿ ಮಾಡಬೇಕು; ಇದಕ್ಕಾಗಿ ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು; ಯುಪಿಐ ಮೂಲಕ ಪಾವತಿ ಮಾಡುವವರ ದಾಖಲೆ ಇಟ್ಟುಕೊಳ್ಳುವುದು ಕಷ್ಟವೇನೂ ಅಲ್ಲ. ನಗದು ಕೊಟ್ಟು ಟಿಕೆಟು ಪಡೆದುಕೊಳ್ಳುವ ಪ್ರತಿ ಪ್ರೇಕ್ಷಕರ ಹೆಸರನ್ನು ದಾಖಲಿಸಿಕೊಳ್ಳಬೇಕು, ಇವೇ ಮೊದಲಾಗಿ ಷರತ್ತು! ಇಲ್ಲಿನ ನ್ಯಾಯಾಲಯದ ಈ ಷರತ್ತನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಹೋಗಿ ರದ್ದು ಪಡಿಸಿತು ಎನ್ನುತ್ತಿದೆ ಗಾಂಧಿನಗರ. ಅದರರ್ಥ, ಕರ್ನಾಟಕದಲ್ಲಿ ಚಿತ್ರಮಂದಿರಗಳಲ್ಲಿ ಪ್ರವೇಶ ದರ ಗರಿಷ್ಟ ಮೊತ್ತ ೨೦೦ ರೂ ಇನ್ನು ಅಸಾಧ್ಯ ಎನ್ನುವುದೇ?
ಭಾಷಾವಾರು ಆಧಾರದ ಮೇಲೆ ರಾಜ್ಯಗಳ ಪುನರ್ವಿಂಗಡನೆ ಆಯಿತು. ಆಡಳಿತ ಜನರಿಗೆ ಹತ್ತಿರವಾಗಬೇಕು ಜನರು ಮಾತನಾಡುವ ಭಾಷೆಯ ಸರ್ಕಾರದ ಆಡಳಿತ, ನ್ಯಾಯ, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಗಳು ಸುಲಭವಾಗಿ ನಡೆಯಬೇಕು. ಆಯಾ ಭಾಷೆಯ ಜನರ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಗೆ ರಾಜ್ಯಮಟ್ಟದಲ್ಲಿ ಸೂಕ್ತ ಪ್ರೋತ್ಸಾಹ ದೊರೆಯಬೇಕು. ಜನರು ತಮ್ಮ ಭಾಷೆಯಲ್ಲಿ ಆಡಳಿತವನ್ನು ಅರ್ಥಮಾಡಿಕೊಂಡು ಸರ್ಕಾರದೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಸಾಧ್ಯವಾಗಬೇಕು. ಒಂದೇ ಭಾಷಾ-ಸಾಂಸ್ಕೃತಿಕ ಪ್ರದೇಶಗಳನ್ನು ಒಟ್ಟುಗೂಡಿಸುವುದರಿಂದ ಅಭಿವೃದ್ಧಿ ಯೋಜನೆಗಳ ಸಮನ್ವಯ ಸುಲಭವಾಗುತ್ತದೆ ಎಂಬ ನಿರೀಕ್ಷೆ ಅಲ್ಲಿ ಇತ್ತು. ಮೊನ್ನೆ ತುಳು ಭಾಷೆಯನ್ನು ಎರಡನೇ ಆಡಳಿತ ಭಾಷೆಯಾಗಿ ಪರಿಗಣಿಸುವುದರ ಹಿಂದೆ ಇದೇ ಉದ್ಧೇಶ ಇದೆ.
ಯಾವುದೇ ರಾಜ್ಯದ, ಯಾವುದೇ ಭಾಷೆಯ ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯ ಬೆಳವಣಿಗೆಗೆ ಆಯಾ ಭಾಷೆಯ ಚಲನಚಿತ್ರಗಳ ಕೊಡುಗೆ ಪೂರಕವಾಗಿಯೇ ಇರುತ್ತದೆ, ಇರಬೇಕು. ಕನ್ನಡ ಚಿತ್ರರಂಗವನ್ನು ಬೆಳೆಸುವ ಸರ್ಕಾರದ ಯಾವುದೇ ನಿರ್ಧಾರವನ್ನು ಇತರ ಭಾಷಾ ಚಿತ್ರಗಳಿಗೂ ವಿಸ್ತರಿಸಬೇಕು ಎನ್ನುವುದಾಗಲಿ, ಇಲ್ಲಿನ ಮನರಂಜನೋದ್ಯಮದಲ್ಲಿ ತೊಡಗಿಸಿಕೊಂಡಿರುವ ಮಂದಿಗೆ ನೀಡುವ ಸೌಲಭ್ಯಗಳಿಗೆ ಅಡ್ಡಗಾಲು ಹಾಕುವುದಾಗಲಿ ಸರಿಯಾದ ಕ್ರಮ ಅಲ್ಲವೇನೊ!
” ಸಿನಿಮಾ ಸಂಬಂಧಪಟ್ಟ, ಅದರಲ್ಲೂ ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಸರ್ಕಾರದ ಯಾವುದೇ ಆದೇಶ ಬಂದರೂ ಅದನ್ನು ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಲೇರುವುದು ಹೊಸದೇನೂ ಅಲ್ಲ.”
ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…
ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…
ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…
ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…
ಲೀಲಾ ಶಿವಕುಮಾರ್, ಪರಿಸರವಾದಿ ಸ್ವಚ್ಛ ನಗರಿ ಮೈಸೂರು ಮಾತ್ರವಲ್ಲ, ಇಡೀ ದೇಶವೇ ಇಂದು ಕಸದ ಸಮಸ್ಯೆಯನ್ನು ಎದುರಿಸುತ್ತಿದೆ. ರಸ್ತೆ, ಬಡಾವಣೆ,…
ನಾ.ದಿವಾಕರ ಆದರ್ಶ ಮಾದರಿಗಳೇ ಕಾಣದ ದೇಶದಲ್ಲಿ ಯುವ ಜನಾಂಗಕ್ಕೆ ದಾರಿ ದೀವಿಗೆ ಯಾವುದು? ಇತ್ತೀಚಿನ ಜೆನ್ ಝಿ ಚಳುವಳಿಗಳು ಜಂತರ್…