Leadership Change: Setback for D.K. Shivakumar
ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ದಿಲ್ಲಿಗೆ ಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ಅದೆಂದರೆ ಪಕ್ಷ ಅಧಿಕಾರಕ್ಕೆ ಬಂದ ಕಾಲದಿಂದಲೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಈಗ ಹಿಂದಿಗಿಂತ ಹೆಚ್ಚು ಬಲಿಷ್ಠರಾಗಿದ್ದಾರೆ ಎಂಬುದು ಕನ್‌ಫರ್ಮ್ ಆಗಿತ್ತು.
ಹಾಗೆ ನೋಡಿದರೆ ಪಕ್ಷ ಅಧಿಕಾರಕ್ಕೆ ಬಂದ ಕಾಲದಲ್ಲಿ ತಮಗೆ ಮುಖ್ಯಮಂತ್ರಿ ಹುದ್ದೆ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ವಿಷಯದಲ್ಲಿ ಹಿನ್ನಡೆಯಾಗಿತ್ತು. ಅವತ್ತು ಶಾಸಕಾಂಗ ಪಕ್ಷದ ನಾಯಕ ಯಾರು ಎಂದು ತೀರ್ಮಾನಿಸಲು ಮತದಾನ ನಡೆದಾಗ ನೂರಕ್ಕೂ ಹೆಚ್ಚು ಮಂದಿ ಸಿದ್ದರಾಮಯ್ಯ ಅವರ ಪರವಾಗಿ ಮತ ಚಲಾಯಿಸಿದ್ದರು.
ಇದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಬೆರಳೆಣಿಕೆಯಷ್ಟು ಶಾಸಕರು ಮಾತ್ರ ಬೆಂಬಲ ನೀಡಿದ್ದರು. ಯಾವಾಗ ಇದು ತಮ್ಮ ಕಣ್ಣ ಮುಂದೆ ನಡೆಯಿತೋ ಇದಾದ ನಂತರ ಡಿ.ಕೆ.ಶಿವಕುಮಾರ್ ಅವರು ನನಗೆ ಯಾರ ಬೆಂಬಲವೂ ಬೇಕಾಗಿಲ್ಲ. ನಾನು ಹೈಕಮಾಂಡ್ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುವವನು ಅಂತ ಪಾನು ಉರುಳಿಸತೊಡಗಿದರು. ಅರ್ಥಾತ್ ಆ ಸಂದರ್ಭದಲ್ಲೇ ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮ ಹಿಂದಿರುವ ಬಲ ಏನು ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ತಾವು ಮಾಡಿದ ಕೆಲಸವನ್ನು ಗುರುತಿಸಿ ಹೈಕಮಾಂಡ್ ವರಿಷ್ಠರೇ ತಮಗೆ ಮುಖ್ಯಮಂತ್ರಿ ಹುದ್ದೆ ದಕ್ಕಿಸಿಕೊಡಲಿ ಎಂಬ ಲೆಕ್ಕಾಚಾರಕ್ಕೆ ಅವರು ಇಳಿದಿದ್ದರು.
ಮತ್ತದನ್ನು ನಿರಂತರವಾಗಿ ಹೇಳುತ್ತಲೇ ಬಂದರು. ಹಾಗಂತ ಅವರು ಸುಮ್ಮನಿದ್ದರು ಎಂದಲ್ಲ. ಹಾಗೆ ಸುಮ್ಮನೆ ಕೂರುವುದು ಅವರ ಜಾಯಮಾನವೂ ಅಲ್ಲ. ಹೀಗಾಗಿ ದಿನ ಕಳೆದಂತೆ ತಮ್ಮ ಬೆಂಬಲಿಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಅವರು ನಿರಂತರ ಪ್ರಯತ್ನ ಮಾಡುತ್ತಲೇ ಬಂದರು. ಇತ್ತೀಚೆಗೆ ಸಿದ್ದರಾಮಯ್ಯ ಅವರಿಗೆ ತಲುಪಿದ ಮಾಹಿತಿಯ ಪ್ರಕಾರ ಅವರ ಸಚಿವ ಸಂಪುಟದಲ್ಲಿರುವ ಯುವ ಸಚಿವರೊಬ್ಬರು ಡಿ.ಕೆ. ಶಿವಕುಮಾರ್ ಅವರ ಪರವಾಗಿ ಕೆಲಸ ಮಾಡಲು ಶುರು ಮಾಡಿದ್ದರು. ಇದಕ್ಕೆ ಬೇಕಾದ ದಿಲ್ಲಿ ಪವರ್ ಕೂಡಾ ಆ ಯುವ ಸಚಿವರಿಗಿತ್ತು.
ಹೀಗಾಗಿ ತೆರೆಯ ಹಿಂದೆ ಕೆಲಸ ಮಾಡತೊಡಗಿದ ಆ ಯುವ ಸಚಿವರು ಸಚಿವ ಸಂಪುಟದಲ್ಲಿರುವ ಕೆಲವರು ಸೇರಿದಂತೆ ಹಲವು ಶಾಸಕರ ಬೆಂಬಲವನ್ನು ಡಿಕೆಶಿ ಅವರಿಗಾಗಿ ಕ್ರೋಢೀಕರಿಸುವಲ್ಲಿ ಯಶಸ್ವಿಯಾಗಿದ್ದರು. ಅಂದ ಹಾಗೆ ಅವರು ಡಿಕೆಶಿ ಬೆನ್ನ ಹಿಂದೆ ನಿಲ್ಲಲುಏನು ಕಾರಣ ಎಂಬ ಮಾಹಿತಿ ಸಿದ್ದರಾಮಯ್ಯ ಅವರಿಗೆ ತಲುಪಲು ತಡವೇನೂ ಆಗಲಿಲ್ಲ.
ಈ ಮಾಹಿತಿಯ ಪ್ರಕಾರ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಆಗಿ ಡಿಕೆಶಿ ಮುಖ್ಯಮಂತ್ರಿ ಆದರೆ ಈ ಯುವ ಸಚಿವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಮೂಲಗಳ ಪ್ರಕಾರ ಹೀಗೆ ಒಳಗಿಂದ ಒಳಗೆ ತಮ್ಮನ್ನು ಪದಚ್ಯುತಗೊಳಿ ಸಲು ಶಾಸಕರ ಬೆಂಬಲವನ್ನು ಕ್ರೋಡೀಕರಿಸುವ ಕೆಲಸ ನಡೆದಿದೆಎಂಬುದು ಸಿದ್ದರಾಮಯ್ಯ ಅವರಿಗೆ ಯಾವಾಗ ನಿಕ್ಕಿಯಾಯಿತೋ ಆಗ ನಿರ್ಣಾಯಕ ಆಟಕ್ಕಿಳಿಯಲು ಅವರು ಸಜ್ಜಾದರು. ಅಂದ ಹಾಗೆ ಕಾಂಗ್ರೆಸ್ ಪಾಳೆಯದಲ್ಲಿ ಅಽಕಾರ ಹಂಚಿಕೆಯ ಮಾತು ಹೊಸತೇನೂ ಅಲ್ಲ. ಅದೇ ರೀತಿ ಮೊದಲ ಎರಡೂವರೆ ವರ್ಷಗಳನ್ನು ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ, ನಂತರದ ಎರಡೂವರೆ ವರ್ಷಗಳ ಕಾಲ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತು ಕೇಳುತ್ತಾ ಎರಡು ವರ್ಷಗಳೇ ಕಳೆದಿವೆ.
ಆದರೆ ಹೀಗೆ ಅಧಿಕಾರ ಹಂಚಿಕೆಯ ಮಾತು ಕೇಳುತ್ತಾ ಬಂದರೂ ಅದನ್ನು ಸಿದ್ದರಾಮಯ್ಯ ತುಂಬ ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಾರಣ ಶಾಸಕಾಂಗದಲ್ಲಿ ತಮಗೇ ಬಲ ಹೆಚ್ಚಾಗಿರುವುದರಿಂದ ಡಿಕೆಶಿ ತಮಗೆ ಯಾವ ನೆಲೆಯಲ್ಲಿ ಫೈಟು ಕೊಡಬಲ್ಲರು ಎಂಬುದು ಅವರ ಯೋಚನೆ.
ಆದರೆ ಕಾಲಕ್ರಮೇಣ ಪರಿಸ್ಥಿತಿ ಹೇಗಾಗಿದೆ ಎಂದರೆ ಸಿದ್ದರಾಮಯ್ಯ ಅವರ ಸಂಪುಟದ ಕೆಲ ಸಚಿವರು ಮತ್ತು ಹಲವು ಶಾಸಕರು ಡಿಕೆಶಿ ಪರ ವಾಲಿಕೊಂಡಿದ್ದಾರೆ. ಯಾವಾಗ ಇದು ನಿಕ್ಕಿಯಾಯಿತೋ ಆಗ ಸಿದ್ದರಾಮಯ್ಯ ನಿರ್ಣಾಯಕ ಆಟಕ್ಕೆ ಇಳಿಯಲು ಸಜ್ಜಾದರು. ಯಾಕೆಂದರೆ ಇವತ್ತು ಡಿ.ಕೆ.ಶಿವಕುಮಾರ್ ಅವರಿಗೆ ತಮ್ಮಷ್ಟು ಬಲವಿಲ್ಲ ಎಂಬುದು ನಿಜವಾದರೂ ಬೆರಳೆಣಿಕೆಯಷ್ಟಿದ್ದ ಅವರ ಬೆಂಬಲಿಗರ ಸಂಖ್ಯೆ ಹೆಚ್ಚಾಗಿದ್ದು ಹೇಗೆ ಮತ್ತು ಹೀಗೆ ಬಿಟ್ಟರೆ ಮುಂದಿನ ದಿನಗಳಲ್ಲಿ ಅದು ಯಾವ ಹಂತಕ್ಕೆ ಹೋಗಬಹುದು ಎಂಬ ಲೆಕ್ಕಾಚಾರಕ್ಕಿಳಿದ ಸಿದ್ದರಾಮಯ್ಯ ಈ ಬಾರಿ ಎರಡು ನೆಲೆಗಳಲ್ಲಿ ಸಮರ ಸಿದ್ಧತೆಯನ್ನು ಮಾಡಿಕೊಂಡೇ ದೆಹಲಿಗೆ ಹೋದರು.
ಅಷ್ಟೇ ಅಲ್ಲ, ಮರುದಿನವೇ ಸಂದರ್ಶನವೊಂದರಲ್ಲಿ ಐದು ವರ್ಷಗಳ ಕಾಲ ನಾನೇ ಸಿಎಂ, ಇವತ್ತು ಸಿಎಂ ಹುದ್ದೆ ಬಯಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಶಾಸಕರ ಬೆಂಬಲವಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗಾಗಿ ಚುನಾವಣೆ ನಡೆದಾಗ ನಾನು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಗೆದ್ದಿದ್ದೇನೆ ಎಂದು ಗುಡುಗಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರು ದಿಲ್ಲಿ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಿದರೆ ಇಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಎರಡನೇ ಹಂತದ ಕಾರ್ಯಾಚರಣೆಗೆ ಇಳಿದಿದ್ದಾರೆ. ಅದರ ಪ್ರಕಾರ ಗುರುವಾರಬೆಂಗಳೂರಿನಲ್ಲಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಮಹದೇವಪ್ಪ ನೇತೃತ್ವದ ಸಚಿವರ ಪಡೆ ಮುಂದಿನ ಪರಿಣಾಮಗಳ ಬಗ್ಗೆ ಖರ್ಗೆ ಅವರಿಗೆ ವಿವರಿಸಿದೆ.
ಕೈ ಪಾಳೆಯದ ಮೂಲಗಳ ಪ್ರಕಾರ ಹಲ ಸಚಿವರ ಜತೆ ಖರ್ಗೆಯವರನ್ನು ಭೇಟಿ ಮಾಡಿದ ಎಚ್.ಸಿ.ಮಹದೇವಪ್ಪ ಅವರು ಸಿದ್ದರಾಮಯ್ಯ ಅವರನ್ನು ನಾಯಕತ್ವದಿಂದ ಕೆಳಗಿಳಿಸುವ ನಿರ್ಣಯವಾದರೆ ದೊಡ್ಡ ಸಂಖ್ಯೆಯ ಸಚಿವರು ಮತ್ತು ಶಾಸಕರು ಕಾಂಗ್ರೆಸ್ ತೊರೆಯಲಿದ್ದಾರೆ. ಮತ್ತದರ ಪರಿಣಾಮವಾಗಿ ಸರ್ಕಾರ ಉರುಳಲಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಯಾವಾಗ ಎಚ್.ಸಿ.ಮಹದೇವಪ್ಪ ಮತ್ತವರ ಜತೆಗಿದ್ದ ಸಚಿವರ ಪಡೆ ಇಂತಹ ಎಚ್ಚರಿಕೆ ನೀಡಿತೋ ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಖರ್ಗೆಯವರು ಅಂದೇ ಮಧ್ಯಾಹ್ನ ದಿಲ್ಲಿಗೆ ದೌಡಾಯಿಸಿದ್ದಾರೆ. ವೈಯಕ್ತಿಕವಾಗಿ ಖರ್ಗೆ ಅವರಿಗೆ ಸಿದ್ದರಾಮಯ್ಯ ಅವರ ವಿಷಯ ದಲ್ಲಿ ರಿಸರ್ವೇಷನ್ ಇದೆಯಾದರೂ, ಮಹದೇವಪ್ಪ ಅಂಡ್ ಟೀಮಿನ ಎಚ್ಚರಿಕೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ. ಹೀಗೆ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಮತ್ತವರ ಟೀಮು ನಡೆಸಿದ ಕಾರ್ಯಾಚರಣೆಗಳು ಯಶಸ್ವಿಯಾದ ನಂತರ ದಿಲ್ಲಿ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಮಾತಿಗೆ ಬ್ರೇಕ್ ಬಿದ್ದಿದೆಯಲ್ಲದೆ, ಸದ್ಯಕ್ಕೆ ಆ ಕುರಿತು ಮಾತನಾಡುವುದು ಬೇಡ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಬಿಹಾರ ಮತ್ತು ಕೇರಳ ರಾಜ್ಯಗಳ ವಿಧಾನಸಭೆ ಚುನಾವಣೆ ಸನಿಹದಲ್ಲಿರುವುದರಿಂದ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸುವುದು ದುಬಾರಿ ತೀರ್ಮಾನವಾಗಲಿದೆ ಎಂಬುದು ರಾಹುಲ್ ಗಾಂಧಿ ಅವರಿಗೆ ಗೊತ್ತು. ಏಕೆಂದರೆ ಹೇಳಿ ಕೇಳಿ ಬಿಹಾರ ಮತ್ತು ಕೇರಳ ರಾಜ್ಯಗಳಲ್ಲಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತ ಬ್ಯಾಂಕಿನ ಗಾತ್ರ ದೊಡ್ಡದು. ಹೀಗಿರುವಾಗ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ನಿರ್ಧಾರ ತೆಗೆದುಕೊಂಡರೆ ಆ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿನ ಮೇಲೆ ಬೀಳುವ ಹೊಡೆತ ಏನೆಂಬುದು ಅವರಿಗೆ ಗೊತ್ತು. ಹೀಗಾಗಿ ಸಿದ್ದರಾಮಯ್ಯ ಅವರ ಜತೆಗಿನ ರಹಸ್ಯ ಮಾತುಕತೆಯ ನಂತರ ಅವರು ಮರುದಿನ ಡಿಕೆಶಿ ಅವರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಬಿಹಾರ ಮತ್ತು ಕೇರಳ ರಾಜ್ಯಗಳ ಚುನಾವಣೆಗಳು ಹತ್ತಿರದಲ್ಲಿರುವುದರಿಂದ ಅವು ಮುಗಿಯುವವರೆಗೆ ಕರ್ನಾಟಕದಲ್ಲಿ ಪಕ್ಷ ಮತ್ತು ಸರ್ಕಾರದ ವಿದ್ಯಮಾನಗಳ ಬಗ್ಗೆ ಚರ್ಚೆ ಬೇಡ ಎಂಬುದು ರಾಹುಲ್ ಗಾಂಧಿ ಅವರ ಸಂದೇಶ. ಈ ಸಂದೇಶದ ಬೆನ್ನಲ್ಲಿರುವ ಮತ್ತೊಂದು ಕಾರಣವೆಂದರೆ ಇವತ್ತು ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಿರುವುದು ಕರ್ನಾಟಕ. ಹೀಗಿರುವಾಗ ನಾಯಕತ್ವ ಬದಲಾವಣೆಯಂತಹ ವಿಷಯಗಳ ಬಗ್ಗೆ ಚರ್ಚೆಗೆ ಇಳಿದರೆ ಅಯೋಮಯ ಪರಿಸ್ಥಿತಿ ಸೃಷ್ಟಿಯಾಗಿ ಸರ್ಕಾರ ಉರುಳಬಹುದು. ಹೀಗೆ ಕರ್ನಾಟಕದಲ್ಲಿ ಸರ್ಕಾರ ಉರುಳಿದರೆ ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಇನ್ನಷ್ಟು ಬಲಹೀನವಾಗುತ್ತದೆ. ರಾಹುಲ್ ಗಾಂಧಿಯವರಿಗೆ ಇದು ಬೇಕಿಲ್ಲ. ಪರಿಣಾಮ ಈ ಬಾರಿ ತಮ್ಮ ಆಪರೇಷನ್ ದಿಲ್ಲಿ ಯಶಸ್ವಿಯಾಗುತ್ತದೆ ಎಂದುಕೊಂಡಿದ್ದ ಡಿಕೆಶಿ ನಿರಾಸೆಯಿಂದ ಹಿಂತಿರುಗಿದ್ದಾರೆ. ಅದೇ ರೀತಿ ತಮ್ಮ ಆಪರೇಷನ್ ಯಶಸ್ವಿಯಾದ ಕಾರಣಕ್ಕಾಗಿ ಸಿದ್ದರಾಮಯ್ಯ ಟೀಮಿನಲ್ಲಿ ಆತ್ಮ ವಿಶ್ವಾಸ ತುಂಬಿಕೊಂಡಿದೆ.
ಆದರೆ ಡಿ.ಕೆ.ಶಿವಕುಮಾರ್ ಅವರ ಹತಾಶೆ, ಸಿದ್ದರಾಮಯ್ಯ ಕ್ಯಾಂಪಿನಲ್ಲಿ ಕಾಣಿಸಿಕೊಂಡಿರುವ ಆತ್ಮವಿಶ್ವಾಸ ಎಷ್ಟು ದಿನ ಉಳಿಯುತ್ತದೆಎಂಬುದೇ ಸದ್ಯದ ಮುಖ್ಯ ಪ್ರಶ್ನೆ. ಏಕೆಂದರೆ ನಾಯಕತ್ವಕ್ಕೆ ಲಗ್ಗೆ ಹಾಕುವ ವಿಷಯ ಬಂದಾಗ ಡಿಕೆಶಿ ಪದೇ ಪದೇ ವಿಫಲರಾಗುತ್ತಿದ್ದಾರಾದರೂ, ಅವರು ಮರಳಿ ಯತ್ನವ ಮಾಡು ಎಂಬ ಮಾತಿನಲ್ಲಿ ನಂಬಿಕೆ ಇರುವವರು. ಹೀಗಾಗಿ ಅಧಿಕಾರ ಹಂಚಿಕೆಯ ಮಾತು ಸದ್ಯಕ್ಕೆ ತಣ್ಣಗಾದರೂ ಮುಂದಿನ ದಿನಗಳಲ್ಲಿ ಅವರು ಪುನಃ ಆಟ ಶುರು ಮಾಡುವುದು ಸ್ಪಷ್ಟ.
” ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಮತ್ತವರ ಟೀಮು ನಡೆಸಿದ ಕಾರ್ಯಾಚರಣೆಗಳುಯಶಸ್ವಿಯಾದ ನಂತರ ದಿಲ್ಲಿ ಮಟ್ಟದಲ್ಲಿ ನಾಯಕತ್ವ ಬದಲಾವಣೆಯ ಮಾತಿಗೆ ಬ್ರೇಕ್ ಬಿದ್ದಿದೆಯಲ್ಲದೆ, ಸದ್ಯಕ್ಕೆ ಆ ಕುರಿತು ಮಾತನಾಡುವುದು ಬೇಡ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.”
ಕೆ.ಬಿ.ರಮೇಶನಾಯಕ ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ…
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…