bank deposits
ಪ್ರೊ. ಆರ್.ಎಂ. ಚಿಂತಾಮಣಿ
ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯಲ್ಲಿ ಬ್ಯಾಂಕ್ ಠೇವಣಿಗಳ ವಿಮಾ ರಕ್ಷಣೆಯ ಮಿತಿಯನ್ನು ಹೆಚ್ಚಿಸಬೇಕೆಂಬ ಪ್ರಸ್ತಾವನೆ ಚರ್ಚೆಯಾಗುತ್ತಿದೆ ಎಂದು ವರದಿಯಾಗಿದೆ. ಇದೊಂದು ಉತ್ತಮ ಬೆಳವಣಿಗೆ ಎಂದೇ ಹೇಳಬೇಕು. ಈಗಿರುವ ಐದು ಲಕ್ಷ ರೂಪಾಯಿಗಳಿಂದ (ಒಬ್ಬ ಗ್ರಾಹಕನ ಒಂದು ಬ್ಯಾಂಕಿನಲ್ಲಿರುವ ಎಲ್ಲ ಠೇವಣಿ ಮೊತ್ತದ) ೧೦ ಲಕ್ಷ ರೂಪಾಯಿಗಳಿಗಾದರೂ ಹೆಚ್ಚಿಸುವ ಅವಶ್ಯವಿದೆ. ಏಕೆಂದರೆ ದೇಶದಲ್ಲಿಯ ಎಲ್ಲ ಬ್ಯಾಂಕುಗಳಲ್ಲಿಯ ಒಟ್ಟು ಠೇವಣಿಗಳ ಶೇ.೪೩.೧ರಷ್ಟು ಮಾತ್ರ ಅಂದರೆ ೨,೧೮,೨೧,೪೮೧ ರೂ. ಮಾತ್ರ ೨೦೨೪ ಮಾರ್ಚ್ ೩೧ರ ಹೊತ್ತಿಗೆ ಠೇವಣಿ ಮಿಮೆ ರಕ್ಷಣೆ ಹೊಂದಿದ್ದವು. ಖಾತೆಗಳ ದೃಷ್ಟಿಯಿಂದ ನೋಡಿದರೆ ಶೇ.೯೮ರಷ್ಟು ಖಾತೆಗಳಿಗೆ ವಿಮೆ ಇದ್ದರೂ ಮೊತ್ತದ ದೃಷ್ಟಿಯಿಂದ ಅರ್ಧಕ್ಕಿಂತ ಕಡಿಮೆ ಠೇವಣಿಗಳಿಗೆ ರಕ್ಷಣೆ ಇದೆ.
ವಿಚಿತ್ರವೆಂದರೆ ಯಾವುದಾದರೂ ಬ್ಯಾಂಕ್ ದಿವಾಳಿ ಹಂತಕ್ಕೆ ಹೋದಾಗಲೆಲ್ಲ ಈ ವಿಷಯ ಮುನ್ನೆಲೆಗೆ ಬರುತ್ತಿದೆ. ಈಗ ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಸಮಸ್ಯೆ ಉದ್ಭವಿಸಿದ್ದು, ಅದರ ಮೇಲೆ ರಿಸರ್ವ್ ಬ್ಯಾಂಕ್ ನಿರ್ಬಂಧಗಳನ್ನು ಹೇರಿದೆ. ನಿರ್ದೇಶಕರ ಮಂಡಳಿಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ. ಈಗ ಠೇವಣಿದಾರರ ರಕ್ಷಣೆಯ ಮಾತು ಕೇಳಿಬರುತ್ತಿದೆ. ೨೦೨೦ರಲ್ಲಿ ವಿಮೆ ಮಿತಿ ಹೆಚ್ಚಿಸಿದಾಗಲೂ ದೊಡ್ಡದೊಂದು ಸಹಕಾರಿ ಬ್ಯಾಂಕ್ (ಪಂಜಾಬ್ ಆಂಡ್ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್) ದಿವಾಳಿ ಹಂತ ತಲುಪಿತ್ತು. ರಿಸರ್ವ್ ಬ್ಯಾಂಕ್ ಅದರ ಮೇಲೆ ನಿಯಂತ್ರಣ ಹೇರಿತ್ತು. ಇನ್ನೂ ಒಂದೆರಡು ಸಣ್ಣ ಸಹಕಾರಿ ಬ್ಯಾಂಕ್ ಗಳು ಸಮಸ್ಯೆ ಎದುರಿಸುತ್ತಿದ್ದವು. ಹಿಂದೆಯೂ ಇಂಥದೇ ಸಂದರ್ಭಗಳಲ್ಲಿ ಠೇವಣಿ ವಿಮೆ ಮಿತಿಯನ್ನು ಹೆಚ್ಚಿಸಿರುವುದನ್ನು ನಾವು ಗಮನಿಸಬಹುದು. ಆರ್ಥಿಕ ಅಭಿವೃದ್ಧಿ ಮುಂದುವರಿದಂತೆಲ್ಲ ದೇಶದಲ್ಲಿ ಉಳಿತಾಯಗಳು ಹೆಚ್ಚಾಗುವುದು ಸ್ವಾಭಾವಿಕ. ಹೀಗೆ ಹೆಚ್ಚಾಗುವ ಉಳಿತಾಯಗಳು ಬ್ಯಾಂಕ್‌ಗಳ ಕಡೆಗೆ ಮುಖ ಮಾಡುವುದು ಅಷ್ಟೇ ಸತ್ಯ. ಹೀಗೆ ಬ್ಯಾಂಕ್ ಠೇವಣಿಗಳು ಹೆಚ್ಚಾದಂತೆಲ್ಲ ಠೇವಣಿದಾರರ ರಕ್ಷಣೆಯ ಹೊಣೆಗಾರಿಕೆಯೂ ಹೆಚ್ಚುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಠೇವಣಿ ವಿಮೆ ಮಿತಿಯನ್ನು ಹೆಚ್ಚಿಸುವ ಅನಿವಾರ್ಯತೆ ಉದ್ಭವಿಸುತ್ತದೆ.
ಡೆಪಾಸಿಟ್ ಇನ್ಶೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್:
ಸ್ವಾತಂತ್ರ್ಯ ಪೂರ್ವದಲ್ಲಿ ೧೯೪೦ರ ದಶಕದಲ್ಲಿ ಇತರ ದೇಶಗಳಂತೆ ನಮ್ಮಲ್ಲಿಯೂ ಹಲವು ಬ್ಯಾಂಕ್‌ಗಳು ದಿವಾಳಿಯಾದದ್ದು ಈಗ ಇತಿಹಾಸ. ೧೯೪೯ರಲ್ಲಿ ಬ್ಯಾಂಕಿಂಗ್ ಕಂಪೆನೀಸ್ ರೆಗ್ಯುಲೇಶನ್ಸ್ ಕಾಯ್ದೆ ಜಾರಿಯಾಯಿತು. ನಿಯಂತ್ರಣ ಮತ್ತು ನೋಂದಣಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ತೆಗೆದುಕೊಡದ್ದರಿಂದ ಸಾಕಷ್ಟು ಸುಧಾರಣೆಗಳಾದವು. ಆದರೂ ಅಲ್ಲೊಂದು ಇಲ್ಲೊಂದು ಸಮಸ್ಯೆಗಳಿದ್ದವು. ರಿಸರ್ವ್ ಬ್ಯಾಂಕ್ ಠೇವಣಿದಾರರ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳುತ್ತಿತ್ತು. ಬ್ಯಾಂಕ್‌ಗಳ ಜವಾಬ್ದಾರಿ ಹೆಚ್ಚಿಸಲು ಮತ್ತು ಠೇವಣಿದಾರರ ಭದ್ರತೆಗೆ ಒಂದು ಸ್ವತಂತ್ರ ವ್ಯವಸ್ಥೆ ಇತರ ದೇಶಗಳಂತೆ ನಮ್ಮಲ್ಲಿಯೂ ಇರಬೇಕೆಂಬ ಚಿಂತನೆ ಬಲವಾಗುತ್ತ ನಡೆಯಿತು.
ಆಗಲೇ ೧೯೬೨ರಲ್ಲಿ ಸ್ವತಂತ್ರ ಸಂಸ್ಥೆ ಡೆಪಾಸಿಟ್ ಇನ್ಶೂರೆನ್ಸ್ ಆಂಡ್ ಕ್ರೆಡಿಟ್ ಗ್ಯಾರಂಟೀ ಕಾರ್ಪೊರೇಶನ್ ಆಫ್ ಇಂಡಿಯಾ ರಿಸರ್ವ್ ಬ್ಯಾಂಕಿನ ಅಂಗ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದಕ್ಕಾಗಿ ಪ್ರತ್ಯೇಕ ಕಾಯ್ದೆಯೇ ಇದ್ದು ಅದರಡಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಬಹುತೇಕ ಎಲ್ಲ ಬ್ಯಾಂಕ್‌ಗಳೂ ಕಡ್ಡಾಯವೆನ್ನುವಂತೆ ತಮ್ಮ ಠೇವಣಿದಾರರ ಹಿತರಕ್ಷಣೆಗಾಗಿ ಠೇವಣಿ ವಿಮೆ ವ್ಯವಸ್ಥೆಯಡಿಯಲ್ಲಿ ಕಾರ್ಪೊರೇಶನ್‌ನಲ್ಲಿ ನೋಂದಾಯಿಸಿಕೊಂಡಿವೆ. ಪ್ರತಿ ವರ್ಷ ನಿಗದಿತ ದಿನದಂದು ತಮ್ಮಲ್ಲಿರುವ ಠೇವಣಿ ಮೊತ್ತಗಳ ಮೇಲೆ ಕಾರ್ಪೊರೇಶನ್ ನಿಗದಿ ಮಾಡಿರುವ ಪ್ರೀಮಿಯಂ ಮೊತ್ತವನ್ನು ಅದಕ್ಕೆ ಪಾವತಿ ಮಾಡುತ್ತವೆ. ಕಾರ್ಪೊರೇಶನ್ನಿಗೆ ಇದೇ ಮುಖ್ಯ ಆದಾಯದ ಮೂಲ.
ರಕ್ಷಣೆಯ ಮೊತ್ತಕ್ಕೆ ಬಂದರೆ ಅಂದಿನ ಪರಿಸ್ಥಿತಿಗನುಸಾರ ಮತ್ತು ಠೇವಣಿದಾರರ ವಿವಿಧ ಠೇವಣಿಗಳ ಮೊತ್ತಗಳನ್ನು ಪರಿಗಣಿಸಿ ಅಂದು ವಿಮಾ ರಕ್ಷಣೆ (ಭದ್ರತೆ)ಯ ಮೊತ್ತವನ್ನು ೧,೫೦೦ ರೂ. ಎಂದು ನಿರ್ಧರಿಸಲಾಗಿತ್ತು. ಅಂದರೆ ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಅಥವಾ ಠೇವಣಿದಾರರಿಗೆ, ಅವರ ಠೇವಣಿ ಮತ್ತು ಬಡ್ಡಿ ಮೊತ್ತಗಳನ್ನು ಮರು ಪಾವತಿ ಮಾಡಲು ಅಸಮರ್ಥವಾದರೆ ಪ್ರತಿಯೊಬ್ಬ ಗ್ರಾಹಕನ ಬ್ಯಾಂಕಿನಲ್ಲಿಯ ಎಲ್ಲ ಠೇವಣಿ ಖಾತೆಗಳ ಒಟ್ಟು ಮೊತ್ತ ೧,೫೦೦ ರೂ.ವರೆಗೆ ಇದ್ದರೆ ಎಲ್ಲ ಮೊತ್ತವನ್ನೂ ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ ೧,೫೦೦ ರೂ.ಗಳನ್ನು ಮಾತ್ರ ವಿಮಾ ಪರಿಹಾರವಾಗಿ (ವಿಮಾ ರಕ್ಷಿತ ಮೊತ್ತವಾಗಿ) ಠೇವಣಿ ವಿಮಾ ಕಾರ್ಪೊರೇಶನ್ ಎಲ್ಲ ಠೇವಣಿದಾರರಿಗೂ ಕೊಡುತ್ತದೆ. ಅಷ್ಟರಮಟ್ಟಿಗೆ ಅವರ ಠೇವಣಿಗಳು ಸುಭದ್ರವಾಗಿರುತ್ತವೆ ಎಂದು ಇದರ ಅರ್ಥ.
ಮುಂದೆ ಕಾಲ ಕಾಲಕ್ಕೆ ಪರಿಸ್ಥಿತಿಯ ಅವಶ್ಯಕತೆಗಳನ್ನು ಪರಿಶೀಲಿಸಿ ಮತ್ತು ವಿಮಾ ಕಾರ್ಪೊರೇಶನ್ ಸಾಮರ್ಥ್ಯವನ್ನು ಗಮನಿಸಿ ಈ ಮಿತಿಯನ್ನು ವಿಸ್ತರಿಸಲಾಗಿದೆ. ೧೯೭೬ರಲ್ಲಿ ವಿಮಾ ಪರಿಹಾರದ ಮಿತಿಯನ್ನು ೧,೫೦೦ ರೂ.ನಿಂದ ೨೦,೦೦೦ ರೂ.ಗಳಿಗೆ ಹೆಚ್ಚಿಸಲಾಯಿತು. ಮುಂದೆ ನಾಲ್ಕೇ ವರ್ಷಗಳ ನಂತರ ಮಿತಿಯನ್ನು ೩೦,೦೦೦ ರೂ.ಗಳಿಗೆ ಹಿಗ್ಗಿಸಲಾಯಿತು. ನಂತರ ಹೆಚ್ಚಳಕ್ಕೆ ೧೯ ವರ್ಷಗಳೇ ಬೇಕಾದವು. ೧೯೯೯ರಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿ ೧,೦೦,೦೦೦ ರೂ.ಗಳಿಗೆ ಪರಿಹಾರ ಮಿತಿಯನ್ನು ನಿರ್ಧರಿಸಲಾಯಿತು. ನಾಲ್ಕನೇ ಬಾರಿ ದೊಡ್ಡ ಹೆಚ್ಚಳ ಮಾಡಿ ೨೦೨೦ ರಲ್ಲಿ ೫,೦೦,೦೦೦ ರೂ.ಗಳಿಗೆ ನಿಲ್ಲಿಸಲಾಗಿದೆ.
ಅಂದಂದಿನ ಆರ್ಥಿಕ ಸ್ಥಿತಿಗೆ ತಕ್ಕಂತೆ ಈ ಎಲ್ಲ ಮೊತ್ತಗಳೂ ಸೂಕ್ತವಾಗಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಈಗ ಐದು ವರ್ಷಗಳಲ್ಲೇ ಮಿತಿಯನ್ನು ದುಪ್ಪಟ್ಟು ಮಾಡುವ ಚಿಂತನೆ ನಡೆದಿದೆ. ಇಂದಿನ ವೇಗದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದಾಗ ಈ ಮಟ್ಟಕ್ಕೆ ಹೆಚ್ಚಿಸಬೇಕಾದ್ದು ಸರಿ ಅನಿಸುತ್ತದೆ. ಇದೊಂದು ರಕ್ಷಣಾತ್ಮಕ ವಿಧಾನ ಅಷ್ಟೇ. ಸಹಕಾರಿ ಬ್ಯಾಂಕ್‌ಗಳಲ್ಲಿ ವೃತ್ತಿಪರತೆ ಹೆಚ್ಚಬೇಕು: ಇತ್ತೀಚಿನ ದಶಕಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಮುಳುಗಿದ ವರದಿಗಳಿಲ್ಲ. ಕೆಲವು ಸಲ ಬ್ಯಾಂಕ್‌ಗಳಲ್ಲಿ ಸಮಸ್ಯೆಗಳು ಉದ್ಭವಿಸಿದಾಗ ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್ ಅವುಗಳನ್ನು ಆಸಕ್ತ ಸಮರ್ಥ ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಿ ಠೇವಣಿದಾರರಿಗೆ ಸಮಸ್ಯೆ ಯಾಗದಂತೆ ನೋಡಿಕೊಂಡಿವೆ. ಗ್ಲೊಬಲ್ ಟ್ರಸ್ಟ್ ಬ್ಯಾಂಕ್ ಇದಕ್ಕೊಂದು ಉದಾಹರಣೆ.
ಆದರೆ ಸಣ್ಣ ದೊಡ್ಡ ಸಹಕಾರಿ ಬ್ಯಾಂಕ್‌ಗಳದ್ದೇ ಸಮಸ್ಯೆ. ಇವುಗಳೂ ರಿಸರ್ವ್ ಬ್ಯಾಂಕ್‌ನ ವ್ಯಾಪ್ತಿಯಲ್ಲಿದ್ದರೂ ಆಡಳಿತ ವಿಷಯದಲ್ಲಿ ರಾಜ್ಯ ಸರ್ಕಾರ ಗಳ ನಿಯಂತ್ರಣವೂ ಇದೆ. ಇವುಗಳಲ್ಲಿ ಸ್ಥಳೀಯ ಪ್ರಭಾವಿಗಳ ಮತ್ತು ರಾಜಕೀಯ ನಾಯಕರ ಹಸ್ತಕ್ಷೇಪ ಹೆಚ್ಚಾಗಿರುತ್ತದೆ. ವೃತ್ತಿಪರತೆ ಬೆಳೆ ಯಲು ಅವಕಾಶ ಕಡಿಮೆ. ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಬ್ಯಾಂಕ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮುಳುಗುವ ಹಂತಕ್ಕೆ ಬಂದಿರುವುದು. ಮೊದಲು ಈ ಎರಡೂ ಹಸ್ತಕ್ಷೇಪಗಳು ಕಡಿಮೆಯಾಗಬೇಕು. ಇಂಥ ಹಸ್ತಕ್ಷೇಪ ಇರಲೇಬಾರದು. ವೃತ್ತಿಪರತೆ ಹೆಚ್ಚಾಗಬೇಕು. ವಿಮಾ ಕಾರ್ಪೊರೇಷನ್‌ನಲ್ಲಿ ನೋಂದಾಯಿತ ಬ್ಯಾಂಕ್‌ಗಳಲ್ಲಿ ಸಹಕಾರಿ ಬ್ಯಾಂಕ್‌ಗಳೇ ಹೆಚ್ಚು (೧೮೫೭), ವಾಣಿಜ್ಯ ಬ್ಯಾಂಕ್‌ಗಳು ೧೪೦ ಮಾತ್ರ. ಎಲ್ಲ ಬ್ಯಾಂಕ್‌ಗಳೂ ವೃತ್ತಿಪರ ಆಡಳಿತ ಹೊಂದಬೇಕು.
” ಅಂದಂದಿನ ಆರ್ಥಿಕ ಸ್ಥಿತಿಗೆ ತಕ್ಕಂತೆ ಈ ಎಲ್ಲ ಮೊತ್ತಗಳೂ ಸೂಕ್ತವಾಗಿದ್ದವು ಎಂಬುದನ್ನು ಇಲ್ಲಿ ಗಮನಿಸಬೇಕು. ಈಗ ಐದು ವರ್ಷಗಳಲ್ಲೇ ಮಿತಿಯನ್ನು ದುಪ್ಪಟ್ಟು ಮಾಡುವ ಚಿಂತನೆ ನಡೆದಿದೆ. ಇಂದಿನ ವೇಗದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗಳನ್ನು ಗಮನಿಸಿದಾಗ ಈ ಮಟ್ಟಕ್ಕೆ ಹೆಚ್ಚಿಸಬೇಕಾದ್ದು ಸರಿ ಅನಿಸುತ್ತದೆ. ಇದೊಂದು ರಕ್ಷಣಾತ್ಮಕ ವಿಧಾನ ಅಷ್ಟೇ..”
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಹಾಗೂ ಯಂಗ್ ಇಂಡಿಯಾ ಸಂಸ್ಥೆಗಳಿಗೆ ದೇಣಿಗೆ ನೀಡಿದ್ದಕ್ಕೆ ಇಡಿ ಸಮನ್ಸ್ ನೀಡಿದೆ. ಆ ಮೂಲಕ ನಮಗೆ…
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಯಾದ…
ಚಿಕ್ಕಮಗಳೂರು: ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟ ಘಟನೆ ಕಡೂರು ತಾಲ್ಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ವರ…
ಬೆಂಗಳೂರು: ಬಿಜೆಪಿ ಜೊತೆ ಸೇರಿಕೊಂಡ ಮೇಲೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕೂಡ ಮನುವಾದಿ ಆಗಿಬಿಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.…
ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್…