ಅಂಕಣಗಳು

ಸೊಪ್ಪಿನ ಮಡಿಯ ಆರ್ಥಿಕತೆ

• ಎನ್.ಕೇಶವಮೂರ್ತಿ

ಮಂಡ್ಯ ಜಿಲ್ಲೆಯ ರೈತರ ಮನೆಗಳಿಗೆ ನೀವು ಅದೆಷ್ಟು ಜನ ಭೇಟಿ ನೀಡಿದ್ದೀರೋ ಗೊತ್ತಿಲ್ಲ. ಹಾಗೆ ಹೋಗುವ ಸಂದರ್ಭ ಬಂದ್ರೆ ಮನೆಯ ಹಿತ್ತಲಿನಲ್ಲಿ ಒಮ್ಮೆ ಕಣ್ಣು ಹಾಯಿಸಿ. ಅಲ್ಲಿ ಒಂದು ಕೀರೆ ಸೊಪ್ಪಿನ ಮಡಿ ಇರುತ್ತೆ. ಕೆಲವು ಮನೆಗಳಲ್ಲಿ ಎರಡರಿಂದ ಮೂರಿರಬಹುದು. ಆದರೆ ಕೀರೇ ಸೊಪ್ಪಿನ ಮಡಿ ಇರುವುದಂತೂ ಕಡ್ಡಾಯ. ನಾವೂ ಸೊಪ್ಪು ಬೆಳೀತೀವಿ, ಇದರಲ್ಲಿ ಏನಿದೆ ವಿಶೇಷ ಅಂತೀರಾ? ಅದೇ ನಿಜವಾದ ಸ್ವಾರಸ್ಯಕರ ಸಂಗತಿ. ನೋಡಿ, ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ನಂತರ ಕೀರೆ ಸೊಪ್ಪಿನ ಸಸಿ ಮಡಿ ತಯಾರಾಗುತ್ತೆ. ಇದು ಹೆಚ್ಚು ಕಡಿಮೆ ದೀಪಾವಳಿ ಹಬ್ಬದವರೆಗೂ ಹಸಿರಾಗಿರುತ್ತೆ ಹಾಗೂ ನಿರಂತರವಾಗಿ ಸೊಪ್ಪು ನೀಡುತ್ತೆ. ವರುಷದಲ್ಲಿ ಹತ್ತು ತಿಂಗಳು ಸೊಪ್ಪಿಗೆ ಬರವಿಲ್ಲ. ಆಯ್ತು ಇದರಲ್ಲಿ ಏನಿದೆ ಆರ್ಥಿಕತೆ ಅಂತಾ ತಾನೇ ನಿಮ್ಮ ಪ್ರಶ್ನೆ? ಬನ್ನಿ ಅದರ ಬಗ್ಗೆ ತಿಳಿಯುವ ಮೊದಲು ಸೊಪ್ಪಿನ ಮಡಿ ತಯಾರಿಕೆ ಬಗ್ಗೆ ಅರಿಯೋಣ.

ಕೀರೆ ಸೊಪ್ಪಿನ ವಿಶೇಷ ಏನು ಗೊತ್ತಾ? ಇದನ್ನು ನೀವು ಬೇರು ಸಮೇತ ಕೇಳುವ ಹಾಗಿಲ್ಲ. ಬೇರು ಬಿಟ್ಟು, ನೆಲದ ಮೇಲಿನ ಚೂರು ಕಾಂಡ ಬಿಟ್ಟು, ಮೇಲಿನ ಸೊಪ್ಪು ಚಿವುಟಬೇಕು. ಒಂದು ಕಡೆಯಿಂದ ಮನೆಗೆ ಬೇಕಾದಷ್ಟು ಸೊಪ್ಪು ಕುಯ್ದ ಮೇಲೆ, ಮಾರನೆಯ ದಿನ ಉಳಿದ ಭಾಗದಲ್ಲಿ ಸೊಪ್ಪು ಕತ್ತರಿಸಬೇಕು. ಒಂದು ಕಡೆಯಿಂದ ಸೊಪ್ಪು ಕತ್ತರಿಸುತ್ತಾ ಬಂದು, ಇಡೀ ಮಡಿ ಖಾಲಿ ಆಗುವಷ್ಟರಲ್ಲಿ ಮೊದಲ ದಿನ ಸೊಪ್ಪು ಕತ್ತರಿಸಿದ ಕಡೆ ಮತ್ತೆ ಸೊಪ್ಪು ಹುಲುಸಾಗಿ ಬೆಳೆದಿರುತ್ತೆ. ಅಲ್ಲಿಗೆ ಒಂದು ಕೀರೆ ಸೊಪ್ಪಿನ ಮಡಿ, ಅಕ್ಷಯ ಪಾತ್ರೆಯಂತೆ ಕೆಲಸ ಮಾಡುತ್ತೆ. ಮಂಡ್ಯ ಜಿಲ್ಲೆಯ ಪ್ರತಿ ರೈತರ ಮನೆಯಲ್ಲಿ, ಸೊಪ್ಪಿನ ಸಾರು, ರಾಗಿ ಮುದ್ದೆ ಪ್ರತಿ ದಿನ ಇರಲೇಬೇಕು. ಮನೆ ತುಂಬಾ ಜನ ಇದ್ರೆ, ಒಂದು ಸಸಿ ಮಡಿ ಸಾಕಾಗುವುದಿಲ್ಲ. ಆಗ ಜನರ ಸಂಖ್ಯೆಗೆ ಸರಿಯಾಗಿ ಸಸಿ ಮಡಿಗಳ ಸಂಖ್ಯೆ ನಿರ್ಧಾರ ಆಗುತ್ತೆ. ಸಸಿ ಮಡಿ ತಯಾರಿಕೆ ಗಂಡಸರ ಕೆಲಸ ಆದ್ರೆ, ಅದನ್ನು ವರ್ಷಪೂರ್ತಿ ನಿರ್ವಹಣೆ ಮಾಡುವುದು ಮಹಿಳೆಯರು. ಹಾಗಾಗಿ ಸೊಪ್ಪಿನ ಮಡಿ ಮಹಿಳೆಯರ ಪ್ರಪಂಚ. ಎಷ್ಟಾದರೂ ಮನೆ ಸದಸ್ಯರ ಹೊಟ್ಟೆ ಅಗತ್ಯ ಪೂರೈಸುವುದು ಜನನಿ ತಾನೆ.

ಈಗ ಆರ್ಥಿಕತೆ ಬಗ್ಗೆ ಬರೋಣ. ಒಂದು ಸಣ್ಣ ಲೆಕ್ಕಾಚಾರ ಹಾಕಿ. ಪ್ರತಿನಿತ್ಯ ಕೀರೇ ಸೊಪ್ಪನ್ನು ದುಡ್ಡು ಕೊಟ್ಟು ಖರೀದಿ ಮಾಡಿದ್ರೆ ದಿನಕ್ಕೆ ಇಪ್ಪತ್ತು ರೂಪಾಯಿ ಬೇಕು. ಅಲ್ಲಿಗೆ ವರ್ಷಕ್ಕೆ ಏಳು ಸಾವಿರದ ಇನ್ನೂರು ರೂಪಾಯಿಗಳು. ಮನೇಲೇ ಬೆಳೆದಿದ್ರಿಂದ ಅಷ್ಟು ಹಣ ಉಳಿತಾಯ ಆದಂತೆ, ಉಳಿಸಿದ ಒಂದು ರೂಪಾಯಿ ಗಳಿಸಿದ ಎರಡು ರೂಪಾಯಿಗೆ ಸಮ. ಮನೆ ಸದಸ್ಯರು ಸೊಪ್ಪು ತಿನ್ನೋದ್ರಿಂದ ಮಡಿಗೆ ಯಾರೂ ರಾಸಾಯನಿಕ ಗೊಬ್ಬರ ಹಾಕೋಲ್ಲ, ವಿಷ ಹೊಡೆಯೋಲ್ಲ. ಅಲ್ಲಿಗೆ ವಿಷರಹಿತ ಸೊಪ್ಪು ಪ್ರತಿ ನಿತ್ಯ ಸಿಗುತ್ತೆ. ಸೊಪ್ಪಿನ ವಾರದ ಸಾರು ರುಚಿಯಾಗೋದು ತಾಜಾ ಸೊಪ್ಪಿನಿಂದ ಮಾತ್ರ. ಕೃಷಿ ಅಂಕಣ ಅಡುಗೆ ಮನೇಲಿ ಖಾರ ಅರೆದು, ತಾಜಾ ಸೊಪ್ಪು ಕಿತ್ತು, ಸೋಸಿ ರುಚಿಯಾದ ಬಸ್ಸಾರು ತಯಾರಿಸಬಹುದು. ಇನ್ನು ಬಗೆಬಗೆಯ ವಿಷ ರಾಸಾಯನಿಕ ಬಳಸಿ ಬೆಳೆದ ಸೊಪ್ಪು ತಿಂದು ಆರೋಗ್ಯ ಹಾಳಾದ್ರೆ ವೈದ್ಯರಿಗೆ ಖರ್ಚು.

ಇನ್ನು ಒಂದು ಸೊಪ್ಪಿನ ಮಡಿ ಮನೆಯ ಅನೇಕರಿಗೆ ಪ್ರತಿ ದಿನ ಕೆಲಸ ನೀಡುತ್ತೆ. ಇದರ ಜತೆ ಬದನೆ, ಟೊಮ್ಯಾಟೊ, ನುಗ್ಗೆ, ಗೋರೀಕಾಯಿ ಹೀಗೇ ಒಂದಷ್ಟು ತರಕಾರಿ ಹಾಕಿದ್ರೆ, ಆಹಾರದ ಅಗತ್ಯ ನೀಗುತ್ತೆ, ನಿಮ್ಮ ಕೃಷಿ ಕುಟುಂಬದ ಆರೋಗ್ಯಕ್ಕೆ ಸಮತೋಲಿತ ಆಹಾರ ದೊರೆಯುತ್ತೆ. ಒಂದು ಸಣ್ಣ ಸಸಿಮಡಿಯಿಂದ ಆಗುವ ಅನುಕೂಲಗಳು ಇವು. ಈಗ ನಿಮಗೂ ಕೀರೇ ಸಸಿ ಮಡಿ ನಿಮ್ಮ ಮನೆಯ ಹಿತ್ತಲಿನಲ್ಲಿ ಮಾಡುವ ಆಸೆ ಆಗ್ತಿದೆ ಅಲ್ವಾ. ಮತ್ತೇಕೆ ತಡ, ಶುಭಸ್ಯ ಶೀಘ್ರಂ.
keshavamurthy.n@gamil.com

 

andolanait

Recent Posts

ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ

ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…

6 hours ago

ಅರಮನೆ ಫಲಪುಷ್ಪ ಪ್ರದರ್ಶನ | ಸಂಗೀತ ಸಂಜೆಯಲ್ಲಿ ಪ್ರೇಕ್ಷಕರು ತಲ್ಲೀನ

ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…

9 hours ago

ಎತ್ತಿನ ಗಾಡಿಗೆ ಸಾರಿಗೆ ಬಸ್‌ ಡಿಕ್ಕಿ : ಎತ್ತು ಸಾವು

ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…

9 hours ago

ಮುತ್ತತ್ತಿ : ಕಾವೇರಿ ನದಿ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…

9 hours ago

ಪೊಲೀಸ್‌ ಭದ್ರತೆಯಲ್ಲಿ ದೇಗುಲ ಪ್ರವೇಶಿಸಿದ ದಲಿತ ಮಹಿಳೆಯರು : ಶಾಂತಿ ಸಭೆಯಲ್ಲಿ ಪಂಚ ಬೇಡಿಕೆ

ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…

9 hours ago

ಅಕ್ರಮ ವಿದ್ಯುತ್‌ ಸಂಪರ್ಕ: 31 ಪ್ರಕರಣ ದಾಖಲು, 2.17 ಲಕ್ಷ ರೂ. ದಂಡ

ಮೈಸೂರು : ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…

9 hours ago