ಸಂಪಾದಕೀಯ

ನಾಯಕತ್ವದ ಚರ್ಚೆ ಹಗ್ಗಜಗ್ಗಾಟ ನಿಲ್ಲಲಿ; ಅಭಿವೃದ್ಧಿಯತ್ತ ಗಮನ ಹರಿಸಲಿ

ದೇಶದಲ್ಲೇ ಮಾದರಿಯಾದ ಹಾಗೂ ಶ್ರೀಸಾಮಾನ್ಯರ ಪರವಾದ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವುದಾಗಿ ರಾಜ್ಯದ ಜನತೆಗೆ ಭರವಸೆ ನೀಡಿ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ರಚಿಸಿದ ಮರು ಕ್ಷಣವೇ ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಮಾತು ತಪ್ಪದ ಸಿದ್ದರಾಮಯ್ಯ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಅಂದಿನಿಂದ ಇಂದಿನವರೆಗೆ ವಿರೋಧ ಪಕ್ಷಗಳಿಂದ ಅಪಸ್ವರ ಎದ್ದರೂ, ಆಡಳಿತದಲ್ಲಿ ಎಂತಹದ್ದೇ ಸವಾಲುಗಳು ಎದುರಾದರೂ ಐದು ಗ್ಯಾರಂಟಿ ಯೋಜನೆಗಳಿಗೆ ಯಾವುದೇ ತೊಡಕು ಉಂಟಾಗಿಲ್ಲ. ಸವಲತ್ತು ನಿರಂತರವಾಗಿ ಫಲಾನುಭವಿಗಳನ್ನು ತಲುಪುತ್ತಿವೆ. ಈ ನಡುವೆ ಗ್ಯಾರಂಟಿ ಯೋಜನೆಗಳ ನಿರ್ವಹಣೆಯಲ್ಲಿ ಕೊಂಚ ಏರುಪೇರು ಉಂಟಾ ದರೂ ಅದನ್ನು ಸರಿಪಡಿಸಿಕೊಂಡು ಸರ್ಕಾರ ಮುನ್ನಡೆಯುತ್ತಿದೆ.

ಅಲ್ಲದೆ ಎಂತಹದ್ದೇ ಪರಿಸ್ಥಿತಿ ಎದುರಾದರೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಘಂಟಾಘೋಷವಾಗಿ ಹೇಳಿರುವುದು ಈ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದ್ದ ವಿರೋಧಪಕ್ಷಗಳ ಬಾಯಿ ಮುಚ್ಚಿಸಿರುವುದಲ್ಲದೆ ಉಳಿದ ಮೂರು ವರ್ಷಗಳೂ ಗ್ಯಾರಂಟಿ ಯೋಜನೆಗಳು ನಿರಂತರ ಎಂಬುದನ್ನು ಸಾರಿ ಹೇಳುತ್ತಿದೆ. ಎದುರಾದ ಅಡೆತಡೆಗಳನ್ನು ಮುಲಾಜಿಲ್ಲದೆ ನಿವಾರಿಸಿಕೊಂಡು ಎರಡು ವರ್ಷ ಗಳ ಆಡಳಿತವನ್ನು ಯಶಸ್ವಿಯಾಗಿ ಪೂರೈಸಿ ಮೂರನೇ ವರ್ಷದತ್ತ ಕಾಲಿಟ್ಟಿರುವ ಕಾಂಗ್ರೆಸ್ ಸರ್ಕಾರದೊಳಗಿನ ಆಂತರಿಕ ಬೇಗುದಿಯನ್ನು ನಿವಾಳಿಸಿಕೊಂಡು ಆಡಳಿತ ಯಂತ್ರಕ್ಕೆ ಚುರುಕು ನೀಡಲು ಸಾಧ್ಯವಾಗದೆ ತಿಣುಕಾಡುತ್ತಿದೆ.

ಒಂದೆಡೆ ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿಸಿದಷ್ಟು ಅನುದಾನ ಸಿಗುತ್ತಿಲ್ಲ ಎಂದುಒಳಗೊಳಗೆ ಗೊಣಗಿಕೊಳ್ಳುತ್ತಿರುವ ಕೆಲ ಶಾಸಕರು ಸಾಕಷ್ಟು ಅನುದಾನವಿಲ್ಲದೆ ಕ್ಷೇತ್ರದ ಅಭಿವೃದ್ಧಿ ಹೇಗೆ ಮಾಡುವುದು, ಕಾಮಗಾರಿಗಳನ್ನು ನೀಡದೆ ಬೆಂಬಲಿಗರನ್ನು ಹೇಗೆ ನಿಭಾಯಿಸುವುದು ಹೇಗೆ ಎಂದು ಕ್ಷೇತ್ರಕಾರ್ಯಕ್ಕೆ ತಿಲಾಂಜಲಿ ಇಟ್ಟು ಕೈಕಟ್ಟಿ ಕುಳಿತಿದ್ದಾರೆ. ಮತ್ತೊಂದೆಡೆ ಕೆಲ ಹಿರಿಯ ಶಾಸಕರು ನಿಗಮ ಮಂಡಳಿಗಳು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಅದನ್ನು ದಕ್ಕಿಸಿಕೊಳ್ಳುವುದು ಹೇಗೆ ಎಂಬ ಧಾವಂತದಲ್ಲಿ ಕ್ಷೇತ್ರವನ್ನು ಮರೆತು ರಾಜಕೀಯ ಮೇಲಾಟದಲ್ಲಿ ತೊಡಗಿದ್ದಾರೆ. ಇನ್ನೊಂದೆಡೆ ಪಕ್ಷದೊಳಗಿನ ರಾಜಕೀಯ ಚದುರಂಗದಾಟದಲ್ಲಿ ತಮ್ಮ ಪಾತ್ರವೇನೂ ಎಂಬ ಗೊಂದಲದಲ್ಲಿರುವವರು ಕಾಯಿ ನಡೆಸುವವರಿಗೆ ಕಾಯುತ್ತಿದ್ದಾರೆ.

ಎಲ್ಲವೂ ಅಂದುಕೊಂಡತೆ ನಡೆದರೆ, ಕೈಗೆ ಮೊತ್ತಮೊತ್ತವಾಗಿ ಅನುದಾನ ಸಿಕ್ಕಿದರೆ, ತಮಗೆ ತಕ್ಕಂತೆ ಅಧಿಕಾರ-ಸ್ಥಾನ ಮಾನ ದಕ್ಕಿದರೆ ಅಸಮಾಧಾನ ನೀಗಿ, ಸಮಾಧಾನವಾಗಿ ಸಾಗಿ ಸರ್ಕಾರ ಎಂಬ ಭಾರವಾದ ಬಂಡಿಯನ್ನು ಸರಾಗವಾಗಿ ಎಳೆಯುತ್ತಿದ್ದರು. ಅದು ಅಂದು ಕೊಂಡಂತೆ ಆಗದೇ ಇರುವುದರಿಂದಒಬ್ಬರನ್ನು ನೋಡಿ ಗೊಬ್ಬರ ಹೂಡಿದಂತೆ ಸಣ್ಣಪುಟ್ಟ ಅಸಮಾಧಾನವನ್ನೂ ದೊಡ್ಡದು ಮಾಡಿ ಅದರ ಕಮಟು ವಾಸನೆ ದಿಲ್ಲಿ ಹೈಕಮಾಂಡ್‌ನ ಮೂಗಿಗೆ ಬಡಿಯುವಂತೆ ಮಾಡಿದ್ದಾರೆ. ಅದರರ್ಥ ಮನೆಯೊಳಗೇ ಸರಿಪಡಿಸಿಕೊಳ್ಳಬಹುದಾದ ವಿಷಯನ್ನು ಪಂಚಾಯಿತಿ ಕಟ್ಟೆಗೆ ತಂದಿದಂತಾಗಿದೆ.

ಹಾಗಾಗಿ ಬುಸುಗುಟ್ಟುವ ಶಾಸಕರ ಗಾಳಿಮಾತು ಹೈಕಮಾಂಡ್ ನಾಯಕರನ್ನು ಮನೆಯೊಳಗೆ ಹಾವು ಕಂಡವರಂತೆ ಆಡಿಸಿತ್ತು. ಹಾವಿನ ಭಯ ಹಡಗನ್ನು ಮುಳುಗಿಸಿಬಿಟ್ಟೀತು ಎಂದು ಹೈಕಮಾಂಡ್ ಪುಂಗಿ ಊದಿ ಬುಸುಗುಟ್ಟುವ ಶಾಸಕರನ್ನು ಬುಟ್ಟಿಯೊಳಗೆ ಸೇರಿಸಿ ಕೈತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಈ ಬುಸುಗುಟ್ಟುವ ಶಾಸಕರನ್ನು ಬುಟ್ಟಿಯಿಂದ ಹೊರತೆಗೆದು ಬಿಟ್ಟಿದ್ದವರು ಈಗ ಮತ್ತೊಂದು ಪಟ್ಟು ಹಾಕಲು ಅಂಕ ಸಿದ್ಧ ಪಡಿಸುತ್ತಿರಬಹುದು. ಅದನ್ನು ಕಾಲವೇ ಹೇಳುತ್ತದೆ.

ಆದರೆ ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ರಾಜ್ಯದ ಜನ ಕಾಂಗ್ರೆಸ್‌ಗೆ ಪೂರ್ಣ ಬಹುಮತದ ಸರ್ಕಾರವನ್ನು ದಯಪಾಲಿಸಿದ್ದಾರೆ. ಇವರೂ ಕೂಡ ಜನರಿಗೆ ಭರವಸೆ ಇತ್ತಂತೆ ಐದು ಗ್ಯಾರಂಟಿಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದ್ದಾರೆ. ಉಂಬವರನ್ನು ಕಂಡು ಹೊಟ್ಟೆ ತೀಡಿ ಕೊಂಡಂತೆ ಯಾರು ಏನೇ ಹೇಳಿದರೂ ಪಂಚ ಗ್ಯಾರಂಟಿ ಯೋಜನೆಗಳಿಂದ ಶ್ರೀಸಾಮಾನ್ಯರು ಕೊಂಚ ಸುಧಾರಿತ ಜೀವನ ಸಾಗಿಸುತ್ತಿದ್ದಾರೆ. ಅದನ್ನುನೋಡಿಯಾದರೂ ಯಾರಲ್ಲಿ ಏನೇ ಅಸಮಾಧಾನಗಳಿದ್ದರೂ ಅದನ್ನು ಬದಿಗೊತ್ತಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೈಜೋಡಿಸಬೇಕು.

ಅದನ್ನು ಬಿಟ್ಟು ಉಂಡ ಮನೆಯಲ್ಲಿ ಗಳ ಇರಿಯುವ ಕೆಲಸ ಮಾಡಬಾರದು. ಇರಲಿ ಈಗ ಶಕ್ತಿ(ಅಧಿಕಾರ, ಅನುದಾನ) ರಾಜಕಾರಣಕ್ಕೆ ಹಂಬಲಿಸಿ ದಾಳ ಉರುಳಿಸಿದವರು, ಇರುವ ಶಕ್ತಿಯನ್ನು ಉಳಿಸಿಕೊಳ್ಳಲು ಹೆಣಗುತ್ತಿರುವವರು ಅಧಿಕಾರ ಹಂಚಿಕೆ, ನಾಯಕತ್ವದ ಬದಲಾವಣೆ ಮುಂತಾದ ಚರ್ಚೆಗಳನ್ನು ಮುನ್ನೆಲೆಗೆ ತಂದಿದ್ದೂ ಆಯಿತು. ಅದಕ್ಕಾಗಿ ಹೊಸಹೊಸ ದಾಳಗಳನ್ನು ಉರುಳಿಸಿದ್ದೂ ಆಯಿತು. ಅದಕ್ಕೆ ಪ್ರತಿ ತಂತ್ರವೆಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದಂತೆ ಹೈಕಮಾಂಡ್ ಹಾಗೂ ರಾಜ್ಯದ ಬಣ ರಾಜಕೀಯಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಸದ್ಯಕ್ಕೆ ಅಧಿಕಾರ ಹಂಚಿಕೆ ಹಾಗೂ ನಾಯಕತ್ವ ಬದಲಾವಣೆ ಚರ್ಚೆಗೆ ಬ್ರೇಕ್ ಬಿದ್ದಿದೆ. ಹಾಗಾಗಿ ಇನ್ನಾದರೂ ಸರ್ಕಾರದ ಸಹಭಾಗಿತ್ವ ವಹಿಸಿರುವ ಜನಪ್ರತಿನಿಧಿಗಳು ವೈಯಕ್ತಿಕ ವರ್ಚಸ್ಸನ್ನೇ ನೋಡದೆ ತಮ್ಮ ಕ್ಷೇತ್ರ ಹಾಗೂ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿ. ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿ ಯೋಜನೆಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಿ.

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಿ; ಆ ಮೂಲಕ ತಮಗೆ ಬಹುಮತದ ಸರ್ಕಾರ ನೀಡಿದ ಶ್ರೀಸಾಮಾನ್ಯರ ಬದುಕನ್ನು ಹಸನಾಗಿಸಲಿ.

” ಯಾರು ಏನೇ ಹೇಳಿದರೂ ಪಂಚ ಗ್ಯಾರಂಟಿ ಯೋಜನೆಗಳಿಂದ ಶ್ರೀಸಾಮಾನ್ಯರು ಕೊಂಚಸುಧಾರಿತ ಜೀವನ ಸಾಗಿಸುತ್ತಿದ್ದಾರೆ. ಅದನ್ನು ನೋಡಿಯಾದರೂಯಾರಲ್ಲಿ ಏನೇ ಅಸಮಾಧಾನಗಳಿದ್ದರೂ ಅದನ್ನು ಬದಿಗೊತ್ತಿ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಕೈಜೋಡಿಸಬೇಕು. ಅದನ್ನು ಬಿಟ್ಟು ಉಂಡ ಮನೆಯಲ್ಲಿಗಳ ಇರಿಯುವ ಕೆಲಸ ಮಾಡಬಾರದು”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಅಪ್ಪಟ ಸಮಾಜವಾದಿ, ಗುಡಿಸಲೂ ಇರದಿದ್ದ ಜೋಗಿ ಕಿಶನ್ ಪಟ್ನಾಯಕ್

ಪ್ರೊ.ರವಿವರ್ಮಕುಮಾರ್, ಸಮಾಜವಾದಿ ಚಿಂತಕರು ಹಾಗೂ ಮಾಜಿ ಅಡ್ವೋಕೇಟ್ ಜನರಲ್ ಇಂದು ಕಿಶನ್ ಜನ್ಮದಿನ; ಅವರ ನೆನಪು ನಮ್ಮೊಡನೆ ಸದಾ ಹಸಿರಾಗಿರಲಿ.…

1 hour ago

ಶೀಘ್ರವೇ ಆಟೋ ಬಾಡಿಗೆ ಪರಿಷ್ಕೃತ ದರ ಪ್ರಕಟ

ನವೀನ್ ಡಿಸೋಜ ಮಡಿಕೇರಿಯಲ್ಲಿ ನಡೆದ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ದರ ಹೆಚ್ಚಳಕ್ಕೆ ನಿರ್ಧಾರ ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಟೋ ರಿಕ್ಷಾ…

2 hours ago

ಜೇನು ಕೃಷಿಗೆ ಸರ್ಕಾರದ ಬಲ

ಎಚ್.ಎಸ್.ದಿನೇಶ್‌ಕುಮಾರ್ ಮೈಸೂರು: ಕುರಿ ಸಾಕಾಣಿಕೆ, ಹೈನುಗಾರಿಕೆ ಹೀಗೆ ರೈತರಿಗೆ ಉಪಯೋಗವಾಗುವಂತಹ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ. ಇದೀಗ ರೈತರು…

2 hours ago

ಜು.20ಕ್ಕೆ ವಿಧಾನಪರಿಷತ್ ಐದು ಸ್ಥಾನ ತೆರವು

ಕೆ.ಬಿ.ರಮೇಶನಾಯಕ ಮೈಸೂರು: ರಾಜ್ಯದಲ್ಲಿ ಜುಲೈ ೨೦ಕ್ಕೆ ತೆರವಾಗಲಿರುವ ವಿಧಾನಪರಿಷತ್‌ನ ಐದು ನಾಮನಿರ್ದೇಶಿತ ಸ್ಥಾನಗಳಿಗೆ ಸದಸ್ಯರನ್ನು ನೇಮಕ ಮಾಡುವುದಕ್ಕೆ ದಿನಗಣನೆ ಶುರುವಾಗಿದೆ.…

2 hours ago

ಮೈಸೂರಿನ 2 ಹೋಟೆಲ್‌, ಚಾ.ನಗರ ಕೋರ್ಟ್‌ಗೆ ಬಾಂಬ್‌ ಬೆದರಿಕೆ ; ಒಬ್ಬ ವ್ಯಕ್ತಿಯಿಂದಲೇ ಇ-ಮೇಲ್

ಮೈಸೂರು‌ : ಭಾನುವಾರವಷ್ಟೇ ಎರಡು ನಗರದ ಎರಡು ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಬಂದಿತ್ತು. ಇದೀಗ ಚಾಮರಾಜನಗರ ನ್ಯಾಯಾಲಯಕ್ಕೆ…

11 hours ago